ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗಾಗಿ ದೇಶ, ವಿದೇಶಗಳಿಂದ ದೇಣಿಗೆ ಸಂಗ್ರಹಿಸಲಾಗುತ್ತಿತ್ತು ಎಂಬ ಆರೋಪದ ಮೇಲೆ ವಿವಿಧ ಎನ್‌ಜಿಒ ಮತ್ತು ಟ್ರಸ್ಟ್‌ಗಳ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ದಾಳಿ ನಡೆಸಿದೆ.
ಬುಧವಾರ(ಅ.28) ಕಾಶ್ಮೀರ ಕಣಿವೆಯ 10 ಸಂಸ್ಥೆಗಳು ಮತ್ತು ಬೆಂಗಳೂರಿನಲ್ಲಿ ಒಂದು ಸ್ಥಳದ ಮೇಲೆ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಕೂಡ ದಾಳಿ ಮುಂದುವರೆದಿದೆ. ದೆಹಲಿಯ ಆರು ಎನ್‌ಜಿಒ ಮತ್ತು ಟ್ರಸ್ಟ್‌ಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.
ಜಮ್ಮು ಕಾಶ್ಮೀರ ಒಕ್ಕೂಟದ ಸಿವಿಲ್ ಸೊಸೈಟಿಯ ಸಂಯೋಜಕ ಖುರ್ರಾಮ್ ಪರ್ವೇಜ್, ಎಎಫ್‌ಪಿ ಪತ್ರಕರ್ತ ಪರ್ವೇಜ್ ಅಹ್ಮದ್ ಬುಖಾರಿ, ಪರ್ವೇಜ್ ಅಹ್ಮದ್ ಮಟ್ಟಾ ಮತ್ತು ಬೆಂಗಳೂರು ಮೂಲದ ಸ್ವಾತಿ ಶೇಷಾದ್ರಿ ಮತ್ತು ಕಣ್ಮರೆಯಾದ ವ್ಯಕ್ತಿಗಳ ಪೋಷಕರ ಸಂಘದ (APDP) ಅಧ್ಯಕ್ಷ ಪರ್ವೀನಾ ಅಹಂಗರ್ ಮತ್ತು ಎನ್‌ಜಿಒ ಅಥ್ರೌಟ್ ಮತ್ತು ಗ್ರೇಟರ್ ಕಾಶ್ಮೀರ ಟ್ರಸ್ಟ್‌ನ ಕಚೇರಿಗಳ ಮೇಲೆ ಎನ್ಐಎ ದಾಳಿ ನಡೆಸಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆಯು ಎನ್‌ಜಿಒಗಳಿಂದ ಹಲವಾರು ದೋಷಾರೋಪಣೆ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿದೆ ಎಂದು ತಿಳಿಸಿದೆ. ಆದರೆ ದಾಳಿ ಮಾಡಿದ ಸ್ಥಳಗಳಲ್ಲಿ ಒಂದಾದ, ಕಣ್ಮರೆಯಾದ ವ್ಯಕ್ತಿಗಳ ಪೋಷಕರ ಸಂಘ (APDP)ವು ಇದೊಂದು “ಪೂರ್ವನಿರ್ಧರಿತ ಮತ್ತು ಯೋಜಿತ ಆಕ್ರಮಣ” ಎಂದಿದೆ.
ಇದನ್ನೂ ಓದಿ: ’ಏಕತ್ವಂ’; ಇದು ತನಿಷ್ಕ್‌ನ ಜಾಹಿರಾತಲ್ಲ, ನಿಜ ಜೀವನದ ’ವಿಶ್ವಕುಟುಂಬ’!
ಎಡಿಪಿಡಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ “ಇದು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ರಕ್ಷಕರ (ಎಚ್‌ಆರ್‌ಡಿ) ಮೇಲಿನ ಪ್ರತಿಕಾರ ಮತ್ತು ದಮನದ ಸ್ಪಷ್ಟ ಪ್ರಕರಣವಾಗಿದೆ. ನಮ್ಮ ಧ್ವನಿಯನ್ನು ಕ್ರೂರವಾಗಿ ಹತ್ತಿಕ್ಕಲಾಗುತ್ತಿದೆ. ನ್ಯಾಯಕ್ಕಾಗಿ ನಾವು ಇಡುವ ನಮ್ಮ ಬೇಡಿಕೆಗಳನ್ನು ಅಪರಾಧೀಕರಿಸಲಾಗುತ್ತಿದೆ” ಎಂದಿದ್ದಾರೆ.
ಬೆಂಗಳೂರಿನ ಆರ್.ಟಿ. ನಗರದ ಸ್ವಾತಿ ಶೇಷಾದ್ರಿ ಅವರು ಸಂಶೋಧಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಅವರ ನಿವಾಸಕ್ಕೆ ಭೇಟಿ ನೀಡಿದ ಎನ್‍ಐಎ ಅಧಿಕಾರಿಗಳು ಶೋಧ ನಡೆಸಿದರು. ಎಪಿಡಿಪಿ ಎನ್‌ಜಿಒ ಅಧ್ಯಕ್ಷೆ ಪರ್ವೀನಾ ಅಹಂಗರ್ ಅವರ ಜತೆ ಸ್ವಾತಿ ಅವರಿಗೆ ನಿಕಟ ಸಂಪರ್ಕ ಇತ್ತು ಎಂದು ಹೇಳಲಾಗಿದೆ.
ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಈ ದಾಳಿಗಳನ್ನು ಖಂಡಿಸಿದ್ದಾರೆ ಮತ್ತು ದಾಳಿಯನ್ನು “ಭಿನ್ನಾಭಿಪ್ರಾಯದ ಮೇಲೆ ಕೆಟ್ಟ ದಬ್ಬಾಳಿಕೆ” ಎಂದು ಕರೆದಿದ್ದಾರೆ.
NIA raids on human rights activist Khurram Parvez & Greater Kashmir office in Srinagar is yet another example of GOIs vicious crackdown on freedom of expression & dissent. Sadly, NIA has become BJPs pet agency to intimidate & browbeat those who refuse to fall in line
— Mehbooba Mufti (@MehboobaMufti) October 28, 2020
“ಶ್ರೀನಗರದ ಮಾನವ ಹಕ್ಕುಗಳ ಕಾರ್ಯಕರ್ತ ಖುರ್ರಾಮ್ ಪರ್ವೇಜ್ ಮತ್ತು ಗ್ರೇಟರ್ ಕಾಶ್ಮೀರ ಕಚೇರಿಯ ಮೇಲೆ ಎನ್ಐಎ ದಾಳಿ ನಡೆಸಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಭಿನ್ನಾಭಿಪ್ರಾಯದ ಮೇಲೆ ಕೇಂದ್ರ ಸರ್ಕಾರದ ಕೆಟ್ಟ ದಮನಕ್ಕೆ ಮತ್ತೊಂದು ಉದಾಹರಣೆಯಾಗಿದೆ. ದುಃಖಕರವೆಂದರೆ, ಎನ್‌ಐಎ ಬಿಜೆಪಿಯ ಏಜೆನ್ಸಿಯಾಗಿ ಮಾರ್ಪಟ್ಟಿದೆ” ಎಂದು ಟ್ವೀಟ್ ಮಾಡಿದ್ದಾರೆ.
ಹಲವು ಮಂದಿ ಎನ್‌ಜಿಒಗಳ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ದಳವನ್ನು ತನ್ನ ಅಜೆಂಡಾಗಳಿಗಾಗಿ ಬಳಸುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು ಆರೋಪಿಸಿದ್ದಾರೆ.


