2022-23 ರ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕಾಗಿ ಏನನ್ನು ಘೋಷಿಸಲಾಗಿತ್ತೊ ಅವುಗಳನ್ನು ಪೂರ್ಣಗೊಳಿಸುತ್ತೇವೆ ಎಂದಷ್ಟೆ 2023-24ರ ಈ ವರ್ಷದ ಬಜೆಟ್‌ನಲ್ಲಿ ಹೇಳಲಾಗಿದೆ ಹೊರತು, ಹೊಸತೇನೂ ಇಲ್ಲ ಎಂದು ಶಿಕ್ಷಣ ತಜ್ಞ ವಿ.ಪಿ ನಿರಂಜನರಾಧ್ಯ ಅಭಿಪ್ರಾಯಪಟ್ಟಿದ್ದಾರೆ.
ಶಿಕ್ಷಣ ಕ್ಷೇತ್ರದ ಜ್ವಲಂತ ಸಮಸ್ಯೆಗಳಿಗೆ ಈ ಬಜೆಟ್‌ನಲ್ಲಿ ಯಾವುದೇ ಪರಿಹಾರ ಘೋಷಿಸಿಲ್ಲ. ಆಡಳಿತ ಸುಧಾರಣಾ ಆಯೋಗ-2 ಅಪೌಷ್ಟಿಕತೆ ದೊಡ್ಡ ಮಟ್ಟದಲ್ಲಿದೆ ಎಂದು ವರದಿ ನೀಡಿತ್ತು. ಹಾಗಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ವಾರಕ್ಕೆ 5 ದಿನ ಮೊಟ್ಟೆ ಕೊಡಬೇಕು, ಸಾಮಾನ್ಯ ಮಕ್ಕಳಿಗೆ ವಾರಕ್ಕೆ 2 ದಿನ ಮೊಟ್ಟೆ ಕೊಡಬೇಕು ಎಂಬದು ಶಿಫಾರಸ್ಸು ಮಾಡಿತ್ತು. ಅದರ ಪ್ರಸ್ತಾಪವೇ ಬಜೆಟ್‌ನಲ್ಲಿಲ್ಲ ಎಂದರು.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 1,41,000 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಅದರ ಬಗ್ಗೆ ಮುಖ್ಯಮಂತ್ರಿಗಳು ಪ್ರಸ್ತಾಪ ಮಾಡಿಲ್ಲ. ಹಿಂದೆ 15,000 ಶಿಕ್ಷಕರ ನೇಮಕ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದರೂ ಆ ಪ್ರಕ್ರಿಯೆಯೇ ಇನ್ನು ಪೂರ್ಣಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅನುದಾನ ರಹಿತ ಕನ್ನಡ ಶಾಲೆಗಳು 1994ರಿಂದಲೂ ಅನುದಾನ ಕೊಡಿ ಎಂದು ಕೇಳುತ್ತಾ ಬಂದಿದ್ದಾರೆ. ಅವು ಕನ್ನಡ ಶಾಲೆಗಳಾಗಿದ್ದು ಅನುದಾನ ನೀಡಿದ್ದರೆ ಒಳ್ಳೆಯದಾಗುತ್ತಿತ್ತು. ಆದರೆ ಈ ಬಜೆಟ್‌ನಲ್ಲಿಯೂ ಸರ್ಕಾರ ಅದಕ್ಕೆ ಸ್ಪಂದಿಸಿಲ್ಲ. ಇನ್ನು ಶಿಕ್ಷಕರು ಸೇರಿದಂತೆ ಹಲವು ಸರ್ಕಾರಿ ನೌಕರರು ಹಳೇ ಪಿಂಚಣಿ ವ್ಯವಸ್ಥೆಗಾಗಿ ದೊಡ್ಡ ಹೋರಾಟ-ಆಂದೋಲನ ನಡೆಸಿದ್ದರು. ಅದನ್ನು ಸಹ ಈ ಸರ್ಕಾರ ನಿರ್ಲಕ್ಷಿಸಿದೆ ಎಂದರು.
ಇದನ್ನೂ ಓದಿ: ದೂರದೃಷ್ಟಿಯಿಲ್ಲದ, ಕೃಷಿಕರ ಪರವಿಲ್ಲದ ಗುಮಾಸ್ತ ತಯಾರಿಸಿದ ಲೆಕ್ಕಾಚಾರದ ಬಜೆಟ್: ಬಡಗಲಪುರ ನಾಗೇಂದ್ರ
ಆರ್‌ಟಿಇ ಕಾಯ್ದೆಯ ಅನುಸರಣೆ ಕೇವಲ 23% ಇದೆ. ಅದು ಕನಿಷ್ಟ 50%ಗೆ ಏರಿಸಬೇಕೆಂಬುದು ನಮ್ಮ ಹಕ್ಕೊತ್ತಾಯವಾಗಿತ್ತು. ಆದರೆ ಅದನ್ನೂ ಪ್ರಸ್ತಾಪಿಸಿಲ್ಲ. ಇನ್ನು ವರ್ಷವೀಡಿ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಹೋದಬಂದಲೆಲ್ಲಾ ಮಾತನಾಡುತ್ತಿದ್ದ ಬಿಜೆಪಿ ಸರ್ಕಾರ ಬಜೆಟ್‌ನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಎಂಬ ಪದವನ್ನೇ ಬಳಸಿಲ್ಲ. 5ನೇ ತರಗತಿಯವರೆಗೂ ಕನ್ನಡ ಮಾಧ್ಯಮ ತರುತ್ತೇವೆ ಎಂಬುದಾಗಲಿ, ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸುತ್ತೇವೆ ಎಂಬುದೆಲ್ಲ ಬರೀ ಸುಳ್ಳು ಎಂಬುದನ್ನು ಈ ಬಜೆಟ್ ನಿರೂಪಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2022-23 ನೇ ಸಾಲಿನ ಆಯವ್ಯಯದಲ್ಲಿ ಶಿಕ್ಷಣಕ್ಕೆ ರೂ.31,980 ಕೋಟಿಯನ್ನು ಮೀಸಲಿಡಲಾಗಿತ್ತು. 2022-23 ನೇ ಸಾಲಿನ ಒಟ್ಟು ಆಯವ್ಯಯದಲ್ಲಿ ಶಿಕ್ಷಣದ ಪಾಲು ಶೇಕಡ 12. ಈ ಬಾರಿ ಶಿಕ್ಷಣಕ್ಕೆ 37,960 ಕೋಟಿಯನ್ನು ಮೀಸಲಿಡಲಾಗಿದೆ. ಒಟ್ಟು ಆಯವ್ಯದಲ್ಲಿ ಶಿಕ್ಷಣದ ಪಾಲು ಶೇಕಡ 13.1. ಯಥಾರ್ಥದಲ್ಲಿ, ಶಿಕ್ಷಣಕ್ಕೆ ಕಳೆದ ಬಾರಿಗಿಂತ 5980 ಕೋಟಿ ಹೆಚ್ಚಿನ ಅನುದಾನ ಸಿಕ್ಕಿದ್ದು, ಒಟ್ಟು ಆಯವ್ಯಯದಲ್ಲಿ ಶೇಕಡಾ 13.1 ದೊರೆತಿದ್ದು, ಶೇಕಡಾವಾರು ಲೆಕ್ಕದಲ್ಲಿ 1.1 ರಷ್ಟು ಹೆಚ್ಚಿದೆ.
ಇದು ತೋರಿಕೆಗೆ ಜಾಸ್ತಿಯೆನಿಸಿದರೂ, ಬಹುತೇಕ ಪಾಲು ಈಗಿನ ಶಿಕ್ಷಕರ ಸಂಬಳ, ಹೆಚ್ಚಿಸಿರುವ ಗೌರವ ಧನ ಹಾಗು ಹಿಂದಿನ ಸಾಲಿನಲ್ಲಿ ಮುಂದುವರಿದಿರುವ ಕಾಮಗಾರಿಗಳಿಗೆ ವ್ಯಯವಾಗುತ್ತದೆ. ಆದ್ದರಿಂದ, ಜ್ವಲಂತ ಸಮಸ್ಯೆಗಳಾಗಿರುವ ಶಿಕ್ಷಣ ಹಕ್ಕು ಕಾಯಿದೆಯ ಈಗಿನ ಶೇಕಡ 23.6 ಅನುಸರಣೆಯನ್ನು ಕನಿಷ್ಠ 50 ಕ್ಕೆ ಏರಿಸಲಾಗಲಿ, ಸರಕಾರಿ ಶಾಲೆಗಳಲ್ಲಿ ಖಾಲಿ ಇರುವ 1,41,358 ಶಿಕ್ಷಕರ ಖಾಲಿ ಹುದ್ದೆಗಳನ್ನು ತುಂಬುವ ಭರವಷೆಯಾಗಲಿ, ತೀವ್ರ ಅಪೌಷ್ಠಿಕತೆಯನ್ನು ತೊಡೆದು ಹಾಕಲು ಆಡಳಿತ ಸುಧಾರಣಾ ಆಯೋಗ -೨ರ ವರದಿಯು ಪ್ರಸ್ತಾಪಿಸಿದಂತೆ ಮಕ್ಕಳಿಗೆ ವಾರದಲ್ಲಿ 5 ದಿನವೂ ಮೊಟ್ಟೆ ನೀಡುವ ಭರವಷೆಯಾಗಲಿ ಅನುದಾನಕ್ಕಾಗಿ ಕಾಯುತ್ತಿರುವ ಕನ್ನಡ ಅನುದಾನರಹಿತ ಶಾಲೆಗಳಿಗೆ ಅನುದಾನ ಒದಗಿಸುವ ಅಥವಾ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಯಾವ ಅಂಶಗಳೂ ಆಯವ್ಯದಲ್ಲಿ ಕಾಣುತ್ತಿಲ್ಲ.
ಒಟ್ಟಾರೆಯಾಗಿ ಹಳೆಯ ಬಜೆಟ್‌ನ ಎರಡನೇ ಆವೃತ್ತಿ ಇದಾಗಿದೆ. ಇದು ಹೊಸ ಬಜೆಟ್ ಅಲ್ಲವೇ ಅಲ್ಲ. 2022-23 (ಎರಡನೇ ಆವೃತ್ತಿ) ಆಗಿದೆ ಎಂದು ವಿ.ಪಿ ನಿರಂಜನರಾಧ್ಯರು ತಿಳಿಸಿದರು.
ಇದನ್ನೂ ಓದಿ: ಬೊಮ್ಮಾಯಿ ಘೋಷಿಸಿದ 775 ಕೋಟಿ ರೂ ಅನುದಾನ: ಫ್ರೀಡಂ ಪಾರ್ಕ್‌ನಲ್ಲಿ ನಿಲ್ಲದ ಹೋರಾಟ


