Homeಮುಖಪುಟತೀವ್ರ ಬೆಲೆ ಏರಿಕೆಯಾದರೂ ಅನುದಾನ ಹೆಚ್ಚಳವಿಲ್ಲ: ಅರೆಹೊಟ್ಟೆಯಲ್ಲಿ ಶಾಲಾ ಮಕ್ಕಳು

ತೀವ್ರ ಬೆಲೆ ಏರಿಕೆಯಾದರೂ ಅನುದಾನ ಹೆಚ್ಚಳವಿಲ್ಲ: ಅರೆಹೊಟ್ಟೆಯಲ್ಲಿ ಶಾಲಾ ಮಕ್ಕಳು

ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ 2020ರ ಜೂನ್‌ನಲ್ಲಿ ನಿಗಧಿಪಡಿಸಿದ ಅನುದಾನವನ್ನೇ ಈಗಲೂ ನೀಡಲಾಗುತ್ತಿದೆ.

- Advertisement -
- Advertisement -

ಪ್ರಾಥಮಿಕ ಶಾಲೆ, ಪ್ರೌಢ ಶಾಲೆಗಳಲ್ಲಿ ಮಕ್ಕಳಿಗೆ ಕೊಡುತ್ತಿರುವ ಮಧ್ಯಾಹ್ನದ ಬಿಸಿಯೂಟ ಹೊಟ್ಟೆ ತುಂಬ ಸಿಗದಂತಾಗಿದೆ. ಒಂದೇ ಸಮನೆ ಗ್ಯಾಸ್ ಸಿಲೆಂಡರ್, ದವಸ ಧಾನ್ಯ ಮತ್ತು ತರಕಾರಿ ಬೆಲೆ ಏರಿಕೆಯಾಗುತ್ತಿದ್ದರೂ ಹಿಂದಿನ ಅನುದಾನ ಪರಿಷ್ಕರಿಸದೆ ಸರಕಾರ ಉದಾಸೀನ ತೋರಿರುವುದರಿಂದ ಬಿಸಿಯೂಟ ಯೋಜನೆಯ್ನು ಶಾಲೆಗಳಲ್ಲಿ ನಿಭಾಯಿಸಲಾಗುತ್ತಿಲ್ಲವೆಂದು ಶಿಕ್ಷಕರು ಅಲವತ್ತುಕೊಳ್ಳುತ್ತಿದ್ದಾರೆ. ಶಿಕ್ಷಣ ಮಂತ್ರಿಯಾದಿಯಾಗಿ ಜನಪ್ರತಿನಿಧಿಗಳೆಲ್ಲ ಇದು ತಮಗೆ ಸಂಬಂಧಿಸಿದ ಸಂಗತಿ ಅಲ್ಲವೆಂಬಂತೆ ಇರುವುದರಿಂದ ವಿಧ್ಯಾರ್ಥಿಗಳು ಅರೆ-ಬರೆ ಉಂಡೇಳುವಂತಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಪ್ರತಿ ಮಗುವಿನ ಲೆಕ್ಕಾಚಾರದಲ್ಲಿ ಪ್ರತಿ ವರ್ಷ ಬಿಸಿಊಟದ ದರ ಸರ್ಕಾರ ಪರಿಷ್ಕರಿಸುವುದು ಪದ್ದತಿ. ಜೂನ್ 2020ರಲ್ಲಿ ಶೇ.10.99ರಷ್ಟು ಅನುದಾನ ಜಾಸ್ತಿ ಮಾಡಲಾಗಿತ್ತು. ಈ ದರದಂತೆ 1ರಿಂದ 5ನೇ ತರಗತಿ ವರೆಗಿನ ಒಂದು ಮಗುವಿಗೆ 4.97ರೂ. ಖರ್ಚು ಮಾಡಬಹುದು. 6ರಿಂದ 10ನೇ ತರಗತಿ ಮಕ್ಕಳಿಗೆ ತಲಾ 7.45ರೂ ವ್ಯಯಿಸಬೇಕು. ಅಡುಗೆ ಅನಿಲದಿಂದ, ಎಣ್ಣೆ ಬೇಳೆಕಾಳಿನ ತನಕದ ಎಲ್ಲ ಖರ್ಚು-ವೆಚ್ಚ ಹೆಚ್ಚಾಗಿದ್ದರೂ ಈ ವರ್ಷ ಅನುದಾನ ಮಾತ್ರ ಸರ್ಕಾರ ಹೆಚ್ಚಿಸಿಲ್ಲ. ಒಂದರಿಂದ ಐದನೇ ತರಗತಿ ವರೆಗಿನ ಒಂದು ಮಗುವಿಗೆ 2 ರೂಗೆ ತೊಗರಿ ಬೇಳೆ (20 ಗ್ರಾಂ), 1.36ರೂಗೆ ತರಕಾರಿ (50 ಗ್ರಾಂ), 1.73ರೂಗೆ ಎಣ್ಣೆ (5 ಗ್ರಾಂ), 37 ಪೈಸೆಗೆ ಸಾಂಬಾರ್ ಪುಡಿ, 3 ಪೈಸೆಗೆ ಉಪ್ಪು (2ಗ್ರಾಂ), ಇಂಧನಕ್ಕೆ 79 ಪೈಸೆ ಖರ್ಚು ಮಾಡಲಾಗುತ್ತಿದೆ.

ಅದೇ ರೀತಿಯಾಗಿ 6ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ 2.95ರೂಗೆ ತೊಗರಿಬೇಳೆ (30 ಗ್ರಾಂ), 2.04ರೂಗೆ ತರಕಾರಿ (75 ಗ್ರಾಂ), 54ಪೈಸೆಗೆ ಸಾಂಬಾರ್ ಪುಡಿ, 67 ಪೈಸೆಗೆ ಎಣ್ಣೆ (7.5 ಗ್ರಾಂ), 6 ಪೈಸೆಗೆ ಉಪ್ಪು(4ಗ್ರಾಂ), 1.19ರೂಗೆ ಇಂಧನದ ಲೆಕ್ಕದಲ್ಲಿ ಖರ್ಚು ಮಾಡಬೇಕೆಂದು ಸರ್ಕಾರಿ ಸುತ್ತೋಲೆ ಹೆಳುತ್ತದೆ. ವಾರಕ್ಕೊಮ್ಮೆ ಪಾಯಸ-ಹುಗ್ಗಿ ಮಕ್ಕಳಿಗೆ ಹಂಚಬೇಕು. ಇದಕ್ಕೆ ಪ್ರತ್ಯೇಕ ಅನುದಾನವಿಲ್ಲ. ಬಿಸಿಯೂಟ ಖಾತೆಯಿಂದ ನಿಗದಿತ ಪ್ರಮಾಣಕ್ಕಿಂತ ಒಂದು ಪೈಸೆ ಹೆಚ್ಚು ತೆಗೆಯುವಂತಿಲ್ಲ. ಆದರೆ ಈ ದರದಲ್ಲಿ ಬಿಸಿಯೂಟ ತಯಾರಿಸುವುದು ಹಾಲಿ ದುಬಾರಿ ದಿನ ಮಾನದಲ್ಲಿ ಅಸಾಧ್ಯದ ಮಾತೆಂಬ ಸಾಮಾನ್ಯ ಜ್ಞಾನ ಸರಕಾರ ನಡೆಸುವವರಿಗೆ ಇರಬೇಡವೆ ಎಂದು ಪಾಲಕರು ಪ್ರಶ್ನಿಸುತ್ತಾರೆ.

ಸರಕಾರ ನಿಗದಿಸಿರುವ ಈ ತಲಾ ಖರ್ಚಿನಲ್ಲಿ ಮಕ್ಕಳು ಕಡಿಮೆ ಸಂಖ್ಯೆಯಲ್ಲಿರುವ ಸರಕಾರಿ ಮತ್ತು ಅನುದಾನಿತ ಶಾಲೆಗಳಲಿ ಬಿಸಿಯೂಟ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಮೊದಲು ಶಾಲೆಗಳಿಗೆ ತಿಂಗಳಿಗೆ ಎರಡು ಅನಿಲ ಸಿಲೆಂಡರ್ ಕೊಡಲಾಗುತ್ತಿತ್ತು. ಈಗ ಅದರ ವೆಚ್ಚ ನೀಡಲಾಗುತ್ತಿದ್ದು ಶಿಕ್ಷಕರೆ ಗ್ಯಾಸ್‌ ತಂದುಕೊಳ್ಳಬೇಕಿದೆ. ಸರಕಾರ ಕೊಡುವ ಅನುದಾನದಲ್ಲಿ 910ರೂಗೆ ಗ್ಯಾಸ್ ಸಿಲೆಂಡರ್, ಕೆ.ಜಿ.ಗೆ 105 ರೂ.ಗಳ ತೊಗರಿ ಬೇಳೆ, ಕನಿಷ್ಟವೆಂದರೂ 40 ರಿಂದ 50 ರೂ.ಗಳಿರುವ ಕೆಜಿ ಈರುಳ್ಳಿ, ಟೊಮೆಟೊ, ಇನ್ನಿತರ ತರಕಾರಿ ಮತ್ತು ಲೀಟರಿಗೆ 160 ರೂ.ಗಳ ಖಾದ್ಯ ತೈಲಕ್ಕೆ ವಿಂಗಡಿಸಿ ಈ ಬೆಲೆ ಏರಿಕೆಯ ದಿನಗಳಲ್ಲಿ ಬಿಸಿಯೂಟ ತಯಾರಿಕೆ ಸಾಧ್ಯವಿಲ್ಲವೆಂದು ನಿರ್ವಾಹಕರು ಹೇಳುತ್ತಾರೆ.

“ಅಡುಗೆ ಅನಿಲ ಸಮಸ್ಯೆಯಿಂದ ಬಿಸಿಯೂಟ ತಯಾರಿಸುವುದು ದೊಡ್ಡ ಸವಾಲಿನ ಸಂಗತಿಯೆಂಬಂತಾಗಿದೆ. 50 ಮಕ್ಕಳಿರುವ ಶಾಲೆಗೆ ತಿಂಗಳಿಗೆ ಒಂದು ಸಿಲೆಂಡರ್ ಮತ್ತು 100 ಮಕ್ಕಳಿರುವ ಶಾಲೆಗಳಿಗೆ ತಿಂಗಳಿಗೆ ಎರಡು ಸಿಲಿಂಡರ್ ನಿಗದಿಪಡಿಸಲಾಗಿದೆ. 20ರಿಂದ 30 ಮಕ್ಕಳಿರುವ ಶಾಲೆಗಳೆ ಹೆಚ್ಚಿವೆ. ನಮ್ಮದು ಸಹ ಅಂತಹ ಶಾಲೆಯಾಗಿದ್ದು ಇಲ್ಲಿ 16-17 ದಿನಕ್ಕೆ ಸಿಲಿಂಡರ್ ಖಾಲಿಯಾಗುತ್ತಿದೆ. ಉಳಿದ ದಿನಗಳ ಸಮಸ್ಯೆಗೆ ನಾವೆ ತಲೆಕೊಡಬೇಕಾಗಿದೆ” ಎಂದು ಹೆಸರು ಹೇಳಲು ಇಚ್ಛಿಸಿದ ಶಾಲಾ ಮುಖ್ಯೋಪಾಧ್ಯಾಯರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇನ್ನು ಬಿಸಿ ಊಟ ತಯಾರಿಸುವ ಮಹಿಳಾ ನೌಕರರಿಗೆ 2021ರ ಜೂನ್ ತಿಂಗಳಿನಿಂದಲೂ ಸಂಬಳ ನೀಡಿಲ್ಲ. ಈ ಬಗ್ಗೆ ಹಲವು ಹೋರಾಟಗಳು ನಡೆದರೂ ಸರ್ಕಾರ ಮಾತ್ರ ಕಡೆಗಣಿಸುತ್ತಲೇ ಇದೆ.

ಬಿಸಿಯೂಟ ತಯಾರಿಕೆಯಲ್ಲಾಗುತ್ತಿರುವ ತೊಂದರೆ-ತೊಡಕು ನಿವಾರಣೆಗೆ ಜನ ಪ್ರತಿನಿಧಿಗಳು ಅದರಲ್ಲೂ ಶಾಸಕರು ಇಚ್ಚಾ ಶಕ್ತಿ ತೋರಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ.


ಇದನ್ನೂ ಓದಿ: ಮೋದಿ ಅಭಿವೃದ್ಧಿ ವಾಹನವು ರಿವರ್ಸ್ ಗೇರ್‌ನಲ್ಲಿದೆ ಹಾಗೂ ಅದರ ಬ್ರೇಕ್‌ ವಿಫಲವಾಗಿದೆ: ರಾಹುಲ್‌ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : 2014ಕ್ಕಿಂತ ಮೊದಲು ಭಾರತದಲ್ಲಿ ಕೇವಲ 300 ಸ್ಟಾರ್ಟ್ ಅಪ್‌ಗಳಿದ್ದವು ಎಂಬುವುದು...

0
"ನವ ಭಾರತ ವೇಗವಾಗಿ ಮುನ್ನೆಡೆಯುತ್ತಿದೆ. 2014ರಲ್ಲಿ ಭಾರತದಲ್ಲಿ ಇದ್ದದ್ದು ಕೇವಲ 300 ಸ್ಟಾರ್ಟ್‌ ಅಪ್‌ಗಳು, ಈಗ 1 ಲಕ್ಷಕ್ಕೂ ಅಧಿಕ ಸ್ಟಾರ್ಟ್‌ ಅಪ್‌ಗಳು ಭಾರತದಲ್ಲಿವೆ. ಅದಕ್ಕೆ ದೇಶದಲ್ಲಿ ಮೋದಿಜಿ ಇದ್ದರೆ ಎಲ್ಲವೂ ಸಾಧ್ಯ"...