Homeಮುಖಪುಟದೇವಸ್ಥಾನಗಳಿಗೆ ಸರ್ಕಾರದ ನಿಯಂತ್ರಣ ತಪ್ಪಿಸುವ ಮಸೂದೆ ಪ್ರಸ್ತಾಪ; ಏನಿದು ವಿವಾದ?

ದೇವಸ್ಥಾನಗಳಿಗೆ ಸರ್ಕಾರದ ನಿಯಂತ್ರಣ ತಪ್ಪಿಸುವ ಮಸೂದೆ ಪ್ರಸ್ತಾಪ; ಏನಿದು ವಿವಾದ?

- Advertisement -
- Advertisement -

“ರಾಜ್ಯದಲ್ಲಿನ ಹಿಂದೂ ದೇವಾಲಯಗಳು ವಿವಿಧ ರೀತಿಯ ನಿಯಂತ್ರಣದಲ್ಲಿವೆ. ಅಧಿಕಾರಿಗಳಿಂದ ನೊಂದ ದೇವಸ್ಥಾನಗಳಿಗೆ ಮುಕ್ತಿ ಸಿಗಲಿದೆ. ದೇವಸ್ಥಾನದ ಆಡಳಿತ ಮಂಡಳಿಗಳು ತಮ್ಮ ಅಭಿವೃದ್ಧಿಯನ್ನು ತಾವೇ ನೋಡಿಕೊಳ್ಳುವ ಹಕ್ಕು ನೀಡುವ ಕಾನೂನನ್ನು ತರುತ್ತೇವೆ. ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸುವ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇದು ಹಿಂದೂ ಸಂಘಟನೆಗಳ ಬಹುಕಾಲದ ಬೇಡಿಕೆಯಾಗಿದೆ ಎಂದು ಅವರು ಪ್ರಸ್ತಾಪಿಸಿದ್ದಾರೆ. ಈಗ ಇದರ ಬಗ್ಗೆ ಎದ್ದಿರುವ ಪರ-ವಿರೋಧದ ಚರ್ಚೆಗಳ ಹಿನ್ನೆಲೆಯಲ್ಲಿ ಈ ವಿವಾದದ ಬಗ್ಗೆ ಒಂದು ಅವಲೋಕನ.

ನಿಯಂತ್ರಣ ಎಂದರೇನು?

ಕರ್ನಾಟಕ ರಾಜ್ಯದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಇಲಾಖೆ ಅಥವಾ
ಮುಜರಾಯಿ ಇಲಾಖೆಯ ಅಡಿಯಲ್ಲಿ ಸುಮಾರು 34,563 ದೇವಾಲಯಗಳಿವೆ. ಅವುಗಳಲ್ಲಿ 205 ದೇವಾಲಯಗಳು ಕೆಟಗರಿ ’ಎ’ ಅಡಿಯಲ್ಲಿ ಬರುತ್ತವೆ. ಅಂದರೆ 25 ಲಕ್ಷ ರೂ.ಗಳಿಗಿಂತ ಹೆಚ್ಚು ವಾರ್ಷಿಕ ಆದಾಯವನ್ನು ಹೊಂದಿರುವ ದೇವಾಲಯಗಳನ್ನು ಈ ಕೆಟಗರಿಯಲ್ಲಿ ಗುರುತಿಸಲಾಗಿದೆ. 139 ದೇವಾಲಯಗಳು ಕೆಟಗರಿ ’ಬಿ’ ಅಡಿಯಲ್ಲಿ ಬರುತ್ತವೆ. ಇವುಗಳು 5 ಲಕ್ಷದಿಂದ 25 ಲಕ್ಷ ರೂ.ವರೆಗೆ ವಾರ್ಷಿಕ ಆದಾಯ ಹೊಂದಿರುತ್ತವೆ. ಇದಕ್ಕಿಂತ ಕಡಿಮೆ ಆದಾಯ ಹೊಂದಿರುವ ಸುಮರು 34000ಕ್ಕೂ ಹೆಚ್ಚು ದೇವಾಲಯಗಳು ಕೆಟಗರಿ ’ಸಿ’ ಅಡಿಯಲ್ಲಿ ಬರುತ್ತವೆ.

2018ರಿಂದ 2020ರವರೆಗೆ ’ಎ’ ಮತ್ತು ’ಬಿ’ ವರ್ಗದ ದೇವಾಲಯಗಳು 1,383.63 ಕೋಟಿ ರೂ.ಗಳನ್ನು ಗಳಿಸಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೋವಿಡ್-19ರ ಲಾಕ್‌ಡೌನ್‌ನಿಂದಾಗಿ ದೇವಾಲಯಗಳ ಆದಾಯ ಕುಸಿತ ಕಂಡಿದೆ ಎನ್ನಲಾಗಿದೆ. 2021ರ ದತ್ತಾಂಶಗಳನ್ನು ಸಂಗ್ರಹಿಸಲಾಗುತ್ತಿದೆ. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಕಾಯಿದೆ ಪ್ರಕಾರ ’ಎ’ ಮತ್ತು ’ಬಿ’ ದರ್ಜೆಯ ದೇವಾಲಯಗಳು ಕ್ರಮವಾಗಿ ತಮ್ಮ ವಾರ್ಷಿಕ ಆದಾಯದ 10% ಮತ್ತು 5% ಭಾಗವನ್ನು ಮುಜರಾಯಿ ಇಲಾಖೆಗೆ ನೀಡಬೇಕಾಗುತ್ತದೆ. ಉಳಿದ ಹಣದಲ್ಲಿ ದೇವಾಲಯದ ಅಭಿವೃದ್ಧಿ ಕಾರ್ಯಗಳನ್ನು, ಚಟುವಟಿಕೆಗಳನ್ನು ನಿರ್ವಹಿಸಿಕೊಳ್ಳಬಹುದು. ಇದರ ಖರ್ಚುವೆಚ್ಚದ ಲೆಕ್ಕಪತ್ರಗಳನ್ನು ಮುಜರಾಯಿ ಇಲಾಖೆಗೆ ಸಲ್ಲಿಸಬೇಕು. ’ಸಿ’ ದರ್ಜೆಯ ದೇವಾಲಯಗಳು ಯಾವುದೇ ಹಣವನ್ನು ಸರ್ಕಾರಕ್ಕೆ ನೀಡಬೇಕಾಗಿಲ್ಲ.

ಸಾಂದರ್ಭಿಕ ಚಿತ್ರ

ದೇವಾಲಯದ ಪೂಜೆ, ಪುನಸ್ಕಾರ, ಆಗಮ ಪದ್ಧತಿಯ ಆಚರಣೆಗಳು ಸೇರಿದಂತೆ ಇತರ ಯಾವುದೇ ಕಾರ್ಯಗಳಲ್ಲಿಯೂ ಇದುವರೆಗೂ ಯಾವುದೇ ಸರ್ಕಾರ ಹಸ್ತಕ್ಷೇಪ ಮಾಡುತ್ತಿಲ್ಲ. ದೇವಾಲಯದ ಅಭಿವೃದ್ದಿ ಕಾರ್ಯಗಳಲ್ಲಿಯೂ ಮೂಗು ತೂರಿಸುತ್ತಿಲ್ಲ. ದೇವಾಲಯದ ಹಣ ಯಾವುದೇ ಕುಟುಂಬವೊಂದರ ಆಸ್ತಿಯಾಗಬಾರದು, ಅದಕ್ಕೊಂದು ನಿಯಂತ್ರಣ ಇರಬೇಕು, ಟ್ರಸ್ಟ್, ಸೊಸೈಟಿ ರಚಿಸಿಕೊಂಡು ಅದು ಕಾರ್ಯನಿರ್ವಹಿಸಬೇಕು ಎಂಬುದು ಸರ್ಕಾರದ ನಿಯಂತ್ರಣವಾಗಿದೆ. ದೇವಾಲಯಕ್ಕೆ ಸಂಗ್ರಹವಾದ ಹಣದಲ್ಲಿ ದುರುಪಯೋಗವಾಗಿದೆ ಎಂಬ ಆರೋಪ, ದೂರು ಕೇಳಿಬಂದಾಗ ಮಾತ್ರ ಅದನ್ನು ಸರ್ಕಾರ ತನಿಖೆ ನಡೆಸುವ ಕೆಲಸ ಮಾಡುತ್ತಿದೆ. ಆರೋಪ ಸಾಬೀತಾದಲ್ಲಿ ಆ ದೇವಸ್ಥಾನದ ಟ್ರಸ್ಟ್ ಅಥವಾ ಧರ್ಮದರ್ಶಿ ಮಂಡಳಿಯನ್ನು ವಿಸರ್ಜಿಸಿ ದೇವಾಲಯದ ಆಡಳಿತವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಅಧಿಕಾರ ಸರ್ಕಾರಕ್ಕಿರುತ್ತದೆ. ಏಕೆಂದರೆ ಜನರಿಂದ ಸಂಗ್ರಹವಾದ ಹಣವನ್ನು ಖರ್ಚು ಮಾಡುವಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಇರಬೇಕು ಎಂಬ ಆಶಯದಿಂದ ಈ ಅಧಿಕಾರವನ್ನು ಸರ್ಕಾರಕ್ಕೆ ನೀಡಲಾಗಿದೆ.

ಈ ನಿಯಂತ್ರಣ ತೆಗೆಯಬೇಕು: ಬಿಜೆಪಿ ಸರ್ಕಾರ

ಈ ಹಣಕಾಸು ಬಳಕೆಯ ಲೆಕ್ಕಪತ್ರಗಳನ್ನು ಪರಿಶೋಧಿಸುವ ಸರ್ಕಾರದ ನಿಯಂತ್ರಣವನ್ನು ತೆಗೆಯಬೇಕು. ಕೆಲ ಅಧಿಕಾರಿಗಳು ಈ ಅಧಿಕಾರ ಬಳಸಿಕೊಂಡು ದೇವಸ್ಥಾನಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬುದು ಬಿಜೆಪಿ ಪಕ್ಷದವರ ಮತ್ತು ಬಿಜೆಪಿ ಅಧಿಕಾರದ ಸದ್ಯದ ಸರ್ಕಾರದ ವಾದ. ಬೇರೆ ಧರ್ಮದ ದೇವಾಲಯಗಳಿಗೆ ಇಲ್ಲದ ನಿಯಂತ್ರಣ ಹಿಂದೂ ದೇವಾಲಯಗಳಿಗೆ ಮಾತ್ರ ಏಕೆ? ದೇವಸ್ಥಾನಗಳು ತಮ್ಮ ಅಭಿವೃದ್ಧಿಯನ್ನು ತಾವೇ ನೋಡಿಕೊಳ್ಳುತ್ತವೆ, ತಮ್ಮ ಹಣವನ್ನು ತಾವೇ ಬಳಸಿಕೊಳ್ಳುತ್ತವೆ, ಇದರಲ್ಲಿ ಸರ್ಕಾರ ಮಧ್ಯ ಪ್ರವೇಶಿಸಬಾರದು ಎಂಬುದು ಅವರ ಬೇಡಿಕೆಯಾಗಿದೆ. ಅಲ್ಲದೇ ಹಿಂದೂ ದೇವಾಲಯಗಳ ಹಣವನ್ನು ಬೇರೆ ಧರ್ಮದ ದೇವಾಲಯಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಅದರಲ್ಲಿಯೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದೇವಸ್ಥಾನಗಳಿಂದ ಬರುವ ಆದಾಯವನ್ನು ಇತರೆ ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗೆ ಬಳಸಲಾಗಿದೆ ಎಂದು ಆರೋಪಿಸಿದೆ.

ಹಿಂದೂ ದೇವಾಲಯಗಳ ಹಣವನ್ನು ಬೇರೆ ಧರ್ಮದ ದೇವಾಲಯಗಳಿಗೆ ಬಳಸಲಾಗಿದೆಯೇ?

ಈ ಮೊದಲೇ ಹೇಳಿದಂತೆ ’ಸಿ’ ಕೆಟಗರಿಯಲ್ಲಿರುವ 34,000ಕ್ಕೂ ಹೆಚ್ಚು ದೇವಾಲಯಗಳು ಯಾವುದೇ ಹಣವನ್ನು ಸರ್ಕಾರಕ್ಕೆ ಕಟ್ಟುತ್ತಿಲ್ಲ. ಅವುಗಳಿಂದ ವಾರ್ಷಿಕ 5 ಲಕ್ಷಕ್ಕಿಂತ ಕಡಿಮೆ ಹಣ ಸಂಗ್ರಹವಾಗುತ್ತಿದ್ದು ಅದನ್ನು ತಮ್ಮ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳುತ್ತಿವೆ. ಜೊತೆಗೆ ಸರ್ಕಾರ ಸಹ ಈ ದೇವಾಲಯಗಳಿಗೆ ಅನುದಾನ ನೀಡುತ್ತಿದೆ.

ಇನ್ನು ವಾರ್ಷಿಕ 25 ಲಕ್ಷಕ್ಕೂ ಅಧಿಕ ಆದಾಯವುಳ್ಳ ’ಎ’ ಕೆಟಗರಿಯ 205 ದೇವಾಲಯಗಳು ತಮ್ಮ ಆದಾಯದಲ್ಲಿ ಕೇವಲ 10% ಹಣವನ್ನು ಮಾತ್ರ ಸರ್ಕಾರಕ್ಕೆ ನೀಡುತ್ತವೆ. ಉಳಿದ ಹಣವನ್ನು ತಾವೇ ಬಳಸಿಕೊಳ್ಳುತ್ತವೆ. ವಾರ್ಷಿಕ 5 ಲಕ್ಷದಿಂದ 25 ಲಕ್ಷದವರೆಗೆ ಆದಾಯವಿರುವ ’ಬಿ’ ಕೆಟಗರಿಯ 139 ದೇವಸ್ಥಾನಗಳು ಕೇವಲ 5% ಹಣವನ್ನು ಮಾತ್ರ ಸರ್ಕಾರಕ್ಕೆ ನೀಡುತ್ತಿದ್ದು ಉಳಿದ ಹಣವನ್ನು ತಾವೇ ಬಳಸಿಕೊಳ್ಳುತ್ತಿವೆ. ಈ ಎರಡೂ ಕೆಟಗರಿಯ ಒಟ್ಟು 344 ದೇವಾಲಯಗಳು ಮಾತ್ರ ಸರ್ಕಾರಕ್ಕೆ ಹಣ ಪಾವತಿಸುತ್ತಿವೆ. ಆ ಹಣವನ್ನು ತಮ್ಮ ಅಧಿಕಾರಾವಧಿಯಲ್ಲಿ ಬೇರೆ ಧರ್ಮದ ಯಾವುದೇ ದೇವಾಲಯಗಳ ಅಭಿವೃದ್ಧಿಗೆ ಒಂದು ರೂ ಸಹ ಬಳಸಿಲ್ಲವೆಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, “ದೇವಸ್ಥಾನಗಳ ಹಣವನ್ನು ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ಧಾರ್ಮಿಕ ಸ್ಥಳಗಳ ಅಭಿವೃದ್ಧಿಗೆ ಖರ್ಚು ಮಾಡಲಾಗುತ್ತಿದೆ ಎಂದು ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ. ದೇವಸ್ಥಾನಗಳ ಒಂದು ರೂಪಾಯಿ ಹಣವನ್ನೂ ಮಸೀದಿ, ಚರ್ಚುಗಳಿಗೆ ಬಳಸಿಲ್ಲವೆಂದು ಮುಜರಾಯಿ ಇಲಾಖೆ ನನಗೆ ಉತ್ತರ ನೀಡಿದೆ. ರಾಜ್ಯ ಸರ್ಕಾರದಿಂದ 875 ಹಿಂದೂಯೇತರ ಧಾರ್ಮಿಕ ಸಂಸ್ಥೆಗಳಿಗೆ ರೂ.4.20 ಕೋಟಿ ಹಣವನ್ನೂ ಹಾಗೂ ರೂ. 146.72 ಕೋಟಿ ಹಣವನ್ನು ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ನೀಡಲಾಗುತ್ತಿದೆ. ಈ ಹಣವೂ ದೇವಾಲಯಗಳ ಹಣವಲ್ಲ. ಇದು ಸರ್ಕಾರ ನೀಡುತ್ತಿರುವ ಪರಿಹಾರದ ಹಣ. ಬಿಜೆಪಿ ನಾಯಕರು ಮೊದಲು ಇದನ್ನು ತಿಳಿದುಕೊಳ್ಳಲಿ” ಎಂದಿದ್ದಾರೆ.

ಮುಂದುವರಿದು “ಹಿಂದೂ ಮತ್ತು ಹಿಂದೂಯೇತರ ಧಾರ್ಮಿಕ ಸಂಸ್ಥೆಗಳಿಗೆ ಸರ್ಕಾರ ವರ್ಷಾಸನ ಮತ್ತು ತಸ್ತೀಕ್ ನೀಡುತ್ತಿರುವುದು ದೇವಸ್ಥಾನಗಳ ಆದಾಯವಲ್ಲ. ಅದು ಸರ್ಕಾರದ ಹಣ. ರಾಜ್ಯದಲ್ಲಿರುವ 30,663 ಹಿಂದೂ ಮತ್ತು ಹಿಂದೂಯೇತರ ಪೂಜಾ ಸ್ಥಳಗಳಿಗೆ ವರ್ಷದಲ್ಲಿ ತಸ್ತೀಕ್ ಮತ್ತು ವರ್ಷಾಸನಗಳ ರೂಪದಲ್ಲಿ ರೂ.150.92 ಕೋಟಿ ನೀಡಲಾಗುತ್ತಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

2020-21ರಲ್ಲಿ ಮುಜರಾಯಿ ಇಲಾಖೆಯು ರಾಜ್ಯಾದ್ಯಂತ ದೇವಾಲಯಗಳ ಅಭಿವೃದ್ಧಿಗೆ ಸುಮಾರು 208.29 ಕೋಟಿ ರೂ. ನೀಡಿದೆ. ಇದರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತವರು ಜಿಲ್ಲೆಗೆ ಅತಿ ಹೆಚ್ಚು (15.33 ಕೋಟಿ ರೂ.) ಅನುದಾನ ನೀಡಲಾಗಿದೆ.

ಏನಿದು ತಸ್ತೀಕ್ ಹಣ?

ತಸ್ತೀಕ್ ಅಂದರೆ ಮೈಸೂರು ಇನಾಂ ರದ್ದಿಯಾತಿ ಕಾಯ್ದೆ 1955ರಂತೆ 01.07.1970ರಿಂದ ಧರ್ಮಾದಾಯ ಮತ್ತು ದೇವಾದಾಯ ಇನಾಂ ಜಮೀನುಗಳ ಹಕ್ಕುಗಳನ್ನು ಸರ್ಕಾರವು ಕಾಯ್ದೆಯ ಕಲಂ 17ರಂತೆ ತನ್ನಲ್ಲಿ ನಿಹಿತಗೊಳಿಸಿಕೊಂಡಿತು. ಜಮೀನುಗಳನ್ನು ವಶಪಡಿಸಿಕೊಂಡ ಹಿಂದಿನ 5 ವರ್ಷಗಳ ಬೆಳೆಯನ್ನು ಆಧರಿಸಿ ತಸ್ತೀಕ್‌ಅನ್ನು ಜಿಲ್ಲಾಧಿಕಾರಿಗಳು/ ಉಪವಿಭಾಗಾಧಿಕಾರಿಗಳು ನಿಗದಿಗೊಳಿಸುತ್ತಾರೆ. ಸಂಸ್ಥೆಯ/ ವ್ಯಕ್ತಿಯ ಜಮೀನುಗಳನ್ನು ನಿಹಿತಗೊಳಿಸಿಕೊಂಡದ್ದರಿಂದ ಅವರಿಗೆ ಪರಿಹಾರ ನೀಡುವ ಉದ್ದೇಶದಿಂದ ತಸ್ತೀಕ್ ನೀಡಲಾಗುತ್ತದೆ.

ವರ್ಷಾಸನ ಅಂದರೆ, ಕರ್ನಾಟಕ ಭೂ ಸುಧಾರಣೆ ಕಾಯ್ದೆ- 1961ರಂತೆ 01.03.1974ರಂದು ಜಾರಿಗೆ ಬಂದ ಸರ್ಕಾರದಲ್ಲಿ ನಿಹಿತವಾದ ಜಮೀನುಗಳಿಗೆ ವರ್ಷಾಸನ ನಿಗದಿಗೊಳಿಸಲಾಗುತ್ತದೆ. ದೇವರಾಜ ಅರಸು ಅವರ ಕಾಲದಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲಾಯಿತು. ಜಮೀನುಗಳನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟ ಸಂಸ್ಥೆಗಳ ನಿರ್ವಹಣೆಗಾಗಿ ಈ ತಸ್ತೀಕ್ ಮತ್ತು ವರ್ಷಾಸನಗಳನ್ನು ನೀಡಲಾಗುತ್ತಿದೆ. ಹಿಂದೆ ರಾಜಮಹಾರಾಜರು ಈ ಧಾರ್ಮಿಕ ಸಂಸ್ಥೆಗಳ ನಿರ್ವಹಣೆಗೆಂದು ಜಮೀನುಗಳನ್ನು ಇನಾಂ ನೀಡಿದ್ದರು. ಆ ಜಮೀನುಗಳಿಂದ ಬರುವ ಆದಾಯದ ಮೇಲೆ ಆ ಸಂಸ್ಥೆಗಳ ನಿರ್ವಹಣೆ ನಡೆಯುತ್ತಿತ್ತು. ಸರ್ಕಾರ ಆ ಜಮೀನುಗಳನ್ನು ವಶಕ್ಕೆ ಪಡೆದು ಬಡ ರೈತರಿಗೆ ಮಂಜೂರು ಮಾಡಿತ್ತು. ಅದಕ್ಕಾಗಿ ಸರ್ಕಾರ ಈ ಸಂಸ್ಥೆಗಳು ಅಸ್ತಿತ್ವದಲ್ಲಿ ಇರುವವರೆಗೆ ಪರಿಹಾರ ನೀಡುತ್ತವೆ. ಇದು ಸರ್ಕಾರದಿಂದ ನೀಡುವ ಪರಿಹಾರವೇ ಹೊರತು ದೇವಾಲಯಗಳ ಹಣವನ್ನು ಹಂಚುವುದಲ್ಲ.

ಒಂದು ವರ್ಗದ ಕಣ್ಣು ದೇವಾಲಯಗಳ ಮೇಲೆ ಬಿದ್ದಿದೆ: ಸಿದ್ದರಾಮಯ್ಯ ಆರೋಪ

“’ಎ’ ಗುಂಪಿನ ದೇವಾಲಯಗಳ ಬಳಿ ರೂ.1,580 ಕೋಟಿ, ’ಬಿ’ ಗುಂಪಿನ ದೇವಾಲಯಗಳ ಬಳಿ ರೂ. 98.67 ಕೋಟಿ ಆದಾಯವಿದೆ. ಅಂದಾಜು 1 ಲಕ್ಷ ಕೋಟಿ ರೂಪಾಯಿ ಬೆಲೆಯ ಭೂಮಿ, ಒಡವೆ, ವಸ್ತುಗಳಿವೆ. ಇದರ ಮೇಲೆ ದುಷ್ಟ ಬಿಜೆಪಿ ಸರ್ಕಾರದ ಕಣ್ಣು ಬಿದ್ದಿದೆ. ಒಂದು ವರ್ಗದ ದುಷ್ಟ ಕಣ್ಣು ರಾಜ್ಯದ ದೇವಾಲಯಗಳ ಸಂಪತ್ತಿನ ಮೇಲೆ ಬಿದ್ದಿದೆ. ದೇವರ ಹೆಸರಿನಲ್ಲಿ ದಂಧೆ ನಡೆಸುವ ಧಾರ್ಮಿಕ ಮಾಫಿಯಾ ಇಂದು ಶೇ. 80ರಷ್ಟು ಜನರಿರುವ ಹಿಂದೂಗಳ ಆಸ್ತಿಯನ್ನು ಕಬಳಿಸಿ ಎರಡು- ಮೂರು ಪರ್ಸೆಂಟ್ ಜನರ ಅಧೀನಕ್ಕೆ ತೆಗೆದುಕೊಳ್ಳುವ ಭೀಕರ ಹುನ್ನಾರ ಮಾಡಿದೆ” ಎಂದು ಸಿದ್ದರಾಮಯ್ಯನವರು ಆರೋಪಿಸಿದ್ದಾರೆ.

ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮದ ದೇವಾಲಯಗಳ ಸ್ಥಿತಿಯೇನು?

ಬಹುತೇಕ ಮುಸ್ಲಿಂ ಮಸೀದಿಗಳು ವಕ್ಫ್ ಬೋರ್ಡ್ ಅಡಿಯಲ್ಲಿ ಬರುತ್ತವೆ. ಈ ವಕ್ಫ್ ಬೋರ್ಡ್ ಸಹ ಪರೋಕ್ಷವಾಗಿ ಸರ್ಕಾರದ ನಿಗ್ರಹಣೆ, ನಿಯಂತ್ರಣದಲ್ಲಿರುತ್ತದೆ. ಕ್ರಿಶ್ಚಿಯನ್ ಚರ್ಚ್‌ಗಳು ಸ್ಥಳೀಯ ಟ್ರಸ್ಟ್‌ಗಳ ಮೇಲುಸ್ತುವಾರಿಯಲ್ಲಿರುತ್ತವೆ. ಸಮುದಾಯಗಳಿಗೆ ಅವು ಪಾರದರ್ಶಕತೆ ಮತ್ತು ಉತ್ತರದಾಯಿತ್ವವಾಗಿರಬೇಕಿದೆ. “ಅವುಗಳ ಲೆಕ್ಕಪತ್ರ, ಖರ್ಚು ವೆಚ್ಚಗಳನ್ನು ಸಹ ಸರ್ಕಾರದ ನಿಯಂತ್ರಣಕ್ಕೆ ತರಬೇಕೆ ಹೊರತು ಹಿಂದೂ ದೇವಾಲಯಗಳನ್ನು ನಿಯಂತ್ರಣದಿಂದ ಹೊರತರಬಾರದು ಎಂದು ಅಭಿಪ್ರಾಯಪಡುತ್ತಾರೆ” ಹಿರಿಯ ಚಿಂತಕರಾದ ಶಿವಸುಂದರ್‌ರವರು.

“ಇದು ಧರ್ಮದಲ್ಲಿ ಮೂಗು ತೂರಿಸುವ ಪ್ರಶ್ನೆಯಲ್ಲ. ಅಲ್ಲಿನ ಆಡಳಿತ ಮತ್ತು ಹಣಕಾಸಿನ ನಿರ್ವಹಣೆಯಲ್ಲಿ ಪ್ರಜಾತಾಂತ್ರೀಕರಣದ ಪ್ರಶ್ನೆಯಾಗಿದೆ. ಇದು ಕೇವಲ ಹಿಂದೂ ದೇವಾಲಯಗಳಿಗೆ ಮಾತ್ರವಲ್ಲದೆ ಎಲ್ಲಾ ಧರ್ಮದ ದೇವಾಲಯಗಳ ನಿರ್ವಹಣೆಯಲ್ಲಿಯೂ ಈ ಪ್ರಜಾತಾಂತ್ರೀಕರಣ ಬರಬೇಕಿದೆ. ಜನರು ಧರ್ಮವನ್ನು ಹೇಗೆ ಅನುಸರಿಸಬೇಕೆಂದು ನಿಯಂತ್ರಿಸಲು ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ. ಅದರೆ ಸಾರ್ವಜನಿಕ ಹಣವನ್ನು ಹೇಗೆ ಬಳಸಬೇಕೆಂದು ನಿಯಂತ್ರಿಸುತ್ತದೆ ಅಷ್ಟೇ” ಎಂದು ಅವರು ತಿಳಿಸುತ್ತಾರೆ.

“ದೇವಾಲಯಗಳನ್ನು ಸಂಪೂರ್ಣ ಮುಕ್ತಗೊಳಿಸುವುದು ಅಂದರೆ ಅದರಲ್ಲಿ ಅಸ್ಪೃಶ್ಯತೆಯ ಪ್ರಶ್ನೆಯೂ ಬರುತ್ತದೆ. ಈಗ ಜಾತಿ ಭೇದವಿಲ್ಲದೆ ಪ್ರತಿಯೊಬ್ಬರಿಗೂ ದೇವಾಲಯ ಪ್ರವೇಶ ನೀಡಬೇಕು ಎಂಬ ಕಾನೂನು ಇದೆ. ಮುಂದೆ ಅದು ನಮ್ಮ ಧಾರ್ಮಿಕ ಸ್ವಾತಂತ್ರ್ಯದ ಪ್ರಶ್ನೆ, ನಮ್ಮ ಧರ್ಮದಲ್ಲಿ ಅಸ್ಪೃಶ್ಯರಿಗೆ ಪ್ರವೇಶವಿಲ್ಲ ಎಂಬುದಾಗಿಯು ಅವರು ವಾದ ಮಾಡಬಹುದು. ಈಗ ಸರ್ಕಾರದ ಪ್ರಜಾತಾಂತ್ರಿಕ ಮಧ್ಯಪ್ರವೇಶಕ್ಕೆ ಒಂದು ಅವಕಾಶವಿದೆ. ನಿಯಂತ್ರಣ ಇಲ್ಲದೆ ಹೋದರೆ ಅದು ತಪ್ಪಿಹೋಗುವ ಸಾಧ್ಯತೆಯಿದೆ” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಇದೂಅಲ್ಲದೆ, ಈಗಿರುವ ನಿಯಂತ್ರಣ ತಪ್ಪಿದಾಗ ದೇವಾಲಯ ಆಡಳಿತ ಮಂಡಳಿ ನಡೆಸುವ ಕಾರ್ಯಕ್ರಮಗಳನ್ನು ಪ್ರಶ್ನಿಸುವ ಹಕ್ಕು ಕೂಡ ಇಲ್ಲದಂತಾಗುತ್ತದೆ. ಯಾವುದೋ ಒಂದು ಪಕ್ಷದ ಅಥವಾ ಕೋಮಿನ ಹಿತರಕ್ಷಣೆಯ ಭಾಷಣ-ಉಪನ್ಯಾಸ ಕಾರ್ಯಕ್ರಮಗಳನ್ನು ಈ ದೇವಾಲಯ ನಿರ್ವಹಣೆ ಮಾಡುವವರು ಏರ್ಪಡಿಸುವಂತಾದರೆ ಅದನ್ನು ಪ್ರಶ್ನಿಸಿ ಅದಕ್ಕೆ ಉತ್ತರದಾಯಿತ್ವ ನಿರೀಕ್ಷಿಸುವ ಹಕ್ಕನ್ನು ಸಾರ್ವಜನಿಕರು ಕಳೆದುಕೊಳ್ಳಬಾರದಲ್ಲವೇ ಎಂದು ಕೂಡ ಹಲವರು ಪ್ರಶ್ನಿಸಿದ್ದಾರೆ.

ಒಟ್ಟಿನಲ್ಲಿ ಎಲ್ಲಾ ಧರ್ಮದ ದೇವಾಲಯಗಳ ಹಣಕಾಸಿನ ನಿರ್ವಹಣೆಯು ಮತ್ತು ಸಾಮಾಜಿಕ
ಬದ್ಧತೆಯು ಸರ್ಕಾರಕ್ಕೆ ಅಂದರೆ ಸಾರ್ವಜನಿಕರಿಗೆ ಉತ್ತರದಾಯಿತ್ವವಾಗಿರಬೇಕು. ಮುಕ್ತತೆಯ ಹೆಸರಿನಲ್ಲಿ ದೇವಾಲಯದ ಸಾರ್ವಜನಿಕರ ಹಣ ಕೆಲವರ ಸ್ವತ್ತಾಗುವುದು, ದುರುಪಯೋಗವಾಗುವುದನ್ನು ತಡೆಯಬೇಕಿದೆ. ಜನಸಾಮಾನ್ಯರ ತಮ್ಮ ಧಾರ್ಮಿಕ ಸ್ವಾತಂತ್ರ್ಯ ಈಗಿರುವಂತೆ ಮುಂದುವರೆಯುತ್ತಲೇ ಅಸ್ಪೃಶ್ಯತೆಯಂತಹ ಕರಾಳ ಆಚರಣೆಗಳು ತೊಲಗಬೇಕು. ಎಲ್ಲಾ ಧರ್ಮದ ಎಲ್ಲಾ ದೇವಾಲಯಗಳು ಜಾತಿ, ಮತ, ಲಿಂಗ ಭೇದವಿಲ್ಲದೆ ಎಲ್ಲರಿಗೂ ಮುಕ್ತ ಪ್ರವೇಶ ನೀಡುವ ಮೂಲಕ ಮತ್ತಷ್ಟು ವಿಶಾಲವಾಗಬೇಕಿವೆ.


ಇದನ್ನೂ ಓದಿ: ಮತಾಂಧ ಸರ್ವಾಧಿಕಾರದತ್ತ ಕರ್ನಾಟಕ: ವಿಧಾನಸಭೆಯ ಮುಂದೆ ‘ಧಾರ್ಮಿಕ ಬಂದೀಖಾನೆಯ ವಿಧೇಯಕ’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ಬಂಧನದ ವಿರುದ್ಧ ಎಎಪಿಯಿಂದ ಸಹಿ ಅಭಿಯಾನ

0
ದೆಹಲಿ ಮುಖ್ಯಮಂತ್ರಿ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಬಂಧನದ ವಿರುದ್ಧ ಆಮ್ ಆದ್ಮಿ ಪಕ್ಷ ಗುರುವಾರ ಸಹಿ ಅಭಿಯಾನವನ್ನು ಪ್ರಾರಂಭಿಸಿದೆ. ಮಾರ್ಚ್ 21ರಂದು ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ...