Homeಮುಖಪುಟಅನಿಮೇಷನ್‌ ವಿಡಿಯೊ ಆಧಾರದಲ್ಲಿ ರೈತರ ಮೇಲೆ ಪ್ರಧಾನಿ ಕೊಲೆ ಸಂಚು ಆರೋಪ ಹೊರಿಸಿದ ‘ನ್ಯೂಸ್‌ ಫಸ್ಟ್‌...

ಅನಿಮೇಷನ್‌ ವಿಡಿಯೊ ಆಧಾರದಲ್ಲಿ ರೈತರ ಮೇಲೆ ಪ್ರಧಾನಿ ಕೊಲೆ ಸಂಚು ಆರೋಪ ಹೊರಿಸಿದ ‘ನ್ಯೂಸ್‌ ಫಸ್ಟ್‌ ಕನ್ನಡ?’

- Advertisement -
- Advertisement -

ಬುಧವಾರದಂದು ಪ್ರಧಾನಿ ಮೋದಿ ಪಂಜಾಬ್‌ಗೆ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದಾಗ ಉಂಟಾದ ಭದ್ರತಾ ಲೋಪ ಪ್ರಕರಣದ ಹಿನ್ನಲೆಯಲ್ಲಿ, ಕನ್ನಡದ ಸುದ್ದಿ ವಾಹಿನಿ ‘ನ್ಯೂಸ್‌ ಫಸ್ಟ್‌ ಕನ್ನಡ’ ಸುದ್ದಿಯೊಂದನ್ನು ಮಾಡಿದೆ. ಒಂದು ವರ್ಷ ಹಿಂದೆಯೆ ಪ್ರಧಾನಿಯ ಕೊಲೆಗೆ ಸಂಚು ನಡೆದಿತ್ತೆ? ಎಂದು ಪ್ರಶ್ನಿಸಿ ಊಹಾಪೋಹಗಳ ಮೇಲೆ ವರದಿಯೊಂದನ್ನು ಶುಕ್ರವಾರ ಬಿತ್ತರಿಸಿದೆ.

‘ನ್ಯೂಸ್‌ ಫಸ್ಟ್‌ ಕನ್ನಡ’ ತನ್ನ ಸುದ್ದಿಯನ್ನು ಒಂದೂವರೆ ವರ್ಷದ ಹಳೆಯ ಅನಿಮೇಷನ್‌ ವಿಡಿಯೊ ಹಾಡಿನ ಆಧಾರದ ಮೇಲೆ ಮಾಡಿದೆ ಎಂಬುವುದು ವಿಶೇಷವಾಗಿದೆ. ಮಾಧ್ಯಮವು ತಾನು ಮಾಡಿದ ಸುದ್ದಿಯನ್ನು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿದೆ.

ಇದನ್ನೂ ಓದಿ:ಪಂಜಾಬ್‌ ಭದ್ರತಾ ಲೋಪ ಆರೋಪ: 100 ಕ್ಕೂ ಹೆಚ್ಚು ಅಪರಿಚಿತರ ವಿರುದ್ಧ ಎಫ್‌ಐಆರ್

ಒಟ್ಟು 13:19 ಸೆಕೆಂಡ್‌ ಈ ವಿಡಿಯೊ ಸುದ್ದಿ ಇದ್ದು, ಆಂಕರ್‌ಗಳು ‘ಪ್ರಧಾನಿ ಮೇಲೆ ದಾಳಿಗೆ 2020 ರಲ್ಲೇ ಸಂಚು ನಡೆದಿತ್ತಾ?’ ಎಂದು ಪ್ರಶ್ನಿಸುತ್ತಲೇ ಪ್ರಾರಂಭಿಸುತ್ತಾರೆ. ನಂತರ ‘ಮೋದಿ ಮೇಲೆ ದಾಳಿ ಸಂಚಿನ ಸ್ಪೋಟಕ ವಿಡಿಯೊ ಬಹಿರಂಗ’, ‘ಫಿರೋಜ್‌ಪುರ ಬ್ರಿಡ್ಜ್‌ ಮೇಲೆ ದಾಳಿಗೆ ಮಾಡಿದ್ರಾ ಪ್ಲಾನ್?’, ‘ದಾಳಿಗೆ ರೂಪಿಸಿದ್ದ ಅನಿಮೇಷನ್‌ ವಿಡಿಯೊ’, ‘1 ನಿಮಿಷ 7 ಸೆಕೆಂಡ್‌‌ನ ಅನಿಮೇಷನ್‌ ವಿಡಿಯೊ’, ‘2020 ರ ಡಿಸೆಂಬರ್‌ನಲ್ಲಿ ವಿಡಿಯೊ ಬಿಡುಗಡೆ’, ‘ಘಟನೆ ನಡೆದ ಫಿರೋಝ್‌ಪುರದಿಂದಲೇ ದೃಶ್ಯ ತಯಾರಾಗಿದೆ’, ‘ಮೋದಿಯನ್ನು ಸುತ್ತುವರೆಯಲು 2020 ರಲ್ಲೇ ಪ್ರೀಪ್ಲಾನ್’ ಎಂದು ನಿರೂಪಕಿಯು ಹೇಳುತ್ತಾ, ನಂತರ ಅನಿಮೇಷನ್‌ನ ಒಂದೊಂದೇ ದೃಶ್ಯಗಳನ್ನು ತಮ್ಮ ವಿಡಿಯೊದಲ್ಲಿ ತೋರಿಸುತ್ತಾರೆ.

ವಾಸ್ತವದಲ್ಲಿ ನಿರೂಪಕಿ ಹೇಳುವ ಹಲವು ಪ್ರಮುಖ ವಿಚಾರಗಳಿಗೆ ಯಾವುದೇ ಆಧಾರ ಇಲ್ಲ. ಮೊದಲ ವಾಕ್ಯದಿಂದಲೇ ಅವುಗಳನ್ನು ಒಂದೊಂದಾಗಿ ಗಮನಿಸುತ್ತಾ ಬರೋಣ.

‘ಪ್ರಧಾನಿ ಮೇಲೆ ದಾಳಿಗೆ 2020 ರಲ್ಲೇ ಸಂಚು ನಡೆದಿತ್ತಾ?’, ‘ಫಿರೋಜ್‌ಪುರ ಬ್ರಿಡ್ಜ್‌ ಮೇಲೆ ದಾಳಿಗೆ ಮಾಡಿದ್ರಾ ಪ್ಲಾನ್?’ ಎಂದು ಪ್ರಶ್ನಿಸುತ್ತಾರೆ. ಪ್ರಧಾನಿ ಮೋದಿ ಮೇಲೆ ಯಾರಾದರೂ ದಾಳಿ ಮಾಡುವ ಸಂಚು ನಡೆಸಿದ್ದರೆ, ಅಂಥವರು ಇಷ್ಟೊತ್ತಿಗೆ ಜೈಲಲ್ಲಿ ಇರಬೇಕಾಗಿತ್ತು. ಆದರೆ ಒಂದು ವರ್ಷ ಕಳೆದು ಕೂಡಾ ಬಹಿರಂಗ ಆಗುವುದಿಲ್ಲ ಎಂದಾದರೆ, ನಮ್ಮ ದೇಶದ ಗುಪ್ತಚರ ಇಲಾಖೆ ಮೇಲೆ ಸಂಶಯ ಪಡಬೇಕಾಗುತ್ತದೆ. ಒಟ್ಟಿನಲ್ಲಿ ನಿರೂಪಕಿಯು ಇಲ್ಲಿ ಪ್ರಶ್ನೆಯೊಂದನ್ನು ವೀಕ್ಷಕರಿಗೆ ಕೇಳುತ್ತಾರೆ.

‘ಮೋದಿ ಮೇಲೆ ದಾಳಿ ಸಂಚಿನ ಸ್ಪೋಟಕ ವಿಡಿಯೊ ಬಹಿರಂಗ’ ಎಂದು ಹೇಳುವ ನಿರೂಪಕಿಯೂ ಅನಿಮೇಷನ್‌ ವಿಡಿಯೊವನ್ನು ತೋರಿಸುತ್ತಾರೆ. ಆದರೆ ಈ ವಿಡಿಯೊ ಸ್ಪೋಟಕ ವಿಡಿಯೊ ಅಲ್ಲ. ಈ ರೀತಿಯ ಹಲವಾರು ವಿಡಿಯೊಗಳು ಯೂಟ್ಯೂಬ್‌ನಲ್ಲಿ ಸಿಗುತ್ತವೆ. ಅವುಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು. ಈ ರೀತಿಯ ರಾಜಕೀಯ ಅನಿಮೇಷನ್‌ಗಳನ್ನು ದೇಶದ ಪ್ರಮುಖ ರಾಜಕೀಯ ನಾಯಕರ ವಿರುದ್ದ ಅವರ ವಿರೋಧಿಗಳು ಮಾಡುತ್ತಲೇ ಬಂದಿದ್ದಾರೆ. ಈ ರೀತಿಯ ವಿಡಿಯೊ ಬಗ್ಗೆ ಕೆಲವರು ಆಕ್ಷೇಪಗಳನ್ನು ಎತ್ತಿದ್ದಾರೆ. ಇವುಗಳನ್ನು ರಚಿಸಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆಯೆ ಇಲ್ಲವೆ ಎಂಬ ಮಾಹಿತಿ ನಾನುಗೌರಿ.ಕಾಂಗೆ ಸಿಕ್ಕಿಲ್ಲ.

ಇದನ್ನೂ ಓದಿ:ಪಂಜಾಬ್‌ ಭದ್ರತಾ ಲೋಪ ಆರೋಪ: ಹೊಸ ವಿಡಿಯೊ ವೈರಲ್ ನೊಂದಿಗೆ ಮತ್ತಷ್ಟು ಪ್ರಶ್ನೆಗಳು

‘ದಾಳಿಗೆ ರೂಪಿಸಿದ್ದ ಅನಿಮೇಷನ್‌ ವಿಡಿಯೊ’ ಎಂದು ಮಾಧ್ಯಮವೂ ನೇರವಾಗಿ ಹೇಳುತ್ತದೆ. ಆದರೆ ದಾಳಿಗೆ ಬೇಕಾಗಿ ಅನಿಮೇಷನ್ ರೂಪಿಸಲಾಗಿದೆ ಎಂದು ದೇಶದ ಯಾವುದೇ ತನಿಖಾ ಸಂಸ್ಥೆಯೂ ಹೇಳಿಕೆ ನೀಡಿಲ್ಲ. ಒಂದು ವೇಳೆ ಪ್ರಧಾನಿ ಮೇಲೆ ದಾಳಿ ಮಾಡಲು ರೂಪಿಸಿದ್ದ ಅನಿಮೇಷನ್‌ ಇದು ಎಂದು ಆಗಿದ್ದರೆ, ಒಂದು ವರ್ಷದ ಹಿಂದೆಯೆ ಸುದ್ದಿಯಾಗಿರುತ್ತಿತ್ತು. ಆದರೆ ಅಂತಹ ಯಾವುದೇ ಸುದ್ದಿ ನಮಗೆ ಲಭ್ಯವಾಗಿಲ್ಲ. ಜೊತೆಗೆ ಇದನ್ನು ರಚಿಸಿದವರು ಜೈಲಲ್ಲಿ ಇರಬೇಕಾಗಿತ್ತು.

‘1 ನಿಮಿಷ 7 ಸೆಕೆಂಡ್‌‌ನ ಅನಿಮೇಷನ್‌ ವಿಡಿಯೊ’, ‘2020 ರ ಡಿಸೆಂಬರ್‌ನಲ್ಲಿ ವಿಡಿಯೊ ಬಿಡುಗಡೆ’ ಎಂದು ನಿರೂಪಕಿ ಹೇಳುತ್ತಾರೆ. ಈ ವಿಡಿಯೊ 2020 ಡಿಸೆಂಬರ್‌ ಅಲ್ಲಿ ಅ‌ಪ್ಲೋಡ್ ಆಗಿದೆ ಎಂಬುವುದು ನಿಜವಾದರೂ, DHAKKA GAMING ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೊ 3:2 ಸೆಕೆಂಡ್‌ ಇದೆ. BP Shorts ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ವಿಡಿಯೊ 3:32 ಸೆಕೆಂಡ್‌ ಇದೆ.

‘ಘಟನೆ ನಡೆದ ಫಿರೋಝ್‌ಪುರದಿಂದಲೇ ದೃಶ್ಯ ತಯಾರಾಗಿದೆ’. ಈ ಹೇಳಿಕೆಗೂ ಯಾವುದೇ ಆಧಾರವನ್ನು ಮಾಧ್ಯಮವೂ ನೀಡಿಲ್ಲ. ಆದರೆ ಈ ವಿಡಿಯೊವನ್ನು ಪೂರ್ತಿ ಅಪ್ಲೋಡ್ ಮಾಡಿರುವ ಮೇಲಿನ ಎರಡು ಚಾನೆಲ್‌ನಲ್ಲಿ ಅದು ಇಂತಹ ಜಾಗದಿಂದ ಅಪ್ಲೋಡ್ ಮಾಡಲಾಗಿದೆ ಎಂದು ವಿಡಿಯೊದಲ್ಲಿ ಉಲ್ಲೇಖ ಮಾಡಿಲ್ಲ. ಒಂದು ಚಾನೆಲ್ ತನ್ನ ಲೊಕೇಷನ್ ಅಮೆರಿಕಾ ಎಂದು ಹೇಳಿಕೊಂಡರೆ, ಇನ್ನೊಂದು ಭಾರತ ಎಂದು ಹೇಳಿಕೊಂಡಿದೆ.

ಇದನ್ನೂ ಓದಿ:ಭದ್ರತಾ ಲೋಪ: ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್, ಪಂಜಾಬ್ ಸರ್ಕಾರದಿಂದ ತನಿಖಾ ತಂಡ…10 ಪಾಯಿಂಟ್ಸ್‌‌

‘ಮೋದಿಯನ್ನು ಸುತ್ತುವರೆಯಲು 2020 ರಲ್ಲೇ ಪ್ರೀಪ್ಲಾನ್’ ಎಂಬ ವಾಕ್ಯಕ್ಕೂ ಚಾನೆಲ್‌ ಯಾವುದೇ ಆಧಾರ ನೀಡಿಲ್ಲ. ವಾಸ್ತವದಲ್ಲಿ ರೈತ ಹೋರಾಟವನ್ನು ಮುನ್ನಡೆಸಿದ್ದ ಕಿಸಾನ್ ಮೋರ್ಚಾ ನಾಯಕರು, “ಪ್ರಧಾನಿ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸುವ ಯಾವುದೇ ಯೋಜನೆ ಇರಲಿಲ್ಲ” ಎಂದು ಹೇಳಿಕೊಂಡಿದ್ದಾರೆ.

ಪೂರ್ವನಿರ್ಧರಿತ ವೇಳಾಪಟ್ಟಿಯಂತೆ, ಜನವರಿ 5 ರಂದು ಪಂಜಾಬ್‌ನ ಪ್ರತಿ ಜಿಲ್ಲೆ ಮತ್ತು ತಹಸಿಲ್ ಕೇಂದ್ರ ಕಚೇರಿಗಳಲ್ಲಿ ಶಾಂತಿಯುತ ಪ್ರತಿಭಟನೆಗಳನ್ನು ನಡೆಸಲಾಯಿತು. ಫಿರೋಜ್‌ಪುರ ಜಿಲ್ಲಾ ಕೇಂದ್ರಕ್ಕೆ ತೆರಳದಂತೆ ಕೆಲ ರೈತರನ್ನು ಪೊಲೀಸರು ತಡೆದಾಗ ಹಲವು ಕಡೆ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಇವುಗಳಲ್ಲಿ ಪ್ರಧಾನಿಯವರ ಬೆಂಗಾವಲು ಪಡೆ ಬಂದು ನಿಲ್ಲಿಸಿ ಹಿಂತಿರುಗಿದ ಪೈರಾಯನ ಮೇಲ್ಸೇತುವೆಯೂ ಇತ್ತು. ಅಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಪ್ರಧಾನಿ ಬೆಂಗಾವಲು ಪಡೆ ಹಾದು ಹೋಗುತ್ತದೆ ಎಂಬ ಖಚಿತ ಮಾಹಿತಿ ಇರಲಿಲ್ಲ. ಪ್ರಧಾನಿ ವಾಪಸಾದ ಬಳಿಕ ಮಾಧ್ಯಮಗಳಿಂದ ಈ ಮಾಹಿತಿ ಸಿಕ್ಕಿದೆ. ಪ್ರತಿಭಟನಾ ನಿರತ ರೈತರು ಪ್ರಧಾನಿ ಬೆಂಗಾವಲು ಪಡೆ ಕಡೆಗೆ ಹೋಗಲು ಯಾವುದೇ ಪ್ರಯತ್ನವನ್ನೂ ಮಾಡಿಲ್ಲ. ಇದು ಶುಕ್ರವಾರ ವೈರಲ್‌ ಆದ ಹೊಸ ವಿಡಿಯೊ ಮೂಲಕ ಸಾಬೀತಾಗಿದೆ. ಬಿಜೆಪಿ ಧ್ವಜದೊಂದಿಗೆ ‘ನರೇಂದ್ರ ಮೋದಿ ಜಿಂದಾಬಾದ್’ ಎಂದು ಘೋಷಣೆ ಕೂಗಿದ ಗುಂಪು ಮಾತ್ರ ಆ ಬೆಂಗಾವಲು ಪಡೆಯ ಬಳಿ ತಲುಪಿತ್ತು” ಎಂದು ಕಿಸಾನ್ ಮೋರ್ಚಾ ಹೇಳಿದೆ.

ಹದಿಮೂರು ನಿಮಿಷ ಈ ಸುದ್ದಿ ವಿಡಿಯೊದಲ್ಲಿ ‘ನ್ಯೂಸ್‌ ಫಸ್ಟ್‌ ಕನ್ನಡ’ ಈ ಅನಿಮೇಷನ್‌ ರೀತಿಯಲ್ಲೇ ನಡೆದಿದೆ ಎಂದು ಹೇಳುತ್ತಾರೆ. ಇದರ ನಂತರ ಈ ಅನಿಮೇಷನ್‌ ಅನ್ನು ಚಾನೆಲ್‌ನ ಮತ್ತೊಬ್ಬರು ವಿಶ್ಲೇಷಣೆ ಮಾಡುತ್ತಾರೆ.

ಇದನ್ನೂ ಓದಿ:ಪಂಜಾಬ್‌ ಭದ್ರತಾ ಲೋಪ ವಿವಾದ; ಪತ್ರಕರ್ತೆಯೊಬ್ಬರ ಹಲವು ಪ್ರಶ್ನೆಗಳು!

ಅವರು ಕೂಡಾ ನಿರೂಪಕಿ ಈ ಹಿಂದೆ ಹೇಳಿದ್ದ ಅದೇ ವಿಷಯವನ್ನು ಮತ್ತೊಮ್ಮೆ ಹೇಳುತ್ತಾರೆ. ವಿಶ್ಲೇಷಣೆ ಮಾಡುತ್ತಾ, “ಅನಿಮೇಷನ್‌ನಲ್ಲಿ ಪ್ರಧಾನಿಯನ್ನು ತಡೆದಾಗ ಭದ್ರತೆಗೆ ಇದ್ದ ವ್ಯಕ್ತಿಗಳು ಓಡಿ ಹೋಗುತ್ತಾರೆ. ಹಾಗೆಯೆ ಇಲ್ಲಿ ಕೂಡಾ ನಡೆಯುತ್ತದೆ. ಪ್ರಧಾನಿಯ ಭದ್ರತೆಗೆ ಇದ್ದ ಎಸ್‌ಪಿಜಿಯನ್ನು ಬಿಟ್ಟರೆ, ಪಂಜಾಬಿ ಪೊಲೀಸರು ಎಲ್ಲಿದ್ದರು?” ಎಂದು ಪ್ರಶ್ನಿಸುತ್ತಾ, “ಪಂಜಾಬಿ ಪೊಲೀಸರು ಪ್ರತಿಭಟನಾಕಾರರೊಂದಿಗೆ ಸೇರಿ ಚಹಾ ಕುಡಿತಾ ಇರುತ್ತಾರೆ. ಅವರು ಬ್ರಿಡ್ಜ್‌ ಮೇಲೆ ಚಾಯ್ ಪೆ ಚರ್ಚಾ ನಡೆಸುತ್ತಾ ಇರುತ್ತಾರೆ” ಎಂದು ನಿರೂಪಕ ಸ್ವತಃ ನೋಡಿದಂತೆ ಹೇಳುತ್ತಾರೆ.

ಆದರೆ ವಾಸ್ತವದಲ್ಲಿ ಪಂಜಾಬಿ ಪೊಲೀಸರು ಅಲ್ಲಿಯೇ ಇದ್ದರು. ಒಂದು ವೇಳೆ ಅವರು ಪ್ರತಿಭಟನಾಕಾರರೊಂದಿಗೆ ಚಹಾ ಸೇವಿಸುತ್ತಿದ್ದರೆ ಅಥವಾ ಪ್ರಧಾನಿಯನ್ನು ಬಿಟ್ಟು ಓಡಿ ಹೋಗಿದ್ದರೆ ಅದು ದೊಡ್ಡ ಸುದ್ದಿಯಾಗಿರುತ್ತಿತ್ತು. ಆದರೆ ಈ ರೀತಿಯಾಗಿ ಎಲ್ಲಿಯೂ ಸುದ್ದಿಯಾಗಿಲ್ಲ. ಜೊತೆಗೆ ಚಹಾದೊಂದಿಗೆ ಚರ್ಚೆಯೂ ನಡೆಸುತ್ತಿರಲಿಲ್ಲ. ಘಟನೆ ನಡೆದಾಗ ಎಸ್‌ಪಿಜಿ ಕಮಾಂಡೋಗಳು ಪ್ರಧಾನಿಯ ಕಾರಿನ ಸುತ್ತಲೆ ಇದ್ದರು. ಯಾಕೆಂದರೆ ಅವರು ಪ್ರಧಾನಿಯ ರಕ್ಷಣೆಗೆಂದೇ ಇರುವ ಪಡೆಯಾಗಿದ್ದು, ಅವರು ಪ್ರಧಾನಿಯನ್ನು ಬಿಟ್ಟು ಕದಲುವ ಹಾಗೆಯೆ ಇಲ್ಲ.

ಆದರೆ ಪಂಜಾಬಿ ಪೊಲೀಸರು ಕೂಡಾ ಅಲ್ಲೇ ಇದ್ದರು ಎಂದು ರಾಷ್ಟ್ರೀಯ ಮಾಧ್ಯಮಗಳು ಮಾಡಿದ ಸುದ್ದಿಯಲ್ಲಿ ಕಾಣಬಹುದು.

ಇದನ್ನೂ ಓದಿ:ಪಂಜಾಬ್: ಪ್ರಧಾನಿ ಕಾರ್ಯಕ್ರಮ ರದ್ದು; ಏನಂತಾರೆ ನೆಟ್ಟಿಗರು?

ವಾಸ್ತವದಲ್ಲಿ, ಶುಕ್ರವಾದಂದು ಘಟನೆಯ ಸಮಯದಲ್ಲಿ ಮಾಡಲಾಗಿರುವ ಹೊಸ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಪ್ರಧಾನಿ ಮೋದಿಯ ಕಾರು ಫ್ಲೈಓವರ್‌ನಲ್ಲಿ ನಿಂತಿರುವಾಗ, ಅವರ ಕಾರಿನ ತೀರಾ ಹತ್ತಿರದಲ್ಲೇ ಒಂದಷ್ಟು ಜನರು ಬಿಜೆಪಿ ಧ್ವಜವನ್ನು ಬೀಸುತ್ತಾ, ಘೋಷಣೆ ಕೂಗುವುದನ್ನು ಕಾಣಬಹುದು.

ಘಟನೆ ನಡೆದಾಗ ಪ್ರತಿಭಟನಾ ನಿರತ ರೈತರು ಪ್ರಧಾನಿಯನ್ನು ತಡೆದಿದ್ದಾರೆ ಎಂದು ಮಾಧ್ಯಮಗಳು ಬುಧವಾರ ಸುದ್ದಿ ಮಾಡಿದ್ದವು. ಆದರೆ ಡಿಜಿಟಲ್‌ ಮಾಧ್ಯಮಗಳು, ಪ್ರಧಾನಿಯ ಕಾರಿನ ತೀರಾ ಹತ್ತಿರದಲ್ಲಿ ಇದ್ದ ಗುಂಪು ರೈತರ ಗುಂಪಲ್ಲ, ಬಿಜೆಪಿ ಕಾರ್ಯಕರ್ತರಾಗಿದ್ದು ಅವರ ಕೈಯ್ಯಲ್ಲಿ ಇದ್ದಿದ್ದು ಬಿಜೆಪಿ ಧ್ವಜ ಎಂದು ಸ್ಪಷ್ಟವಾಗಿ ತೋರಿಸಿದ್ದವು.

ಇದನ್ನೂ ಓದಿ:ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸಲು ಕೆಲ ರೈತ ಸಂಘಟನೆಗಳ ನಿರ್ಧಾರ: ಅಂತರ ಕಾಯ್ದುಕೊಂಡ SKM

ಇಷ್ಟೇ ಅಲ್ಲದೆ, ಶುಕ್ರವಾರ ಬಿಡುಗಡೆಯಾದ ವಿಡಿಯೊದಲ್ಲಿ, ಬಿಜೆಪಿಯ ಧ್ವಜದೊಂದಿಗೆ ಪ್ರಧಾನಿಯ ಕಾರಿಗಿಂತ ಕೆಲವೇ ಮೀಟರ್‌ ಅಂತರದಲ್ಲಿ ನಿಂತು ಧ್ವಜವನ್ನು ಬೀಸುತ್ತಾ ನರೇಂದ್ರ ಮೋದಿ ಜಿಂದಾಬಾದ್‌ ಎಂದು ಘೋಷಣೆ ಕೂಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಎರಡು ರಸ್ತೆಗಳಿರುವ ಫ್ಲೈಓವರ್‌ನಲ್ಲಿ ಒಂದು ರಸ್ತೆಯಲ್ಲಿ ಪ್ರಧಾನಿಯ ಕಾರು ಮತ್ತು ಅವರ ಬೆಂಗಾವಲು ಇದ್ದು, ಇನ್ನೊಂದು ರಸ್ತೆಯಲ್ಲಿ ಜನರು ಘೋಷಣೆ ಕೂಗುತ್ತಿದ್ದಾರೆ. ಈ ರಸ್ತೆಯಲ್ಲಿ ಬಸ್ಸು ಮತ್ತು ಇತರ ವಾಹನ ನಿಂತಿರುವುದು ಕೂಡಾ ಕಾಣುತ್ತದೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದ ಪಂಜಾಬ್‌ ಮುಖ್ಯಮಂತ್ರಿ ಚನ್ನಿ ಅವರು, “ರಾಜ್ಯ ಸರ್ಕಾರದಿಂದ ಯಾವುದೆ ಲೋಪ ಆಗಿಲ್ಲ. ಆದರೆ ಪ್ರಧಾನಿ ಮೋದಿ ಅವರು ರಸ್ತೆ ಮೂಲಕ ತೆರಳಲಿದ್ದಾರೆ ಎಂದು ನಿಗದಿಯಾಗಿರಲಿಲ್ಲ. ಪ್ರಧಾನಿ ಮೋದಿ ಜೀವಕ್ಕೆ ಯಾವುದೇ ಬೆದರಿಕೆ ಇಲ್ಲ. ಒಬ್ಬ ಪಂಜಾಬಿಯಾಗಿ ಅವರ ಜೀವವನ್ನು ರಕ್ಷಿಸಲು ನಾನು ಜೀವ ಪಣಕ್ಕಿಡಲೂ ಸಿದ್ದ” ಎಂದು ಹೇಳಿದ್ದರು.

ರೈತರ ಹೋರಾಟ ಶುರುವಾದ ದಿನದಿಂದಲೂ ಮುಖ್ಯವಾಹಿನಿ ಮಾಧ್ಯಮಗಳು ರೈತರ ವಿರುದ್ಧ ವರದಿಗಳನ್ನು ಮಾಡುತ್ತಲೇ ಬಂದಿವೆ. ಮಾಧ್ಯಮಗಳು ಪ್ರಭುತ್ವವನ್ನು ಓಲೈಸುವ ಕೆಲಸವನ್ನು ಮಾಡುತ್ತಲೇ ಬಂದಿವೆ. ಒಂದು ವರ್ಷ ಕಾಲ ಮಳೆ, ಬಿಸಿಲೆನ್ನದೆ ಶಾಂತಿಯುತವಾಗಿ ಹೋರಾಟ ಮಾಡಿದ ರೈತರ ಕುರಿತು ಬರೆಯುವಾಗ, ವರದಿ ಮಾಡುವಾಗ ಮಾಧ್ಯಮಗಳಿಗೆ ಎಚ್ಚರಿಕೆ ಇರಬೇಕಲ್ಲವೇ? ಸುಮಾರು 700 ರೈತರು ಹೋರಾಟದಲ್ಲಿ ಜೀವಕಳೆದುಕೊಂಡಿದ್ದಾರೆ. ಗಾಂಧಿ ಮಾರ್ಗದಲ್ಲಿ ನಡೆದು ಸರ್ಕಾರವನ್ನು ಮಣಿಸಿದ್ದಾರೆ. ಇಂತಹ ರೈತರ ಕುರಿತು ವರದಿ ಮಾಡುವಾಗ ಮಾಧ್ಯಮಗಳು ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಾಲ್ಲವೇ?

ಇದನ್ನೂ ಓದಿ:ಪಂಜಾಬ್ ಕೋರ್ಟ್ ಸ್ಪೋಟ ಪ್ರಕರಣಕ್ಕೆ ತಿರುವು: ಮೃತಪಟ್ಟ ಮಾಜಿ ಪೊಲೀಸ್ ಆರೋಪಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...