Homeಮುಖಪುಟಕ್ವಾಂಟಂ ಕಾಸ್ಮಾಲಜಿಯ ವಿಸ್ಮಯಲೋಕಕ್ಕೆ ಹೀಗೆ ಬನ್ನಿ; ಭಾಗ-2

ಕ್ವಾಂಟಂ ಕಾಸ್ಮಾಲಜಿಯ ವಿಸ್ಮಯಲೋಕಕ್ಕೆ ಹೀಗೆ ಬನ್ನಿ; ಭಾಗ-2

- Advertisement -
- Advertisement -

ಹಿಂದಿನ ಸಂಚಿಕೆಯಲ್ಲಿ ನಾವು ನೋಡಿದ ಕ್ವಾಂಟಂ ಥಿಯರಿಯ ಮೂಲಭೂತ ತತ್ವಗಳಲ್ಲಿ ಕೊನೆಯ ತತ್ವವು ನಿಸರ್ಗದ ರಿಯಾಲಿಟಿಯ ವಿವೇಚನೆಯಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿದೆ. ಒಂದು ವಸ್ತುವಿನ ಸ್ಥಳವೋ, ವೇಗವೋ ಒಂದು ನಿರ್ದಿಷ್ಟ ಬೆಲೆಯನ್ನು ಹೊಂದುವುದು ಆ ವಸ್ತುವನ್ನು ನೋಡಿದಾಗಲೇ01. ಅದನ್ನು ನೋಡುವ ಮುನ್ನ ಅದು ಇಂತಹ ಸ್ಥಾನದಲ್ಲೇ ಇತ್ತು, ಇಂತಹ ವೇಗವನ್ನೇ ಪಡೆದಿತ್ತು ಎಂದು ಹೇಳಲು ಬರುವುದಿಲ್ಲ. ಆದರೆ, ಒಮ್ಮೆ ನೋಡಿದ ಬಳಿಕ, ಅದು ಹಲವು ಉಪ-ಸ್ಥಿತಿಗಳಲ್ಲಿ ಒಂದು ಸ್ಥಿತಿಯನ್ನು ಪಡೆದುಕೊಳ್ಳುತ್ತದೆ. ಆ ಸ್ಥಿತಿಯನ್ನು ಪಡೆದುಕೊಂಡ ತಕ್ಷಣ ಮತ್ತೊಮ್ಮೆ ನೋಡಿದರೆ ವಸ್ತುವು ಅದೇ ಸ್ಥಿತಿಯಲ್ಲಿ ಇರುತ್ತದೆ. ಆದರೆ ಇನ್ನೊಮ್ಮೆ ನೋಡುವ ಕ್ರಿಯೆ ಕೊಂಚ ತಡವಾದರೂ ಮತ್ತದೇ ಹಳೆಯ ಸ್ಥಿತಿಯಲ್ಲೇ ವಸ್ತು ಕಂಡುಬರುತ್ತದೆ ಎನ್ನಲಾಗುವುದಿಲ್ಲ!02 ಇನ್ನು, ಕೆಲವು ಸಂದರ್ಭಗಳಲ್ಲಿ ಕಣವೆಂದು ನಾವು ಗುರುತಿಸುವ ವಸ್ತುವನ್ನು ಇನ್ನು ಕೆಲವು ಸಂದರ್ಭಗಳಲ್ಲಿ ಅಲೆಯೆಂದು (ಈ ಅಲೆಗೆ ’ಮ್ಯಾಟರ್-ವೇವ್’ ಎಂಬ ಹೆಸರು) ಪರಿಗಣಿಸಬೇಕಾದ ಅನಿವಾರ್ಯತೆಯೂ ಇರುವುದರಿಂದ ಆ ವಸ್ತುವಿನ ಕೆಲವು ಸ್ಥಿತಿಗಳನ್ನು ಒಟ್ಟೊಟ್ಟಿಗೆ ನಿಖರವಾಗಿ ಅಳೆಯಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ, ಒಂದು ಕಣದ ಸ್ಥಳ (ಪೊಸಿಶನ್) ಹಾಗೂ ಆವೇಗ (ಮೊಮೆಂಟಮ್)ಅನ್ನು ಒಂದೇ ಸಮಯದಲ್ಲಿ ನಿಖರವಾಗಿ ಅಳೆಯಲು ಬರುವುದಿಲ್ಲ. ಸ್ಥಳವನ್ನು ನಿಖರವಾಗಿ ಅಳೆಯಬೇಕೆಂದರೆ ಅದರ ಆವೇಗದ ನಿಖರತೆಯ ಬಗ್ಗೆ ಮಂಡೆಬಿಸಿ ಮಾಡಿಕೊಳ್ಳುವುದನ್ನು ನಾವು ಬಿಟ್ಟುಬಿಡಬೇಕು. ನಿಸರ್ಗದ ಈ ಮೂಲಭೂತ ತತ್ವವನ್ನು ’ಹೈಸೆನ್‌ಬರ್ಗ್ ಅನ್ಸರ್ಟೆನಿಟಿ ಪ್ರಿನ್ಸಿಪಲ್’ ಎಂದು ಕರೆಯಲಾಗುತ್ತದೆ.

ಕ್ವಾಂಟಂ ವಿಶ್ವವಿಜ್ಞಾನದ ಅಧ್ಯಯನದ ಸ್ವರೂಪವನ್ನು ಅರಿಯಲು ಮುಖ್ಯವಾದ ಇನ್ನೊಂದು ಕ್ವಾಂಟಂ ಪರಿಣಾಮವಿದೆ. ಅದಕ್ಕೆ ’ಕ್ವಾಂಟಂ ಎಂಟ್ಯಾಂಗಲ್ಮೆಂಟ್(ಜೋಡಿತನ)’ ಎಂದು ಹೆಸರು. ಈ ವಿಚಾರಕ್ಕೆ ಸಂಬಂಧಿಸಿದಂತೆ ’ನ್ಯಾಯಪಥ’ದ ಕಳೆದ ಸಂಚಿಕೆಯಲ್ಲಿ ವಿಶ್ವಕೀರ್ತಿ ಎಸ್ ಅವರು ಸವಿಸ್ತಾರವಾಗಿ ಬರೆದಿದ್ದಾರೆ. ಅಲ್ಲಿರುವ ವಿವರಣೆಯ ಮುಂದುವರಿಕೆಯಂತೆ ಒಂದು ನಿದರ್ಶನವನ್ನು ನೋಡಬಹುದು. ನಮ್ಮ ಪ್ರಯೋಗಾಲಯದಲ್ಲಿ ಸ್ಪಿನ್‌ನ ಜೋಡಿತನವುಳ್ಳ ಎಲೆಕ್ಟ್ರಾನ್ ಮತ್ತು ಪಾಸಿಟ್ರಾನ್ ಕಣಗಳು ಸೃಷ್ಟಿಯಾದವು ಎಂದು ಭಾವಿಸೋಣ. ಅವೆರಡರ ಸ್ಪಿನ್‌ಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿರಬೇಕು. ಒಂದುವೇಳೆ ಈ ಕಣಗಳನ್ನು ಬೇರ್ಪಡಿಸಿ, ತದ್ವಿರುದ್ಧ ದಿಕ್ಕಿನಲ್ಲಿ ಬಹಳ ದೂರಕ್ಕೆ ಕಳಿಸಿದರೂ ಈ ಜೋಡಿತನದ ಸಂಬಂಧ ಹಾಗೆಯೇ ಉಳಿದುಕೊಂಡಿರುತ್ತದೆ. ಈಗ, ಆ ಎಲೆಕ್ಟ್ರಾನ್‌ಅನ್ನು ಚಂದ್ರನತ್ತ ಕಳಿಸಿ, ಅದು ಚಂದ್ರಲೋಕವನ್ನು ತಲುಪುವ ಮುನ್ನ ಯಾವುದೋ ಒಂದು ಕ್ಷಣದಲ್ಲಿ ಪಾಸಿಟ್ರಾನ್‌ನ ಸ್ಪಿನ್‌ಅನ್ನು ನಮ್ಮ ಲ್ಯಾಬಿನಲ್ಲೇ ಅಳೆಯುತ್ತೇವೆಂದು ಭಾವಿಸೋಣ. ಪಾಸಿಟ್ರಾನ್ ಈಗ ’ಮೇಲೆ’ ಅಥವಾ ’ಕೆಳಗೆ’; ಎರಡರಲ್ಲೊಂದು ಸ್ಪಿನ್ ಸ್ಥಿತಿಯನ್ನು ಪಡೆದುಕೊಂಡುಬಿಡುತ್ತದೆ. ಈ ನಿದರ್ಶನದಲ್ಲಿ ಅದು ’ಮೇಲೆ’ ಸ್ಥಿತಿಯನ್ನು ಪಡೆದುಕೊಂಡಿತು ಎಂದು ಭಾವಿಸೋಣ. ಆದರೆ, ಇದೂ ಎಲೆಕ್ಟ್ರಾನೂ ಜೋಡಿತನದ ಸಂಬಂಧವನ್ನು ಹೊಂದಿರುವುದರಿಂದ ಎಲೆಕ್ಟ್ರಾನ್‌ನ ಸ್ಪಿನ್ ’ಕೆಳಗೆ’ ಅಂತಾಗಬೇಕು. ಆದರೆ ಈ ಕ್ಷಣದಲ್ಲಿ ಎಲೆಕ್ಟ್ರಾನ್‌ನ ಸ್ಪಿನ್‌ಅನ್ನು ಯಾರೂ ಅಳೆದಿಲ್ಲ. ಹಾಗಾಗಿ, ಕ್ವಾಂಟಂ ಥಿಯರಿಯ ಪ್ರಕಾರ ಸದ್ಯ ಅದರ ಸ್ಪಿನ್ ’ಮೇಲೆ’ ಮತ್ತು ’ಕೆಳಗೆ’ ಉಪ-ಸ್ಥಿತಿಗಳ ರೇಖಾತ್ಮಕ ಕೂಡುವಿಕೆಯ ಸ್ಥಿತಿಯಲ್ಲಿರಬೇಕು.

ಆದರೆ ಮುಂದೆ ಚಂದ್ರಲೋಕದಲ್ಲಿ ಯಾರಾದರೂ ಅದರ ಸ್ಪಿನ್‌ಅನ್ನು ಅಳೆದರೆ ಅದರ ಸ್ಪಿನ್ ’ಕೆಳಗೆ’ ಅಂತ ಕಂಡುಬರಬೇಕು. ಚಂದ್ರಲೋಕದಲ್ಲಿ ಅಳೆದಾಗ ತನ್ನ ಸ್ಥಿತಿ ’ಕೆಳಗೆ’ ಆಗಬೇಕು ಎಂದು ಎಲೆಕ್ಟ್ರಾನ್‌ಗೆ ಗೊತ್ತಾಗಿದ್ದಾದರೂ ಹೇಗೆ? ಇದು ಸಾಧ್ಯವಾಗಬೇಕಿದ್ದರೆ, ಪಾಸಿಟ್ರಾನ್‌ನ ಸ್ಪಿನ್‌ಅನ್ನು ಅಳೆಯಲಾಗಿದೆ ಎಂಬ ಮಾಹಿತಿಯು ಬೆಳಕಿನ ವೇಗಕ್ಕಿಂತಲೂ ಹೆಚ್ಚು ವೇಗವಾಗಿ ಸಾಗಿ, ಎಲೆಕ್ಟ್ರಾನ್‌ಅನ್ನು ಅಳೆಯಲಾಗುವ ಸ್ಥಳವನ್ನು, ಅದನ್ನು ಅಳೆಯಲಾದ ಕ್ಷಣಕ್ಕೆ ಸರಿಯಾಗಿ ತಲುಪಿಬಿಡಬೇಕು. ಇದು ವಿಸಾಸಿ (ವಿಶಿಷ್ಟ ಸಾಪೇಕ್ಷತಾ ಸಿದ್ಧಾಂತ) ಪ್ರಕಾರ ಅಸಾಧ್ಯ. ಹಾಗಾಗಿ, ಎಲೆಕ್ಟ್ರಾನ್ ಮತ್ತು ಪಾಸಿಟ್ರಾನ್ ಕಣಗಳು ಸೃಷ್ಟಿಯಾದಾಗಲೇ ಅವುಗಳ ಸ್ಪಿನ್ ಸ್ಥಿತಿಗಳು ನಿರ್ಧರಿತವಾಗಿರುತ್ತವೆಯೆಂದೂ, ಈ ಮಾಹಿತಿಯನ್ನು ಒಳಗೊಂಡ ಒಂದು ’ಹಿಡನ್ ವೇರಿಯೆಬಲ್’ ಇರುತ್ತದೆಯೆಂದೂ, ಕ್ವಾಂಟಂ ಥಿಯರಿ ಈ ವೇರಿಯೇಬಲ್‌ಅನ್ನು ಅಳವಡಿಸಿಕೊಳ್ಳಬೇಕೆಂದೂ ಐನ್‌ಸ್ಟೀನ್ ಮುಂತಾದ ಕೆಲವು ವಿಜ್ಞಾನಿಗಳು ಸಲಹೆ ನೀಡಿದರು. ಆದರೆ 70-80ರ ದಶಕದಲ್ಲಿ ನಡೆದ ಪ್ರಯೋಗಗಳು ಅಂತಹ ಹಿಡನ್ ವೇರಿಯೇಬಲ್‌ಗಳು ಯಾವುವೂ ಇರಲು ಸಾಧ್ಯವಿಲ್ಲ ಎಂದು ಸಾಬೀತು ಮಾಡಿದವು. ಅಲ್ಲಿಗೆ, ಕ್ವಾಂಟಂ ಥಿಯರಿ ಮತ್ತೊಮ್ಮೆ ಗೆಲುವಿನ ಮಂದಹಾಸವನ್ನು ಬೀರಿತು, ನಮ್ಮ ವಿಶ್ವವನ್ನು ನಿಶ್ಚಿತತೆಯ ಅಡಿಪಾಯದ ಮೇಲೆ ಅರ್ಥಮಾಡಿಕೊಳ್ಳಬಹುದು ಎಂಬ ಸಣ್ಣ ಭರವಸೆಯೂ ಕಮರಿಹೋಯಿತು.

ಇಲ್ಲಿಯವರೆಗೂ ನಾವು ಕಂಡ ವಿದ್ಯಮಾನಗಳನ್ನು ಕಾಸ್ಮಾಲಜಿಯ ಅಧ್ಯಯನಕ್ಕೆ ಅಳವಡಿಸಿದರೆ ಸಾಸಾಸಿಯ (ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತದ) ಕೊರತೆ ಅರಿವಾಗುತ್ತದೆ. ಈಗಾಗಲೇ ಹೇಳಿದಂತೆ, ಗ್ರಹ, ನಕ್ಷತ್ರ, ಗ್ಯಾಲಾಕ್ಸಿಗಳಷ್ಟು ದೊಡ್ಡದಾದ ಭೌತವಸ್ತುಗಳ ಚಲನವಲನವನ್ನು ಅರ್ಥಮಾಡಿಕೊಳ್ಳಲು ಕ್ವಾಂಟಂ ಥಿಯರಿ ಬೇಕಾಗಿಲ್ಲ, ನಿಜ.03 ಆದರೆ, ಒಂದು ಕಪ್ಪುಕುಳಿಯ ಸಮೀಪಕ್ಕೆ ಕೆಲವು ಸಣ್ಣ ಕಣಗಳೋ, ಬೆಳಕೋ ಹೋದಾಗ ಏನಾಗುತ್ತದೆ? ವಿಶ್ವವು ಗಾತ್ರದಲ್ಲಿ ಎಲೆಕ್ಟ್ರಾನ್‌ನಷ್ಟು ಸಣ್ಣದಿದ್ದಾಗ ನಡೆದ ಪ್ರಕ್ರಿಯೆಗಳು ಏನು? ಇಂತಹ ಪ್ರಶ್ನೆಗಳನ್ನು ಉತ್ತರಿಸಲು ಕಣ ಹಾಗೂ ಬೆಳಕಿನ ಕ್ವಾಂಟಂ ಸ್ವರೂಪವನ್ನು ಕಡೆಗಣಿಸಲು ಆಗುವುದಿಲ್ಲ. ಒಂದು ಎಲೆಕ್ಟ್ರಾನ್ ಗನ್‌ನಿಂದ ಎಲೆಕ್ಟ್ರಾನ್‌ಅನ್ನು ಚಿಮ್ಮಿಸಿ, ಅದು ಭೂಮಿಯ ಗುರುತ್ವಾಕರ್ಷಣ ಬಲಕ್ಕೆ ಹೇಗೆ ಸ್ಪಂದಿಸುತ್ತದೆ ಎಂದು ತಿಳಿಯಲೂ ಕ್ವಾಂಟಂ ಸಿದ್ಧಾಂತದ ಸಹಾಯ ಬೇಕು. ಇದು, ಗುರುತ್ವಾಕರ್ಷಣ ಬಲದ ಕ್ವಾಂಟಂ ನಿರೂಪಣೆಯನ್ನು ಬೇಡುತ್ತದೆ. ಇದಕ್ಕೆ ’ಕ್ವಾಂಟಂ ಗ್ರಾವಿಟಿ’ ಎಂದು ಕರೆಯಲಾಗುತ್ತದೆ. ಒಂದು ಸುಸಂಬದ್ಧವಾದ ಕ್ವಾಂಟಂ ಗ್ರಾವಿಟಿ ಥಿಯರಿಯನ್ನು ವಿಶ್ವವಿಜ್ಞಾನಿಗಳು ಇಂದಿಗೂ ಹುಡುಕುತ್ತಲೇ ಇದ್ದಾರೆ. ಇದರ ಪರಿಣಾಮವಾಗಿ ’ಸ್ಟ್ರಿಂಗ್ ಥಿಯರಿ’, ’ಎಂ ಥಿಯರಿ’, ’ಕ್ವಾಂಟಂ ಲೂಪ್ ಥಿಯರಿ’ ಮುಂತಾದ ಹೆಸರುವಾಸಿ ಸಿದ್ಧಾಂತಗಳು ಮಂಡನೆಯಾಗಿವೆ. ಇನ್ನೂ ಪ್ರಮೇಯ ಸ್ವರೂಪದಲ್ಲೇ ಇರುವ, ಗಣಿತೀಯವಾಗಿ ಬಹಳ ಸಂಕೀರ್ಣವಾಗಿರುವ ಈ ಸಿದ್ಧಾಂತಗಳ ಗೊಡವೆಗೆ ಹೋಗದೆ, ಕ್ವಾಂಟಂ ವಿಶ್ವವಿಜ್ಞಾನದ ಎರಡು ಮುಖ್ಯ ಅಧ್ಯಯನ ವಿಷಯಗಳಾದ ಕಪ್ಪುಕುಳಿ (ಬ್ಲ್ಯಾಕ್ ಹೋಲ್) ಮತ್ತು ಬಿಗ್ ಬ್ಯಾಂಗ್ ನಂತರದ ವಿಶ್ವವಿಕಾಸದ ಕುರಿತಾಗಷ್ಟೇ ಮುಂದೆ ಪ್ರಸ್ತಾಪಿಸಲಿದ್ದೇನೆ.

ಕ್ವಾಂಟಂ ಥಿಯರಿ ಕಾಣಿಸುವ ವಿಶ್ವರೂಪ

ಕ್ವಾಂಟಂ ಲಕ್ಷಣಗಳನ್ನು ತೋರುವ ಕಣಗಳು ಸಾಸಾಸಿಯ ಪಡಸಾಲೆಯಲ್ಲಿ ಹೇಗೆ ವ್ಯವಹರಿಸುತ್ತವೆಯೆಂಬುದರ ಕುರಿತು ಹಲವು ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ಥಿಯೊರೆಟಿಕಲಿ ಈ ವ್ಯವಹಾರ ಬಹಳ ಸ್ಪಷ್ಟವಾಗಿ ಕಾಣಿಸಿಕೊಳ್ಳುವುದು ಕಪ್ಪುಕುಳಿಯ ಇವೆಂಟ್ ಹೊರೈಜ಼ನ್04 ಹೊರಮೈಯ ಆಸುಪಾಸಿನಲ್ಲಿ. ರಷ್ಯಾದ ಕೆಲವು ವಿಜ್ಞಾನಿಗಳ ಕಾಣ್ಕೆಗಳಿಂದ ಪ್ರೇರೇಪಿತನಾದ ಬ್ರಿಟಿಷ್ ವಿಜ್ಞಾನಿ ಸ್ಟೀಫನ್ ಹಾಕಿಂಗ್ಸ್ ಯಾವುದೇ ಕಪ್ಪುಕುಳಿಯು ಬಹಳ ಸಣ್ಣ ಪ್ರಮಾಣದಲ್ಲಿ ವಿಕಿರಣವನ್ನು ಹೊರಸೂಸುತ್ತದೆ ಎಂದು ಪ್ರತಿಪಾದಿಸಿದ. ಈ ವಿದ್ಯಮಾನವನ್ನು ಹಾಕಿಂಗ್ಸ್ ರೇಡಿಯೇಶನ್ ಎಂದು ಹೆಸರಿಸಲಾಗಿದೆ. ಅನ್ಸರ್ಟನಿಟಿ ತತ್ತ್ವದ ಪ್ರಕಾರ ಒಂದು ನಿರ್ದಿಷ್ಟ ದೇಶ ಮತ್ತು ಕಾಲದಲ್ಲಿ ಎಷ್ಟು ಶಕ್ತಿ ಇದೆ ಎನ್ನುವುದನ್ನು ಅತ್ಯಂತ ನಿಖರವಾಗಿ ಹೇಳಲು ಬರುವುದಿಲ್ಲ. ಶಕ್ತಿಯ ನಿಖರತೆ ಬೇಕೆಂದರೆ ಕಾಲದ ನಿಖರತೆಯೊಂದಿಗೆ ನಾವು ರಾಜಿಮಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ, ಶಕ್ತಿಯು ಶುದ್ಧ ಶೂನ್ಯ ಪ್ರಮಾಣದಲ್ಲಿರುವ ದೇಶ-ಕಾಲವನ್ನು ನಾವು ಊಹಿಸಲು ಸಾಧ್ಯವಿಲ್ಲ. ಅಂದರೆ, ನಿರ್ವಾತ (ವ್ಯಾಕ್ಯೂಮ್) ಎಂದು ನಾವು ಪರಿಗಣಿಸುವ ದೇಶ-ಕಾಲದಲ್ಲಿಯೂ ಒಂದಿಷ್ಟು ಶಕ್ತಿಯನ್ನು ನಾವು ಅಳೆಯಬಲ್ಲೆವು. ಇದಕ್ಕೆ ವ್ಯಾಕ್ಯೂಮ್ ಎನರ್ಜಿ ಎಂಬ ಹೆಸರು.05 ಸಾಮಾನ್ಯವಾಗಿ ಈ ಶಕ್ತಿಯು, ಬೆಳಕಿನ ಕಣ(ಫೊಟಾನ್)ಗಳಾಗಿ ಪರಿವರ್ತನೆಗೊಳ್ಳುವುದಿಲ್ಲ. ಆದರೆ, ಕಪ್ಪುಕುಳಿಯ ಇವೆಂಟ್ ಹೊರೈಜ಼ನ್‌ನ ಆಸುಪಾಸಿನಲ್ಲಿ ದೇಶ-ಕಾಲದ ಬಾಗುವಿಕೆ ಮತ್ತು ತಿರುಗುವಿಕೆ (ಇದು ತಿರುಗುವ ಕಪ್ಪುಕುಳಿಗಳಿಂದ ಉಂಟಾಗುವ ಪರಿಣಾಮ) ಎಷ್ಟು ತೀವ್ರವಾಗಿರುತ್ತದೆಯೆಂದರೆ, ವ್ಯಾಕ್ಯೂಮ್ ಶಕ್ತಿಯು ಬೆಳಕಿನ ಎರಡು ಕಣಗಳಾಗಬಲ್ಲವು. ಇವು ಮತ್ತೆ ಒಂದು ಇನ್ನೊಂದನ್ನು ಸೇರಿ ಅವಸಾನಗೊಳ್ಳುವ ಮೊದಲೇ ಒಂದು ಕಣವು ಕಪ್ಪುಕುಳಿಯ ಒಳಕ್ಕೂ, ಇನ್ನೊಂದು ಕಣವು ಕಪ್ಪುಕುಳಿಯ ಹೊರಕ್ಕೂ ಚಿಮ್ಮಬಲ್ಲವು. ಒಳಗೆ ಹೋದ ಬೆಳಕಿನ ಕಣ ನಮ್ಮ ಹೊರಗಿನ ಪ್ರಪಂಚದಿಂದ ಸಂಪೂರ್ಣವಾಗಿ ಕಣ್ಮರೆಯಾದರೆ, ಹೊರಕ್ಕೆ ಚಿಮ್ಮಿದ ಕಣ ಒಂದು ವಿಕಿರಣದಂತೆ ನಮಗೆ ಗೋಚರಿಸುತ್ತದೆ. ಇದೇ ಹಾಕಿಂಗ್ಸ್ ರೇಡಿಯೇಶನ್.

ಇದನ್ನೂ ಓದಿ ಕ್ವಾಂಟಂ ಕಾಸ್ಮಾಲಜಿಯ ವಿಸ್ಮಯಲೋಕಕ್ಕೆ ಹೀಗೆ ಬನ್ನಿ; ಭಾಗ-1

ಇದು ಕಪ್ಪುಕುಳಿಯ ಸಾರರೂಪಿ ವ್ಯಾಖ್ಯಾನಕ್ಕೇ ವಿರುದ್ಧವಾದ ಮಂಡನೆಯಾಗಿದ್ದು, ಸಾಸಾಸಿಯಿಂದ ಊಹಿಸಲಾಗದ ಎಷ್ಟೋ ಗುಣಲಕ್ಷಣ ಹಾಗೂ ಅವಸ್ಥಾಂತರಗಳನ್ನು ಇದು ಕಪ್ಪುಕುಳಿಯ ಮೇಲೆ ಆರೋಪಿಸುತ್ತದೆ. ಉದಾಹರಣೆಗೆ, ಕಪ್ಪುಕುಳಿಗೆ ’ಎಂಟ್ರೊಪಿ’06 ಇರುತ್ತದೆಯೆಂದೂ, ಈ ಕಾರಣಕ್ಕಾಗಿ ಅದಕ್ಕೊಂದು ಉಷ್ಣಾಂಶವೂ ಇರುತ್ತದೆಯೆಂದೂ ಪ್ರತಿಪಾದಿಸುವ ಹಾಕಿಂಗ್ಸ್‌ನ ಈ ಪ್ರಮೇಯ, ಕ್ರಮೇಣ ಕಪ್ಪುಕುಳಿಗಳು ಕರಗುತ್ತ, ಕಣ್ಮರೆಯಾಗುವ ಸಾಧ್ಯತೆಯೂ ಇದೆ ಎಂದು ಹೇಳುತ್ತದೆ. ಆದರೆ, ಹೊಮ್ಮುವ ವಿಕಿರಣದ ಸರಾಸರಿ ಪ್ರಮಾಣ ಎಷ್ಟು ಕಡಿಮೆಯಿರುತ್ತದೆಯೆಂದರೆ ಬಹಳ ಸಣ್ಣ ಗಾತ್ರದ ಕಪ್ಪುಕುಳಿಯೊಂದು ಹೀಗೆ ಕರಗಿಹೋಗಲು ಈ ವಿಶ್ವದ ಒಟ್ಟು ಆಯಸ್ಸಿಗಿಂತ ಹೆಚ್ಚಿನ ಕಾಲವೇ ಬೇಕಾಗುತ್ತದೆ. ಅಲ್ಲದೆ, ಈ ಪ್ರಕ್ರಿಯೆ ಆರಂಭಗೊಳ್ಳಲು ವಿಶ್ವದ ಸರಾಸರಿ ತಾಪಮಾನ07 ನ್ಯಾನೋಕೆಲ್ವಿನ್ ಮಟ್ಟಕ್ಕೆ ಇಳಿಯಬೇಕು. ಇದು ಸಾಧ್ಯವಾಗಲು ಎಷ್ಟೋ ಕೋಟಿ ವರ್ಷಗಳೇ ಕಳೆಯಬೇಕು. ಹಾಗಾಗಿ, ಹಾಕಿಂಗ್ಸ್‌ನ ಪ್ರಮೇಯವು, ಕ್ವಾಂಟಂ ಕಾಸ್ಮಾಲಜಿಯ ಥಿಯೊರೆಟಿಕಲ್ ಅಧ್ಯಯನದಲ್ಲಿ ಮಹತ್ವದ ಹೆಜ್ಜೆ ಅನ್ನಿಸಿದರೂ, ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಸಾಧ್ಯತೆಯ ದೃಷ್ಟಿಯಿಂದ ಒಂದು ಅದ್ಭುತ ಪುರಾಣವೇ ಆಗಿದೆ.

ಬಿಗ್ ಬ್ಯಾಂಗ್ ನಂತರದ ವಿಶ್ವದ ವಿಕಾಸವನ್ನು ಅರ್ಥಮಾಡಿಕೊಳ್ಳಲು ಕೂಡ ಕ್ವಾಂಟಂ ಪರಿಣಾಮವನ್ನು ಪರಿಗಣಿಸುವ ಅವಶ್ಯಕತೆಯಿದೆ. ಬಿಗ್ ಬ್ಯಾಂಗ್ ಎನ್ನುವುದು ದೇಶ ಮತ್ತು ಕಾಲದ ಉಗಮವನ್ನೂ ಸೂಚಿಸುವ ಪರಿಕಲ್ಪನೆಯಾಗಿದೆ. ಆ ಸ್ಫೋಟದ ತಕ್ಷಣದ ಅವಸ್ಥೆಯಲ್ಲಿ ವಿಶ್ವವು ಗಾತ್ರದಲ್ಲಿ ಬಹಳ ಕಿರುದಾಗಿತ್ತಾದ್ದರಿಂದ ಕ್ವಾಂಟಂ ಪರಿಣಾಮಗಳ ನೆಲೆಯಿಂದಲೇ ವಿಶ್ವದ ಮುಂದಿನ ವಿಕಾಸವನ್ನು ವಿವರಿಸಬೇಕಾಗುತ್ತದೆ. ಅಲ್ಲದೆ, ವಿಶ್ವವಿಜ್ಞಾನದ ಬಗೆಹರಿಯದ ಮಹತ್ವದ ಸಮಸ್ಯೆಗಳನ್ನು ಬಿಡಿಸಲು ಕೂಡ ಕ್ವಾಂಟಂ ಪರಿಣಾಮವನ್ನು ಪರಿಗಣಿಸಬೇಕೆಂಬುದು ಬಹುತೇಕ ವಿಜ್ಞಾನಿಗಳ ಒಮ್ಮತದ ಅಭಿಪ್ರಾಯ. ಉದಾಹರಣೆಗೆ, ಇಂದಿನ ವಿಶ್ವದ ಒಟ್ಟಾರೆ ಬಾಗುವಿಕೆಯ ಪ್ರಮಾಣ (ಕರ್ವೇಚರ್) ಏಕೆ ಸೊನ್ನೆಯಾಗಿದೆ? ವಿಶ್ವದ ಯಾವ ಮೂಲೆಯಲ್ಲಿ ನಿಂತು ನೋಡಿದರೂ ಅದು ಒಂದೇ ರೀತಿಯಂತೆ ಏಕೆ ಕಾಣುತ್ತಿದೆ? ವಿಶ್ವದ ಹಿಗ್ಗುವಿಕೆಯಲ್ಲಿ ವೇಗೋತ್ಕರ್ಷವೇಕಿದೆ? ಮುಂತಾದ ಮಹತ್ವದ ಪ್ರಶ್ನೆಗಳನ್ನು ಉತ್ತರಿಸಲು ಕ್ವಾಂಟಂ ಪರಿಣಾಮದೆಡೆ ಮುಖಮಾಡಬೇಕಾಗಿ ಬಂದಿದೆ. ಈ ನಿಟ್ಟಿನಲ್ಲಿ, ವಿಜ್ಞಾನಿಗಳು ಮುಂದಿಟ್ಟಿರುವ ’ಇನ್ಫೇಷನ್ ಥಿಯರಿ’ ಕ್ವಾಂಟಂ ಕಾಸ್ಮಾಲಜಿಯ ಅತ್ಯಂತ ಮಹತ್ವದ ಮೈಲುಗಲ್ಲು ಎಂದು ಹೇಳಬಹುದು. ಈ ಸಿದ್ಧಾಂತದ ಪ್ರಕಾರ ಬಿಗ್ ಬ್ಯಾಂಗ್ ಆದ 10-33 ಸೆಕೆಂಡುಗಳ ನಂತರ ವಿಶ್ವವು ಸುಮಾರು 10-36

ಸೆಕೆಂಡುಗಳವರೆಗೆ ತೀವ್ರಗತಿಯ ಹಿಗ್ಗುವಿಕೆಗೆ ಒಳಗಾಯಿತು. ಇದಕ್ಕೆ ಕಾರಣವಾದದ್ದು ಕ್ವಾಂಟಂ ಫ್ಲಕ್ಚುವೇಶನ್. ಇದು ಹೈಸೆನ್‌ಬರ್ಗ್ ಅನ್ಸರ್ಟನಿಟಿ ತತ್ವದ ಪರಿಣಾಮವಾಗಿ ಕಾಣಿಸುವ ನಿರ್ವಾತ ಶಕ್ತಿಯ ಸ್ಥಿತಿ-ಗತಿಗೆ ಸಂಬಂಧಿಸಿದ್ದು. ಇನ್ನು, ವಿಶ್ವದ ವಿಕಾಸದ ಮೊದಲ ಕೆಲವು ಕ್ಷಣಗಳಲ್ಲಿ ಸೃಷ್ಟಿಯಾದ ಬಲಗಳು ಮತ್ತು ಕಣಗಳಿಗೆ ಕೆಲವು ನಿರ್ದಿಷ್ಟ ನಿಯತಾಂಕಗಳು (ಕಾನ್ಸ್‌ಟೆಂಟ್ಸ್)08 ಹೇಗೆ ನಿಗದಿಯಾದವು ಎನ್ನುವುದು ಮತ್ತೊಂದು ಮಹತ್ವದ ಪ್ರಶ್ನೆಯಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಹಲವಿಶ್ವಗಳ ಸಿದ್ಧಾಂತ, ಹಲ-ಆಯಾಮಗಳ (ಮಲ್ಟಿ ಡೈಮೆಂಶನಲ್) ವಿಶ್ವದ ಸಿದ್ಧಾಂತ; ಹೀಗೆ ಬಗೆಬಗೆಯ ಸಿದ್ಧಾಂತಗಳನ್ನು ಹರಿಬಿಡಲಾಗಿದೆ. ಆದರೆ, ಹಾಕಿಂಗ್ಸ್‌ನಂತಹ ಅನೇಕ ಮೇರು ವಿಜ್ಞಾನಿಗಳು ಸೃಷ್ಟಿಯಲ್ಲಿ ಒಂದು ಪ್ರಜ್ಞಾಪೂರ್ವಕ ಆಯ್ಕೆಯ ಕೈವಾಡವಿದೆ ಎಂದು ಸೂಚಿಸುವಂತೆ (ಕೆಲವರ ಪ್ರಕಾರ ದೇವರೆಂಬ ವಿರಾಟ್ ಪ್ರಜ್ಞೆಯೊಂದನ್ನು ಸೂಚಿಸುವಂತೆ) ಮೇಲ್ನೋಟಕ್ಕೆ ಭಾಸವಾಗುವ, ಆದರೆ ಕ್ವಾಂಟಂ ತತ್ವದಿಂದಲೇ ತಾರ್ಕಿಕವಾಗಿ ಮಂಡಿಸಬಹುದಾದ ’ಆಂಥ್ರೊಪಿಕ್ ಪ್ರಿನ್ಸಿಪಲ್‌’ನಲ್ಲಿ ಆ ನಿಯತಾಂಕ ಸಮಸ್ಯೆಗೆ ಪರಿಹಾರವಿದೆಯೆಂದು ನಂಬಿರುತ್ತಾರೆ.

ಆ ಪ್ರಿನ್ಸಿಪಲ್‌ನ ಪ್ರಕಾರ ಮುಂದೊಂದು ದಿನ ವಿಶ್ವವನ್ನು ’ಅಬ್ಸರ್ವ್’ ಮಾಡಬಲ್ಲ ಮನುಷ್ಯರಂತಹ ಬುದ್ಧಿಶಕ್ತಿಯುಳ್ಳ ಜೀವಿಗಳು ವಿಕಾಸ ಹೊಂದಲು ಅನುಕೂಲವಾಗುವಂತೆ ಆ ನಿಯತಾಂಕಗಳ ಬೆಲೆಯು ನಿಗದಿಯಾಗಿವೆ! ಕ್ವಾಂಟಂ ಥಿಯರಿಯ ಪ್ರಕಾರ ಒಂದು ವಸ್ತುವನ್ನು ಅಬ್ಸರ್ವ್ ಮಾಡಿದಾಗಷ್ಟೇ ಅದು ಒಂದು ನಿರ್ದಿಷ್ಟ ಸ್ಥಿತಿಯನ್ನು ಪಡೆದುಕೊಳ್ಳುತ್ತದೆ. ನಮಗೆ ರಿಯಲ್ ಎಂದು ಗೋಚರಿಸುವುದು ಆ ಸ್ಥಿತಿಯೇ ಆಗಿದೆ. ಪರಿವೀಕ್ಷಣೆಯ ಮುಂಚಿನ ಸ್ಥಿತಿಯನ್ನು ಗಣಿತದ ಸೂಪರ್‌ಪೊಸಿಶನ್ ಪರಿಕಲ್ಪನೆಯ ಮೂಲಕ ಸಮರ್ಥವಾಗಿ ವಿವರಿಸಬಹುದೇ ಹೊರತು, ಅದು ಯಾವ ರಿಯಾಲಿಟಿಯನ್ನು ಸೂಚಿಸುತ್ತದೆ ಎನ್ನುವುದಕ್ಕೆ ಇಂದಿಗೂ ವಿಜ್ಞಾನಿಗಳ ಬಳಿ ಉತ್ತರವಿಲ್ಲ. ಹಾಗಾಗಿ, ಸದ್ಯದ ಅರಿವಿನ ನೆಲೆಯಿಂದ ಹೇಳುವುದಾದರೆ, ವಿಶ್ವವು ತನ್ನ ರಿಯಾಲಿಟಿಯನ್ನು ತೋರಿಸುವುದು ಅಬ್ಸರ್ವೇಶನ್‌ನ ಕಾರಣದಿಂದಾಗಿಯೇ ಎನ್ನಬಹುದು. ನಾವು ವಿವರಿಸಲು ಹೊರಟಿರುವುದು ಈ ರಿಯಲ್ ವಿಶ್ವವನ್ನೇ ಆದ್ದರಿಂದ ಹಾಗೂ ನಮ್ಮ ಅಬ್ಸರ್ವೇಶನ್ ಇಲ್ಲದೆ ರಿಯಾಲಿಟಿಗೆ ನಿಶ್ಚಿತ ಅರ್ಥ ಇಲ್ಲದಿರುವುದರಿಂದ, ರಿಯಲ್ ಆಗಿ ಕಾಣಿಸುವ ವಿಶ್ವವು ಸಹಜವಾಗಿಯೇ ನಮ್ಮನ್ನು ಸೃಷ್ಟಿಸಲೇಬೇಕಿತ್ತಲ್ಲದೆ, ಇದಕ್ಕೆ ತಕ್ಕಂತೆ ನಿಯತಾಂಕಗಳು ಕೂಡ ನಿಗದಿಯಾಗಬೇಕಿತ್ತು. ಅಬ್ಸರ್ವ್ ಮಾಡಲು ಜೀವಿಗಳೇ ಇಲ್ಲದ ವಿಶ್ವವು ಈ ಅರ್ಥದಲ್ಲಿ ರಿಯಲ್ ಆಗಿರಲು ಸಾಧ್ಯವಿಲ್ಲ. ಇದು, ಕ್ವಾಂಟಂ ಥಿಯರಿ ಮುಖಾಂತರ ಆಂಥ್ರೊಪಿಕ್ ಪ್ರಿನ್ಸಿಪಲ್‌ಅನ್ನು ತಲುಪಬಹುದಾದ ತರ್ಕದ ಒಂದು ಸ್ಥೂಲ ವಿವರಣೆ.09

ಕೊನೆಯ ಮಾತು

ಕ್ವಾಂಟಂ ಕಾಸ್ಮಾಲಜಿಯ ಭಾಗವೆಂದು ನಾವು ಇಲ್ಲಿಯವರೆಗೆ ಚರ್ಚಿಸಿರುವ ವಿಚಾರಗಳು ಯಾವ ಸೃಷ್ಟಿ ಪುರಾಣಗಳಿಗೂ ಕಡಿಮೆಯಿಲ್ಲದಷ್ಟು ಅದ್ಭುತವಾಗಿವೆ. ಆದರೆ, ಅವುಗಳ ಸತ್ಯಾಸತತೆಗಳನ್ನು ತೂಗಿಯಳೆಯಲು ಬೇಕಾದ ಸಾಕ್ಷ್ಯಾಧಾರಗಳು ಇಲ್ಲಿಯವರೆಗೂ ಸಿಕ್ಕಿಲ್ಲ. ಕ್ವಾಂಟಂ ತತ್ವ ಹಾಗೂ ಸಾಸಾಸಿಯು ಪ್ರತ್ಯೇಕವಾಗಿ ಹೇಗೆ ವಿಜ್ಞಾನದ ತತ್ವವೆಂಬ ಸ್ಥಾನ ಪಡೆದಿವೆಯೋ, ಹಾಗೆ ಕ್ವಾಂಟಂ ಕಾಸ್ಮಾಲಜಿಯ ಈವರೆಗಿನ ಥಿಯರಿಗಳು ಪಡೆದಿಲ್ಲ. ಸದ್ಯದ ಮಟ್ಟಿಗೆ ಕ್ವಾಂಟಂ ಕಾಸ್ಮಾಲಜಿಯು ಅದ್ಭುತ ಪುರಾಣಗಳ ಬೃಹತ್ ಕಥಾನಕವೇ ಆಗಿದೆ. ತಾವು ಕಟ್ಟುಕಥೆಗಳಲ್ಲ ಎಂದು ಬಿಂಬಿಸಿಕೊಳ್ಳಲು ಅವಕ್ಕಿರುವ ಒಂದೇ ಒಂದು ಆಧಾರವೆಂದರೆ ಅವು ಬಳಸುವ ಗಣಿತ. ಆ ಗಣಿತದ ಭಾಷೆಯಿಂದಷ್ಟೇ ಕ್ವಾಂಟಂ ಕಾಸ್ಮಾಲಜಿಯ ಸರಿಯಾದ ವಿವರಣೆ ಮತ್ತು ಸಂವಹನ ಸಾಧ್ಯ. ಅರಿವಿನಾಚೆಗಿನ ಬೆಡಗನ್ನು ಸವಿಯಲು, ಬೆರಗನ್ನು ಹೊಂದಲು ಕೂಡ..

ಕೊನೆಯ ಟಿಪ್ಪಣಿಗಳು

01. ನೋಡುವುದು ಎಂದರೆ ಕಣ್ಣಿನಿಂದ ನೋಡುವುದು ಎಂದೇ ಆಗಬೇಕಿಲ್ಲ. ಅಳೆಯುವ ಯಾವುದೇ ಉಪಕರಣವನ್ನು ಬಳಸಿ, ಅಳೆಯುವುದು ಕೂಡ ಒಂದು ಬಗೆಯ ನೋಡುವಿಕೆ, ಕಾಣುವಿಕೆಯೇ ಆಗುತ್ತದೆ.

02. ಒಂದು ಅಸ್ಥಿರ ಭೌತ ವ್ಯವಸ್ಥೆಯನ್ನು (ಅನ್‌ಸ್ಟೇಬಲ್ ಸಿಸ್ಟಮ್‌ಅನ್ನು) ನಿರಂತರವಾಗಿ ನೋಡುವ ಮುಖಾಂತರ ಅದು ಎಂದೂ ಡೀಕೇ ಆಗದಂತೆ (ಅಂದರೆ ಅಸ್ಥಿರತೆಯಿಂದ ಸ್ಥಿರತೆಯೆಡೆಗೆ ಸಾಗದಂತೆ) ತಡೆಯಬಹುದು ಎಂಬ ಪ್ರಮೇಯವನ್ನು ಭಾರತೀಯ ವಿಜ್ಞಾನಿಗಳಾದ ಬಿ ಮಿಶ್ರಾ ಹಾಗೂ ಇ ಸಿ ಜಿ ಸುದರ್ಶನ್ ಮುಂದಿಟ್ಟರು. ಇದನ್ನು ಕ್ವಾಂಟಂ ಜ಼ೀನೋ ಎಫೆಕ್ಟ್ ಎಂದು ಗುರುತಿಸಲಾಗಿದೆ.

03. ಆದರೂ, ದೊಡ್ಡ ಗಾತ್ರದ ಭೌತವಸ್ತುಗಳ ಕೆಲವು ಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ಕ್ವಾಂಟಂ ಥಿಯರಿಯ ಅಗತ್ಯವಿದೆ. ಉದಾಹರಣೆಗೆ, ಪ್ರತಿಯೊಂದು ವಸ್ತುವೂ ಏಕೆ ಒಂದು ನಿರ್ದಿಷ್ಟ ಆಕಾರವನ್ನೂ, ಗುಣ-ಲಕ್ಷಣಗಳನ್ನೂ ಹೊಂದಿರುತ್ತದೆ ಎಂದು ವಿವರಿಸಲು ಕ್ವಾಂಟಂ ಥಿಯರಿಯ ’ಪೌಲಿಯ ಹೊರಗಿಡುವಿಕೆಯ ತತ್ವ’ಕ್ಕೆ (ಪೌಲೀಸ್ ಎಕ್ಸ್‌ಕ್ಲೂಸಿವ್ ಪ್ರಿನ್ಸಿಪಲ್‌ಗೆ) ಮೊರೆ ಹೋಗಲೇಬೇಕು. ಈ ತತ್ವವಿಲ್ಲದೆ ಹೋಗಿದ್ದರೆ, ಭಿನ್ನಭಿನ್ನ ವಸ್ತುಗಳೇ ರೂಪುಗೊಳ್ಳುತ್ತಿರಲಿಲ್ಲ.

04. ಇವೆಂಟ್ ಹೊರೈಜ಼ನ್ – ಕಪ್ಪುಕುಳಿಯ ಸುತ್ತಲಿನ ಹೊರಮೈ. ಬೆಳಕನ್ನೂ ಒಳಗೊಂಡಂತೆ ಯಾವುದೇ ವಸ್ತುವು ಈ ಹೊರಮೈಯ ದಾಟಿ ಒಳಗೆ ಹೊಕ್ಕಿತೆಂದಾದರೆ, ಅದು ಕಪ್ಪುಕುಳಿಯ ಗುರುತ್ವಬಲದಿಂದ ತಪ್ಪಿಸಿಕೊಂಡು ಹೊರಬರಲು ಸಾಧ್ಯವಿಲ್ಲ.

ಇದನ್ನೂ ಓದಿ: ಬೆಳಕು ಸಾಯುವ ಲೋಕದ ಮೇಲಿಷ್ಟು ಬೆಳಕು; ಕಪ್ಪುಕುಳಿಗಳ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಅಧ್ಯಯನಗಳನ್ನು ಕುರಿತು

05. ಕ್ವಾಂಟಂ ತತ್ವದ ಪ್ರಕಾರ ಯಾವುದೇ ನಿರ್ದಿಷ್ಟ ದೇಶ-ಕಾಲದಲ್ಲಿ ಸಣ್ಣ ಪ್ರಮಾಣದ ಶಕ್ತಿ ಇದ್ದೇ ಇರುತ್ತದೆ. ಆದರೆ, ಸಾಸಾಸಿಯ ಪ್ರಕಾರ ಶಕ್ತಿಯು ಸುತ್ತಲಿನ ದೇಶ-ಕಾಲವನ್ನು ಬಾಗಿಸುತ್ತದೆ. ಹಾಗಾಗಿ, ಕ್ವಾಂಟಂ ತತ್ವ ಮತ್ತು ಸಾಸಾಸಿಯನ್ನು ಒಟ್ಟಿಗೆ ಅನ್ವಯಿಸಿ ನೋಡಿದರೆ, ನಮ್ಮ ಜಗತ್ತಿನ ದೇಶ-ಕಾಲವು ತನ್ನ ವ್ಯಾಕ್ಯೂಮ್ ಶಕ್ತಿಯ ಕಾರಣಕ್ಕಾಗಿ ಸಂಪೂರ್ಣವಾಗಿ ಬಾಗಿ, ಮುರುಟುಗೊಳ್ಳಬೇಕಿತ್ತು. ಅಂದರೆ, ಈಗ ಕಾಣುವಂತೆ ವಿಶ್ವವು ವಿಶಾಲವಾಗಿರುತ್ತಿರಲಿಲ್ಲ. ಅಷ್ಟೇ ಏಕೆ, ಚಂದ್ರಾರ್ಕತಾರೆಗಳ ಹುಟ್ಟೂ ಸಾಧ್ಯವಾಗುತ್ತಿರಲಿಲ್ಲ. ಕ್ವಾಂಟಂ ತತ್ವ ಹಾಗೂ ಸಾಸಾಸಿಯ ನಡುವಿನ ಎಣ್ಣೆ ಸೀಗೇಕಾಯಿ ಸಂಬಂಧಕ್ಕೊಂದು ಪ್ರಬಲ ನಿದರ್ಶನವಿದು.

06. ಎಂಟ್ರೊಪಿ ಎನ್ನುವುದು ಸ್ಥೂಲಾರ್ಥದಲ್ಲಿ, ವಸ್ತುಗಳ ಸಮೂಹದ ಅವ್ಯವಸ್ಥಿತ ಸ್ಥಿತಿಯನ್ನು ಸೂಚಿಸುವ ಪರಿಭಾಷೆಯಾಗಿದೆ. ವಸ್ತುಗಳನ್ನು ಬಲ ಅಥವಾ ಶಕ್ತಿಪ್ರಯೋಗದ ಮುಖಾಂತರ ಕಾಳಜಿಯಿಂದ ಅಣಿಗೊಳಿಸಿದಾಗಷ್ಟೇ ಅವು ವ್ಯವಸ್ಥಿತಗೊಳ್ಳುತ್ತವೆ. ಆ ಬಲ ಇಲ್ಲ ಶಕ್ತಿಯ ಪ್ರಯೋಗವಿಲ್ಲದಿದ್ದಲ್ಲಿ, ವಸ್ತುಗಳು ಹೆಚ್ಚು ಹೆಚ್ಚು ಅವ್ಯವಸ್ಥಿತಗೊಳ್ಳುತ್ತ ಸಾಗುತ್ತವೆ (ಅಂದರೆ ಎಂಟ್ರೊಪಿ ಹೆಚ್ಚುತ್ತದೆ). ಈ ನಿಯಮವೇ ಥರ್ಮೋಡೈನಾಮಿಕ್ಸ್‌ನ ಎರಡನೆಯ ನಿಯಮವಾಗಿದೆ.

07. ವಿಶ್ವದ ಸರಾಸರಿ ತಾಪಮಾನವೆಂದರೆ ಬಿಗ್ ಬ್ಯಾಂಗ್‌ನ ಕುರುಹು ಎಂದು ಪರಿಗಣಿಸಲಾಗಿರುವ ಮೈಕ್ರೋವೇವ್ ಬ್ಯಾಕ್‌ಗ್ರೌಂಡ್ ರೇಡಿಯೇಶನ್‌ನ (ಸಿಎಂಬಿ) ತಾಪಮಾನ. ಅದು ಸದ್ಯ 3 ಕೆಲ್ವಿನ್‌ನಷ್ಟಿದೆ.

08. ಇವುಗಳನ್ನು ಫಂಡಮೆಂಟಲ್ ಕಾನ್ಸ್‌ಟೆಂಟ್ಸ್ ಆಫ್ ನೇಚರ್ ಎಂದು ಕರೆಯುವರು. ಉದಾಹರಣೆಗೆ, ಎಲೆಕ್ಟ್ರಾನ್‌ನ ಚಾರ್ಜ್‌ನ ಬೆಲೆ, ಪ್ಲಾಂಕ್ ಕಾನ್ಸ್‌ಟೆಂಟ್‌ನ ಬೆಲೆ ಇತ್ಯಾದಿ. ಇವುಗಳಲ್ಲಿ ಸ್ವಲ್ಪ ವ್ಯತ್ಯಾಸವಾಗಿದ್ದರೂ ನಮ್ಮ ವಿಶ್ವ ಇಂದಿನಂತೆ ಇರುತ್ತಿರಲಿಲ್ಲ. ಗ್ರಹ, ತಾರೆ, ನಕ್ಷತ್ರಮಂಡಲಗಳೂ ಇರುತ್ತಿರಲಿಲ್ಲ.

09. ಹಲವು ವಿಜ್ಞಾನಿಗಳು ಈ ಪ್ರಿನ್ಸಿಪಲ್ ಅನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆಂದು, ಇದನ್ನು ಶಾಂಕರ ವೇದಾಂತದೊಂದಿಗೋ, ಅಲ್ಲಮನ ಬಯಲು ತತ್ವದೊಂದಿಗೋ ಇಲ್ಲ ವಿಜ್ಞಾನವಾದಿ (ಇಲ್ಲಿ ವಿಜ್ಞಾನ ಎಂಬ ಪದವು ಸಾಯನ್ಸ್ ಎಂಬ ಆಧುನಿಕ ಅರ್ಥವನ್ನು ಪಡೆದುಕೊಂಡಿಲ್ಲ) ಬೌದ್ಧರ ಪ್ರಜ್ಞಾವಾದದೊಂದಿಗೋ ಹೋಲಿಸಿ, ವಿಜ್ಞಾನಿಗಳು ಹೇಳಿರುವುದನ್ನೇ ನಮ್ಮವರು ಹೇಳಿದ್ದಾರೆ ನೋಡಿ ಎಂದು ವಾದಿಸುವ ಬಯಕೆ ಕೆಲವರಲ್ಲಿ ಮೂಡಬಹುದು. ಆದರೆ, ’ವಿಜ್ಞಾನ/ಸಾಯನ್ಸ್’ ಎನ್ನುವುದು ತೀರ್ಮಾನಗಳನ್ನು ಸೂಚಿಸುವುದಿಲ್ಲ ಬದಲಿಗೆ, ತೀರ್ಮಾನಕ್ಕೆ ಬರಲು ಬಳಸಲಾದ ಮೆಥಡಾಲಜಿಯನ್ನು ಸೂಚಿಸುತ್ತದೆ ಎನ್ನುವ ಅಂಶವನ್ನು ನಾವು ಮರೆಯಬಾರದು. ಪ್ರಜ್ಞಾವಾದದ ಒಂದು ತೀರ್ಮಾನ ಆಧುನಿಕ ವಿಜ್ಞಾನದ ತೀರ್ಮಾನವನ್ನೇ ಹೋಲುತ್ತದೆಯೆಂದ ಮಾತ್ರಕ್ಕೆ ಪ್ರಜ್ಞಾವಾದವು ವೈಜ್ಞಾನಿಕ ಸತ್ಯವನ್ನು ಹೇಳಿದೆ ಎಂದಾಗುವುದಿಲ್ಲ. ವೈಜ್ಞಾನಿಕ ಸತ್ಯವೆಂದರೆ ವಿಜ್ಞಾನದ ಮೆಥಡಾಲಜಿಯ ಮೂಲಕ ಸಾಧಿತವಾದ ಸತ್ಯವಷ್ಟೇ. ಆ ಮೆಥಡಾಲಜಿಗೆ ಹೊರತಾದ ಬೇರೆ ಮೆಥಡಾಲಜಿಯ ಮುಖಾಂತರ ಅದೇ ನಿರ್ಣಯಕ್ಕೆ ಬರಬಹುದಾದರೂ ಅಂತಹ ನಿರ್ಣಯಕ್ಕೆ ವೈಜ್ಞಾನಿಕ ಸ್ಥಾನ-ಮಾನವನ್ನು ನೀಡಲು ಬರುವುದಿಲ್ಲ. ಇನ್ನು, ಆಂಥ್ರೊಪಿಕ್ ಪ್ರಿನ್ಸಿಪಲ್‌ಗೆ ಪರ್ಯಾಯವಾಗಿ ಹಲ-ವಿಶ್ವಗಳ ಸಿದ್ಧಾಂತ, ಹಲ-ಆಯಾಮಗಳ ಸಿದ್ಧಾಂತಗಳಿದ್ದು, ಅವೆಲ್ಲವೂ ನಮ್ಮ ರಿಯಲ್ ವಿಶ್ವವನ್ನು ವಿವರಿಸುವ ಸಾಮರ್ಥ್ಯವನ್ನು ಥಿಯೊರೆಟಿಕಲಿ ಹೊಂದಿವೆ.

ಅಮರ್ ಹೊಳೆಗದ್ದೆ

ಅಮರ್ ಹೊಳೆಗದ್ದೆ
ಎಂಜಿನಿಯರಿಂಗ್ ಪದವೀಧರರಾದ ಅಮರ್, ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ ಹೇಳಿಕೊಡುವರು ಹಾಗೂ ತುಮಕೂರು ವಿ.ವಿ.ಯ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿ

ಇದನ್ನೂ ಓದಿ ಕ್ವಾಂಟಂ ಕಾಸ್ಮಾಲಜಿಯ ವಿಸ್ಮಯಲೋಕಕ್ಕೆ ಹೀಗೆ ಬನ್ನಿ; ಭಾಗ-1

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆಯೂ ಯೋಚಿಸಬಹುದು: ಸುಪ್ರೀಂ ಕೋರ್ಟ್‌

0
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೂಡ ನಾವು ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆ ಹೇಳಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ...