Homeದಿಟನಾಗರಕಾಂತಾರವಷ್ಟೇ ಅಲ್ಲ, ನಿಮ್ಮ ಸಿನಿಮಾವೂ ಆಸ್ಕರ್‌ಗೆ ಅರ್ಹತೆ ಪಡೆಯಬಹುದು: ಷರತ್ತುಗಳು ಅನ್ವಯ!

ಕಾಂತಾರವಷ್ಟೇ ಅಲ್ಲ, ನಿಮ್ಮ ಸಿನಿಮಾವೂ ಆಸ್ಕರ್‌ಗೆ ಅರ್ಹತೆ ಪಡೆಯಬಹುದು: ಷರತ್ತುಗಳು ಅನ್ವಯ!

ಕೆಲವು ಮಾಧ್ಯಮಗಳು ವರದಿ ಮಾಡಿದಂತೆ ‘ಕಾಂತಾರ’ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿಲ್ಲ, ಕೇವಲ ಅರ್ಹತೆ ಪಡೆದಿದೆಯಷ್ಟೇ!

- Advertisement -
- Advertisement -

2022ನೇ ಇಸವಿಯಲ್ಲಿ ಗಮನ ಸೆಳೆದಿದ್ದ ‘ಕಾಂತಾರ’ ಸಿನಿಮಾವು ಈಗ ಸುದ್ದಿಯಲ್ಲಿದೆ. “ಕಾಂತಾರ ಚಿತ್ರವು ಎರಡು ಆಸ್ಕರ್ ವಿಭಾಗದಲ್ಲಿ ಭಾಗಿಯಾಗಲು ಅರ್ಹತೆ ಪಡೆದುಕೊಂಡಿದೆ ಎಂದು ಹಂಚಿಕೊಳ್ಳಲು ನಮಗೆ ಅತೀವ ಸಂತಸವಾಗುತ್ತಿದೆ…” ಎಂದು ಹೊಂಬಾಳೆ ಫಿಲ್ಮ್ಸ್‌‌ ಹೇಳಿಕೊಂಡಿದೆ.

ಕನ್ನಡದ ಹಲವು ಮುಖ್ಯವಾಹಿನಿ ಮಾಧ್ಯಮಗಳು ಮಾಡುತ್ತಿರುವ ಸುದ್ದಿಗಳು ಮಾತ್ರ ಅತಿರಂಜಕವಾಗಿವೆ. ಕಾಂತಾರ ಸಿನಿಮಾವು ಆಸ್ಕರ್ ಪ್ರಶಸ್ತಿಯನ್ನೇ ಪಡೆದುಕೊಂಡಿದೆ ಎನ್ನುವಂತೆ ಬಿಗ್ ಬ್ರೇಕಿಂಗ್ ನ್ಯೂಸ್‌  ಪ್ರಸಾರ ಮಾಡಿವೆ. ‘ಕಾಂತಾರ’ ಸಿನಿಮಾ ಎರಡು ವಿಭಾಗದಲ್ಲಿ ಅರ್ಹತೆ ಪಡೆದಿದೆ ಎಂದು ಹೊಂಬಾಳೆ ಫಿಲ್ಮ್ಸ್‌ ಮಾಡಿರುವ ಟ್ವೀಟ್‌ಅನ್ನೇ ಆಧಾರವಾಗಿಟ್ಟುಕೊಂಡು, “ಕಾಂತಾರ ಸಿನಿಮಾ ಆಸ್ಕರ್‌ಗೆ ನಾಮನಿರ್ದೇಶನಗೊಂಡಿದೆ” ಎಂದು ಮಾಧ್ಯಮಗಳು ವರದಿ ಮಾಡಿವೆ.

ಹೊಂಬಾಳೆ ಫಿಲ್ಮ್ಸ್ ನೀಡಿರುವ ಅಪ್ಟೇಡ್‌ ಪ್ರಕಾರ, “ಕಾಂತಾರ 2 ವಿಭಾಗದಲ್ಲಿ ಅರ್ಹತೆ ಪಡೆದುಕೊಂಡಿದೆ”. ಯಾವ ವಿಭಾಗವೆಂಬುದನ್ನು ಸ್ಪಷ್ಟಪಡಿಸಿಲ್ಲ.

ಫ್ಯಾಕ್ಟ್‌ಚೆಕ್:

‘ಕಾಂತಾರ’ ಚಿತ್ರ ಬಿಡುಗಡೆ ಆದಾಗಲೇ ಸಾಕಷ್ಟು ವಿವಾದಗಳನ್ನು ಹುಟ್ಟುಹಾಕಿತ್ತು, ಚಿತ್ರದಲ್ಲಿ ಭೂತಕೋಲವನ್ನು ಹಣ ಮಾಡುವ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ ಮತ್ತು ಸಂಗೀತವನ್ನು ಕದಿಯಲಾಗಿದೆ ಎಂದು ಆರೋಪಗಳು ಬಂದಿದ್ದವು. ಟೀಕೆ- ಟಿಪ್ಪಣಿಗಳಾಚೆಗೆ ಕಾಂತಾರ ಗಲ್ಲಾಪೆಟ್ಟಿಗೆಯನ್ನು ತುಂಬಿಸಿತ್ತು. ಈಗ ಕಾಂತಾರ ಚಿತ್ರ ಆಸ್ಕರ್‌ಗೆ ನಾಮನಿರ್ದೇಶನ ಪಡೆದುಕೊಂಡಿದೆ ಎಂದು ಸುಳ್ಳು ಸುದ್ದಿಗಳನ್ನು ಕನ್ನಡದ ಮುಖ್ಯವಾಹಿನಿಗಳು ಪ್ರಸಾರ ಮಾಡುತ್ತಿವೆ. ನೀವು ಮಾಡುವ ಸಿನಿಮಾವು ಕೂಡ ಆಸ್ಕರ್‌ಗೆ ಅರ್ಹತೆ ಪಡೆಯಬಹುದು. ಆದರೆ ಕೆಲವೊಂದು ಷರತ್ತುಗಳು ಇದಕ್ಕೆ ಅನ್ವಯಿಸುತ್ತವೆಯಷ್ಟೇ. ಅರ್ಹತೆ ಪಡೆಯುವುದಕ್ಕೂ ನಾಮನಿರ್ದೇಶನವಾಗುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ.

ಅರ್ಹತೆಗೂ ನಾಮನಿರ್ದೇಶನಕ್ಕೂ ವ್ಯತ್ಯಾಸ ಇಲ್ಲವೇ?

ಆಸ್ಕರ್ ಅಕಾಡೆಮಿಯು (Academy of Motion Picture Arts and Sciences)  95ನೇ ಅಕಾಡೆಮಿ ಅವಾರ್ಡಿಗೆ ಅರ್ಹತೆ ಪಡೆದಿರುವ 301 ಚಿತ್ರಗಳ ಹೆಸರನ್ನು ಬಿಡುಗಡೆ ಮಾಡಿದೆ. ಇದು ಪ್ರಾಥಮಿಕ ಹಂತ. ‘ಕಾಂತಾರ’ ಜೊತೆಗೆ ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಸಿನಿಮಾವೂ ಈ ಪಟ್ಟಿಯಲ್ಲಿದೆ. (ಆ ಪಟ್ಟಿ ‘ಇಲ್ಲಿದೆ’.)

ಆಸ್ಕರ್‌ ಪ್ರಶಸ್ತಿಗೆ ಅರ್ಹತೆ ಪಡೆದುಕೊಳ್ಳಲು ಅಮೆರಿಕದ ಆರು ಮೆಟ್ರೊಪಾಲಿಟನ್ ನಗರಗಳಲ್ಲಿ (Los Angeles County; the City of New York; the Bay Area; Chicago, Illinois; Miami, Florida; and Atlanta, Georgia) ಎಲ್ಲಾದರೂ ಕನಿಷ್ಟ ಒಂದು ಕಡೆ ಬಿಡುಗಡೆಯಾಗಿಬೇಕು. ಪ್ರಶಸ್ತಿಗೆ ಪರಿಗಣಿಸಲಾದ ವರ್ಷದಲ್ಲಿ ಕನಿಷ್ಠ ಒಂದು ವಾರ ಸದರಿ ನಗರವೊಂದರಲ್ಲಿ ಪ್ರದರ್ಶನವಾಗಿರಬೇಕು. ಅಂದರೆ ಜನವರಿ 1, 2022ರಿಂದ ಡಿಸೆಂಬರ್ 31, 2022ರ ನಡುವೆ ಸತತ ಏಳು ದಿನ ಒಂದೇ ಜಾಗದಲ್ಲಿ ಕಾಂತಾರ ಪ್ರದರ್ಶನ ಕಂಡಿದೆ ಎಂದರ್ಥ. ಈ ಅರ್ಹತೆಯನ್ನು ಕಾಂತಾರ ಹೊಂದಿದೆ. ಹಾಗಾಗಿ ಕಾಂತಾರಕ್ಕೆ ಸಿಕ್ಕಿರುವುದು ಇನ್ನು ಅರ್ಹತೆ ಮಾತ್ರ. 2015ನೇ ಇಸವಿಯಲ್ಲಿ ಅನುಪ್ ಭಂಡಾರಿ ಅವರ ‘ರಂಗಿತರಂಗ’ ಹಾಗೂ ಕಿಶನ್ ಅವರ ‘ಕೇರ್ ಆಫ್ ಫುಟ್ಪಾತ್ 2’ ಸಿನಿಮಾ ಅರ್ಹತೆ ಪಡೆದಿದ್ದವು.

ಮುಖ್ಯವಾಹಿನಿಗಳು ಮಧ್ಯಮಗಳು ಪ್ರಸಾರ ಮಾಡುತ್ತಿರುವ ಸುಳ್ಳು ಸುದ್ದಿಗೆ ಪ್ರತಿಕ್ರಿಸಿರುವ ಹಿರಿಯ ಪತ್ರಕರ್ತರು ಹಾಗೂ ಚಿಂತಕರಾದ ರಾಜಾರಾಮ್ ತಲ್ಲೂರ್‌ “ಕಾಂತಾರ, ಈ ಬಾರಿ ಆಸ್ಕರ್‌ಗೆ ಸ್ಪರ್ಧಿಸಲು ಅರ್ಹತೆ ಪಡೆದಿದೆಯಷ್ಟೇ. ಇನ್ನು ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ತಿರುಗಾಡುತ್ತಿರುವಂತೆ ಬೆಸ್ಟ್ ಪಿಕ್ಚರ್, ನಟ, ನಟಿ ಎಂದೆಲ್ಲ ಕೆಟಗರಿಗಳಿಗೆ ನಾಮಿನೇಷನ್ ಪ್ರಕ್ರಿಯೆಯೇ ಶುರು ಆಗಿಲ್ಲ” ಎಂದು ವಿವರಿಸಿದ್ದಾರೆ.

95ನೇ ಆಸ್ಕರ್‌ ಪ್ರಶಸ್ತಿಗೆ ಪ್ರದರ್ಶನಗಳು ಮಾರ್ಚ್ 12, 2023 ರಂದು Ovation ಹಾಲಿವುಡ್‌ನಲ್ಲಿರುವ Dolby® ಥಿಯೇಟರ್‌ನಲ್ಲಿ ನಡೆಯಲಿದೆ ಮತ್ತು ಪ್ರಪಂಚದಾದ್ಯಂತ 200 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ನೇರ ಪ್ರಸಾರ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕನ್ನಡಪರ ಹೋರಾಟಗಾರರಾದ ಎಸ್‌.ಸಿ.ದಿನೇಶ್‌ ಕುಮಾರ್ ಅವರು ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿ, ಮಾಧ್ಯಮಗಳು ಪ್ರಸಾರ ಮಾಡುತ್ತಿರುವ ಸುದ್ದಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್‌: ಮೋದಿ ಹೇಳಿದ್ದು ಸುಳ್ಳು, 2002ರ ಮೊದಲೇ ಅಹಮದಾಬಾದ್‌ ಜಿಲ್ಲೆಯಲ್ಲಿ ಮೂರು ವಿವಿಗಳಿದ್ದವು!

“95ನೇ ಅಕಾಡೆಮಿ ಅವಾರ್ಡ್‌ ಗಳ ನಾಮನಿರ್ದೇಶನಗಳನ್ನು 2023ರ ಜನವರಿ 24ರಂದು ಘೋಷಿಸಲಾಗುವುದು. ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಗಳನ್ನು ನೀಡುವ the Academy of Motion Picture Arts and Sciences ನೀಡಿರುವ ಅಧಿಕೃತ ಹೇಳಿಕೆ ಇದು. ನಮ್ಮ ಮಾಧ್ಯಮಗಳಿಗೆ ಯಾಕಿಷ್ಟು ಆತುರ? ವಿಷಯ ಏನು ಅಂದ್ರೆ ಆಸ್ಕರ್‌ ಅರ್ಹತೆ ಪಟ್ಟಿಯಲ್ಲಿ 301 ಸಿನಿಮಾಗಳು ಕಾಣಿಸಿಕೊಂಡಿವೆ. ಅವುಗಳಲ್ಲಿ ಕಾಂತಾರವೂ ಇದೆ, ವಿಕ್ರಾಂತ್‌ ರೋಣವೂ ಇದೆ. ಕನ್ನಡ ಸಿನಿಮಾಗಳಿಗೆ ಆಸ್ಕರ್‌ ಸಿಗಲಿ, ಅದು ನಮ್ಮ ಆಸೆಯೂ ಕೂಡ ಹೌದು. ಆದರೆ ಹೀಗೆ ಆತುರಗೇಡಿಗಳಾದರೆ ಹೇಗೆ?” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, 301 ಚಿತ್ರಗಳ ಸಾಲಿನಲ್ಲಿ ಕಾಂತಾರ ಹಾಗೂ ವಿಕ್ರಾಂತ್ ರೋಣ ಸಿನಿಮಾಗಳು ಅರ್ಹತೆ ಪಡೆದುಕೊಂಡಿವೆ. ಆದರೆ ಕನ್ನಡದ ಮುಖ್ಯವಾಹಿನಿ ಮಾಧ್ಯಮಗಳು, “ಕಾಂತಾರ ಚಿತ್ರವು ನಟ-ನಟಿ ವಿಭಾಗದಲ್ಲಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದೆ” ಎಂದು ತಪ್ಪಾಗಿ ಸುದ್ದಿ ಪ್ರಸಾರ ಮಾಡಿವೆ.

ವರದಿ ಕೃಪೆ: ಏನ್‌ಸುದ್ದಿ.ಕಾಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

0
2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ...