ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಸೆಂಟರ್ ಕೋರ್ಟ್ ಕಳೆದ ಭಾನುವಾರ ಐತಿಹಾಸಿಕ ಘಟನೆಗೆ ಮತ್ತು ಹೊಸ ತಾರೆಯೊಂದರ ಉದಯಕ್ಕೆ ಸಾಕ್ಷಿಯಾಗಿದೆ. ಕೋಟ್ಯಂತರ ಟೆನಿಸ್ ಪ್ರಿಯರಿಗೆ ರಸದೌತಣವನ್ನೂ ಉಣಿಸಿದೆ. 23 ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ 36ರ ಹರೆಯ ನೊವಾಕ್ ಜೊಕೊವಿಚ್ ಅವರಿಗೆ ಸೋಲುಣಿಸಿ ತನ್ನ ಮೊದಲ ವಿಂಬಲ್ಡನ್ ಪ್ರಶಸ್ತಿಗೆ ಮುತ್ತಿಡುವ ಮೂಲಕ ಸ್ಪೇನ್ 20ರ ಹರೆಯ ಕಾರ್ಲೊಸ್ ಅಲ್ಕರಾಝ್ ಹೊಸ ಇತಿಹಾಸ ಬರೆದಿದ್ದಾರೆ. 5 ಮೇ 2003ರಲ್ಲಿ ಜನಿಸಿದ ಅಲ್ಕರಾಝ್ ಈಗ ನಂ.1 ಟೆನಿಸ್ ತಾರೆಯಷ್ಟೇ ಅಲ್ಲ, ಅಲ್ಟಿಮೇಟ್ Gen Z ಆಟಗಾರ ಎಂದೂ ಪ್ರಖ್ಯಾತರಾಗಿದ್ದಾರೆ. ಫೆಡರರ್, ನಡಾಲ್, ಜೊಕೊವಿಚ್ ನಂತರ ಯಾರು? ಎಂಬ ಪ್ರಶ್ನೆಗೂ ಭರವಸೆ ಮೂಡಿಸಿದ್ದಾರೆ.
ಆಲ್ ಇಂಗ್ಲೆಂಡ್ ಟೆನಿಸ್ ಕ್ಲಬ್‌ನ ಸೆಂಟರ್ ಕೋರ್ಟ್‌ನಲ್ಲಿ ನಡೆದ ಹೈ-ವೋಲ್ಟೇಜ್ ಫೈನಲ್ ಪಂದ್ಯದ ಮೊದಲ ಸೆಟ್‌ಅನ್ನು ಜೊಕೊವಿಚ್ ಸುಲಭಕ್ಕೆ ಗೆದ್ದುಕೊಂಡಿದ್ದರು. 6-1 ಅಂತರದಲ್ಲಿ ಮೊದಲ ಸೆಟ್ ವಶಪಡಿಸಿಕೊಂಡಿದ್ದ ಜೊಕೊವಿಚ್ 24ನೇ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಯನ್ನು ಸುಲಭವಾಗಿ ತನ್ನದಾಗಿಸಿಕೊಳ್ಳುತ್ತಾರೆ ಎಂದು ಅವರ ಬಹುತೇಕ ಅಭಿಮಾನಿಗಳಲ್ಲಿ ಭರವಸೆ ಮೂಡಿಸಿದ್ದರು. ಆದರೆ, ಆರಂಭಿಕ ಹಿನ್ನಡೆಯನ್ನು ಮೆಟ್ಟಿನಿಲ್ಲಲು ಅಲ್ಕರಾಝ್‌ಗೆ ಹೆಚ್ಚು ಹೊತ್ತು ಬೇಕಾಗಿರಲಿಲ್ಲ.
ಎರಡು ಹಾಗೂ ಮೂರನೇ ಸೆಟ್‌ನಲ್ಲಿ ಚುರುಕಿನ ಆಟ ಪ್ರದರ್ಶಿಸಿದ ಅಲ್ಕರಾಝ್ ತನ್ನ ವೇಗದ ಸರ್ವ್-ರಿಟರ್ನ್ ಮತ್ತು ಲೀಲಾಜಾಲವಾದ ಬ್ಯಾಕ್‌ಹ್ಯಾಂಡ್ ಶಾಟ್ ಮೂಲಕ ಜೊಕೊವಿಚ್‌ರನ್ನು ತಬ್ಬಿಬ್ಬುಗೊಳಿಸಿದರು. ಪರಿಣಾಮ 7-6 (8-6), 6-1 ಅಂತರದಲ್ಲಿ ಮುಂದಿನ ಎರಡೂ ಸೆಟ್ ಅಲ್ಕರಾಝ್ ಕೈವಶವಾಯಿತು. ನಾಲ್ಕನೇ ಸೆಟ್ ಕಳೆದುಕೊಂಡರೂ ಐದನೇ ಸೆಟ್‌ನಲ್ಲಿ ಮೊನಚಿನ ಆಟ ಪ್ರದರ್ಶಿಸಿದ ಅಲ್ಕರಾಝ್ ಅಂತಿಮವಾಗಿ 1-6, 7-6 (8-6), 6-1, 3-6, 6-4 ಅಂತರದ ಐದು ಸೆಟ್‌ಗಳ ಮತ್ತು ಸುಮಾರು ಐದು ಗಂಟೆಗಳ ಕಾಲ ನಡೆದ ಮ್ಯಾರಥಾನ್ ಹೋರಾಟದಲ್ಲಿ ಟೆನಿಸ್ ಲೋಕದ ದಿಗ್ಗಜ ನೊವಾಕ್ ಜೊಕೊವಿಚ್ ವಿರುದ್ಧ ಗೆಲುವು ಸಾಧಿಸಿ ವಿಂಬಲ್ಡನ್ ಟ್ರೋಫಿಗೆ ಮುತ್ತಿಟ್ಟರು.

ಇದು ಅಲ್ಕರಾಝ್ ಗೆದ್ದ ಎರಡನೇ ಗ್ರ್ಯಾಂಡ್‌ಸ್ಲಾಮ್ ಹಾಗೂ ಮೊದಲ ವಿಂಬಲ್ಡನ್ ಪ್ರಶಸ್ತಿಯಾಗಿದೆ. 2022ರ ಯುಎಸ್ ಓಪನ್ ಟೂರ್ನಿಯಲ್ಲಿ ಅಲ್ಕರಾಝ್ ತಮ್ಮ ಚೊಚ್ಚಲ ಗ್ರ್ಯಾಂಡ್‌ಸ್ಲಾಮ್ ಜಯಿಸಿದ್ದರು. ಈ ವರ್ಷದ ಆಗಸ್ಟ್-ಸೆಪ್ಟಂಬರ್‌ನಲ್ಲಿ ನಡೆಯಲಿರುವ ಯುಎಸ್ ಓಪನ್ ಮತ್ತು ಮುಂದಿನ ವರ್ಷದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಗಳ ಮೇಲೆ ಈಗ ಎಲ್ಲರ ಕಣ್ಣೂ ನೆಟ್ಟಿವೆ.
ಎರಡು ದಾಖಲೆಗಳ ಸನಿಹದಲ್ಲಿ ಎಡವಿದ ಜೊಕೊವಿಚ್
ಅಲ್ಕರಾಝ್ ವಿರುದ್ಧದ ಸೋಲಿನೊಂದಿಗೆ ರೋಜರ್ ಫೆಡರರ್ ದಾಖಲೆ ಸರಿಗಟ್ಟುವ ಅಪರೂಪದ ಅವಕಾಶವೊಂದನ್ನು ಜೊಕೊವಿಚ್ ತಪ್ಪಿಸಿಕೊಂಡಿದ್ದಾರೆ. ಟೆನಿಸ್ ಲೋಕದಲ್ಲಿ ವರ್ಷಕ್ಕೆ ನಾಲ್ಕು ಗ್ರ್ಯಾಂಡ್‌ಸ್ಲಾಮ್ ಟೂರ್ನಿಗಳಿದ್ದರೂ ವಿಂಬಲ್ಡನ್‌ಗೆ ತುಸು ಹೆಚ್ಚನ ಗೌರವವಿದೆ ಎನ್ನಬಹುದು. ಈ ಪ್ರತಿಷ್ಠಿತ ಟೂರ್ನಿಯಲ್ಲಿ 2003ರಿಂದ 2007ರ ಅವಧಿಯಲ್ಲಿ ರೋಜರ್ ಫೆಡರರ್ ಸತತ ಐದು ಬಾರಿ ವಿಂಬಲ್ಡನ್ ಪ್ರಶಸ್ತಿಗೆ ಮುತ್ತಿಟ್ಟಿದ್ದರು.
ನೊವಾಕ್ ಜೊಕೊವಿಚ್ 2018ರಿಂದ 2022ರ ಅವಧಿಯಲ್ಲಿ ಸತತ ನಾಲ್ಕು ಬಾರಿ ವಿಂಬಲ್ಡನ್ ಪ್ರಶಸ್ತಿಯನ್ನು ಜಯಿಸಿದ್ದರು. ಈ ವರ್ಷವೂ ಅವರು ಗೆಲುವು ಸಾಧಿಸಿದ್ದರೆ, ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಫೆಡರರ್ ಹೆಸರಲ್ಲಿದ್ದ ಅಪರೂಪದ ದಾಖಲೆಯೊಂದನ್ನು ಸರಿಗಟ್ಟಿದ ಶ್ರೇಯ ಅವರಿಗೆ ಸಲ್ಲುತ್ತಿತ್ತು. ಅಲ್ಲದೆ, ಈ ವರ್ಷ ನಡೆದ ಆಸ್ಟ್ರೇಲಿಯಾ ಓಪನ್ ಮತ್ತು ಫ್ರೆಂಚ್ ಓಪನ್ ಪ್ರಶಸ್ತಿಯನ್ನೂ ಗೆದ್ದಿದ್ದ ಜೊಕೊವಿಚ್ ವಿಂಬಲ್ಡನ್ ಮುಕುಟ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡುವ ಲೆಕ್ಕಾಚಾರದಲ್ಲಿದ್ದರು. ಆದರೆ ಜೊಕೊವಿಕ್ ಅವರ ಗೆಲುವಿನ ನಾಗಾಲೋಟಕ್ಕೆ ಅಡ್ಡಿಯಾಗಿ ಫ್ರೆಂಚ್ ಓಪನ್ ಸೆಮಿಫೈನಲ್ ಸೋಲಿಗೆ ಕಾರ್ಲೊಸ್ ಅಲ್ಕರಾಝ್ ಸೇಡು ತೀರಿಸಿಕೊಂಡಿದ್ದಾರೆ. ಈ ಸೋಲಿನೊಂದಿಗೆ ಸರ್ಬಿಯಾ ಆಟಗಾರನ ಸತತ 34 ಪಂದ್ಯಗಳ ಜಯದ ಓಟಕ್ಕೂ ತೆರೆಬಿದ್ದಿದೆ.
ನಂಬರ್ 1 ಪಟ್ಟ ಉಳಿಸಿಕೊಂಡ ಕಾರ್ಲೊಸ್
ಬರೋಬ್ಬರಿ 4 ಗಂಟೆ 42 ನಿಮಿಷಗಳ ಕಾಲ ನಡೆದ ಜಿದ್ದಾಜಿದ್ದಿನ ಫೈನಲ್ ಹೋರಾಟದಲ್ಲಿ ಗೆಲುವಿನ ಸಂಭ್ರಮ ಕಂಡು ವಿಂಬಲ್ಡನ್ ಮುಕುಟ ಗೆದ್ದ ಕಾರ್ಲೊಸ್ ಅಲ್ಕರಾಝ್ ವಿಶ್ವದ ನಂಬರ್ 1 ಸ್ಥಾನವನ್ನು ಉಳಿಸಿಕೊಳ್ಳುವುದರ ಜೊತೆಗೆ 2003ರ ಬಳಿಕ ಟೆನಿಸ್ ಲೋಕದ ದಿಗ್ಗಜರಾದ ರೋಜರ್ ಫೆಡರರ್, ರಫಾಲ್ ನಡಾಲ್, ನೊವಾಕ್ ಜೊಕೊವಿಚ್, ಆಂಡಿ ಮರ್ರ್‍ಎ ನಂತರ ವಿಂಬಲ್ಡನ್ ಗೆದ್ದ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ವಿಂಬಲ್ಡನ್‌ನಲ್ಲಿ 2 ದಶಕಗಳ ಕಾಲ ಉಳಿದುಕೊಂಡಿದ್ದ ಬಿಗ್ ಫೋರ್ ಪ್ರಾಬಲ್ಯಕ್ಕೆ ಈ ಮೂಲಕ ತೆರೆಬಿದ್ದಿದೆ. ಅಲ್ಕರಾಝ್ ಮುಂದಿನ ಪೀಳಿಗೆಯ ಸೂಪರ್ ಸ್ಟಾರ್ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಇದನ್ನೂ ಓದಿ: ಫ್ರೆಂಚ್ ಓಪನ್: ದಂತಕಥೆ ಜೊಕೊವಿಚ್ ಮುಡಿಗೆ 23ನೇ ಗ್ರಾಂಡ್‌ಸ್ಲ್ಯಾಮ್
ಇಂತಹ ಆಟಗಾರನ ಎದುರು ಆಡೇ ಇಲ್ಲ!
ವಿಂಬಲ್ಡನ್ ಫೈನಲ್ ಸೋಲಿನ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ 23 ಗ್ರಾಂಡ್‌ಸ್ಲಾಮ್‌ಗಳ ವಿಜೇತ ನೊವಾಕ್ ಜೊಕೊವಿಚ್, ತಮ್ಮ ವೃತ್ತಿಬದುಕಿನಲ್ಲಿ ಕಾರ್ಲೊಸ್ ಅಲ್ಕರಾಝ್ ಮಾದರಿಯ ಆಟಗಾರನನ್ನು ಎದುರಾಗಿಯೇ ಇಲ್ಲ ಎಂದು ಗುಣಗಾನ ಮಾಡಿದ್ದಾರೆ.
“ಕಾರ್ಲೊಸ್ ಅಲ್ಕರಾಝ್ ಅವರಲ್ಲಿ ರೋಜರ್ ಫೆಡರರ್, ರಫಾಲ್ ನಡಾಲ್ ಮತ್ತು ನನ್ನ ಆಟದ ಸಮ್ಮಿಶ್ರಣ ಕಾಣಬಹುದು ಎಂದು ಚರ್ಚೆಯಾಗುತ್ತಿದೆ. ಇದನ್ನು ನಾನು ಕೂಡ ಒಪ್ಪಿಕೊಳ್ಳುತ್ತೇನೆ. ಕಾರ್ಲೊಸ್ ಪರಿಪೂರ್ಣ ಆಟಗಾರ. ನನ್ನ ವೃತ್ತಿಬದುಕಿನಲ್ಲಿ ಇಂತೊಬ್ಬ ಆಟಗಾರನ ಎದುರು ಈವರೆಗೆ ಆಡಿಲ್ಲ. ಮಾನಸಿಕವಾಗಿ ಕಾರ್ಲೊಸ್ ಅತ್ಯಂತ ಬಲಿಷ್ಠ ಆಟಗಾರ ಆಗಿದ್ದಾರೆ. 20ನೇ ವಯಸ್ಸಿಗೇ ಅವರ ಮಾನಸಿಕ ಸ್ಥಿತಿ ಸ್ವಾಪಜ್ಞತೆ, ಪ್ರಬುದ್ಧತೆ ಎಲ್ಲರನ್ನೂ ಮರುಳಾಗಿಸಿದೆ. ಅವರೊಬ್ಬ ಸ್ಪೇನ್‌ನ ಗೂಳಿ ಇದ್ದಂತೆ. ಸ್ಪರ್ಧಾತ್ಮಕ ಮನೋಭಾವ ಹಾಗೂ ಹೋರಾಟದ ಕಿಚ್ಚು ಅವರನ್ನು ಸಣ್ಣ ವಯಸ್ಸಿಗೇ ಈ ಹಂತಕ್ಕೆ ತಂದು ನಿಲ್ಲಿಸಿದೆ.
ನಡಾಲ್‌ರಂತೆಯೇ ಅತ್ಯುತ್ಕೃಷ್ಟ ರಕ್ಷಣಾತ್ಮಕ ಆಟ ಆಲ್ಕರಾಝ್‌ಗೂ ಒಲಿದಂತೆ ಕಾಣುತ್ತಿದೆ. ನನ್ನ ಪ್ರಮುಖ ಶಕ್ತಿ ಎನಿಸಿರುವ ಬ್ಯಾಕ್‌ಹ್ಯಾಂಡ್, ಡಬಲ್ ಹ್ಯಾಂಡೆಡ್ ಬ್ಯಾಕ್ ಹ್ಯಾಂಡ್ ಶಾಟ್‌ಗಳನ್ನು ಅಲ್ಕರಾಝ್ ನನ್ನಷ್ಟೇ ಚೆನ್ನಾಗಿ ಆಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಪರಿಸ್ಥಿತಿಗೆ ತಕ್ಕಂತೆ ಆಟದ ಶೈಲಿಯನ್ನು ಬದಲಿಸಿಕೊಳ್ಳುವ ಸಾಮರ್ಥ್ಯ ಈ ಹುಡುಗನಿಗೆ ಈಗಾಗಲೇ ಕರಗತಗೊಂಡಿರುವುದನ್ನು ನೋಡಿ ಮೂಕವಿಸ್ಮಿತನಾಗಿದ್ದೇನೆ” ಎಂದು ಜೊಕೊವಿಚ್ ಕೊಂಡಾಡಿದ್ದಾರೆ.
ಮಹಿಳಾ ಸೆಂಗಲ್ಸ್: ಶ್ರೇಯಾಂಕ ರಹಿತ ಆಟಗಾರ್ತಿಗೆ ಪ್ರಶಸ್ತಿ
ವಿಂಬಲ್ಡನ್ 2023ರ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಟ್ರೋಫಿ ಎತ್ತಿ ಹಿಡಿಯುವ ಮೂಲಕ ಝೆಕ್ ಗಣರಾಜ್ಯದ 24 ವರ್ಷದ ಆಟಗಾರ್ತಿ ಮರ್ಕೆಟಾ ವಾಂಡ್ರೊಸೊವಾ ಇತಿಹಾಸ ಬರೆದಿದ್ದಾರೆ. ಆಲ್ ಇಂಗ್ಲೆಂಡ್ ಟೆನಿಸ್ ಕ್ಲಬ್‌ನ ಸೆಂಟರ್ ಕೋರ್ಟ್‌ನಲ್ಲಿ ಶನಿವಾರ ನಡೆದಿದ್ದ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಅಧಿಕಾರಯುತ ಪ್ರದರ್ಶನ ನೀಡಿದ ಝೆಕ್ ಆಟಗಾರ್ತಿ ಮರ್ಕೆಟಾ, 6-4, 6-4 ಅಂತರದ ನೇರ ಸೆಟ್‌ಗಳ ಅಂತರದಲ್ಲಿ ಟ್ಯುನಿಶಿಯಾದ ಅನುಭವಿ ಆಟಗಾರ್ತಿ 28 ವರ್ಷದ ಓನ್ಸ್ ಜಬೇಯುರ್ ಎದುರು ಗೆದ್ದು ಇತಿಹಾಸ ಬರೆದರು. ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಇತಿಹಾಸದಲ್ಲಿ ಟ್ರೋಫಿ ಗೆದ್ದ ಮೊತ್ತ ಮೊದಲ ಶ್ರೇಯಾಂಕರಹಿತ ಆಟಗಾರ್ತಿ ಎಂಬ ಶ್ರೇಯಕ್ಕೂ ಅವರು ಪಾತ್ರರಾಗಿದ್ದಾರೆ.

ಟೂರ್ನಿಯಲ್ಲಿ ಶ್ರೇಯಾಂಕರಹಿತ ಆಟಗಾರ್ತಿಯಾಗಿ ಕಣಕ್ಕಿಳಿದಿದ್ದ 2021ರ ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಮರ್ಕೆಟಾ ವಾಂಡ್ರೊಸೊವಾ, ಟೂರ್ನಿಯುದ್ದಕ್ಕೂ ಭರ್ಜರಿ ಪ್ರದರ್ಶನ ನೀಡಿ ಫೈನಲ್‌ಗೆ ದಾಪುಗಾಲಿಟ್ಟಿದ್ದರು. ಅಂತೆಯೇ ಫೈನಲ್‌ನಲ್ಲೂ ಆತ್ಮವಿಶ್ವಾಸದ ಆಟವಾಡಿ 6ನೇ ಶ್ರೇಯಾಂಕಿತೆ ಓನ್ಸ್ ಜಬೇಯುರ್ ಅವರ ಸವಾಲನ್ನು ಹತ್ತಿಕ್ಕಿದರು.
ಇದು ಮರ್ಕೆಟಾ ಗೆದ್ದ ಚೊಚ್ಚಲ ಗ್ರ್ಯಾಂಡ್‌ಸ್ಲಾಮ್ ಸಿಂಗಲ್ಸ್ ಕಿರೀಟವಾಗಿದೆ. 2019ರ ಫ್ರೆಂಚ್ ಓಪನ್ ಸಿಂಗಲ್ಸ್ ಫೈನಲ್ ತಲುಪಿದ್ದ ಮರ್ಕೆಟಾ, ಆಗಿನ ವಿಶ್ವದ ನಂ.1 ಆಟಗಾರ್ತಿ ಆಸ್ಟ್ರೇಲಿಯಾದ ಆಷ್ಲೇ ಬಾರ್ಟಿ ಎದುರು ನೇರ ಸೆಟ್‌ಗಳಿಂದ ಸೋತು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟಿದ್ದರು.