ಇಂದು (ಜು.29) ಲೋಕಸಭೆಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಬಜೆಟ್ ಅಂಶಗಳನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಕಳೆದ ಬಾರಿ ಸಂಸತ್‌ನಲ್ಲಿ ಮಾತನಾಡುವಾಗ ರಾಹುಲ್ ಗಾಂಧಿ ಶಿವ, ಗುರುನಾನಕ್, ಏಸುಕ್ರಿಸ್ತ ಸೇರಿದಂತೆ ಧಾರ್ಮಿಕ ನಾಯಕರ ಫೋಟೋ ಪ್ರದರ್ಶಿಸಿದ್ದು, ಆಡಳಿತ ಪಕ್ಷದ ಸದಸ್ಯರ ವಿರೋಧಕ್ಕೆ ಕಾರಣವಾಗಿತ್ತು. ಆದರೆ, ರಾಹುಲ್ ಗಾಂಧಿ ಈ ಬಾರಿಯೂ ವಿಶಿಷ್ಟ ಫೋಟೋವೊಂದನ್ನು ಪ್ರದರ್ಶಿಸಿ ಸರ್ಕಾರದ ವಿರುದ್ದ ಕಿಡಿಕಾರಿದರು.

ಈ ಬಾರಿಯ ಬಜೆಟ್ ಮಂಡನೆಗೂ ಮುನ್ನ ಸಂಪ್ರದಾಯದಂತೆ ನಡೆದ ಹಲ್ವಾ ಸಮಾರಂಭದ ಫೋಟೋ ಪ್ರದರ್ಶಿಸಿದ ರಾಹುಲ್ ಗಾಂಧಿ, “ಸರ್ ಇದು ಬಜೆಟ್ ಮಂಡನೆಗೂ ಮುನ್ನ ನಡೆದ ಹಲ್ವಾ ಸಮಾರಂಭದ ಫೋಟೋ. ಇದರಲ್ಲಿ ನನಗೆ ಒಬ್ಬನೇ ಒಬ್ಬ ಒಬಿಸಿ, ಆದಿವಾಸಿ ಮತ್ತು ದಲಿತ ಅಧಿಕಾರಿ ಕಾಣುತ್ತಿಲ್ಲ. ಕೇವಲ 20 ಅಧಿಕಾರಿಗಳು ಸೇರಿಕೊಂಡು ಬಜೆಟ್ ಸಿದ್ದಪಡಿಸಿದ್ದಾರೆ. ಇದರರ್ಥ ಭಾರತ ಹಲ್ವಾವನ್ನು 20 ಅಧಿಕಾರಿಗಳು ಹಂಚಿಕೊಂಡಿದ್ದಾರೆ. ಅದರಲ್ಲಿ ಶೇ.73 ರಷ್ಟು ಪ್ರಾತಿನಿಧ್ಯ ಇಲ್ಲವೇ ಇಲ್ಲ. 20 ಅಧಿಕಾರಿಗಳಲ್ಲಿ ದೇಶದ 90 ಶೇ. ಜನರ ಪ್ರತಿನಿಧಿಯಾಗಿ ಇಬ್ಬರಿದ್ದರು. ಒಬ್ಬರು ಅಲ್ಪಸಂಖ್ಯಾತರು ಮತ್ತೊಬ್ಬರು ಒಬಿಸಿ ಅಧಿಕಾರಿ. ಆದರೆ, ಈ ಫೋಟೋದಲ್ಲಿ ಅವರೂ ಇಲ್ಲ. ಅಂದರೆ, ಫೋಟೋ ತೆಗೆಯುವ ವೇಳೆ ಅವರನ್ನು ಹಿಂಬಂದಿ ನಿಲ್ಲಿಸಲಾಗಿದೆ” ಎಂದರು. ಜಾತಿ ಜನಗಣತಿಗೆ ಆಗ್ರಹಿಸಿದರು.
#WATCH | In Lok Sabha, LoP Rahul Gandhi shows a poster of the traditional Halwa ceremony, held at the Ministry of Finance before the Budget session.
He says, "Budget ka halwa' is being distributed in this photo. I can't see one OBC or tribal or a Dalit officer in this. Desh ka… pic.twitter.com/BiFRB0VTk3
— ANI (@ANI) July 29, 2024
ರಾಹುಲ್ ಗಾಂಧಿ ಫೋಟೋ ಪ್ರದರ್ಶಿಸುವ ವೇಳೆ ಸ್ವೀಕರ್ ಓಂ ಬಿರ್ಲಾ ಮಧ್ಯ ಪ್ರವೇಶಿಸಿ ಫೋಟೋ ಪ್ರದರ್ಶಿಸಿದಂತೆ ಸೂಚಿಸಿದರು. “ನೀವು ಈಗ ಪ್ರತಿಪಕ್ಷದ ನಾಯಕರಾಗಿದ್ದೀರಿ. ಸದನದ ಗೌರವನ್ನು ಕಾಪಾಡಿಕೊಳ್ಳುತ್ತೀರಿ ಎಂದು ನಾನು ನಿರೀಕ್ಷಿಸುತ್ತೇನೆ” ಎಂದು ಸ್ಪೀಕರ್ ಹೇಳಿದರು.
ಈ ವೇಳೆ ರಾಹುಲ್ ಗಾಂಧಿ, “ಸರ್ ನೀವು ಟಿವಿ ಆಫ್ ಮಾಡಿದ್ದೀರಿ. ನಾನು ಫೋಟೋ ತೋರಿಸುವಾಗ ಅವರೇಕೆ ಹೆದರುತ್ತಾರೆ?” ಎಂದು ಆಡಳಿತ ಪಕ್ಷಕ್ಕೆ ಕುಟುಕಿದರು.
ಪೋಸ್ಟರ್ ತೋರಿಸಲು ಬಿಡುವುದಿಲ್ಲ, ಅದು ಸರಿಯಲ್ಲ ಎಂದು ಸ್ಪೀಕರ್ ಬಿರ್ಲಾ ಹೇಳಿದರು. ಆಗ ರಾಹುಲ್ ಗಾಂಧಿ “ನಾನು ಕ್ಷಮೆಯಾಚಿಸುತ್ತೇನೆ. ಆದರೆ, ನಾನು ಫೋಸ್ಟರ್ ತೋರಿಸಿಲ್ಲ, ಫೋಟೋ ತೋರಿಸಿದ್ದೇನೆ” ಎಂದರು.
ಮುಖ ಮುಚ್ಚಿಕೊಂಡ ವಿತ್ತಸಚಿವೆ :
ರಾಹುಲ್ ಗಾಂಧಿ ಹಲ್ವಾ ಸಮಾರಂಭ ಉಲ್ಲೇಖಿಸಿ ಜಾತಿ ತಾರತಮ್ಯದ ಗಂಭೀರತೆಯನ್ನು ಪ್ರಸ್ತಾಪಿಸುವಾಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮುಖವನ್ನು ಕೈಯಿಂದ ಮುಚ್ಚಿಕೊಂಡು, ನಗುವ ಮೂಲಕ ಪ್ರತಿಪಕ್ಷ ನಾಯಕನ ಹೇಳಿಕೆಯನ್ನು ತಮಾಷೆಯಾಗಿ ಸ್ವೀಕರಿಸಿದ್ದು ಕಂಡು ಬಂತು. ವಿತ್ತ ಸಚಿವೆಯ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ.
ಇದನ್ನೂ ಓದಿ : ಕಾಲಿಗೆ ಸರಪಳಿ ಬಿಗಿದ ಸ್ಥಿತಿಯಲ್ಲಿ ವಿದೇಶಿ ಮಹಿಳೆ ಕಾಡಿನಲ್ಲಿ ಪತ್ತೆ; ಜೇಬಿನಲ್ಲಿ ಯುಎಸ್ ಪಾಸ್‌ಪೋರ್ಟ್


