ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿಯು ದೇಶದ ಗೌಪ್ಯ ಮತ್ತು ಸೂಕ್ಷ್ಮ ಮಾಹಿತಿ ಸೋರಿಕೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ವಾಟ್ಸಾಪ್ ಚಾಟ್‌ಗಳ ಬಗ್ಗೆ ಕೇಂದ್ರಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಮಂಗಳವಾರ ಲೋಕಸಭೆಯಲ್ಲಿ ಮಾಹಿತಿ ನೀಡಿದರು.
ಫೆಬ್ರವರಿ 2019 ರ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ, ಫೆಬ್ರವರಿ 26, 2019 ರಂದು ಬಾಲಕೋಟ್‌ನ ಭಯೋತ್ಪಾದಕ ಶಿಬಿರದ ಮೇಲೆ ಭಾರತೀಯ ಏರ್ ಫೋರ್ಸ್ ಬಾಂಬ್ ಸ್ಫೋಟಿಸಿದೆ ಎನ್ನಲಾದ ಈ ಯೋಜನೆಯು ಗೌಪ್ಯವಾಗಿತ್ತು ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಅರ್ನಾಬ್ ಮತ್ತು ಆಗಿನ ಬಾರ್ಕ್‌ನ ಮುಖ್ಯ ಕಾರ್ಯನಿರ್ವಾಹಕ ಪಾರ್ಥೋ ದಾಸ್‌ಗುಪ್ತಾ ನಡುವೆ ನಡೆದಿರುವ ವಾಟ್ಸಾಪ್ ಸಂಭಾಷಣೆಯಲ್ಲಿ, ಭಾರತೀಯ ವಾಯುಸೇನೆ ನಡೆಸಲಿರುವ ಬಾಲಕೋಟ್ ವಾಯುದಾಳಿಯ ಬಗ್ಗೆ ದಾಳಿಗಿಂತಲೂ ಮೂರು ದಿನ ಮೊದಲೇ ಚರ್ಚಿಸಿದ್ದರು. ಅಲ್ಲದೇ ಪುಲ್ವಾಮ ದಾಳಿ ನಡೆದಾಗ ಅರ್ನಾಬ್ ಸಂಭ್ರಮಿಸಿದ್ದರು ಎಂದು ಹೇಳಲಾಗಿದೆ. ಇದು ದೇಶಾದ್ಯಂತ ಕೋಲಾಹಲ ಸೃಷ್ಟಿಸಿತ್ತು.
ಈ ವಾಟ್ಸಾಪ್ ಚಾಟ್‌ಗಳನ್ನು ಮುಂಬೈ ಪೊಲೀಸರು ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿಆರ್‌ಪಿ) ಹಗರಣದ ತನಿಖೆಯ ವೇಳೆ ಹೊರಗೆಳೆದಿದ್ದರು.
ಇದನ್ನೂ ಓದಿ: ಅರ್ನಾಬ್ ವಾಟ್ಸಪ್ ಚಾಟ್: ಬಿಜೆಪಿಯ ರಾಷ್ಟ್ರೀಯತೆ ಪರೀಕ್ಷಿಸಬೇಕೆಂದ ಶಿವಸೇನೆ
ವಾಟ್ಸಾಪ್ ಚಾಟ್ ಪ್ರಕರಣದ ಬಗ್ಗೆ ವಿವರಗಳನ್ನು ಕೋರಿದ್ದ ಸಂಸತ್ತಿನ ಕನಿಷ್ಠ ಆರು ಸದಸ್ಯರಿಗೆ ಸಚಿವ ಜಿ.ಕಿಶನ್ ರೆಡ್ಡಿ ಲಿಖಿತ ಪ್ರತಿಕ್ರಿಯೆ ನೀಡಿದ್ದು, “ಅಂತಹ ಯಾವುದೇ ಮಾಹಿತಿಯು ಸರ್ಕಾರದ ಗಮನಕ್ಕೆ ಬಂದಿಲ್ಲ” ಎಂದಿದ್ದಾರೆ.
ದೇಶದ ಹಿತಾಸಕ್ತಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯ ಸೋರಿಕೆ ದೇಶದ ಭದ್ರತೆಯ ಉಲ್ಲಂಘನೆಯಾಗಿದೆ ಎಂದು ಅರ್ನಾಬ್ ಮತ್ತು ಬಾರ್ಕ್‌ನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಪಾರ್ಥೋ ದಾಸ್‌ಗುಪ್ತಾ ಅವರ ನಡುವಿನ ಉದ್ದೇಶಿತ ಚಾಟ್‌ಗಳ ಕುರಿತು ತನಿಖೆ ನಡೆಸಬೇಕೆಂದು ಆಡಳಿತಾರೂಢ ಮಹಾರಾಷ್ಟ್ರ ವಿಕಾಸ್ ಅಘಾಡಿ ಮತ್ತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
ಫೆಬ್ರವರಿ 2019 ರ ಬಾಲಕೋಟ್ ವೈಮಾನಿಕ ದಾಳಿಯ ವಿವರಗಳ ಜೊತೆಗೆ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನಗಳನ್ನು ತೆಗೆದುಹಾಕುವ ಕೇಂದ್ರದ ಕ್ರಮಗಳನ್ನು ಒಳಗೊಂಡಿದ್ದ ವಾಟ್ಸಾಪ್ ಸಂಭಾಷಣೆಯ ಪ್ರತಿ ಕೂಡ ಟಿಆರ್‌ಪಿ ಹಗರಣದಲ್ಲಿ ಮುಂಬೈ ಪೊಲೀಸರು ಸಲ್ಲಿಸಿದ್ದ 500 ಪುಟಗಳ ಚಾರ್ಜ್‌ಶೀಟ್‌ನ ಒಂದು ಭಾಗವಾಗಿತ್ತು.
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ರಾಷ್ಟ್ರೀಯ ಭದ್ರತೆಯ ಉಲ್ಲಂಘನೆ ಎಂದು ಕರೆದು ಜಂಟಿ ಸಂಸದೀಯ ಸಮಿತಿ ಪ್ರಕರಣದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿತು. ದೇಶದ ಬಗೆಗಿನ ಉನ್ನತ ರಹಸ್ಯ ಮಾಹಿತಿಯನ್ನು ಸೋರಿಕೆ ಮಾಡುವುದು ಅಪರಾಧ. ಅಂತಹ ಕೃತ್ಯಕ್ಕೆ ಕಾರಣರಾದವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ರಾಹುಲ್ ಗಾಂಧಿ ಕೇಂದ್ರಕ್ಕೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ‘ಪಿಎಂಒ ಮಾತ್ರವಲ್ಲ ಎನ್‌ಎಸ್‌ಎ ಕೂಡ ಅರ್ನಾಬ್ ಜೊತೆಯಿತ್ತು’: ಅರ್ನಾಬ್ ವಾಟ್ಸಾಪ್ ಲೀಕ್ ಸಂಪೂರ್ಣ ವಿವರ ಇಲ್ಲಿದೆ


