ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಇಂದು 73ನೇ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಗಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗೌರವ ವಂದನೆ ಸ್ವೀಕರಿಸಿ, ಧ್ವಜಾರೋಹಣ ನೆರವೇರಿಸಿದ್ದಾರೆ.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ’ಸರ್ಕಾರವು ಕೋವಿಡ್ ಸೋಂಕನ್ನು ಸಮರ್ಥವಾಗಿ ಎದುರಿಸಿದೆ. ಸರ್ಕಾರ ಜನತೆಯ ಸಹಾಯದಿಂದ ಮಾಡಿದ ಕಾರ್ಯ ಪ್ರಶಂಸನೀಯವಾಗಿದೆ. ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಅತಿವೃಷ್ಟಿ, ಪ್ರವಾಹದ ಸಂದರ್ಭದಲ್ಲಿ ಸರ್ಕಾರ ಸಂತ್ರಸ್ತರ ನೆರವಿಗೆ ಧಾವಿಸಿದೆ. 2021-22ನೇ ಸಾಲಿನಲ್ಲಿ 1,472 ಕೋಟಿ ರೂ. ಮೊತ್ತದ ಜಲಾನಯನ ಅಭಿವೃದ್ದಿ ಕಾಮಗಾರಿಗಳಿಗೆ ಅನುಮೋದನೆ ನೀಡಿ, ಕೃಷಿಗೆ ಒತ್ತು ನೀಡಿದೆ. ರೈತರ ಮಕ್ಕಳ ಶಿಕ್ಷಣ ಪ್ರೋತ್ಸಾಹ ಯೋಜನೆಯಡಿ 4.41 ಕೋಟಿ ರೂ. ಮೊತ್ತವನ್ನು 16 ಸಾವಿರ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ’ಸಂವಿಧಾನದತ್ತವಾಗಿ ಲಭ್ಯವಾಗಿರುವ ಹಕ್ಕುಗಳೊಂದಿಗೆ ಕರ್ತವ್ಯಗಳೂ ಇವೆ. ಹಕ್ಕು ಮತ್ತು ಕರ್ತವ್ಯಗಳು ಜೊತೆ ಜೊತೆಯಾಗಿ ಹೋಗಬೇಕು ಎನ್ನುವುದನ್ನು ಇಂದಿನ ಯುವಪೀಳಿಗೆಗೆ ನೆನಪು ಮಾಡಿಕೊಡುವ ದಿನವಿದು. ನಮಗೆ ಬಹಳಷ್ಟು ಹಕ್ಕುಗಳನ್ನು ಸಂವಿಧಾನ ನೀಡಿದೆ. ಆ ಹಕ್ಕುಗಳನ್ನು ಪಡೆಯುವ ಅರ್ಹತೆಯನ್ನು ಸಂಪಾದಿಸುವ ರೀತಿಯಲ್ಲಿ ನಮ್ಮ ಕರ್ತವ್ಯಗಳನ್ನು ನಿಭಾಯಿಸಬೇಕು’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ವ್ಯಕ್ತಿ ಘನತೆ ಎತ್ತಿ ಹಿಡಿಯುತ್ತೇವೆ’: ತುಮಕೂರು ಮಹೀಂದ್ರಾ ಶೋರೂಂ ಘಟನೆ ಬಗ್ಗೆ ಆನಂದ್ ಮಹೀಂದ್ರ
‘ಪ್ರಜಾಪ್ರಭುತ್ವದ ತಳಹದಿಯ ಮೇಲೆ ದೇಶ ಗಣರಾಜ್ಯವಾಗಿದ್ದು, ರಾಜ್ಯಗಳ ಒಕ್ಕೂಟವೂ ಆಗಿದೆ. ಪ್ರತಿಯೊಂದು ರಾಜ್ಯವೂ ರಾಷ್ಟ್ರ ನಿರ್ಮಾಣದಲ್ಲಿ ಮುಂದಿರಬೇಕು. ಜನತೆಯೂ ರಾಷ್ಟ್ರ ನಿರ್ಮಾಣದತ್ತ ಗಮನ ಹರಿಸಬೇಕು. ದೇಶ ಮೊದಲು ಎನ್ನುವ ಭಾವನೆ ಇರಬೇಕು. ಕರ್ನಾಟಕ ಭಾರತ ಒಕ್ಕೂಟದಲ್ಲಿ ಪ್ರಬಲವಾದ ರಾಜ್ಯ. ಇದು ಆರ್ಥಿಕವಾಗಿ, ಸಾಮಾಜಿಕವಾಗಿ, ಕೌಶಲ್ಯಯುತವಾಗಿ, ಸಾಂಸ್ಕೃತಿಕವಾಗಿ ಕೊಡುಗೆ ನೀಡುವ ರಾಜ್ಯ. ಈ ಪರಂಪರೆಯನ್ನು ನಾವು ಉಳಿಸಿ ಬೆಳಸಬೇಕಿದೆ. ಈ ನಿಟ್ಟಿನಲ್ಲಿ ನಮ್ಮೆಲ್ಲರ ಚಿಂತನೆ ಹಾಗೂ ಕರ್ತವ್ಯವಿರಬೇಕು ಎಂದು ಜಾಗೃತಿ ಮೂಡಿಸುವ ದಿನ ಇದು’ ಎಂದಿದ್ದಾರೆ.
ಗ್ರಾಮ ಒನ್ ಯೋಜನೆ
ಗ್ರಾಮ ಒನ್ ಯೋಜನೆ ಗ್ರಾಮ ಪಂಚಾಯಿತಿಯಲ್ಲಿ ಜಾತಿ, ಆದಾಯ ಪ್ರಮಾಣ ಪತ್ರಗಳು ಹಾಗೂ ಬ್ಯಾಂಕಿಂಗ್ ಸೇವೆಗಳು ಸೇರಿದಂತೆ ಹಲವಾರು ಸೇವೆಗಳನ್ನು ಒದಗಿಸುವ ವಿಶಿಷ್ಟ ಯೋಜನೆ. ಇದಕ್ಕಾಗಿ ಗ್ರಾಮಗಳಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಇಂದು 12 ಜಿಲ್ಲೆಗಳಲ್ಲಿ ಯೋಜನೆ ಜಾರಿಯಾಗಲಿದೆ. ಸುಮಾರು 3000 ಗ್ರಾಮ ಪಂಚಾಯಿತಿಗಳಲ್ಲಿ ಪ್ರಾರಂಭವಾಗಲಿದೆ. ಮುಂದಿನ ಕೆಲವೇ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಯೋಜನೆಯನ್ನು ವಿಸ್ತರಿಸಲಾಗುವುದು. ಜನರ ಬಳಿಗೆ ಸರ್ಕಾರ ಮತ್ತು ಸೇವೆಗಳು ತಲುಪಬೇಕು ಎಂಬ ನೀತಿಯ ಆಧಾರದ ಮೇಲೆ ಯೋಜನೆಯನ್ನು ರೂಪಿಸಲಾಗಿದೆ. ಇದೊಂದು ಕ್ರಾಂತಿಕಾರಿ ಯೋಜನೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸಂಕುಚಿತ ಕೋಮು ಹಿತಾಸಕ್ತಿಯ ಅಜೆಂಡಾ ಕೈಬಿಡಿ: ಕರ್ನಾಟಕದ ಮುಖ್ಯಮಂತ್ರಿ ಮತ್ತು ಶಾಸಕರಿಗೆ ಬಹಿರಂಗ ಪತ್ರ