ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಎರಡು ತಿಂಗಳಾಗಿದೆ. ಈಗಲೇ ಪ್ರತಿಪಕ್ಷಗಳ ನಾಯಕರು ಲಂಚದ ಆರೋಪ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ”ವರ್ಗಾವಣೆಗಾಗಿ ನಾನು ಲಂಚ ತಗೊಂಡಿಲ್ಲ, ಲಂಚ ತೆಗೆದುಕೊಂಡಿರುವುದನ್ನು ಸಾಬೀತು ಮಾಡಿದರ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ” ಎಂದು ಸವಾಲು ಹಾಕಿದ್ದಾರೆ.
ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಸುದೀರ್ಘ ಉತ್ತರ ನೀಡಿದ ಸಿದ್ದರಾಮಯ್ಯ ಅವರು, ”ನನ್ನ ರಾಜಕೀಯ ಜೀವನದಲ್ಲಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದಕ್ಕೆ ಒಂದೇ ಒಂದು ಬಾರಿಯೂ ಲಂಚ ತೆಗೆದುಕೊಂಡಿಲ್ಲ” ಎಂದು ಹೇಳಿದರು.
”ಈ ಬಾರಿ ನನ್ನ ಅಧೀನದ ಇಲಾಖೆಗಳಲ್ಲಿ ಯಾರೊಬ್ಬರನ್ನೂ ವರ್ಗಾವಣೆ ಮಾಡಿಲ್ಲ. ಬಸವರಾಜ ಬೊಮ್ಮಾಯಿ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದಂತೆ ವರ್ಗಾವಣೆಯಲ್ಲಿ ದಂಧೆ ನಡೆದಿಲ್ಲ. ಅವರ ಹೇಳಿಕೆಗಳನ್ನು ಖಂಡತುಂಡವಾಗಿ ಅಲ್ಲಗಳೆಯುತ್ತೇನೆ” ಎಂದು ಸಿದ್ದರಾಮಯ್ಯ ಗುಡುಗಿದರು.
”ಒಂದು ವೇಳೆ ನನಗೆ ಗೊತ್ತಿಲ್ಲದಂತೆ ಆ ರೀತಿ ಯಾರಾದರೂ ಮಾಡಿದ್ದರೆ, ನನಗೆ ಗೊತ್ತಿಲ್ಲ. ಭ್ರಷ್ಟಾಚಾರವೇ ಇಲ್ಲ ಎನ್ನುವುದಿಲ್ಲ. ಸರ್ಕಾರ ಬಂದು ಎರಡು ತಿಂಗಳೂ ತುಂಬಿಲ್ಲ. ಆಗಲೇ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದೀರಿ. ಈ ಆರೋಪಗಳು ಕಪೋಲ ಕಲ್ಪಿತ. ನಮ್ಮ ಸರ್ಕಾರದ ವಿರುದ್ಧ ಮಾತನಾಡಲು ಇವರಿಗೆ ಏನೂ ಇಲ್ಲ. 5 ಗ್ಯಾರಂಟಿಗಳು ಜಾರಿ ಮಾಡುತ್ತಿರುವುದರಿಂದ ಭಯ ಉಂಟಾಗಿದೆ. ರಾಜಕೀಯ ಅಭದ್ರತೆಯೂ ಕಾಡಿದೆ. ಆದ್ದರಿಂದ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ” ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಮೇಲೆ ಹರಿಹಾಯ್ದರು.
ಇದನ್ನೂ ಓದಿ: ಅಡ್ಡೆಸ್ಟ್‌ಮೆಂಟ್ ಪಾಲಿಟಿಕ್ಸ್ ಮಾಡಿಲ್ಲ, ಅಂತಹ ಜಾಯಮಾನವೇ ನನ್ನದಲ್ಲ: ಸದನದಲ್ಲಿ ಗುಡುಗಿದ ಸಿದ್ದರಾಮಯ್ಯ


