Homeಕರ್ನಾಟಕಬಿಟ್ಟಿ ಭಾಗ್ಯಗಳಲ್ಲ; ಸರ್ವೋದಯದತ್ತ ತೆರೆದ ದಾರಿದೀಪಗಳು!

ಬಿಟ್ಟಿ ಭಾಗ್ಯಗಳಲ್ಲ; ಸರ್ವೋದಯದತ್ತ ತೆರೆದ ದಾರಿದೀಪಗಳು!

- Advertisement -
- Advertisement -

ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಗ್ಯಾರಂಟಿಗಳು ’ಬಿಟ್ಟಿ’ ಬಾಗ್ಯಗಳಲ್ಲ. ಬಿಟ್ಟಿ-ಪುಕ್ಕಟೆ ಎಂದರೆ ಬಡವರಿಗೆ ಮಾಡುವ ಅವಮಾನ! ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷ ತುಂಬಿದರೂ ಅತ್ಯಂತ ಕೆಳಗಿನ ಮನುಷ್ಯರ ಬದುಕು ಕಂಗಾಲಾಗಿದೆ ಎಂಬುದು ಸೂರ್‍ಯ ಸತ್ಯ. ’ವಿಶ್ವಗುರುವಿನ ಸ್ಥಾನಕ್ಕೇರುತ್ತಿದೆ ಭಾರತ’ ಎಂದು ಹೆಮ್ಮೆ ಪಡುತ್ತಿರುವ ನಾವು ನಮ್ಮ ಕಾಲಕೆಳಗೆ ಅಧೋಲೋಕದಲ್ಲಿ ಬದುಕುತ್ತಿರುವ ’ದನಿಯಿಲ್ಲದವರ ದನಿ’ ಕೇಳುತ್ತಿಲ್ಲ. ಎಲ್ಲ ಉಳ್ಳವರ ಕಾರುಬಾರು! ಗುಡಿಗಂಟೆಗಳ ಘಂಟಾರವದಲ್ಲಿ ಅವರ ರೋದನ ಕೇಳುವರಾರು? ಯುಗಯುಗದ ದಾರಿದ್ರ್ಯ ಭಾರದಿಂದ ಬೆನ್ ಬಾಗಿ ಗೋಳಿಡುವ ಬಡಜನಗಳ ಗೋಳು ಅರಣ್ಯರೋದನವಾಗುತ್ತಿದೆ. ಪಂಚತಾರಾ ಹೋಟೆಲುಗಳಲ್ಲಿ ನೃತ್ಯ ಸಂಗೀತ ಭೋರ್ಗರೆಯುತ್ತಿದೆ. ಇದೆಂಥ ಪ್ರಜಾಪ್ರಭುತ್ವ? ಎಲ್ಲಿಯ ಸಾಮಾಜಿಕ ನ್ಯಾಯ? ಶ್ರೀಮಂತಿಕೆಗೆ ಕಡಿವಾಣ ಬೀಳದಿದ್ದರೆ ಹೇಗೆ?

ನಗರದ ಒಳ-ಹೊರಗಿನ ಗಟಾರಗಳಲ್ಲಿ ಕೊಳಗೇರಿಗಳಲ್ಲಿ, ರೈಲ್ವೆಬದಿಯ ಗುಡಿಸಲುಗಳಲ್ಲಿ, ಕಲ್ಲಿದ್ದಲು, ಕಬ್ಬಿಣದ ಅದಿರು ಕಲ್ಲುಗಣಿಗಳಲ್ಲಿ, ಜಿಂಕ್‌ಶೀಟ್ ಶೆಡ್ಡುಗಳಲ್ಲಿ, ನಗರ ಪರಿಚಾರಕ ಶ್ರಮಿಕರು ಎರಡು ಹೊತ್ತಿನ ಮಾನ ಕೂಳಿಗಾಗಿ ಮತ್ತು ಮೈಹೊದಿಯಲು ಬಟ್ಟೆಗಾಗಿ ಬೆವರಿಳಿಸುತ್ತಿದ್ದಾರೆ. ಎಲ್ಲರಂತೆ ಅವರಿಗೂ ದೈನಂದಿನ ಜೀವನಾವಶ್ಯಕತೆಗಳು ಪೂರೈಕೆಯಾಗುತ್ತಿದ್ದರೆ ಅವರೇಕೆ ಕೆಲವರೀಗ ಟೀಕಿಸುತ್ತಿರುವ ’ಬಿಟ್ಟಿ ಭಾಗ್ಯ’ಗಳಿಗೆ ಕೈಯ್ಯೊಡ್ಡುತ್ತಿದ್ದರು? ಸ್ವರಾಜ್ಯ ಬಂದು ಮುಕ್ಕಾಲು ಶತಮಾನವಾದರೂ ಅವರನ್ನು ನಾವು ಇಂಥ ದೈನ್ಯ ಸ್ಥಿತಿಯಲ್ಲೇ ಇರಿಸಿದ್ದೇವೆಯಲ್ಲವೆ? ಏಕೆ? ಏಕೆಂದರೆ, ಇವರ ಸ್ಮಾರ್ಟ್ ಸಿಟಿಗಳಲ್ಲಿ;

ಧನಿಕರ ಮನೆಗಳು ಒಂದೆಡೆ ನಿಂತಿವೆ,
ಬಡವರ ಗುಡಿಸಲು ಒಂದೆಡೆ ನಿಂತಿವೆ.
ಜ್ಯೋತಿಯ ಮಣಿದೀಪಗಳಲ್ಲಿ;
ಕತ್ತಲು, ಕಗ್ಗತ್ತಲು ಇಲ್ಲಿ!
ಹಾಡಿನ ನುಣ್ದ ನಿಯತ್ತ,
ಗೋಳಿನ ನೀಳ್ದನಿಯಿತ್ತ,
ಕೂಳನು ಹೆಮ್ಮೆಗೆ ಬಿಸುಡುವರಲ್ಲಿ,
ಹೊಟ್ಟೆಗೆ ಇಲ್ಲದೆ ಕೊರಗುವರಿಲ್ಲಿ!
ಆ ಕಡೆ ಉದ್ಯಾನ,
ಈ ಕಡೆ ಶ್ಮಶಾನ!

-ಕುವೆಂಪು

ಈ ಪರಿಸ್ಥಿತಿಯಲ್ಲಿದೆ ನಮ್ಮ ಭಾರತ! ಇಂತಲ್ಲಿ ಕೊಂಚ ಎಚ್ಚೆತ್ತ ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿನಂತೆ ಶ್ರಮಜೀವಿ ಬಡವರಿಗೆ ಕೆಲವು ಮಟ್ಟಿನ ಷರತ್ತುಗಳ ಮೇರೆಗೆ ಗ್ಯಾರಂಟಿಗಳನ್ನು ನೀಡಿ- ಅವರು ಕೈ ಮೇಲೆ ಹರಿಸಿದ ಪ್ರೀತಿಯ ಧಾರೆಯ ಋಣವನ್ನು ತೀರಿಸಹೊರಟಿರುವುದು ಸ್ವಾಗತಾರ್ಹವಲ್ಲವೆ? ಸ್ವಾವಲಂಬನೆಗೆ ಸಹಕಾರಿಯಲ್ಲವೆ?

ಆದರೆ, ಶತಮಾನಗಳ ಪರ್ಯಂತ ಕೆಸರಿಗಿಳಿಯದೆ, ಬಿಸಿಲು ತಾಕದೆ, ಉಗುರುಕಣ್ಣು ಮಣ್ಣಾಗದೆ ಉಂಡವರೆಲ್ಲಾ, ಬಡವರಿಗೆ ನೀಡಿರುವುದೆಲ್ಲಾ ’ಬಿಟ್ಟಿ-ಭಾಗ್ಯ’ ಎಂದು ಅಸಹನೆಯಿಂದ ಹಂಗಿಸಲು ತೊಡಗಿರುವುದು ಅನ್ಯಾಯ! ಪಂಚ ಗ್ಯಾರಂಟಿಗಳು ನಿಷ್ಕಳಂಕವಾಗಿ ಅನುಷ್ಠಾನಗೊಂಡರೆ ದೇಶದ ಎರಡು ಕಣ್ಣುಗಳಂತಿರುವ ಗಾಂಧಿ ಮತ್ತು ಅಂಬೇಡ್ಕರ್ ಅವರ ಆತ್ಮಗಳಿಗೆ ಶಾಂತಿ ಸಿಗುತ್ತದೆ. ಸಂಘಪರಿವಾರದ ಕೋಮುಗಲಭೆಗಳ ಅಂಗಡಿಗಳನ್ನು ಮುಚ್ಚಿಸಿ ಪ್ರೀತಿಯ ಅಂಗಡಿಗಳನ್ನು ತೆರೆಯುವ ಕಾಂಗ್ರೆಸ್ ಸರ್ಕಾರದ ಪ್ರಯತ್ನಕ್ಕೂ ಇದು ಪೂರಕವಾಗಬಹುದು. ಸಂವಿಧಾನ ನಮ್ಮ ಪವಿತ್ರ ಗ್ರಂಥ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ’ಚುನಾವಣೆಗೆ ಮುಗಿಯಿತು, ಅದರ ಜೊತೆಗೆ ನಮ್ಮ ಅವರ ನಡುವಿನ ಪೈಪೋಟಿ ಕೂಡ, ಇನ್ನೇನಿದ್ದರೂ ನಮ್ಮ ಅವರ ಸಹಬಾಳ್ವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿರುವುದು ಸಂದರ್ಭೋಚಿತ ಮುತ್ಸದ್ಧಿತನವಾಗಿದೆ.

ಪ್ರಸ್ತುತ ಐದು ಗ್ಯಾರಂಟಿಗಳ ಕುರಿತ ಆರ್ಥಿಕ ವಿಚಾರಗಳತ್ತ ಹೊರಳಿದರೆ, ಈಗಾಗಲೆ ಅರ್ಥಶಾಸ್ತ್ರಜ್ಞರು ಸ್ಪಷ್ಟಪಡಿಸಿರುವಂತೆ ಅಪಾರ ಆದಾಯ ಹರಿದುಬರುವ ರಾಜ್ಯಕ್ಕೆ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸುತ್ತಿರುವ ಐದು ಗ್ಯಾರಂಟಿಗಳಿಂದ ಬೊಕ್ಕಸಕ್ಕೆ ಅಷ್ಟೇನು ಹೊರೆಯಾಗುವುದಿಲ್ಲ. ಬಡಜನರ ಜೀವನೋಪಾಯಕ್ಕೆ ಗ್ಯಾರಂಟಿಗಳು ಕೊಂಚ ರಹದಾರಿ. ಸಂವಿಧಾನದ ಆಶಯದಂತೆ ಯೋಜನೆಗಳನ್ನು ರೂಪಿಸಲಾಗಿದೆ; ಈ ಯೋಜನೆಗಳಿಂದ ಸರ್ಕಾರಕ್ಕೆ 50,500 ಕೋಟಿ ವೆಚ್ಚ ಎಂದು ಹೇಳಲಾಗುತ್ತಿದೆ. ಇವು ಬಡವರ ಬದುಕುವ ಹಕ್ಕನ್ನು ದೃಢಪಡಿಸುತ್ತವೆ ಎಂದೂ ವಿಶ್ಲೇಷಿಸಲಾಗಿದೆ. ಆದರೆ ಪ್ರತಿಪಕ್ಷಗಳು ಇದೆಲ್ಲಾ ವೋಟ್ ಬ್ಯಾಂಕಿನ ಗಿಮಿಕ್ಕು; ನಮ್ಮ ತೆರಿಗೆ ಹಣದಿಂದ ಜನರಿಗೆ ಪುಕ್ಕಟೆ ಕೊಡಲಾಗುತ್ತಿದೆ; ಅವರನ್ನು ಸೋಮಾರಿಗಳನ್ನಾಗಿ ಮಾಡಲಾಗುತ್ತಿದೆ; ಅತ್ತೆ-ಸೊಸೆಯರಲ್ಲಿ ಜಗಳ ತಂದಿಡುತ್ತಿದೆ; ಇದೆಲ್ಲಾ ಲೋಕಸಭೆ ಚುನಾವಣೆವರೆಗೆ ಮಾತ್ರ; ಗ್ಯಾರಂಟಿಗಳ ಭಾರದಿಂದ ಸರ್ಕಾರ ಕುಸಿಯುತ್ತದೆ; ಮುಂತಾಗಿ ಲೇವಡಿ ಮಾಡುತ್ತಿವೆ.

ಆದರೆ ಸಂಘಪರಿವಾರದವರ ಹಂಗಿಸುವಿಕೆಯಲ್ಲಿ, ಆಕ್ಷೇಪಣೆಯಲ್ಲಿ ಅಸಹನೆ ಎದ್ದು ಕಾಣುತ್ತಿದೆಯೇ ಹೊರತು ಸತ್ಯಾಂಶವಿಲ್ಲ. ಮನುಪ್ರಣೀತ ಚಾತುರ್ವರ್ಣ್ಯ ಬ್ರಾಹ್ಮಣ್ಯ ಧರ್ಮವನ್ನು ಪ್ರಜಾಪ್ರಭುತ್ವ ಸಂದರ್ಭದಲ್ಲಿ ಸದ್ದಿಲ್ಲದೆ ಪಾಲಿಸುತ್ತಾ ನಿರುದ್ಯೋಗಿ ಯುವಕರ ಮೆದುಳನ್ನು ಕದಡಿ ಕೈಗೆ ತ್ರಿಶೂಲ, ಕತ್ತಿ, ಭಗವಾಧ್ವಜ ಮುಂತಾದ ಸಂಕೇತಗಳನ್ನಿತ್ತು ಕೋಮುಗಲಭೆಗಳ ಕಿಡಿಹಾರಿಸುತ್ತಿದ್ದವರಿಗೆ ಈಗ ಕೈಕೈ ಹಿಸುಕಿಕೊಳ್ಳುವಂತಾಗಿದೆ. ಜನರಿಗೆ ನೆಮ್ಮದಿಯ ಬದುಕು ಮುಖ್ಯ. ಜಾತ್ಯತೀತ ರಾಷ್ಟ್ರದಲ್ಲಿ ಜಾತೀಯತೆ-ಜನಾಂಗೀಯ ದ್ವೇಷದ ಕಿಡಿ ಹಾರಿಸುತ್ತ ಈಶಾನ್ಯ ರಾಜ್ಯಗಳಲ್ಲಿ, ಕಾಶ್ಮೀರ ಕಣಿವೆಯಲ್ಲಿ, ಗುಜರಾತಿನಲ್ಲಿ, ಉತ್ತರ ಪ್ರದೇಶದಲ್ಲಿ, ಅತ್ಯಾಚಾರ, ಸ್ವಜನಪಕ್ಷಪಾತ, ಅಸ್ಪೃಶ್ಯತೆ ಆಚರಣೆ, ದೇವಾಲಯ ಪ್ರವೇಶ ನಿರಾಕರಣೆ, ಒಂದೇ ಗುಹೆ-ಗುಡಿಗಳಲ್ಲಿ ಶಾಂತವಾಗಿ ನಿದ್ರಿಸುವ ಬಾಬಾ-ದತ್ತಾತ್ರೇಯ ಸಮಾಧಿಗಳನ್ನು ಕೆದಕಿ ಕೋಮುಗಲಭೆ ಮಾಡುತ್ತಿರುವವರಿಗೆ, ’ಸರ್ವರಿಗೆ ಸಮಬಾಳು ಸರ್ವರಿಗೆ ಸಮಪಾಲು’ ಎಂದು ಗ್ಯಾರಂಟಿ ಕೊಟ್ಟಿರುವ ನಮ್ಮ ಸಂವಿಧಾನವನ್ನು ನೇಪಥ್ಯಕ್ಕೆ ಸರಿಸುತ್ತಾ ಗಾಂಧಿಜಯಂತಿಯಂದು ಹೂವಿನ ಹಾರ ಹಾಕಿ ಕೊಂಡಾಡುತ್ತಾ ಆದರೆ ಅದೇ ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆ ’ಭಾರತದ ಸುಪುತ್ರ’ ಎನ್ನುವವರಿಗೆ, ’ರಾಜಾ ಪ್ರತ್ಯಕ್ಷ ದೈವ’ ಎಂಬುದರ ಪ್ರತೀಕವಾದ ಪುರಾತನ ಸರ್ವಾಧಿಕಾರ ಸಂಕೇತವಾದ ರಾಜದಂಡ ’ಸೆಂಗೋಲ್’ಗೆ ಮತ್ತು ಬ್ರಾಹ್ಮಣ ಪುರೋಹಿತರಿಗೆ ದೀರ್ಘದಂಡ ನಮಸ್ಕಾರ ಮಾಡಿ ’ಸ್ಪೀಕರ್’ ಕುರ್ಚಿಯ ಮೂಲೆಯಲ್ಲಿ ಅದನ್ನು ನಿಲ್ಲಿಸಿದವರಿಗೆ ಜನಸಾಮಾನ್ಯರ ಸಬಲೀಕರಣದ ಯೋಜನೆಗಳು ಸಿಂಹಸ್ವಪ್ನವಾಗಿ ಕಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಅಭಿವೃದ್ಧಿ ಕುಂಠಿತವಾಗುತ್ತದೆಂಬುದು ಸತ್ಯವೇ?

ಹೀಗೆ ಪ್ರಚ್ಛನ್ನ ರಾಜಪ್ರಭುತ್ವದತ್ತ ಬಿಜೆಪಿ ಸಾಗುತ್ತಿರುವಾಗ ಕರ್ನಾಟಕ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿಗೆ ತಪ್ಪದೆ ಐದು ಗ್ಯಾರಂಟಿಗಳನ್ನು ಆಗುಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಮೊದಲನೆಯದಾಗಿ, ಮಹಿಳೆಯರಿಗೆ ಇದೇ ಜೂನ್ 11, 2023ರಿಂದ ಉಚಿತ ಬಸ್ ಪ್ರಯಾಣ ಚಾಲನೆಗೊಂಡಿದೆ. ಉಳಿದವೂ ಜಾರಿಯ ಹಂತದಲ್ಲಿವೆ. ಸ್ತ್ರೀಶಕ್ತಿ, ಗೃಹಲಕ್ಷ್ಮಿ ಇವು ಸ್ತ್ರೀ ಸಬಲೀಕರಣದತ್ತ ಇಟ್ಟ ದಿಟ್ಟ ಹೆಜ್ಜೆಗಳು.

’ಕೈ’ ಸರ್ಕಾರ ಕೊಡುತ್ತಿರುವ ಗ್ಯಾರಂಟಿಗಳು ಬೊಕ್ಕಸವನ್ನು ಬರಿದು ಮಾಡುತ್ತವೆ ಎಂಬುದರಲ್ಲಿ ಹುರುಳಿಲ್ಲ. ಬಡಜನರ ಕೈಗೆ ಕಾಸು ಬಂದು ಚಲಾವಣೆಗೊಳ್ಳುತ್ತದೆ. ವ್ಯಾಪಾರ ವಹಿವಾಟು ಹೆಚ್ಚುತ್ತದೆ. ಉತ್ಪನ್ನ ಹೆಚ್ಚುತ್ತದೆ. ಉತ್ಪನ್ನಗಳಿಗೆ ಹೆಚ್ಚಿನ ಬೆಲೆಬರುತ್ತದೆ. ಮಾರುಕಟ್ಟೆಗಳು ಉಸಿರಾಡುತ್ತವೆ. ಬಡವರ ಕೈಗೆ ಬಂದ ಹಣ ಅಂದಂದೇ ಚಲಾವಣೆಗೊಳ್ಳುತ್ತದೆ. ಶ್ರೀಮಂತರ ಕೈಗೆ ಹೋದ ಹಣ ಪೆಠಾರಿ ಸೇರುತ್ತದೆ. ಇದು ಸರಳ ಅರ್ಥಶಾಸ್ತ್ರ. ಇಂತಹ ಕಾರಣಗಳಿಂದಲೇ ಕೋವಿಡ್ ಪಿಡುಗಿನ ಸಮಯದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ತಮ್ಮ ನಾಗರಿಕರಿಗೆ ನಗದನ್ನು ಕೊಟ್ಟವು, ಅಲ್ಲಿನ ಸಂಸ್ಥೆಗಳು ನೌಕರರಿಗೆ ಕೆಲಸವಿಲ್ಲದೆಯೂ ವೇತನ ಕೊಟ್ಟವು. ಇದರಿಂದ ಆರ್ಥಿಕ ಪುನಶ್ಚೇತನ ಸಾಧ್ಯವಾಯಿತು. ಇಷ್ಟಕ್ಕೇನು ಹಾರ್ವರ್ಡ್, ಆಕ್ಸ್‌ಫರ್ಡ್ ಅರ್ಥಶಾಸ್ತ್ರಜ್ಞರು ಬೇಕಿಲ್ಲ.

ಜನಮುಖಿಯಾದ ಈ ಪಂಚ ಗ್ಯಾರಂಟಿಗಳು, ನವಕರ್ನಾಟಕ ನಿರ್ಮಾಣದ ಹರಿಕಾರ ದೇವರಾಜ ಅರಸು ಕಾಲದ 20 ಅಂಶಗಳ ಸುಧಾರಣೆಗಳನ್ನು ನೆನಪಿಗೆ ತರುತ್ತವೆ. ಅಂದಿನ ಭೂ ಸುಧಾರಣೆ, ಜೀತಮುಕ್ತಿ, ಸ್ಟೈಫಂಡ್, ತಲೆ ಮೇಲೆ ಮಲ ಹೊರುವ ಪದ್ಧತಿ ರದ್ದು- ಇತ್ಯಾದಿಗಳನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದು. ಹಾಗೇ ’ಕೈ’ ಸರ್ಕಾರ ನಿರುದ್ಯೋಗಿ ಯುವಜನರಿಗೆ ಷರತ್ತಿನ ಮೇಲೆ 2000, 1500, ಹೀಗೆ ನಿರುದ್ಯೋಗ ಭತ್ಯೆ ನೀಡುವ ಮೂಲಕ ಅವರು ದಾರಿ ತಪ್ಪಿ ಇನ್ನಿತರ ಹವ್ಯಾಸ, ಕೋಮುಗಲಭೆ, ನಕಲಿ ಗೋಸಂರಕ್ಷಕ, ನೈತಿಕ ಪೊಲೀಸ್‌ಗಿರಿ ಮುಂತಾದ ಸಮಾಜ ಘಾತುಕಕಾರ್ಯಗಳತ್ತ ತಲೆಹಾಕದಂತೆ ಮಾಡಿ, ದುಷ್ಕೃತ್ಯಗಳನ್ನು ತಗ್ಗಿಸುವ ಕೆಲಸ ಮಾಡಲು ಸಾಧ್ಯವಿದೆ.

ಇನ್ನು ಮನೆ ಯಜಮಾನಿಗೆ ನೀಡುವ ’ಗೃಹಲಕ್ಷ್ಮಿ’ ಯೋಜನೆಯಿಂದ ಮನೆಯಲ್ಲಿ ಗಂಡಾಳ್ವಿಕೆಯ ದರ್ಬಾರು ಸ್ಥಗಿತವಾಗುತ್ತದೆ. ಅತ್ತೆ ಸೊಸೆಯರಲ್ಲಿ ಸೌಹಾರ್ದ ಬೆಳೆಯುತ್ತದೆ. ಮುದುಕರ ಮೇಲೆ ಅಕ್ಕರೆ ಹುಟ್ಟುತ್ತದೆ. ಆದರೆ ಇದರಿಂದ ಹೊಟ್ಟೆಯುರಿ(ಖುದ್ರ)ಗೊಂಡ ಬಿಜೆಪಿಯು ತನ್ನ ವಿರೋಧವನ್ನು ಸಮರ್ಥಿಸಿಕೊಳ್ಳುವ ವಾದಗಳು ವಿಚಿತ್ರವಾಗಿವೆ. ಹೀಗೆ ಸರ್ಕಾರ ಎಲ್ಲ ’ಪುಕ್ಕಟೆ’ ಕೊಟ್ಟು ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಾರೆ; ಖಜಾನೆ ಖಾಲಿಯಾದರೆ ಹೈಟೆಕ್ ರಸ್ತೆಗಳ ನಿರ್ಮಾಣ, ಗ್ರ್ಯಾಂಡ್‌ಟೆಕ್ ರೈಲುಗಳ ಸಂಚಾರ, ಜಿಲ್ಲೆಗೊಂದರಂತೆ ವಿಮಾನ ನಿಲ್ದಾಣ, ಎಲ್ಲವೂ ಸಾಧ್ಯವಿತ್ತೇ? ಎಂದು ಮುಂತಾಗಿ ಮೂಗುಮುರಿಯಲು ಹೊರಟಿದೆ. ಆದರೆ ಇವರು ಪಟ್ಟಿ ಮಾಡುವ ಯಾವ ಅನುಕೂಲಗಳೇ ಆದರೂ ಶ್ರೀಮಂತರ ಐಷಾರಾಮಿ ಜೀವನಕ್ಕೆ, ಎ.ಸಿ, ಸಂಚಾರಕ್ಕೆ, ಭೋಗವಿಲಾಸಕ್ಕೆ ವ್ಯಯ. ಅಷ್ಟೇ ಹೊರತು ಕೃಷೀ ಪ್ರಧಾನ ದೇಶದ ಬಡ ಜನರಿಗೆ, ಕಟ್ಟಡ ಕಾರ್ಮಿಕನಿಗೆ, ದಿನನಿತ್ಯದ ಕೂಲಿಕಾರನಿಗೆ, ಪೌರಕಾರ್ಮಿಕನಿಗೆ, ರೈಲ್ವೇ ಹಳಿ ತೊಳೆಯುವ, ರಸ್ತೆ ಕಲ್ಲು ಕುಟ್ಟುವ, ಬೀದಿ ವ್ಯಾಪಾರ ಮಾಡುವ, ಸಾಗರತಳದಲ್ಲಿ ಮೀನು ಹಿಡಿಯುವ, ಚಿಂದಿ ಆಯುವ ಬಡವರಿಗೆ ಏನು ಪ್ರಯೋಜನ?

ಪ್ರಧಾನಿ ಮೋದಿಯವರ 9 ವರ್ಷಗಳ ಅದೃಷ್ಟ ಸಂಖ್ಯೆಯ ಆಳ್ವಿಕೆಯಲ್ಲಿ ವಿಶ್ವಬ್ಯಾಂಕ್ ಸಾಲ 55ಲಕ್ಷ ಕೋಟಿಯಿಂದ 155 ಲಕ್ಷ ಕೋಟಿಗೆ ಏರಿಕೆಯಾಗಿದೆ ಎನ್ನುತ್ತವೆಲ್ಲಾ ವರದಿಗಳು! ಉತ್ತರದಾಯಿತ್ವದ ಹೊಣೆ ಹೊರುವವರು ಯಾರು? ಗುಲಗಂಜಿಗೆ ತನ್ನ ಅಡಿಯ ಕಪ್ಪು ಕಾಣುವುದಿಲ್ಲವಂತೆ! ಅದೆಲ್ಲಾ ಮೋದಿ ಆಪ್ತಮಿತ್ರರಾದ ಅದಾನಿ-ಅಂಬಾನಿ ಸಮೂಹ ಕಂಪನಿಗಳತ್ತ ರಿಯಾಯಿತಿ ಸಿಲ್ಕಾಗಿ ಹರಿಯುತ್ತಿದೆ ಎಂಬ ಆರೋಪಗಳಿವೆ. ಇಲ್ಲವಾಗಿದ್ದರೆ ಚುನಾವಣೆ ಸಂದರ್ಭದ ’ರೋಡ್ ಷೋ’ಗಳಿಗೆ ಟನ್‌ಗಟ್ಟಲೆ ಹೂವು ಸುರಿಯಲು ದೇಣಿಗೆ ಎಲ್ಲಿಂದ ಬರುತ್ತಿತ್ತು? ಸಾರಾಂಶವಾಗಿ, ಈಗ ನೀಡುತ್ತಿರುವ ಈ ಐದು ಗ್ಯಾರಂಟಿಗಳು ಸರ್ವೋದಯ ಸಮಾಜದತ್ತ ಸಾಗಲು ಹಚ್ಚಿದ ದಾರಿದೀಪಗಳು. ಮುಂದೆ ಉತ್ತರದ ರಾಜ್ಯಗಳೂ ಕರ್ನಾಟಕದ ಮಾದರಿಯನ್ನು ಅನುಸರಿಸಲಿವೆ.

ಒಟ್ಟಾರೆ ಬಿಜೆಪಿಯವರ ಟೀಕೆಟಿಪ್ಪಣಿ ಲೇವಡಿ ಹಂಗಿಸುವಿಕೆ ಏನೇ ಇರಲಿ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ, ಉಚಿತ ಬಸ್ ಪಯಣ ಈ ಪಂಚ ಗ್ಯಾರಂಟಿಗಳು ಬಡವರ ಬದುಕಿಗೆ ಕೊಂಚ ಆಸರೆಯಾಗುವುದರಲ್ಲಿ ಎರಡು ಮಾತಿಲ್ಲ. ಆದರೆ ಅನುಷ್ಠಾನದಲ್ಲಿ ಭ್ರಷ್ಟತೆಗೆ ಅವಕಾಶವಿಲ್ಲದಂತೆ ಎಚ್ಚರ ವಹಿಸಬೇಕು. ಅಧಿಕಾರಶಾಹಿ ಸಹಕರಿಸಬೇಕು. ಹಾಗಾದರೆ ಮಾತ್ರ ಮುಂದೆ ಗುಜರಾತ್ ಮಾದರಿ ಎಂಬ ಕಟ್ಟುಕತೆಗೆ ಬದಲಾಗಿ ಕರುನಾಡ ಮಾದರಿ ಎಂಬಂತಾಗುತ್ತದೆ.

ಪ್ರೊ. ಶಿವರಾಮಯ್ಯ

ಪ್ರೊ.ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...