ಬಿಹಾರದ ‘ಮಹಾ ಘಟಬಂಧನ್’ ಮೈತ್ರಿ ಸರ್ಕಾರದೊಳಗೆ ಸಂಭವಿಸಿರುವ ಕ್ಷಿಪ್ರ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ‘ನಿತೀಶ್ ಕುಮಾರ್ ಅವರು ವಿರೋಧ ಪಕ್ಷಗಳ ಇಂಡಿಯಾ ಬಣದೊಂದಿಗೆ ಬಲವಾಗಿ ನಿಂತಿದ್ದರೆ, ಅವರು ಪ್ರಧಾನಿಯಾಗಬಹುದಿತ್ತು’ ಎಂದು ಹೇಳಿದ್ದಾರೆ.
ಇಂಡಿಯಾ ಟುಡೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಮೈತ್ರಿಯಲ್ಲಿ ಪ್ರಧಾನಿ ಹುದ್ದೆಗೆ ಯಾರನ್ನಾದರೂ ಪರಿಗಣಿಸಬಹುದು. ನಿತೀಶ್ ಕುಮಾರ್ ಅವರು ಸರಿಯಾದ ಬೆಂಬಲದೊಂದಿಗೆ ಸ್ಪರ್ಧಿಯಾಗಬಹುದಿತ್ತು’ ಎಂದರು.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂಡಿಯಾ ಬ್ಲಾಕ್ ಪಾಲುದಾರರೊಂದಿಗಿನ ಮಾತುಕತೆಗಳು ಹದಗೆಟ್ಟಿರುವ ಕಾರಣ ಬಿಜೆಪಿಯೊಂದಿಗಿನ ಹಳೆ ಗೆಳತನವನ್ನು ಮುಂದುವರಿಸಬಹುದು ಎಂಬ ತೀವ್ರ ಊಹಾಪೋಹಗಳ ಹಿನ್ನೆಲೆಯಲ್ಲಿ ಅಖಿಲೇಶ್ ಯಾದವ್ ಹೇಳಿಕೆ ನೀಡಿದ್ದಾರೆ. ಜನವರಿ 28ರಂದು ಬಿಜೆಪಿ ಬೆಂಬಲದೊಂದಿಗೆ ನಿತೀಶ್ ಕುಮಾರ್ ಏಳನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ನಿತೀಶ್ ಕುಮಾರ್ ಅವರ ನಡೆಗೆ ನಿರಾಶೆಯನ್ನು ವ್ಯಕ್ತಪಡಿಸಿದ ಯಾದವ್, ಜೆಡಿಯು ಮುಖ್ಯಸ್ಥರು ಇಂಡಿಯಾ ಬಣದಲ್ಲೆ ಉಳಿಯಬೇಕು ಎಂದು ಅವರು ಬಯಸಿದರು.
ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರೊಂದಿಗೆ ಪ್ರಚಾರ ಮಾಡುವ ಸಾಧ್ಯತೆಯ ಬಗ್ಗೆ ಕೇಳಿದಾಗ, ‘ಇನ್ನೂ ಅಂತಿಮವಾಗಿಲ್ಲ; ಅಂತಹ ಸಹಯೋಗವು ಕಾರ್ಯರೂಪಕ್ಕೆ ಬರುತ್ತದೆಯೇ ಎಂದು ಕಾಲ ಮಾತ್ರ ಹೇಳುತ್ತದೆ’ ಎಂದು ಹೇಳಿದರು.
ಪ್ರಧಾನಿ ಹುದ್ದೆಗೆ ಸ್ಪರ್ಧಿಸುತ್ತಿಲ್ಲ ಎಂದು ಅಖಿಲೇಶ್ ಯಾದವ್ ಸ್ಪಷ್ಟಪಡಿಸಿದರು. ಬದಲಿಗೆ ಪ್ರಾದೇಶಿಕ ಪಕ್ಷಗಳು ಸಾಕಷ್ಟು ಬಲವನ್ನು ಹೊಂದಿರುವಲ್ಲಿ ಆದ್ಯತೆ ನೀಡಬೇಕು ಎಂದು ಮಮತಾ ಬ್ಯಾನರ್ಜಿ ಅವರ ಮಾತುಗಳನ್ನು ಪುರುಚ್ಛರಿಸಿದರು. ಇಂಡಿಯಾ ಬಣದೊಂದಿಗಿನ ಸೀಟು ಹಂಚಿಕೆಯ ಮಾತುಕತೆ ಮುರಿದುಬಿದ್ದ ನಂತರ ಬಂಗಾಳದಲ್ಲಿ ಸ್ವತಂತ್ರವಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ದೀದಿ ಘೋಷಿಸಿದರು.
ರಾಮಮಂದಿರದ ವಿವಾದಾತ್ಮಕ ವಿಷಯದ ಬಗ್ಗೆ ಮಾತನಾಡಿ, ‘ಬಿಜೆಪಿಯು ಈ ವಿಷಯವನ್ನು ರಾಜಕೀಯಗೊಳಿಸುತ್ತಿದೆ. ಅದರಿಂದ ರಾಜಕೀಯ ಮೈಲೇಜ್ ಪಡೆಯಲು ಪ್ರಯತ್ನಿಸುತ್ತಿದೆ’ ಎಂದರು. ‘ನಾನೂ ಕೂಡ ಅಯೋಧ್ಯೆಗೆ ಹೋಗುತ್ತೇನೆ. ಆದರೆ, 2024ರಲ್ಲಿ ಚುನಾವಣೆ ಇರುವುದರಿಂದ ಪಂಡಿತರನ್ನು ಕೇಳಿ ಸಮಯ ತೆಗೆದುಕೊಂಡ ನಂತರ ಹೋಗುತ್ತೇನೆ’ ಎಂದರು.
ಇದನ್ನೂ ಓದಿ; ಬಿಹಾರ ರಾಜಕೀಯ ಬಿಕ್ಕಟ್ಟು; ‘ಇಧರ್-ಉಧರ್’ ಎನ್ನುವ ಗೊಂದಲ ಪರಿಹರಿಸಿ: ಆರ್‌ಜೆಡಿ


