ಪೂಜೇತಯಾತು ಏವ ಪರಪಾಸಂಡಾತೇನತನ ಪ್ರಕರಣೇನ
ಏವಂ ಕರುಂಆತ್ಪಪಾಸಂಡಂ ಚ ಬಢಯತಿ ಪರಪಾಸಂಡಸ ಚ ಉಪಕರೋತಿ
ತದಂ-ಅನ್ನಥಾಕರೋತೋಆತ್ಪಪಾಸಂಡಂ ಚ ಛಣತಿ ಪರ ಪಾಸಂಡಸ ಚ ಪಿ ಅಪಕರೋತಿ…
ತ ಸಮವಾಯೋ ಏವ ಸಾಧುಕಿಂತಿಅನ್ನಂ-ಅನ್ನಸದಮ್ಮಂ ಸ್ರುನಾರು ಚ ಸುಸುಂಸೇರ ಚ.
ಏವಂ ಹಿ ದೇವಾನಂಪಿಯಸ ಇಚ್ಛಾ ಕಿಂತಿ ಸವಪಾಸಂಡಾ ಬಹುಸ್ರುತಾ ಚ ಅಸು ಕಲಾಣಾಗಮಾ ಚ ಅಸು.
ಎಲ್ಲ ಸಂದರ್ಭದಲ್ಲೂ ಅನ್ಯಮತಗಳನ್ನು ಗೌರವಿಸಬೇಕು.
ಹಾಗೆ ಗೌರವಿಸುವುದರಿಂದ ವ್ಯಕ್ತಿಯು ತನ್ನ ಮತವನ್ನು ಬೆಳೆಸುತ್ತಾನಲ್ಲದೆ, ಅನ್ಯ ಮತಗಳಿಗೂ ಉಪಕಾರಿಯಾಗಿರುತ್ತಾನೆ.
ಹಾಗೆ ಗೌರವಿಸದಿರುವುದರಿಂದ ವ್ಯಕ್ತಿಯು ತನ್ನ ಮತಕ್ಕೆ ಹಾನಿಯುಂಟು ಮಾಡುತ್ತಾನಲ್ಲದೆ, ಅನ್ಯ ಮತಗಳಿಗೂ ಅಪಕಾರಿಯಾಗಿರುತ್ತಾನೆ…
ಹಾಗಾಗಿ, ಸಮವಾಯವೊಂದೇ (ಬೇರ್ಪಡಿಸಲಾಗದಂತೆ ಕೂಡುವುದೊಂದೇ) ಸಾಧುವಾದದ್ದು. ಅಂದರೆ, ಒಬ್ಬರು ಮತ್ತೊಬ್ಬರ ಧಮ್ಮವನ್ನು ಕೇಳಬೇಕು ಹಾಗೂ ಒಪ್ಪಬೇಕು.
ಏಕೆಂದರೆ, ಎಲ್ಲ ಮತಗಳಲ್ಲೂ ಜ್ಞಾನವು ಸಮೃದ್ಧಗೊಳ್ಳಬೇಕು ಮತ್ತು, ತತ್ವವು ಪರಿಶುದ್ಧಗೊಳ್ಳಬೇಕು ಎನ್ನುವುದು ದೇವಾನಂಪ್ರಿಯನ ಇಚ್ಛೆಯಾಗಿದೆ.
(ಮಗಧ ದೊರೆ ಅಶೋಕ ಗಿರ್ನಾರ್‌ನಲ್ಲಿ ಹಾಕಿಸಿದ 12ನೇ ಶಾಸನ – ಸೆಲೆ: ಇನ್ಸ್‌ಕ್ರಿಪ್ಶನ್ಸ್ ಆಫ್ ಅಶೋಕ, ಯುಜೀನ್ ಹಲ್ಟ್ಶ್)
ಮಗಧ ಸಾಮ್ರಾಜ್ಯದ ಚಕ್ರವರ್ತಿ ಅಶೋಕನು ಸರಿಸುಮಾರು 33 ಕಲ್ಬರಹಗಳನ್ನು (ಎಡಿಕ್ಟ್ಸ್) ಹಾಕಿಸಿದ್ದಾನೆಂದು ನಮಗೆ ತಿಳಿದುಬರುತ್ತದೆ. ಪ್ರತಿ ಕಲ್ಬರಹದಲ್ಲೂ ಅನೇಕ ಶಾಸನಗಳಿವೆ. ಭರತಖಂಡದಲ್ಲಿ ಶಾಸನಗಳನ್ನು ಹಾಕಿಸುವ ಪರಿಪಾಠಕ್ಕೆ ಚಾಲನೆ ನೀಡಿದವನು ಅಶೋಕನೇ. ಹೀಗೆ ಮಾಡುವ ಮೂಲಕ ಭಾರತೀಯ ನುಡಿಗಳ ಲಿಪಿಯ ಬೆಳವಣಿಗೆಗೆ ಕೂಡ ಕಾರಣನಾದ. ಇದು 2,300 ವರ್ಷಗಳ ಹಿಂದಿನ ಕಥೆ.
ಟಿ.ಎಂ. ಕೃಷ್ಣ ಎಂದೇ ಮನೆಮಾತಾಗಿರುವ ತೋಡೂರ್ ಮಡಾಬುಸಿ ಕೃಷ್ಣ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿರುವವರು. ಪ್ರತಿಷ್ಠಿತ ರೇಮನ್ ಮ್ಯಾಗ್ಸಸೆ ಪ್ರಶಸ್ತಿಗೆ ಆಯ್ಕೆಯಾದವರು. ಸಂಗೀತಶಾಸ್ತ್ರದಲ್ಲಿ ಅಪಾರ ವಿದ್ವತ್ತು, ಹಾಡಿನ ಸ್ಪಷ್ಟ ಹಾಗೂ ’ರಾಗ ಭಾವ’ ತುಂಬಿದ ನಿರೂಪಣೆ, ಹೊಸ ಪ್ರಯೋಗಗಳು; ಇವು, ಕೃಷ್ಣ ಅವರನ್ನು ಈ ಕಾಲದ ಬಹಳ ವಿಶಿಷ್ಟ ಸಂಗೀತಗಾರರನ್ನಾಗಿ ಮಾಡಿದೆ. ಇದು 21ನೇ ಶತಮಾನದ ಕಥೆ.
ಎರಡು ಸಹಸ್ರಮಾನಕ್ಕೂ ಮೀರಿದ ಅಂತರವಿರುವ ಈ ಕಥೆಗಳಲ್ಲಿ ಒಂದು ಸಮಾನ ಅಂಶವಿದೆ. ಅದು, ಅಂತರಂಗದ ಶೋಧ ಮತ್ತು ನಿರಂತರ ಪರ್ಯಾಲೋಚನೆಯಿಂದ ಪ್ರಜ್ಞೆಯನ್ನು ಜೀವಂತವಾಗಿರಿಸುವ, ಲೋಕಾಭಿಮುಖಿಯಾಗಿಸುವ ಪ್ರಯತ್ನ. ಈ ಪ್ರಯತ್ನದಿಂದಾಗಿ ಅಶೋಕನು ರಾಜದಂಡದಿಂದ ರಾಜಾಧಿಕಾರದ ಬಾಸುಂಡೆ ಬರಿಸುವ ಬದಲು ಪ್ರೀತಿ, ಕಾರುಣ್ಯದ ಆಶಯಗಳನ್ನು ಕೊರೆದನು. ಇದೇ ಪ್ರಯತ್ನದಿಂದಾಗಿಯೇ ಟಿ.ಎಂ. ಕೃಷ್ಣ, ಕರ್ನಾಟಕ ಸಂಗೀತ ಮತ್ತು ಭಾರತೀಯ ಸಮಾಜದ ಕೆಲವು ಸಾಂಪ್ರದಾಯಿಕ ನಂಬಿಕೆಗಳನ್ನು ಪ್ರಶ್ನಿಸುತ್ತಿದ್ದಾರೆ, ಸಾಮಾಜಿಕ ನ್ಯಾಯದ ಬಗ್ಗೆ ಮತ್ತೆ ಮತ್ತೆ ಮಾತನಾಡುತ್ತಲೇ ಇದ್ದಾರೆ. ಈ ಪ್ರಯತ್ನವೇ ಆ ಎರಡೂ ಕಥೆಗಳನ್ನು ಬಹಳ ವಿಶಿಷ್ಟವಾಗಿ ಬೆಸೆದು, ’ದಿ ಎಡಿಕ್ಟ್ ಪ್ರಾಜೆಕ್ಟ್’ನ್ನು ರೂಪಿಸಿದೆ.
ಧಮ್ಮಕ್ಕೆ ಮತಾಂತರವೂ ನಾದಕ್ಕೆ ರೂಪಾಂತರವೂ
ಕಳಿಂಗ ಯುದ್ಧದ ಬಳಿಕ ಅಶೋಕ ಬೌದ್ಧ ಧರ್ಮಕ್ಕೆ ಮತಾಂತರಗೊಂಡ. ಅಕ್ಟೋಬರ್ 14, 1956ರಂದು ಅಂಬೇಡ್ಕರ್ ಬುದ್ಧನ ಮತವನ್ನು ಸ್ವೀಕರಿಸಿದರು. ಈ ಇಬ್ಬರೂ, ಬೌದ್ಧ ಧಮ್ಮವನ್ನು ಗ್ರಹಿಸಿದ್ದು ಭಿನ್ನವಾಗಿತ್ತು. ಸ್ವಾನುಭವದಿಂದ ಅಹಿಂಸೆ ಹಾಗೂ ಕಾರುಣ್ಯದ ಅಗತ್ಯವನ್ನರಿತ ಅಶೋಕ, ಆ ಮೌಲ್ಯಗಳನ್ನು ಮೊದಲು ಬೌದ್ಧ ಧರ್ಮದ ಪರಿಭಾಷೆಯಲ್ಲಿ ಅರಿತು, ಆನಂತರ ಜನರ ಬಳಿಗೆ ಹೊತ್ತೊಯ್ದ. ಆದರೆ, ಅಂಬೇಡ್ಕರ್‌ಗೆ ಬುದ್ಧ ಮಾರ್ಗವು ಈ ನೆಲದ ಶೋಷಕ ಸಾಮಾಜಿಕ ವ್ಯವಸ್ಥೆಗೆ ಪರ್ಯಾಯ ಒದಗಿಸುವ ದಾರಿಯಾಗಿತ್ತು. ಸಮಾನತೆ, ಭ್ರಾತೃತ್ವದ ಕನ್ನಡಿಯಲ್ಲಿ ಬುದ್ಧನ ಧಮ್ಮ ಈ ದೇಶಕ್ಕೆ ಅನಿವಾರ್ಯವೆಂದು ಅವರಿಗೆ ಕಂಡಿತು. ಆದರೆ, ಈ ಇಬ್ಬರ ಮತಾಂತರವು ಬೌದ್ಧ ಧಮ್ಮವನ್ನು ಬೆಳೆಸಿತಲ್ಲದೆ, ಮನುಜ ಧಮ್ಮವನ್ನೇ ಎತ್ತಿ ಹಿಡಿಯಿತು. ಇದನ್ನರಿತೇ ಕೃಷ್ಣ ಅವರು ಅಶೋಕನ ಕಲ್ಬರಹಗಳಿಂದ ಆಯ್ದ ಕೆಲವು ಸಾಲುಗಳನ್ನು ಸಂಗೀತಕ್ಕಳವಡಿಸಿ ಅಕ್ಟೋಬರ್ 14, 2020ರಂದು, ಅಂಬೇಡ್ಕರ್ ಮತಾಂತರಗೊಂಡ ದಿನದಂದು ಲೋಕಾರ್ಪಣೆ ಮಾಡಿದರು.
“ಅಶೋಕನ ಬಗ್ಗೆ ಶಾಲೆಯಲ್ಲಿ ಒಂದು ಪುಟದಷ್ಟು ಓದಿದ್ದ ನೆನಪು. ಅಲ್ಲಿನ ವಿಚಾರವನ್ನು ಅಲ್ಲಿಯೇ ಬಿಟ್ಟಿದ್ದೆ. ಕೆಲವು ವರ್ಷಗಳ ಹಿಂದೆ ಗೋಪಾಲಕೃಷ್ಣ ಗಾಂಧಿಯವರು ಅಶೋಕನ ಕಲ್ಬರಹಗಳಲ್ಲಿರುವ ಶಾಸನಗಳನ್ನು ಓದು ಎಂದು ಸಲಹೆ ನೀಡಿದರು. ಅಷ್ಟೂ ಶಾಸನಗಳನ್ನು ಓದಲು ಸರಿಸುಮಾರು 8 ತಿಂಗಳು ಹಿಡಿಯಿತು. ಅಷ್ಟರಲ್ಲಾಗಲೇ ಆ ಶಾಸನಗಳನ್ನು ರಾಗಕ್ಕಳವಡಿಸಿ ಹಾಡುವ ಬಯಕೆಯೂ ಮೂಡಿತ್ತು” ಎಂದು ಕೃಷ್ಣ ಅವರು ’ದಿ ಎಡಿಕ್ಟ್ ಪ್ರಾಜೆಕ್ಟ್’ನ ಜನ್ಮ ರಹಸ್ಯವನ್ನು ಬಿಚ್ಚಿಡುತ್ತಾರೆ. ಆದರೆ, ಆ ಶಾಸನಗಳನ್ನೇ ಹಾಡಬೇಕು ಎಂದು ಅನಿಸಿದ್ದೇಕೆ? ಈ ಕುರಿತು ಕೃಷ್ಣ ಹೀಗೆ ಹೇಳುತ್ತಾರೆ -“ಒಬ್ಬಳು ಕಲಾವಿದಳು, ತನ್ನ ಒಳಗೂ ಹೊರಗೂ ಏನೇನು ನಡೆಯುತ್ತದೆಯೋ ಅದಕ್ಕೆಲ್ಲ ಬೇರೆಬೇರೆ ವಿಧಾನಗಳಲ್ಲಿ ಸ್ಪಂದಿಸುತ್ತಾಳೆ. ಅಶೋಕನ ಶಾಸನಗಳನ್ನು ಹಾಡುವುದು ಇದೆಯಲ್ಲ, ಅದು ನಾನು ಕಂಡುಕೊಂಡ ಒಂದು ವಿಧಾನ. ನಮ್ಮ ಸುತ್ತಲೂ ಹಿಂಸೆ ಮತ್ತು ಹಗೆತನ ತಾಂಡವವಾಡುತ್ತಿರುವ ಈ ಹೊತ್ತಿನಲ್ಲಿ ಅಶೋಕನು ತನ್ನೊಳಗನ್ನು ಪರಿವರ್ತಿಸಿಕೊಂಡಿದ್ದನ್ನು ಹಾಗೂ ಸಹಬಾಳ್ವೆ, ಸಮೃದ್ಧಿಯ ಸಂದೇಶ ಸಾರಿದ್ದನ್ನು ನೆನೆಸಿಕೊಳ್ಳುವುದು ಮುಖ್ಯ ಎನಿಸಿತು. ಆ ಸಂದೇಶಗಳು ಪ್ರಸ್ತುತ ಎನಿಸಿತು. ಅವನ್ನು ಹಾಡುವುದೆಂದರೆ ಕೇವಲ ದಾಖಲೀಕರಣವಲ್ಲ. ಬದಲಿಗೆ, ಆ ಸಂದೇಶಗಳನ್ನು ನಮ್ಮ ಸಂದರ್ಭದಲ್ಲಿಟ್ಟು ಶೋಧಿಸುವುದು, ಅವುಗಳನ್ನು ಹೊಸದಾಗಿ ಅರ್ಥೈಸುವುದು. ಅಶೋಕನ ಒಂದು ಕಲ್ಪರಹದಲ್ಲಿ ’ಧರ್ಮ ಸಂಸ್ತವೋ’ ಎಂಬ ಮಾತು ಬರುತ್ತದೆ. ಇದನ್ನು ನಾನು ಸೆಲೆಬ್ರೇಶನ್ ಆಫ್ ಜಸ್ಟೀಸ್, ನ್ಯಾಯದಾನವನ್ನು ಕೊಂಡಾಡುವುದು ಎಂದು ಅರ್ಥೈಸಿದ್ದೇನೆ. ಏಕೆಂದರೆ, ಧರ್ಮದ ಸಾಮಾಜಿಕ ಆಚರಣೆಯಲ್ಲಿ ಸಮರ್ಪಕವಾದ ನ್ಯಾಯದಾನ ಅದರ ಆತ್ಯಂತಿಕ ಗುರಿಯಾಗಿರುತ್ತದೆ. ಈ ಸೆಲೆಬ್ರೇಶನ್ ಆಫ್ ಜಸ್ಟೀಸ್ ಎಂದರೆ ಏನು? ಈ ನುಡಿಗಟ್ಟಿನ ಅರ್ಥವನ್ನು ಅರಿಯುವುದು ಬಹಳ ಮುಖ್ಯ.”
ಕಳೆದ ಎರಡು ಸಹಸ್ರಮಾನಗಳಲ್ಲಿ ಅಶೋಕನ ಸಾಲುಗಳು ಹಾಡಿನ ರೂಪ ಪಡೆದಿದ್ದು ಇದೇ ಮೊದಲು. ಹಾಗಾಗಿ, ಕೃಷ್ಣ ಅವರು ವಿಶಿಷ್ಟ ಸವಾಲೊಂದನ್ನು ಎದುರಿಸಿದರು. ಒಂದು ನಿರ್ದಿಷ್ಟ ಭಾಷೆಯು ಸಂಗೀತವಾದಾಗ ಆ ಭಾಷೆ ಏನಾಗುತ್ತದೆ? ಪದವೊಂದು ಮಾತಿನಲ್ಲೂ, ಹಾಡಿನಲ್ಲೂ ಒಂದೇ ಅರ್ಥ ಧ್ವನಿಸುತ್ತದೆಯೇ? ಕೃಷ್ಣ ಪ್ರಕಾರ, ಪದವು ಮಾತಿನಲ್ಲಿ ಇರುವುದಕ್ಕಿಂತ ಪ್ರತ್ಯೇಕವಾದ ಅರ್ಥವನ್ನೂ, ಅಸ್ಮಿತೆಯನ್ನೂ ಹಾಡಿನಲ್ಲಿ ಪಡೆದಿರುತ್ತದೆ. ಈ ಕಾರಣಕ್ಕಾಗಿ, ಅಶೋಕನ ಗದ್ಯ ರೂಪದ ಸಾಲುಗಳನ್ನು ಹಾಡಾಗಿಸುವ ಪ್ರಯತ್ನವೇ ತೊಡಕಿನದ್ದು. ಆ ಸಾಲುಗಳು ಹಾಡಾದ ಯಾವ ಪೂರ್ವ ಮಾದರಿಗಳೂ ಇಲ್ಲದ ಕಾರಣ, ಅನುಕರಣೆಯೂ ಸಾಧ್ಯವಿಲ್ಲ. ಹೊಚ್ಚಹೊಸದಾಗಿ ಕೆತ್ತಬೇಕಾದ ದಾರಿಯಿದು. ಈ ಹೊಸ ತೊಡಗಿನಲ್ಲಿ ಭಿಕ್ಕು ಶ್ರಾವಸ್ತಿ ಧಮ್ಮಿಕಾ ಮತ್ತು, ವಿದ್ವಾಂಸ ಡಾ. ನರೇಶ್ ಕೀರ್ತಿ ಅವರು ಕೃಷ್ಣರ ಜೊತೆಯಾದರು. ಇಬ್ಬರೂ ಸೇರಿ ಪ್ರಾಕೃತ ಭಾಷೆ, ಅದರ ವ್ಯಾಕರಣ, ಧ್ವನಿವ್ಯವಸ್ಥೆ ಮತ್ತು ಆಡುವ ಶೈಲಿಯನ್ನು ಪರಿಚಯಿಸಿದರು. ಆ ಎಲ್ಲ ಶಾಸನಗಳ ಅರ್ಥ ತಿಳಿಸಿ, ವಿಶ್ಲೇಷಣೆಯ ಕಿಂಡಿ ತೆರೆದರು. ಸಂಸ್ಕೃತಕ್ಕೂ, ಪ್ರಾಕೃತಕ್ಕೂ ಇರುವ ನಿಕಟ ಸಂಬಂಧದ ಕಾರಣ, ಅರಿವಿಲ್ಲದೆಯೋ ಅಥವಾ ಚೂರು ಎಚ್ಚರ ತಪ್ಪಿಯೋ ಪ್ರಾಕೃತವನ್ನಾಡಿದರೆ, ಅದು ಸಂಸ್ಕೃತದಂತೆ ಕೇಳುವ ಅಪಾಯವಿರುತ್ತದೆ. ಈ ಸಮಸ್ಯೆಯು ಬಾರದಂತೆ ಕೃಷ್ಣ ಎಚ್ಚರವಹಿಸಿದರು. ಅವರೀರ್ವರ ಮಾರ್ಗದರ್ಶನದಲ್ಲಿ ನಮ್ರ ವಿದ್ಯಾರ್ಥಿಯಂತೆ ಮೂರು ತಿಂಗಳು ಶ್ರದ್ಧೆಯಿಂದ ಕಲಿತ ಕೃಷ್ಣ, ಧಮ್ಮದ ಕುರಿತು ಪರ್ಯಾಲೋಚಿಸುವ ನಾಲ್ಕು ಶಾಸನಗಳ ಕೆಲವು ಸಾಲುಗಳನ್ನು ಆಯ್ದುಕೊಂಡು, ಅವುಗಳಿಗೆ ರಾಗ ಸಂಯೋಜಿಸಲು ಮುಂದಾದರು. ಆ ನಾಲ್ಕು ಶಾಸನಗಳ ಸಾಲುಗಳೇ, 2020ರ ಅಕ್ಟೋಬರ್ 14ರಂದು ಬಿಡುಗಡೆಗೊಂಡ ಹಾಡಿನ ಸಾಹಿತ್ಯವಾಗಿದೆ.
ಅಶೋಕನ ನಾಲ್ಕು ಟ್ವೀಟ್‌ಗಳು ಕೂ ಎಂದಿದ್ದು
2021ರ ಜೈಪುರ ಸಾಹಿತ್ಯೋತ್ಸವದ ಅಂಗವಾಗಿ ಟಿ.ಎಂ. ಕೃಷ್ಣರನ್ನು ಸಂದರ್ಶಿಸಿದ ಮಾನಸಿ ಅವರ ಪ್ರಕಾರ, ಅಶೋಕನ ಸಂದೇಶಗಳು ’ವಿವೇಕದ ಟ್ವೀಟ್‌ಗಳು’. ಅವುಗಳಲ್ಲಿ ಧಮ್ಮಕ್ಕೆ ಸಂಬಂಧಿಸಿದ ನಾಲ್ಕು ಟ್ವೀಟ್‌ಗಳು ನಾಲ್ಕು ಭಿನ್ನ ರಾಗ, ತಾಳಗಳಲ್ಲಿ ಕೂ ಎಂದವು. ’ಮುನಿಸೆ ಪಜಾ’ ಎಂದು ಶುರುವಾಗುವ ಸಂದೇಶವು ಕಾಪಿ ರಾಗ, ಆದಿ ತಾಳದಲ್ಲೂ, ’ನಾಸ್ತಿ ಏತಾರಿ ಸಂಧಾನಂ’ ಎಂದು ಶುರುವಾಗುವ ಸಂದೇಶವು ಶುಭಪಂತುವರಾಳಿ ರಾಗ, ಚತುಶ್ರಜಂಪ ತಾಳದಲ್ಲೂ, ’ತಸಮವಾಯೋ ಏವ ಸಾಧು’ ಎಂದು ಶುರುವಾಗುವ ಸಂದೇಶವು ಮೋಹನ ರಾಗ, ಮಿಶ್ರ ಛಾಪು ತಾಳದಲ್ಲೂ ಹಾಗೂ, ’ತತೋ ಪಚಅಧುನ’ ಎಂದು ಶುರುವಾಗುವ ಸಂದೇಶವು ದೇಶರಾಗ, ಖಂಡ ಛಾಪು ತಾಳದಲ್ಲೂ ಮರುಹುಟ್ಟು ಪಡೆಯಿತು. ಮೊದಲ ಸಂದೇಶದಲ್ಲಿ ಅಶೋಕನು ಪ್ರಜೆಗಳೆಲ್ಲರೂ ತನ್ನ ಮಕ್ಕಳೆಂದೂ, ಅವರೆಲ್ಲರ ಕಲ್ಯಾಣಕ್ಕೆ ತಾನು ಆಶಿಸುವೆನೆಂದೂ ಹೇಳುತ್ತಾನೆ. ಎರಡನೆಯ ಸಂದೇಶದಲ್ಲಿ ಅಶೋಕನು ನ್ಯಾಯದಾನವನ್ನು ಮೀರಿದ ಇನ್ಯಾವ ದಾನವೂ ಇಲ್ಲವೆಂದು ಹೇಳುತ್ತಾನೆ. ಮೂರನೆಯ ಸಂದೇಶವು ಎಲ್ಲ ಮತಗಳು ಪರಸ್ಪರ ಗೌರವಾದರಗಳಿಂದ ಕೂಡುಬಾಳ್ವೆ ನಡೆಸಬೇಕು ಎಂದು ಸಾರುತ್ತದೆ. ಕೊನೆಯದಾಗಿ, ನಾಲ್ಕನೆಯ ಸಂದೇಶದಲ್ಲಿ ಕಳಿಂಗವನ್ನು ದಾಳಿ ಮಾಡಿದ್ದಕ್ಕಾಗಿ ಅಶೋಕನು ಮರುಗುತ್ತಾನಲ್ಲದೆ, ಧಮ್ಮವನ್ನು ಪ್ರೀತಿಸುವ ಹಾಗೂ ಬೋಧಿಸುವ ಕೆಲಸದಲ್ಲಿ ತೊಡಗುತ್ತಿದ್ದೇನೆಂದು ಸಾರುತ್ತಾನೆ. ಕೃಷ್ಣ ಅವರ ಧ್ವನಿ, ಋತ್ವಿಕ್‌ರಾಜಾ ಅವರ ತಾಂತ್ರಿಕ ನೆರವು ಹಾಗೂ ಹರ್ಯಾಣ ಜಿಲ್ಲೆಯ ಅಶೋಕ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ, ಯಾವುದೇ ಪಕ್ಕವಾದ್ಯಗಳಿಲ್ಲದೆ ಕೇವಲ ತಂಬೂರದ ಶ್ರುತಿ ನಾದದ ಹಿನ್ನೆಲೆಯಲ್ಲಿ ನಾಲ್ಕೂ ಸಂದೇಶಗಳು ಇಂಪು ಪಡೆದವು. ಇವನ್ನು ಆಸ್ವಾದಿಸುತ್ತ 10 ನಿಮಿಷ 26 ಸೆಕೆಂಡು ಕಳೆದುಹೋದದ್ದೇ ಗೊತ್ತಾಗುವುದಿಲ್ಲ. ಕಳೆದು ಹೋಗಲು ದಾರಿ ಇಲ್ಲಿದೆ:
ದಿ ಎಡಿಟ್ ಪ್ರಾಜೆಕ್ಟ್‌ನ ಮುನ್ನೋಟ
ಧಮ್ಮ, ನ್ಯಾಯದಾನ ಹಾಗೂ ಸಹಬಾಳ್ವೆಯ ಮೌಲ್ಯಗಳಿಗಷ್ಟೇ ಅಶೋಕನ ಕಲ್ಬರಹಗಳು ಸೀಮಿತವಾಗಿದ್ದರೆ, ’ದಿ ಎಡಿಕ್ಟ್ ಪ್ರಾಜೆಕ್ಟ್’ ಒಂದು ಕಂತಿಗೇ ಮುಗಿದುಬಿಡುತ್ತಿತ್ತು. ಆದರೆ, ಇನ್ನೂ ಹಲವು ವಸ್ತುವಿಷಯಗಳ ಆಧಾರದಲ್ಲಿ ಮತ್ತಷ್ಟು ಶಾಸನಗಳ ಸಾಲುಗಳನ್ನು ಹಾಡಾಗಿಸುವ ಇಚ್ಛೆಯನ್ನು ಕೃಷ್ಣ ವ್ಯಕ್ತಪಡಿಸಿದ್ದಾರೆ. ಏಕೆಂದರೆ, ಕೃಷ್ಣ ಅವರ ಪ್ರಕಾರ, ಕಳಿಂಗ ಯುದ್ಧಾನಂತರದ ಅಶೋಕನದ್ದು ಬಹಳ ಸರಳ ವ್ಯಕ್ತಿತ್ವವೇನಲ್ಲ. ನಿದರ್ಶನಕ್ಕೆ, ಆತ ಕಳಿಂಗದಲ್ಲಿ ನೆಟ್ಟ ಕಲ್ಬರಹಗಳನ್ನೇ ಗಮನಿಸಬಹುದು. ಕಳಿಂಗದ ಮೇಲೆ ದಾಳಿ ಮಾಡಿದ್ದಕ್ಕಾಗಿ ತಾನು ಪಶ್ಚಾತ್ತಾಪಪಡುತ್ತಿದ್ದೇನೆ ಎಂದು ಸಾಮ್ರಾಜ್ಯದ ಮೂಲೆಮೂಲೆಗೂ ಸಾರಿದ ಅಶೋಕ, ಕಳಿಂಗದಲ್ಲಿ ಬರೆಸಿದ ಯಾವೊಂದು ಶಾಸನದಲ್ಲೂ ಆ ದಾಳಿಯನ್ನು ನೆನಪಿಸಿಲ್ಲ, ಪಶ್ಚಾತ್ತಾಪ ಪಟ್ಟಿಲ್ಲ! ಏನಿದರ ಮರ್ಮ? ಇನ್ನು, ಬೇರೊಂದು ಕಡೆ ಬರೆಸಿದ ಶಾಸನದಲ್ಲಿ ಆ ಪ್ರಾಂತ್ಯದ ಜನರು ತನ್ನಾಜ್ಞೆಯನ್ನು ತಪ್ಪದೇ ಪಾಲಿಸಬೇಕೆಂದೂ, ಕಳಿಂಗದ ವಿಷಯದಲ್ಲಿ ತಾನು ಪಶ್ಚಾತ್ತಾಪಪಟ್ಟಂತೆ ಇನ್ನೊಮ್ಮೆ ಪಶ್ಚಾತ್ತಾಪಪಡಲು ಅವಕಾಶ ನೀಡಬೇಡಿ ಎಂದೂ ಎಚ್ಚರಿಸುತ್ತಾನೆ. ಅಶೋಕನ ವ್ಯಕ್ತಿತ್ವದ ಕುರಿತು ಇದೆಲ್ಲ ಏನು ಹೇಳುತ್ತದೆ? ಕೃಷ್ಣ ಅವರ ಪ್ರಕಾರ, ಮೊದಲನೆಯದಾಗಿ ಅಶೋಕ ಒಬ್ಬ ಚಕ್ರವರ್ತಿ ಎನ್ನುವುದನ್ನು ನಾವು ಮರೆಯಬಾರದು. ತನ್ನ ಪರಿವರ್ತನೆಗೆ ಕಾರಣವಾದ ಅಹಿಂಸೆ, ಸಹಬಾಳ್ವೆಯ ಮೌಲ್ಯಗಳ ಆಧಾರದಲ್ಲಿ ಸಮಾಜವನ್ನು ಪರಿವರ್ತಿಸಲು ಹೊರಟ ಅಶೋಕ, ಅದಕ್ಕಾಗಿ ತನ್ನ ಸ್ಥಾನದಿಂದ ಲಭಿಸಿದ ಅಧಿಕಾರವನ್ನು ಬಳಸಲು ಹಿಂಜರಿಯಲಿಲ್ಲ. ಇನ್ನು ಎರಡನೆಯದಾಗಿ, ಆತನ ಅಂತರಂಗ ನಿರಂತರವಾಗಿ ಸಂಘರ್ಷ ಮತ್ತು ಪರ್ಯಾಲೋಚನೆಯಲ್ಲಿ ತೊಡಗಿತ್ತು ಎನ್ನುವುದನ್ನು ನಾವು ಮರೆಯಬಾರದು. ಕಳಿಂಗ ದಾಳಿಗಾಗಿ ಪಶ್ಚಾತ್ತಾಪ ಪಡುವ ಶಹಬಾಜ಼ಗರ್ಹಿ ಶಾಸನದಲ್ಲಿ ಅಶೋಕ, ಧಮ್ಮದ ಮೂಲಕ ಜನರನ್ನು ಗೆಲ್ಲುವುದೇ ನಿಜವಾದ ದಿಗ್ವಿಜಯವೆಂದು ಸಾರುತ್ತಾನೆ. ದಿಗ್ವಿಜಯದ ಈ ಹೊಸ ವ್ಯಾಖ್ಯಾನದ ಮೂಲಕ ಅಶೋಕ, ಕಳಿಂಗ ಯುದ್ಧದಲ್ಲಿ ತಾನು ನಿಜವಾಗಿಯೂ ಗೆದ್ದಿದ್ದೆನೇ ಎನ್ನುವ ಮಹತ್ವದ ಪ್ರಶ್ನೆಯನ್ನು ಎತ್ತಿದ್ದಾನೆ ಎಂದು ಕೃಷ್ಣ ಅಭಿಪ್ರಾಯಪಡುತ್ತಾರೆ.
ಹೀಗೆ, ಬಹಳ ಸಂಕೀರ್ಣ ವ್ಯಕ್ತಿತ್ವದವನಾದ ಅಶೋಕನ ಕಲ್ಬರಹಗಳನ್ನು ಅವಲೋಕಿಸಿದಾಗ, ಕೆಲವು ಕುತೂಹಲಕಾರಿಯಾದ ಹಾಗೂ ಇಂದಿಗೂ ಪ್ರಸ್ತುತವೆನಿಸುವ ಪ್ರಶ್ನೆಗಳನ್ನು ನಾವು ಎದುರುಗೊಳ್ಳಬೇಕಾಗುತ್ತದೆ. ಕೃಷ್ಣ ಅವರ ಪ್ರಕಾರ ಆ ಪ್ರಶ್ನೆಗಳಲ್ಲಿ ಕೆಲವು ಇಂತಿವೆ-
ಅ) ಬೇರೆಬೇರೆ ಸಂಸ್ಕೃತಿಗಳ ವೈಶಿಷ್ಟ್ಯವನ್ನು ಗೌರವಿಸಿ, ಕಾಪಿಡುತ್ತಲೇ ಅವರಲ್ಲಿ ಕೆಲವು ಮೌಲ್ಯಗಳನ್ನು ಸಮಾನವಾಗಿ ಬಿತ್ತುವುದು ಹೇಗೆ? (ಪ್ರಸ್ತುತ: ಸಂವಿಧಾನದ ಮೂಲಭೂತ ಮೌಲ್ಯಗಳನ್ನು ಬಿತ್ತುವುದು ಹೇಗೆ?)
ಆ) ಪ್ರೀತಿ ಮತ್ತು ಕಾರುಣ್ಯದಿಂದ ಆಡಳಿತ ನಡೆಸಲು ಬರುವುದೇ? ಹೌದಾದರೆ, ಹೇಗೆ?
ಇ) ದಾರ್ಶನಿಕರು, ತತ್ವಶಾಸ್ತ್ರಜ್ಞರು ಎಂದರೆ ಯಾರು? ಸಿದ್ಧಾಂತೀಕರಿಸಲು ಗೊತ್ತಿಲ್ಲದ ಕೋಟ್ಯಂತರ ಜನರು, ತಮ್ಮ ಬದುಕಿನ ಅನುದಿನದ ಅನುಭವದಿಂದ ಹಾಗೂ ಆ ಅನುಭವದ ಕುರಿತು ಪರ್ಯಾಲೋಚನೆ ಮಾಡುವುದರಿಂದಲೂ ದಾರ್ಶನಿಕರಾಗುತ್ತಾರೆ, ಅಲ್ಲವೇ? ದೇಶವನ್ನಾಳುವವರು ದಾರ್ಶನಿಕರಾಗಿರಬೇಕಾದ ಅಗತ್ಯವಿದೆಯೇ? ಪ್ಲೇಟೋ ಬಯಸುವ ಫಿಲಾಸಫರ್ ಕಿಂಗ್‌ನ ಅಗತ್ಯ ನಮಗಿದೆಯೇ?
ಈ) ದೇಶವನ್ನಾಳುವವರಲ್ಲಿ ಮೌಲ್ಯಾಧಾರಿತ ಬದುಕು, ಸಮಾನತೆಯ ತುಡಿತ ಹಾಗೂ ಅಧಿಕಾರದ ರಾಜಕಾರಣ; ಈ ಮೂರರ ನಡುವೆ ಸಂಬಂಧಗಳು ಹೇಗಿರಬೇಕು?
ಇವಿಷ್ಟನ್ನು ಗಮನಿಸಿದಾಗ, ’ದಿ ಎಡಿಕ್ಟ್ ಪ್ರಾಜೆಕ್ಟ್’ ಒಂದು ಕಂತಿನಲ್ಲಿ ಮುಗಿಯುವ ಯೋಜನೆಯಲ್ಲ ಎಂದೇ ಅನಿಸುತ್ತದೆ, ಅಲ್ಲವೇ? ಹೌದು. ಕೃಷ್ಣ ಅವರ ಧ್ವನಿಯಿಂದ ಅಶೋಕನ ಮತ್ತಷ್ಟು ಶಾಸನಗಳ ಸಾಲುಗಳು ನಲಿದು, ಹೊರಳುವುದನ್ನು ನಾವು ನಿರೀಕ್ಷಿಸಬಹುದು. ಅಲ್ಲದೆ, ಈ ಯೋಜನೆಯ ಅನುಷ್ಠಾನ ಹಾಗೂ ಅದರ ಹಿಂದಿನ ತತ್ವವೇ ಬಹಳ ವಿಶಿಷ್ಟವಾಗಿದೆ. ಕೃಷ್ಣ ಅವರ ಅಭಿಪ್ರಾಯದಲ್ಲಿ ಈ ಯೋಜನೆಯು ಎಲೀಟ್ ವರ್ಗದವರಲ್ಲೇ ಗಿರಕಿ ಹೊಡೆಯಬಾರದು. ಇದು ಸಾಮಾನ್ಯರನ್ನು ಕೂಡ ಪರಿಣಾಮಕಾರಿಯಾಗಿ ತಲುಪುವಂತಾಗಲು ಭಾರತದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ತಂಡಗಳನ್ನು ಮೊದಲು ರಚಿಸಬೇಕು. ಒಂದು ತಂಡದಲ್ಲಿ ಮೂವರು ಕಲಾವಿದರು, ಸಂಗೀತಗಾರರು, ಪ್ರದರ್ಶನ ಕಲಾವಿದರು ಹಾಗೂ ಲಲಿತಕಲೆಯಲ್ಲಿ ಪರಿಣತರು ಇರಬೇಕು. ಪ್ರತಿ ತಂಡವೂ ಒಂದೊಂದು ವಿಷಯವಸ್ತುವನ್ನಾಧರಿಸಿ ಶಾಲಾ ಕಾಲೇಜುಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನ ನೀಡಬೇಕು. ಹೆಚ್ಚು ಕಡಿಮೆ ಐದರಿಂದ ಆರು ಕಲ್ಬರಹಗಳನ್ನಿಟ್ಟುಕೊಂಡು ಒಂದು ವಿಷಯವಸ್ತುವನ್ನು ರೂಪಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ, ಅಶೋಕನ ಶಾಸನಗಳನ್ನು ಆಯಾ ತಂಡದವರು ಅವರವರ ಪ್ರಾಂತೀಯ ಭಾಷೆಗಳಲ್ಲೇ ಪ್ರದರ್ಶನ ನೀಡಬೇಕು! ಅಂದರೆ, ಆ ಶಾಸನಗಳು ಭಾರತದ ಇತರೆ ಭಾಷೆಗಳಿಗೆ ಅನುವಾದಗೊಂಡೇ ಪ್ರದರ್ಶನಗೊಳ್ಳಬೇಕು. ಹೀಗೆ ಮಾಡುವುದರಿಂದ ನಾವು ಸಂಗೀತಕ್ಕೂ, ಆ ಶಾಸನಗಳಿಗೂ ತಳಕು ಹಾಕಿಕೊಂಡಿರುವ ’ಶಾಸ್ತ್ರೀಯತೆ’ಯನ್ನು ಮುರಿದು, ಅವನ್ನು ಜನಪದಗೊಳಿಸಬಹುದೆಂದು ಕೃಷ್ಣ ಅಭಿಪ್ರಾಯಪಡುತ್ತಾರೆ. ಅಶೋಕನ ಶಾಸನಗಳನ್ನು ರ್‍ಯಾಪ್ ಶೈಲಿಯಲ್ಲೂ ಹಾಡಲು ಪ್ರಯತ್ನಿಸಬಹುದಲ್ಲವೇ ಎಂದು ಕೇಳಿಕೊಳ್ಳುತ್ತಾರೆ, ಪುಳಕಿತರಾಗುತ್ತಾರೆ.
ಇಷ್ಟೆಲ್ಲ ಮಾಡಿ ಏನು ಸಾಧಿಸಿದಂತಾಯಿತು ಎನ್ನುವ ಪ್ರಶ್ನೆಗೂ ಅವರ ಬಳಿ ಉತ್ತರಗಳಿವೆ. ಮೊಟ್ಟಮೊದಲನೆಯದಾಗಿ, ಈ ಯೋಜನೆಯು ಪ್ರಾಚೀನ ಭಾರತದ ಚರಿತ್ರೆಯನ್ನು ಆವರಿಸಿರುವ ನಿಗೂಢತೆಯ ಮುಸುಕನ್ನು ಕಳಚುವ ಪ್ರಯತ್ನ ಮಾಡುತ್ತದೆ. ಚರಿತ್ರೆಯನ್ನು ನಿಗೂಢಗೊಳಿಸಿದಷ್ಟೂ ಅಪಾಯ. ನಿಗೂಢತೆಯಿದ್ದಲ್ಲಿ ವೈಚಾರಿಕತೆಗೆ ಎಡೆಯಿಲ್ಲ. ವೈಚಾರಿಕತೆಗೆ ಎಡೆಯಿಲ್ಲದಿದ್ದಲ್ಲಿ ಸಂಸ್ಕೃತಿ ವೈಭವದ ಹೆಸರಲ್ಲಿ ಜನರನ್ನು ಮರುಳು ಮಾಡುವುದು ಸುಲಭ. ಇನ್ನು, ಈ ಯೋಜನೆಯ ಮೂಲಕ ಅಶೋಕನ ಸಂದೇಶಗಳು ಪ್ರಭುತ್ವ ಮತ್ತು ನಾಗರಿಕ ಸಮಾಜ- ಈ ಎರಡನ್ನೂ ತಲುಪುವುದು ಬಹಳ ಮುಖ್ಯ. ಪ್ರಭುತ್ವವು ತನ್ನ ವಿಚಾರಗಳನ್ನು ಪ್ರಜೆಗಳಿಗೆ ಪರಿಣಾಮಕಾರಿಯಾಗಿ ತಲುಪಿಸುವ ಬಗೆ ಹೇಗೆ? ಆ ಸಂವಹನದಲ್ಲಿ ಪ್ರೀತಿ, ಸಹಾನುಭೂತಿಯು ವ್ಯಕ್ತಗೊಳ್ಳಬೇಕಾದ್ದು ಹೇಗೆ? ತರಗತಿಗಳಲ್ಲಿ ಅಶೋಕನ ಶಾಸನಗಳ ಚರ್ಚೆ ನಡೆದರೆ ರಾಜಕೀಯ ಶಾಸ್ತ್ರಕ್ಕೆ ಜೀವಕಳೆ ಬರುತ್ತದೆ, ಅಲ್ಲವೇ? ಮುಂತಾದ ಪ್ರಶ್ನೆಗಳನ್ನೆಸೆಯುತ್ತ ಕೃಷ್ಣ ತಮ್ಮ ಯೋಜನೆಯ ಸಂಭವನೀಯ ಪರಿಣಾಮಗಳ ಮೋಡದಲ್ಲಿ ಕ್ಷಣ ಕಾಲ ತೇಲಿ ಬರುತ್ತಾರೆ.
ಯೋಜನೆಯ ಆಚೆಗೂ ವ್ಯಾಪಿಸಿದ ಕಲೆಯ ಜಿಜ್ಞಾಸೆ
ಕಲೆಗಾಗಿ ಕಲೆಯೇ? ಅಥವಾ, ಕಲೆಗೆ ಒಂದು ಉದ್ದೇಶವಿರಬೇಕೇ? ಈ ಜಿಜ್ಞಾಸೆಯು ಕಲೆಯಷ್ಟೇ ಪ್ರಾಚೀನ ಹಾಗೂ ಬಹುಶಃ ಮಾನವ ಜನಾಂಗದ ಕಟ್ಟಕಡೆಯ ಪೀಳಿಗೆಯವರೆಗೂ ಪ್ರಸ್ತುತ. ಟಿ.ಎಂ. ಕೃಷ್ಣ ಅವರ ಪ್ರಕಾರ, ಕಲೆಗಾಗಿ ಕಲೆ ಎನ್ನುವುದೇ ಸತ್ಯ. ಆದರೆ, ಹಾಗೆ ಒಪ್ಪಲು ಅವರೊಂದು ಷರತ್ತು ವಿಧಿಸುತ್ತಾರೆ. ಆ ಷರತ್ತಿನ ಪ್ರಕಾರ, ಕಲೆಯ ವ್ಯಾಖ್ಯಾನ ಬದಲಾಗಬೇಕು. ’ಪ್ರತಿಯೊಂದು ಕಲಾಭಿವ್ಯಕ್ತಿಯೂ ಒಂದು ರಾಜಕೀಯವೇ ಆಗಿರುತ್ತದೆ’ ಎನ್ನುವುದು ಕಲೆಯ ವ್ಯಾಖ್ಯಾನವಾಗಬೇಕು. ಡೂಯಿಂಗ್ ಆರ್ಟ್ ಎನ್ನುವುದರಲ್ಲಿ ಯಾವತ್ತಿಗೂ ಒಡೆತನ, ಸದಸ್ಯತ್ವ, ಸದಸ್ಯರಲ್ಲದವರ ಲೋಕ, ಒಪ್ಪಿಗೆ, ತಿರಸ್ಕಾರಗಳು ಅಂತರ್ಗತಗೊಂಡಿರುತ್ತವೆ. ಕಲೆಯ ವ್ಯಾಖ್ಯಾನದಲ್ಲಿ ಈ ಎಲ್ಲವನ್ನೂ ತಂದರೆ ಮಾತ್ರವೇ ಕಲೆಗಾಗಿ ಕಲೆ ಎಂಬುದಕ್ಕೆ ಅರ್ಥವಿದೆ. ಹೀಗಲ್ಲದೇ ಹೋದರೆ, ಕಲೆಗಾಗಿ ಕಲೆ ಎಂಬ ವಿಚಾರಕ್ಕೆ ಯಾವ ಅರ್ಥವೂ ಇಲ್ಲ, ಎನ್ನುತ್ತಾರೆ ಕೃಷ್ಣ. ತನ್ನೊಂದಿಗೇ ತಾನು ನಿರಂತರ ಸಂಭಾಷಣೆಯಲ್ಲಿ ತೊಡಗದ ಕಲಾವಿದನೊಬ್ಬ ತಾನು ಅರಾಜಕೀಯ ವ್ಯಕ್ತಿ ಎಂದು ಹೇಳಬಹುದೇನೋ. ಆದರೆ, ಕಲೆಯಲ್ಲಿ ರಾಜಕೀಯವಿಲ್ಲ ಅಥವಾ ಇರಬಾರದು ಎಂದು ಹೇಳುವುದು ಆತ್ಮವಂಚನೆಯಲ್ಲದೆ ಬೇರೆಯೇನೂ ಅಲ್ಲ. ಇದು ಟಿ.ಎಂ. ಕೃಷ್ಣರ ಮತ.
ಕಲೆಯ ಈ ಅರ್ಥ ನಿರೂಪಣೆಯ ಪರಿಪ್ರೇಕ್ಷ್ಯದಲ್ಲಿ ದಿ ಎಡಿಕ್ಟ್ ಪ್ರಾಜೆಕ್ಟ್ ಒಂದು ಬೃಹತ್ ಯೋಜನೆಯ ಸಣ್ಣ ಭಾಗವಷ್ಟೇ. ಅಶೋಕನಿಂದ ಟಿ.ಎಂ. ಕೃಷ್ಣರವರೆಗೆ ಇಂಥ ಸಾವಿರಾರು ಕಿರುಯೋಜನೆಗಳು ಈ ಮಣ್ಣಿನಲ್ಲಿ ಕೊನರಿವೆ. ಕೆಲವೊಂದು ಕೊನರಿದಷ್ಟೇ ವೇಗವಾಗಿ ಕಮರಿವೆ. ಇನ್ಕೆಲವು ಬೆಳೆದು, ಇತ್ತ ಫಲವನ್ನು ನಾವಿನ್ನೂ ಉಣ್ಣುತ್ತಿದ್ದೇವೆ. ಆದರೆ, ಆ ಎಲ್ಲ ಫಲಗಳು ಇನ್ನೇನು ಸಂಪೂರ್ಣ ಬರಿದಾಗಲಿವೆ. ಹಾಹಾಕಾರ ಉಂಟಾಗುವ ಮುನ್ನವೇ ನಾಡಿನ ಪ್ರಜ್ಞಾವಂತರು ಎಚ್ಚೆತ್ತು, ಆ ಬೃಹತ್ ಯೋಜನೆಯನ್ನು ಜೀವಂತವಾಗಿರಿಸಬೇಕು. ತಪ್ಪಿದರೆ, ಅಶೋಕನ ಕಲ್ಬರಹಗಳನ್ನು ಹಾಡುವುದು ಕೂಡ ದೇಶದ್ರೋಹವೆಂದು ಪರಿಗಣಿಸಲ್ಪಡುವ ದಿನ ದೂರವಿಲ್ಲ.
ಮಾಹಿತಿ ಸೆಲೆ
1. ಜೈಪುರ ಸಾಹಿತ್ಯೋತ್ಸವ ಸಂದರ್ಶನ
2. ಅಂತರ್ಜಾಲ ಸುದ್ದಿತಾಣಗಳು.
3. The Inscriptions of Ashoka – Eugene Hultzsch
(’ಭಿನ್ನಮತ’ ಟಿ ಎಂ ಕೃಷ್ಣ ಅವರ ಲೇಖನಗಳ ಸಂಗ್ರಹ. ಮಾಧವ ಐತಾಳ ಅವರು ಸಂಪಾದಿಸುತ್ತಿರುವ ’ಋತ’ ಪತ್ರಿಕೆಯ ವಿಶೇಷ ಸಂಚಿಕೆಯಾಗಿ ಇದು ಹೊರಬಂದಿದೆ. ಈ ವಿಶೇಷ ಸಂಚಿಕೆಯಲ್ಲಿ ಅತಿಥಿ ಸಂಪಾದಕರಾಗಿ ಸುಷ್ಮಾ ಕಶ್ಯಪ್ ಕೆಲಸ ಮಾಡಿದ್ದಾರೆ.)
ಅಮರ್ ಹೊಳೆಗದ್ದೆ
ಎಂಜಿನಿಯರಿಂಗ್ ಪದವೀಧರರಾದ ಅಮರ್, ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ ಹೇಳಿಕೊಡುವುದರ ಜೊತೆಗೆ ಕರ್ನಾಟಕ-ಕನ್ನಡ ಕೇಂದ್ರಿತ ಹೋರಾಟಗಳಲ್ಲಿ ಆಸಕ್ತಿ ವಹಿಸಿದ್ದವರು. ಈಗ ತುಮಕೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿ.
ಇದನ್ನೂ ಓದಿ: ಪುರಾಣದ ಯಾವುದೋ ಕಲ್ಪಿತ ಜಗತ್ತನ್ನು ಹಂಬಲಿಸುತ್ತಾ ಹಿಮ್ಮುಖ ಚಲಿಸದ ಕಥಾ ಪಾತ್ರಗಳು