ಲೋಹದ ಚೆಂಡನ್ನೋ, ಈಟಿಯನ್ನೋ ಅತ್ಯಂತ ದೂರ ಯಾರು ಎಸೆಯಬಲ್ಲರು ಎನ್ನುವ ಪೈಪೋಟಿ ಸರ್ವೇಸಾಮಾನ್ಯವಾಗಿದೆ. ದೂರವನ್ನು ಅಳೆಯುವುದು ಸುಲಭ. ಇಷ್ಟೇ ಸುಲಭವಾಗಿ ಎತ್ತರವನ್ನೂ ಅಳೆಯಬಹುದಾಗಿದ್ದರೆ? ಬಹುಶಃ ಅತ್ಯಂತ ಎತ್ತರಕ್ಕೆ ಯಾರು ಎಸೆಯಬಲ್ಲರು ಎನ್ನುವ ಪೈಪೋಟಿಯನ್ನೂ ಏರ್ಪಡಿಸಬಹುದು. ಇಲ್ಲಿ, ಯಾರು ಅತಿಹೆಚ್ಚು ’ಶುರುವಿನ ವೇಗ’ದಿಂದ (ಇನಿಶಿಯಲ್ ವೆಲಾಸಿಟಿ ಇಂದ) ಚೆಂಡನ್ನು ಮೇಲಕ್ಕೆ ಎಸೆಯುತ್ತಾರೋ ಅವರ ಚೆಂಡೇ ಅತಿಯೆತ್ತರಕ್ಕೆ ಏರುತ್ತದೆ. ಶುರುವಿನ ವೇಗ ಹೆಚ್ಚಿದಷ್ಟೂ ವಸ್ತುವೊಂದು ತಲುಪುವ ಎತ್ತರವೂ ಹೆಚ್ಚುತ್ತದೆ. ಈ ಎತ್ತರದ ಗರಿಷ್ಠ ಮಟ್ಟ ಯಾವುದು? ಎಷ್ಟೇ ಬಿರುಸಿನಿಂದ ಎಸೆದರೂ ವಸ್ತು ಒಂದಲ್ಲಾ ಒಂದು ಹಂತದಲ್ಲಿ ಮರಳಿ ಭೂಮಿಗೆ ಬೀಳಲೇಬೇಕಲ್ಲವೇ? ಹಾಗೇನಿಲ್ಲ ಎನ್ನುತ್ತದೆ ಭೌತವಿಜ್ಞಾನ. ಇನ್‌ಫ್ಯಾಕ್ಟ್, ಶುರುವಿನ ವೇಗ ಒಂದು ಮಿತಿಯನ್ನು ದಾಟಿದರೆ ಮೇಲಕ್ಕೆ ಎಸೆದ ಯಾವುದೇ ವಸ್ತು ಭೂಮಿಗೆ ಮರಳುವುದೇ ಇಲ್ಲ! ಆ ಮಿತಿಯನ್ನು ’ಪಾರಾಗಿಸುವ ವೇಗ’ (ಎಸ್ಕೇಪ್ ವೆಲಾಸಿಟಿ) ಎಂದು ಕರೆಯಲಾಗುವುದು. ಭೂಮಿಯ ಪಾರಾಗಿಸುವ ವೇಗ ಸರಿಸುಮಾರು ಸೆಕೆಂಡಿಗೆ 11.2 ಕಿ.ಮೀ ಆಗಿದೆ. ಅಂದರೆ, ಸೆಕೆಂಡಿಗೆ 11.2 ಕಿಮೀ ವೇಗದಲ್ಲಿ ವಸ್ತುವೊಂದನ್ನು ಮೇಲಕ್ಕೆ ಎಸೆದರೆ ಅದು ಮತ್ತೆ ಭೂಮಿಯತ್ತ ಮುಖಮಾಡುವುದಿಲ್ಲ. ಭೂಮಿಯ ಗುರುತ್ವಾಕರ್ಷಣ ತೆಕ್ಕೆಯಿಂದ ಸಂಪೂರ್ಣವಾಗಿ ಕಳಚಿಕೊಂಡು ಬಾನಿನ ಅನಂತದಲ್ಲಿ ಸಾಗುತ್ತದೆ. ಭೂಮಿಗಿಂತಲೂ ಹೆಚ್ಚು ರಾಶಿ (ಮಾಸ್) ಹೊಂದಿರುವ ಗುರುಗ್ರಹದ ಎಸ್ಕೇಪ್ ವೆಲಾಸಿಟಿ ಸೆಕೆಂಡಿಗೆ 59.5 ಕಿ.ಮೀ. ಸೂರ್ಯನದ್ದು? ಸೆಕೆಂಡಿಗೆ 615 ಕಿ.ಮೀ ಒಂದುವೇಳೆ, ಬೆಳಕಿನ ವೇಗ ಸದರಿ ಸೆಕೆಂಡಿಗೆ 615 ಕಿ.ಮೀಗಿಂತ ಕಡಿಮೆಯಿದ್ದಿದ್ದರೆ ಸೂರ್ಯನಿಂದ ಬೆಳಕೇ ಹೊರಹೊಮ್ಮುತ್ತಿರಲಿಲ್ಲ! ಒಂದಿಷ್ಟು ದೂರ ಬೆಳಕು ಮೇಲಕ್ಕೆ ಕ್ರಮಿಸಿ ಮರಳಿ ಸೂರ್ಯನ ಹೊರಮೈಯ ಮೇಲೆ ಬಿದ್ದು, ವಿಶ್ರಮಿಸುತ್ತಿತ್ತು. ಆಗ ಬಾನಲ್ಲಿ ಸೂರ್ಯನಿರುವ ಸ್ಥಳಾವಕಾಶದಿಂದ ಯಾವ ಬೆಳಕೂ ಹೊಮ್ಮದ ಕಾರಣ ಅದೊಂದು ಬೃಹತ್ ಕರಿಯುಂಡೆಯಂತೆ, ಕಪ್ಪುಕುಳಿಯಂತೆ ಕಾಣಿಸುತ್ತಿತ್ತು. ಈ ಕಪ್ಪುಕುಳಿಯ ಇಂಗ್ಲಿಷ್ ಹೆಸರೇ ’ಬ್ಲ್ಯಾಕ್ ಹೋಲ್.

ಬೆಳಕಿನ ವೇಗ ಸೆಕೆಂಡಿಗೆ ಸರಿಸುಮಾರು 3 ಲಕ್ಷ ಕಿ.ಮೀ ಆಗಿರುವುದರಿಂದ ಸೂರ್ಯನು ಕಪ್ಪುಕುಳಿಯಂತೆ ಕಾಣುತ್ತಿಲ್ಲ, ನಿಜ. ಆದರೆ, ಸೂರ್ಯನಿಗಿಂತಲೂ ಗಾತ್ರದಲ್ಲಿ, ರಾಶಿಯಲ್ಲಿ ಬೃಹತ್ ಆದ ಕಾಯಗಳ ಪಾರಾಗಿಸುವ ವೇಗವು ಬೆಳಕಿನ ವೇಗಕ್ಕಿಂತಲೂ ಹೆಚ್ಚಿದ್ದರೆ? ಆಗ ಬೆಳಕು ಆ ಕಾಯಗಳ ಗುರುತ್ವಾಕರ್ಷಣ ತಕ್ಕೆಯಿಂದ ಎಂದಿಗೂ ಬಿಡಿಸಿಕೊಳ್ಳಲಾಗದು. ಇಂತಹ ಬೃಹತ್ ’ಕಪ್ಪು ನಕ್ಷತ್ರ’ಗಳು ಇರುವ ಸಾಧ್ಯತೆಯನ್ನು ಮೊಟ್ಟಮೊದಲಿಗೆ, ಕ್ರಿ.ಶ 1784ರಷ್ಟು ಹಿಂದೆಯೇ ಊಹಿಸಿದವನು ಇಂಗ್ಲೆಂಡಿನ ಖಗೋಳತಜ್ಞ (ಬಾನರಿಗ) ಮತ್ತು ಚರ್ಚೊಂದರಲ್ಲಿ ರೆಕ್ಟರ್ ಆಗಿದ್ದ ಜಾನ್ ಮಿಶೆಲ್. ಆಗಷ್ಟೇ ಪ್ರಚಲಿತಗೊಂಡಿದ್ದ ನ್ಯೂಟನ್ನಿನ ಚಲನಶಾಸ್ತ್ರದ (ಮೆಕಾನಿಕ್ಸ್‌ನ) ಹೊಳಹುಗಳಿಂದ ಮಿಶೆಲ್ ಇಂತಹದ್ದೊಂದು ಊಹೆಯನ್ನು ಮಾಡಿದ್ದ. ಈತ ಇಂತಹ ಹತ್ತು ಹಲವು ವಿಶಿಷ್ಟ ಒಳನೋಟಗಳನ್ನು ನೀಡುತ್ತಿದ್ದ ವಿಜ್ಞಾನಿಯಾಗಿದ್ದರೂ ಅಂದಿನ ಜ್ಞಾನ ಮತ್ತು ವಿಶ್ವವಿದ್ಯಾನಿಲಯ ವಲಯವು ಇವನನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ನಿರ್ಲಕ್ಷ್ಯವು ಇವನ ’ಕಪ್ಪು ನಕ್ಷತ್ರ’ಗಳ ಊಹೆಯನ್ನೂ ತಾತ್ಸಾರದಿಂದ ಕಾಣುವಂತೆ ಮಾಡಿತು. ಇವುಗಳ ಬಗ್ಗೆ ಆಸಕ್ತಿ ಮತ್ತೆ ಚಿಗುರಿದ್ದು 1915ರಲ್ಲಿ. ಐನ್ಸ್‌ಟೀನನ ’ಸಾಮಾನ್ಯ ಸಾಪೇಕ್ಷ ಸಿದ್ಧಾಂತ’ (ಥಿಯರಿ ಆಫ್ ಜೆನರಲ್ ರಿಲೇಟಿವಿಟಿ) ಪ್ರಕಟಗೊಂಡ ಬಳಿಕವಷ್ಟೇ. ಈ ಸಿದ್ಧಾಂತದ ಜಾಡಿನಲ್ಲಿ ಹೊರಟ ಕಪ್ಪುಕುಳಿಗಳ ಅನ್ವೇಷಣೆಯು ಕಳೆದ ನೂರು ವರ್ಷಗಳಲ್ಲಿ ಗಳಿಸಿದ ಯಶಸ್ಸು ನಿಬ್ಬೆರಗಾಗಿಸುವಂಥದ್ದು. ಆಧುನಿಕ ವಿಜ್ಞಾನದ ಜ್ಞಾನಮೀಮಾಂಸೆ, ಸತ್ಯಾನ್ವೇಷಣೆ ಹಾಗೂ
ತಥ್ಯನಿರ್ಣಯದಲ್ಲಿ ಬಹಳ ಪ್ರಮುಖ ಸ್ಥಾನ ಪಡೆದಿರುವ ಮೂಲತತ್ತ್ವ ವಿಜ್ಞಾನ (ಫಂಡಮೆಂಟಲ್ ಸಾಯನ್ಸ್) ಮತ್ತು ಪ್ರಯೋಗ ವಿಜ್ಞಾನದ (ಎಕ್ಸ್‌ಪೆರಿಮೆಂಟಲ್ ಸಾಯನ್ಸ್) ನಡುವಿನ ಸಹಯೋಗ-ಸಮನ್ವಯ ಸಂಬಂಧವನ್ನು ಕಳೆದೆರಡು ದಶಕಗಳ ಕಪ್ಪುಕುಳಿ ಅಧ್ಯಯನ ಹಾಗೂ ಶೋಧಗಳು ಸಂಶಯಕ್ಕೆಡೆಯಿಲ್ಲದಂತೆ ದೃಢೀಕರಿಸಿವೆ, ಬಲಗೊಳಿಸಿವೆ. ನಾನಾ ದೇಶಗಳ ಸಂಶೋಧಕರು ಭಾಗವಾಗಿರುವ ಈವೆಂಟ್ ಹೊರೈಜ಼ನ್ ಟಿಲಿಸ್ಕೋಪ್ (ಇ.ಎಚ್.ಟಿ) ಕೊಲಾಬೊರೇಶನ್ ಇತ್ತೀಚೆಗೆ, ಮೆ 12 2022ರಂದು ಪ್ರಕಟಿಸಿದ, ನಮ್ಮ ಹಾಲ್ದೊರೆ ನಕ್ಷತ್ರಪುಂಜದ (ಮಿಲ್ಕಿ-ವೇ ಗ್ಲಾಲೆಕ್ಸಿ) ನಡುವಿನಲ್ಲಿರುವ ಬೃಹತ್ ಗಾತ್ರದ ಕಪ್ಪುಕುಳಿಯ (ಸೂಪರ್ ಮ್ಯಾಸೀವ್ ಬ್ಲಾಕ್‌ಹೋಲ್‌ನ) ಚಿತ್ರವು (ಚಿತ್ರ 01 ನೋಡಿ) ಆಧುನಿಕ ವಿಜ್ಞಾನದ ವಿಧಾನಕ್ರಮಗಳು (ಮೆಥಡಾಲಜಿ), ಮುಖ್ಯವಾಗಿ ಭೌತವಿಜ್ಞಾನದ ಥಿಯರಿಗಳು ಎಷ್ಟು ಸಶಕ್ತ ಮತ್ತು ರೋಬಸ್ಟ್ ಆಗಿವೆ ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದೆ.
ಕಪ್ಪುಕುಳಿಗಳ ಸ್ವರೂಪ ಮತ್ತು ಸತ್ವ:
ಕಪ್ಪುಕುಳಿಗಳ ತಾತ್ವಿಕತೆಯನ್ನು ಮೊಟ್ಟಮೊದಲಿಗೆ ಸದೃಢವಾಗಿ ಕಟ್ಟಿಕೊಟ್ಟಿದ್ದು ಸಾಮಾನ್ಯ ಸಾಪೇಕ್ಷ ಸಿದ್ಧಾಂತ. ಇದು ಎಷ್ಟು ಸಶಕ್ತವಾಗಿದೆಯೆಂದರೆ ಇದರ ಜನಕನಾದ ಐನ್ಸ್‌ಟೀನನಿಗೇ ತನ್ನ ಸಿದ್ಧಾಂತದ ಶಕ್ತಿಯೇನೆಂದು ಅರಿವಾಗಿರಲಿಲ್ಲ. ಅದರ ಅರಿವಿದ್ದ ಅವನ ಸಮಕಾಲೀನ ಹಾಗೂ ನಂತರದ ವಿಜ್ಞಾನಿಗಳು ಈ ಸಿದ್ಧಾಂತದ ಶಕ್ತಿ-ಸಾಧ್ಯತೆಗಳನ್ನು ಆಮೂಗ್ರವಾಗಿ ಸೂರೆಗೊಂಡರು, ಮಹತ್ವದ ಮುಂಗಾಣ್ಕೆಗಳನ್ನು ನೀಡಿದರು. ಇವರಲ್ಲಿ ಕಾರ್ಲ್ ಶ್ಲಾತ್‌ಶಿಡ್ (Schwarzchild), ಅರ್ಥರ್ ಎಡಿಂಗ್ಟನ್, ರಾಬರ್ಟ್ ಓಪ್ಪನ್‌ಹೈಮರ್ ಹಾಗೂ ಸುಬ್ರಹ್ಮಣ್ಯಂ ಚಂದ್ರಶೇಖರ್ ಪ್ರಥಮ ಪ್ರಮುಖರು. ಸಾಪೇಕ್ಷ ಸಿದ್ಧಾಂತದ ಸುವರ್ಣಯುಗವೆಂದು ಕರೆಯಲಾಗುವ 60 ಹಾಗೂ 70ರ ದಶಕಗಳಲ್ಲಿ ಫಿಂಕೆಲ್‌ಸ್ಟೀನ್, ಸ್ಟೀಫನ್ ಹಾಕಿಂಗ್ಸ್, ರಾಜರ್ ಪೆನ್‌ರೋಸ್, ಜಾನ್ ವೀಲರ್, ಕಿಪ್ ಥಾರ್ನ್ ಮುಂತಾದವರ ಅಧ್ಯಯನವು ಕಪ್ಪುಕುಳಿಗಳನ್ನು ಕುರಿತ ತಾತ್ವಿಕ ಅರಿವನ್ನು ವಿಸ್ಮಯದ ವಲಯದೊಳಕ್ಕೂ ವಿಸ್ತರಿಸಿತು. ಹಾಕಿಂಗ್ಸ್, ಪೆನ್‌ರೋಸ್‌ನಂಥವರು ಕ್ವಾಂಟಂ ಫಿಸಿಕ್ಸ್‌ನ ಹೊಳಹುಗಳನ್ನೂ ಕಪ್ಪುಕುಳಿಗಳ ಅಧ್ಯಯನದಲ್ಲಿ ಬಳಸಿಕೊಂಡರು. ರಿಲೇಟಿವಿಟಿ ಹಾಗೂ ಕ್ವಾಂಟಂ ನಿಯಮಗಳನ್ನು ಜೊತೆಜೊತೆಯಾಗಿ ಅನ್ವಯಿಸಿದ್ದು ವರ್ಮ್‌ಹೋಲ್ (ಕಪ್ಪುಕುಳಿಗಳ ನಡುವೆ, ಈ ಮೂಲಕ ವಿಶ್ವದ ಭಿನ್ನ ಸ್ಥಳಗಳ ನಡುವೆ ಸಂಪರ್ಕ ಸಾಧಿಸುವ ದೇಶ-ಕಾಲದ ಫ್ಯಾಬ್ರಿಕ್‌ನಿಂದ ನಿರ್ಮಿತವಾದ ಕೊಳವೆ), ವೈಟ್ ಹೋಲ್ (ಎಂದಿಗೂ ಶಕ್ತಿ ಮತ್ತು ಕಣಗಳನ್ನು ನಿರಂತರವಾಗಿ ಉಗುಳುತ್ತಿರುವ ಎಂಟಿಟಿ), ಹಲವು ವಿಶ್ವಗಳು; ಮುಂತಾದ ಪರಿಕಲ್ಪನೆಗಳಿಗೆ ಎಡೆಮಾಡಿಕೊಟ್ಟಿತು. ಇಡೀ ವಿಶ್ವದ ಚಲನ-ವಲನಗಳನ್ನು ಒಂದೇ ಥಿಯರಿಯಲ್ಲಿ ವಿವರಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಸ್ಟ್ರಿಂಗ್ ಥಿಯರಿ, ಎಂ-ಥಿಯರಿ, ಕ್ವಾಂಟಂ ಲೂಪ್ ಥಿಯರಿಗಳು, 80ರ ದಶಕದ ನಂತರ ಹೆಮ್ಮರವಾಗಿ ಬೆಳೆದಿದ್ದು, ಕಪ್ಪುಕುಳಿಗಳ ಚಿತ್ರ-ವಿಚಿತ್ರ ಆದರೆ ಗಣಿತದ ಸದೃಢ ನೆಲೆಗಟ್ಟನ್ನು ಹೊಂದಿರುವ ಪರಿಕಲ್ಪನೆಗಳನ್ನು ಹರಿಬಿಟ್ಟಿವೆ. ಇಷ್ಟೆಲ್ಲ ನಡೆದಿದ್ದು, ಕಪ್ಪುಕುಳಿಯ ಬಹಳ ಸ್ಪಷ್ಟವಾದ ಯಾವ ಚಿತ್ರವೂ ದೊರೆಯದಿದ್ದ ಕಾಲಾವಧಿಯಲ್ಲೇ! (ಆದರೆ, 1964ರಿಂದಲೇ ಅವುಗಳ ಅಸ್ತಿತ್ವವನ್ನು ಕುರಿತು ಬೇರೆ ಬಗೆಯ ಸಾಕ್ಷ್ಯಗಳು ದೊರಕಿದ್ದವು. ಕಪ್ಪುಕುಳಿಯ ಮೊದಲ ಚಿತ್ರ ದೊರಕಿದ್ದು 2019ರಲ್ಲಿ). ಗಣಿತೀಯವಾಗಿ ಸದೃಢವಾದ ಭೌತವಿಜ್ಞಾನದ ಥಿಯರಿಗಳ ಬಗ್ಗೆ ಮನುಷ್ಯನಿಗಿರುವ ನಂಬಿಕೆ ಅಂಥದ್ದು. ಮೊನ್ನೆಮೊನ್ನೆ ದೊರೆತ ಚಿತ್ರವು ಆ ನಂಬಿಕೆಗೆ ಮತ್ತಷ್ಟು ಬಲತುಂಬಿದೆ.
ನ್ಯೂಟನ್‌ನ ಚಲನಶಾಸ್ತ್ರದನ್ವಯ ಜಾನ್ ಮಿಶೆಲ್ ಕಪ್ಪುಕುಳಿಯೊಂದು ಇರಬಹುದಾದ ಸಾಧ್ಯತೆಯನ್ನು ತೆರೆದಿಟ್ಟ ಕಥೆಯನ್ನು ಈಗಾಗಲೇ ಗಮನಿಸಿದ್ದೇವೆ. ಹಾಲ್ದೊರೆ ನಕ್ಷತ್ರಪುಂಜದ ನಡುವಿನಲ್ಲಿದೆಯೆಂದು ಗುರುತಿಸಲಾಗಿರುವ ಸ್ಯಾಗಿಟೇರಿಯಸ್-ಎ* ಕಪ್ಪುಕುಳಿಯ ಚಿತ್ರವು ಐನ್ಸ್‌ಟೀನನ ಸಾಪೇಕ್ಷ ಸಿದ್ಧಾಂತದ ಮುಂಗಾಣ್ಕೆಗೆ ಅನುಗುಣವಾಗಿಯೇ ಇದೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಸಾಪೇಕ್ಷ ಸಿದ್ಧಾಂತದನ್ವಯ ಕಪ್ಪುಕುಳಿಯ ರಚನೆ ಹಾಗೂ ಸ್ವರೂಪವನ್ನು ಕುರಿತು ಮೊದಲು ತಿಳಿಯೋಣ. ಸಾಮಾನ್ಯ ಸಾಪೇಕ್ಷ ಸಿದ್ಧಾಂತದ ಪ್ರಕಾರ ಗುರುತ್ವಾಕರ್ಷಣ ಬಲವೆಂದರೆ ಬಾಗಿದ ದೇಶ-ಕಾಲದ (ಸ್ಪೇಸ್-ಟೈಂನ) ಅನುಭವ. ಅಂದರೆ, ಯಾವುದೇ ವಸ್ತುವಿನ ರಾಶಿಯು ಅದರ ಸುತ್ತಲಿನ ದೇಶ-ಕಾಲವನ್ನು ತನ್ನ ಪ್ರಮಾಣಕ್ಕೆ ಅನುಗುಣವಾಗಿ ಬಾಗಿಸುತ್ತದೆ. ಈ ನಿಟ್ಟಿನಲ್ಲಿ, ಚೆಂಡು ಭೂಮಿಯ ಮೇಲೆ ’ಬೀಳುತ್ತಿದೆ’ ಎಂದರೆ ಅದು ಭೂಮಿಯು ಬಾಗಿಸಿದ ದೇಶ-ಕಾಲದಲ್ಲಿ ತನ್ನ ’ಸಹಜ ನಡೆ’ಯನ್ನೇ (ಈ ಸಹಜ ನಡೆಯನ್ನು ’ಜಿಯೋಡೆಸಿಕ್’ ಎಂದು ಕರೆಯಲಾಗುವುದು) ಕ್ರಮಿಸುತ್ತಿದೆ ಎಂದರ್ಥ. ಹಾಗಾಗಿ, ಬೆಳಕು ಕೂಡ- ಅದನ್ನು ಅಲೆಯೆಂದು ಪರಿಗಣಿಸಿದಾಗಲೂ ಕೂಡ- ತನ್ನ ಸಹಜ ನಡೆಯನುಸಾರ ಗುರುತ್ವಾಕರ್ಷಣೆಯ ಪ್ರಭಾವಕ್ಕೆ ಒಳಗಾಗಬೇಕು. ಹೀಗೆ, ಬೃಹತ್ ಆಕಾಶಕಾಯಗಳ ಗುರುತ್ವಬಲದ ಕಾರಣಕ್ಕಾಗಿ ಬಾಗಿದ ಬೆಳಕಿನ ಪ್ರಭಾವದಿಂದ ಬಾನಲ್ಲಿ ಕಾಣುವ ಎಷ್ಟೋ ವಸ್ತುಗಳ ಬಿಂಬ ತಿರುಚಲ್ಪಟ್ಟಿರುತ್ತದೆ, ಕೆಲವೊಮ್ಮೆ ಎರಡಾಗಿಯೋ ಹಲವಾಗಿಯೋ ಕಾಣುತ್ತದೆ. ಈ ವಿದ್ಯಮಾನವನ್ನು ’ಗ್ರಾವಿಟೇಶನಲ್ ಲೆನ್ಸಿಂಗ್’ ಎಂದು ಕರೆಯಲಾಗುತ್ತದೆ. (ಸಾಂದರ್ಭಿಕ ಚಿತ್ರ 02 ನೋಡಿ).

ಈಗ ಕಪ್ಪುಕುಳಿಯ ವಿಚಾರಕ್ಕೆ ಬರೋಣ. ಯಾವುದೇ ಕಪ್ಪುಕುಳಿಯಲ್ಲಿ ಪ್ರಧಾನವಾಗಿರುವ ರಾಚನಿಕ ಅಂಶಗಳು ಮೂರು; ಸಿಂಗ್ಯುಲಾರಿಟಿ ಬಿಂದು, ಶ್ಲಾತ್‌ಶಿಡ್ ತ್ರಿಜ್ಯ (ರೇಡಿಯಸ್) ಹಾಗೂ ಈವೆಂಟ್ ಹೊರೈಜ಼ನ್. (ಸಾಂದರ್ಭಿಕ ಚಿತ್ರ 03 ನೋಡಿ) ಸಿಂಗ್ಯುಲಾರಿಟಿ ಬಿಂದುವೆಂದರೆ ಸಾಪೇಕ್ಷ ಸಿದ್ಧಾಂತವನ್ನೂ ಒಳಗೊಂಡಂತೆ ಎಲ್ಲ ಭೌತವೈಜ್ಞಾನಿಕ ಥಿಯರಿಗಳು ಮುರಿದು ಬೀಳುವ ಬಿಂದು. ಆ ಬಿಂದುವಿನಲ್ಲಿ ವಸ್ತುವಿನ ಗುರುತ್ವ ಬಲವು ಅನಂತ (ಇನ್‌ಫೈನೈಟ್) ಆಗಿರುತ್ತದೆ. ಅಂದರೆ, ಆ ಬಿಂದುವಿನಲ್ಲಿ ದೇಶ-ಕಾಲವು ಯಾವ ಮಟ್ಟಿಗೆ ಬಾಗಿರುತ್ತದೆಯೆಂದರೆ ಆ ಬಾಗುವಿಕೆಯ ಪ್ರಮಾಣವೂ, ಈ ಪ್ರಮಾಣವು ಬದಲಾಗುವ ಪ್ರಮಾಣವೂ, ಹೀಗೆ ಎಲ್ಲ ಬದಲಾವಣೆಗಳ ಪ್ರಮಾಣಗಳೂ ಇನ್‌ಫೈನೈಟ್ ಆಗಿರುತ್ತವೆ! ಸಿಂಗ್ಯುಲಾರಿಟಿಗಳೆಂದರೆ, ಭೌತವಿಜ್ಞಾನದ
ಥಿಯರಿಗಳನ್ನು ದುಃಸ್ವಪ್ನದಂತೆ ಕಾಡುವ ಗಣಿತೀಯ ಫಲಿತಗಳು. ಇವುಗಳು ಕಾಣಿಸಿಕೊಂಡವೆಂದರೆ ಥಿಯರಿಯಲ್ಲೇನೋ ಐಬಿದೆ ಎಂದರ್ಥ. ಹಾಗಾಗಿಯೇ, ಕಪ್ಪುಕುಳಿಯ ಈ ಸಿಂಗ್ಯುಲಾರಿಟಿ ಪರಿಕಲ್ಪನೆಯನ್ನು ಮೀರುವ ಪ್ರಯತ್ನಗಳೂ ನಡೆದಿವೆ. ಸಿಂಗ್ಯುಲಾರಿಟಿಗಳಿಲ್ಲದ ಕಪ್ಪುಕುಳಿಗಳ ಮಾದರಿಗಳನ್ನು ಸಂಶೋಧಿಸಲಾಗುತ್ತಿದೆ. ಇದಕ್ಕೆ ಕ್ವಾಂಟಂ ಚಲನಶಾಸ್ತ್ರದ ತಿಳಿವು ಬೇಕಾಗಿರುವುದರಿಂದ ಹಾಗೂ ಕ್ವಾಂಟಂ ಗ್ರಾವಿಟಿಯ ಸಮರ್ಥ ಮಾದರಿಯೊಂದನ್ನು ವಿಜ್ಞಾನಿಗಳು ಇಂದಿಗೂ ಕಂಡುಹಿಡಿಯದೇ ಇರುವುದರಿಂದ, ಈ ದಿಕ್ಕಿನ ಚರ್ಚೆಯನ್ನು ಇಲ್ಲಿಗೇ ಮೊಟಕುಗೊಳಿಸೋಣ. ಇನ್ನು, ಸಿಂಗ್ಯುಲಾರಿಟಿಯಲ್ಲಿ ಉಂಟಾಗುವ ಥಿಯರಿಗಳ, ಅವುಗಳ ಸಮೀಕರಣಗಳ ಧ್ವಂಸ ಒಮ್ಮೆಲೇ ಆಗುವಂಥದ್ದೇ? ನಾವು ಕಪ್ಪುಕುಳಿಯೆಡೆಗೆ ಪಯಣ ಬೆಳೆಸಿದರೆ, ಒಂದು ಹಂತ ತಲುಪುವವರೆಗೂ, ಎಲ್ಲ ಥಿಯರಿಗಳೂ ಸರಿಯಾಗಿಯೇ ಕೆಲಸ ಮಾಡುತ್ತಿರುತ್ತವೆ. ಆದರೆ, ಆ ಒಂದು ಹಂತವನ್ನು ದಾಟುತ್ತಿದ್ದಂತೆಯೇ ಥಿಯರಿಗಳು ಮೆಲ್ಲನೆ ಕೈಕೊಡಲು ಶುರುಮಾಡುತ್ತವೆ. ಆ ಹಂತವೇ ಈವೆಂಟ್ ಹೊರೈಜ಼ನ್. ಕಪ್ಪುಕುಳಿಯ ಸಿಂಗ್ಯುಲಾರಿಟಿ ಬಿಂದುವಿನ ಸುತ್ತಲಿರುವ ಗೋಲವಿದು. (ಈ ಗೋಲದ ಮೇಲಿರುವ ಎಸ್ಕೇಪ್ ವೆಲಾಸಿಟಿಯು ಬೆಳಕಿನ ವೇಗಕ್ಕೆ ಸಮವಾಗಿರುತ್ತದೆ). ಯಾವ ದಿಕ್ಕಿನಿಂದ ಬಂದರೂ ಈ ಗೋಲವನ್ನು ತಲುಪಲೇ ಬೇಕು, ಇದನ್ನು ದಾಟಿಯೇ ಸಿಂಗ್ಯುಲಾರಿಟಿಯತ್ತ ಸಾಗಬೇಕು. ಈ ಗೋಲದ ಹೊರಮೈಯಿಂದ ಸಿಂಗ್ಯುಲಾರಿಟಿಯತ್ತ ಸಾಗುವವರೆಗೂ ಥಿಯರಿಗಳು ಇಷ್ಟಿಷ್ಟೇ ಮುರಿದುಬೀಳುತ್ತ, ಕೊನೆಯ ಆ ನಿರ್ಣಾಯಕ ಬಿಂದುವಿನಲ್ಲಿ ಸಂಪೂರ್ಣವಾಗಿ ತನ್ನ ಅಸ್ತಿತ್ವ ಹಾಗೂ ಪ್ರಸ್ತುತತೆಯನ್ನೇ ಕಳೆದುಕೊಳ್ಳುತ್ತವೆ. ಗೋಲದಿಂದ ಸಿಂಗ್ಯುಲಾರಿಟಿವರೆಗಿನ ದೂರವೇ ಶ್ಲಾತ್‌ಶಿಡ್ ತ್ರಿಜ್ಯ. ಇದು ಆ ಗೋಲದ ತ್ರಿಜ್ಯವೇ ಆಗಿದೆ. ಒಮ್ಮೆ ಈವೆಂಟ್ ಹೊರೈಜ಼ನ್‌ನ ಒಳಹೊಕ್ಕ ಯಾವ ವಸ್ತುವೂ, ಶಕ್ತಿಯೂ ಇನ್ನೆಂದೂ ಹೊರಬರಲಾರದು. (ಏಕೆಂದರೆ, ಇಲ್ಲಿ ಎಸ್ಕೇಪ್ ವೆಲಾಸಿಟಿಯು ಬೆಳಕಿನ ವೇಗಕ್ಕಿಂತ ಹೆಚ್ಚು. ಬೆಳಕಿಗೇ ವಿಮೋಚನೆಯಿಲ್ಲ ಎಂದಮೇಲೆ ಆ ವೇಗವನ್ನು ಎಂದೂ ಸರಿದೂಗಿಸಲು ಸಾಧ್ಯವಾಗದ ಮಿಕ್ಕ ವಸ್ತುಗಳಿಗೆ ಮುಕ್ತಿಯುಂಟೇ?). ಅದು ಸಿಂಗ್ಯುಲಾರಿಟಿಯಲ್ಲಿ ಸಂಪೂರ್ಣವಾಗಿ ಅಂತರ್ಧಾನವಾಗುತ್ತದೆ. ಈ ವಿಚಾರವು, ಜಗತ್ತಿನಲ್ಲಿ ಶಕ್ತಿಯು ಹೊಸದಾಗಿ ಹುಟ್ಟುವುದೂ ಇಲ್ಲ, ನಾಶವಾಗುವುದೂ ಇಲ್ಲ ಎಂಬ, ’ಸಾರ್ವಕಾಲಿಕ ಸತ್ಯ’ವೆಂದು ತಿಳಿಯಲಾಗಿರುವ ನಿಯಮಕ್ಕೆ ವಿರುದ್ಧವಾದದ್ದು! ವಸ್ತು ಇಲ್ಲವೇ ಶಕ್ತಿಯ ಸ್ವರೂಪವೊಂದು (ಉದಾಹರಣೆಗೆ ಬೆಳಕು) ಈವೆಂಟ್ ಹೊರೈಜ಼ನ್ ಒಳಗೆ ಹೋಗಿರುವುದನ್ನಷ್ಟೇ ಹೊರಗಿನ ಜಗತ್ತು ಕಾಣಬಲ್ಲದು. ಮುಂದೆ ಅದು ಏನಾಯಿತು? ಯಾವ ರೂಪಕ್ಕೆ ಮಾರ್ಪಟ್ಟಿತ್ತು? ಇದರ ಅರಿವು ಹೊರಗಿನ ಜಗತ್ತಿಗಿರುವುದಿಲ್ಲ. ಹೊರಗಿನ ಜಗತ್ತಿನ ಪ್ರಕಾರ ಆ ಶಕ್ತಿಯ ’ನಾಶ’ ಆಗಿದೆ!

ಇವಿಷ್ಟು ಕಪ್ಪುಕುಳಿಯ ಸಾಪೇಕ್ಷ ಸಿದ್ಧಾಂತ ಪ್ರಣೀತ ಸ್ಥೂಲವಾದ ರಾಚನಿಕ ವಿವರಣೆ. (ಇಲ್ಲಿ, ಕಪ್ಪುಕುಳಿಯ ಗುಣ-ವಿಶೇಷಣಗಳನ್ನು ನಿಗದಿಸುವ ರಾಶಿ (ಮಾಸ್), ವಿದ್ಯುದಾವೇಶ (ಎಲೆಕ್ಟ್ರಿಕ್ ಚಾರ್ಜ್) ಮತ್ತು ತಿರುಗಿನ ಆವೇಗ (ಆಂಗ್ಯುಲಾರ್ ಮೊಮೆಂಟಮ್) ಇವುಗಳನ್ನು ಚರ್ಚಿಸಲಾಗಿಲ್ಲ. ಸದರಿ ಕಪ್ಪುಕುಳಿಯ ಚಿತ್ರವನ್ನು
ಅರ್ಥಮಾಡಿಕೊಳ್ಳಲು ಆ ವಿವರಣೆ ಬೇಕಾಗಿಲ್ಲ). ಈ ವಿವರಣೆಯನ್ನು ಗಮನಿಸಿದಾಗ, ಕಪ್ಪುಕುಳಿಯನ್ನು ಅರ್ಥಮಾಡಿಕೊಳ್ಳುವ ತಾತ್ವಿಕ ಚೌಕಟ್ಟಿನಲ್ಲೇ ಸಾಕಷ್ಟು ಸಮಸ್ಯೆಗಳಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಸಮಸ್ಯೆಗಳ ಪರಿಹಾರ ಕ್ವಾಂಟಂ ಭೌತವಿಜ್ಞಾನದ ಅಳವಡಿಕೆಯಲ್ಲಿದೆ ಎನ್ನುವುದು ಹಲವು ವಿಜ್ಞಾನಿಗಳ ಅಂಬೋಣವಾಗಿದೆ. ಬಹುಶಃ ಸಮರ್ಥವಾದ ಕ್ವಾಂಟಂ ಗ್ರಾವಿಟಿ ಥಿಯರಿಯೊಂದು ಆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬಹುದು. ಆದರೆ, ಅಂತಹದ್ದೊಂದು ಥಿಯರಿಯು ಮುಂಗಾಣುವ ತಥ್ಯ-ನಿರ್ಣಯಗಳನ್ನು ಪರೀಕ್ಷಿಸುವಷ್ಟು ಕೌಶಲ್ಯವನ್ನು ನಮ್ಮ ಇಂದಿನ ಪ್ರಯೋಗ ವಿಜ್ಞಾನವು ಸಾಧಿಸಿದೆಯೇ ಎನ್ನುವ ಪ್ರಶ್ನೆಯೂ ಮುಖ್ಯವಾಗುತ್ತದೆ. ಕಪ್ಪುಕುಳಿಗಳ ಇರುವಿಕೆಯನ್ನು ಖಚಿತಪಡಿಸಿದ ಪ್ರಯೋಗಗಳಾಗಲಿ, ಅವುಗಳ ಗುರುತ್ವದ ಅಲೆಗಳನ್ನು ಅಳೆದ ಪ್ರಯೋಗಗಳಾಗಲಿ ಸಾಬೀತುಪಡಿಸಿರುವುದು ಸಾಪೇಕ್ಷ ಸಿದ್ಧಾಂತದ ಮುಂಗಾಣ್ಕೆಗಳನ್ನೇ ಹೊರತು ಯಾವುದೇ ಕ್ವಾಂಟಂ ಗ್ರಾವಿಟಿ ಥಿಯರಿಯ ಊಹೆಗಳನ್ನಲ್ಲ. ಈ ಅರಿವನ್ನು ಮನಸ್ಸಿನ ಮೂಲೆಯೊಂದರಲ್ಲಿ ಇರಿಸಿಯೇ, ಕಪ್ಪುಕುಳಿಗಳ ಪ್ರಾಯೋಗಿಕ ಸಂಶೋಧನೆಯ ಚರಿತ್ರೆಯನ್ನು ಅವಲೋಕಿಸಬೇಕಾಗುತ್ತದೆ. ಅಲ್ಲಿಗೆ ಹೊರಡುವ ಮುನ್ನ, ಕಪ್ಪುಕುಳಿಗಳು ಹೇಗೆ ಸೃಷ್ಟಿಯಾಗುತ್ತವೆ, ಎಂತಹ ಕಪ್ಪುಕುಳಿಗಳನ್ನು ಈ ಹೊತ್ತಿನ ಪ್ರಯೋಗಗಳು ಪರಿವೀಕ್ಷಿಸಿ, ಅಧ್ಯಯನ ನಡೆಸಬಹುದು ಎನ್ನುವ ಪ್ರಶ್ನೆಗಳಿಗೆ ಸಂಕ್ಷಿಪ್ತ ಉತ್ತರವನ್ನು ಕಂಡುಕೊಳ್ಳೋಣ.
ಸಾಪೇಕ್ಷ ಸಿದ್ಧಾಂತದ ಪ್ರಕಾರ ಜಗತ್ತಿನಲ್ಲಿ ಎರಡು ಬಗೆಯ ಕಪ್ಪುಕುಳಿಗಳು ಅಸ್ತಿತ್ವದಲ್ಲಿವೆ. ಒಂದು, ಬೃಹತ್ ನಕ್ಷತ್ರವೊಂದು ತನ್ನ ವಿಕಾಸದ ಕೊನೆಯ ಹಂತದಲ್ಲಿ ತಲುಪುವ ಶಾಶ್ವತಾವಸ್ಥೆಯಾದ ಕಪ್ಪುಕುಳಿ. (ಇದನ್ನು ಸ್ಟೆಲ್ಲಾರ್ ಬ್ಲ್ಯಾಕ್‌ಹೋಲ್ ಎಂದು ಕರೆಯಲಾಗುವುದು). ನಮ್ಮ ಸೂರ್ಯನಿಗಿಂತಲೂ 1.44 ಪಟ್ಟು ಹೆಚ್ಚು ರಾಶಿ ಇರುವ ನಕ್ಷತ್ರಗಳಿಗೆ ಇದು ಸಾಧ್ಯವೆಂದು ಸುಬ್ರಹ್ಮಣ್ಯಂ ಚಂದ್ರಶೇಖರ್ ಹೇಳಿದ್ದರು. (ಈ ಮಿತಿಯನ್ನು ಚಂದ್ರಶೇಖರ್‍ಸ್ ಲಿಮಿಟ್ ಎಂದು ಕರೆಯಲಾಗುವುದು). ಅಂದರೆ, 1.44 ಪಟ್ಟು ಹೆಚ್ಚು ರಾಶಿ ಹೊಂದಿದ ಮಾತ್ರಕ್ಕೆ ಅವು ಕಪ್ಪುಕುಳಿಯಾಗಿಯೇ ಕೊನೆಗೊಳ್ಳಬೇಕೆಂದಿಲ್ಲ. ಅವು ನ್ಯೂಟ್ರಾನ್ ಸ್ಟಾರ್‌ಗಳಾಗಿಯೂ ಉಳಿದುಬಿಡಬಹುದು. ಆದರೆ, 1.44 ಪಟ್ಟಿಗಿಂತ ಕಡಿಮೆ ರಾಶಿ ಹೊಂದಿರುವ ನಕ್ಷತ್ರಗಳು ಜಪ್ಪಯ್ಯ ಎಂದರೂ ಕಪ್ಪುಕುಳಿಗಳಾಗಲು ಸಾಧ್ಯವಿಲ್ಲ!
ಅವುಗಳು ವೈಟ್ ಡ್ವಾರ್ಫ್‌ಗಳಾಗಿಯೇ ಜಗತ್ತಿನ ಕೊನೆಯವರೆಗೂ ಉಳಿದುಬಿಡಬೇಕು. ನ್ಯೂಟ್ರಾನ್ ನಕ್ಷತ್ರಗಳು ತನ್ನ ಗುರುತ್ವಬಲಕ್ಕೆ ತಾನೇ ಕುಸಿದು, ’ಸೂಪರ್ ನೋವಾ’ ಎಂದು ಗುರುತಿಸಲಾಗುವ ಮಹಾ ಸ್ಫೋಟಕ್ಕೊಳಗಾದರೆ ಅವು ಕಪ್ಪುಕುಳಿಗಳಾಗುತ್ತವೆ. ಸದರಿ ತನ್ನ ಚಿತ್ರದ ಮೂಲಕ ಸುದ್ದಿಮಾಡುತ್ತಿರುವುದು ಇನ್ನೊಂದು ಬಗೆಯ ಕಪ್ಪುಕುಳಿಗಳು. ಇವು ನಕ್ಷತ್ರಪುಂಜಗಳ ನಡುವಿನಲ್ಲಿ ಇರುವಂಥವು. ಈ ’ಸೂಪರ್ ಮಾಸೀವ್’ ಕಪ್ಪುಕುಳಿಗಳ ಉಗಮ ಇಂದಿಗೂ ಬಗೆಹರಿಯದ ಒಗಟಾಗಿದೆ. ಇವು ಏನಿಲ್ಲವೆಂದೂ ಸೂರ್ಯನಿಗಿಂತ ಕನಿಷ್ಠ ಒಂದು ಲಕ್ಷ ಪಟ್ಟು ಹೆಚ್ಚು ರಾಶಿಯನ್ನು ಹೊಂದಿರುವ ಬೃಹತ್ ಕಾಯಗಳು! ಈ ಕಪ್ಪುಕುಳಿಯ ಸನಿಹದಲ್ಲಿರುವ ನಕ್ಷತ್ರಗಳು ಹಾಗೂ ಅನಿಲ ಮೋಡಗಳು ಎಷ್ಟು ಬಿರುಸಿನಿಂದ ಸುತ್ತುತ್ತಿರುತ್ತವೆಯೆಂದರೆ, ಕುಳಿಯ ಈವೆಂಟ್ ಹೊರೈಜ಼ನ್‌ನ ಸುತ್ತ ಪ್ರಕಾಶಮಾನವಾದ ಡಿಸ್ಕೊಂದು (ಅಕ್ರೆಶನ್ ಡಿಸ್ಕ್) ರಚನೆಗೊಂಡಿರುತ್ತದೆಯಲ್ಲದೆ, ಕುಳಿಯ ಎರಡು ತುದಿಗಳಿಂದ ರೇಡಿಯೋ ತರಂಗವೂ, ಹೆಚ್ಚುಕಡಿಮೆ ಬೆಳಕಿನ ವೇಗವನ್ನೇ ಪಡೆದಿರುವ ಕಣಗಳೂ ಚಿಮ್ಮುತ್ತಲಿರುತ್ತವೆ. (ಸಾಂದರ್ಭಿಕ ಚಿತ್ರ 04 ನೋಡಿ) ಹಾಗಾಗಿ, ನಕ್ಷತ್ರಪುಂಜದ ನಡುವಲ್ಲಿರುವ ಕಪ್ಪುಕುಳಿಯೊಂದನ್ನು ಪತ್ತೆಹಚ್ಚುವುದು ಹಾಗೂ ಅದರ ಚಿತ್ರ ತೆಗೆಯುವುದು, ಮೊದಲ ಮಾದರಿಯ ಕಪ್ಪುಕುಳಿಗಿಂತಲೂ ಕಡಿಮೆ ಕಷ್ಟದಾಯಕ ಕೆಲಸವಾಗಿರುತ್ತದೆ. ಈ ಕಾರಣಕ್ಕಾಗಿಯೇ, ವಿಜ್ಞಾನಿಗಳಿಗೆ ಲಭ್ಯವಾಗಿರುವ ಕಪ್ಪುಕುಳಿಯ ’ಚಿತ್ರ’ಗಳೆಲ್ಲವೂ ಈ ಸೂಪರ್ ಮಾಸೀವ್ ಕಪ್ಪುಕುಳಿಗಳದ್ದೇ ಆಗಿವೆ. ಮೊನ್ನೆಮೊನ್ನೆ ದೊರೆತ ಚಿತ್ರವು ಈ ಸಾಲಿಗೊಂದು ಹೊಸ ಸೇರ್ಪಡೆಯಷ್ಟೆ.

ನಕ್ಷತ್ರಪುಂಜಗಳ ನಡುವಿರುವ ಕಪ್ಪುಕುಳಿಗಳ ಉಗಮವನ್ನು ಅರಿಯಲು ಕ್ವಾಂಟಂ ವಿಜ್ಞಾನದ ನೆರವು ಬೇಕಾಗಬಹುದು. ಅದೇ ಕ್ವಾಂಟಂ ವಿಜ್ಞಾನವು ಇನ್ನೊಂದು ಬಗೆಯ ಕಪ್ಪುಕುಳಿಗಳ ಅಸ್ತಿತ್ವವನ್ನೂ ಮುಂಗಾಣುತ್ತದೆ. ಅವುಗಳಿಗೆ ’ಪ್ರೈಮಾರ್ಡಿಯಲ್’ ಕಪ್ಪುಕುಳಿಗಳೆಂಬ ಹೆಸರು. ಅವು, ಜಗತ್ತಿನ ಹುಟ್ಟು ಮತ್ತು ವಿಕಾಸದ ಮೊದಲ ಕೆಲವು ಕ್ಷಣಗಳಲ್ಲೇ ಸೃಷ್ಟಿಯಾಗಿರುವಂಥವು. ಮುಖ್ಯವಾಗಿ, ’ಕ್ವಾಂಟಂ ಫ್ಲಕ್ಚುವೇಶನ್’ ಎಂಬ ವಿದ್ಯಮಾನದಿಂದ ಉಂಟಾಗಿರುವಂಥವು. ಈ ಬಗೆಯ ಕಪ್ಪುಕುಳಿಗಳನ್ನು ಪ್ರಸ್ತುತ ಯಾವ ಪ್ರಯೋಗಗಳಿಂದಲೂ, ವೀಕ್ಷಣಾ ಯಂತ್ರಗಳಿಂದಲೂ ಕಂಡುಹಿಡಿಯಲು ಸಾಧ್ಯವಿಲ್ಲ. ಹಾಗಾಗಿ, ಖಗೋಳವಿಜ್ಞಾನಿಗಳ ಪ್ರಯತ್ನವು ಸಾಪೇಕ್ಷ ಸಿದ್ಧಾಂತ ವಿವರಿಸಬಹುದಾದ ಆ ಎರಡು ಮಾದರಿಯ ಕಪ್ಪುಕುಳಿಗಳನ್ನು ಪತ್ತೆಹಚ್ಚುವುದಕ್ಕಷ್ಟೇ ಸದ್ಯಕ್ಕೆ ಸೀಮಿತವಾಗಿದೆ.
ಕಪ್ಪಿನ ವರ್ಣವನು ಸೆರೆಹಿಡಿದ ಬಗೆ:
ಕಪ್ಪುಕುಳಿಯೊಂದನ್ನು ’ಕಾಣುವುದು’ ಎಂದರೇನು? ಅದರ ಕುರುಹನ್ನು ’ಕಾಣುವುದು’ ಎಂದರೇನು? ಇವೆರಡರ ನಡುವೆ ಏನು ವ್ಯತ್ಯಾಸ? ಈ ಪ್ರಶ್ನೆಗಳಿಗೆ ಉತ್ತರವು, ಕಪ್ಪುಕುಳಿಗಳ ಪ್ರಾಯೋಗಿಕ ಅಧ್ಯಯನದ ಚರಿತ್ರಕಥನಕ್ಕೆ ಸೂಕ್ತ ಮುನ್ನುಡಿಯಾಗಿದೆ.
ಹೆಸರೇ ಸೂಚಿಸುವಂತೆ ಕಪ್ಪುಕುಳಿಯೊಂದು ತನ್ನ ಒಳಗಿನಿಂದ ಯಾವ ಬೆಳಕನ್ನೂ ಹೊರಸೂಸುವುದಿಲ್ಲ. ಹಾಗಾಗಿ, ’ಕಾಣು’ ಪದದ ವಾಡಿಕೆಯ ಅರ್ಥದಂತೆ ನಾವು ಕಪ್ಪುಕುಳಿಯನ್ನು ಕಾಣಲು ಸಾಧ್ಯವಿಲ್ಲ. ಆದರೆ, ಈಗಾಗಲೇ ನಾವು ಗಮನಿಸಿದಂತೆ (ಹಾಗೂ ಚಿತ್ರ 04ರಲ್ಲಿ ತೋರುವಂತೆ), ಅಕ್ರಿಶನ್ ಡಿಸ್ಕ್‌ನ ಚಿತ್ರವನ್ನು ಶಕ್ತಿಶಾಲಿ ದೂರದರ್ಶಕದ ಮೂಲಕ ಸೆರೆಹಿಡಿದರೆ ಆ ಡಿಸ್ಕ್‌ನ ಕೇಂದ್ರದಲ್ಲಿ ಕಪ್ಪುಕುಳಿಯಿದೆಯೆಂದು ಊಹಿಸಲು ಸಾಧ್ಯ. ಕೇಂದ್ರದತ್ತ ಸಾಗಿದಂತೆ ಅದರಿಂದ ಹೊಮ್ಮುವ ಬೆಳಕು ಹೆಚ್ಚು ಪ್ರಕಾಶಮಾನವಾಗಿರುತ್ತದೆ. ಇನ್ನೂ ಸಾಗಿದರೆ ದಟ್ಟವಾದ ಕಪ್ಪು ನಿರ್ವಾತವೊಂದನ್ನು ಎದುರಾಗುತ್ತೇವೆ. ಆ ಕಪ್ಪು ಜಾಗವೇ ಕಪ್ಪುಕುಳಿಯೆಂದು ತೀರ್ಮಾನಿಸಬಹುದು. (ಸಾಂದರ್ಭಿಕ ಚಿತ್ರ 05 ನೋಡಿ). ಇನ್ನು, ಇಂತಹ ಚಿತ್ರಗಳಲ್ಲೂ ಕೆಲವು ಸೋಜಿಗಗಳಿವೆ. ಮೊದಲನೆಯದಾಗಿ, ಈ ಚಿತ್ರಗಳನ್ನು ಸೆರೆಹಿಡಿಯಲು ಬಳಸಲಾಗುವ ಹಬಲ್ (ವಿಶ್ವ ಹಿಗ್ಗುತ್ತಿದೆಯೆಂದು ಪ್ರಾಯೋಗಿಕವಾಗಿ ದೃಢಪಡಿಸಿದ ಎಡ್ವಿನ್ ಹಬಲ್‌ರ ಸ್ಮರಣಾರ್ಥವಾಗಿಟ್ಟ ಹೆಸರು), ಚಂದ್ರ (ಖ್ಯಾತ ಖಗೋಳ ಭೌತವಿಜ್ಞಾನಿ ಸುಬ್ರಹ್ಮಣ್ಯಂ ಚಂದ್ರಶೇಖರ್‌ರ ಸ್ಮರಣಾರ್ಥವಾಗಿಟ್ಟ ಹೆಸರು) ಮುಂತಾದ ದೂರದರ್ಶಕಗಳಿರುವುದು ಭೂ-ನೆಲದ ಮೇಲಲ್ಲ. ಬದಲಿಗೆ, ಭೂಮಿಯ ಸುತ್ತ ಅಂತರಕ್ಷದಲ್ಲಿ ಹಾರುತ್ತಿರುವ ದೂರದರ್ಶಕಗಳವು. ಇನ್ನು, ಮನುಷ್ಯರ ಕಣ್ಣು ಕಾಣಬಲ್ಲ ಬೆಳಕನ್ನೇ (ವಿಸಿಬಲ್ ರೇ) ಅವು ಸೆರೆಹಿಡಿಯಬೇಕೆಂದಿಲ್ಲ. ನಮ್ಮ ಕಣ್ಣಿಗೆ ಕಾಣದ ಇನ್‌ಫ್ರಾರೆಡ್, ರೇಡಿಯೋ, ಮೈಕ್ರೋವೇವ್, ಎಕ್ಸ್‌ರೇ ಮುಂತಾದ ಬೆಳಕನ್ನೂ ಅವು ಸೆರೆಹಿಡಿಯಬಲ್ಲವು ಹಾಗೂ ನಮ್ಮ ಕಣ್ಣಿಗೆ ಕಾಣುವ ಬೆಳಕಿಗೆ ಯಥಾರ್ಥ ವರ್ಣಾಂತರಿಸಿ ಫೋಟೋಗಳನ್ನು ನೀಡಬಲ್ಲವು. ಕಪ್ಪುಕುಳಿಯೂ ಸೇರಿದಂತೆ ಬಹುತೇಕ ಆಕಾಶಕಾಯಗಳ ’ಫೋಟೋ’ಗಳು ಈ ಬಗೆಯ ವರ್ಣಾಂತರ ಪ್ರಕ್ರಿಯೆಗೆ ಒಳಗಾಗಿವೆ.

ಇನ್ನು, ಅಕ್ರಿಶನ್ ಡಿಸ್ಕ್‌ನ ಚಿತ್ರವಿಲ್ಲದೆಯೂ ಕಪ್ಪುಕುಳಿಯ ಇರವನ್ನು ಊಹಿಸಬಹುದು. ಕಪ್ಪುಕುಳಿಯ ಸನಿಹದಲ್ಲಿ ಸಾಗುವ ಬೆಳಕು ಸಾಮಾನ್ಯವಾಗಿ ತನ್ನ ಪಥ-ಸಂಚಲನದ ದಿಕ್ಕನ್ನು ತೀವ್ರವಾಗಿ ಬದಲಿಸಿಕೊಳ್ಳುತ್ತದೆ. ಇದು ಗ್ರಾವಿಟೇಶನಲ್ ಲೆನ್ಸಿಂಗ್‌ಗೆ ಕಾರಣ. ಅಲ್ಲದೆ, ಬೃಹತ್ ಗುರುತ್ವಾಕರ್ಷಣ ವಲಯದಲ್ಲಿ ಸಾಗುವ ಬೆಳಕು ರೆಡ್-ಶಿಫ್ಟ್ ಎನ್ನುವ ಪ್ರಕ್ರಿಯೆಗೂ ಒಳಗಾಗುತ್ತದೆ. ದರ್ಪಣ ಪರಿಣಾಮ ಹಾಗೂ ಕೆಂಪೆಡೆಗೆ ಸಾಗುವ ಬೆಳಕಿನ ಅಲೆಯ ಅಧ್ಯಯನದಿಂದ ಮಹತ್ ಗುರುತ್ವಾಕರ್ಷಣ ಬಲವುಳ್ಳ ಕಾಯವೊಂದರ ಇರವನ್ನು ಊಹಿಸಲು ಸಾಧ್ಯವಾಗುತ್ತದೆ. ಜೊತೆಗೆ, ಆಕಾಶಕಾಯವೊಂದರ ಪಥವನ್ನು ಈಗಾಗಲೇ ಕಂಡುಬರುವ ಆಕಾಶಕಾಯಗಳ ಗುರುತ್ವಬಲದಿಂದಷ್ಟೇ ವಿವರಿಸಲು ಸಾಧ್ಯವಿಲ್ಲದಿದ್ದಾಗ, ಕಣ್ಣಿಗೆ ಕಾಣದ ಆದರೆ ಸಾಕಷ್ಟು ಗುರುತ್ವಬಲವನ್ನು ಹೊಂದಿರುವ ಎಂಟಿಟಿಯೊಂದರ ಅಸ್ತಿತ್ವವನ್ನು ಊಹಿಸಬಹುದಾಗಿದೆ. ಇನ್ನು, ಬಾನ ಬಯಲಿನಲ್ಲಿ ಅನಿರೀಕ್ಷಿತವಾಗಿಯೂ, ಯಾದೃಚ್ಛಿಕವಾಗಿಯೂ ಗೋಚರಿಸುವ ಎಕ್ಸ್ ರೇ, ಗಾಮಾ ರೇ ಸ್ಫೋಟ ಮುಂತಾದ ಶಕ್ತಿಶಾಲಿ ವಿದ್ಯಮಾನಗಳು ಕೂಡ ಕಪ್ಪುಕುಳಿ ನಿರ್ಮಾಣದ ಪೂರ್ವಹಂತವನ್ನೋ, ಕಪ್ಪುಕುಳಿಯ ಸುತ್ತಲಿನ ಚಟುವಟಿಕೆಗಳ ತೀವ್ರತೆಯನ್ನೋ ಸೂಚಿಸಬಹುದು. ಈ ಎಲ್ಲ ವಿದ್ಯಮಾನಗಳಿಗಿಂತಲೂ ಗುರುತ್ವದ ಅಲೆಗಳ ಪತ್ತೆ ಹಾಗೂ ಅಧ್ಯಯನವು ಕಪ್ಪುಕುಳಿಯ ಅಸ್ತಿತ್ವವನ್ನು ಪರೋಕ್ಷವಾಗಿ ಗುರುತಿಸಲು ಬಹಳ ಮುಖ್ಯ ಸಾಕ್ಷ್ಯಗಳನ್ನು ಒದಗಿಸಬಲ್ಲದು. 2015ರ ಸೆಪ್ಟೆಂಬರ್‌ನಲ್ಲಿ ಮೊಟ್ಟಮೊದಲ ಬಾರಿಗೆ ಗುರುತ್ವದ ಅಲೆಗಳನ್ನು ಪತ್ತೆ ಮಾಡಲಾಯಿತು. ಅದು, ಕಪ್ಪುಕುಳಿಗಳ ಅಸ್ತಿತ್ವಕ್ಕೆ, ಅವುಗಳ ಚಿತ್ರಗಳನ್ನೂ ಒಳಗೊಂಡಂತೆ ಮಿಕ್ಕೆಲ್ಲ ಸಾಕ್ಷಿಗಳ ತುಲನೆಯಲ್ಲಿ ಅತಿ ಸಮರ್ಥ ಪುರಾವೆ ಎಂದೆನಿಸಿಕೊಂಡಿದೆ.
ಕಪ್ಪುಕುಳಿಯ ಮೊದಲ ಕುರುಹು ಸಿಕ್ಕಿದ್ದು 1964ರಲ್ಲಿ. ಗೈಗರ್ ಕೌಂಟರ್‌ಗಳೆಂಬ ಸಾಧನಗಳು (ಇವು ಆಲ್‌ಫಾ, ಬೆಟಾ ಕಣಗಳನ್ನೂ, ಗಾಮಾ ಕ್ಷ-ಕಿರಣವನ್ನೂ ಪತ್ತೆಹಚ್ಚಲು ಬಳಸಲಾಗುವ ಸಾಧನಗಳು) ನಮ್ಮ ಹಾಲ್ದೊರೆ ನಕ್ಷತ್ರಪುಂಜದ ಒಂದು ನಿರ್ದಿಷ್ಟ ಸ್ಥಳದಿಂದ ವಿಶಿಷ್ಟ ಸಿಗ್ನಲ್‌ಗಳನ್ನು ಪತ್ತೆ ಮಾಡಿತು. ಅದರ ಮೂಲ, ತನ್ನ ಅವಸಾನದ ಮೊದಲ ಹಂತದಲ್ಲಿರುವ ಬೃಹತ್ ನಕ್ಷತ್ರವೆಂಬುದು ಸಾಬೀತಾಯಿತು. ಈ ಮೂಲಕ್ಕೆ ಸಿಗ್ನಸ್ ಎಕ್ಸ್-1 ಎಂದು ಹೆಸರಿಡಲಾಯಿತು. ಆದರಿದು, ಇನ್ನೊಂದು ಬೃಹತ್ ಕಾಯವೊಂದನ್ನು ಸುತ್ತುವುದೂ, ಎಕ್ಸ್-ರೇ ಕಿರಣಗಳು ಆ ಸ್ಥಳದಿಂದ ಹೊಮ್ಮುತ್ತಿರುವುದೂ ಕಂಡುಬಂದಿತು. ಆಗಲೇ ಈ ಕಾಯವು ಕಪ್ಪುಕುಳಿಯಿರಬಹುದು ಎನ್ನುವ ಸಂಶಯ ಹಲವು ವಿಜ್ಞಾನಿಗಳ ಮನದಲ್ಲಿ ಮನೆಮಾಡಿತ್ತು. ಸ್ಟೀಫನ್ ಹಾಕಿಂಗ್ಸ್ ಹಾಗೂ ಕಿಪ್ ಥೋರ್ನ್ ಈ ವಿಚಾರವಾಗಿ ಬೆಟ್ಸ್ ಕಟ್ಟಿದರು. ಇದು ಕೊನೆಗೂ ಇತ್ಯರ್ಥವಾಗಿದ್ದು 1994ರಲ್ಲಿ. ಅಷ್ಟರಲ್ಲಾಗಲೇ ಅದು ಕಪ್ಪುಕುಳಿಯೇ ಎಂದು ಪರೋಕ್ಷ ಸಾಕ್ಷ್ಯಾಧಾರಗಳ ಮೇಲೆ ಸಾಬೀತಾಗಿದ್ದರಿಂದ, ಅದು ಕಪ್ಪುಕುಳಿಯಲ್ಲವೆಂದು ಬೇಕೆಂದಲೇ (ಅಂದರೆ, ಅದು ಕಪ್ಪುಕುಳಿ ಆಗಿರಲಿ ಎನ್ನುವ ತೀವ್ರ ಹಂಬಲದಿಂದಲೇ) ಬೆಟ್ಸ್ ಕಟ್ಟಿದ್ದ ಸ್ಟೀಫನ್ ಹಾಕಿಂಗ್ಸ್ ಸೋತನು. ವಿಜ್ಞಾನವೂ, ಆ ವಿಜ್ಞಾನವೆಂಬ ಬೆರಗನ್ನು ಕಟ್ಟಿ, ಬೆಳೆಸಿದ ಮಾನವನ ಬೌದ್ಧಿಕ ಕ್ಷಮತೆಯೂ ಗೆಲುವಿನ ನಗೆ ಬೀರಿತು. ಈಗಿನ ಮಾಹಿತಿಯ ಪ್ರಕಾರ ಆ ಕಪ್ಪುಕುಳಿಯು ಸೂರ್ಯನಿಗಿಂತ 21 ಪಟ್ಟು ಹೆಚ್ಚು ರಾಶಿಯನ್ನು ಹೊಂದಿದೆಯಂತೆ. ಇಲ್ಲಿಯವರೆಗೂ ಕಂಡುಬಂದಿರುವ ಸ್ಟೆಲ್ಲಾರ್ ಕಪ್ಪುಕುಳಿಗಳಲ್ಲೇ ಈ ಸಿಗ್ನಸ್ ಎಕ್ಸ್-1 ಅತ್ಯಂತ ದೊಡ್ಡ ಕಪ್ಪುಕುಳಿಯಾಗಿದೆ.

21ನೆಯ ಶತಮಾನಕ್ಕೆ ಕಾಲಿರಿಸುತ್ತಿದ್ದಂತೆ ಕಪ್ಪುಕುಳಿಯ ಪ್ರಾಯೋಗಿಕ ಅಧ್ಯಯನವು ಮಹತ್ವದ ತಿರುವು ಪಡೆದುಕೊಂಡಿತು. ಎಲ್.ಐ.ಜಿ.ಒ (ಲಿಗೊ- Laser Interferometer Gravitational-wave Observatory) ಹಾಗೂ ಇ.ಎಚ್.ಟಿ (Event Horizon Telescope) ಈ ಎರಡು ಪ್ರಯೋಗ ಸಂಶೋಧನಾ ಯೋಜನೆಗಳು ಕಪ್ಪುಕುಳಿಗಳನ್ನು ಡಿಟೆಕ್ಟ್ ಮಾಡುವ ಕ್ರಮದಲ್ಲಿ ದೊಡ್ಡ ಪಲ್ಲಟವನ್ನೇ ತಂದವು. ಅಲ್ಲದೆ, ಈ ಯೋಜನೆಗಳು ರಾಷ್ಟ್ರ-ರಾಷ್ಟ್ರಗಳ ಗಡಿಗಳನ್ನೂ, ತತ್-ಕ್ಷಣದ ಅಧಿಕಾರ ರಾಜಕಾರಣಗಳನ್ನೂ ಮೀರಿ ಜಗತ್ತಿನ ಬೇರೆಬೇರೆ ಭಾಗಗಳ ಬುದ್ಧಿಜೀವಿಗಳು ಹೇಗೆ ಒಂದಾಗಿ ಕೆಲಸ ಮಾಡಬಹುದು ಎನ್ನುವುದಕ್ಕೆ ಉತ್ತಮ ನಿದರ್ಶನಗಳೂ ಆಗಿವೆ. (ಈ ಬಗೆಯ ಸಹಯೋಗ, ಸಹಕಾರವು ಜಗತ್ತಿನಲ್ಲಿನ್ನೂ ಜ್ವಲಂತವಾಗಿರುವ ಹಸಿವು, ಬಡತನ, ಸಾಮಾಜಿಕ-ಆರ್ಥಿಕ ಅಸಮಾನತೆ ಮುಂತಾದ ಸಮಸ್ಯೆಗಳನ್ನೂ ಪರಿಹರಿಸುವಲ್ಲಿ ಕಂಡುಬಂದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು?!). ಲಿಗೊ ಹೆಸರಡಿಯಲ್ಲಿ ಎರಡು ವೀಕ್ಷಣಾಲಯಗಳು 2002ರಲ್ಲಿ ಅಮೆರಿಕಾದಲ್ಲಿ ಸ್ಥಾಪನೆಗೊಂಡಿತು. ಐನ್ಸ್‌ಟೀನನ ಸಾಪೇಕ್ಷ ಸಿದ್ಧಾಂತವು ಮುಂಗಂಡ ಗುರುತ್ವದ ಅಲೆಗಳನ್ನು (ಅವು ದೇಶ-ಕಾಲದ ಅಲೆಗಳೇ ಆಗಿವೆ) ಪತ್ತೆಹಚ್ಚುವುದು ಅವುಗಳ ಮುಖ್ಯ ಗುರಿ. ದೇಶ-ಕಾಲದ ಫ್ಯಾಬ್ರಿಕ್‌ನಲ್ಲಿ ತಿರುಗುವ, ಚಲಿಸುವ ಯಾವುದೇ ವಸ್ತು ಗುರುತ್ವದ ಅಲೆಗಳನ್ನು ಹೊಮ್ಮಿಸುತ್ತವೆ. ಈ ಅಲೆಗಳಲ್ಲಿ ಬಹಳ ಸಣ್ಣ ಪ್ರಮಾಣದ ಶಕ್ತಿಯೂ ಅಡಗಿರುತ್ತದೆ. ಶಕ್ತಿ-ಸಂರಕ್ಷಣಾ ತತ್ತ್ವದ ಅನ್ವಯ ಅಲೆಗಳ ಮೂಲಕ ಶಕ್ತಿಯು ಹೊರಸಾಗುತ್ತಿದೆ ಎಂದಾದರೆ ಚಲಿಸುತ್ತಿರುವ ವಸ್ತುಗಳ ಚಲನಾ ಶಕ್ತಿಯು ಕುಂದುತ್ತ, ಅವುಗಳ ಚಲನೆಯು ಬರುಬರುತ್ತ ಮಂದವಾಗಬೇಕು. ಈ ಪ್ರಕ್ರಿಯೆಯನ್ನು ಖಗೋಳವಿಜ್ಞಾನಿಗಳು ಆಕಾಯಕಾಯಗಳ ಚಲನೆಯಲ್ಲಿ ಗುರುತಿಸಿದ್ದಾರೆ.
ಆದರೆ, ಅವುಗಳಿಂದ ಹೊಮ್ಮುವ ಗುರುತ್ವದ ಅಲೆಗಳನ್ನು ವೀಕ್ಷಿಸುವುದು ದುಃಸ್ಸಾಧ್ಯವೇ ಸರಿ. ಅಷ್ಟು ದುರ್ಬಲ ಶಕ್ತಿಯುಳ್ಳ ಅಲೆಗಳವು. ಆದರೆ, ಬೃಹತ್ ಕಪ್ಪುಕುಳಿಗಳಿಂದ ಹೊಮ್ಮುವ ಗುರುತ್ವದ ಅಲೆಗಳನ್ನು, ಅದರಲ್ಲೂ ಎರಡು ಕಪ್ಪುಕುಳಿಗಳು ಸಂಗಮಿಸುವ ಪ್ರಕ್ರಿಯೆಯಲ್ಲಿ ಏಳುವ ಗುರತ್ವದ ಅಲೆಗಳನ್ನು ಗುರುತಿಸಲು ಸಾಧ್ಯ. ಈ ಸಾಧ್ಯತೆಯು ಯಶಸ್ವಿಗೊಂಡಿದ್ದು 2015ರಲ್ಲಿ, ಲಿಗೊ ಪರಿವೀಕ್ಷಣಾಲಯಗಳಲ್ಲಿ ನಿರಂತರವಾಗಿ ನಡೆಯುತ್ತಿದ್ದ ಪ್ರಯೋಗಗಳ ಫಲವಾಗಿ. ಸೂರ್ಯನ ರಾಶಿಗಿಂತ ಕ್ರಮವಾಗಿ 29 ಹಾಗೂ 36 ಪಟ್ಟು ಹೆಚ್ಚು ರಾಶಿ ಹೊಂದಿರುವ ಎರಡು ಕಪ್ಪುಕುಳಿಗಳ ಸಮಾಗಮದಲ್ಲಿ ಹೊಮ್ಮಿದ ಗುರುತ್ವದ ಅಲೆಗಳನ್ನು ಲಿಗೋ, ಇಂಟರ್ ಫೆರೋಮೀಟರ್ ತಂತ್ರಜ್ಞಾನದ ಸಹಾಯದಿಂದ ಪತ್ತೆ ಮಾಡಿತು. (ಇಂಟರ್‌ಫೆರೋಮೀಟರ್- ಎರಡು ಅಲೆಗಳು ಪರಸ್ಪರ ಕೂಡಿದ ಉಂಟಾಗುವ ಇಂಟರ್ ಫೆರೆನ್ಸ್ ಪರಿಣಾಮವನ್ನು ದಾಖಲಿಸಿ, ವಿಶ್ಲೇಷಣೆಗೆ ಅನುವುಮಾಡಿಕೊಡುವ ಸಾಧನ ಮತ್ತು ತಂತ್ರಜ್ಞಾನ. ಚಿತ್ರ 06 ನೋಡಿ). ಹೀಗೆ, ಕಪ್ಪುಕುಳಿಗಳ ಅಸ್ತಿತ್ವದ ಸದೃಢ ಸಾಕ್ಷ್ಯವೊಂದು ಲಭಿಸಿದಂತಾಯಿತು. ಐನ್ಸ್‌ಟೀನನ ಸಾಪೇಕ್ಷ ಸಿದ್ಧಾಂತದ ಅಗಾಧ ಶಕ್ತಿಯ ಬ್ರಹ್ಮಾಂಡ ದರ್ಶನವೂ ಆದಂತಾಯಿತು. ನಿಬ್ಬೆರಗಾದ ವಿಜ್ಞಾನಿಗಳ ಕಣ್ಣೆವೆಗಳು ಮುಚ್ಚುವ ಮುನ್ನವೇ 2019ರಲ್ಲಿ ಕಪ್ಪುಕುಳಿಯ ಮೊದಲ ಚಿತ್ರವೂ ದೊರೆಯಿತು. ಅದು, ಮೆಸ್ಸಿಯರ್-87 ಎಂಬ ನಕ್ಷತ್ರಪುಂಜದ ನಡುವಿನಲ್ಲಿರುವ ಕಪ್ಪುಕುಳಿಯ ಭಾವಚಿತ್ರವಾಗಿತ್ತು (ಚಿತ್ರ 07 ನೋಡಿ). ಇದನ್ನು ಸಾಧ್ಯವಾಗಿಸಿದ್ದು ಇ.ಎಚ್.ಟಿ ಯೋಜನೆ. ಇದು, ಭೂಮಂಡಲದಲ್ಲಿರುವ ಹಲವು ವೀಕ್ಷಣಾಲಯಗಳನ್ನು ಒಂದು ಬೃಹತ್ ಪರಿವೀಕ್ಷಣಾ ಜಾಲದ ಭಾಗವಾಗಿಸಿತಲ್ಲದೆ, ಭೂಮಿಯೇ ಒಂದು ಬೃಹತ್ ಇಂಟರ್‌ಫೆರೋಮೀಟರ್‌ನಂತೆ ಕೆಲಸ ಮಾಡುವ ರೀತಿಯಲ್ಲಿ ತಂತ್ರಜ್ಞಾನವನ್ನು ರೂಪಿಸಿತು. ಈ ಯೋಜನೆಯ ಫಲವಾಗಿ ಇಂದು ನಮ್ಮದೇ ನಕ್ಷತ್ರಪುಂಜ ಹಾಲ್ದೊರೆಯ ನಡುವಿನಲ್ಲಿರುವ ಕಪ್ಪುಕುಳಿಯನ್ನು, ಅದರ ’ಹಾವ-ಭಾವ’ವನ್ನು ’ಕಾಣ’ಬಹುದಾಗಿದೆ.

ಥಿಯರಿಗಳೆಂಬ ಬೆರಗು
ಕಪ್ಪುಕುಳಿಗಳ ಪ್ರಾಯೋಗಿಕ ಸಂಶೋಧನೆಯು ಮನುಷ್ಯನ ತಾಂತ್ರಿಕ ಸಾಮರ್ಥ್ಯ ಮತ್ತು ಪ್ರಗತಿಗೆ ಹಿಡಿದ ಕನ್ನಡಿಯಾಗಿದೆ, ನಿಜ. ಆದರೆ, ಇನ್ನೂ ಹೆಚ್ಚಾಗಿ ಇದು, ಮನುಷ್ಯನ ಸೈದ್ಧಾಂತೀಕರಣ (ಥಿಯರಾಯ್ಸೇಶನ್) ಸಾಮರ್ಥ್ಯದ ಹಾಗೂ ಹಾಗೆ ರೂಪುಗೊಂಡ ಥಿಯರಿಗಳ ಸಶಕ್ತತೆಯ ದ್ಯೋತಕವೂ ಆಗಿದೆ. ಈ ಥಿಯರಿಗಳು ಯೋಚಿಸುವ ಹಾಗೂ ಅಭಿವ್ಯಕ್ತಿಸುವ ಭಾಷೆ ಗಣಿತ. ಈ ನಿಟ್ಟಿನಲ್ಲಿ, ಕಪ್ಪುಕುಳಿಯ ಸಂಶೋಧನೆಗಳು, ಗಣಿತ ಭಾಷೆಯ ಅಳವನ್ನೂ ಕಾಲದ ಒರೆಗೆ ಹಚ್ಚಿ, ಪರೀಕ್ಷಿಸಿದ್ದವು. ಈ ಪರೀಕ್ಷೆಯಲ್ಲಿ ಗಣಿತವು ಗೆದ್ದಿದೆ. ಗಣಿತಕ್ಕೆ ನಿಜಕ್ಕೂ ಅಂಥದ್ದೊಂದು ನಿಸ್ಸೀಮ, ಸ್ವಯಂ-ಸಿದ್ಧ ಸಾಮರ್ಥ್ಯವಿದೆಯೇ ಎನ್ನುವ ಬಹಳ ಗಹನವಾದ ತಾತ್ವಿಕ ಪ್ರಶ್ನೆಯನ್ನು (ಈ ಬಗೆಯ ಪ್ರಶ್ನೆಗಳನ್ನು ಗೊಡೆಲ್ ಮುಂತಾದ ಗಣಿತಜ್ಞರು ಎತ್ತಿದ್ದಾರೆ) ಬದಿಗಿಟ್ಟು ನೋಡಿದರೆ, ಗಣಿತ ಹಾಗೂ ಅದರ ಪಾರಿಭಾಷಿಕ ಅಡಿಪಾಯದ ಮೇಲೆ ರೂಪುಗೊಂಡ ಭೌತ-ವೈಜ್ಞಾನಿಕ ಥಿಯರಿಗಳ ಸಾಧನೆಗಳನ್ನು ಮನುಷ್ಯ ನಾಗರಿಕತೆಯ ಅತ್ಯುನ್ನತ ಸಾಧನೆಗಳಲ್ಲೊಂದು ಎಂದು ಬಣ್ಣಿಸಬಹುದು. ಬಹುಶಃ ಇದಕ್ಕೆ ಯಾರ ತಕರಾರೂ ಇರಲಾರದು. ಹಾಗೊಂದು ವೇಳೆ ತಕರಾರುಗಳಿದ್ದರೆ, ಅಂಥವರನ್ನು ಕನ್ವಿನ್ಸ್ ಮಾಡುವ ಹೊಣೆಯನ್ನು ಲಿಗೊ, ಇ.ಎಚ್.ಟಿಯಂಥ ಯೋಜನೆಗಳ ಹೆಗಲಮೇಲಿರಿಸಿ, ನಾವು ಹಾಯಾಗಿರೋಣ. ಏನಂತೀರಿ?

ಅಮರ್ ಹೊಳೆಗದ್ದೆ
ಎಂಜಿನಿಯರಿಂಗ್ ಪದವೀಧರರಾದ ಅಮರ್, ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ ಹೇಳಿಕೊಡುವುದರ ಜೊತೆಗೆ ಕರ್ನಾಟಕ-ಕನ್ನಡ ಕೇಂದ್ರಿತ ಹೋರಾಟಗಳಲ್ಲಿ ಆಸಕ್ತಿ ವಹಿಸಿದ್ದವರು. ಈಗ ತುಮಕೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿ.
ಇದನ್ನೂ ಓದಿ: ಬೆಳ್ಳಿ ಚುಕ್ಕಿ; ಕಪ್ಪು ರಂಧ್ರದ ಬೆಳಕು!


