ದಕ್ಷಿಣ ರಾಜ್ಯಗಳ ವಿರುದ್ಧ ಬಿಜೆಪಿ ನಡೆಸುತ್ತಿರುವ ತಾರತಮ್ಯ ಮತ್ತು ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ತಡೆಯುವಲ್ಲಿ ಗುಪ್ತಚರ ವೈಫಲ್ಯವನ್ನು ಉಲ್ಲೇಖಿಸಿ ಎನ್‌ಡಿಎ ಸರ್ಕಾರದ ವಿರುದ್ಧ ತೆಲಂಗಾಣದ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ವಾಗ್ದಾಳಿಯನ್ನು ನಡೆಸಿದ್ದು, ಸರ್ಜಿಕಲ್ ಸ್ಟ್ರೈಕ್ ನಿಜವಾಗಿ ನಡೆದಿದೆಯೋ ಇಲ್ಲವೋ ಎಂದು ಯಾರಿಗೂ ತಿಳಿದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಎಲ್ಲದರಲ್ಲೂ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ಆರೋಪಿಸಿರುವ ಎ ರೇವಂತ್ ರೆಡ್ಡಿ, ಗುಜರಾತ್ ರಾಜ್ಯ ಉತ್ತಮವಾಗಿ ಅಭಿವೃದ್ಧಿ ಹೊಂದಿದ್ದರೂ ಬುಲೆಟ್ ರೈಲು, ಸಾಬರಮತಿ ನದಿ ತೀರ ಮತ್ತು ಗಿಫ್ಟ್ ಸಿಟಿಯಂತಹ ಯೋಜನೆಗಳನ್ನು ಗುಜರಾತ್‌ಗೆ ಏಕೆ ನೀಡಲಾಗಿದೆ ಎಂದು ಕಿಡಿಕಾರಿದ್ದಾರೆ.
ಬಿಹಾರ ಮತ್ತು ಉತ್ತರ ಪ್ರದೇಶದಂತಹ ಹಿಂದುಳಿದ ರಾಜ್ಯಗಳಿಗೆ ಹಣ ನೀಡಿದರೆ ಅದನ್ನು ಅರ್ಥಮಾಡಿಕೊಳ್ಳಬಹುದು ಆದರೆ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಅಭಿವೃದ್ಧಿ ಯೋಜನೆಗಳಿಗೆ ಮಂಜೂರಾತಿ ನೀಡುವಲ್ಲಿಯೂ ತಾರತಮ್ಯವನ್ನು ತೋರಿಸಿದೆ. ಜನಸಂಖ್ಯೆಯ ಆಧಾರದ ಮೇಲೆ ಹಣಕಾಸು ನಿಧಿ ನೀಡಿದರೆ ನಾನು ಸ್ವೀಕರಿಸುತ್ತೇನೆ, ಆದರೆ ರಾಜಕೀಯ ಪ್ರಾತಿನಿಧ್ಯದಲ್ಲಿ, ನೀವು ದಕ್ಷಿಣ ರಾಜ್ಯಕ್ಕೆ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಸ್ಥಾನವನ್ನು ಯಾಕೆ ನೀಡಿಲ್ಲ? ನಾವು ಈ ಬಗ್ಗೆ ಅವರಲ್ಲಿ ಪ್ರಶ್ನೆಗಳನ್ನು ಕೇಳಿದಾಗ, ಅವರು ‘ಜೈ ಶ್ರೀ ರಾಮ್’ ಎಂದು ಹೇಳುತ್ತಾರೆ, ಎಲ್ಲದಕ್ಕೂ, ಅವರ ಬಳಿ ‘ಜೈ ಶ್ರೀ ರಾಮ್’ ಎಂಬ ಒಂದು ಉತ್ತರ ಮಾತ್ರ ಇದೆ ಎಂದು ಹೇಳಿದ್ದಾರೆ.
ಮೋದಿಗೆ ಎಲ್ಲವೂ ರಾಜಕೀಯ, ಎಲ್ಲವೂ ಚುನಾವಣೆ ಗೆಲ್ಲುವುದೇ ಆಗಿದೆ. ಹಾಗಾಗಿ ಮೋದಿಯವರ ಚಿಂತನೆ ದೇಶಕ್ಕೆ ಸರಿಯಿಲ್ಲ. ಹಾಗಾಗಿ ದೇಶ ಈಗ ಬಿಜೆಪಿಯಿಲ್ಲದೆ, ಮೋದಿ ಇಲ್ಲದೆ ಇರಬೇಕಾಗಿದೆ. ಪುಲ್ವಾಮಾ ದಾಳಿಯನ್ನು ತಡೆಯುವಲ್ಲಿ ಎನ್‌ಡಿಎ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ರೇವಂತ್ ರೆಡ್ಡಿ, ಐಬಿ ಮತ್ತು ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು? ಪುಲ್ವಾಮಾ ದಾಳಿಯ ನಂತರ ಸರ್ಜಿಕಲ್ ಸ್ಟ್ರೈಕ್‌ನಿಂದ ರಾಜಕೀಯ ಲಾಭ ಪಡೆಯಲು ಮೋದಿ ಪ್ರಯತ್ನಿಸಿದ್ದಾರೆ, ಮೋದಿಜಿಗೆ ನನ್ನ ಪ್ರಶ್ನೆ ಏನೆಂದರೆ, ನೀವು ಏನು ಮಾಡುತ್ತಿದ್ದೀರಿ? ಪುಲ್ವಾಮಾ ಘಟನೆ ಏಕೆ ಸಂಭವಿಸಿತು? ಏಕೆ ಅದು ಸಂಭವಿಸಲು ಅವಕಾಶ ನೀಡಿದ್ದೀರಿ? ಆಂತರಿಕ ಭದ್ರತೆಯ ಬಗ್ಗೆ ನೀವು ಏನು ಮಾಡುತ್ತಿದ್ದೀರಿ? ನೀವು IB, RAW ನಂತಹ ಏಜೆನ್ಸಿಗಳನ್ನು ಯಾಕೆ ಬಳಸಲಿಲ್ಲ? ನಿಮ್ಮ ಸಮಸ್ಯೆ, ಸರ್ಜಿಕಲ್ ಸ್ಟ್ರೈಕ್ ನಿಜವಾಗಿ ನಡೆದಿದೆಯೋ ಇಲ್ಲವೋ ಯಾರಿಗೂ ತಿಳಿದಿಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ: ಜನರನ್ನು ತಪ್ಪುದಾರಿಗೆಳೆಯಲು ಮೋದಿ ಸುಳ್ಳುಗಳನ್ನು ಹರಡುತ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ


