Homeಅಂಕಣಗಳುಹಳತು-ವಿವೇಕ: ಚಳುವಳಿ ಮಾಡಿದ್ರೆ ಮಾತ್ರ ಸಾಲಲ್ಲ, ಪೊಲಿಟಿಕಲ್ ಪವರ್ ನಿಮ್ಮ ಕೈಲಿ ಹಿಡ್ಕೊಬೇಕು

ಹಳತು-ವಿವೇಕ: ಚಳುವಳಿ ಮಾಡಿದ್ರೆ ಮಾತ್ರ ಸಾಲಲ್ಲ, ಪೊಲಿಟಿಕಲ್ ಪವರ್ ನಿಮ್ಮ ಕೈಲಿ ಹಿಡ್ಕೊಬೇಕು

- Advertisement -
- Advertisement -

ರಾಯಚೂರು ಜಿಲ್ಲೆಯಲ್ಲಿ 28.10.1996ರಂದು ನಡೆದ ಪುನಶ್ಚೇತನ ಅಧ್ಯಯನ ಶಿಬಿರದಲ್ಲಿ ಪ್ರೊ. ಬಿ.ಕೃಷ್ಣಪ್ಪನವರು ಮಾಡಿದ ಭಾಷಣ.

ಇದು ಒಂದು ಅತ್ಯಂತ ಜವಾಬ್ದಾರಿಯುತವಾದಂತಹ ಸಭೆ ಅಂತ್ಹೇಳಿ ನಾನು ಭಾವಿಸಿಕೊಂಡಿದ್ದೀನಿ. ಏಕೆ ಅಂತ್ಹೇಳಿದ್ರೆ, ಇಡೀ ಜಿಲ್ಲೆಯಲ್ಲಿ ಏನು ದಲಿತ ಸಂಘರ್ಷ ಸಮಿತಿ ಕೆಲಸವನ್ನ ಮಾಡ್ತಾ ಇದೆ, ಈ ಕೆಲಸ ಸಂಘರ್ಷ ಸಮಿತಿಯ ಸಿದ್ಧಾಂತಕ್ಕೆ ಅನುಗುಣವಾಗಿ ನಡೀತಿದೆಯಾ? ಅಥವಾ ಸಿದ್ಧಾಂತವನ್ನು ಬಿಟ್ಟು ಎಲ್ಲಾದರೂ ನಾವು ಹೋಗಿದ್ದೇವೋ? ಸಂಘರ್ಷ ಸಮಿತಿಯ ಹುಟ್ಟು ಯಾವ ಸಿದ್ಧಾಂತದ ಅಡಿಯಲ್ಲಿ ಆಯ್ತು? ಇಪ್ಪತ್ತು ವರ್ಷಗಳ ನಂತರ ಅದು ಎಲ್ಲಿ ಹೋಗ್ತಾ ಇದೆ – ಈ ಎಲ್ಲಾ ವಿಚಾರಗಳನ್ನೂ ಕೂಡ ತಾವು ಅರ್ಥ ಮಾಡ್ಕೊಳ್ಳತೀರಿ, ಅವುಗಳ ಬಗ್ಗೆ ಗಂಭೀರವಾದಂತಹ ಚಿಂತನೆಯನ್ನು ಮಾಡ್ತೀರಿ ಅಂತ್ಹೇಳಿ ನಾನು ಭಾವಿಸ್ಕೊಂಡಿದ್ದೇನೆ.

ಸ್ನೇಹಿತರೇ, ಇಂಗ್ಲಿಷ್‌ನಲ್ಲಿ ಒಂದು ಮಾತಿದೆ. Criticism & self criticism. ಈಗ ವಿಮರ್ಶೆ ದಲಿತ ಸಂಘರ್ಷ ಸಮಿತೀಲಿ ಇದೆಯಾ? ತನ್ನನ್ನ ತಾನು ವಿಮರ್ಶೆ ಮಾಡಕಳ್ತಾಂತದ್ದು ನಮ್ಮಲ್ಲಿ ಇದೆಯಾ? ಈ ಪ್ರಶ್ನೆಯನ್ನು ನಾವು ಹಾಕ್ಕೊಂಡರೆ ನನಗೆ ವಿಮರ್ಶೆ ಸಾಧ್ಯವಾಗಿಲ್ಲಾ ಅನ್ನಿಸುತ್ತೆ.

1974ನೇ ಇಸವಿ ಡಿಸೆಂಬರ್ 28, 29, 30 ಈ ಮೂರು ದಿನಗಳು ಕರ್ನಾಟಕದ ಉಕ್ಕಿನ ನಗರವಾದ ಭದ್ರಾವತಿಯಲ್ಲಿ ಸಂಘರ್ಷ ಸಮಿತಿಯ ಸಮಾವೇಶ ನಡೆಯಿತು. ಅಲ್ಲಿ ಸಂಘರ್ಷ ಸಮಿತಿ ಆರಂಭವಾಯ್ತು. 1974ರಿಂದ 1984ಕ್ಕೆ 10 ವರ್ಷ ಆಯ್ತು, 1984ರಿಂದ 1994ಕ್ಕೆ, ಮತ್ತೊಂದು 10 ವರ್ಷ ಆಯ್ತು. ಅಂದರೆ 20 ವರ್ಷ ಆಯ್ತು, ಈ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಒಂದು ದಿನವಾದರೂ ನಾವು ಕೂತು ಸಂಘರ್ಷ ಸಮಿತಿ ಏನಾಗಿದೆ, ಏನಾಗ್ತಾ ಇದೆ, ಯಾವ ಉದ್ದೇಶ ಇಟ್ಕೊಂಡು ಅದು ಆರಂಭವಾಯ್ತು, ಅದು ಎಲ್ಲಿ ಹೋಗ್ತಾ ಇದೆ? ಇದನ್ನ ನಾವು ಚರ್ಚೆ ಮಾಡ್ಲಿಕ್ಕೆ ಆಗಲಿಲ್ಲ. ಈಗ 20 ವರ್ಷಗಳು ಕಳೆದ ನಂತರದಲ್ಲಿ ರಾಯಚೂರಿನಲ್ಲಿ ಈ ವಿಮರ್ಶೆಯ ಒಂದು ಪ್ರಜ್ಞೆ, ವಿಚಾರ ಬೆಳೀತಾ ಇರೋದು ಬಹಳ ಸಂತೋಷ.

ನಾನು ನಿಮಗೆ ದಲಿತ ಸಂಘರ್ಷ ಸಮಿತಿ ಇತಿಹಾಸವನ್ನ ಹೇಳಬೇಕು. ಏಕೆ ಅಂತ್ಹೇಳಿದ್ರೆ, ಯಾರು ಇತಿಹಾಸವನ್ನ ಮರೀತಾನೂ ಅವನು ಇತಿಹಾಸವನ್ನ ಸೃಷ್ಟಿ ಮಾಡಾಕಾಗೋದಿಲ್ಲ. ಹಾಗಾಗಿ, ನಾನು ದಲಿತ ಸಂಘರ್ಷ ಸಮಿತಿಯ ಇತಿಹಾಸವನ್ನ ಹೇಳಲೇಬೇಕು.

1970ರ ದಶಕದಲ್ಲಿ ನನಗೆ ಜಾತಿ ವಿರುದ್ಧದ ಈ ಒಂದು ಚಳವಳಿ ತುಂಬಾ ಅಟ್ರಾಕ್ಟ್ ಆಯ್ತು, ಅದಕ್ಕೆ ನಾನೇನು ಮಾಡ್ದೆ, ಈ ಸಮಾಜವಾದಿ ಚಳುವಳಿಯಲ್ಲಿ ಸೇರ್ಕೊಂಡೆ. ಯಾವ ಕಾಲದಲ್ಲಿ ನಾನು ಈ ಜಾತಿ ವಿನಾಶದ ಈ ಚಳವಳಿಯಲ್ಲಿ ಸೇರ್ಕೊಂಡೆನೋ, ಹೆಚ್ಚು ಕಡಿಮೆ ಅದೇ ಕಾಲ್ದಲ್ಲಿ ಮೈಸೂರಿನಲ್ಲಿ ದೇವನೂರು ಮಹಾದೇವ ಅವರೂ ಕೂಡ ಪಾಲ್ಗೊಂಡ್ರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಇತಿಹಾಸದಲ್ಲಿ ಗಮನಿಸಬಹುದಾದಂತಹ ಮೂರು ಜನವ್ಯಕ್ತಿಗಳಲ್ಲಿ ನಾನೊಬ್ಬ, ದೇವನೂರು ಮಹಾದೇವ ಅವರು ಒಬ್ಬರು, ಸಿದ್ದಲಿಂಗಯ್ಯ ಒಬ್ಬರು.

ನಾನು, ದೇವನೂರು ಮಹಾದೇವ, ಸಮಾಜವಾದಿ ಚಳುವಳಿಯಲ್ಲಿ ಇದ್ವಿ, ಸಿದ್ದಲಿಂಗಯ್ಯನವರು ಕಮ್ಯುನಿಸ್ಟ್ ಚಳುವಳಿಯಲ್ಲಿದ್ರು. ಕರ್ನಾಟಕದಲ್ಲಿ ಸಮಾಜವಾದಿ ಚಳುವಳಿಯನ್ನು ಬಿಟ್ರೆ, ಅಮೆರಿಕಾದಲ್ಲಿ ನೀಗ್ರೋಗಳು “ಬ್ಲಾಕ್ ಈಸ್ ಬ್ಯೂಟಿಫುಲ್” ಕಪ್ಪು ಸುಂದರವಾದದ್ದು ಅಂತ್ಹೇಳಿದ್ರು. ಅವರು ಬಿಳಿಯರ ವಿರುದ್ಧವಾಗಿ ಸಾಹಿತ್ಯವನ್ನ ರಚನೆ ಮಾಡ್ತಾ ಇದ್ರು, ಚಳುವಳಿಯನ್ನ ಮಾಡ್ತಾ ಇದ್ರು, ಇದು ಸಾಹಿತ್ಯದ ಮೂಲಕವಾಗಿ ಭಾರತಕ್ಕೆ ಬರ್ತಾ ಇತ್ತು. ನಾವದನ್ನ ಅಭ್ಯಾಸ ಮಾಡ್ತಾ ಇದ್ವಿ. ನಮ್ಮ ಮೇಲೆ ಅದರ ಪರಿಣಾಮವೂ ಕೂಡ ಸ್ವಲ್ಪ ಮಟ್ಟಿಗೆ ಆಯ್ತು.

PC : ಕನ್ನಡ ದೀವಿಗೆ

ಆಮೇಲೆ ಇದೇ ಸಂದರ್ಭದಲ್ಲಿ ಬಸವಲಿಂಗಪ್ಪನವರು ಪೌರಾಡಳಿತ ಮಂತ್ರಿಯಾಗಿದ್ದಾಗ ಈ ದೇಶದಲ್ಲಿ ಮಲ ಹೊರುವ ಪದ್ಧತಿ ನಿರ್ಮೂಲನ ಆಗಬೇಕು ಅಂತ್ಹೇಳಿ, ಅವರು ಮಲ ಹೊರುವ ಪದ್ಧತಿಯನ್ನ ರದ್ದುಗೊಳಿಸಿದರು. ಆ ಮಲ ಹೊರುವ ಪದ್ದತಿಯನ್ನ ರದ್ದುಗೊಳಿಸುವುದರ ಮೂಲಕವಾಗಿ ಇಡೀ ಕರ್ನಾಟಕದಲ್ಲಿ ಒಂದು ದೊಡ್ಡ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣ ಆಯ್ತು. ಈ ಮಲ ಹೊರುವ ಪದ್ಧತಿಯನ್ನ ಉಳಿಸಿಕೊಂಡಂತಹ ಹಿಂದೂ ಧರ್ಮದ ವಿರುದ್ಧವಾಗಿ ಅವರು ಸಿಡಿದೆದ್ದರು. ಹಿಂದೂ ದೇವರುಗಳನ್ನ, ಹಿಂದೂ ಪದ್ಧತಿಯನ್ನ ಬಹಿರಂಗವಾಗಿ ಖಂಡತುಂಡವಾಗಿ ಖಂಡಿಸಲಿಕ್ಕೆ ಶುರು ಮಾಡಿದ್ರು. ಅದರಿಂದ ಇಡೀ ಸಮಾಜ ಅವರ ವಿರುದ್ಧವಾಗಿ ಎದ್ದು ನಿಂತು ಕೊನೆಗೆ ಬಸವಲಿಂಗಪ್ಪನವರನ್ನು ಮಂತ್ರಿ ಪದವಿಯಿಂದ ಕೆಳಗಡೆಗೆ ಇಳಿಸಿದ್ರು.

ನನಗೆ ಆಗ ಯೋಚನೆ ಆಯ್ತು. ಏನು ಅಂತ್ಹೇಳಿದ್ರೆ, ಜಾತಿ ವ್ಯವಸ್ಥೆ ಹೊಗಲೀ ಅಂತ ಚಳುವಳಿ ಮಾಡ್ತಿದ್ದಂತಹ ಸೋಷಿಯಲಿಸ್ಟರು, ಇಡೀ ಸಮಾಜ ಬದಲಾವಣೆ ಆಗಬೇಕು ಅಂತ ಹೇಳಿದ್ದಂತಹ ಕಮ್ಯುನಿಸ್ಟರು, ಬಸವಲಿಂಗಪ್ಪನವರ ಈ ಪ್ರಕ್ಷುಬ್ಧ ಸ್ಥಿತೀಲಿ ಯಾವ ಬೆಂಬಲವನ್ನೂ ಕೊಡ್ಲಿಲ್ಲಾ. ಬಸವಲಿಂಗಪ್ಪನವರ ಈ ಒಂದು ಚಳುವಳಿಯನ್ನು ಯಾರು ಕೂಡ ಬೆಂಬಲಿಸುವಂತಹ, ಅದು ಸರಿ ಅಂತ ಹೇಳುವಂತಹ ಒಂದು ಕೆಲಸವನ್ನು ಮಾಡ್ಲಿಲ್ಲ. ಅನಂತಮೂರ್ತಿಯವರು ಅಲ್ಲೊಂದು ಇಲ್ಲೊಂದು ಹೇಳಿಕೆಯನ್ನ ಕೊಡ್ತಾ ಇದ್ರು. ಅದು ಬಿಟ್ರೆ ಬೇರೆ ಯಾರು ಕೂಡ ಮಾಡಲಿಲ್ಲ. ಇದು ವಿಶೇಷವಾಗಿ ನನ್ನ ಮೇಲೆ ತುಂಬಾ ಪರಿಣಾಮವನ್ನು ಬೀರಿತು.

ಈ ದೇಶದಲ್ಲಿ ಒಬ್ಬ ಅಸ್ಪೃಶ್ಯನು ಅಥವಾ ಕೆಳ ಜಾತಿಯವನು ಏನಾದರು ಪ್ರಗತಿಯ ಕೆಲಸವನ್ನ ಮಾಡಲಿಕ್ಕೆ ಹೊರಟ್ರೆ, ಸಮಾಜವನ್ನ ಪರಿವರ್ತನೆ ಮಾಡ್ಬೇಕೆನ್ನುವಂತಹ ಕೆಲಸವನ್ನು ಮಾಡ್ಲಿಕ್ಕೆ ಹೊರಟ್ರೆ ಅವನನ್ನು ಸಮಗ್ರವಾಗಿ ತುಳಿಯುವಂತಹ ಕೆಲಸವನ್ನ ಎಲ್ಲಾ ಜಾತಿಗಳ ಕೂಡ ಒಟ್ಟಿಗೆ ಸೇಕೊಂಡು ಮಾಡ್ತಾವೆ. ಆದ್ದರಿಂದ ಇವರ ಜೊತೆಗೆ ಸೇರೋದ್ರಲ್ಲಿ ಯಾವ ಅರ್ಥವಿಲ್ಲ. ಅವರು, ಸಿದ್ಧಾಂತಗಳನ್ನು ಹೇಳ್ಕೊಂಡು ವೇದಿಕೆ ಮೇಲೆ ಇವರ ಪರವಾಗಿ ಮಾತನ್ನ ಆಡಬಲ್ಲರೇ ಹೊರತಾಗಿ, ಬದಲಾವಣೆಗೆ ಯಾವ ರೀತಿಯಲ್ಲೂ ಸಹಕರಿಸೋದಿಲ್ಲ ಅಂತ್ಹೇಳಿ ನಾನು 1974ರಲ್ಲಿ ದಲಿತ ವೇದಿಕೆ ಅಂತ ಮಾಡಿ, ಆ ದಲಿತ ವೇದಿಕೆಯ ಅಡಿಯಲ್ಲಿ ಒಂದು ಚಿಕ್ಕ ಪುಸ್ತಕವನ್ನ ಅಚ್ಚುಮಾಡಿದ. “ಗಾಂಧೀಜಿ ಮತ್ತು ಅಸ್ಪೃಶ” ಅಂಥ ಅದು. ಆ ಪುಸ್ತಕದ ಮೂಲ ಉದ್ದೇಶ ಏನಾಗಿತ್ತು ಅಂತ್ಹೇಳಿದ್ರೆ, ಗಾಂಧಿ ಮತ್ತು ಗಾಂಧಿವಾದ, ಗಾಂಧಿವಾದವನ್ನ ಹೇಳುವಂತಹ ಸಮಾಜವಾದಿಗಳು. ಇವರೆಲ್ರೂ ಕೂಡ ಒಂದನೇ. ಬದಲಾವಣೆ ಮಾಡ್ಲಿಕ್ಕೆ ಇವರ ಕೈಯಿಂದ ಸಾಧ್ಯವಿಲ್ಲ ಅನ್ನೊದನ್ನ ಹೇಳಿ, ದಲಿತರ, ಕೆಳಜಾತಿಗಳ ಉದ್ದಾರ ಆಗಬೇಕಾದರೆ ಅವರೇ ಈ ದೇಶದ ನಾಯಕತ್ವವನ್ನ ಹಿಡ್ಕೋಬೇಕು, ಅವರೇ ಪ್ರಜ್ಞಾವಂತರಾಗಬೇಕು, ಅನ್ನೋಂತಹ ವಿಚಾರಗಳನ್ನು ನಾನು ಅದರಲ್ಲಿ ಪ್ರಸ್ತಾಪಮಾಡಿ, ಆ ಚಿಕ್ಕ ಹೊತ್ತಿಗೆಯನ್ನ ಹೊರಬಿಟ್ಟೆ. ತಕ್ಷಣವೇ ಒಂದು ಕಡೆ ಸಮಾಜವಾದಿಗಳು ನನ್ನನ್ನು ದೂರ ಮಾಡಿದ್ರು. ಕರ್ನಾಟಕದ ಸಮಾಜವಾದಿಗಳು, ಕರ್ನಾಟಕದ ಕಮ್ಯುನಿಸ್ಟ್‌ವಾದಿಗಳು ನನ್ನನ್ನು ಇವತ್ತೂ ಕೂಡ ದ್ವೇಷ ಮಾಡುತ್ತಲೇ ಇದ್ದಾರೆ.

ನಾನು ದಲಿತ ಸಂಘರ್ಷ ಸಮಿತಿಯ ಮೂಲವನ್ನ ಇಲ್ಲಿ ಹೇಳಿದ್ದೇನೆ. ಆದರೆ ದಲಿತ ಸಂಘರ್ಷ ಸಮಿತಿಯ ನಿಜವಾದ ತತ್ವ ಏನು ಅನ್ನೋದನ್ನ ನಾನಿಲ್ಲಿ ಪ್ರಸ್ತಾಪ ಮಾಡ್ತೇನೆ.

Indian spiritual and political leader Mohandas Gandhi circa 1935.

ನಾನು ’ಗಾಂಧಿ ಮತ್ತು ಅಸ್ಪೃಶ್ಯರು’ ಅನ್ನೊ ಆ ಚಿಕ್ಕ ಹೊತ್ತಿಗೆಯನ್ನ ಬರೆಯೋದಕ್ಕಿಂತ ಮುಂಚೆ ಗಾಂಧೀಜಿಯವರ ಎಲ್ಲಾ ಲೇಖನಗಳನ್ನು, ಅವರ ಜೀವನ ಚರಿತ್ರೆಯನ್ನ ಮತ್ತು ಅವರ ಹೊರಡಿಸ್ತಾ ಇದ್ದಂತಹ ’ಹರಿಜನ್’, ’ಯಂಗ್ ಇಂಡಿಯಾ’ ಪತ್ರಿಕೆಗಳನ್ನ ಅಭ್ಯಾಸ ಮಾಡಿ, ಕೊನೆಗೆ ನಾನು ಕೆಲವು ವಿಷಯಗಳನ್ನ ಪ್ರಸ್ತಾಪ ಮಾಡಿದೆ. ಏನು ಅಂತ್ಹೇಳಿದ್ರೆ, ಗಾಂಧೀಜಿಯವರ ಅಸ್ಪೃಶ್ಯತೆಯ ನಿವಾರಣೆ ಒಂದು ಬೋಗಸ್ಸಾ ಅಥವಾ ಇದು ಒಂದು ನಿಜವಾದಂತ ಕಾರ್ಯಕ್ರಮವಾ ಅಂತ. ಅನೇಕರು ಗಾಂಧೀಜಿಯವರನ್ನ ಪ್ರಶ್ನೆ ಮಾಡ್ತಾರೆ. ಏನು ಪ್ರಶ್ನೆ ಮಾಡ್ತಾರೆ ಅಂತ್ಹೇಳಿದ್ರೆ ದಲಿತರ, ಅಸ್ಪೃಶ್ಯರ ಬಿಡುಗಡೆಯಾಗಬೇಕಾದರೆ ಎರಡು ರೀತಿಯ ವಾದ ಇದಾವೆ. ಈ ಎರಡು ವಾದದಲ್ಲಿ ಗಾಂಧೀಜಿಯವರೇ ನೀವು ಯಾವ ವಾದವನ್ನು ಒಪ್ಪುತ್ತೀರಿ ಎಂಬ ಪ್ರಶ್ನೆಗೆ – ಈ ದೇಶದ ಪ್ರತಿ ಐದು ಜನರಲ್ಲಿ ಒಬ್ಬ (1971ರ ಜನಗಣತಿ ಪ್ರಕಾರ) ಅಸ್ಪೃಶ್ಯ ಇದ್ದಾನೆ, ಪ್ರತಿ ಮೂರು ಜನರಲ್ಲೊಬ್ಬ ಬ್ಯಾಕ್‌ವರ್ಡ್ ಕಾಸ್ಟ್ ಇದ್ದಾನೆ. ಈ ದೇಶದ ಸುಮಾರು ಕಾಲು ಭಾಗದಷ್ಟಿರುವ ಅಸ್ಪೃಶ್ಯ ಜನಾಂಗ ಉದ್ಧಾರ ಆಗಬೇಕಾದರೆ ಮೇಲು ಜಾತಿಯವರು ಏನು ಅವರನ್ನ ತುಳೀತಾ ಇದಾರೊ, ಆ ಮೇಲು ಜಾತಿಯವರ ಮನಸ್ಸು ಪರಿವರ್ತನೆಯಾಗಿ ತುಳಿದಂತಾ ಜನರನ್ನ ಅನುಕಂಪದಿಂದ ಮೇಲಕ್ಕೆ ಎತ್ಕೋಬೇಕು. ಆಗ ಅವರ ಉದ್ಧಾರ ಸಾಧ್ಯ. ಇದು ಒಂದು ಸಿದ್ಧಾಂತ.

ಇನ್ನೊಂದು ಸಿದ್ಧಾಂತ ಏನಪ್ಪಾ ಅಂತ್ಹೇಳಿದ್ರೆ, ಮೇಲು ಜಾತಿಯವರು ಏನು ತುಳಿತಾ ಬಂದಿದಾರೋ ಇವರನ್ನ ತುಳಿದ ಜನಕ್ಕೆ ಕಣ್ಣಿಲ್ಲ, ಹೃದಯ ಇಲ್ಲ, ಅವರ ಹೃದಯ ಕಠೋರವಾದದ್ದು, ಅವರ ಹೃದಯ ಬದಲಾವಣೆ ಆಗೋದಿಲ್ಲಾ, ಯಾರನ್ನಾ ತುಳೀತಾ ಇದಾರೋ ಆ ತುಳಿಯುವಂತವರ ಬಗ್ಗೆ ಸಿಂಪತಿ ಅವರಿಗೆ ಬರೋದಿಲ್ಲಾ, ಅವರು ಕೆಳಜಾತಿಗಳನ್ನ ಮೇಲಕ್ಕೆ ಎತ್ತೋದಿಲ್ಲಾ, ಆದ್ದರಿಂದ ಮೇಲು ಜಾತಿಯವರ ಮನಸ್ಸು ಪರಿವರ್ತನೆಯಾಗಿ, ಈ ಕೆಳಜಾತಿಗಳ ಉದ್ಧಾರ ಆಗಬೇಕು ಅನ್ನೋದು ಸಾಧ್ಯವಿಲ್ಲ. ಅದಕ್ಕೆ ಏನ್ಮಾಡಬೇಕು ಅಂತ್ಹೇಳಿದ್ರೆ, ಈ ಕೆಳಜಾತಿಗಳಲ್ಲಿ ಪ್ರಜ್ಞೆಯನ್ನ ಹುಟ್ಟಿಸಬೇಕು.

ಕೆಳಜಾತಿಗಳಲ್ಲಿ ಸ್ವಾಭಿಮಾನವನ್ನ ತುಂಬಬೇಕು. ಸ್ವಾಭಿಮಾನವನ್ನ ತುಂಬಿ ಅವರನ್ನ ಯಾರು ತುಳೀತಾ ಇದಾರೋ ಅವರ ವಿರುದ್ದ ಸಂಘರ್ಷಕ್ಕೆ ಅವರನ್ನು ಸಿದ್ಧಮಾಡಬೇಕು. ಆ ಸಂಘರ್ಷದಲ್ಲಿ ಕೆಳ ಜಾತಿಗಳು ಮೇಲು ಜಾತಿಗಳ ಜೊತೆಗೆ ಘರ್ಷಿಸಬೇಕು, ಸಂಘರ್ಷ ಏರ್ಪಡಿಸಬೇಕು, ಆಗ ಮೇಲು ಜಾತಿಗಳಲ್ಲಿ ಹುಟ್ಟುವ ಭಯದಿಂದ ಅವರ ಮನಸ್ಸು ಪರಿವರ್ತನೆ ಆಗುತ್ತೆ. ಆದ್ದರಿಂದ ಕೆಳಜಾತಿಗಳ ಮನಸ್ಸಿನಲ್ಲಿ ಸ್ವಾಭಿಮಾನವನ್ನು ತುಂಬಬೇಕು. ಸಂಘರ್ಷದಲ್ಲಿ ಯಾವ ಜಾತಿಗಳು ಅತಿ ಹೆಚ್ಚು ಜನಸಂಖ್ಯೆ ಇದಾವೋ ಅವು ಕೊಟ್ಟ ಕೊನೆಗೆ ತಮ್ಮ ಸಮಾನತೆಯನ್ನ ಪಡಕೊಳ್ತಾವೆ. ಇದು ಎರಡನೇ ಸಿದ್ಧಾಂತ.

ಗಾಂಧೀಜಿವರ ಪ್ರಕಾರ ಕೆಳಜಾತಿಗಳಿಗೆ ಸ್ವಾಭಿಮಾನವನ್ನ ತುಂಬಿ ಅವರನ್ನ ಮೇಲ್ಜಾತಿ ವಿರುದ್ಧವಾಗಿ ಸಂಘರ್ಷಕ್ಕೆ ಮಾತ್ರ ಹಚ್ಚಬ್ಯಾಡ್ರಿ, ಸಮಾಜದಲ್ಲಿ ಅಲ್ಲೋಲ ಕಲ್ಲೋಲ ಆಗಿಬಿಡುತ್ತೆ. ಏನಿದ್ರು ಕೂಡ ನಾವು ಮೇಲ್ಬಾತಿಯವರ ಮನಸ್ಸನ್ನ ಪರಿವರ್ತನೆ ಮಾಡೋಣ ಅನ್ನೋದು ವಾದ. ಗಾಂಧೀಜಿಯವರು ಕೆಳಜಾತಿಗಳ ಹೃದಯದಲ್ಲಿ ಸ್ವಾಭಿಮಾನ ತುಂಬುವುದನ್ನ ಅವರ ಹಕ್ಕುಗಳಿಗಾಗಿ ಹೋರಾಟ ಮಾಡುವುದನ್ನ ಅವರಲ್ಲಿ ಸಂಘರ್ಷದ ಮನೋಭಾವವನ್ನ ತುಳಿದು ಹಾಕುವಂತಹ ಒಂದು ತೀರ್ಮಾನ ತೆಗೆದುಕೊಳ್ತಾರೆ.

ಆಮೇಲೆ ಇನ್ನೊಂದು ಪ್ರಶ್ನೆಯನ್ನ ಕೇಳ್ತಾರೆ ಗಾಂಧೀಜಿಯವರನ್ನ – ಆಯ್ದು ಮೇಲ್ಜಾತಿಯವರ ಮನಸ್ಸು ಪರಿವರ್ತನೆ ಆಗುತ್ತೆ, ಅಸ್ಪೃಶ್ಯತೆ ನಿವಾರಣೆ ಆಯ್ತು ಅಂತಿಟ್ಕೊಳ್ಳಿ. ಈ ಪಂಚಮರನ್ನ ಬ್ರಾಹ್ಮಣರ ಗ್ರೂಪ್‌ನಲ್ಲಿ ಸೇರಿಸ್ತೀರಾ? ಶೂದ್ರರ ಗ್ರೂಪ್‌ನಲ್ಲಿ ಸೇರಿಸ್ತಿರಾ? ಕ್ಷತ್ರಿಯ ಗ್ರೂಪ್‌ನಲ್ಲಿ ಸೇರಿಸ್ತೀರಾ? ಅದಕ್ಕೆ ಗಾಂಧೀಜಿ ಹೇಳ್ತಾರೆ, ಅಸ್ಪೃಶ್ಯತೆ ಏನಾದ್ರೂ ಈ ದೇಶದಲ್ಲಿ ನಿರ್ಮೂಲನೆ ಆದ್ರೆ ಅವರನ್ನ ಲೋಯರ್ ಶೂದ್ರ ಆಂತ್ಹೇಳಿ ಕರೀಬಹುದು. ಈ ವಿಚಾರಗಳನ್ನ ನಾನು ಪ್ರಸ್ತಾಪ ಮಾಡಿ, ದಲಿತ ಸಂಘರ್ಷ ಸಮಿತಿ ಯಾವ ಹಾದಿ ಹಿಡಿಯೋದು ಒಳ್ಳೇದು? ಮೇಲ್ಜಾತಿಯವರ ಮನಸ್ಸು ಪರಿವರ್ತನೆ ಮಾಡೋದು ಒಳ್ಳೆದಾ? ಮೇಲ್ಜಾತಿಯವರ ಮನಸ್ಸು ಪರಿವರ್ತನೆ ಆಗುತ್ತಾ? ಮೇಲ್ಜಾತಿಯವರು ಯಾವ ಜನರನ್ನ ತುಳಿಯೋದ್ರ ಮುಖಾಂತರ ತಮ್ಮ ಸಂಪತನ್ನ ದಿನ ನಿತ್ಯ ಕೋಟಿಕೋಟಿ, ಹೆಚ್ಚುಸ್ತಾ ಇದ್ದಾರಲ್ಲಾ, ಆ ಸಂಪತ್ತನ್ನ ಬಿಟ್ಟು ಕೊಡೋದಕ್ಕೆ ತಯಾರಿದ್ದಾರಾ? ಅದು ಸಾಧ್ಯ ಇಲ್ಲ. ಇವತ್ತು ಉತ್ತರ ಪ್ರದೇಶದ ಇತಿಹಾಸ, ಉತ್ತರ ಪ್ರದೇಶದಲ್ಲಿ ನಡಿತಾ ಇರ್ತಕ್ಕಂತ ಘಟನೆ ನಮಗೆ ಸಾಕ್ಷಿ. ಮೇಲು ವರ್ಗದ ಮನಸ್ಸು ಪರಿವರ್ತನೆ ಮಾಡ್ಲಿಕ್ಕೆ ಸಾಧ್ಯ ಇಲ್ಲ. ಹಾಗಾದರೆ ದಲಿತ ಸಂಘರ್ಷ ಸಮಿತಿ ಯಾವ ನಿಲುವನ್ನ ತೆಗೆದುಕೊಳ್ಳಬೇಕು ಅಂತ್ಹೇಳಿದ್ರೆ, ಯಾವ ಜನ ಜಾತಿಯಿಂದ, ಯಾವ ಜನ ಧರ್ಮದಿಂದ, ಯಾವ ಜನ ಆರ್ಥಿಕತೆಯಿಂದ, ಸಾಮಾಜಿಕತೆಯಿಂದ, ಯಾವ ಜನ ಶೈಕ್ಷಣಿಕವಾಗಿ ತುಳಿಯಲ್ಪಟ್ಟಿದ್ದಾರೋ, ಆ ತುಳಿಯಲ್ಪಟ್ಟ, ಜನರ ಮನಸ್ಸಿನಲ್ಲಿ ಸ್ವಾಭಿಮಾನ ಬಂದ ತಕ್ಷಣವೇ ಮೇಲು ಜಾತಿಯ ಜೊತೆಗೆ ಸಂಘರ್ಷ ಮಾಡೋದು, ಸಂಘರ್ಷವನ್ನ ಮಾಡುವುದರ ಮೂಲಕವಾಗಿ ಸಮಾನತೆಯನ್ನು ತಂದುಕೊಳ್ಳೋದು.

PC : Prajavani

ಆ ಮಾರ್ಗ ದಲಿತ ಸಂಘರ್ಷ ಸಮಿತಿಗೆ ಯೋಗ್ಯ. ಯಾಕೆ ಅಂತ್ಹೇಳಿದ್ರೆ ನಮ್ಮನ್ನ ಯಾರೋ ಎತ್ತುತ್ತಾರೆ, ನಮ್ಮನ್ನ ಯಾರೋ ಉದ್ಧಾರ ಮಾಡ್ತಾರೆ ಅಂತ ಅಲ್ಲಿವರೆಗೆ ಕಾಯ್ತಾ ಕೂತಿರಿ. ಶ್ರೀಕೃಷ್ಣ ಹತ್ತು ಅವತಾರ ಎತ್ತಿ ಬಂದ ಮೇಲೆ ಯಾವ ಅವತಾರದಲ್ಲೂ ಕೂಡ ಹೇಲು ಬಾಚೋರ, ಚರಂಡಿ ಬಾಚೋರ, ಕಾಡಿನಲ್ಲಿ ಬಿಕ್ಕೆ ಹಣ್ಣು ತಿನ್ನೋರ ಬಗ್ಗೆ ಯಾವತ್ತೂ ಕೂಡ ಅವನಿಗೆ ಕರುಣೆ ಬರಲಿಲ್ಲ.

ಈ ಕಾನ್ಸೆಪ್ಟ್ ನನಗೆ ಬಂದದ್ದು ಹೊಸದೇನಲ್ಲ. ಡಾ. ಬಾಬಾಸಾಹೇಬರು ತಮ್ಮ ಅನೇಕ ಬರವಣಿಗೆಗಳಲ್ಲಿ ಈ ವಿಚಾರಗಳನ್ನು ಹೇಳಿದ್ದಾರೆ.

ನಾವು ದಲಿತ ಸಂಘರ್ಷ ಸಮಿತಿಗೆ ಈ ಒಂದು ಸಿದ್ಧಾಂತವನ್ನ ಆಧಾರವಾಗಿಟ್ಟುಕೊಂಡು ಸ್ವಾಭಿಮಾನ, ಆತ್ಮ ಗೌರವ, ಸಂಘರ್ಷ ಮತ್ತು ಪರಿವರ್ತನೆ ಇದು ಮೂಲವನ್ನಾಗಿ ಮಾಡಿಕೊಂಡೆವು. ಈ ಸಮಯದಲ್ಲಿ ಅನೇಕ ಜನ ಸ್ನೇಹಿತರು ಕೆಲವರು ಯಥಾಸ್ಥಿತಿಗಳಾಗಿದ್ದವರೂ ಕೂಡ ನನ್ನ ಜೊತೆಗಿದ್ರು, ಆದರೆ ಆ ಜನ ಮಾನಸಿಕವಾಗಿ ದಾಸ್ಯದಿಂದ ಮುಕ್ತರಾಗಿರಲಿಲ್ಲ. ಏನಿದ್ದರೂ ಕೂಡ ಮೇಲ್ಜಾತಿಯವರ ಒಲವು ನಮಗೆ ಬೇಕು, ಒಲವಿದ್ದರೆ ನಮಗೇನಾದರೂ ಆಗುತ್ತೆ ಅಂತ ಮನಸ್ಸು ಉಳ್ಳಂತ ಜನ ನನ್ನ ಜೊತೆಗೆ ಹದಿನೈದು ವರ್ಷ ಇದ್ದು ಅವರ ಪ್ರಭಾವ ಜಾಸ್ತಿಯಾಗಿ ಇವತ್ತು ದಲಿತ ಸಂಘರ್ಷ ಸಮಿತಿ ಮೇಲು ಜಾತಿಯವರನ್ನ ಒಲೈಸುವ ಮಟ್ಟಿಗೆ ಹೋಗಿರೋದು ಒಂದು ದೊಡ್ಡ ದುರಂತ ಅಂತ್ಹೇಳಿ ನಾನು ಭಾವಿಸಿಕೊಳ್ತಾ ಇದ್ದೀನಿ.

ನಾನು ಅನೇಕ ಉದಾಹರಣೆಗಳನ್ನು ಪ್ರಸ್ತಾಪ ಮಾಡ್ತೇನೆ. 1974ನೇ ಇಸವಿಯಿಂದ ಅಸ್ಪೃಶ್ಯತೆ ವಿರುದ್ಧವಾಗಿ ನಡೆದಂತಹ ಹೋರಾಟಗಳು, 1974ರಿಂದ 1993ರವರೆಗೂ ಮತ್ತು 1993ರ ಮೀಟಿಂಗ್‌ಗಳಲ್ಲೂ ಕೂಡ ದಲಿತ ಸಂಘರ್ಷ ಸಮಿತಿಗೆ ನಾನೊಬ್ಬ ಅನಿವಾರ್ಯವಾದ ಶಕ್ತಿಯಾಗಿದ್ದೆ. ಆದರೆ, ಬಾಬಾಸಾಹೇಹರು ಒಂದು ಮಾತನ್ನ ಹೇಳ್ತಾರೆ, ದಲಿತರು ಬರೀ ಹೋರಾಟ ಮಾಡೋದರಿಂದ ನಿಮ್ಮ ಬಿಡುಗಡೆ ಸಾಧ್ಯವಿಲ್ಲ. ನೀವು ಪೊಲಿಟಿಕಲ್ ಪವರ್‌ಅನ್ನು ಹಿಡಿಬೇಕು. ಯಾವತ್ತು ನೀವು ಪೊಲಿಟಿಕಲ್ ಪವರ್‌ಅನ್ನು ಹಿಡೀತೀರೋ ಆವತ್ತು ನೀವು ಪರಿವರ್ತನೆಯನ್ನ ಸುಲಭವಾಗಿ ಮಾಡಬಹುದು ಅಂತ್ಹೇಳಿ ಸಿದ್ಧಾಂತದಲ್ಲಿ ನಂಬಿಕೆ ಇದ್ದರಿಂದ ನಾನು ಪೊಲಿಟಿಕಲ್ ಕ್ಷೇತ್ರವನ್ನು ಪ್ರವೇಶ ಮಾಡ್ದೆ. ಅದೊಂದೇ ಸಮಯವನ್ನು ಕಾಯ್ತಾ ಇದ್ರು ಯಾಥಾಸ್ಥಿತಿವಾದಿಗಳು. ಈ ಸಮಯವನ್ನು ಉಪಯೋಗಿಸಿಕೊಂಡು ಅವರು ಇಡೀ ದಲಿತ ಸಂಘರ್ಷ ಸಮಿತಿ ಮೂವ್ಮೆಂಟನ್ನ ಮೇಲು ಜಾತಿಯವರ ಸಿಂಪತಿಗಾಗಿ ಬಿಟ್ಟಿದ್ದಾರೆ. ಮೇಲು ಜಾತಿಯವರ ಸಿಂಪತಿಗೆ ನಿಮ್ಮನ್ನ ತೆಗೆದುಕೊಂಡುಹೋಗಿ ಒತ್ತೆ ಇಟ್ಟಿದ್ದಾರೆ. ನಿಮ್ಮನ್ನ ಅಡ ಇಟ್ಟಿದ್ದಾರೆ. ಅಡ ಇಡುವುದರ ಮೂಲಕವಾಗಿ ಕೆಲವು ಲಾಭಗಳನ್ನು ಪಡೆಯುತ್ತಾ ಇದ್ದಾರೆ.

ದಲಿತ ಸಂಘರ್ಷ ಸಮಿತಿ ಪುನಃಶ್ಚೇತನದ ಅಗತ್ಯ ಇದೆ. ನಮ್ಮ ಸಂಪೂರ್ಣ ಆತ್ಮಗೌರವ, ಸ್ವಾಭಿಮಾನ ಮತ್ತು ಆತ್ಮಗೌರವದ ರಾಜಕಾರಣ, ಬಹುಜನ ರಾಜಕಾರಣ ಈ ದೇಶದಲ್ಲಿ ಮಾಡುವ ಅಗತ್ಯ ಇದೆ.

ಆದ್ದರಿಂದ ದಲಿತ ಸಂಘರ್ಷ ಸಮಿತಿ ಇವತ್ತು ಪುನಃಶ್ಚೇತನಗೊಳ್ಳಲೇಬೇಕಾಗಿದೆ, ಕಳೆದು ಹೋದ ಆಸೆಗಳನ್ನ ಈ ನಾಯಕರುಗಳ ಕಣ್ಣಲ್ಲಿ ಮತ್ತೆ ತುಂಬಬೇಕಾಗಿದೆ. ಹೃದಯಗಳಲ್ಲಿ ತುಂಬಬೇಕಾಗಿದೆ. ಸಂಘರ್ಷವನ್ನು ಮಾಡ್ಲಿಕ್ಕೆ ಶುರುಮಾಡಿದ್ರೆ ಒಗ್ಗಟ್ಟು ತನಗೆ ತಾನೇ ಬರುತ್ತದೆ. ಸಂಘರ್ಷ ಮಾಡಲಿಲ್ಲ ಅಂತ್ಹೇಳಿದ್ರೆ ಒಬ್ಬರ ಮೇಲೆ ಇನ್ನೊಬ್ಬರು ಚಾಡಿ ಹೇಳ್ಕೊಂಡು ಅಡ್ಡಾಡುವಂತಹ ಸ್ಥಿತಿ ನಿರ್ಮಾಣ ಆಗುತ್ತದೆ. ಇದು ಆಗಕೂಡದು. ಸಂಘರ್ಷ ಸಮಿತಿ ಒಂದು ಶಕ್ತಿ ಆಗಬೇಕು. ಶಕ್ತಿ ಅಷ್ಟೇ ಆಗಕೂಡದು. ರಾಜಕೀಯ ಗ್ರಹಣ ಮಾಡುವಂತಹ ಶಕ್ತಿಯಾಗಿ ಕೂಡ ಅದು ಬೆಳೆಯಬೇಕು ಅನ್ನುವಂತಹ ಆಸೆಯನ್ನ ಇಟ್ಟುಕೊಂಡು, ಪುನಃಶ್ಚತನಗೊಳ್ಳಲೇಬೇಕು ಅಂತ್ಹೇಳಿ ಕಾರ್ಯಕರ್ತರ ಮಧ್ಯದಲ್ಲಿ ನಾಲ್ಕು ಮಾತುಗಳನ್ನು ಆಡಬೇಕು ಅನ್ನುವಂತಹ ದೃಷ್ಟಿಯಿಂದ ನಾನಿವತ್ತು ಇಲ್ಲಿಗೆ ಬಂದೆ. ನನ್ನ ಜೊತೆಗೆ ಅನೇಕ ಗೆಳೆಯರು ಬರಬೇಕಾಗಿತ್ತು ಆದರೆ ನಮ್ಮ ವಿರುಪಾಕ್ಷಿ ಹೇಳಿದ ಹಾಗೆ ತಂತಿ ಮತ್ತು ಅಂಚೆ ಇಲಾಖೆ ಮುಷ್ಕರ ನಡೀತಾ ಇದೆ. ಅದು ಒಂದು ಕಾರಣ. ಇನ್ನೊಂದು ಕಾರಣ ಭಯ. ಸ್ಟೇಟ್ ಕಮಿಟಿಯನ್ನ ವಿರೋಧ ಕಟ್ಟಿಕೊಂಡ್ರೆ ಏನೆಂಬ ಭಯ.

ನಾವಿರೋದಿಲ್ಲ ಏನದು? ಭೂತನಾ? ದೆವ್ವನಾ? ಕೇವಲ ಹತ್ತು ಜನ ನಾವು – ನನಗೆ ಇವತ್ತೂ ನೆನಪಿದ. ಅದನ್ನ ನೆನಸಿಕೊಂಡ್ರೆ ನನಗೆ ನಿದ್ರೆ ಬರೋದಿಲ್ಲ. ಚಂದ್ರಗುತ್ತಿಯಲ್ಲಿ ನನ್ನ ಜೊತೆಗಿದ್ದದ್ದು 40 ಜನ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು. ಆದರೆ ಇಡೀ ಜಾತ್ರೆಯಲ್ಲಿ ಒಂದೂವರೆ ಲಕ್ಷ ಜನ. ಕೇವಲ 40 ಜನ ಒಂದೂವರೆ ಲಕ್ಷ ಜನಾನ ಎದುರಿಸಿದ್ದೀವಿ, ಏನದು ಚೈತನ್ಯ? ಏನದು ಧೈರ್ಯ? ಆ ಒಂದೂವರೆ ಲಕ್ಷ ಜನ ತಲಾ ಒಂದು ಕೈ ಮುಟ್ಟಿದರೆ ಸಾಕು ನಾವೆಲ್ಲಾ ಚೆನ್ನಾಗಿ ಚಪ್ಪಡಿಯಾಗಿ ಹೋಗ್ಬಿಡುತ್ತಿದ್ದೆವು. ಬೆತ್ತಲೆ ಹೋದವರಿಗೆ ಹಿಡಿದು ಒಂದು ಸೀರೆ ಉಡಿಸಿದ್ದೇವೆ. ಯಾವ ಧೈರ್ಯ ನಮ್ಮನ್ನ ಕಾಡ್ತಾ ಇತ್ತಾಗ? ಆದರೆ ಈ ಹೇಡಿತನ ಯಾಕೆ? ಮಂಡ್ಯ ಜಿಲ್ಲೆಯಲ್ಲಿ ಕಾಡುಕೊನ ಹಳ್ಳಿಯಲ್ಲಿ ಒಬ್ಬ ದಲಿತನನ್ನ ಹೊಡೆದದ್ದಕ್ಕಾಗಿ ಇಡೀ ಒಕ್ಕಲಿಗರ ವಿರುದ್ಧವಾಗಿ ಸುಮಾರು 150 ಜನ ಚಳವಳಿ ಮಾಡಿದ್ದೂ ಉಂಟು. ಅವರನ್ನ ಎದುರಿಸಿ ಓಡಿಸಿದ್ದೂ ಉಂಟು. ಇವತ್ತು ಒಕ್ಕಲಿಗರ ಕಾಲಿಡ್ಕೊಂಡು ಹೋಗೋದೇಕೆ? ಒಕ್ಕಲಿಗರೆಲ್ಲಾ ಕೆಟ್ಟವರೂ ಅಂತ್ಹೇಳೋದಿಲ್ಲ ನಾನು. ಒಳ್ಳೆಯವರಿದ್ರೆ ಒಳ್ಳೆಯವರನ್ನ ತಗೋಳೋಣ. ಆದರೆ ಸಮಾಜದ ಪರಿವರ್ತನೆ ವಿರುದ್ಧ ಯಾರು ನಡೀತಾರೊ ಆ ಶಕ್ತಿ ವಿರುದ್ಧವಾಗಿ ನಿರಂತರ ಸಂಘರ್ಷ ಮಾಡೋದು ನಮ್ಮ ಕೆಲಸವಾಗಿದೆ. ಇವತ್ತು ನಾವು ಯಾವ ಜನ ನಮ್ಮನ್ನ ಹೊಡೆದಿದ್ದಾರೋ, ಯಾವ ಜನ ನಮ್ಮನ್ನು ತುಳಿದಿದ್ದಾರೋ, ಯಾರ ವಿರುದ್ಧ ಚಳವಳಿ ಮಾಡಿದ್ದೇವೋ ಅವರ ಹತ್ತಿರವೇ ಹೋಗ್ತಾ ಇದ್ದೇವೆ ಎಂತಹ ಡಿಗ್ರೆಡೇಷನ್ ಇದು.

PC : Kannada News-News18

ದಲಿತ ಸಂಘರ್ಷ ಸಮಿತಿಗೆ ಮತ್ತೆ ಚೈತನ್ಯ ಬರಬೇಕು. ಸ್ವಾಭಿಮಾನದ ಚೈತನ್ಯ ಬರಬೇಕು, ಆತ್ಮಗೌರವದ ಚೈತನ್ಯ ಬರಬೇಕು, ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ ಮತ್ತು ಏನೇ ಕಷ್ಟ ಆದರೂ ಕೂಡ ನಾನದನ್ನ ನಿಭಾಯಿಸ್ತಿನೀ ಅನ್ನತಕ್ಕಂತ ಒಂದು ಛಲ ದಲಿತ ಸಂಘರ್ಷ ಸಮಿತಿಯಲ್ಲಿ ಬರಬೇಕು. ಆ ಚೈತನ್ಯ ತುಂಬಲಿಕ್ಕಾಗಿ ಇವತ್ತು ಈ ಸಭೆಯನ್ನು ನೀವು ಕರೆದಿದ್ದೀರಿ ಆದರೆ ಯಾರಿಗೆ ಚೈತನ್ಯ ಬರಬೇಕು ಅಂತ್ಹೇಳಿದೆವೋ ಅಂತಹವರೇ ಚೈತನ್ಯ ಕಳಕೊಂಡುಹೋದಾಗ ನೀವೇನ್ಮಾಡಬೇಕು? ನಿಮ್ಮ ಹಾದಿ ಹಿಡ್ಕೊಂಡು ನೀವು ಹೋಗಬೇಕಾಗುತ್ತೆ. ಯಾರು ಈ ಬಿಡುಗಡೆಯ ರಥವನ್ನ, ಯಾರು ಈ ಬಿಡುಗಡೆಯ ತೇರನ್ನ ಏಳದೇ ಏಳೀತಿನಿ ಅಂತ ತೀರ್ಮಾನ ಮಾಡ್ತಾರೋ ಅವರು ಎಳೀಲಿ, ಹೆದರಿಕ್ಕೊಂಡು ಹೋಗೋರು ಹೋಗಲಿ. ಅವರು ಬರಲಿಲ್ಲ, ಇವರು ಬರಲಿಲ್ಲಾ, ಅಂತ ನೀವು ಮಾತ್ರ ಹಿಂದೇಟು ಹಾಕಬೇಡಿ, ಈ ರಥವನ್ನ ಎಳೀಬೇಕು, ಈ ಬಿಡುಗಡೆಯ ಹೋರಾಟ ಇದೆಯಲ್ಲಾ ಇದು ಮಾತ್ರ ಸರಳವಾಗಿಲ್ಲ. ತುಂಬಾ ತುಂಬಾ ಕಷ್ಟದ ಮತ್ತು ಅತ್ಯಂತ ಮುಳ್ಳಿನ ಹಾದಿ. ಆದರೂ ಕೂಡ ಇದನ್ನ ತುಳೀಲೇಬೇಕಾಗಿದೆ. ನಾವು ಅದನ್ನು ಒಗ್ಗಟ್ಟಿನಿಂದ ತುಳಿಬೇಕಾಗಿದೆ. ಒಬ್ಬ ಇದ್ದರೆ ಅಧೈರ್ಯ ಹುಟ್ಟುತ್ತೆ, ಎಲ್ಲರನ್ನೂ ಸೇರಿಸಿಕ್ಕೊಂಡು ಹೋಗಬೇಕಾಗುತ್ತೆ.

ದಲಿತ ಸಂಘರ್ಷ ಸಮಿತಿ ಮೀಸಲಾತಿಯನ್ನ ಸರಿಯಾಗಿ ಅರ್ಥ ಮಾಡ್ಕೊಬೇಕು ನಾವು. ಉತ್ತರ ಭಾರತದಲ್ಲಿ ಸಿಖ್ಖರಿಗೆ ಮೀಸಲಾತಿ ಕೊಟ್ರು. ಯಾಕೆಂದರೆ ದಲಿತ ಸಿಖ್ಖರು ಅಷ್ಟೇ ಅವಮಾನವನ್ನ ಅನುಭವಿಸ್ತಾ ಇದ್ದಾರೆ ಅಂತ್ಹೇಳಿ ಕೊಟ್ರು. 1992ರಲ್ಲಿ ಮಹಾರಾಷ್ಟ್ರದಲ್ಲಿ ನಿಯೋ ಬೌದ್ಧರಿಗೆ ಮೀಸಲಾತಿಯನ್ನ ಕೊಟ್ರು. ಮಹಾರಾಷ್ಟ್ರದಲ್ಲಿ ನಿಯೋ ಬೌದ್ಧರಿಗೆ ಮೀಸಲಾತಿಯನ್ನ ಕೊಡಲೇಬೇಕು ಅನ್ನೋದರ ಪರವಾಗಿ ದಲಿತ ಸಂಘರ್ಷ ಸಮಿತಿ ಇತ್ತು. ನಾವು ಹೋರಾಟ ಕೂಡ ಮಾಡಿದ್ವಿ, ಸಿಖ್ಖರಿಗೆ ಕೊಡಬೇಕು ಕೊಟ್ಟಿದ್ದಾರೆ ಒಪ್‌ತೀವಿ, ನಿಯೋ ಬೌದ್ಧರಿಗೆ ಕೊಟ್ಟಿದಾರೆ ಒಪ್‌ತೀವಿ, ಆದರೆ ಕ್ರಿಶ್ಚಿಯನ್ನರಿಗೆ ಮಾತ್ರ ಏಕೆ ಕೊಡಬಾರದು? ದಲಿತ ಸಂಘರ್ಷ ಸಮಿತಿ ನೀತಿ ಏನು? ಸ್ನೇಹಿತರೇ ಒಂದು ಮಾತನ್ನ ಹೇಳ್ತೇನಿ. ಮೀಸಲಾತಿ ಅಂತ 18% ಏನಿದೆಯಲ್ಲಾ ಇದು ನಿಮಗೆ ದಕ್ಕಬೇಕಾದರೆ ಪೊಲಿಟಿಕಲ್ ಪವರ್ ಬೇಕೇ ಬೇಕು. ಇವತ್ತು ಕರ್ನಾಟಕದಲ್ಲಿ 50 ವರ್ಷದ ನಂತರವೂ 18% ಮೀಸಲಾತಿಯಲ್ಲಿ ಕೇವಲ 8.9% ಮಾತ್ರ ತುಂಬಿದಾರೆ ವಿನಃ ಪೂರ್ತಿ ತುಂಬಿಲ್ಲ, ಏಕೆಂದರೆ ಮೇಲು ವರ್ಗದವರ ಕೈಯಲ್ಲಿ ಅಧಿಕಾರ ಇರೋದ್ರಿಂದ.

ಬೇಡ ಜಂಗಮರು, ಲಿಂಗಾಯತ ಜಂಗಮರು ಅಂತ್ಹೇಳಿಕೊಂಡು ಅನೇಕ ಕಡೆ ಮೀಸಲಾತಿಯನ್ನ ಲಪಟಾಯಿಸ್ತಾ ಇದಾರೆ. ಅದನ್ನ ಸರಕಾರ ತಡೆಗಟ್ತಾ ಇಲ್ಲಾ. ಒಂದು ಕಡೆಗೆ ಮೀಸಲಾತಿ ತುಂಬೋದಿಲ್ಲ, ಇನ್ನೊಂದು ಕಡೆಯಿಂದ ಬೇರೆಯವರು ಬಂದು ಅದನ್ನ ತಿನ್ನುತಾ ಇದ್ರೆ ತಿನ್ನಲಿಕ್ಕೆ ಬಿಡ್ತಾರೆ. ಇವು ಎರಡನ್ನೂ ತಡೆಗಟ್ಟಬೇಕಾದ್ರೆ ನೀವು ಚಳುವಳಿ ಮಾಡಿದ್ರೆ ಮಾತ್ರ ಸಾಲಲ್ಲ, ಪೊಲಿಟಿಕಲ್ ಪವರ್ ನಿಮ್ಮ ಕೈಲಿ ಹಿಡ್ಕೊಬೇಕು.

ಒಂದು ವೇಳೆ ನನ್ನ ಕೈಲಿ ಅಧಿಕಾರ ಸಿಕ್ಕರೆ 100% ಮೀಸಲಾತಿಯನ್ನ 6 ತಿಂಗಳಲ್ಲಿ ಪೂರ್ತಿ ಮಾಡ್ತೀವಿ. ಅದು ನಮ್ಮ ಕರ್ತವ್ಯ. ಕರ್ನಾಟಕದಲ್ಲಿ ಲ್ಯಾಂಡ್‌ಅನ್ನು 6 ತಿಂಗಳಲ್ಲಿ ರಿವ್ಯೂ ಮಾಡಿ 6 ತಿಂಗಳಲ್ಲಿ ಎಲ್ಲಾ ಕೆಳಜಾತಿಗಳಿಗೆ ಭೂಮಿ ಹಂಚಿಕೊಡೋ ಜವಾಬ್ದಾರಿ ನಮ್ಮ ಮೇಲಿದೆ, ನಾವು ಮಾಡ್ತೇವೆ. ಇದು ನಮ್ಮ ಪೊಲಿಟಿಕಲ್ ಕಮಿಟ್‌ಮೆಂಟ್. ಈ ಅಧಿಕಾರ ಸಿಕ್ಕದೆ, ನೀವು ಮೀಸಲಾತಿ ಪಾಲು ಮಾಡೋಕಾಗಲ್ಲ, ಯಾಕೆಂದರೆ ಯಾರು ನಿಮ್ಮನ್ನ ತುಳಿತಾ ಇದಾನೋ ಅವನ ಹತ್ತಿರ ಹೋಗಿ ಅಣ್ಣಾ ತುಳೀಬ್ಯಾಡ ಅಂತ್ಹೇಳಿದ್ರೆ ಅವನು ಏನು ಮಾಡ್ತಾನೆ ಹೇಳಿ? ನಿಮ್ಮನ್ನ ತುಳಿಯೋದ್ರಲ್ಲೆ ಅವನಿಗೆ ಸುಖ ಇರೋದು. ಅವನ ಕಾಲಿಡ್ಕೊಂಡು ತುಳೀಬ್ಯಾಡಣ್ಣಾ ತುಳೀಬ್ಯಾಡಣ್ಣಾ ಅಂತೇಳಿದ್ರೆ ಅವನೇನು ಮಾಡ್ತಾನೆ? ತುಳಿತಾನೇ ಇರ್ತಾನೆ. ತುಳಿಯೊ ಕಾಲನ್ನೇ ಕಿತ್ತರೆ ಆ ಸ್ಥಾನದಲ್ಲಿ ನೀನು ಕೊತರೆ ನಿನ್ನ ರಕ್ಷಣೆ ಸಾಧ್ಯ.?

ನಾವು ಈ ಜಾತಿಗಳನ್ನ ಬೆಸೆಯುವಂತ ಕೆಲಸವನ್ನ ಮಾಡಬೇಕು. ಬೌದ್ಧ ಧರ್ಮದಲ್ಲಿ ಅಸ್ಪೃಶ್ಯರನ್ನ ತಗೋಬೇಕು ತಕೊಂಡಿದ್ದೇವೆ. ಕ್ರಿಶ್ಚಿಯನ್ನರಲ್ಲಿ ಅಸ್ಪಶ್ಯರನ್ನ ತಕೋಬೇಕು. ಯಾಕಂದ್ರೆ ನಮ್ಮ ಶಕ್ತಿ ಜಾಸ್ತಿಯಾಗುತ್ತೆ. ರಾಜಕೀಯ ಅಧಿಕಾರ ಅಷ್ಟಷ್ಟು ನಮಗೆ ಹತ್ತಿರ ಆಗುತ್ತೆ, ರಾಜಕೀಯ ಅಧಿಕಾರ ಹಿಡ್ಕೊಂಡು ನಾವು ಸಂಪತ್ತಿನಲ್ಲಿ ಪಾಲು ತಕೋಬೇಕು. ರಾಜಕೀಯ ಅಧಿಕಾರ ಹಿಡ್ಕೊಂಡಾಗ ಮಾತ್ರ ಸಂಪತ್ತು, ಸುಲಭ ಆಗುತ್ತ ನಿಮಗೆ. ಇಲ್ಲದೇ ಹೋದರ ಸಂಪತ್ತಿನ ಪಾಲು ನಿಮಗೆ ಸಿಕ್ಕೋದೇ ಇಲ್ಲ. ಇದನ್ನ ಅರ್ಥ ಮಾಡಿಕೊಳ್ಳದೇ ದಲಿತ ಸಂಘರ್ಷ ಸಮಿತಿ ಇವತ್ತು ಒಡೆಯುವ ಕೆಲಸ ಮಾಡ್ತಾ ಇದೆ. ಅವರನ್ಯಾಕೆ ಸೇರಿಸ್ತೀರಿ, ಇವರನ್ಯಾಕೆ ಸೇರಿಸ್ತೀರಿ ಅಂತ ಕೇಳುವ ನೈತಿಕತೆ ಇದೆಯಾ ದಲಿತ ಸಂಘರ್ಷ ಸಮಿತಿಗೆ? ನೀವು ನಿಯೋ ಬೌದ್ಧರಿಗೆ ಯಾಕೆ ಕೊಡಬೇಕು ಅಂತ್ಹೇಳ್ತಿರಿ, ಸಿಖ್ಖರಿಗೆ ಯಾಕೆ ಕೊಡಬೇಕು ಅಂತ್ಹೇಳ್ತೀರಿ. ಅಂಬೇಡ್ಕರ್ ಹೇಳ್ತಾರೆ ಕಳಚಿ ಹೋದ ಕೊಂಡಿಗಳನ್ನ ಬೆಸಯುವುದರಲ್ಲಿ ನಮ್ಮ ರಾಜಕೀಯ ಶಕ್ತಿ ಇದೆ. ಎಲ್ಲೆಲ್ಲಿ ಕಳಚಿ ಹೋಗಿದ್ದರೂ ನಮ್ಮ ಜನ ಅವರನ್ನ ಸೇರಿಸ್ಕೊಂಡು ನಾವು ಶಕ್ತಿಯಾಗಿ ಬೆಳೀಬೇಕು.

ಈ ದೇಶವನ್ನ ಆಳಲಿಕ್ಕೆ ಹುಟ್ಟಿದ ಜನ ನಾವು. ಅಂಬೇಡ್ಕರ್ ಏನು ಹೇಳಿದರು? “ನಿಮ್ಮ ಮನೆ ಗೋಡೆ ಮೇಲೆ ಬರಕೊಳ್ಳಿ. ಈ ರಾಷ್ಟ್ರವನ್ನು ಆಳಲಿಕ್ಕಾಗೆ ಹುಟ್ಟಿದವರು ನೀವು ಅಂತ್ಹೇಳಿ”. ಆದರೆ ನಿಮಗೆ ಆಳಲಿಕ್ಕೆ ಆಗ್ತಿಲ್ಲ ಯಾಕೆಂದರೆ ಒಡೆದು ಒಡೆದು ಒಡೆದು ಛಿದ್ರವಾಗಿ ಹೋಗಿದ್ದೇವೆ! ಒಡೆದು ಹೋದ ಈ ಮನಸ್ಸುಗಳನ್ನು ಒಟ್ಟಿಗೆ ತಂದು ಒಂದು ರಾಜಕೀಯ ಶಕ್ತಿ ಮಾಡೋದರಲ್ಲಿ, ನೀವು ಈ ರಾಷ್ಟ್ರದ ಸಂಪತ್ತಿನಲ್ಲಿ ಪಾಲು ತಗೊಳೋದಿಕ್ಕೆ ಸಾಧ್ಯತೆ ಇದೆ. ಅದಕ್ಕೆ ದ.ಸಂ.ಸ. ಪುನಶ್ಚೇತನಗೊಳ್ಳಬೇಕು. ಅದು ಪುನರ್‌ರೂಪಿತಗೊಳ್ಳಬೇಕು. ಮೊದಲಿನ ವಿರಾಟ್ ಶಕ್ತಿಯನ್ನು ಅದು ಪಡಕೊಬೇಕು. ಯುವಕರಲ್ಲಿ ಒಂದು ಹೊಸ ಹುಮ್ಮಸ್ಸು ಜಾಗೃತಗೊಳ್ಳಬೇಕು. ಅದಕ್ಕಾಗೆ ಈ ಸಮಾವೇಶವನ್ನ ಕರೆದಿದ್ದಾರೆ. ಇದರ ಮೇಲೆ ಚರ್ಚೆಗಳು ಆರಂಭವಾಗಲಿ. ಇನ್ನೂ ಒಂದು ಗಂಟೆಯಾಗಲೀ ಎರಡು ಗಂಟೆಯಾಗಲಿ, ತಾವು ಕೂತಿದ್ದು ಚರ್ಚೆಯಲ್ಲಿ ಪಾಲ್ಗೊಳ್ಳಬೇಕು. ನಮಗೆ ಸಂಘರ್ಷದ ಹಾದಿ ಸರಿನೋ? ಅಥವಾ ಹೊಂದಾಣಿಕೆ ಹಾದಿ ಸರಿನೋ? ತೀರ್ಮಾನ ಆಗಬೇಕು. ನಮಗೆ ರಾಜಕೀಯ ಶಕ್ತಿ ಅನಿವಾರ್ಯ ಇದೆಯಾ? ಇದೆ ಅನ್ನೋದಾದರ ಎಂಥಹ ಶಕ್ತಿ ಅನಿವಾರ್ಯ ಇದೆ? ಎಂಥಹ ಶಕ್ತಿಗಳ ಜೊತೆಗೆ ಮತ್ತು ಹೇಗೆ ನಮ್ಮನ್ನ ಗುರ್ತಿಸಿಕೊಳ್ಳಬೇಕು. ಏಕೆಂದರೆ ಇದು ಸರಳವಾದ ವಿಚಾರ ಅಲ್ಲ, ಇವತ್ತು ನಾವು ಕರ್ನಾಟಕದಲ್ಲಿ 20 ವರ್ಷ ಹಳ್ಳಿಗಳಲ್ಲಿ ಒಕ್ಕಲಿಗರನ್ನ ಲಿಂಗಾಯತರನ್ನ ಎದ್ದು ಕೂರಿಸಿಬಿಟ್ಟಿದ್ದೇವೆ. ಅವರು ಎಚ್ಚರವಾಗಿ ಕೂತುಬಿಟ್ಟಿದ್ದಾರೆ. ನಾವು ಏನು ಮಾಡ್ತಾ ಇದ್ದೀವಿ ಈವಾಗ? ಹುಡುಗಾಟ ಮಾಡ್ತಾ ಇದ್ದೀವಿ ನಾವು. ಅದು ಆಗಕೂಡದು. ನಾವೆಲ್ಲಾ ಗಂಭೀರವಾಗಿ ಇದನ್ನು ಚರ್ಚೆ ಮಾಡಬೇಕು.

ಜೈ ಭೀಮ್… ಜೈ ಭಾರತ್

(ಈ ಭಾಷಣದ ಪಠ್ಯವನ್ನು ರುದ್ರಪ್ಪ ಹನಗವಾಡಿಯವರು ಸಂಪಾದಿಸಿರುವ ’ಸಂಘರ್ಷದ ರೂವಾರಿ ಪ್ರೊ.ಬಿ.ಕೆ’ ಪುಸ್ತಕದಿಂದ ತೆಗೆದುಕೊಳ್ಳಲಾಗಿದೆ.)


ಇದನ್ನೂ ಓದಿ: ಉತ್ತರಪ್ರದೇಶ: 2ನೆ ಬಾರಿ ಮಾಸ್ಕ್ ನಿಯಮ ಉಲ್ಲಂಘಿಸಿದರೆ 10 ಸಾವಿರ ರೂ. ದಂಡ- ಭಾನುವಾರಗಳಂದು…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...