ಗೋವಾದಲ್ಲಿ ಇತ್ತೀಚಿಗೆ ನಡೆದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ, ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದ ತೀರ್ಪುಗಾರರ ಮುಖ್ಯಸ್ಥ ಇಸ್ರೇಲಿ ನಿರ್ದೇಶಕ ನದಾವ್ ಲ್ಯಾಪಿಡ್ ಅವರು ‘ದ ಕಾಶ್ಮೀರ್ ಫೈಲ್ಸ್’ ಚಲನಚಿತ್ರದ ಬಗ್ಗೆ ಹೇಳಿದ್ದ ಮಾತುಗಳು ಸಂಘ ಪರಿವಾರ, ಕೇಂದ್ರ ಬಿಜೆಪಿ ಸರ್ಕಾರ ಮತ್ತು ಚಲನಚಿತ್ರೋತ್ಸವಕ್ಕೆ ಮುಜುಗರವನ್ನುಂಟುಮಾಡಿದ್ದವು.
ಚಿತ್ರೋತ್ಸವದಲ್ಲಿ ಪ್ರಶಸ್ತಿಗಾಗಿ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಸೆಣೆಸಿದ್ದ ಬಲಪಂಥೀಯ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯವರ ‘ದ ಕಾಶ್ಮೀರ್ ಫೈಲ್ಸ್’ ಆಯ್ಕೆಯಾಗಿದ್ದರ ಬಗ್ಗೆ ಲ್ಯಾಪಿಡ್ ಅಘಾತ ವ್ಯಕ್ತಪಡಿಸಿದ್ದರು. ತಮ್ಮ ಸಮಾರೋಪ ಭಾಷಣದಲ್ಲಿ ಚಲನಚಿತ್ರೋತ್ಸವದ ಮಹತ್ವ ಮತ್ತು ಒಳ್ಳೆಯ ಸಂಗತಿಗಳನ್ನು ಮೆಚ್ಚಿ ಹೊಗಳಿದ್ದ ಅವರು, ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 15 ಸಿನಿಮಾಗಳಲ್ಲಿ ‘ದ ಕಾಶ್ಮೀರ್ ಫೈಲ್ಸ್’ ಬಗ್ಗೆ ಮಾತ್ರ ಆಕ್ಷೇಪ ವ್ಯಕ್ತಪಡಿಸಿದ್ದರು: “14 ಸಿನಿಮಾಗಳು ಅತ್ಯುತ್ತಮ ಸಿನಿಮಾ ಅನುಭವ ನೀಡಿದಂತಹವು. ಅವು ವಿಶಾಲವಾದ ಚರ್ಚೆಗೆ ಅನುವುಮಾಡಿಕೊಟ್ಟವು. ನಾವೆಲ್ಲಾ 15ನೇ ಸಿನಿಮಾದ ಬಗ್ಗೆ ಅಘಾತಗೊಂಡೆವು ಮತ್ತು ಕನಲಿದೆವು. ‘ದ ಕಾಶ್ಮೀರ್ ಫೈಲ್ಸ್’ ಅಸಭ್ಯ ಪ್ರೊಪೋಗಾಂಡಾ ಸಿನಿಮಾ ಎಂದೆನಿಸಿತು. ಇಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗಕ್ಕೆ ಸೂಕ್ತವಲ್ಲ ಅನ್ನಿಸಿತು” ಎಂದಿದ್ದರು.

ಕಾಶ್ಮೀರದಿಂದ ಪಂಡಿತರನ್ನು ಒಕ್ಕಲೆಬ್ಬಿಸಿದ ವಿಚಾರವಾಗಿ ವಾಸ್ತವ ಸಂಗತಿಗಳಿಗಿಂತಲೂ ಕಪೋಲ ಕಲ್ಪಿತ ಸುಳ್ಳುಗಳನ್ನೇ ಹೆಚ್ಚು ತುಂಬಿ ನಿರ್ದೇಶಿಸಿದ್ದ ಈ ಸಿನಿಮಾವನ್ನು ಸಂಘ ಪರಿವಾರದವರು ಅತಿರೇಕದಲ್ಲಿ ಸಂಭ್ರಮಿಸಿದ್ದರು. ಈ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುವಾಗ ಮುಸ್ಲಿಮರ ವಿರುದ್ಧ ಘೋಷಣೆ ಕೂಗುವುದರಿಂದ ಹಿಡಿದು, ಮುಸ್ಲಿಮ್ ಸಮುದಾಯವನ್ನು ಬಾಯ್ಕಾಟ್ ಮಾಡಬೇಕು ಅನ್ನುವವರೆಗೆ ಅಸಭ್ಯ ವರ್ತನೆಗೆ ಎಡೆಮಾಡಿಕೊಟ್ಟಿತ್ತು. ಹಲವು ಬಿಜೆಪಿ ಸರ್ಕಾರಗಳು ಈ ಸಿನಿಮಾಗೆ ತೆರಿಗೆ ವಿನಾಯಿತಿ ಕೊಟ್ಟಿದ್ದು ಕೂಡ ವಿವಾದಕ್ಕೆ ಕಾರಣವಾಗಿತ್ತು.
ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ‘ಪೊಲೀಸ್‌ಮ್ಯಾನ್’, ‘ದ ಕಿಂಡರ್ಗಾರ್ಟನ್ ಟೀಚರ್’ ನಂತಹ ಸಿನಿಮಾಗಳನ್ನು ನಿರ್ದೇಶಿಸಿರುವ ಖ್ಯಾತ ನಿರ್ದೇಶಕ ನದಾವ್ ಲ್ಯಾಪಿಡ್ ಮೇಲಿನ ಹೇಳಿಕೆಗಳನ್ನು ನೀಡಿದ ಮೇಲೆ ಸಂಘ ಪರಿವಾರ ಮತ್ತು ಬಿಜೆಪಿ ನದಾವ್ ವಿರುದ್ಧ ಕುಪಿತಗೊಂಡಿದ್ದವು. ನದಾವ್ ಅವರ ಹೇಳಿಕೆಯ ವಿರುದ್ಧ ಇಸ್ರೇಲಿ ರಾಯಭಾರಿ ಕೂಡ ಅಸಮಧಾನ ವ್ಯಕ್ತಪಡಿಸಿದ್ದರು.
ಈ ವಿವಾದದ ಕುರಿತು ಇಂಡಿಯಾ ಟುಡೆ ಇಂಗ್ಲಿಷ್ ಸುದ್ದಿ ಚಾನೆಲ್‌ನಲ್ಲಿ ಇತ್ತೀಚಿಗೆ ನದಾವ್ ಅವರನ್ನು ಸಂದರ್ಶಿಸಲಾಗಿತ್ತು. ಚಾನೆಲ್‌ನ ಆಂಕರ್ ರಾಹುಲ್ ಕನ್ವಾಲ್ ನಡೆಸಿದ ಸಂದರ್ಶನದ ತುಣುಕೊಂದು ಈಗ ವೈರಲ್ ಅಗಿದೆ. ಆ ವಿಡಿಯೋ ಸಂಭಾಷಣೆ ಹೀಗಿದೆ.
ರಾಹುಲ್ ಕನ್ವಾಲ್: ಎಲ್ಲಾ ತೀರ್ಪುಗಾರ ಸದಸ್ಯರು ನಿಮ್ಮ ಅನಿಸಿಕೆಯನ್ನು ಅನುಮೋದನೆ ಮಾಡಿದರು ಎಂಬುದಕ್ಕೆ ಏನು ಸಾಕ್ಷಿಯಿದೆ?
ಅದಕ್ಕೆ ನದಾವ್ ಹೀಗೆ ಪ್ರತಿಕ್ರಿಯಿಸುತ್ತಾರೆ: “ನಿಮಗೊಂದು ಸಲಹೆಯಿದೆ, ನೀವು ನಿಮ್ಮನ್ನು ಹಿರಿಯ ಪತ್ರಕರ್ತರು ಎಂದು ಅಂದುಕೊಳ್ಳುವುದರಿಂದ, ನೀವು ಫ್ರೆಂಚ್ ಮತ್ತು ಸ್ಪಾನಿಷ್ ತೀರ್ಪುಗಾರ ಸದಸ್ಯರಿಗೆ ಕರೆ ಮಾಡಿ ಕೇಳಬಹುದು”.
ರಾಹುಲ್ ಕನ್ವಾಲ್: “ಅದನ್ನು ನಾವು ಮಾಡಬಹುದು……..”
ನದಾವ್: “ಮಾಡಿ ಮಾಡಿ.. ನಿಮ್ಮ ಹತ್ತಿರ ಅವರ ಈಮೇಲ್ ಮತ್ತು ಫೋನ್ ನಂಬರ್ ಇದೆ ಅಂದುಕೊಳ್ತೀನಿ”.
Rahul Kanwal: What evidence do u have to back this claim that all jury members backed u on this.
Nadav Lapid : "I have a suggestion, Since u consider urself a serious journalist, You can call French & Spanish jury members & ask them, I guess you have their email & phone number" pic.twitter.com/LFDnE5J3s3
— Mohammed Zubair (@zoo_bear) November 30, 2022
ಹೀಗೆ ಚಲನಚಿತ್ರೋತ್ಸವದಲ್ಲಿ ಸಿನಿಮಾ ಬಗ್ಗೆ ಪಾಠ ಮಾಡಿದ ನದಾವ್ ಅವರು ಈಗ ಇಂಗ್ಲಿಷ್ ಸುದ್ದಿ ಟಿವಿ ಚಾನೆಲ್‌ನಲ್ಲಿ ಪತ್ರಿಕೋದ್ಯಮದ ಪಾಠ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಯಾವುದು ಪ್ರೊಪೋಗಾಂಡಾ ಎಂಬುವುದನ್ನು ನಿರ್ಧರಿಸುವುದು ವಿಷಯಾಧಾರಿತವಾದದ್ದು ಆಗಿದ್ದರೂ ಸಿನಿಮಾ ಬಗ್ಗೆ ತಾವಾಡಿದ ಮಾತುಗಳಿಗೆ ಬದ್ಧನಾಗಿದ್ದೇನೆ ಮತ್ತು ಅವನ್ನು ಯಾರಾದರೂ ಹೇಳಲೇಬೇಕಿತ್ತು ಎಂದು ನದಾವ್ ಹೇಳಿದ್ದಾರೆ. ಒಟ್ಟಿನಲ್ಲಿ ‘ದ ಕಾಶ್ಮೀರ್ ಫೈಲ್ಸ್’ ಸಿನಿಮಾದ ಬಗ್ಗೆ ಅಂತಾರಾಷ್ಟ್ರಿಯ ಅತಿಥಿಯ ಮಾತುಗಳಿಂದ ಮುಜುಗರ ಅನುಭವಿಸಿದ ಸಂಘ ಪರಿವಾರದ ಬೆಂಬಲಿಗರು, ಸಿನಿಮಾವನ್ನು ಸಮರ್ಥಿಸಿಕೊಳ್ಳಲು ಒದ್ದಾಡುತ್ತಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಗೋಚರಿಸುತ್ತಿದೆ.
ಇದನ್ನೂ ಓದಿ: ಹುಸಿ ಕಾಳಜಿಯ, ಪಕ್ಷಪಾತ ಧೋರಣೆಯ, ದ್ವೇಷದ ಅಜೆಂಡಾವುಳ್ಳ ’ದ ಕಾಶ್ಮೀರ್ ಫೈಲ್ಸ್’


