Homeಮುಖಪುಟಹಿಂದಿ ಕಲಿಕೆ ಬಗ್ಗೆ ಸಂಸತ್‌ನಲ್ಲಿ ನಿರ್ಮಲಾ ಸೀತಾರಾಮನ್ ಹೇಳಿಕೆ; ಹಿಂದಿ ಹೇರಿಕೆಗಾಗಿ ಇತಿಹಾಸವನ್ನೇ ತಿರುಚುವುದೇ?

ಹಿಂದಿ ಕಲಿಕೆ ಬಗ್ಗೆ ಸಂಸತ್‌ನಲ್ಲಿ ನಿರ್ಮಲಾ ಸೀತಾರಾಮನ್ ಹೇಳಿಕೆ; ಹಿಂದಿ ಹೇರಿಕೆಗಾಗಿ ಇತಿಹಾಸವನ್ನೇ ತಿರುಚುವುದೇ?

- Advertisement -
- Advertisement -

“ತಮಿಳರು ಹಿಂದಿ ವಿರೋಧಿಗಳು ಎಂಬ ಅಹಮ್ಮಿನಿಂದ ನಮ್ಮ ಮೇಲೆ ಹಿಂದಿ ಮತ್ತು ಸಂಸ್ಕೃತ ಕಲಿಯದಂತಹ ಹೇರಿಕೆ ಇತ್ತು. ತಮಿಳುನಾಡಿನಲ್ಲಿ ದಶಕಗಳ ಕಾಲದಿಂದಲೂ ಈ ಹೇರಿಕೆ ಮುಂದುವರಿಯುತ್ತಿದ್ದು, ನಮ್ಮನ್ನು ಹಿಂದಿ-ಸಂಸ್ಕೃತದ ಓದಿನಿಂದ ವಂಚಿಸಿದರು” ಸಂಸತ್‌ನಲ್ಲಿ ಹೀಗೊಂದು ಸುಳ್ಳು ಹೇಳಿಕೆ ನೀಡಿ ಸಿಕ್ಕಿಕೊಂಡು ಇದೀಗ ಪೇಚಿಗೆ ಸಿಲುಕಿರುವವರು ಬೇರಾರೂ ಅಲ್ಲ, ನಮ್ಮ ದೇಶದ ಮಾನ್ಯ ಆರ್ಥಿಕ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್.

ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಳೆದ ವಾರ ವಿರೋಧ ಪಕ್ಷಗಳು ಆಡಳಿತಾರೂಢ ಬಿಜೆಪಿ ವಿರುದ್ಧ ಸಂಸತ್‌ನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದವು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿ ಹಾಗೂ ಮಣಿಪುರದಲ್ಲಿ ನಡೆಯುತ್ತಿರುವ ಸಾಲುಸಾಲು ಅತ್ಯಾಚಾರ ಹಾಗೂ ಹತ್ಯೆಗಳ ಪ್ರಕರಣಗಳನ್ನು ’ಮಹಾಭಾರತದ ದ್ರೌಪದಿ ವಸ್ತ್ರಾಪಹರಣ’ ಸನ್ನಿವೇಶಕ್ಕೆ ಹೋಲಿಸಿ ಡಿಎಂಕೆ ಸಂಸದೆ ಕನಿಮೊಳಿ ಕಿಡಿಕಾರಿದ್ದರು.

“ದ್ರೌಪದಿ ವಸ್ತ್ರಾಪಹರಣದಿಂದ ಇಡೀ ಮಹಾಭಾರತ ನಡೆಯಿತು. ಇಂದು ಮಣಿಪುರದಲ್ಲಿ ನೂರಾರು ದ್ರೌಪದಿ ವಸ್ತ್ರಾಪಹರಣ ಪ್ರಕರಣಗಳು ನಡೆಯುತ್ತಿವೆ. ತಮ್ಮದು ಡಬಲ್ ಇಂಜಿನ್ ಸರ್ಕಾರ ಎಂದು ಎದೆ ತಟ್ಟಿಕೊಳ್ಳುವ ಮೋದಿಯವರು ಈ ಎಲ್ಲಾ ಅನಾಚಾರಗಳಿಗೆ ಉತ್ತರ ನೀಡಲೇಬೇಕು” ಎಂದು ಕನಿಮೊಳಿ ಒತ್ತಾಯಿಸಿದ್ದರು.

ಕನಿಮೊಳಿ ಪ್ರಶ್ನೆಗೆ ಉತ್ತರ ನೀಡಲು ಮುಂದಾದ ಸಚಿವೆ ನಿರ್ಮಲಾ ಸೀತಾರಾಮನ್, ಸಂಬಂಧವೇ ಇಲ್ಲದ ಮತ್ತದೇ ತಮಿಳುನಾಡು ಮತ್ತು ಹಿಂದಿ ವಿರೋಧಿ ಚಳವಳಿಯ ವಿಚಾರವನ್ನು ಪುನರುಚ್ಚರಿಸುತ್ತಾ ತಮಿಳಿನಲ್ಲೇ ಮಾತನಾಡಲಾರಂಭಿಸಿದರು. ಈ ವೇಳೆ, “ತಮಿಳುನಾಡಿನ ಹಿಂದಿ ವಿರೋಧಿ ಚಳವಳಿಯಿಂದ ನಾವು ಹಿಂದಿ ಮತ್ತು ಸಂಸ್ಕೃತ ಕಲಿಕೆಯಿಂದ ವಂಚಿತರಾದೆವು” ಎಂಬ ಹೇಳಿಕೆಯನ್ನೂ ದಾಖಲಿಸಿದ್ದಾರೆ.

ಈ ಹೇಳಿಕೆ ಇದೀಗ ತಮಿಳುನಾಡಿನಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದು, #NirmalaTheLiar ಎಂಬ ಹ್ಯಾಶ್‌ಟ್ಯಾಗ್ ಸಾಕಷ್ಟು ವೈರಲ್ ಆಗುತ್ತಿದೆ. ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗೆ ಹಲವರು ಪ್ರತಿಕ್ರಿಯಿಸುತ್ತಿದ್ದಾರೆ.

ತಮಿಳುನಾಡಿನ ಖ್ಯಾತ ಪತ್ರಕರ್ತ ವಿಜಯ್ ಶಂಕರ್ ಮಾಧ್ಯಮಗಳ ಎದುರು ಮಾತನಾಡಿದ್ದು, “ಸಚಿವೆ ನಿರ್ಮಲಾ ಸೀತಾರಾಮನ್ ತಿರುಚ್ಚಿ ಜಿಲ್ಲೆಯಲ್ಲಿ ಓದಿದ ’ಸೀತಾರಾಮ ರಾಮಸ್ವಾಮಿ’ ಶಾಲೆಯಲ್ಲೇ ನಾನೂ ಓದಿದ್ದು, ಆ ಶಾಲೆಯಲ್ಲಿ ಹಿಂದಿಯನ್ನು ಎರಡನೇ ಭಾಷೆಯನ್ನಾಗಿ ಹಲವು ದಶಕಗಳಿಂದಲೂ ಕಲಿಸಲಾಗುತ್ತಿದೆ. ಆ ಶಾಲೆಯ ಆವರಣದಲ್ಲೇ ಇರುವ ’ಸಾವಿತ್ರಿ ವಿದ್ಯಾಶಾಲಾ’ದಲ್ಲಿ ಸಂಸ್ಕೃತವನ್ನೂ ಕಲಿಸಲಾಗುತ್ತಿದೆ” ಎಂದು ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈ ವಿಚಾರವನ್ನು ವಿಜಯ್ ಶಂಕರ್ ದಾಖಲಿಸಿದ್ದಾರೆ.

ಮತ್ತೊಬ್ಬ ಹಿರಿಯ ಪತ್ರಕರ್ತ ಆರ್.ಕೆ ರಾಧಾಕೃಷ್ಣ ಸಹ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ತಮಿಳುನಾಡಿನಲ್ಲಿ ಹಿಂದಿ ಕಲಿಯುವವರಿಗೆ ವಿದ್ಯಾರ್ಥಿ ವೇತನದ ವ್ಯವಸ್ಥೆಯೂ ಇದೆ. ನನ್ನ ಸಹೋದರಿ ಮತ್ತು ಗೆಳೆಯರು ವಿದ್ಯಾರ್ಥಿವೇತನ ಪಡೆಯುವ ಸಲುವಾಗಿಯೇ ಹಿಂದಿ ಓದಿದರು” ಎಂದು ಉಲ್ಲೇಖಿಸಿದ್ದಾರೆ.

ಇದರ ಬೆನ್ನಿಗೆ ಖ್ಯಾತ ಹಿನ್ನೆಲೆ ಗಾಯಕಿ ಚಿನ್ಮಯಿ, “ದಕ್ಷಿಣ ಭಾರತದ ಪೈಕಿ ’ಹಿಂದಿ ಪ್ರಚಾರ ಸಭಾ’ದಲ್ಲಿ ಸೇರಿ ಹಿಂದಿ ಕಲಿಯುವವರು ತಮಿಳುನಾಡಿನಲ್ಲೇ ಅಧಿಕ. ನಾನು ಹಿಂದಿ ಜೊತೆಗೆ ಸಂಸ್ಕೃತ, ತೆಲುಗು, ಫ್ರೆಂಚ್ ಭಾಷೆಯನ್ನೂ ಚೆನ್ನೈನಲ್ಲೇ ಕಲಿತಿದ್ದೇನೆ” ಎಂದಿದ್ದಾರೆ. ಅಲ್ಲದೆ, “ತಮಿಳುನಾಡಿನಲ್ಲಿ ಹಿಂದಿ ವಿರೋಧಿ ಚಳವಳಿ ಎಂಬುದು, ಹಿಂದು ಹೇರಿಕೆಯ ವಿರುದ್ಧದ ಚಳವಳಿಯೇ ವಿನಃ ಕಲಿಕೆಯ ವಿರುದ್ಧದ ಚಳವಳಿಯಲ್ಲ. ಹೀಗಾಗಿ ಸಚಿವರು ನಿಜವಾದ ಇತಿಹಾಸವನ್ನು ಒಮ್ಮೆ ಓದಿಕೊಳ್ಳಲಿ” ಎಂದು ಸಲಹೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ತಮಿಳುನಾಡಿನ “ಹಿಂದಿ ವಿರೋಧಿ” ಚಳವಳಿಯ ಇತಿಹಾಸವನ್ನು ನಾವಿಲ್ಲಿ ತಿಳಿದುಕೊಳ್ಳುವ ಅಗತ್ಯವೂ ಇದೆ.

ತಮಿಳುನಾಡಿನ ಹಿಂದಿ ವಿರೋಧಿ ಚಳವಳಿ

ತಮಿಳುನಾಡಿನಲ್ಲಿ ಹಿಂದಿ ವಿರೋಧಿ ಮತ್ತು ತಮಿಳು ಭಾಷಾ ಚಳವಳಿ ಕಟ್ಟಿ ದಕ್ಷಿಣ ಭಾರತದಲ್ಲಿ ಹೊಸ ರಾಜಕಾರಣದ ಪಥ ಪರಿಕಲ್ಪನೆಯನ್ನು ಕಟ್ಟಿಕೊಟ್ಟ ಮೊದಲಿಗರಲ್ಲಿ ಹೋರಾಟಗಾರ ರಾಮಸ್ವಾಮಿ ಪೆರಿಯಾರ್ ಮುಖ್ಯವಾದವರು. 1938ರಲ್ಲಿ ಮದ್ರಾಸ್ ಪ್ರಾಂತ್ಯದಲ್ಲಿದ್ದ ಸಿ. ರಾಜಗೋಪಾಲಾಚಾರಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದಿ ಭಾಷೆಯನ್ನು ಶಾಲೆಗಳಲ್ಲಿ ಕಡ್ಡಾಯವಾಗಿ ಬಳಸಬೇಕು ಎಂಬ ಪ್ರಸ್ತಾಪವನ್ನು ಮುಂದಿಟ್ಟಿತ್ತು. ಆಗಲೇ ಪೆರಿಯಾರ್, ಅಣ್ಣಾದೊರೈ ಹಾಗೂ ಖ್ಯಾತ ಕವಿ ಭಾರತಿದಾಸನ್ ಇದನ್ನು ವಿರೋಧಿಸಿ ಚಳವಳಿ ರೂಪಿಸಿದ್ದರು.

ರಾಮಸ್ವಾಮಿ ಪೆರಿಯಾರ್

ಫೆಬ್ರವರಿ 27, 1938ರಲ್ಲಿ ತಮಿಳುನಾಡಿನಲ್ಲಿ ಮೊದಲ ಹಿಂದಿ ಭಾಷಾ ವಿರೋಧಿ ಸಮ್ಮೇಳನ ನಡೆಸಲಾಗಿತ್ತು. ಕಾಂಚೀಪುರಂನಲ್ಲಿ ನಡೆದ ಸಮ್ಮೇಳನದಲ್ಲಿ ಮಾತನಾಡುವ ಮೂಲಕ ದಿವಂಗತ ಮಾಜಿ ಮುಖ್ಯಮಂತ್ರಿ ಅಣ್ಣಾದೊರೈ ರಾಜ್ಯಾದ್ಯಂತ ದೊಡ್ಡ ಸಂಚಲನವನ್ನೇ ಸೃಷ್ಟಿಮಾಡಿದ್ದರು.

ಈ ಸಮ್ಮೇಳನದಿಂದಾಗಿ ತಮಿಳುನಾಡಿನಾದ್ಯಂತ ಹಿಂದಿ ಹೇರಿಕೆಯ ವಿರುದ್ಧ ದೊಡ್ಡ ಮಟ್ಟದ ಜನಾಂದೋಲನ ಸೃಷ್ಟಿಯಾಯಿತು. ಅದು ದೊಡ್ಡ ಮಟ್ಟದ ಹಿಂಸಾಚಾರಕ್ಕೂ ಕಾರಣವಾಗಿ ಸಂಘಟನೆಗೆ ಸೇರಿದ ನಟರಾಜನ್ ಹಾಗೂ ತಾಳಮುತ್ತು ಎಂಬುವವರು ಪೊಲೀಸರ ಥಳಿತಕ್ಕೆ ಬಲಿಯಾಗಿದ್ದರು. ಈ ಇಬ್ಬರ ಬಲಿದಾನ ಹಿಂದಿ ವಿರೋಧಿ ಚಳವಳಿಗೆ ಬೇರೆಯದೇ ದಿಕ್ಕು ತೋರಿಸಿತು. ಪರಿಣಾಮ ಜನರ ಹೋರಾಟಕ್ಕೆ ಮಣಿದ ಮದ್ರಾಸ್ ಪ್ರಾಂತ್ಯದ ಸರ್ಕಾರ ಕೊನೆಗೂ 1940ರಲ್ಲಿ ಕಡ್ಡಾಯ ಹಿಂದಿ ಕಲಿಕೆಯ ಆದೇಶವನ್ನು ಹಿಂತೆಗೆದುಕೊಂಡಿತ್ತು. ಆದರೆ ಈ ಪ್ರತಿಭಟನೆ ಮತ್ತಷ್ಟು ತಾರಕಕ್ಕೇರಿದ್ದು ಮಾತ್ರ 1965ರಲ್ಲಿ.

1965ರಲ್ಲಿ ಸ್ವತಂತ್ರ ದ್ರಾವಿಡ ರಾಷ್ಟ್ರ ಪರಿಕಲ್ಪನೆ

1965ರಲ್ಲಿ ಪ್ರಧಾನಿ ಜವಹರ್‌ಲಾಲ್ ನೆಹರು ಮರಣಾನಂತರ ಲಾಲ್ ಬಹದ್ದೂರ್ ಶಾಸ್ತ್ರಿ ಪ್ರಧಾನಿಯಾಗಿದ್ದ ಕಾಲದಲ್ಲಿ ಮತ್ತೊಮ್ಮೆ ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸುವ ಎಲ್ಲಾ ಪ್ರಯತ್ನಗಳು ವ್ಯಾಪಕವಾಗಿ ನಡೆದಿತ್ತು. ಕಾಂಗ್ರೆಸ್‌ನ ಈ ಪ್ರಯತ್ನಕ್ಕೆ ಬಹುತೇಕ ಎಲ್ಲ ರಾಜ್ಯಗಳು ಮತ್ತು ಪ್ರಾದೇಶಿಕ ಪಕ್ಷಗಳು ಮೌನ ಸಮ್ಮತಿ ನೀಡಿದ್ದವು. ಆದರೆ, ಆ ಒಂದು ಪ್ರಾದೇಶಿಕ ಪಕ್ಷ ಮಾತ್ರ ರಾಷ್ಟ್ರಭಾಷೆಯ ಅವತಾರದಲ್ಲಿ ಹಿಂದಿ ಹೇರಿಕೆಯ ವಿರುದ್ಧ ದ್ವನಿ ಎತ್ತಿತ್ತು. ಆ ಪಕ್ಷದ ಹೆಸರೇ “ದ್ರಾವಿಡ ಮುನ್ನೇತ್ರ ಕಳಗಂ” (ಡಿಎಂಕೆ). ತಂದೈ ಪೆರಿಯಾರ್, ಅಣ್ಣಾದೊರೈ ಹಾಗೂ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಕರುಣಾನಿಧಿ ಈ ಚಳವಳಿಯ ಮುಂಚೂಣಿ ನಾಯಕರಾಗಿದ್ದರು.

1953ರಲ್ಲೇ ಕಲ್ಲಕುಡಿ ಎಂಬ ತಮಿಳುನಾಡಿನ ಪುರಾತನ ನಗರಕ್ಕೆ ದಾಲ್ಮಿಯಾಪುರಂ (ಸಿಮೆಂಟ್ ಕಂಪೆನಿಯ ಹೆಸರು) ಎಂದು ಹೆಸರಿಡಲು ನಿರ್ಧರಿಸಿದ್ದ ಕೇಂದ್ರ ಸರ್ಕಾರದ ವಿರುದ್ಧ ಈ ಮೂವರು ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿದ್ದರು. ಕರುಣಾನಿಧಿಯಂತೂ ರೈಲು ಹಳಿಗಳ ಮೇಲೆ ಮಲಗಿ ಪ್ರತಿಭಟಿಸಿ ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿ 3 ತಿಂಗಳು ಸೆರೆವಾಸ ಅನುಭವಿಸಿದ್ದರು. ಅಣ್ಣಾದೊರೈ ನೇತೃತ್ವದಲ್ಲಿ ಮತ್ತೊಮ್ಮೆ ಹಿಂದಿ ವಿರೋಧಿ ಚಳವಳಿ ತೀವ್ರವಾಗಿತ್ತು. ಆದರೆ ಅಣ್ಣಾ ಅವರ ಸೇನಾನಿಯಾಗಿ ಆ ಚಳವಳಿ ಇಡೀ ತಮಿಳುನಾಡಿನಾದ್ಯಂತ ವ್ಯಾಪಿಸುವಂತೆ ಮಾಡಿದ್ದು ಮುತ್ತುವೇಲ್ ಕರುಣಾನಿಧಿ.

ಇದನ್ನೂ ಓದಿ: ‘ಜನರ ಮೇಲಿನ ಹಿಂದಿ ಹೇರಿಕೆಯನ್ನು ವಿರೋಧಿಸುತ್ತೇವೆ’: ಕೇಂದ್ರದ ವಿರುದ್ಧ ಗುಡುಗಿದ ಸ್ಟಾಲಿನ್

ಕರುಣಾನಿಧಿಯವರ ಒಂದೇ ಒಂದು ಕೂಗಿಗೆ ಕಾಲೇಜಿನ ವಿದ್ಯಾರ್ಥಿಗಳು ತರಗತಿಗಳನ್ನು ಬಿಟ್ಟು ರಸ್ತೆಗಿಳಿದಿದ್ದರು. ಕೇಂದ್ರದ ವಿರುದ್ಧ ಘೋಷಣೆ ಕೂಗಿದರು. ತಂಜಾವೂರು ಮಧುರೈಗಳಲ್ಲಿ ವಿದ್ಯಾರ್ಥಿಗಳ ಹೋರಾಟ ನಿಯಂತ್ರಣವನ್ನೂ ಮೀರಿತ್ತು. ಈ ಹೋರಾಟದ ಕಿಡಿ ಅಷ್ಟೇ ಶೀಘ್ರವಾಗಿ ಕೇರಳ, ಆಂಧ್ರಪ್ರದೇಶ ಹಾಗೂ ಅಂದಿನ ಮೈಸೂರು ರಾಜ್ಯಕ್ಕೂ ವ್ಯಾಪಿಸಿತ್ತು. “ದ್ರಾವಿಡ್ ಮುನ್ನೇತ್ರ ಕಳಗಂ” ಸ್ಥಾಪಕ ಅಣ್ಣಾದೊರೈ ದ್ರಾವಿಡರಿಗೆ ಪ್ರತ್ಯೇಕ ರಾಷ್ಟ್ರದ ಒತ್ತಾಯವನ್ನು ಕೇಂದ್ರದ ಮುಂದಿರಿಸಿದ್ದರು. ಹೋರಾಟ ತೀವ್ರ ಸ್ವರೂಪ ಪಡೆದಿತ್ತು. ಪರಿಣಾಮ ಕೊನೆಗೂ ಮಣಿದ ಕೇಂದ್ರ ಸರ್ಕಾರ ಹಿಂದಿಯನ್ನು ರಾಷ್ಟ್ರಭಾಷೆ ಮಾಡುವ ತನ್ನ ನಿರ್ಧಾರದಿಂದ ಹಿಂದೆ ಸರಿದಿತ್ತು.

ಹಿಂದಿ ಹೇರಿಕೆಯ ವಿರುದ್ಧ ರೂಪಿಸಿದ ಸ್ವಾಭಿಮಾನಿ ಹೋರಾಟ ಕಾರಣದಿಂದಲೇ ಮುಖ್ಯವಾಗಿ, ಡಿಎಂಕೆ 1967ರಲ್ಲಿ ತಮಿಳುನಾಡಿನಲ್ಲಿ ಮೊದಲ ಕಾಂಗ್ರೇಸೇತರ ಸರ್ಕಾರ ರೂಪಿಸಿತ್ತು. ಅಲ್ಲಿಂದ ಈಗಿನವರೆಗೂ ಕೇಂದ್ರ ಸರ್ಕಾರ ಒಂದಲ್ಲಾ ಒಂದು ರೀತಿಯಲ್ಲಿ ತಮಿಳುನಾಡಿನಲ್ಲಿ ಹಿಂದಿ ಹೇರಿಕೆಗೆ ನಾನಾ ಕಸರತ್ತು ನಡೆಸುತ್ತಲೇ ಇದೆ. ’ತ್ರಿಭಾಷಾ ನೀತಿ, ನೀಟ್ ಪರೀಕ್ಷೆ’ಗಳೂ ಇಂತಹ ಒಂದು ಕಸರತ್ತಿನ ಭಾಗವೇ. ಆದರೆ, ತಮಿಳುನಾಡಿನಲ್ಲಿ ಗಟ್ಟಿ ನೆಲೆ ಹೊಂದಿರುವ ಡಿಎಂಕೆ ಮತ್ತು ದಾಯಾದಿ ಪಕ್ಷವಾದ ಎಡಿಎಂಕೆ ನಡುವೆ ರಾಜಕೀಯವಾಗಿ ಏನೇ ಕಿತ್ತಾಟ ಇದ್ದರೂ, ಹಿಂದಿ ಹೇರಿಕೆ ಬಗ್ಗೆ ಈ ಎರಡೂ ಪಕ್ಷಗಳ ನಿಲುವು ಒಂದೇ ಎಂಬುದು ವಿಶೇಷ.

ಕರುಣಾನಿಧಿ

ಈ ಪಕ್ಷಗಳ ಹೋರಾಟ ಹಿಂದಿ ಹೇರಿಕೆಯ ವಿರುದ್ಧವೇ ಹೊರತು, ಕಲಿಕೆಯ ವಿರುದ್ಧವಲ್ಲ. ಈಗಲೂ ತಮಿಳುನಾಡಿನ ಎಲ್ಲಾ ಶಾಲೆಗಳಲ್ಲೂ ಹಿಂದಿ ಮತ್ತು ಸಂಸ್ಕೃತ ಕಲಿಕೆಗೆ ಅವಕಾಶ ಇದೆ. ಆದರೆ, ಹಿಂದಿ-ಸಂಸ್ಕೃತ ಐಚ್ಛಿಕ ವಿಷಯವೇ ವಿನಃ ಕಡ್ಡಾಯ ಕಲಿಕೆಯ ವಿಷಯವಲ್ಲ. ಕೇಂದ್ರ ಸರ್ಕಾರ ತಮಿಳುನಾಡಿನ ಮೇಲೆ ವಿಶೇಷವಾಗಿ ಕೆಂಡಕಾರುವುದು ಮತ್ತು ಸಚಿವರೇ ಮುಂದೆ ನಿಂತು ಪೂರ್ವಾಗ್ರಹಪೀಡಿತ ಸುಳ್ಳು ಹೇಳಿಕೆಗಳನ್ನು ನೀಡುತ್ತಿರುವುದೂ ಇದೇ ಕಾರಣಕ್ಕೆ ಎಂಬುದನ್ನು ಅರ್ಥಮಾಡಿಕೊಳ್ಳಲು ಕಷ್ಟವೇನಲ್ಲ.

ತ್ರಿಭಾಷಾ ನೀತಿ ಮತ್ತು ನೀಟ್ ಎಂಬ ಪರೋಕ್ಷ ಹಿಂದಿ ಹೇರಿಕೆ

1968ರಲ್ಲೇ ತ್ರಿಭಾಷಾ ನೀತಿಯನ್ನು ಶಿಫಾರಸ್ಸು ಮಾಡಲಾಗಿತ್ತು; ಈ ಶಿಫಾರಸ್ಸಿನ ಅನ್ವಯ ಎಲ್ಲಾ ರಾಜ್ಯದ ವಿದ್ಯಾರ್ಥಿಗಳು ಹಿಂದಿಯನ್ನು ಎರಡನೇ ಭಾಷೆಯಾಗಿ ಕಲಿಯಲೇಬೇಕಿತ್ತು. ಆದರೆ, ತಮಿಳುನಾಡಿನ ಕಠಿಣ ವಿರೋಧದ ಕಾರಣಕ್ಕೆ ಈ ಶಿಫಾರಸ್ಸನ್ನು ಆ ರಾಜ್ಯದ ಮಟ್ಟಿಗೆ ಕೈಬಿಡಲಾಗಿತ್ತು. ಆದರೆ, ಇಂದಿನ ಬಿಜೆಪಿ ಸರ್ಕಾರ ಈ ನೀತಿಯನ್ನು ಮತ್ತೆ ಎಲ್ಲ ರಾಜ್ಯಗಳ ಮೇಲೆ ಹೇರಿದೆ. ಇದಲ್ಲದೆ, ನೀಟ್ ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳ ಕೊರಳಿಗೆ ಯಮಪಾಶವಾಗಿದೆ.

ತಮಿಳುನಾಡು ಮಾತ್ರವಲ್ಲದೇ ಎಲ್ಲಾ ರಾಜ್ಯಗಳಲ್ಲೂ ಹಿಂದಿ ಕಲಿತರೆ ಮಾತ್ರ ಬದುಕು ಎಂಬ ಪರಿಸ್ಥಿತಿ ನಿರ್ಮಾಣ ಮಾಡುವ ಸಲುವಾಗಿಯೇ ಇಂದಿನ ಕೇಂದ್ರ ಬಿಜೆಪಿ ಸರ್ಕಾರ “ತ್ರಿಭಾಷಾ ನೀತಿ ಮತ್ತು ನೀಟ್” ಪರೀಕ್ಷೆಗಳನ್ನು ಜಾರಿಗೆ ತರುವ ಮೂಲಕ ಪರೋಕ್ಷವಾಗಿ ಹಿಂದಿಯನ್ನು ಹೇರುತ್ತಿದೆ ಎಂಬುದು ತಿಳಿಯದ ವಿಚಾರ ಏನಲ್ಲ.

ನೀಟ್ ಕಾರಣಕ್ಕೆ ದಕ್ಷಿಣ ರಾಜ್ಯಗಳ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಆಯಾ ರಾಜ್ಯಗಳ ವಿದ್ಯಾರ್ಥಿಗಳಿಗೆ ದಕ್ಕದೆಹೋಗುತ್ತಿವೆ. ಹೆಚ್ಚು ಉಳ್ಳವರ ಪಾಲಾಗುತ್ತಿವೆ. ಕಳೆದ ನಾಲ್ಕು ವರ್ಷದಲ್ಲಿ ನೀಟ್ ಪರೀಕ್ಷೆ ಕಾರಣಕ್ಕೆ ತಮಿಳುನಾಡಿನಲ್ಲಿ ಮಾತ್ರ 16 ಜನ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೇ ಕಾರಣಕ್ಕೆ ತಮಿಳುನಾಡು ಸರ್ಕಾರ ತ್ರಿಭಾಷಾ ನೀತಿ ಮತ್ತು ನೀಟ್ ಪರೀಕ್ಷೆ ವಿರುದ್ಧ ಸದನದಲ್ಲಿ ನಿರ್ಣಯ ಮಂಡಿಸಿದೆ.

ಒಟ್ಟಾರೆ ದಶಕಗಳಿಂದಲೂ ಕೇಂದ್ರದ ಯಾವ ಒತ್ತಡಕ್ಕೂ ತಮಿಳುನಾಡು ಮಣಿಯುತ್ತಿಲ್ಲ. ಪರಿಣಾಮ ಬಿಜೆಪಿಯ ಫೇಕ್ ನ್ಯೂಸ್ ಫ್ಯಾಕ್ಟರಿಗಳು ಎಂದಿನಂತೆ ತನ್ನ ’ಸುಳ್ಳುಸುದ್ದಿ’ ಹರಡುವ ಕಾಯಕವನ್ನು ಎಗ್ಗಿಲ್ಲದೆ ಮುಂದುವರೆಸುತ್ತಿವೆ. ಆದರೆ, ಪ್ರತಿಷ್ಠಿತ ಖಾತೆ ಹೊಂದಿರುವ ಸಚಿವರೊಬ್ಬರು ದೇಶದ ಆತ್ಮವಾದ ಸಂಸತ್‌ನಲ್ಲೇ ಸುಳ್ಳಾಡಿರುವುದು ಮಾತ್ರ ವಿಪರ್ಯಾಸ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್‌ಗೆ ಯಾರೂ ದೇಶ ಪ್ರೇಮದ ಪಾಠ ಹೇಳಿ ಕೊಡುವ ಅಗತ್ಯವಿಲ್ಲ: ಸಚಿವ ಪರಮೇಶ್ವರ್

0
ರಾಜ್ಯಸಭೆ ಚುನಾವಣೆಯ ಗೆಲುವಿನ ಸಂಭ್ರಮಾಚರಣೆ ವೇಳೆ ನಾಸಿರ್ ಹುಸೇನ್ ಬೆಂಬಲಿಗರು 'ಪಾಕಿಸ್ತಾನ್ ಝಿಂದಾಬಾದ್' ಘೋಷಣೆ ಕೂಗಿದ್ದಾರೆ ಎಂಬ ಆರೋಪದ ಕುರಿತು ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಗೆ ತಿರುಗೇಟು ಕೊಟ್ಟಿದ್ದಾರೆ. ಇಂದು...