Homeಮುಖಪುಟಭಾರತ ಸಂವಿಧಾನದ ಚಕ್ರ ಅಂಬೇಡ್ಕರರ ಮೂಲಕ ಉರುಳಲಾರಂಭಿಸಿತು...

ಭಾರತ ಸಂವಿಧಾನದ ಚಕ್ರ ಅಂಬೇಡ್ಕರರ ಮೂಲಕ ಉರುಳಲಾರಂಭಿಸಿತು…

- Advertisement -
- Advertisement -

Constituent Assembly ಅಥವಾ ಸಂವಿಧಾನ ಸಭೆಯ ಉಗಮದ ಇತಿಹಾಸವನ್ನು ಸಂಕ್ಷಿಪ್ತವಾಗಿ ದಾಖಲಿಸುವುದಾದರೆ; 1945ರಲ್ಲಿ ಎರಡನೇ ಮಹಾಯುದ್ಧ ಮುಗಿದ ನಂತರ ಭಾರತದ ಸ್ವಾತಂತ್ರ್ಯದ ಪ್ರಶ್ನೆ ಉದ್ಭವಿಸಿತು. ಹಾಗೆ ಇದಕ್ಕೆ ಪರಿಹಾರ ಸೂಚಿಸಲು ಬ್ರಿಟಿಷರು ಮೂವರು ಸದಸ್ಯರನ್ನೊಳಗೊಂಡ ಒಂದು ಸಮಿತಿಯನ್ನು ಭಾರತಕ್ಕೆ ಕಳುಹಿಸಿದರು. ಆ ಸಮಿತಿಯ ಹೆಸರು ‘ಕ್ಯಾಬಿನೆಟ್ ಮಿಷನ್ ಆಯೋಗ’.

ಸದರಿ ಆಯೋಗವು 1946 ಮಾರ್ಚ್ 16ರಂದು ‘ಭವಿಷ್ಯದ ಭಾರತದ ಸರ್ಕಾರಕ್ಕಾಗಿ ಒಂದು ಸಂವಿಧಾನ ರಚಿಸಲು ಸಂವಿಧಾನ ಸಭೆಯೊಂದನ್ನು ರಚಿಸುವ ಅಗತ್ಯವಿದೆ’ ಎಂದು ಘೋಷಿಸಿತು. ಅಂತೆಯೇ ಆ ಸಭೆ ಪ್ರಜಾಸತ್ತಾತ್ಮಕವಾಗಿರಬೇಕೆಂಬ ನಿಟ್ಟಿನಲ್ಲಿ ವಿವಿಧ ಪ್ರಾಂತ್ಯಗಳ ಅಸೆಂಬ್ಲಿಗಳ ಮೂಲಕ ಸದಸ್ಯರನ್ನು ಆರಿಸಲಾಯಿತು. ಅಂದಹಾಗೆ ಆ ಸಭೆಗೆ ಭಾರತದ ಪಶ್ಚಿಮದ ತುದಿ ಬಾಂಬೆ ಪ್ರಾಂತ್ಯದಿಂದ ಸ್ಪರ್ಧಿಸಿದ್ದ ಅಂಬೇಡ್ಕರರು ಕಾಂಗ್ರೆಸ್ಸಿನ ಅವಿಚ್ಛಿನ್ನ ವಿರೋಧದಿಂದ ಸೋಲಬೇಕಾಯಿತು. ಆದರೂ, ಎದೆಗುಂದದೆ ಪೂರ್ವದ ದೂರದ ಬಂಗಾಳದಿಂದ ಅಲ್ಲಿಯ ಪರಿಶಿಷ್ಟ ಜಾತಿಯ ನಾಯಕ ಜೋಗೇಂದ್ರನಾಥ ಮಂಡಲ್‍ರ ಬೆಂಬಲದ ಮೂಲಕ ಅವರು ಸಂವಿಧಾನ ಸಭೆಗೆ ಆರಿಸಿಬರುವಲ್ಲಿ ಸಫಲರಾರದು. ಒಟ್ಟಾರೆ 296 ಸದಸ್ಯ ಬಲದ ಮೂಲಕ ಸಂವಿಧಾನ ಸಭೆ ತನ್ನ ಪ್ರಥಮ ಸಭೆಯನ್ನು 1946 ಡಿಸೆಂಬರ್ 6ರ ಬೆಳಿಗ್ಗೆ 11ಗಂಟೆಗೆ ನವದೆಹಲಿಯ ಕಾನ್‍ಸ್ಟಿಟ್ಯೂಶನ್ ಹಾಲ್‍ನಲ್ಲಿ ಆರಂಭಿಸಿತು.

ಸಭೆ ಆರಂಭವಾದಾಗ ಒಟ್ಟು 296 ಸದಸ್ಯರಲ್ಲಿ ಭಾಗವಹಿಸಿದ್ದು 207 ಮಂದಿಯಷ್ಟೆ. ಇನ್ನುಳಿದ ಮಂದಿ ಅಂದಿನ ಮುಸ್ಲಿಂಲೀಗ್‍ಗೆ ಸೇರಿದವರಾಗಿದ್ದು ಪ್ರತ್ಯೇಕ ರಾಷ್ಟ್ರಕ್ಕಾಗಿ ಒತ್ತಾಯಿಸಿ ಅವರೆಲ್ಲ ಗೈರುಹಾಜರಾಗಿದ್ದರು. ಹೀಗಿದ್ದರೂ ಪಂಡಿತ್ ಜವಹರಲಾಲ್ ನೆಹರೂ “ಭಾರತ ಸಾರ್ವಭೌಮ ಸ್ವತಂತ್ರ ಗಣರಾಜ್ಯವಾಗಲು ತನ್ನ ಭವಿಷ್ಯದ ಸರ್ಕಾರಕ್ಕಾಗಿ ಅದು ತನ್ನದೇ ಆದಂತಹ ಸಂವಿಧಾನವೊಂದನ್ನು ಹೊಂದುವುದನ್ನು ಬಯಸುತ್ತದೆ” ಎಂದು ಗೊತ್ತುವಳಿಯೊಂದನ್ನು ಮಂಡಿಸಿದರು. ಆದರೆ ಸದಸ್ಯರಾದ ಎಂ.ಆರ್.ಜಯಕರ್ “ಸಭೆಗೆ ಮುಸ್ಲಿಂ ಲೀಗ್ ಮತ್ತು ಇತರೆ ರಾಜ ಸಂಸ್ಥಾನಗಳ ಸದಸ್ಯರು ಗೈರುಹಾಜರಾಗಿರುವುದರಿಂದ ಅವರೆಲ್ಲ ಭಾಗವಹಿಸುವಂತಾಗಲು ಈ ಸಭೆಯನ್ನು ಮುಂದೂಡಬೇಕು” ಎಂದು ತಮ್ಮ ಆಕ್ಷೇಪವ್ಯಕ್ತಪಡಿಸಿದರು ಮತ್ತು ನೆಹರೂರವರು ಮಂಡಿಸಿದ್ದ ಆ ಗೊತ್ತುವಳಿಯ ಚರ್ಚೆಯನ್ನು ಮುಂದೂಡಲು ಸಭೆಯ ಕಲಾಪಕ್ಕೆ ತಿದ್ದುಪಡಿಯೊಂದನ್ನು ಮಂಡಿಸಿದರು.

ಅಂದಹಾಗೆ ಗೌರವಾನ್ವಿತ ಸದಸ್ಯರ ಇಂತಹ ಆಕ್ಷೇಪ ಸಭೆಯಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿತು. ಆಶ್ಚರ್ಯವೆಂದರೆ ಈ ಸಮಯದಲ್ಲಿ ಇಂತಹ ಅನಿರೀಕ್ಷಿತ ಕೋಲಾಹಲದ ನಡುವೆ ಮುಂದುವರಿದ ಸಭೆಯಲ್ಲಿ ಸಭೆಯ ಅಧ್ಯಕ್ಷರಾದ ಡಾ.ಬಾಬು ರಾಜೇಂದ್ರಪ್ರಸಾದ್‍ರವರು ಡಿಸೆಂಬರ್ 17ರಂದು ಡಾ.ಅಂಬೇಡ್ಕರರನ್ನು ಸಭೆಯನ್ನುದೇಶಿಸಿ ಮಾತನಾಡಲು ಆಹ್ವಾನಿಸಿದರು. ಸತ್ಯ ಹೇಳಬೇಕೆಂದರೆ ಯಾವ ಸಂವಿಧಾನ ಸಭೆ ನಿಂತುಹೋಗಬೇಕಿತ್ತೋ, ಅನಿರ್ದಿಷ್ಟ ಅವಧಿಗೆ ಮುಂದೂಡಬೇಕಾಗಿತ್ತೋ ಅದು ಮುಂದುವರಿಯಿತು! ಹೋಲಿಕೆ ಮಾಡುವುದಾದರೆ ಭಾರತದ ಸಂವಿಧಾನದ ಚಕ್ರ ಅಂಬೇಡ್ಕರರ ಮೂಲಕ ಉರುಳಲಾರಂಭಿಸಿತು! ಯಾಕೆಂದರೆ ತಮ್ಮ ಭಾಷಣದಲ್ಲಿ ಅಂಬೇಡ್ಕರರು ನೆಹರೂರವರು ಮಂಡಿಸಿದ್ದ ಗೊತ್ತುವಳಿಯ 8 ಅಂಶಗಳನ್ನು ಪದಪದವಾಗಿ, ಪದರು ಪದರಾಗಿ ಬಿಡಿಸಿ ಸಂವಿಧಾನ ಎತ್ತ ಸಾಗಬೇಕು, ಹೇಗಿರಬೇಕು ಎಂದು ವಿವಿಧ ರಾಷ್ಟ್ರಗಳ ಸಂವಿಧಾನಗಳನ್ನು ಉಲ್ಲೇಖಿಸುತ್ತಾ ಮಾರ್ಗ ತೋರಿಸಲಾಂಭಿಸಿ ಸಭೆಯನ್ನು ಗಂಭೀರತೆಯೆಡೆಗೆ ತಂದರು. ಮುಸ್ಲಿಂಲೀಗ್ ಸದಸ್ಯರು ಗೈರಾಗಿದ್ದಕ್ಕೆ ಮುಂದಿನ ಸಭೆಯಲ್ಲಿ ಅವರು ಭಾಗವಹಿಸುತ್ತಾರೆ ಎಂಬ ಏಕತೆಯ ಆಶಾಭಾವ ವ್ಯಕ್ತಪಡಿಸುತ್ತಾ ಅಂಬೇಡ್ಕರರು, “ವಿವಿಧ ಜಾತಿ-ಜನಾಂಗಗಳಾಗಿದ್ದಾಗ್ಯೂ ನಾವೆಲ್ಲಾ ಸದಾ ಒಂದಾಗಿರುವುದರಲ್ಲಿ ನನಗೆ ಯಾವ ಸಂಶಯವೂ ಇಲ್ಲ” ಎಂದರು.

ಇದನ್ನೂ ಓದಿರಿ: ಶೂದ್ರ ಮಂಡಲ ಮಧ್ಯದೊಳಗೆ..!

ಹೀಗೆ ತನ್ನ ಆರಂಭಿಕ ದಿನಗಳನ್ನು ಪ್ರಾರಂಭಿಸಿದ ಸಂವಿಧಾನಸಭೆ ಸರ್ದಾರ್ ಪಟೇಲರ ನೇತೃತ್ವದಲ್ಲಿ 1947 ಜನವರಿ 24 ರಂದು ಅಂಬೇಡ್ಕರರನ್ನು ಒಳಗೊಂಡಂತೆ 50ಜನ ಸದಸ್ಯರ ಸಲಹಾ ಸಮಿತಿಯೊಂದನ್ನು ನೇಮಿಸಿತು. ಆ ಸಮಿತಿ ಇತರೆ 4 ಪ್ರಮುಖ ಉಪಸಮಿತಿಗಳನ್ನು ನಿಯುಕ್ತಿಗೊಳಿಸಿತು. ಅವುಗಳಲ್ಲಿ ಬಹುಮುಖ್ಯದ್ದೆಂದರೆ ಮೂಲಭೂತ ಹಕ್ಕುಗಳ ಉಪಸಮಿತಿ ಮತ್ತು ಅಲ್ಪಸಂಖ್ಯಾತರ ಉಪಸಮಿತಿ. ಅಂಬೇಡ್ಕರರು ಈ ಎರಡೂ ಪ್ರಮುಖ ಸಮಿತಿಗಳ ಸದಸ್ಯರಾದರು. ಮುಂದುವರಿದು ಸಭೆ ಇನ್ನೂ 3 ಕಾರ್ಯಾಚರಣಾ ಸಮಿತಿಗಳನ್ನು ರಚಿಸಿತು. ಅವುಗಳೆಂದರೆ 1.ಕೇಂದ್ರ ಅಧಿಕಾರ ಸಮಿತಿ 2.ಕೇಂದ್ರ ಸಂವಿಧಾನ ಸಮಿತಿ 3.ಪ್ರಾಂತ್ಯಗಳ ಸಂವಿಧಾನ ಸಮಿತಿ. ಇಲ್ಲಿಯೂ ಅಷ್ಟೆ ಅಂಬೇಡ್ಕರ್ ಕೇಂದ್ರ ಸಂವಿಧಾನ ಸಮಿತಿಯ ಸದಸ್ಯರಾದರು.

ಹೀಗೆ ಅವರು ಪ್ರಮುಖ ಸಮಿತಿಗಳ ಸದಸ್ಯರಾಗುವುದಕ್ಕೆ ಕಾರಣವೂ ಇತ್ತು. ಯಾಕೆಂದರೆ ಮುಂದೆ ಸಂವಿಧಾನ ಅರ್ಪಿಸುವ ಸಮಯದಲ್ಲಿ ಅವರೇ ಹೇಳಿಕೊಂಡಿರುವಂತೆ “ಪರಿಶಿಷ್ಟ ಜಾತಿಗಳ ಹಿತ ಕಾಯುವ ಮಹದಾಸೆ ಹೊತ್ತಷ್ಟೆ ತಾನು ಸಂವಿಧಾನ ಸಭೆಗೆ ಬಂದೆ…” ಹೌದು, ಡಾ.ಅಂಬೇಡ್ಕರರು ಪರಿಶಿಷ್ಟರ ಹಿತ ಕಾಯುವ ನೆಪ ಮಾತ್ರಕ್ಕೆ ಬಂದರೂ ತಮಗರಿವಿಲ್ಲದಂತೆ ಅವರು ಇಡೀ ದೇಶದ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು! ಯಾವ ಪರಿ ಎಂದರೆ ಇಡೀ ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಸಕ್ರಿಯರಾಗುವಮಟ್ಟಿಗೆ. ಅದೂ ಅದೆಂತಹ ಸಕ್ರಿಯತೆಯೆಂದರೆ ಶತೃಗಳೂ ಮೆಚ್ಚಿ ಅಹುದಹುದು ಎನ್ನುವ ಮಟ್ಟಿಗೆ! ಏಕೆಂದರೆ ಸಂವಿಧಾನ ರಚನೆಯ ಇಂತಹ ಔಪಚಾರಿಕ ಪ್ರಕ್ರಿಯೆಗಳು ಪೂರ್ಣಗೊಂಡು ಸ್ವಾತಂತ್ರ್ಯದ ಸಮಯದಲ್ಲಿ ದೇಶ ವಿಭಜನೆಯ ಸಂದರ್ಭ ಬಂದಾಗ ಅಂಬೇಡ್ಕರರು ಗೆದ್ದಿದ್ದ ಬಂಗಾಳದ ಕ್ಷೇತ್ರ ಕಾಂಗ್ರೆಸ್ಸಿಗರ ತಂತ್ರದಿಂದಾಗಿ ಪೂರ್ವಪಾಕಿಸ್ತಾನಕ್ಕೆ ಸೇರಲ್ಪಟ್ಟು ಅವರ ಸದಸ್ಯತ್ವ ರದ್ದಾಯಿತು. ಸೋಜಿಗವೆಂದರೆ ಈ ಸಮಯದಲ್ಲಿ ಅಂಬೇಡ್ಕರರ ಸಂವಿಧಾನ ರಚನಾ ಚಾಕಚಕ್ಯತೆ ಕೆಲಸ ಮಾಡಿತು! ಹೇಗೆಂದರೆ ಸ್ವತಃ ಸಭೆಯ ಅಧ್ಯಕ್ಷರಾದ ಡಾ.ಬಾಬು ರಾಜೇಂದ್ರಪ್ರಸಾದರು 1947 ಜೂನ್ 30 ರಂದು ಬಾಂಬೆ ಪ್ರಾಂತ್ಯದ ಅಂದಿನ ಪ್ರಧಾನಿ ಡಾ.ಬಿ.ಜಿ.ಖೇರ್‍ರವರಿಗೆ ಪತ್ರ ಬರೆದು “ಬೇರೆ ವಿಷಯಗಳೇನೆ ಇರಲಿ, ಸಂವಿಧಾನ ಸಭೆ ಮತ್ತದರ ವಿವಿಧ ಉಪಸಮಿತಿಗಳಲ್ಲಿ ಅಂಬೇಡ್ಕರರ ಕಾರ್ಯ ಎಂತಹ ಮಟ್ಟದ್ದೆಂದರೆ, ಖಂಡಿತ ಅವರ ಸೇವೆಯನ್ನು ನಾವು ಕಳೆದುಕೊಳ್ಳಬಾರದು. ಅದಕ್ಕಾಗಿ ಜುಲೈ 14ರ ಮುಂದಿನ ಸಭೆಯೊಳಗೆ he should be reelected”ಎಂದರು! (Dr.Ambedkar The Principal Architect of The Constitution of India, Published by Government of India. Pp.26)

ಹೌದು, ಬಾಬಾಸಾಹೇಬರು ತಕ್ಷಣ ಮರುಆಯ್ಕೆಯಾದರು. ಹಾಗೇ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಕೂಡ ಸಿಕ್ಕಿತು ಮತ್ತು ಅವರು ಸ್ವತಂತ್ರ ಭಾರತದಲ್ಲಿ ನೆಹರೂ ಸಂಪುಟದಲ್ಲಿ ಕಾನೂನು ಸಚಿವರಾಗಿ ಕೂಡ ನೇಮಕಗೊಂಡರು. ಆಶ್ಚರ್ಯವೆಂದರೆ ಆಗಸ್ಟ್ 29ರಂದು ಮರುಸಮಾವೇಶಗೊಂಡ ಸಂವಿಧಾನಸಭೆ ಡಾ.ಅಂಬೇಡ್ಕರರನ್ನು “ಸಂವಿಧಾನ ಪ್ರತಿ ರಚಿಸುವ ಸಮಿತಿ”ಯ ಅಧ್ಯಕ್ಷರನ್ನಾಗಿಯೂ ಆರಿಸಿತು! ಜೊತೆಗೆ ಆರು ಮಂದಿ ಸದಸ್ಯರ ತಂಡ. ಒಟ್ಟಾರೆ ಸಂವಿಧಾನ ಸಭೆಯ ಇಂತಹ ನಡಾವಳಿಗಳ ಮೂಲಕ ಭಾರತದ ಭವಿಷ್ಯ ಬರೆವ ಕೆಲಸ ಬಾಬಾಸಾಹೇಬರ ಮುಡಿಗೇರಿತು.

ಸಂವಿಧಾನ ರಚನೆಯ ಜವಾಬ್ದಾರಿಯೇನೋ ಅಂಬೇಡ್ಕರರ ಮುಡಿಗೇರಿತು. ಆದರೆ ಆ ಜವಾಬ್ದಾರಿಯನ್ನು ಅವರು ನಿರ್ವಹಿಸಿದ ಪರಿ? ಖಂಡಿತ, ಅಂಬೇಡ್ಕರರು ಮತ್ತವರ ಸಂವಿಧಾನ ಕಾರ್ಯಕ್ಷಮತೆಯ ಬಗ್ಗೆ ಸ್ವತಃ ಅವರು ಮತ್ತು ಇತರರು ಸಂವಿಧಾನ ಸಭೆಗಳಲ್ಲಿ ಮಾಡಿದ ಭಾಷಣಗಳಲ್ಲಿ ನಮಗೆ ಉಲ್ಲೇಖ ಸಿಗುತ್ತದೆ. 1948 ನವೆಂಬರ್ 25ರಂದು ಡಾ.ಅಂಬೇಡ್ಕರರು ಸಂವಿಧಾನ ಸಮರ್ಪಿಸುತ್ತಾ ಮಾಡಿದ ಅಂತಿಮ ಭಾಷಣವನ್ನು ಉಲ್ಲೇಖಿಸುವುದು ಅಗತ್ಯ.

“ಮಾನ್ಯರೆ, ಸಂವಿಧಾನ ಸಭೆಯ ಕಾರ್ಯಕಲಾಪದ ಬಗ್ಗೆ ಹಿನ್ನೋಟ ನೋಡುವುದಾದರೆ 1946 ಡಿಸೆಂಬರ್ 9ರಿಂದ ಇಲ್ಲಿಯವರೆಗೆ ಸಂವಿಧಾನ ಸಭೆ ಸಮಾವೇಶಗೊಂಡು 2 ವರ್ಷ, 11 ತಿಂಗಳು, 17ದಿನಗಳು ಕಳೆಯುತ್ತಿವೆ. ಇದುವರೆಗೆ ಸಭೆ 11 ಸಮಾವೇಶಗಳನ್ನು ನಡೆಸಿದೆ. ಈ 11 ಸಮಾವೇಶಗಳು 165 ದಿನಗಳನ್ನು ಬಳಸಿಕೊಂಡಿದೆ. ಈ 165 ದಿನಗಳಲ್ಲಿ 114 ದಿನಗಳನ್ನು ಸಭೆ ಕರಡು ಸಂವಿಧಾನವನ್ನು ಪರಿಗಣಿಸಲು ತೆಗೆದುಕೊಂಡಿದೆ. ಇನ್ನು ಕರಡು ಸಮಿತಿ ಅಥವಾ ಸಂವಿಧಾನ ರಚನಾ ಸಮಿತಿಯ ಬಗ್ಗೆ ಹೇಳುವುದಾದರೆ 1947 ಆಗಸ್ಟ್ 29 ರಂದು ಅದನ್ನು ಆಯ್ಕೆಮಾಡಲಾಯಿತು ಮತ್ತು ಅದು ತನ್ನ ಪ್ರಥಮ ಸಭೆಯನ್ನು 30ನೇ ಆಗಸ್ಟ್ ರಂದು ನಡೆಸಿತು. ಆಗಸ್ಟ್ 30 (1947) ರಿಂದ ಇಲ್ಲಿಯವರೆಗೆ ಸಮಿತಿ 141 ದಿನಗಳು ಸಭೆ ನಡೆಸಿ ಒಟ್ಟು ಈ ಅವಧಿಯನ್ನು ಕರಡು ಸಂವಿಧಾನವನ್ನು ತಯಾರಿಸಲು ಬಳಸಿಕೊಂಡಿದೆ” ಹೀಗೆ ಅಂಬೇಡ್ಕರ್‌‌ ವಿವರಿಸುತ್ತಾ ಹೋಗುತ್ತಾರೆ.

ಅಂದಹಾಗೆ ಬಾಬಾಸಾಹೇಬರ ನೇತೃತ್ವದ ಸಮಿತಿ ಸಿದ್ಧಪಡಿಸಿದ ಈ ಸಂವಿಧಾನ 1948 ಫೆಬ್ರವರಿ 26ರಂದು ಭಾರತ ಸರ್ಕಾರದ ಗೆಜೆಟ್‍ನಲ್ಲಿ ಪ್ರಕಟಗೊಂಡಿತು ಮತ್ತು ಹಾಗೆ ಗೆಜೆಟ್‍ನಲ್ಲಿ ಪ್ರಕಟಗೊಂಡ ಸಂವಿಧಾನದ ಆ ಪ್ರತಿ ತನ್ನ ಆರಂಭದ ಪುಟದಲ್ಲಿ ರಚನಾ ಸಮಿತಿಯ ಅಧ್ಯಕ್ಷರಾದ ಅಂಬೇಡ್ಕರರು ಸಭೆಯ ಅಧ್ಯಕ್ಷರಿಗೆ ಬರೆದ ಪತ್ರವೊಂದನ್ನೂ ಕೂಡ ಒಳಗೊಂಡಿತ್ತು. ಆ ಪತ್ರದ ಪ್ರಾರಂಭದ ಒಕ್ಕಣೆಯನ್ನು ಉಲ್ಲೇಖಿಸುವುದಾದರೆ “Dear Sir, On behalf of the Drafting Committee… I submit herewith the Draft of the new Constitution of India… I have been authorized to sign the Draft… Yours truly, B.R.AMBEDKAR.” (Ibd. Pp.127)

ಖಂಡಿತ, ಹೀಗೆ ಪುಟಪುಟವನ್ನೂ ಉಲ್ಲೇಖಿಸುವ ಅಗತ್ಯವಿಲ್ಲ. ಆದರೂ ಕೆಲವು ಕೋಮುವಾದಿ ಕಿತಾಪತಿಗಳಿಸ್ಕೋರ ಇದನ್ನು ಉಲ್ಲೆಖಿಸಬೇಕಿದೆ. ಅಲ್ಲದೆ ಮತ್ತೊಂದು ಅಂಶವನ್ನು ಇಲ್ಲಿ ದಾಖಲಿಸಬೇಕಿದೆ. ಅದೆಂದರೆ ಫೆಬ್ರವರಿ 26,1948 ರಂದು ಗೆಜೆಟ್‍ನಲ್ಲಿ ಪ್ರಕಟಗೊಂಡ ಭಾರತ ಸಂವಿಧಾನದ ಕರಡು ಪ್ರತಿ ಅಂಬೇಡ್ಕರರು ವೈಯಕ್ತಿಕವಾಗಿ ಸಂವಿಧಾನ ಸಭೆಯ ಮೂಲಭೂತ ಹಕ್ಕುಗಳ ಸಮಿತಿಗೆ ತಮ್ಮ ಪಕ್ಷ ‘ಪರಿಶಿಷ್ಟ ಜಾತಿಗಳ ಒಕ್ಕೂಟ’ದ ಪರವಾಗಿ ಮಾರ್ಚ್ 15, 1947ರಂದು ಸಲ್ಲಿಸಿದ ಮನವಿಯ ಡಿಟೋ ಕಾಪಿಯಂತೇ ಇದೆ ಎಂಬುದು! ಈ ನಿಟ್ಟಿನಲ್ಲಿ ಆಸಕ್ತರು ಅಂಬೇಡ್ಕರರ ಆ ಮನವಿಯನ್ನು ಅವರ ಬರಹಗಳು ಭಾಷಣಗಳ ಸಂಪುಟ 1ರಲ್ಲಿ ‘ರಾಜ್ಯಗಳು ಮತ್ತು ಅಲ್ಪಸಂಖ್ಯಾತರು’ ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡಿರುವುದನ್ನು ಗಮನಿಸಬಹುದು. ಈ ಹಿನ್ನೆಲೆಯಲ್ಲಿ ಸ್ಪಷ್ಟವಾಗಿ ಹೇಳಬಹುದು ಭಾರತದ ಸಂವಿಧಾನ ಅಂಬೇಡ್ಕರರ ಮೆದುಳಿನ ಕೂಸು ಎಂದು.

ಪ್ರಶ್ನೆಯೇನೆಂದರೆ ಗೆಜೆಟ್‍ನಲ್ಲಿ ಪ್ರಕಟಗೊಂಡ ಸಂವಿಧಾನ ಫೆಬ್ರವರಿ 26, 1948 ರಂದೇ ಜಾರಿಯಾಯಿತೇ? ಖಂಡಿತ ಇಲ್ಲ.ಯಾಕೆಂದರೆ ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಈ ದಿಸೆಯಲ್ಲಿ ಪ್ರಜೆಗಳ ಪ್ರತಿನಿಧಿಗಳ ನಡುವೆ ಅದು ಅಂದರೆ ಸಂವಿಧಾನ ಚರ್ಚೆಗೆ ಬರುವುದು ಬೇಡವೆ? ಹೌದು, 15 ನವೆಂಬರ್ 1948ರಲ್ಲಿ ಅನುಚ್ಛೇದ 1ರಿಂದ ಪ್ರಾರಂಭಿಸಿ 17 ಅಕ್ಟೋಬರ್ 1949ರವರೆಗೆ ಕೊನೆಯ ಅನುಚ್ಛೇದ ಅಂದರೆ ಅನುಚ್ಛೇದ 395ರವರೆಗೆ ಸಂವಿಧಾನ ಸಭೆ ಇಡೀ ಕರಡು ಸಂವಿಧಾನದ ಬಗ್ಗೆ ಭರಪೂರ ಚರ್ಚೆ ನಡೆಸಿತು. ಆಶ್ಚರ್ಯ ಬೇಡ, ಈ ಇಷ್ಟೂ ದಿನಗಳಲ್ಲಿ ಪ್ರತಿಯೊಂದೂ ಅನುಚ್ಛೇದದ ಚರ್ಚೆಯಲ್ಲಿಯೂ ಸಕ್ರಿಯವಾಗಿ ಭಾಗವಹಿಸಿ ಅಂಬೇಡ್ಕರರು ಗೌರವಾನ್ವಿತ ಸದಸ್ಯರ ಪ್ರತಿಯೊಂದು ಸಲಹೆಗೂ ಕಿವಿಯಾದರು ಮತ್ತು ಸಂಬಂಧಪಟ್ಟ ಅನುಚ್ಛೇದದ ಪದಪದದ ವಿವರಣೆ ನೀಡಿ ಸದಸ್ಯರ ಸಲಹೆಗಳನ್ನು ಗೌರವಯುತವಾಗಿ ಸ್ವೀಕರಿಸಿ ಅಗತ್ಯ ತಿದ್ದುಪಡಿಗಳನ್ನು ಅಂಗೀಕರಿಸಿದರು. ಈ ಸಂಬಂಧ ಅಂಬೇಡ್ಕರರು ನೀಡಿರುವ ಮಾಹಿತಿಯನ್ನೇ ದಾಖಲಿಸುವುದಾದರೆ “ಕರಡು ಸಂವಿಧಾನಕ್ಕೆ ಸೂಚಿಸಲಾದ ಒಟ್ಟು ತಿದ್ದುಪಡಿಗಳು 7635. ಅವುಗಳಲ್ಲಿ ಅಂಗೀಕಾರಗೊಂಡಂತಹವು 2473”. ಒಟ್ಟಾರೆ ಇಂತೆಲ್ಲ ತಿದ್ದುಪಡಿಗಳ ನಂತರ 1949 ನವೆಂಬರ್ 17ರಂದು ಅಂತಿಮವಾಗಿ ಸಮಾವೇಶಗೊಂಡ ಸಂವಿಧಾನ ಸಭೆಯಲ್ಲಿ ಡಾ.ಅಂಬೇಡ್ಕರರು “ಅಧ್ಯಕ್ಷ ಮಹೋದಯರೇ, ಈ ಸಭೆ ಸ್ಥಿರೀಕರಿಸಿರುವ ಈ ಸಂವಿಧಾನವನ್ನು ಅಂಗೀಕರಿಸಬೇಕೆಂಬ ನಿರ್ಣಯವನ್ನು ನಾನು ಮಂಡಿಸುತ್ತೇನೆ” ಎನ್ನುತ್ತಿದ್ದಂತೆ ಇಡೀ ಸಭೆ ಹರ್ಷದ ಹೊನಲು ಹರಿಸಿ ಕರತಾಡನದೊಂದಿಗೆ ತನ್ನ ಒಪ್ಪಿಗೆ ಸೂಚಿಸಿತು. ಹಾಗೆಯೇ ಅಂಬೇಡ್ಕರರಿಗೆ ಅಭಿನಂದನೆಯ ಸುರಿಮಳೆಗಳು.

ಅವುಗಳಲ್ಲಿ ಒಂದಷ್ಟನ್ನು ದಾಖಲಿಸುವುದಾದರೆ ಮದ್ರಾಸಿನ ಮುನಿಸ್ವಾಮಿ ಪಿಳ್ಳೈ ಎಂಬುವವರು “ಪರಿಶಿಷ್ಟ ಜಾತಿಯು ನಂದನಾರ್, ತಿರುಪಳನಾಳ್ವರ್, ತಿರುವಳ್ಳುವರ್ ಹೀಗೆ ಶ್ರೇಷ್ಠ ಸಂತರನ್ನು, ಜ್ಞಾನಿಗಳನ್ನು ನೀಡಿದೆ. ನಿಸ್ಸಂಶಯವಾಗಿ ಡಾ.ಅಂಬೇಡ್ಕರರು ಅಂತಹವರ ಸಾಲಿಗೆ ಸೇರ್ಪಡೆಯಾಗುತ್ತಾರೆ. ಯಾಕೆಂದರೆ ಅವಕಾಶ ಸಿಕ್ಕರೆ ಪರಿಶಿಷ್ಟರು ಎಷ್ಟು ಎತ್ತರಕ್ಕೆ ಏರಬಲ್ಲರು ಎಂಬುದನ್ನು ಅಂಬೇಡ್ಕರರು (ತಮ್ಮ ಈ ಸಾಧನೆಯ ಮೂಲಕ) ಇಡೀ ಪ್ರಪಂಚಕ್ಕೆ ತೋರಿಸಿಕೊಟ್ಟಿದ್ದಾರೆ”. ಎಂ.ಅನಂತಶಯನಂ ಅಯ್ಯಂಗಾರ್ ಎನ್ನುವವರಂತೂ “ಯಾವ ವ್ಯಕ್ತಿ ನಮ್ಮನ್ನು ಟೀಕಿಸುವ ಮತ್ತು ಅನುಮಾನದಿಂದ ನೋಡುವ ಉದ್ದೇಶದಿಂದ ಸಭೆಗೆ ಬಂದರೋ, ಕಡೆಗೆ ಅವರೇ ಸಂವಿಧಾನದ ಹೊಣೆಹೊತ್ತುಕೊಂಡರು ಮತ್ತು ಅದನ್ನು ರಚಿಸಿದರು” ಎಂದರು! ಹಾಗೆ ಪಂಡಿತ್ ಠಾಕೂರ್ ದಾಸ್ ಭಾರ್ಗವ ಎಂಬುವವರು ಮಾತನಾಡುತ್ತಾ, “ಡಾ.ಅಂಬೇಡ್ಕರರು ನಮ್ಮ ಹೃದಯಗಳಲ್ಲಿ ಇಂದು ಉನ್ನತ ಸ್ಥಾನ ಅಲಂಕರಿಸಿದ್ದಾರೆ” ಎನ್ನುವ ಮೂಲಕ ತಮ್ಮ ಅಭೂತಪೂರ್ವ ಪ್ರೀತಿ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದುವರಿದು ಮತ್ತೋರ್ವ ಸದಸ್ಯರಾದ ಟಿ.ಪ್ರಕಾಶಂ, ”ತಮ್ಮ ಈ ಕಾರ್ಯದ ಮೂಲಕ ಡಾ.ಅಂಬೇಡ್ಕರರು ತಾವು ಗ್ರೇಟ್ ಬ್ರಿಟನ್ನಿನ ರಾಜನ ಸಲಹೆಗಾರನಾಗಿ ಅಲ್ಲಿಯ ಆಸ್ಥಾನ ವೂಲ್‍ಸ್ಯಾಕ್‍ನಲ್ಲಿ ಕುಳಿತುಕೊಳ್ಳುವಷ್ಟು ಸಮರ್ಥರು” ಎಂದು ತೋರಿಸಿಕೊಟ್ಟಿದ್ದಾರೆ ಎನ್ನುತ್ತಾರೆ. ಕಡೆಯದಾಗಿ ಹೆಚ್.ಜೆ.ಖಾಂಡೇಕರ್ ಎಂಬುವವರ ಹೇಳಿಕೆಯನ್ನು ದಾಖಲಿಸುವುದಾದರೆ “ಮಾನ್ಯರೆ, ನಾವು ಅಂಬೇಡ್ಕರರಂತಹ ಪ್ರತಿಭಾಶಾಲಿಯಿಂದ ರೂಪಿತಗೊಂಡ ಕಾನೂನನ್ನು ಸ್ವತಂತ್ರ ಭಾರತದಲ್ಲಿ ಇಂದು ಕಾರ್ಯಾಚರಣೆಗಿಳಿಸುತ್ತಿದ್ದೇವೆ. ಹಾಗೆ ಈ ಕಾನೂನನ್ನು ನಾನು ಮಹಾರ್ ಕಾನೂನು ಎನ್ನಲಿಚ್ಚಿಸುತ್ತೇನೆ. ಯಾಕೆಂದರೆ ಡಾ.ಅಂಬೇಡ್ಕರರು ಮಹಾರ್ ಸಮುದಾಯದವರು ಮತ್ತು ಮುಂದೆ 1950 ಜನವರಿ 26ರಂದು ಈ ಕಾನೂನು ಉದ್ಘಾಟನೆಗೊಂಡಾಗ ನಾವು ಮನುವಿನ ಕಾನೂನಿನ ಬದಲು ಮಹಾರರ ಕಾನೂನನ್ನು ಹೊಂದುತ್ತೇವೆ. ಮನುವಿನ ಕಾನೂನಿನ ಅಡಿಯಲ್ಲಿ ಈ ದೇಶದಲ್ಲಿ ಸುಖ ನೆಮ್ಮದಿಯೇ ಇರಲಿಲ್ಲ, ಆದರೆ ಮಹಾರರ ಕಾನೂನು, ಖಂಡಿತ ಈ ದೇಶವನ್ನು ಸ್ವರ್ಗವನ್ನಾಗಿ ಮಾಡುತ್ತದೆ… ನನಗೆ ಭರವಸೆ ಆ ಇದೆ”.


ಇದನ್ನೂ ಓದಿರಿ: ‘ಅಕ್ಕಿ ಕದ್ದನೆಂದು ಆದಿವಾಸಿ ಯುವಕನನ್ನು ಕೊಂದು 4 ವರ್ಷವಾಯಿತು, ವಿಚಾರಣೆ ಮಾತ್ರ ಆರಂಭವಾಗಲಿಲ್ಲ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ನಾಟಕ ಎಸ್‌ಐಆರ್: 192 ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ಹೆಚ್ಚು ಮತಗಳು ಡಿಲೀಟ್; 2028ಕ್ಕೆ ಯಾರಿಗೆ ಅಧಿಕಾರ?

ಜನಪರ ಸಂಘಟನೆಗಳು ಮತ್ತು ಜಾತ್ಯತೀತ ಪಕ್ಷಗಳ ವಿರೋಧ, ಆತಂಕ ಹಾಗೂ ಆರೋಪಗಳ ಹೊರತಾಗಿಯೂ ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಗಿದಿದೆ. 2026ರ ಅಕ್ಟೋಬರ್ 27ರಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರು ಅಂತಿಮ ಮತದಾರರ...

ಸೌಜನ್ಯ ಪ್ರಕರಣ: ಎಸ್‌ಐಟಿ ಮುಖ್ಯಸ್ಥ ಸ್ಥಾನದಿಂದ ಶಶಿಕುಮಾರ್‌ಗೆ ಕೊಕ್; ಚೇತನ್ ಸಿಂಗ್ ರಾಥೋಡ್‌ಗೆ ತನಿಖೆಯ ಹೊಣೆ

ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ರಚಿಸಲಾಗಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ನೇತೃತ್ವದಲ್ಲಿ ರಾಜ್ಯ ಸರ್ಕಾರ ಮಹತ್ವದ ಬದಲಾವಣೆ ಮಾಡಿದೆ. ಎಸ್‌ಐಟಿ ಮುಖ್ಯಸ್ಥರಾಗಿದ್ದ ಐಜಿಪಿ ಎನ್. ಶಶಿಕುಮಾರ್...

ಇಸ್ರೇಲ್ ಚುನಾವಣೆ: ನೆತನ್ಯಾಹು, ಐಸೆನ್‌ಕೋಟ್ ಬಣಗಳಿಗೆ ಬಹುಮತದ ಕೊರತೆ; ಸರ್ಕಾರ ರಚನೆಯಲ್ಲಿ ಅರಬ್ ಪಕ್ಷಗಳೇ ನಿರ್ಣಾಯಕ!

ಇಸ್ರೇಲ್‌ನ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಆಡಳಿತಾರೂಢ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಮಾಜಿ ಸೇನಾ ಮುಖ್ಯಸ್ಥ ಗಡಿ ಐಸೆನ್‌ಕೋಟ್ ನೇತೃತ್ವದ ವಿರೋಧ ಪಕ್ಷದ ಬಣಗಳೆರಡಕ್ಕೂ ಭಾರಿ ಸವಾಲು ತಂದೊಡ್ಡಿದೆ. 120 ಸದಸ್ಯ ಬಲದ...

ನ.1ರ ಇಂಡಿಯಾ ಒಕ್ಕೂಟದ ರ‍್ಯಾಲಿಗೆ ಬೆಂಬಲ ಘೋಷಿಸಿದ ‘ಪೀಪಲ್ ಅಗೆನ್ಸ್ಟ್ ಎಸ್‌ಐಆರ್’

ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟ ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಸಲಿರುವ ಬೃಹತ್ ರ‍್ಯಾಲಿಗೆ ಪೀಪಲ್ ಅಗೆನೆಸ್ಟ್ ಎಸ್‌ಐಆರ್‌ ಬೆಂಬಲ ಘೋಷಿಸಿದೆ. ಪ್ರಜಾಪ್ರಭುತ್ವವನ್ನು ಉಳಿಸಲು, ಎಸ್‌ಐಆರ್ ರದ್ದುಗೊಳಿಸಲು, ಮುಖ್ಯ ಚುನಾವಣಾ ಆಯುಕ್ತ...

‘ನುಸುಳುಕೋರರನ್ನು’ ಹೊರಹಾಕಲು SIR ಎಂದಿತ್ತು ಬಿಜೆಪಿ ಮತ್ತು ಚು. ಆಯೋಗ : ಆರು ರಾಜ್ಯಗಳಲ್ಲಿ ಪತ್ತೆಯಾಗಿದ್ದು ಕೇವಲ 1,600 ವಿದೇಶಿಯರು ಮಾತ್ರ

'ನುಸುಳುಕೋರರನ್ನು' ಪತ್ತೆ ಹಚ್ಚುವುದು ಅಥವಾ 'ವಿದೇಶಿ ಅಕ್ರಮ ವಲಸಿಗರನ್ನು' ಪತ್ತೆ ಹಚ್ಚುವುದು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಹೇಳಿತ್ತು....

ಸಂತ್ರಸ್ತೆ ಮತ್ತು ಆರೋಪಿ ನಡುವಿನ ‘ಒಪ್ಪಂದ’ವನ್ನಷ್ಟೇ ಆಧರಿಸಿ ಅತ್ಯಾಚಾರ ಪ್ರಕರಣ ರದ್ದುಗೊಳಿಸಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಪಕ್ಷಕಾರರ (ಸಂತ್ರಸ್ತೆ ಮತ್ತು ಆರೋಪಿ) ನಡುವಿನ ರಾಜಿ ಸಂಧಾನದ ಆಧಾರದ ಮೇಲೆ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಿದ್ದ ಮಧ್ಯಪ್ರದೇಶ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಕೇವಲ ಒಪ್ಪಂದದ ಆಧಾರದ ಮೇಲೆ ಗಂಭೀರ ಅಪರಾಧಗಳನ್ನು...

DELHI SIR : 2026ರ ಮತದಾರರ ಪಟ್ಟಿಯಲ್ಲಿದ್ದರೂ ಕೂಡ ಡಿಲಿಟೆಡ್ ವೋಟರ್ಸ್ ಫಾರಂ-6 ಸಲ್ಲಿಸುವಂತೆ ಸೂಚಿಸಿದ್ದು ಏಕೆ? ಚು. ಆಯೋಗಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

ದೆಹಲಿಯ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಸಂಬಂಧಿಸಿದಂತೆ, 2026ರ ಮತದಾರರ ಪಟ್ಟಿಯಲ್ಲಿದ್ದರೂ ಸಹ ಗಣತಿ ನಮೂನೆಗಳನ್ನು (enumeration forms) ಭರ್ತಿ ಮಾಡದ ಕಾರಣಕ್ಕಾಗಿ ಕರಡು ಪಟ್ಟಿಯಿಂದ ಹೆಸರನ್ನು ಕಳೆದುಕೊಂಡಿರುವ ವ್ಯಕ್ತಿಗಳು,...

ಮರ್ಯಾದೆಗೇಡು ಹತ್ಯೆ ಶಂಕೆ: ದಲಿತ ಯುವಕನನ್ನು ಇಟ್ಟಿಗೆಯಿಂದ ಹೊಡೆದು ಕೊಂದ ಪತ್ನಿಯ ಸಹೋದರ ಬಂಧನ

ಉತ್ತರ ಪ್ರದೇಶದ ಮುಜಫ್ಫರ್‌ನಗರ ಜಿಲ್ಲೆಯಲ್ಲಿ 23 ವರ್ಷದ ದಲಿತ ಯುವಕನನ್ನು ಇಟ್ಟಿಗೆಗಳಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದು ಮರ್ಯಾದೆಗೇಡು ಹತ್ಯೆ ಶಂಕೆಗೆ ಕಾರಣವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ಪತ್ನಿಯ ಹಿರಿಯ...

Karnataka SIR | ಅಂತಿಮ ಮತದಾರರ ಪಟ್ಟಿಯನ್ನು ತಿರಸ್ಕರಿಸಿದ ಹೋರಾಟಗಾರರು : ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್‌ಗೆ ಬಹಿರಂಗ ಸವಾಲು

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ ಮಂಗಳವಾರ (ಅ.27) ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯನ್ನು ಹೋರಾಟಗಾರರು ತಿರಸ್ಕರಿಸಿದ್ದು, ಹೋರಾಟ ಮುಂದುವರಿಸುವ ಘೋಷಣೆ ಮಾಡಿದ್ದಾರೆ. ಬುಧವಾರ (ಅ.28) ಬೆಂಗಳೂರಿನ ಶಾಸಕರ ಭವನದಲ್ಲಿ...

ಜಾಮಿಯಾ ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ; ಪ್ರತಿಭಟನಾ ಸ್ಥಳಕ್ಕೆ ರಾಹುಲ್ ಗಾಂಧಿ ಭೇಟಿ ಸಾಧ್ಯತೆ

ಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನಾ ಸ್ಥಳಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡುವ ನಿರೀಕ್ಷೆಯಿರುವ ಬೆನ್ನಲ್ಲೇ, ವಿದ್ಯಾರ್ಥಿಗಳ ಹೋರಾಟಕ್ಕೆ ಪಕ್ಷವು ಬೆಂಬಲ ವ್ಯಕ್ತಪಡಿಸಿದೆ. ವಿದ್ಯಾರ್ಥಿ ಸಂಘವನ್ನು (ಜೆಎಂಐಎಸ್‌ಯು)...