ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ.
ಈ ಆದೇಶವನ್ನು ತಕ್ಷಣವೇ ರದ್ದುಗೊಳಿಸುವಂತೆ ಪರಿಸರವಾದಿಗಳು ಮತ್ತು ನಿವೃತ್ತ ಅರಣ್ಯಾಧಿಕಾರಿಗಳು ಅಸ್ಸಾಂ ಸರ್ಕಾರಕ್ಕೆ ಪತ್ರ ಬರೆದ ನಾಲ್ಕು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.
ಅರಣ್ಯ ಸಿಬ್ಬಂದಿಯನ್ನು ಚುನಾವಣೆ ಅಥವಾ ಇತರ ಅರಣ್ಯೇತರ ಕೆಲಸಗಳಿಗೆ ಬಳಸಬಾರದು ಎಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಅಸ್ಸಾಂ ಸರ್ಕಾರ ಉಲ್ಲಂಘಿಸಿದೆ ಎಂದು ಆರೋಪಿಸಿ ವಕೀಲ ಗೌರವ್ ಬನ್ಸಾಲ್ ಸಲ್ಲಿಸಿದ್ದ ಅರ್ಜಿಯನ್ನು ಎನ್‌ಜಿಟಿ ವಿಚಾರಣೆ ನಡೆಸುತ್ತಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
2024ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಈ ತೀರ್ಪಿನಲ್ಲಿ, ರಾಜ್ಯಗಳು ಅರಣ್ಯ ಸಿಬ್ಬಂದಿಯನ್ನು ಚುನಾವಣೆ ಅಥವಾ ಚಾರ್ ಧಾಮ್ ಯಾತ್ರೆಯಂತಹ ಅರಣ್ಯೇತರ ಕಾರ್ಯಗಳಿಗೆ ನಿಯೋಜಿಸಬಾರದು ಎಂದು ಸ್ಪಷ್ಟಪಡಿಸಿತ್ತು.
ಅರ್ಜಿದಾರರು ಸರ್ಕಾರದ ಆದೇಶ ಭಾರತದ ಜೈವಿಕ ವೈವಿಧ್ಯತೆ ಕಾಯ್ದೆ, 2002ರ ಉಲ್ಲಂಘನೆಯೂ ಹೌದು ಎಂದೂ ವಾದಿಸಿದ್ದಾರೆ. ಈ ಕಾಯ್ದೆಯ ಪ್ರಕಾರ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಂತಹ ಸಂಪನ್ಮೂಲ ಭರಿತ ಪ್ರದೇಶಗಳ ಮೇಲೆ ಸರ್ಕಾರ ನಿರಂತರ ನಿಗಾ ವಹಿಸುವುದು ಕಡ್ಡಾಯವಾಗಿದೆ. ಅಲ್ಲದೆ, ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ ಮುಖ್ಯ ಕರ್ತವ್ಯವು ಅರಣ್ಯಗಳು ಮತ್ತು ಸಂರಕ್ಷಿತ ಪ್ರದೇಶಗಳನ್ನು ರಕ್ಷಿಸುವುದೇ ಆಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಎನ್‌ಜಿಟಿ ಸರ್ಕಾರದ ಆದೇಶವನ್ನು ತಡೆಹಿಡಿದು ತೀರ್ಪು ನೀಡಿದೆ. ಇಲ್ಲದಿದ್ದರೆ ಅದು ‘ಇದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡುತ್ತದೆ’ ಎಂದು ಹೇಳಿದೆ. ಎನ್‌ಜಿಟಿಯ ನ್ಯಾಯಾಂಗ ಸದಸ್ಯ ನ್ಯಾಯಮೂರ್ತಿ ಅರುಣ್ ಕುಮಾರ್ ತ್ಯಾಗಿ ಮತ್ತು ತಜ್ಞ ಸದಸ್ಯ ಈಶ್ವರ್ ಸಿಂಗ್ ಅವರಿದ್ದ ಪೀಠವು, ರಾಜ್ಯ ಸರ್ಕಾರ, ಪರಿಸರ ಸಚಿವಾಲಯ, ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರ, ಅಸ್ಸಾಂನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವಿಶೇಷ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿ, ಅಸ್ಸಾಂ ಚುನಾವಣೆಯಲ್ಲಿ ಅರಣ್ಯ ಸಿಬ್ಬಂದಿಯನ್ನು ನಿಯೋಜಿಸುವ ಕ್ರಮವನ್ನು ‘ಕಾನೂನುಬಾಹಿರ’ ಎಂದು ಕರೆದಿರುವುದಾಗಿ ದಿ ವೈರ್ ವರದಿ ಮಾಡಿದೆ.
ಪೀಠವು ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 6ಕ್ಕೆ ಪಟ್ಟಿ ಮಾಡಿದೆ.
ಮಾರ್ಚ್ 30ರಂದು ‘ದಿ ವೈರ್’ ವರದಿ ಮಾಡಿದಂತೆ, ಅಸ್ಸಾಂ ಚುನಾವಣೆಗೆ ಅರಣ್ಯ ಸಿಬ್ಬಂದಿಯನ್ನು ನಿಯೋಜಿಸುವ ಸರ್ಕಾರದ ನಿರ್ಧಾರದ ವಿರುದ್ಧ ಪರಿಸರವಾದಿಗಳು ಮತ್ತು ಮಾಜಿ ನಾಗರಿಕ ಸೇವಾ ಅಧಿಕಾರಿಗಳು ತಕ್ಷಣವೇ ಆದೇಶ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ, ಮಾರ್ಚ್ 31 ರಂದು 40 ಮಾಜಿ ನಾಗರಿಕ ಸೇವಾ ಅಧಿಕಾರಿಗಳು ಅಸ್ಸಾಂ ಮುಖ್ಯ ಕಾರ್ಯದರ್ಶಿಯವರಿಗೆ ಮತ್ತೊಮ್ಮೆ ಪತ್ರ ಬರೆದು, ಈ ಆದೇಶವನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದರು.


