ಪತಂಜಲಿ ಮತ್ತು ಉತ್ತರಾಖಂಡ ಸರ್ಕಾರದ ಸಹಯೋಗದೊಂದಿಗೆ ಆರಂಭಗೊಂಡ ಕೋವಿಡ್ ಆರೈಕೆ ಕೇಂದ್ರವು ಸಾಕಷ್ಟು ಸಿಬ್ಬಂದಿಗಳನ್ನು ಹೊಂದಿಲ್ಲ ಮತ್ತು ಅದರ ಐಸಿಯು ವಾರ್ಡ್ ಮತ್ತು ವೆಂಟಿಲೇಟರ್‌ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ದಿ ನ್ಯೂಸ್ ಲಾಂಡ್ರಿ ಗ್ರೌಂಡ್ ರಿಪೋರ್ಟ್ ಮಾಡಿದೆ.
‘ಇಲ್ಲಿರುವ ಎಲ್ಲಾ 150 ಹಾಸಿಗೆಗಳಲ್ಲಿ ಆಮ್ಲಜನಕದ ವ್ಯವಸ್ಥೆ ಇದೆ’ ಎಂದು ಸ್ವಯಂ-ಘೋಷಿತ ಯೋಗ ಗುರು ಬಾಬಾ ರಾಮ್‌ದೇವ್ ಮೇ 4 ರಂದು ಎಬಿಪಿ ನ್ಯೂಸ್ ಆಂಕರ್ ರುಬಿಕಾ ಲಿಯಾಕತ್‌ಗೆ ತಿಳಿಸಿದರು. ಅವರು ತಮ್ಮ ಕಂಪನಿಯಾದ ಪತಂಜಲಿ ನಡೆಸುತ್ತಿರುವ ಕೋವಿಡ್ ಆರೈಕೆ ಕೇಂದ್ರದ ಬಗ್ಗೆ ಹರಿದ್ವಾರದಲ್ಲಿ ಪ್ರಚಾರ ಮಾಡುತ್ತಿದ್ದರು. ಉತ್ತರಾಖಂಡ ಸರ್ಕಾರದ ಸಹಯೋಗದಲ್ಲಿ ಈ ಆರೈಕೆ ಕೇಂದ್ರ ಸ್ಥಾಪಿಲಾಗಿದ್ದು, ಇದರ ಕುರಿತು ಒಣ ಮಾತುಗಳು, ಸುಳ್ಳು ಹೇಳಿಕೆಗಳು ಮುನ್ನಲೆಗೆ ಬಂದಿದ್ದು ಈ ಕೇಂದ್ರದಲ್ಲಿ ಕನಿಷ್ಠ ಸೌಲಭ್ಯ ಮತ್ತು ಅಗತ್ಯ ಸಿಬ್ಬಂದಿಯೇ ಇಲ್ಲ ಎಂಬುದನ್ನು ನೈಸ್ ಲಾಂಡ್ರಿ ಸಾಬೀತು ಮಾಡಿದೆ.
“ಯಾರಿಗಾದರೂ ತೀವ್ರ ತೊಂದರೆ ಇದ್ದರೆ ನಮ್ಮ ನೆರವು ಪಡೆಯಿರಿ. ನಮ್ಮಲ್ಲಿ ಐಸಿಯುಗಳಿವೆ. ಸೋಂಕು ತೀವ್ರವಾಗಿದ್ದರೆ, ನಮ್ಮಲ್ಲಿ ವೆಂಟಿಲೇಟರ್‌ಗಳೂ ಇವೆ’ ಎಂದು ಬಾಬಾ ರಾಮದೇವ್ ಮತ್ತು ಈ ಕೇಂದ್ರದ ಸಿಬ್ಬಂದಿ ಹೇಳುತ್ತ ಬಂದಿದ್ದಾರೆ.
ಏನೂ ಇಲ್ಲ ಎಂದ ಪ್ರತ್ಯಕ್ಷ ವರದಿ
ನ್ಯೂಸ್ ಲಾಂಡ್ರಿ ತಂಡ ಹರಿದ್ವಾರ ಕೇಂದ್ರಕ್ಕೆ ಭೇಟಿ ನೀಡಿ ಈ ವರದಿಯನ್ನು ಸಿದ್ಧ ಮಾಡಿದೆ. ಹಿಂದೆ ಕುಂಭಮೇಳ ಯಾತ್ರಾರ್ಥಿಗಳ ಆಸ್ಪತ್ರೆ ಎನ್ನಲಾಗಿದ್ದ ಈ ಅಸ್ಪತ್ರೆಯಲ್ಲಿ ರಾಮದೇವ್ ಹೇಳಿದ ವಿಷಯಗಳು ಸಂಪೂರ್ಣ ಅಸತ್ಯ ಅಥವಾ ಅರೆಸತ್ಯ ಎಂಬುದು ಸಾಬೀತಾಗಿದೆ. ತಪ್ಪುದಾರಿಗೆಳೆಯುವ ಅಥವಾ ಸಂಪೂರ್ಣ ಸುಳ್ಳು ಎಂದು ನ್ಯೂಸ್ ಲಾಂಡ್ರಿ ತಂಡ ಕಂಡುಕೊಂಡಿದೆ.. ಮೇ 10 ರ ಹೊತ್ತಿಗೆ 150 ಹಾಸಿಗೆಗಳಲ್ಲಿ 50 ಮಾತ್ರ ಕಾರ್ಯನಿರ್ವಹಿಸುತ್ತಿವೆ ಮತ್ತು ಐಸಿಯು ಹಾಸಿಗೆ ಇಲ್ಲವೇ ಇಲ್ಲ. ವೆಂಟಿಲೇಟರ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ವೈದ್ಯರು, ವಾರ್ಡ್ ಹುಡುಗರು ಮತ್ತು ಹೌಸ್‌ಕೀಪಿಂಗ್ ಸಿಬ್ಬಂದಿಗಳ ಕೊರತೆಯಿದೆ. ಸೌಲಭ್ಯದ ಸಾಮರ್ಥ್ಯದ ಕೊರತೆ ಎದ್ದು ಕಾಣುತ್ತಿದೆ. ಆ ಕಾರಣಕ್ಕಾಗಿಯೇ ಈ ಕೇಂದ್ರ ಗಂಭಿರ ರೋಗಿಗಳನ್ನು ಬೇರೆಡೆ ಹೋಗಲು ರೆಫರ್ ಮಾಡುತ್ತಿದೆ! ಕೆಲವೊಮ್ಮೆ ಒತ್ತಾಯದಿಂದ ಕಳಿಸುತ್ತಿದೆ!

ಮೊಟ್ಟಮೊದಲಿಗೆ ಇಲ್ಲಿ ಸರಿಯಾದ ನೀರಿನ ವ್ಯವಸ್ಥೇಯೇ ಇಲ್ಲ! ಕೋವಿಡ್ ವಾರ್ಡ್ಗಳಿಗೆ ಛಾವಣಿಗಳಿಲ್ಲ, ಇದು ವ್ಯಾಪಕ ಪ್ರಸರಣಕ್ಕೆ ಅವಕಾಶ ಮಾಡಿ ಕೊಡುತ್ತಿದೆ.
ಆದರೂ, ಹಲವಾರು ರಾಷ್ಟ್ರೀಯ ಚಾನೆಲ್‌ಗಳು, ಇದೊಂದು ಅದ್ಭುತ ಕೋವಿಡ್ ಆರೈಕೆ ಕೇಂದ್ರವೆಂದು ಸುದ್ದಿ ಮಾಡಿ, ರಾಮದೇವ್ ಸಂದರ್ಶನ ಮಾಡಿ ಲಕ್ಷಾಂತರ ವೀಕ್ಷಕರನ್ನು ದಾರಿ ತಪ್ಪಿಸಿದವು. ಈ ಸಂದರ್ಭದಲ್ಲಿ ಏಕಕಾಲದಲ್ಲಿ ಪತಂಜಲಿಯಿಂದ ಹಲವಾರು ಟ್ಯಾಬ್ಲೆಟ್‌ಗಳು, ಕ್ಯಾಪ್ಸುಲ್‌ಗಳು ಮತ್ತು ಪುಡಿಗಳ ಜಾಹೀರಾತು ಪ್ರಕಟಿಸಿದವು! ಗಿಡಮೂಲಿಕೆ ಉತ್ಪನ್ನಗಳಲ್ಲಿ ವ್ಯವಹರಿಸುವ ಈ ಪತಂಜಲಿ ಎಂಬ ಸಂಶಯಾತ್ಮ ಕಂಪನಿ ಇತ್ತೀಚೆಗೆ ಟಿವಿ ಸುದ್ದಿ ವಾಹಿನಿಗಳಲ್ಲಿ ದೊಡ್ಡ ಜಾಹೀರಾತುದಾರರಲ್ಲಿ ಒಂದಾಗಿದೆ!
ಮೇ 3 ರಂದು ಕೋವಿಡ್ ಕೇಂದ್ರವನ್ನು ಉದ್ಘಾಟಿಸಲಾಗಿದ್ದು, ಉತ್ತರಾಖಂಡ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಹಾಜರಿದ್ದರು. ಟಿವಿ ಸಂದರ್ಶನಗಳಲ್ಲಿ, ರಾಮದೇವ್ ಅವರು, ಈ ಕೇಂದ್ರವು ಕೋವಿಡ್‌ಗೆ ಸಮಗ್ರ ಚಿಕಿತ್ಸೆಯನ್ನು ಒದಗಿಸುತ್ತದೆ. ಅಲೋಪತಿ, ಆಯುರ್ವೇದ ಮತ್ತು ಯೋಗದ ಮಿಶ್ರಣದ ಚಿಕಿತ್ಸೆ ಇಲ್ಲಿ ಲಭ್ಯ ಎಂದಿದ್ದರು.
ಆದರೆ, ರಾಮದೇವ್ ಬಾಬಾ ಹೇಳಿದಂತೆ ಅಲ್ಲಿ ಅಲೋಪತಿ ಮತ್ತು ಆಯುರ್ವೇದ ಎರಡನ್ನೂ ಒಳಗೊಂಡ ವೈಜ್ಞಾನಿಕ ಚಿಕಿತ್ಸೆ ನಡೆಯುತ್ತಲೇ ಇಲ್ಲ. ರೋಗಿಗಳಿಗೆ ಪತಂಜಲಿಯ ಕೊರೊನಿಲ್ ನಂತಹ ಪರೀಕ್ಷಿಸದ ಔಷಧಿಗಳನ್ನು ನೀಡಲಾಗುತ್ತಿದೆ!
ಮರಣಶಯ್ಯೆಯಲ್ಲಿ ಐಸಿಯು!
ಕೋವಿಡ್ ಕೇಂದ್ರವು ಗಂಗಾ ನದಿಯ ಪ್ರಸಿದ್ಧ ಘಾಟ್ ಆಗಿರುವ ಹರಿದ್ವಾರದ ಹರ್ ಕಿ ಪೌರಿಗಿಂತ ಕೆಲವು ಕಿಲೋಮೀಟರ್ ಮುಂದಿದೆ. ಕೇಂದ್ರದ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ಎಸ್.ಕೆ. ಸೋನಿ, 150 ಹಾಸಿಗೆಗಳಲ್ಲಿ 50 ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಎಲ್ಲವಕ್ಕೂ ಆಮ್ಲಜನಕ ಪೂರೈಕೆಯಾಗಿದೆ ಮತ್ತು ಸಿಬ್ಬಂದಿ ಕೊರತೆಯಿಂದಾಗಿ ಲಭ್ಯವಿರುವ 10 ವೆಂಟಿಲೇಟರ್‌ಗಳಲ್ಲಿ ಯಾವುದನ್ನೂ ಆನ್ ಮಾಡಲು ಆಗಿಲ್ಲ ಎಂದು ಹೇಳಿದ್ದಾರೆ.
“ನಮಗೆ ಅಪಾರ ಮಾನವಶಕ್ತಿ ಬೇಕು. ನಾವು ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದ್ದೇವೆ, ವಿಶೇಷವಾಗಿ ಅಲೋಪತಿಯಲ್ಲಿ ತರಬೇತಿ ಪಡೆದವರು ಬೇಕಾಗಿದ್ದಾರೆ” ಎಂದು ಅವರು ವಿವರಿಸಿದರು. “ಆಯುರ್ವೇದ ಕಾಲೇಜುಗಳಿಂದ ವೈದ್ಯರು ತರಬೇತಿ ಪಡೆಯುತ್ತಿದ್ದಾರೆ, ಆದರೆ ಅವರ ಚಿಕಿತ್ಸೆ, ಸಲಹೆಗಳನ್ನು ಅಲೋಪತಿ ಆರೈಕೆಗಾಗಿ ಬಳಸಲಾಗುವುದಿಲ್ಲ’ ಎಂದು ತಿಳಿಸಿದರು.
ರಾಮದೇವ್ ಅವರ ಹೇಳಿಕೆ-ಸಮರ್ಥನೆಗಳು ಸುಳ್ಳು ಸಂಗತಿ ಹೇಳುತ್ತಿವೆ. ಈ ಕೋವಿಡ್ ಕೇಂದ್ರದ ಐಸಿಯು ಹಾಸಿಗೆಗಳು ಕಾರ್ಯನಿರ್ವಹಿಸುತ್ತಿಲ್ಲ. ಮೇ 7 ರಂದು ಅಲ್ಲಿನ ವೈದ್ಯಕೀಯ ಮೇಲ್ವಿಚಾರಣಾ ಅಧಿಕಾರಿ ಡಾ. ಎ.ಕೆ. ಸೋನಿ ಆಡಳಿತಕ್ಕೆ ಬರೆದ ಪತ್ರದಲ್ಲಿ ಇದು ಸ್ಪಷ್ಟವಾಗಿದೆ. ಐಸಿಯು ವಾರ್ಡ್‌ಗೆ ನಿಯೋಜಿಸಲಾಗಿರುವ ಇಬ್ಬರು ಅರಿವಳಿಕೆ ತಜ್ಞರು ಗೈರು ಹಾಜರಾಗಿದ್ದಾರೆ ಎಂದು ಅವರು ದೂರಿದರು. “ಐಸಿಯು ತಂತ್ರಜ್ಞ ಕೂಡ ಲಭ್ಯವಿಲ್ಲ” ಎಂದು ಅವರು ನ್ಯೂಸ್ ಲಾಂಡ್ರಿಗೆ ಹೇಳಿದರು. “ಆದ್ದರಿಂದ, ಐಸಿಯು ವಾರ್ಡ್‌ನ ಕಾರ್ಯಾಚರಣೆಗೆ ಅಡಚಣೆಯಾಗಿದೆ. ಇದಕ್ಕಾಗಿಯೇ ಸೂಕ್ತ ತಜ್ಞರು ಮತ್ತು ಸಿಬ್ಬಂದಿ ಲಭ್ಯವಾಗುವವರೆಗೆ ನಾವು ಐಸಿಯುನಲ್ಲಿ ರೋಗಿಗಳನ್ನು ನೇಮಿಸಿಕೊಳ್ಳಲು ಸಾಧ್ಯವಾಗುವುದಿಲ್ಲ; ಎಂದು ಅವರು ತಿಳಿಸಿದ್ದಾರೆ.

ಸರ್ಕಾರಕ್ಕೆ ಬರೆದ ಪತ್ರದಲ್ಲಿ, ಡಾ, ಸೋನಿ ಇತರ ನಾಲ್ಕು ಸಮಸ್ಯೆಗಳನ್ನು ಎತ್ತಿ ತೋರಿಸಿದ್ದಾರೆ. ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಯಾವುದೇ ಸಿಬ್ಬಂದಿ ಇಲ್ಲ, ಹೀಗಾಗಿ ಅವು ಅನಾರೋಗ್ಯಕಾರಿಯಾಗಿವೆ. ನೀರು ಸರಬರಾಜು ಕೆಟ್ಟದಾಗಿದೆ. ಹೀಗಾಗಿ ಇಡೀ ಕೇಂದ್ರವೇ ಕೊಳಕಾಗಿದೆ. ಕೋವಿಡ್ ವಾರ್ಡ್ಗಳಿಗೆ ಛಾವಣಿಗಳಿಲ್ಲ, ಇದು ವೈರಸ್ ಹರಡುವ ಅಪಾಯವನ್ನು ಹೆಚ್ಚಿಸುತ್ತದೆ. ಎಕ್ಸರೆ ಯಂತ್ರವಿದೆ, ಅದನ್ನು ನಿರ್ವಹಿಸಲು ಯಾವುದೇ ತಂತ್ರಜ್ಞ ಮತ್ತು ರೋಗಶಾಸ್ತ್ರಜ್ಞರು ಇಲ್ಲಿಲ್ಲ’ ಎಂದು ಅವರು ಸತ್ಯ ಹೇಳಿದ್ದಾರೆ ಮತ್ತು ಅದನ್ನು ನ್ಯೂಸ್ ಲಾಂಡ್ರಿ ತಂಡ ಕೂಡ ಕಣ್ಣಾರೆ ಕಂಡಿದೆ.
‘ನನ್ನ ತಾಯಿಗೆ ಪ್ರವೇಶ ನಿರಾಕರಿಸಲಾಯಿತು’
ಹೃಷಿಕೇಶದ ನಿವಾಸಿ ನರೇಂದ್ರ ಪಾಯಲ್ ಅವರು ಮೇ 7 ರಂದು ತಮ್ಮ ತಾಯಿ ಸರಿತಾ (48) ಅವರೊಂದಿಗೆ ಈ ಕೇಂದ್ರಕ್ಕೆ ಆಗಮಿಸಿದರು. ಮೇ 4 ರಂದು ಅವರಿಗೆ ಪಾಸಿಟಿವ್ ದೃಢಪಟ್ಟಿತ್ತು. ಅವರ ಆಮ್ಲಜನಕದ ಮಟ್ಟವು ಶೇ. 35 ಕ್ಕೆ ಇಳಿದಿತ್ತು.
“ಪತಂಜಲಿ ಅವರು ಹರಿದ್ವಾರದಲ್ಲಿ ಕೋವಿಡ್ ಆಸ್ಪತ್ರೆಯನ್ನು ತೆರೆದಿದ್ದಾರೆ ಎಂದು ಸ್ನೇಹಿತರು ಮತ್ತು ಸಂಬಂಧಿಕರು ನಮಗೆ ತಿಳಿಸಿದರು” ಎಂದು ಅವರು ಹೇಳಿದರು. “ಪ್ರಚಾರವೂ ಇತ್ತು. ಆದರೆ ನಾವು ಬಂದಾಗ ನನ್ನ ತಾಯಿಗೆ ಐಸಿಯು ಹಾಸಿಗೆ ಮತ್ತು ವೆಂಟಿಲೇಟರ್ ಇಲ್ಲದ ಕಾರಣ ಪ್ರವೇಶವನ್ನು ನಿರಾಕರಿಸಲಾಯಿತು; ಎಂದು ಅವರು ದೂರಿದ್ದಾರೆ. ನಂತರ ಸರಿತಾರನ್ನು ಡೆಹ್ರಾಡೂನ್‌ನ ಡೂನ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತುರೀಗ ಅವರ ಸ್ಥಿತಿ ಗಂಭೀರವಾಗಿದೆ.
“ನಿಮ್ಮಲ್ಲಿ ಹಾಸಿಗೆಗಳು ಮತ್ತು ಆಮ್ಲಜನಕ ಇಲ್ಲದಿದ್ದರೆ, ನಮಗೆ ಹಾಗೆ ಹೇಳಿ. ಸುಳ್ಳು ಪ್ರಚಾರ ಬೇಡ. ಸತ್ಯ ನಮಗೆ ತಿಳಿದಿದ್ದರೆ ನಾವು ಇಲ್ಲಿಗೆ ಬರುತ್ತಿರಲಿಲ್ಲ” ಎಂದು ನರೇಂದ್ರ ಈ ಕೇಂದ್ರದ ಅಧಿಕಾರಿಗಳ ಎದುರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕೋವಿಡ್ ರೋಗಿಗಳು ಚಿಕಿತ್ಸೆ ಒಂದು ಅಥವಾ ಎರಡು ನಿಮಿಷಗಳ ವಿಳಂಬವಾದ ಕಾರಣಕ್ಕೇ ಸಾಯುತ್ತಿದ್ದಾರೆ. ಬಾಬಾ ಕೇಂದ್ರ ಇದನ್ನು ಅರ್ಥಮಾಡಿಕೊಳ್ಳಬೇಕು’ ಎಂದಿದ್ದಾರೆ.
ಕೊರೊನಿಲ್ ಎಂಬ ಕಂಟಕ!
ಪತಂಜಲಿ ಕೇಂದ್ರದ ರೋಗಿಗಳಿಗೆ ಅವರ ಚಿಕಿತ್ಸೆಯ ಭಾಗವಾಗಿ ಕೊರೊನಿಲ್ ನೀಡಲಾಗುತ್ತದೆ ಎಂದು ಡಾ.ಸೋನಿ ನ್ಯೂಸ್‌ಲಾಂಡ್ರಿಗೆ ತಿಳಿಸಿದರು. ಆದರೆ ವಿಶ್ವ ಆರೋಗ್ಯ ಸಂಸ್ಥೆ ಅಥವಾ ಭಾರತೀಯ ಔಷಧ ಗುಣಮಟ್ಟ ಪ್ರಾಧಿಕಾರ ಇದಕ್ಕೆ ಮನ್ನಣೆ ನೀಡಿಯೇ ಇಲ್ಲ!
ಕೋವಿಡ್‌ಗೆ ಪರಿಹಾರವಾಗಿ ಒಮ್ಮೆ ಪತಂಜಲಿ ಗಿಡಮೂಲಿಕೆ ಉತ್ಪನ್ನವಾದ ಕೊರೊನಿಲ್ ಅನ್ನು ತಪ್ಪಾಗಿ ಮಾರಾಟ ಮಾಡಲಾಗಿದೆ. ಇದು ರೋಗದ ಚಿಕಿತ್ಸೆಗಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಕ್ಲಿನಿಕಲ್ ಮಾರ್ಗಸೂಚಿಗಳ ಭಾಗವಾಗಿಯೇ ಇಲ್ಲ.
ಆಯುಷ್ ಸಚಿವಾಲಯವು ಉತ್ಪನ್ನವನ್ನು ಕೋವಿಡ್‌ಗೆ “ಬೆಂಬಲ ಚಿಕಿತ್ಸೆ” ಎಂದು ಪ್ರಮಾಣೀಕರಿಸಿದ್ದರೂ, ಮದ್ರಾಸ್ ಹೈಕೋರ್ಟ್ “ಲಾಭವನ್ನು ಬೆನ್ನಟ್ಟಿದ” ಕಾರಣಕ್ಕಾಗಿ ಪತಂಜಲಿಗೆ 10 ಲಕ್ಷ ರೂ. ದಂಡ ವಿಧಿಸಿತ್ತು.
* ಮಲ್ಲನಗೌಡರ್ ಪಿ.ಕೆ
(ತನಿಖಾ ಮಾಹಿತಿ: ನ್ಯೂಸ್ ಲಾಂಡ್ರಿ)
ಇದನ್ನೂ ಓದಿ; ಕೊರೊನಾ ಉಲ್ಬಣವಾಗದಂತೆ ತಡೆಯಲು ಸಜ್ಜುಗೊಂಡ ಕೆಸಿವಿಟಿ ಜನಸಹಾಯ – ಬಿಎಂಸಿ 92 ಡಾಕ್ಟರ್ಸ್ ತಂಡ


