ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ವಿಫಲವಾದರೆ ರಾಜಕೀಯ ಪಕ್ಷಗಳಿಗೆ ದಂಡ ವಿಧಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. 2014ರ ಲೋಕಸಭೆ ಚುನಾವಣೆಯ ಸಮಯ ಬಿಜೆಪಿಯ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರು ನೀಡಿದ್ದ ಭರವಸೆಗಳನ್ನು ಈಡೇರಿಸಲು ವಿಫಲವಾದ ಆರೋಪದ ಮೇಲೆ ಬಿಜೆಪಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಅರ್ಜಿ ಸಲ್ಲಿಕೆಯಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಕೆಳ ನ್ಯಾಯಾಲಯಗಳು ನೀಡಿದ ಆದೇಶವನ್ನು ಪ್ರಶ್ನಿಸಿ ಮಾರ್ಚ್ 2 ರಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ. ಪ್ರಕರಣದ ತೀರ್ಪು ಗುರುವಾರ ಹೊರಬಿದ್ದಿದೆ.
ಇದನ್ನೂ ಓದಿ: ಹಿಜಾಬ್ ತೀರ್ಪಿನಲ್ಲಿ ಅಗತ್ಯ ಸಂಗತಿಗಳನ್ನು ಬದಿಗಿಟ್ಟ ಹೈಕೋರ್ಟ್: ವಿದ್ಯಾರ್ಥಿ ಸಂಘಟನೆಗಳ ಆಕ್ಷೇಪ
ನ್ಯಾಯಮೂರ್ತಿ ದಿನೇಶ್ ಪಾಠಕ್ ಅವರ ಏಕಸದಸ್ಯ ಪೀಠವು ಹೀಗೆ ಹೇಳಿದೆ: “ಯಾವುದೇ ರಾಜಕೀಯ ಪಕ್ಷವು ಪ್ರಕಟಿಸುವ ಚುನಾವಣಾ ಪ್ರಣಾಳಿಕೆಯು ಅವರ ನೀತಿ, ದೃಷ್ಟಿಕೋನ, ಭರವಸೆ ಮತ್ತು ಪ್ರತಿಜ್ಞೆಯ ಹೇಳಿಕೆಯಾಗಿದೆ. ಚುನಾವಣೆಯ ಸಮಯದಲ್ಲಿ, ಇದು ಬಂಧಿಸುವ ಶಕ್ತಿಯಲ್ಲ ಮತ್ತು ನ್ಯಾಯಾಲಯದ ಮೂಲಕ ಅದನ್ನು ಕಾರ್ಯಗತಗೊಳಿಸಲಾಗುವುದಿಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ವಿಫಲವಾದಲ್ಲಿ ರಾಜಕೀಯ ಪಕ್ಷಗಳನ್ನು ಜಾರಿ ಅಧಿಕಾರಿಗಳ ಕಪಿಮುಷ್ಠಿಯಲ್ಲಿ ತರಲು ಯಾವುದೇ ಕಾನೂನಿನಡಿಯಲ್ಲಿ ಯಾವುದೇ ದಂಡದ ಅವಕಾಶವಿಲ್ಲ”
2014ರ ಲೋಕಸಭೆ ಚುನಾವಣೆಯಲ್ಲಿ ಆಗಿನ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ನೀಡಿದ್ದ ಭರವಸೆಗಳನ್ನು ಈಡೇರಿಸಲು ವಿಫಲವಾದ ಆರೋಪದ ಮೇಲೆ ಬಿಜೆಪಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಖುರ್ಷಿದುರೆಹಮಾನ್ ಎಸ್. ರೆಹಮಾನ್ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಕೋರಲಾಗಿತ್ತು.
ಇದನ್ನೂ ಓದಿ: ಅಪ್ಪು ಹೆಸರಲ್ಲಿ ಮುಸ್ಲಿಮರ ವಿರುದ್ಧ ದ್ವೇಶ ಬಿತ್ತಲು ಯತ್ನಿಸಿದ ಪೋಸ್ಟ್‌ಕಾರ್ಡ್; ಜನರಿಂದ ತರಾಟೆ
“ಆದ್ದರಿಂದ, ಅಮಿತ್ ಶಾ ಅವರು ಮೋಸ, ವಂಚನೆ, ನಂಬಿಕೆಯ ಕ್ರಿಮಿನಲ್ ಉಲ್ಲಂಘನೆ, ಅಪ್ರಾಮಾಣಿಕತೆ, ಮಾನನಷ್ಟ, ಆಮಿಷ ಒಡ್ಡಿ ಮೋಸ ಮಾಡುವ ಅಪರಾಧವನ್ನು ಮಾಡಿದ್ದಾರೆ” ಎಂದು ಅರ್ಜಿದಾರರು ತನ್ನ ಅರ್ಜಿಯಲ್ಲಿ ಆರೋಪಿಸಿದ್ದರು.
ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 156 (3) ಅಡಿಯಲ್ಲಿ 2020ರ ಅಕ್ಟೋಬರ್‌ನಲ್ಲಿ ಸಲ್ಲಿಸಿದ ಅರ್ಜಿಯನ್ನು ಅಲಿಗಢ ನ್ಯಾಯಾಲಯವು ತಿರಸ್ಕರಿಸಿದೆ. ಅರ್ಜಿದಾರರ ಪರ ವಕೀಲರು ತನ್ನ ವಾದದಲ್ಲಿ ಎರಡೂ ಕೆಳ ನ್ಯಾಯಾಲಯಗಳು ಅಕ್ರಮವಾಗಿ ಅರ್ಜಿಯನ್ನು ತಿರಸ್ಕರಿಸಿದವು ಎಂದು ಹೇಳಿದ್ದರು.
ಆದಾಗ್ಯೂ, ಚುನಾವಣೆಯ ಭ್ರಷ್ಟ ಅಭ್ಯಾಸಗಳನ್ನು ಅಳವಡಿಸಿಕೊಂಡಿದ್ದಕ್ಕಾಗಿ ಒಟ್ಟಾರೆಯಾಗಿ ರಾಜಕೀಯ ಪಕ್ಷವನ್ನು ಜನಪ್ರತಿನಿಧಿ ಕಾಯ್ದೆ-1951 ರ ಅಡಿಯಲ್ಲಿ ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪ್ರಕರಣ: ಶಂಕಿತ ಭಯೋತ್ಪಾದಕ ಆದಿತ್ಯ ರಾವ್ ಅಪರಾಧ ಸಾಬೀತು


