ಉದ್ಯಮಿಗಳಾದ ನೀರವ್ ಮೋದಿ, ವಿಜಯ್ ಮಲ್ಯ ಮತ್ತು ಮೆಹುಲ್ ಚೋಕ್ಸಿ ಅವರನ್ನು ಸಮಯಕ್ಕೆ ಸರಿಯಾಗಿ ಬಂಧಿಸುವಲ್ಲಿ ತನಿಖಾ ಸಂಸ್ಥೆಗಳು ವಿಫಲವಾದ ಕಾರಣ ದೇಶದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು ಎಂದು ಮುಂಬೈ ನ್ಯಾಯಾಲಯವು ಹೇಳಿದೆ.
ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಯಡಿಯಲ್ಲಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ.ಜಿ.ದೇಶಪಾಂಡೆ, ವೃತ್ತಿಪರ ಉದ್ದೇಶಗಳಿಗಾಗಿ ವಿದೇಶಕ್ಕೆ ಪ್ರಯಾಣಿಸಲು ಜಾಮೀನು ಷರತ್ತುಗಳನ್ನು ಸಡಿಲಿಸುವಂತೆ ಕೋರಿ ಮನಿ ಲಾಂಡರಿಂಗ್ ಪ್ರಕರಣದ ಆರೋಪಿ ವ್ಯೋಮೇಶ್ ಶಾ ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಈ ಅವಲೋಕನಗಳನ್ನು ಮಾಡಿದ್ದಾರೆ.
ಜಾರಿ ನಿರ್ದೇಶನಾಲಯದ(ಇಡಿ) ವಿಶೇಷ ಪ್ರಾಸಿಕ್ಯೂಟರ್, ವಕೀಲ ಸುನಿಲ್ ಗೊನ್ಸಾಲ್ವಿಸ್ ಅವರು ಅರ್ಜಿಯನ್ನು ವಿರೋಧಿಸಿ, ಅಂತಹ ಮನವಿಗೆ ಸಮ್ಮತಿಸುವುದು ‘ನೀರವ್ ಮೋದಿ, ವಿಜಯ್ ಮಲ್ಯ ಮತ್ತು ಮೆಹುಲ್ ಚೋಕ್ಸಿ’ಯವರು ದೇಶ ಬಿಟ್ಟು ಪಲಾಯನ ಮಾಡಿದ ಪರಿಸ್ಥಿತಿಯನ್ನು ಉಂಟುಮಾಡುತ್ತದೆ ಎಂದು ವಾದಿಸಿದ್ದಾರೆ.
ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿಗಳು, ಮೂವರು ಉದ್ಯಮಿಗಳನ್ನು ಬಂಧಿಸುವಲ್ಲಿ ತನಿಖಾ ಏಜೆನ್ಸಿಗಳು ವಿಫಲವಾದ ಕಾರಣ ಅವರಿಗೆ ಭಾರತದಿಂದ ಪಲಾಯನ ಮಾಡಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ನಾನು ಈ ವಾದವನ್ನು ಚಿಂತನಶೀಲವಾಗಿ ಪರಿಶೀಲಿಸಿದ್ದೇನೆ ಮತ್ತು ಸೂಕ್ತ ಸಮಯದಲ್ಲಿ ಅವರನ್ನು ಬಂಧಿಸುವಲ್ಲಿ ತನಿಖಾ ಸಂಸ್ಥೆಗಳು ವಿಫಲವಾಗಿರುವುದರಿಂದ ಇವರು ಪಲಾಯನ ಮಾಡಿದ್ದಾರೆ ಎಂಬುದನ್ನು ಗಮನಿಸುವುದು ಅಗತ್ಯವಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಪ್ರಸ್ತುತ ಯುಕೆಯಲ್ಲಿ ನೆಲೆಸಿರುವ ನೀರವ್ ಮೋದಿ ಮತ್ತು ವಿಜಯ್ ಮಲ್ಯ ಅವರನ್ನು ಮುಂಬೈ ನ್ಯಾಯಾಲಯಗಳು ಬೃಹತ್ ಆರ್ಥಿಕ ಹಗರಣಗಳಲ್ಲಿ ಪರಾರಿಯಾದ ಆರ್ಥಿಕ ಅಪರಾಧಿಗಳು ಎಂದು ಘೋಷಿಸಿವೆ. ಮೆಹುಲ್ ಚೋಕ್ಸಿ ಪ್ರಸ್ತುತ ಡೊಮಿನಿಕಾದಲ್ಲಿದ್ದಾರೆ ಮತ್ತು ಅವರನ್ನು ಎಫ್‌ಇಒ ಎಂದು ಘೋಷಿಸಲು ಇಡಿ ಅರ್ಜಿ ಸಲ್ಲಿಸಿದೆ.
ವ್ಯೋಮೇಶ್ ಶಾ ವಿರುದ್ಧ ಇಡಿ ಚಾರ್ಜ್‌ಶೀಟ್ ಬಳಿಕ ನ್ಯಾಯಾಲಯವು ಶಾ ಅವರಿಗೆ ಸಮನ್ಸ್ ನೀಡಿತ್ತು. ಜೂನ್ 7, 2022ರಂದು ನ್ಯಾಯಾಲಯಕ್ಕೆ ಹಾಜರಾದ ನಂತರ ಶಾ ಅವರನ್ನು ಕೆಲವು ಷರತ್ತುಗಳಿಗೆ ಒಳಪಟ್ಟು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಇದರಲ್ಲಿ ವೈಯಕ್ತಿಕ ಬಾಂಡ್‌ಗಳು ಮತ್ತು ಶ್ಯೂರಿಟಿಗಳನ್ನು ಒದಗಿಸುವುದು ಸಹ ಸೇರಿದೆ. ನ್ಯಾಯಾಲಯದ ಅನುಮತಿಯಿಲ್ಲದೆ ದೇಶ ಬಿಟ್ಟು ಹೋಗಬಾರದು ಎಂದು ಆತನಿಗೆ ವಿಧಿಸಿದ ಷರತ್ತಿನಲ್ಲಿ ಹೇಳಲಾಗಿತ್ತು. ಅದನ್ನು ಮಾರ್ಪಾಡು ಮಾಡುವಂತೆ ಷಾ ಪ್ರಸ್ತುತ ಮನವಿ ಸಲ್ಲಿಸಿದ್ದಾರೆ.
ತನ್ನ ಕೆಲಸಕ್ಕಾಗಿ ವಿವಿಧ ದೇಶಗಳಿಗೆ ತೆರಳಿ ಕೆಲಸ ಮಾಡಬೇಕಾಗಿರುವುದರಿಂದ ಪ್ರತಿ ಬಾರಿ ನ್ಯಾಯಾಲಯದ ಅನುಮತಿ ಪಡೆಯುವುದು ಕಷ್ಟಕರವಾಗಿದೆ ಎಂದು ಅವರು ಕೋರ್ಟ್ ಗಮನಕ್ಕೆ ತಂದಿದ್ದರು. ಶಾ ಪರ ಹಿರಿಯ ವಕೀಲರಾದ ಅಬದ್ ಪೊಂಡಾ, ಸಜಲ್ ಯಾದವ್ ಮತ್ತು ಆಯುಷಾ ಗೇರುಜಾ ವಾದ ಮಂಡಿಸಿದ್ದರು.
ಇದನ್ನು ಓದಿ: ಎಕ್ಸಿಟ್ ಪೋಲ್‌ಗಳನ್ನು ಎರಡು ತಿಂಗಳ ಹಿಂದೆ ಮನೆಯಲ್ಲೇ ಕುಳಿತು ತಯಾರಿಸಲಾಗಿದೆ: ಮಮತಾ ಬ್ಯಾನರ್ಜಿ


