Homeಮುಖಪುಟಬುಲ್ಲಿ ಬಾಯ್‌‌ ಪ್ರಕರಣ ಬಿಚ್ಚಿಟ್ಟ ‘ಟ್ರ್ಯಾಡ್ಸ್’ ‘ರಾಯ್ತಾಸ್‌’ ಬಲಪಂಥೀಯ ಗುಂಪುಗಳ ಘರ್ಷಣೆ: ಏನಿದು ವಿವಾದ?

ಬುಲ್ಲಿ ಬಾಯ್‌‌ ಪ್ರಕರಣ ಬಿಚ್ಚಿಟ್ಟ ‘ಟ್ರ್ಯಾಡ್ಸ್’ ‘ರಾಯ್ತಾಸ್‌’ ಬಲಪಂಥೀಯ ಗುಂಪುಗಳ ಘರ್ಷಣೆ: ಏನಿದು ವಿವಾದ?

ಟ್ರ್ಯಾಡ್ಸ್ ಮತ್ತು ರಾಯ್ತಾಸ್‌ ಇಬ್ಬರೂ ಆನ್‌ಲೈನ್‌ನಲ್ಲಿ ಹಿಂದೂಯೇತರರನ್ನು ಗುರಿಯಾಗಿಸಿಕೊಂಡಿರಬಹುದು, ಆದರೆ ರಾಯ್ತಾಸ್‌ ದಲಿತರ ವಿರುದ್ಧ ಬರೆಯುವುದಿಲ್ಲ. ಟ್ರ್ಯಾಡ್ಸ್ ಬಣ ದಲಿತರನ್ನೂ ಗುರಿಯಾಗಿಸಿಕೊಂಡಿದೆ.

- Advertisement -
- Advertisement -

ಬಲಪಂಥೀಯ ಗುಂಪುಗಳ ಕಾರ್ಯಚಟುವಟಿಕೆಯನ್ನು ಗಂಭೀರವಾಗಿ ಗಮನಿಸುತ್ತಿರುವ ರಾಜಕೀಯ ವಿಶ್ಲೇಷಕರು, ಅಪರಾಧ ತಜ್ಞರು ಬಲಪಂಥದಲ್ಲಿನ ವಿವಿಧ ಗುಂಪುಗಳ ಕುರಿತು ಮಾತನಾಡುತ್ತಿರುವುದನ್ನು ಕಾಣುತ್ತಿದ್ದೇವೆ. ವಿಚಾರವಾದಿಗಳನ್ನು ಕೊಂದವರಿಂದ ಒಂದು ವರ್ಗದ ಬಲಪಂಥೀಯರು ಅಂತರ ಕಾಯ್ದುಕೊಳ್ಳುವುದನ್ನು ಮೊದಲಿನಿಂದಲೂ ಗಮನಿಸುತ್ತಿದ್ದೇವೆ. ಅಧಿಕಾರ ರಾಜಕಾರಣದಲ್ಲಿ ತೀವ್ರವಾದ ಬಲಪಂಥೀಯವಾದ ಮತಗಳ ಧ್ರುವೀಕರಣಕ್ಕೆ ಅಡ್ಡಿಯಾಗುವ ಆತಂಕವನ್ನು ಒಂದು ಗುಂಪಿನ ಬಲ ಪಂಥೀಯರು ಊಹಿಸುತ್ತಿದ್ದರೆ, ತೀವ್ರ ಬಲಪಂಥೀಯರು ಇಡೀ ವ್ಯವಸ್ಥೆಯನ್ನೇ ಒಮ್ಮೆಲೇ ಬುಡಮೇಲು ಮಾಡುವ ಬಿರುಸಿನ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

‘ಬುಲ್ಲಿ ಬಾಯ್‌’ ಅಪ್ಲಿಕೇಶನ್‌ ವಿವಾದದ ಸೃಷ್ಟಿಸಿದ ಬಳಿಕ, ಬಲಪಂಥೀಯ ಗುಂಪಿನ ಒಳಗಿನ ಎರಡು ಬಣಗಳ ಚರ್ಚೆ ಮುನ್ನೆಲೆಗೆ ಬಂದಿದೆ. ಪ್ರಖ್ಯಾತ ಸುದ್ದಿ ಜಾಲತಾಣ ‘ನ್ಯೂಸ್‌ಲಾಂಡ್ರಿ’ ಮಾಡಿರುವ ವರದಿಯು ಬಲಪಂಥೀಯ ಗುಂಪುನಗಳ ನಡುವಿನ ಎರಡು ಗುಂಪುಗಳ ಕುರಿತು ತೀವ್ರತರನಾಗಿ ಚರ್ಚಿಸಿದೆ. ಅನಾಮಧೇಯ ಮೂಲಗಳು ತಿಳಿಸಿರುವ ವಿಚಾರಗಳನ್ನು ನ್ಯೂಸ್‌ಲಾಂಡ್ರಿ ವರದಿ ಮಾಡಿದೆ.

ಬಲಪಂಥೀಯ ಗುಂಪುಗಳಲ್ಲಿ ‘ಟ್ರ್ಯಾಡ್ಸ್’ ಮತ್ತು ‘ರಾಯ್ತಾಸ್‌’ ಎಂಬ ಎರಡು ಗುಂಪುಗಳ ನುಡುವೆ ತಿಕ್ಕಾಟ ನಡೆಯುತ್ತಿರುವುದನ್ನು ನ್ಯೂಸ್‌‌ಲಾಂಡ್ರಿ ಗುರುತಿಸಿದೆ. ‘ಟ್ರ್ಯಾಡ್ಸ್’ ತೀವ್ರತರನಾದ ಬಲಪಂಥೀಯ ಬಣವಾಗಿದ್ದು, ಶರವೇಗದಲ್ಲಿ ಜನಮನ್ನಣೆ ಪಡೆಯುತ್ತಿದೆ ಎಂಬ ಆತಂಕಕಾರಿ ಸಂಗತಿಯನ್ನು ವರದಿ ಬಿಚ್ಚಿಟ್ಟಿದೆ. ಅಧಿಕಾರ ರಾಜಕಾರಣದಲ್ಲಿ ಪಾತ್ರ ವಹಿಸುತ್ತಿರುವ ಆರ್‌.ಎಸ್‌.ಎಸ್‌., ಬಿಜೆಪಿಯ ಜೊತೆಗೆ ಗುರುತಿಸಿಕೊಂಡಿರುವ ‘ರಾಯ್ತಾಸ್‌’ ಬಣವು ‘ಟ್ರ್ಯಾಡ್ಸ್’ ಜೊತೆ ಭಿನ್ನಾಭಿಪ್ರಾಯ ಹೊಂದಿದೆ ಎನ್ನುತ್ತದೆ ವರದಿ.

ಬುಲ್ಲಿ ಬಾಯ್ ಅಪ್ಲಿಕೇಶನ್ ಪ್ರಕರಣ ಬಯಲಾದ ಬಳಿಕ ಮುಂಬೈ ಪೊಲೀಸರು ವಿಶಾಲ್ ಕುಮಾರ್ ಝಾ, ಮಯಾಂಕ್ ರಾವತ್ ಮತ್ತು ಶ್ವೇತಾ ಸಿಂಗ್ ಎಂಬವರನ್ನು ಬಂಧಿಸಿದರು. ನಂತರ ರಿತೇಶ್ ಝಾ ಎಂಬಾತ ಇನ್‌ಸ್ಟಾಗ್ರಾಮ್‌ನಲ್ಲಿ, “ನನ್ನ ಇಬ್ಬರು ಕಿರಿಯ ಸಹೋದರರು ಮತ್ತು ಸಹೋದರಿಯನ್ನು ಬಂಧಿಸಲಾಗಿದೆ. ಅವರ ವಿರುದ್ಧ ಮಾತನಾಡುವ ಬಲಪಂಥೀಯರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಶೀಘ್ರದಲ್ಲೇ ನಿಮ್ಮನ್ನು ಭೇಟಿ ಮಾಡುತ್ತೇವೆ ಮಕ್ಕಳೇ #ಮುಂಬೈ ಮೀಟಪ್‌” ಎಂದು ಬರೆದ.

ರಿತೇಶ್ ತನ್ನ ಯೂಟ್ಯೂಬ್ ಚಾನೆಲ್ ‘ಲಿಬರಲ್ ಡೋಜ್‌’ನಿಂದಾಗಿ ಹೆಚ್ಚು ಹೆಸರುವಾಸಿಯಾಗಿದ್ದಾನೆ. ಮೇ 13, 2021ರಂದು ತನ್ನ ಯೂಟ್ಯೂಬ್‌ನಲ್ಲಿ ಪಾಕಿಸ್ತಾನಿ ಮಹಿಳೆಯರ ಫೋಟೋಗಳನ್ನು ಹಾಕಿ “ಹರಾಜು” ನಡೆಸಿ ವಿಕೃತಿ ಮೆರೆದಿದ್ದ. ಇಸ್ಲಾಮೋಫೋಬಿಕ್, ಲೈಂಗಿಕತೆಯ ಸಂಗತಿಗಳನ್ನು ಲೈವ್‌ಸ್ಟ್ರೀಮ್ ಮಾಡಿದ. (ಈ ಚಾನೆಲ್ ಅನ್ನು ನಂತರ ಯೂಟ್ಯೂಬ್ ಅಮಾನತುಗೊಳಿಸಿತು.) ಬುಲ್ಲಿ ಬಾಯ್‌‌ ಆ್ಯಪ್‌ನಲ್ಲಿ ಮುಸ್ಲಿಂ ಮಹಿಳೆಯರನ್ನು ‘ಹರಾಜು’ ಮಾಡಿದ ಆರೋಪಿಯ ಸಹೋದರನಾಗಿರುವ ರಿತೇಶ್‌, “ಬಲಪಂಥೀಯರ” ಕಡೆಗೆ ಆರೋಪದ ಬೆರಳು ತೋರಿಸುತ್ತಿರುವುದನ್ನು ಗಮನಿಸಬಹುದು.

ಡಿಸೆಂಬರ್ 31, 2021ರಂದು ರಚಿಸಲಾದ ಬುಲ್ಲಿ ಬಾಯ್‌ ಅಪ್ಲಿಕೇಶನ್‌ನಲ್ಲಿ 100ಕ್ಕೂ ಹೆಚ್ಚು ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿಕೊಳ್ಳಲಾಗಿತ್ತು. ಅನೇಕ ಪತ್ರಕರ್ತರು ಮತ್ತು ಕಾರ್ಯಕರ್ತರ ಫೋಟೋಗಳನ್ನು ಪೋಸ್ಟ್‌ ಮಾಡಿ ವಿಕೃತಿ ಮೆರೆಯಲಾಯಿತು.

ಟ್ರ್ಯಾಡ್ಸ್ v/s ರಾಯ್ತಾಸ್‌

ಬುಲ್ಲಿ ಬಾಯ್‌ ಪ್ರಕರಣದಲ್ಲಿ ಈವರೆಗೆ ನಾಲ್ವರನ್ನು ಬಂಧಿಸಲಾಗಿದೆ. ಜನವರಿ 3 ಮತ್ತು ಜನವರಿ 5ರ ನಡುವೆ ಝಾ, ರಾವತ್ ಮತ್ತು ಸಿಂಗ್ ಎಂಬ ಆರೋಪಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಜನವರಿ 6ರಂದು ಇಂಜಿನಿಯರಿಂಗ್ ವಿದ್ಯಾರ್ಥಿ ನೀರಜ್ ಬಿಷ್ಣೋಯ್ ಎಂಬಾತನನ್ನು ದೆಹಲಿ ಪೊಲೀಸರು ಅಸ್ಸಾಂನಲ್ಲಿ ಬಂಧಿಸಿದ್ದರು. ದೆಹಲಿ ಪೊಲೀಸರ ಪ್ರಕಾರ, 21 ವರ್ಷದ ಬಿಷ್ಣೋಯ್ “ಬುಲ್ಲಿ ಬಾಯ್‌‌ ಆಪ್‌ನ ಮುಖ್ಯ ಸಂಚುಕೋರ ಮತ್ತು ಸೃಷ್ಟಿಕರ್ತ”.

ಮುಸ್ಲಿಂ ಮಹಿಳೆಯರಿಗೆ ಲೈಂಗಿಕವಾಗಿ ಕಿರುಕುಳ ನೀಡುವುದು ಬುಲ್ಲಿ ಬಾಯ್‌ ಅಪ್ಲಿಕೇಶನ್‌ನ ಗುರಿಯಾಗಿತ್ತು ಎಂಬುದು ಸ್ಪಷ್ಟವಾಗಿದೆ. ಇದರ ಜೊತೆಗೆ ಮುಸ್ಲಿಂ ಮಹಿಳೆಯರಿಗೆ ಕಿರುಕುಳ ನೀಡಲು ಬಳಸಿದ ತಂತ್ರಗಳನ್ನೇ ಮತ್ತೊಂದು ಬಲಪಂಥೀಯ ಗುಂಪಿನ ವಿರುದ್ಧವೂ ಬಳಸಲಾಗಿತ್ತು ಎಂಬುದನ್ನು ಮೂಲಗಳು ತಿಳಿಸಿರುವುದಾಗಿ ನ್ಯೂಸ್‌ ಲಾಂಡ್ರಿ ಹೇಳಿದೆ.

ಬುಲ್ಲಿ ಬಾಯ್‌ ಅಪ್ಲಿಕೇಶನ್ ಅನ್ನು ಟ್ರ್ಯಾಡ್ಸ್ ಎಂಬ ಗುಂಪು ಅಭಿವೃದ್ಧಿಪಡಿಸಿದೆ ಎಂದು ಹೇಳಲಾಗುತ್ತದೆ. ರಾಯ್ತಾಸ್‌ (ರೈತಾಸ್ ಎಂದೂ ಉಚ್ಚರಿಸಲಾಗುತ್ತದೆ) ಎಂದು ಕರೆಯಲ್ಪಡುವ ಮತ್ತೊಂದು ಗುಂಪಿನೊಂದಿಗೆ ಟ್ರ್ಯಾಡ್ಸ್ ಭಿನ್ನಾಭಿಪ್ರಾಯ ಹೊಂದಿದೆ. ರಾಯ್ತಾಸ್‌ ಬಲಪಂಥೀಯ ಗುಂಪು ಆರ್‌ಎಸ್‌ಎಸ್ ಮತ್ತು ಬಿಜೆಪಿಯೊಂದಿಗೆ ಗುರುತಿಸಿಕೊಳ್ಳುತ್ತದೆ.

ಬುಲ್ಲಿ ಬಾಯ್‌‌ಯಂತೆಯೇ ಕಾರ್ಯನಿರ್ವಹಿಸುತ್ತಿದ್ದ ಬುಲ್ಲಿ ಬಾಯ್‌ ಮತ್ತು ಸುಲ್ಲಿ ಡೀಲ್‌ಗಳನ್ನು ಟ್ರ್ಯಾಡ್ಸ್‌‌ನಿಂದ ಪ್ರಚಾರ ಮಾಡಲಾಗಿದೆ. ಕಳೆದ ವರ್ಷ ಸುಲ್ಲಿ ಡೀಲ್‌ ಪ್ರಾರಂಭಿಸಿದಾಗ, ಅಪ್ಲಿಕೇಶನ್‌ನ ಬಯೋ- “a community-drive open source project by Hindu triads” ಎಂದಿತ್ತು.

ಟ್ರ್ಯಾಡ್ಸ್ ತಮ್ಮ ಸಿದ್ಧಾಂತವನ್ನು ಒಪ್ಪದ ಯಾರಿಗಾದರೂ ಆನ್‌ಲೈನ್‌ನಲ್ಲಿ ಕಿರುಕುಳ ಕೊಡುವಲ್ಲಿ ಹೆಸರುವಾಸಿ. ಬುಲ್ಲಿ ಬಾಯ್‌ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳನ್ನು ಟ್ರ್ಯಾಡ್ಸ್ ಗುಂಪಿನವರೆಂದು ಗುರುತಿಸಲಾಗಿದೆ.

ಝಾ ಮತ್ತು ಸಿಂಗ್ ಅವರನ್ನು ಬಂಧಿಸಿದ ಕೂಡಲೇ @giyu44 ಹೆಸರಿನ ಟ್ವಿಟರ್ ಬಳಕೆದಾರ, “ಪೊಲೀಸರು ಅಮಾಯಕರನ್ನು ಬಂಧಿಸಿದ್ದಾರೆ” ಎಂದು ಟ್ವೀಟ್ ಮಾಡಿದ್ದಾನೆ. ಗಿಯು ಖಾತೆಯು ಭಾರತ ಮೂಲದ್ದಾಗಿರುವ ಸಾಧ್ಯತೆಯಿದೆ ಎಂದು ತನಿಖೆಯ ನಿಕಟ ಮೂಲಗಳು ನ್ಯೂಸ್‌ಲಾಂಡ್ರಿಗೆ ತಿಳಿಸಿವೆ.

“ಟ್ರ್ಯಾಡ್ಸ್ ಅನ್ನು ಒಪ್ಪದಿದ್ದರೆ, ಅವರು ನಿಮ್ಮನ್ನು ಹಿಂದೂಗಳೆಂದು ಪರಿಗಣಿಸುವುದಿಲ್ಲ” ಎಂದು ಟ್ರ್ಯಾಡ್ಸ್ ಚಟುವಟಿಕೆಗಳನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ.

ಟ್ರ್ಯಾಡ್ಸ್ ಗುಂಪಿನಿಂದ ರಾಯ್ತಾಸ್‌ ಎಂದು ಗುರುತಿಸಲ್ಪಟ್ಟ ಮೂಲವೊಂದು ನ್ಯೂಸ್‌ಲಾಂಡ್ರಿಗೆ ಪ್ರತಿಕ್ರಿಯಿಸಿದ್ದು, “ಯುವ ಹುಡುಗರು ಮತ್ತು ಹುಡುಗಿಯರು [ಬುಲ್ಲಿ ಬಾಯಿ ಅಪ್ಲಿಕೇಶನ್‌ನ ಹಿಂದಿರುವವರು] ಟ್ರ್ಯಾಡ್ಸ್ ಎಂಬ ಚಳವಳಿಯ ಭಾಗವಾಗಿದ್ದಾರೆ. ಅವರು ಬಿಜೆಪಿ, ಆರೆಸ್ಸೆಸ್ ಮತ್ತು ಸಾವರ್ಕರ್ ಸಿದ್ಧಾಂತವನ್ನು ತಮ್ಮ ದೊಡ್ಡ ಶತ್ರುಗಳೆಂದು ಪರಿಗಣಿಸುತ್ತಾರೆ. ಅವರು ಅನೇಕ ಯುವಕರೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಅವರು ದ್ವಾರಕಾ ಮತ್ತು ಪುರಿಯ ಶಂಕರಾಚಾರ್ಯರನ್ನು ತಮ್ಮ ಗುರುಗಳೆಂದು ಪರಿಗಣಿಸುತ್ತಾರೆ. ಅವರ ಉಗ್ರಗಾಮಿ ವಿಚಾರಗಳನ್ನು ಒಪ್ಪದ ಯಾರ ವಿರುದ್ಧವಾದರೂ ಸರಿ ಉಗ್ರವಾದವನ್ನೇ ಪ್ರತಿಯಾಗಿ ಬಳಸುತ್ತಾರೆ. ಅವರ ಸಿದ್ಧಾಂತವು ಕಟ್ಟುನಿಟ್ಟಾದ ಜಾತಿ ವ್ಯವಸ್ಥೆಯನ್ನು ಪ್ರತಿಪಾದಿಸುತ್ತದೆ. ಅವರು ಜಾತಿ ಶ್ರೇಷ್ಠತೆಯನ್ನು ನಂಬುತ್ತಾರೆ. ಅವರು ಅಸ್ಪೃಶ್ಯತೆಯನ್ನು ಜೀವಂತವಾಗಿರಿಸಲು ಬಯಸುತ್ತಾರೆ. ಈ ಟ್ರ್ಯಾಡ್ಸ್‌ನವರು ದಲಿತರ ಪ್ರಗತಿಯನ್ನು ಇಷ್ಟಪಡುವುದಿಲ್ಲ ಅಥವಾ ಬ್ರಾಹ್ಮಣರನ್ನು ಹೊರತುಪಡಿಸಿ ಯಾವುದೇ ಜಾತಿಯನ್ನು ಇಷ್ಟಪಡುವುದಿಲ್ಲ. ಅವರನ್ನು ಕೆಲವು ಪೋರ್ಟಲ್‌ಗಳು ಮತ್ತು ಸಾಮಾಜಿಕ ಮಾಧ್ಯಮದ ಸೆಲೆಬ್ರಿಟಿಗಳು ಬೆಂಬಲಿಸುತ್ತಾರೆ” ಎಂದು ತಿಳಿಸಿದೆ.

ಟ್ರ್ಯಾಡ್ಸ್ ತಂತ್ರಗಳನ್ನು ರಾಯ್ತಾಸ್‌‌ ಅನುಮೋದಿಸುವುದಿಲ್ಲ. ಟ್ರ್ಯಾಡ್ಸ್ ನಿಯಮಿತವಾಗಿ ಮುಸ್ಲಿಂ ಮತ್ತು ಮುಸ್ಲಿಮೇತರ ಮಹಿಳೆಯರನ್ನು ಗುರಿಯಾಗಿಸಿಕೊಂಡಿದೆ ಎಂದು ಮೂಲಗಳು ಹೇಳಿವೆ. “ಮಹಿಳೆಯರನ್ನು ಅಗೌರವಿಸುವುದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಇದು ಮಹಿಳೆಯರ ಸುರಕ್ಷತೆಯ ಸಮಸ್ಯೆಯಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕು” ಮತ್ತೊಂದು ಬಣ ನಂಬಿದೆ.

ಟ್ರ್ಯಾಡ್ಸ್ ಮತ್ತು ರಾಯ್ತಾಸ್‌‌ ನಡುವಿನ ಆನ್‌ಲೈನ್ ಪೈಪೋಟಿಯನ್ನು ಗಮನಿಸುತ್ತಿರುವ ವ್ಯಕ್ತಿಯೊಬ್ಬರು, “ಟ್ರ್ಯಾಡ್ಸ್ ಬಲಪಂಥೀಯ ಪ್ರಭಾವಿಗಳಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಟ್ರ್ಯಾಡ್ಸ್ ಗುಂಪಿನಲ್ಲಿ ಯುವಕರು ಭಾಗಿಯಾಗುವಂತೆ ಬ್ರೇನ್‌ವಾಶ್‌ ಮಾಡಲು ಸಂಘಟಿತ ಅಭಿಯಾನ ಜರುಗಿದೆ” ಎನ್ನುತ್ತಾರೆ.

“ಟ್ರ್ಯಾಡ್ಸ್ ಗುಂಪಿನ ಅನೇಕ ಪ್ರಖ್ಯಾತ ಹ್ಯಾಂಡಲ್‌ಗಳಿವೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಯುವಕರನ್ನು ಬ್ರೈನ್‌ವಾಶ್ ಮಾಡುತ್ತಾರೆ. ಅಲ್ಲದೆ ಸಾಕಷ್ಟು ಯಶಸ್ವಿ ಕೂಡ ಆಗಿದ್ದಾರೆ. ಆನ್‌ಲೈನ್ ದ್ವೇಷದ ಪ್ರಚಾರಗಳಲ್ಲಿ ತೊಡಗಿರುವವರ ಸೇನೆಯನ್ನು ರಚಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ, ಯಾರಾದರೂ ತಮ್ಮ ನಂಬಿಕೆಗಳಿಗೆ ಹೊಂದಿಕೆಯಾಗದ ಪೋಸ್ಟ್ ಅನ್ನು ಟ್ವೀಟ್ ಮಾಡಿದರೆ, ಆ ವ್ಯಕ್ತಿಯನ್ನು ಗುರಿಯಾಗಿಸಿ ದಾಳಿ ಮಾಡಲಾಗುತ್ತದೆ ” ಎಂದು ಮೂಲಗಳು ತಿಳಿಸಿವೆ.

ಉದಾಹರಣೆಯಾಗಿ ನೋಡುವುದಾದರೆ, 2020ರಲ್ಲಿ @TIinexile ಹ್ಯಾಂಡಲ್‌ನಿಂದ ಟ್ರೋಲ್‌ಗೆ ಒಳಗಾದ ಬೆಂಗಳೂರಿನ ಪ್ರಸ್ತುತ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಡಿ.ರೂಪ ಅವರು ಎದುರಿಸಿದ ಆನ್‌ಲೈನ್ ಕಿರುಕುಳವನ್ನು ಮೂಲಗಳು ಉಲ್ಲೇಖಿಸುತ್ತವೆ. @TIinexile ಹ್ಯಾಂಡಲ್‌ಅನ್ನು ರದ್ದುಗೊಳಿಸಿದಾಗ, ಮತ್ತೊಂದು ಹೊಸ ಹ್ಯಾಂಡಲ್ @BharadwajSpeaks ರಚಿಸುತ್ತಾರೆ. ಅದು ರಚನೆಯಾದ ಕೆಲವೇ ಗಂಟೆಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಅನುಯಾಯಿಗಳು ದಾಖಲಾಗುತ್ತಾರೆ. ನಂತರ, ಬಿಜೆಪಿ ನಾಯಕಿ ಮತ್ತು ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಪತಿ ಕೌಶಲ್ ಸ್ವರಾಜ್ ಅವರನ್ನು @BharadwajSpeaks ಹ್ಯಾಂಡಲ್‌‌ನಿಂದ ಕೆಟ್ಟದಾಗಿ ಟ್ರೋಲ್ ಮಾಡಲಾಯಿತು.

ಬಲಪಂಥೀಯ ಆನ್‌ಲೈನ್ ಚಟುವಟಿಕೆಯನ್ನು ಗಮನಿಸುತ್ತಿರುವವರು ಟ್ರ್ಯಾಡ್ಸ್ ಮತ್ತು ರಾಯ್ತಾಸ್‌ ನಡುವಿನ ಮುಖ್ಯ ವ್ಯತ್ಯಾಸಗಳನ್ನು ವಿವರಿಸಿದ್ದಾರೆ. “ಟ್ರ್ಯಾಡ್ಸ್ ಹಿಂದೂ ಧರ್ಮದ ಸ್ಮಾರ್ತ ಪಂಥವನ್ನು ಅನುಸರಿಸುತ್ತಾರೆ. ಶಂಕರಾಚಾರ್ಯರನ್ನು ತಮ್ಮ ಆರಾಧ್ಯವೆಂದು ಪರಿಗಣಿಸುತ್ತಾರೆ. ರಾಯ್ತಾಸ್‌ ಹಿಂದುತ್ವ ಗುಂಪಿನವರು ರಾಜಕೀಯ ಮತ್ತು ಮುಖ್ಯವಾಹಿನಿಯ ಹಿಂದುತ್ವ ಜಾಗೃತಿಯನ್ನು ಹೊಂದಿದ್ದಾರೆ. ರಾಯ್ತಾಸ್‌‌ ಗುಂಪಿನವರು ಘರ್ ವಾಪ್ಸಿ, ವಿಧವಾ ಪುನರ್ವಿವಾಹ ಮತ್ತು ಸಂಪ್ರದಾಯದ ವಿರುದ್ಧವಾಗಿ ಪರಿಗಣಿಸುವ ಹೊಸ ಯುಗದ ವಿಚಾರಗಳನ್ನು ಪ್ರತಿಪಾದಿಸುತ್ತಾರೆ. ಟ್ರ್ಯಾಡ್ಸ್ ಗುಂಪಿನವರು ಸಂಘ ಪರಿವಾರವನ್ನು (ಆರ್‌ಎಸ್‌ಎಸ್) ರಾಯ್ತಾಸ್‌ ಎಂದು ಪರಿಗಣಿಸುತ್ತಾರೆ” ಎಂದು ತಜ್ಞರು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಟ್ರ್ಯಾಡ್ಸ್ ಮತ್ತು ರಾಯ್ತಾಸ್‌ ನಡುವಿನ ಪೈಪೋಟಿಯನ್ನು ಫಾಲೋ ಮಾಡುತ್ತಿರುವವರು ಮತ್ತೊಂದು ವ್ಯತ್ಯಾಸವನ್ನು ಸೂಚಿಸಿದ್ದಾರೆ. “ಟ್ರ್ಯಾಡ್ಸ್ ಮತ್ತು ರಾಯ್ತಾಸ್‌ ಇಬ್ಬರೂ ಆನ್‌ಲೈನ್‌ನಲ್ಲಿ ಹಿಂದೂಯೇತರರನ್ನು ಗುರಿಯಾಗಿಸಿಕೊಂಡಿರಬಹುದು, ಆದರೆ ರಾಯ್ತಾಸ್‌ ದಲಿತರ ವಿರುದ್ಧ ಬರೆಯುವುದಿಲ್ಲ. ಆದರೆ ಟ್ರ್ಯಾಡ್ಸ್ ಬಣ ದಲಿತರನ್ನೂ ಗುರಿಯಾಗಿಸಿಕೊಂಡಿದೆ” ಎಂದು ಈ ಮೂಲ ಹೇಳಿದೆ.

ಬುಲ್ಲಿ ಬಾಯ್‌ ಪ್ರಕರಣದ ಆರೋಪಿಗಳ ವಿವರಗಳು ಹೊರಬರುತ್ತಿದ್ದಂತೆ, ಬಂಧಿತ ಯುವಕ-ಯುವತಿಯರು ಸ್ವಯಂಪ್ರೇರಣೆಯಿಂದ ಇಂತಹ ದ್ವೇಷದ ಪ್ರಚಾರವನ್ನು ನಡೆಸಬಹುದು ಎಂಬ ಅಪನಂಬಿಕೆ ಸಾಮಾನ್ಯವಾಗಿದೆ. ಆದರೆ ಉತ್ತರಾಖಂಡ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಶೋಕ್ ಕುಮಾರ್ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಾ, “18 ವರ್ಷದ ಆರೋಪಿ ಸಿಂಗ್ ಬಡ ಕುಟುಂಬಕ್ಕೆ ಸೇರಿದವರಾಗಿದ್ದು ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಆಕೆ ಹಣಕ್ಕಾಗಿ ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾಳೆಂದು ತೋರುತ್ತದೆ” ಎಂದು ಹೇಳಿದ್ದಾರೆ.

ದಯಾನಂದ ಸಾಗರ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಎಚ್.ಕೆ.ರಾಮರಾಜು ಅವರಲ್ಲಿ ಝಾ ಬಗ್ಗೆ ವಿಚಾರಿಸಿದಾಗ, “ಆತ ವಿಧೇಯನಾಗಿದ್ದ. ಕ್ಯಾಂಪಸ್‌ನಲ್ಲಿ ಆತನ ನಡವಳಿಕೆ ಚೆನ್ನಾಗಿತ್ತು. ಆತನ ಬಗ್ಗೆ ನನಗೆ ಯಾವುದೇ ದೂರುಗಳಿಲ್ಲ. ಆದರೆ, ಕಳೆದ ಎರಡು ತಿಂಗಳಲ್ಲಿ ‌ಆತನ ಹಾಜರಾತಿ ಕಳಪೆಯಾಗಿದ್ದು, ಈ ಬಗ್ಗೆ ಆತನ ಪೋಷಕರಿಗೆ ತಿಳಿಸಿದ್ದೇವೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥ ಎಂದು ಸಾಬೀತಾದ ಬಳಿಕವಷ್ಟೇ ಕ್ರಮ ಕೈಗೊಳ್ಳುತ್ತೇವೆ. ಪ್ರಕರಣವು ಸಾಬೀತಾಗದ ಕಾರಣ, ನಾವು ವಿದ್ಯಾರ್ಥಿಗೆ ಹಾನಿ ಮಾಡಬಾರದು. ಅದನ್ನು ದೃಢೀಕರಿಸುವವರೆಗೆ ನಾವು ಅವನ ಭವಿಷ್ಯವನ್ನು ಹಾಳು ಮಾಡಬಾರದು” ಎಂದಿದ್ದಾರೆ.

ಆದರೆ ಆಫ್‌ಲೈನ್‌ಗಿಂತ ಭಿನ್ನವಾದ ನಡವಳಿಕೆ ಆನ್‌ಲೈನ್‌ನಲ್ಲಿ ಇವರು ತೋರಿದ್ದಾರೆ. ಈ ಇಬ್ಬರೂ ಆನ್‌ಲೈನ್ ಕಿರುಕುಳದ ಇತಿಹಾಸವನ್ನು ಹೊಂದಿದ್ದಾರೆ. ಟ್ರೋಲಿಂಗ್ ದೂರುಗಳ ನಂತರ ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹಲವು ಬಾರಿ ಅಮಾನತುಗೊಳಿಸಲಾಗಿದೆ. ಬೇರೆ ಬೇರೆ ಹೆಸರುಗಳಲ್ಲಿ ಖಾತೆಗಳನ್ನು ಪದೇಪದೇ ತೆರೆದಿರುವುದನ್ನು ನ್ಯೂಸ್‌ಲಾಂಡ್ರಿ ಉಲ್ಲೇಖಿಸಿದೆ.

ಮಾಜಿ ಬಲಪಂಥೀಯ ಟ್ರೋಲ್ ಮೂಲವೊಂದು ಪ್ರತಿಕ್ರಿಯಿಸುತ್ತಾ, “ಬಂಧಿತರಾಗಿರುವ ಈ ಇಬ್ಬರು ಮಕ್ಕಳು ಮಾಸ್ಟರ್‌ಮೈಂಡ್‌ಗಳಲ್ಲ. ಅವರು ಕೇವಲ ಸಂಪ್ರದಾಯವಾದಿ ಬಲಪಂಥೀಯ ಪ್ರಭಾವಿಗಳಿಂದ ಬ್ರೈನ್ ವಾಶ್‌ಗೆ ಒಳಗಾದವರಾಗಿದ್ದಾರೆ. ಅವರು [ಪ್ರಭಾವಿಗಳು] ರಾಷ್ಟ್ರೀಯತೆ ಅಥವಾ ದೇಶಭಕ್ತಿಯ ಸೋಗಿನಲ್ಲಿ ದ್ವೇಷವನ್ನು ಬೆಳೆಸುತ್ತಾರೆ. ನಂತರ ಇತರರ ವಿರುದ್ಧ ದ್ವೇಷವನ್ನು ಹರಡಲು ಈ ಯುವಕರನ್ನು ಬಿಡುತ್ತಾರೆ” ಎಂದಿದೆ.

(ಈ ವರದಿಯು ‘ನ್ಯೂಸ್‌ಲಾಂಡ್ರಿ’ ಜಾಲತಾಣಕ್ಕೆ ಆಭಾರಿಯಾಗಿದೆ)


ಇದನ್ನೂ ಓದಿರಿ: ಬುಲ್ಲಿ ಬಾಯ್ ವಿವಾದ: ಎಸಗಿದ ಕೃತ್ಯಕ್ಕೆ ಯಾವುದೇ ಪಶ್ಚಾತಾಪ ವ್ಯಕ್ತಪಡಿಸದ ಆರೋಪಿ- ಮೂಲಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ರಾಮಕೃಷ್ಣ ಅಲಿಯಾಸ್...