ಕಾಂಗ್ರೆಸ್ ಸಂಸದ ಆನಂದ ಶರ್ಮಾ ನೇತೃತ್ವದ ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಗೃಹ ಸಚಿವಾಲಯವನ್ನು ಪ್ರಶ್ನಿಸಿತ್ತು.
ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ, ದೇಶಾದ್ಯಂತ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಕುರಿತು ಇನ್ನೂ ನಿರ್ಧಾರಕ್ಕೆ ಬಂದಿಲ್ಲ ಎಂದು ಗೃಹ ಸಚಿವಾಲಯ ತಿಳಿಸಿದೆ.
ಮುಂಬರುವ ಜನಗಣತಿ ಪ್ರಕ್ರಿಯೆ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ನವೀಕರಣದ ಬಗೆಗಿನ ಸಮಿತಿಯ ಆತಂಕಗಳಿಗೆ ಪ್ರತಿಕ್ರಿಯಿಸಿದ ಗೃಹ ಸಚಿವಾಲಯ (ಎಂಎಚ್‌ಎ), “ಜನಗಣತಿಯಲ್ಲಿ ಸಂಗ್ರಹಿಸಲಾದ ಎಲ್ಲಾ ವೈಯಕ್ತಿಕ ಮಟ್ಟದ ಮಾಹಿತಿಯು ಗೌಪ್ಯವಾಗಿರುತ್ತದೆ. ಜನಗಣತಿಯಲ್ಲಿ, ಆಡಳಿತಾತ್ಮಕ ಹಂತಗಳಲ್ಲಿ ಒಟ್ಟು ಡೇಟಾವನ್ನು ಮಾತ್ರ ಬಿಡುಗಡೆ ಮಾಡಲಾಗುತ್ತದೆ. ಹಿಂದಿನ ಜನಗಣತಿಗಳಂತೆ, ಜನಗಣತಿ 2021 ಅನ್ನು ಯಶಸ್ವಿಯಾಗಿ ನಡೆಸಲು ಮತ್ತು ಪೂರ್ಣಗೊಳಿಸಲು ಸಾರ್ವಜನಿಕರಲ್ಲಿ ಸರಿಯಾದ ಜಾಗೃತಿ ಮೂಡಿಸಲು ವ್ಯಾಪಕ ಪ್ರಚಾರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ದೇಶಾದ್ಯಂತ ಯಶಸ್ವಿಯಾಗಿ ನಡೆಸಿದ ಪೂರ್ವ ಪರೀಕ್ಷೆಯಲ್ಲಿ ಎನ್‌ಪಿಆರ್ ಜೊತೆಗೆ ಜನಗಣತಿಯ ಪ್ರಶ್ನಾವಳಿಗಳನ್ನು ಪರೀಕ್ಷಿಸಲಾಗಿದೆ. ಎನ್‌ಆರ್‌ಸಿ ರಚಿಸಲು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ ಎಂದು ಸರ್ಕಾರ ಕಾಲಕಾಲಕ್ಕೆ ಸ್ಪಷ್ಟಪಡಿಸಿದೆ” ಎಂದು ಎಂಎಚ್‌ಎ ವಿವರಿಸಿದೆ.
ಇದನ್ನೂ ಓದಿ: ಜನವರಿಯಿಂದಲೆ ಸಿಎಎ ಜಾರಿಯಾಗುವ ಸಾಧ್ಯತೆ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಕಾಂಗ್ರೆಸ್ ಸಂಸದ ಆನಂದ್ ಶರ್ಮಾ ನೇತೃತ್ವದ ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯು ಎಂಎಚ್‌ಎಯನ್ನು ಪ್ರಶ್ನಿಸಿತ್ತು. ಕೇಂದ್ರ ಸರ್ಕಾರವು ರಾಷ್ಟ್ರವ್ಯಾಪಿ ಎನ್‌ಆರ್‌ಸಿ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳನ್ನು ನೀಡುತ್ತಿರುವುದರಿಂದ ಎನ್‌ಪಿಆರ್ ಮತ್ತು ಜನಗಣತಿಗೆ ಸಂಬಂಧಿಸಿದಂತೆ ಸಾಕಷ್ಟು ಅಸಮಾಧಾನ ಮತ್ತು ಭಯವಿದೆ ಎಂದು ಸಮಿತಿ ಹೇಳಿತು.
ಎನ್‌ಪಿಆರ್ ಬಗ್ಗೆ ಎಲ್ಲಾ ರಾಜ್ಯಗಳಿಗೆ ಸಂಕ್ಷಿಪ್ತವಾಗಿ ತಿಳಿಸಬೇಕು ಮತ್ತು ಸರಿಯಾಗಿ ಮಾತನಾಡಬೇಕು ಎಂದು ಸಮಿತಿ ಹೇಳಿದೆ.
ವಿರೋಧಪಕ್ಷಗಳ ಆಡಳಿತವಿರುವ ಹಲವಾರು ರಾಜ್ಯಗಳು ಈ ಹಿಂದೆ ಎನ್‌ಪಿಆರ್ ಅನ್ನು ಕಾರ್ಯಗತಗೊಳಿಸುವುದಿಲ್ಲ ಎಂದು ಹೇಳಿದ್ದವು. “ಇದನ್ನು ರಾಷ್ಟ್ರವ್ಯಾಪಿ ಎನ್‌ಆರ್‌ಸಿಯನ್ನು ಕಾರ್ಯಗತಗೊಳಿಸಲು ಬಳಸಲಾಗುವುದು ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆಯೊಂದಿಗೆ ಅದನ್ನು ಸೇರಿಸಿ, ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಸಲು ಬಳಸಲಾಗುತ್ತದೆ” ಎಂಬ ಆತಂಕವನ್ನು ಆ ರಾಜ್ಯಗಳು ವ್ಯಕ್ತಪಡಿಸಿದ್ದನ್ನು ಸಮಿತಿ ಉಲ್ಲೇಖಿಸಿತು.
ಇದನ್ನೂ ಓದಿ: ಸಿಎಎ ಶೀಘ್ರವೇ ಜಾರಿ; ಕೊರೊನಾ ಕಾರಣದಿಂದ ವಿಳಂಬವಾಗಿತ್ತು: ಜೆ.ಪಿ.ನಡ್ಡಾ
2019 ರ ಕೊನೆಯಲ್ಲಿ ಮತ್ತು 2020 ರ ಆರಂಭದಲ್ಲಿ ಸಿಎಎ-ಎನ್‌ಆರ್‌ಸಿ-ಎನ್‌ಪಿಆರ್ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆದಾಗ, ರಾಷ್ಟ್ರವ್ಯಾಪಿ ಎನ್‌ಆರ್‌ಸಿ ಪ್ರಕ್ರಿಯೆಯ ಪೂರ್ವ ತಯ್ಯಾರಿ ಆಗಲೇ ಆರಂಭಗೊಂಡಿದೆ ಎಂದು ಒಮ್ಮೆ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಹಿಂದಕ್ಕೆ ಹೆಜ್ಜೆ ಇಡಬೇಕಾಯಿತು. ನಂತರ ಸರ್ಕಾರವು ಎನ್‌ಆರ್‌ಸಿ ಯೋಜನೆಗೆ ಎಂದಿಗೂ ಅಂತಿಮ ಅನುಮತಿ ನೀಡಿಲ್ಲ ಎಂದು ಹೇಳಿಕೊಂಡಿತ್ತು. ಅದು ಇನ್ನೂ ಚರ್ಚೆಯಲ್ಲಿದೆ (ಈಗ ಎಂಎಚ್‌ಎ ಹೇಳಿರುವಂತೆ) ಎಂದು ಸರ್ಕಾರ ಹೇಳಿತ್ತು.
ಅದಕ್ಕೂ ಮೊದಲು, ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತು ಸೇರಿದಂತೆ ಅನೇಕ ವೇದಿಕೆಗಳಲ್ಲಿ, ಅನೇಕ ಸಲ ’ಕೇಂದ್ರವು ರಾಷ್ಟ್ರವ್ಯಾಪಿ ಎನ್‌ಆರ್‌ಸಿಯನ್ನು ಜಾರಿಗೆ ತರಲಿದೆ’ ಎಂದು ಘೋಷಿಸಿದ್ದರು.
ರಾಜಕೀಯ ರ್‍ಯಾಲಿಗಳು, ಪತ್ರಿಕಾಗೋಷ್ಠಿಗಳು ಮತ್ತು ಸಂದರ್ಶನಗಳಲ್ಲಿ ತಮ್ಮ ಸಾರ್ವಜನಿಕ ಘೋಷಣೆಗಳ ಹೊರತಾಗಿ, ರಾಷ್ಟ್ರೀಯ ಮಟ್ಟದಲ್ಲಿ ಎಲ್ಲ ರಾಜ್ಯಗಳಲ್ಲೂ (ಅಸ್ಸಾಂನಲ್ಲಿ ಎರಡನೇ ಬಾರಿ) ಎನ್‌ಆರ್‌ಸಿ ಪ್ರಕ್ರಿಯೆ ನಡೆಸುವ ಸರ್ಕಾರದ ನಿರ್ಧಾರವನ್ನು 2019 ರ ನವೆಂಬರ್ 20 ರಂದು ರಾಜ್ಯಸಭೆಗೆ ಕೇಂದ್ರ ಗೃಹ ಸಚಿವರು ತಿಳಿಸಿದ್ದರು.
ಇದನ್ನೂ ಓದಿ: ಸಿಎಎ ವಿರೋಧಿ ಪ್ರತಿಭಟನಕಾರರ ಬಂಧನ: ಆತಂಕ ವ್ಯಕ್ತಪಡಿಸಿದ ವಿಶ್ವಸಂಸ್ಥೆ


