| ಪಿ.ಕೆ ಮಲ್ಲನಗೌಡರ್ |
ಮೈಸೂರು ಭಾಗದ ಎರಡನೇ ಹಂತದ ಒಕ್ಕಲಿಗರ ನಾಯಕ ಡಿ.ಕೆ ಶಿವಕುಮಾರ್ ಉತ್ತರದ ಭಾಗದಲ್ಲಿ ಸಪೋರ್ಟ್ ಬೇಸ್ ರೆಡಿ ಮಾಡಿಕೊಳ್ಳುತ್ತಿದ್ದಾರಾ? ಕುಂದಗೋಳ ಉಪ ಚುನಾವಣೆ ಗೆಲ್ಲಿಸುವ ಜವಾಬ್ದಾರಿಯನ್ನು ಹೊತ್ತಿರುವ ಅವರು, ಇದು ತಮ್ಮದೇ ಚುನಾವಣೆ ಎಂಬಂತೆ ಸಕ್ರಿಯರಾಗಿದ್ದಾರೆ. ಈ ನಡುವೆ ನಿನ್ನೆ (ಬುಧವಾರ) ಅವರು, ಲಕ್ಷ್ನೇಶ್ವರ ಹತ್ತಿರದ ಮುಕ್ತಿಮಂದಿರಕ್ಕೆ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ. ಇದರ ಹಿಂದೆ ಪಂಚಾಚಾರ್ಯರ ಆಶಿರ್ವಾದವೂ ಇದೆಯಾ? ಯಡಿಯೂರಪ್ಪರಿಗೆ ಇದು ಆತಂಕದ ವಿಷಯವಾ? ತನ್ನ ಸ್ಪರ್ಧಿ ಎಂ.ಬಿ. ಪಾಟೀಲರಿಗೂ ಡಿಕೆಶಿ ಚಾಲೆಂಜ್ ಮಾಡ್ತಿದ್ದೀರಾ? ಧರ್ಮ, ಜಾತಿಗಳ ಹೆಸರಲ್ಲಿ ನಡೆಯುವ ಕ್ಷುಲ್ಲಕ ರಾಜಕೀಯದ ಒಂದು ಅಸಹ್ಯ ಝಲಕ್ ಇದು
ನೇರ ವಿಷಯಕ್ಕೆ ಬಂದರೆ, ಉತ್ರರ ಕರ್ನಾಟಕದಲ್ಲಿ ಒಂದು ಸಣ್ಣ ಸಪೋರ್ಟ್ ಬೇಸ್ ಸೃಷ್ಟಿಸಿಕೊಳ್ಳಲು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಯತ್ನಿಸುತ್ತಿರುವ ಎಲ್ಲ ಲಕ್ಷಣಗಳೂ ಅವರ ಇತ್ತೀಚಿನ ನಡೆಯಲ್ಲಿ ಕಂಡು ಬರುತ್ತಿವೆ.
ಕುಂದಗೋಳ ಕ್ಷೇತ್ರದ ಜವಾಬ್ದಾರಿ ಅವರ ಮೇಲಿದೆ. ಅದಕ್ಕೆ ಬೇಕಾದುದೆಲ್ಲವನ್ನೂ ಮಾಡುತ್ತಲೇ, ಇಲ್ಲಿ ಅವರು ಒಂದಿಷ್ಟು ‘ಭವಿಷ್ಯ ನಿರ್ಮಾಣ’ದ ಕೆಲಸದಲ್ಲೂ ನಿರತರಾಗಿದ್ದಾರೆ. ಇಲ್ಲಿನ ಹಲವಾರು ಲೋಕಲ್ ನಾಯಕರ ಜೊತೆ ಸೌಹಾರ್ದ ಸಂಬಂಧವನ್ನು ಕಟ್ಟಿಕೊಳ್ಳುತ್ತಲೇ, ಒಟ್ಟೂ ಈ ಭಾಗದಲ್ಲಿ ತಮ್ಮನ್ನು ಸಪೋರ್ಟ್ ಮಾಡುವ ಒಂದು ರಾಜಕೀಯ ಗುಂಪು ಮತ್ತು ಧಾರ್ಮಿಕ ನಾಯಕರ ಗುಂಪು ಇರಲೆಂದು ಅವರು ಕಾರ್ಯಾಚರಣೆ ನಡೆಸಿದ್ದು ಎದ್ದು ಕಾಣುತ್ತಿದೆ.
ಇದ್ಹೇಗೆ ಯಡಿಯೂರಪ್ಪ ಆತಂಕಕ್ಕೆ ಕಾರಣವಾಗುತ್ತದೆ? ಏಕೆಂದರೆ, ಯಡಿಯೂರಪ್ಪ ಲಿಂಗಾಯತರ ಯಾವ ಪಂಗಡಗಳನ್ನು ನೆಚ್ಚಿದ್ದರೋ ಅದೇ ಪಂಗಡಗಳ ಹಿಂದೆ ಡಿ.ಕೆ ಶಿವಕುಮಾರ್ ಬಿದ್ದಂತಿದೆ. ಈಗ ಮುಕ್ತಿಮಂದಿರಕ್ಕೆ ಭೇಟಿ ಕೊಟ್ಟಾಗ ಅವರು ಹೇಳಿದ್ದು: ‘ನನಗೆ ಈ ದೇವರ ಮೇಲೆ, ದೇವಸ್ಥಾನದ ಮೇಲೆ ನಂಬಿಕೆಯಿದೆ’ ಎಂದು. ಯಾವ ದೇವರು? ಅವರಿಗೇ ಗೊತ್ತಿಲ್ಲ. ಭಕ್ತರಿಗೆ ಯಾವ ದೇವರಾದರೇನು ಎಂದು ಸುಮ್ಮನಾಗೋಣ.
ಇಲ್ಲಿ ಐತೆ ಪಾಲಿಟಿಕ್ಸ್!
ಆಟದ ಮಸಲತ್ತೇ ಇಲ್ಲಿದೆ. ಮೊನ್ನೆ ಮುಕ್ತಿಮಂದಿರಕ್ಕೆ ಡಿಕೆಶಿ ಭೇಟಿ ಕೊಟ್ಟರಲ್ಲ ಅದು ಪುಟ್ಟಾಪೂರಾ ಪಂಚಾಚಾರ್ಯರ ಅಂದರೆ ಕರ್ಮಠ ವೀರಶೈವರ/ಜಂಗಮರ ಮಂದಿರ. ಇದರ ಹಿಂದೆ ಇರುವುದು ಪಂಚಾಚಾರ್ಯ ಜಗದ್ಗುರು ರಂಭಾಪುರಿ ಸ್ವಾಮೀಜಿ! ಯಡಿಯೂರಪ್ಪರ ಹಿಡನ್ ರಿಲಿಜಿಯಸ್ ಗುರು ಇವರು… ಅವರನ್ನೇ ಡಿಕೆಶಿ ಬುಟ್ಟಿಗೆ ಹಾಕಿಕೊಂಡರಾ ಎಂಬ ಪ್ರಶ್ನೆ ಭವಿಷ್ಯದ್ದು.
ಎಂ.ಬಿ. ಪಾಟೀಲ್ ವರ್ಸಸ್ ಡಿಕೆಶಿ?
ಇಲ್ಲಿ ವಿಚಿತ್ರ ಮತ್ತು ಅಸಹ್ಯದ ಧರ್ಮೋ-ರಾಜಕೀಯದ ವಿದ್ಯಮಾನ ಜರುಗುತ್ತಿವೆ. ಗೃಹ ಸಚಿವ ಎಂ.ಬಿ. ಪಾಟೀಲ್ ಲಿಂಗಾಯತ ಪ್ರತ್ಯೇಕ ಧರ್ಮದ ಪರ ಬಹಿರಂಗವಾಗಿ ನಿಂತಿದ್ದರು. ನಾಲ್ಕು ದಿನಗಳ ಹಿಂದೆ ಅವರು, ಪ್ರತ್ಯೇಕ ಧರ್ಮ ವಿರೋಧಿಸಿದ್ದ ಪಂಚಾಚಾರ್ಯರ ಶಾಖಾಮಠಕ್ಕೆ ಅಂದರೆ ಮುಕ್ತಿಮಂದಿರಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಸ್ವಾಮಿ ಅವರನ್ನು ಸನ್ಮಾನವನ್ನೂ ಮಾಡಿತ್ತು. ವೀರಶೈವ ಮಹಾಸಭಾ ಆ ಸ್ವಾಮಿ ವಿರುದ್ಧ ಕಿಡಿ ಕಾರಿತ್ತು! ಆದಾದ ಎರಡೇ ದಿನಕ್ಕೆ ಅಲ್ಲಿ ಡಿ.ಕೆ ಶಿವಕುಮಾರರಿಂದ ಭಕ್ತಿಪೂರ್ವಕ ಪೂಜೆ!
ಡಿಕೇಶಿ, ರಂಭಾಪುರಿ ದೋಸ್ತಿ
ಇದೆಲ್ಲ ಬಿಡಿ, ರಾಜಕಾರಣಕ್ಕೆ ಬರೋಣ.. ಕೇವಲ ನೂರಾರು ಕೋಟಿ ವ್ಯಯಿಸಿ ಬಿಟ್ಟರೆ ಸಿಎಂ ಆಗಲ್ಲ ಎಂದು ಡಿ.ಕೆ ಶಿವಕುಮಾರ್‍ಗೆ ಈಗ ಅರಿವಾದಂತಿದೆ. ಈಗಲ್ಲ, ಮುಂದಿನ ಚುನಾವಣೆ ವೇಳೆಗೆ ರಾಜ್ಯದಾದ್ಯಂತ ಸಪೋರ್ಟ್ ಬೇಸ್ ಹೊಂದಲು ಅವರು ಪ್ರಯತ್ನ ಪಡುತ್ತಿದ್ದಾರೆ. 
ಆರು ತಿಂಗಳ ಹಿಂದೆ ಇದೇ ಲಕ್ಷ್ಮೇಶ್ವರದಲ್ಲಿ ರಂಭಾಪುರಿ ‘ಜಗದ್ಗುರು’ವಿನ ಸಮಾರಂಭದಲ್ಲಿ ಭಾವಹಿಸಿದ್ದ ಡಿ.ಕೆ. ಶಿವಕುಮಾರ್, ‘ಪ್ರತ್ಯೇಕ ಧರ್ಮ ಬೆಂಬಲಿಸಿದ್ದು ಕಾಂಗ್ರೆಸ್‍ನ ತಪ್ಪು’ ಎಂದಿದ್ದರು. ಆಗ ಸಿದ್ದರಾಮಯ್ಯ ಬೆಂಬಲಿಗ ಶಾಸಕರು ತರಾಟೆಗೆ ತೆಗೆದುಕೊಂಡ ಮೇಲೆ ವಿಷಾದ ವ್ಯಕ್ತಪಡಿಸಿದ್ದರು.




