ಶತಮಾನಗಳಷ್ಟು ಹಳೆಯದಾದ ‘ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌’ನಲ್ಲಿ ಆಗಿರುವ ಅವ್ಯವಹಾರದ ಹಿನ್ನಲೆಯಲ್ಲಿ, ಅದರ ಏಕಸ್ವಾಮ್ಯವನ್ನು ಮುರಿಯಲು ಹಾಗೂ ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ಪಾರದರ್ಶಕತೆಯನ್ನು ತರಲು 1992 ರಲ್ಲಿ ಪ್ರಾರಂಭಿಸಲಾಗಿರುವ ಬರೊಬ್ಬರಿ 300 ಲಕ್ಷ ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿರುವ ‘ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಕ್‌(NSE )’ ಇದೀಗ ಚರ್ಚೆಯಲ್ಲಿದೆ. ಈ ಚರ್ಚೆಯ ಕೇಂದ್ರ ಬಿಂದು ಎನ್‌ಎಸ್‌ಇನಲ್ಲಿ 2013 ರಿಂದ 2016ರ ವರೆಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿದ್ದ ‘ಚಿತ್ರಾ ರಾಮಕೃಷ್ಣ’ ಆಗಿದ್ದಾರೆ.

NSE ನ ಸಿಇಒ ಆಗಿ ಹಲವಾರು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಚಿತ್ರಾ ಅವರು ಭಾಗಿಯಾಗಿದ್ದಾರೆ ಎಂದು ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಭಾರಿ ದಂಡವನ್ನು ಹಾಕಿದೆ. ಅವ್ಯವಹಾರದ ಬಗ್ಗೆ ಸೆಬಿ ನಡೆಸಿದ ತನಿಖೆಯ ಸಮಯದಲ್ಲಿ ವಿಲಕ್ಷಣ ವಿಚಾರಗಳನ್ನು ಕೂಡಾ ಅವರು ಹೇಳಿಕೊಂಡಿದ್ದು, ಪ್ರಕರಣವು ದೇಶದ ಗಮನ ಸೆಳೆದಿದೆ.

ಯಾರು ಚಿತ್ರಾ ರಾಮಕೃಷ್ಣ?

ಚಿತ್ರಾ ಅವರು 1985 ರಲ್ಲಿ ಐಡಿಬಿಐನ ಪ್ರಾಜೆಕ್ಟ್ ಫೈನಾನ್ಸ್ ವಿಭಾಗದಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. NSE ಗೆ ಸೇರುವ ಮೊದಲು ಸ್ವಲ್ಪ ಅವಧಿಯವರೆಗೆ ಮಾರುಕಟ್ಟೆ ನಿಯಂತ್ರಕವಾದ ಸೆಬಿಯಲ್ಲಿ ಕೆಲಸ ಮಾಡಿದವರಾಗಿದ್ದಾರೆ. 2013 ರಲ್ಲಿ ಅವರು NSE ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ.

2013ರಲ್ಲಿ ಫೋರ್ಬ್ಸ್ ನಿಯತಕಾಲಿಕ ಅವರನ್ನು ವರ್ಷದ ಮಹಿಳಾ ನಾಯಕಿ ಎಂದು ಹೆಸರಿಸಿತ್ತು. ಇದಕ್ಕಿಂತಲೂ ಒಂದೆರಡು ವರ್ಷಗಳ ಹಿಂದೆ, ಫಾರ್ಚೂನ್ ನಿಯತಕಾಲಿಕ ಅವರನ್ನು ‘ಭಾರತದ ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿ ಅತ್ಯಂತ ಶಕ್ತಿಶಾಲಿ ಮಹಿಳೆ’ ಎಂದು ಕರೆದಿತ್ತು. ಇಷ್ಟೇ ಅಲ್ಲದೆ, ಇತರ ಅನೇಕ ವ್ಯಾಪಾರ ನಿಯತಕಾಲಿಕೆಗಳ ಪಟ್ಟಿಗಳಲ್ಲಿ ಚಿತ್ರಾ ಅವರು ಪ್ರಮುಖವಾಗಿ ಕಾಣಿಸಿಕೊಂಡಿದ್ದರು.

ಇಂಡಿಯನ್ ಎಕ್ಸ್‌‌ಪ್ರೆಸ್‌ ವರದಿ ಮಾಡಿರುವಂತೆ, 1992 ರಲ್ಲಿ ಪ್ರಾರಂಭವಾದಾಗಿನಿಂದ NSE ಯೊಂದಿಗೆ ನಾಯಕತ್ವದ ಸ್ಥಾನದಲ್ಲಿ ಇದ್ದವರಾಗಿದ್ದಾರೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌‌ ಹಗರಣದಿಂದಾಗಿ ಶೇರು ಮಾರುಕಟ್ಟೆಗೆ ಹೊಡೆತ ಬಿದ್ದಾಗ, ಸ್ವಚ್ಛ ಮತ್ತು ಪಾರದರ್ಶಕ ವ್ಯಾಪಾರವನ್ನು ಸಕ್ರಿಯಗೊಳಿಸಲು ಪ್ರಾರಂಭವಾದ NSEಯ ಮೊದಲ ವ್ಯವಸ್ಥಾಪಕ ನಿರ್ದೇಶಕ ಆರ್‌ಎಚ್ ಪಾಟೀಲ್, ನರೇನ್ ಜೊತಗೆ ಚಿತ್ರಾ ಅವರು NSE ಸ್ಥಾಪಿಸಿದ ಪ್ರಮುಖ ತಂಡದ ಭಾಗವಾಗಿದ್ದರು.

ನರೇನ್ ಅವರ ಅಧಿಕಾರಾವಧಿಯು ಮುಗಿದ ನಂತರ, ಅವರು ಏಪ್ರಿಲ್ 1, 2013 ರಿಂದ ಜಾರಿಗೆ ಬರುವಂತೆ ಐದು ವರ್ಷಗಳ ಅವಧಿಗೆ NSE ಮಂಡಳಿಯಿಂದ ವ್ಯವಸ್ಥಾಪಕ ನಿರ್ದೇಶಕ ಮತ್ತು CEO ಹುದ್ದೆಗೆ ಚಿತ್ರಾ ಆಯ್ಕೆಗಿದ್ದರು. ಸಂಸ್ಥೆಗಳು, SEBI ಮತ್ತು ಸರ್ಕಾರದ ಬೆಂಬಲದೊಂದಿಗೆ NSE ಅನ್ನು ದೇಶದ ಅತಿದೊಡ್ಡ ಸ್ಟಾಕ್ ಎಕ್ಸ್ಚೇಂಜ್ ಆಗಿ ಪರಿವರ್ತಿಸುವಲ್ಲಿ ಅವರು ಪಾಟೀಲ್ ಮತ್ತು ನರೇನ್ ಅವರೊಂದಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ.

ಐದು ವರ್ಷಗಳಿಗೆ NSEಯ ಅಧಿಕಾರ ವಹಿಸಿದ್ದ ಚಿತ್ರಾ ಅವರು, 2016ರ ಡಿಸೆಂಬರ್ 2 ರಂದು, ಕೆಲವು ಮಂಡಳಿಯ ಸದಸ್ಯರೊಂದಿಗಿನ ಭಿನ್ನಾಭಿಪ್ರಾಯಗಳ ಕಾರಣದಿಂದ ಎಕ್ಸ್‌ಚೇಂಜ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು CEO ಹುದ್ದೆಗೆ ರಾಜೀನಾಮೆ ನೀಡುತ್ತಾರೆ. ಈ ವೇಳೆ ಅವರ ವಿರುದ್ದ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿದ್ದವು.

ಅಪರಿಚಿತ ಯೋಗಿಯ ಕೈಗೊಂಬೆಯಾಗಿ ಚಿತ್ರಾ ರಾಮಕೃಷ್ಣ!

ಇತ್ತೀಚಿಗೆ ಸೆಬಿ ಚಿತ್ರಾ ರಾಮಕೃಷ್ಣ ಮತ್ತು NSEಯಲ್ಲಿ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಸೆಬಿ ನಡೆಸಿದ ತನಿಖೆಯಲ್ಲಿ, ಬರೊಬ್ಬರಿ 300 ಲಕ್ಷ ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿರುವ ದೇಶದ ಉನ್ನತ ಷೇರುಪೇಟೆಯಲ್ಲಿ ನಡೆದ ವಿಲಕ್ಷಣ ಘಟನೆಯು ಹೊರಬಂದಿದೆ. ತನಿಖೆಯ ವೇಳೆ ಚಿತ್ರಾ ಅವರು, “NSE ಅಧಿಕಾರದಲ್ಲಿ ಇದ್ದ ಸಮಯದಲ್ಲಿ ಹಿಮಾಲಯದಲ್ಲಿ ಇರುವ ಅಪರಿಚಿತ ‘ಯೋಗಿ’ ಅವರ ನಿರ್ದೇಶನದಂತೆ NSEಯನ್ನು ನಡೆಸಿದ್ದೇನೆ” ಎಂದು ಹೇಳಿಕೊಂಡಿದ್ದಾರೆ!.

ಚಿತ್ರಾ ಅವರು ಹಿಮಾಲಯದ ಯೋಗಿಯನ್ನು ಕಳೆದ 20 ವರ್ಷಗಳಿಂದ ತಿಳಿದಿರುವುದಾಗಿ ಹೇಳಿದ್ದಾರೆ. ಯೋಗಿಯನ್ನು ಅವರು “ಶಿರೋನ್ಮಣಿ” ಎಂದು ಉಲ್ಲೇಖಿಸಿದ್ದಾರೆ. ದೇಶದ ಅತೀ ದೊಡ್ಡ ಸ್ಟಾಕ್‌ ಎಕ್ಸ್‌ಚೇಂಜ್‌‌ನ ವ್ಯಾಪಾರಿ ಯೋಜನೆಗಳು, ಮಂಡಳಿ ಸಭೆಯ ಕಾರ್ಯಸೂಚಿಗಳು ಮತ್ತು ಸಂಬಳ ಹಾಗೂ ಹಣಕಾಸಿನ ಎಲ್ಲಾ ಮಾಹಿತಿ ಸಹಿತ, ತಾನು ಹಿಮಾಲಯದ ಯೋಗಿಗೆ ನೀಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಅವರ ಆಡಳಿತದ ಅವಧಿಯಲ್ಲಿ NSEಯನ್ನು ಯೋಗಿಯೆ ನಡೆಸುತ್ತಿದ್ದರು ಎಂದು ಸೆಬಿ ನಡೆಸಿದ ತನಿಖೆಯಲ್ಲಿ ಹೇಳಿದ್ದು, ಈ ವೇಳೆ ಚಿತ್ರಾ ಅವರು “ಯೋಗಿಯ ಕೈಯಲ್ಲಿರುವ ಬೊಂಬೆಯಾಗಿದ್ದರು!” ಎಂದು ಸೆಬಿ ತಿಳಿಸಿದೆ.

ಯಾರು ಈ ಹಿಮಾಲಯದ ಯೋಗಿ?

ಈ ಅಪರಿಚಿತ ಯೋಗಿಯ ಬಗ್ಗೆ ಚಿತ್ರಾ ಬಳಿ ಪ್ರಶ್ನಿಸಿದರೆ, ಅವರು ಹೇಳುವುದು, ಅವನೊಬ್ಬ “ಸಿದ್ಧ-ಪುರುಷ” ಅಥವಾ “ಪರಮಹಂಸ” ಎಂದು. ಅವನಿಗೆ ಯಾವುದೆ ಭೌತಿಕ ವ್ಯಕ್ತಿತ್ವ ಇಲ್ಲ ಮತ್ತು ಅವನು ಅವನ ಇಚ್ಛೆಯಂತೆ ರೂಪ ಪಡೆಯುತ್ತಾರೆ. ನಾನು ಅವನನ್ನು ಪವಿತ್ರ ಸ್ಥಳಗಳಲ್ಲಿ ಭೇಟಿ ಮಾಡಿದ್ದೇನೆ, ಅವನಿಗೆ ಯಾವುದೇ ಸ್ಥಳ ಇಲ್ಲ. ಚಿತ್ರಾ ಹೇಳುವಂತೆ, ಅವನು ಹೆಚ್ಚಾಗಿ ಹಿಮಾಲಯದಲ್ಲಿ ವಾಸಿಸುತ್ತಿರುವವರು. ಚಿತ್ರಾ ಅವರು ಅವನೊಂದಿಗೆ ‘rigyajursama@outlook[dot]com’ ಎಂಬ ಆಕರ್ಷಕ ಇಮೇಲ್ ಐಡಿ ಮೂಲಕ ಸಂವಹನ ನಡೆಸುತ್ತಾರೆ.

ಈ ಯೋಗಿ ಹಿಮಾಲಯ ಶ್ರೇಣಿಗಳಲ್ಲಿ ವಾಸಿಸುತ್ತಾನೆ ಎಂದಾದರೆ, ಅವನು ಈ-ಮೇಲ್‌ಗಳನ್ನು ಬಳಸುತ್ತಿರುವುದು ಹೇಗೆ? ಅವರು ನಿಮ್ಮೊಂದಿಗೆ ನಿಯಮಿತವಾಗಿ ಪತ್ರವ್ಯವಹಾರ ನಡೆಸುತ್ತಿದ್ದು ಹೇಗೆ? ಎಂಬ ಸೆಬಿಯ ಪ್ರಶ್ನೆಗೆ, ಚಿತ್ರಾ ಉತ್ತರಿಸಿದ್ದು, “ನನಗೆ ತಿಳಿದಿರುವಂತೆ, ಅವರ ಆಧ್ಯಾತ್ಮಿಕ ಶಕ್ತಿಗಳು ಅಂತಹ ಯಾವುದೇ ಭೌತಿಕ ಕೋ-ಆರ್ಡಿನೇಟ್‌ಗಳನ್ನು ಹೊಂದುವ ಅಗತ್ಯವಿಲ್ಲ” ಎಂದು ತಿಳಿಸಿದ್ದಾರೆ.

“ಸುಮಾರು 20 ವರ್ಷಗಳ ಹಿಂದೆ ನಾನು ಅವರನ್ನು ಮೊದಲ ಬಾರಿಗೆ ಗಂಗಾನದಿಯ ದಡದಲ್ಲಿ ಭೇಟಿಯಾದೆ. ತರುವಾಯ, ವರ್ಷಗಳಲ್ಲಿ, ನಾನು ಅನೇಕ ವೈಯಕ್ತಿಕ ಮತ್ತು ವೃತ್ತಿಪರ ವಿಷಯಗಳಲ್ಲಿ ಅವರ ಮಾರ್ಗದರ್ಶನವನ್ನು ತೆಗೆದುಕೊಂಡಿದ್ದೇನೆ. ಅವರಿಗೆ ಯಾವುದೇ ಸ್ಥಳ ಇಲ್ಲದ ಕಾರಣ, ಅವರ ಮಾರ್ಗದರ್ಶನವನ್ನು ಪಡೆಯುವ ಮಾರ್ಗಕ್ಕಾಗಿ ನಾನು ಅವರನ್ನು ವಿನಂತಿಸಿದೆ. ಅದರಂತೆ, ಅವರು ನನಗೆ ನನ್ನ ವಿನಂತಿಗಳನ್ನು ಕಳುಹಿಸಬಹುದಾದ ಐಡಿಯನ್ನು ನೀಡಿದರು” ಎಂದು ಚಿತ್ರಾ ಹೇಳಿದ್ದಾರೆ.

ಈ ಯೋಗಿ ಯಾವುದೇ ಸಮಯದಲ್ಲಿ NSE ಅಥವಾ NSE ಆಡಳಿತ ಮಂಡಳಿಯಿಂದ ಇರಲಿಲ್ಲ, ಅವನೊಬ್ಬ ಆಧ್ಯಾತ್ಮಿಕ ಶಕ್ತಿ. ಎನ್‌ಎಸ್‌ಇಯಲ್ಲಿನ ಕಾರ್ಯನಿರ್ವಹಣೆ ಮತ್ತು ಕ್ರಮಾನುಗತದ ಕುರಿತ ಸಾಕಷ್ಟು ಸಂಕೀರ್ಣ ವಿವರಗಳನ್ನು ನಾನು ಅವರಿಗೆ ಒದಗಿಸುತ್ತಿದ್ದೆ ಎಂದು ಚಿತ್ರಾ ಹೇಳಿದ್ದಾರೆ.

ಆದರೆ ವಿಚಿತ್ರವೆಂದರೆ, ಈ ಆಧ್ಯಾತ್ಮಿಕ ಯೋಗಿ, ಚಿತ್ರಾ ಅವರ ಕೇಶವಿನ್ಯಾಸದ ಬಗ್ಗೆ ಆಸಕ್ತಿ ಹೊಂದಿದ್ದನು. ಭಕ್ತಿಗೀತೆಗಳನ್ನು ಕಳುಹಿಸಿ ಆಲಿಸುವಂತೆ ಕೇಳುತ್ತಿದ್ದನು. ಜೊತೆಗೆ, ‘ಚಿಲ್’ ಮಾಡುವುದಕ್ಕೆ ಐಶಾರಾಮಿ ದ್ವೀಪಕ್ಕೆ ಟ್ರಿಪ್ ಹೋಗೋಣ ಎಂದು ಕೂಡಾ ಹೇಳಿದ್ದನು ಎಂಬುವುದು ಚಿತ್ರಾ ಜೊತೆಗೆ ವಿನಿಮಯ ಮಾಡಲಾಗಿರುವ ಮೇಲ್‌ನಲ್ಲಿ ತಿಳಿದು ಬರುತ್ತದೆ ಎಂದು ಸೆಬಿ ಹೇಳಿದೆ.

ಫೆಬ್ರವರಿ 18, 2015 ರಂದು ಯೋಗಿ ಚಿತ್ರಾ ಅವರಿಗೆ ಮಾಡಿರುವ ಇ-ಮೇಲ್ ಹೀಗಿದೆ, “ಇಂದು ನೀನು ಅದ್ಭುತವಾಗಿ ಕಾಣಿಸುತ್ತಿದ್ದಿ. ನಿನ್ನ ಕೂದಲನ್ನು ಕಟ್ಟಲು ನೀನು ವಿವಿಧ ವಿಧಾನಗಳನ್ನು ಕಲಿಯಬೇಕು. ಅದು ನಿನ್ನನ್ನು ಇನ್ನೂ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಇದೊಂದು ಕೇವಲ ಉಚಿತ ಸಲಹೆ. ಇದನ್ನು ನೀನು ತೆಗೆದುಕೊಳ್ಳುತ್ತಿ ಎಂದು ನನಗೆ ತಿಳಿದಿದೆ. ಮಾರ್ಚ್ ತಿಂಗಳ ಮಧ್ಯದಲ್ಲಿ ಬಿಡುವು ಮಾಡಿಕೊ”.

ಅದೇ ಯೋಗಿಯಿಂದ ಸೆಪ್ಟೆಂಬರ್ 16, 2015 ರ ಇ-ಮೇಲ್: “ನಾನು ಕಳುಹಿಸಿದ ಮಕರ ಕುಂಡಲ ಗೀತೆಯನ್ನು ನೀನು ಕೇಳಿದ್ದಿಯಾ? ಅದನ್ನು ನೀನು ಮತ್ತೆ ಮತ್ತೆ ಕೇಳಬೇಕು. ಆಗ ನಿನ್ನು ಮುಖದಲ್ಲಿ ಮತ್ತು ಹೃದಯದಲ್ಲಿ ಮೂಡುವ ಉಲ್ಲಾಸವನ್ನು ನೋಡಲು ನನಗೆ ಸಂತೋಷವಾಗುತ್ತದೆ. ನಾನು ನಿನ್ನೆ ನಿನ್ನೊಂದಿಗೆ ಕಳೆದ ಸಮಯವನ್ನು ಆನಂದಿಸಿದೆ” ಎಂದು ಹೇಳುತ್ತದೆ.

ಹಾಗಾದರೆ ಯಾರು ಈ ಯೋಗಿ?

ದಿ ಕೆನ್‌ ವೆಬ್‌ಸೈಟ್‌, ಈ ಯೋಗಿ ಎಂದರೆ ಚಿತ್ರಾ ರಾಮಕೃಷ್ಣ ಅವರು ಎನ್‌ಎಸ್‌ಇಯ ಸಿಇಒ ಆಗಿದ್ದ ಅವಧಿಯಲ್ಲಿ, ಅವರ ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು ಸಲಹೆಗಾರರಾಗಿದ್ದ ಆನಂದ್ ಸುಬ್ರಮಣಿಯನ್ ಅವರೇ ಆಗಿದ್ದಾರೆ. ಚಿತ್ರಾ ಅವರು ಸುಬ್ರಮಣಿಯನ್‌ ಜೊತೆಗೆ ಸೇರಿಕೊಂಡು ‘ಹಣ ಮಾಡುವ’ ಭ್ರಷ್ಟ ಯೋಜನೆ ನಡೆಸಿದ್ದರು. ಅವರಿಬ್ಬರೂ ಒಟ್ಟಾಗಿ, ಅವರು ಸೆಬಿಗೆ ತಪ್ಪುದಾರಿಗೆಳೆಯುವ ಹೇಳಿಕೆಗಳನ್ನು ನೀಡಿದ್ದಾರೆ. ಜೊತೆಗೆ ಚಿತ್ರಾ ಅವರು ಯಾವುದೇ ಭೌತಿಕ ಉಪಸ್ಥಿತಿಯಿಲ್ಲದ ಆಧ್ಯಾತ್ಮಿಕ ಯೋಗಿ ಎಂದು ಹೇಳುವ ಮೂಲಕ ಉದ್ದೇಶಪೂರ್ವಕವಾಗಿ ತನ್ನ ಸಹಚರನ ಗುರುತನ್ನು ಮರೆಮಾಡಿದ್ದಾರೆ” ಎಂದು ಹೇಳಿದೆ.

ಶುಕ್ರವಾರದಂದು ಆದಾಯ ತೆರಿಗೆ ಇಲಾಖೆ ಚಿತ್ರಾ ಅವರು ನಿವಾಸದ ಮೇಲೆ ದಾಳಿ ನಡೆಸಿ ಪ್ರಮುಖ ವಸ್ತುಗಳನ್ನು ವಶಪಡಿಸಿಕೊಂಡಿದೆ. ಇಷ್ಟೇ ಅಲ್ಲದೆ, ಸಿಬಿಐ ಕೂಡಾ ಅವರ ಬಗ್ಗೆ ವಿಚಾರಣೆ ನಡೆಸುತ್ತಿದ್ದು, ವಿದೇಶ ಪ್ರವಾಸವನ್ನು ನಿಷೇಧಿಸಿದೆ ಎಂದು ದಿ ಕೆನ್‌ ವರದಿ ಮಾಡಿದೆ.

ಯಾರು ಈ ಆನಂದ್ ಸುಬ್ರಮಣಿಯನ್?

ಚಿತ್ರಾ ರಾಮಕೃಷ್ಣ ಅವರು ಏಪ್ರಿಲ್ 2013 ರಲ್ಲಿ NSE ನ CEO ಮತ್ತು MD ಆಗಿ ಅಧಿಕಾರ ಸ್ವೀಕರಿಸುತ್ತಾರೆ. ಸೆಬಿ ತನಿಖೆಯಲ್ಲಿ ಹೇಳಿದ ಯೋಗಿಯ ಅಣತಿಯಂತೆ, ಚಿತ್ರಾ ಅವರು ಉದ್ಯಮದಲ್ಲಿ ಯಾವುದೇ ಹೆಸರಿಲ್ಲದ ಆನಂದ್‌ ಸುಬ್ರಮಣಿಯನ್‌ ಎಂಬ ವ್ಯಕ್ತಿಯನ್ನು ಅರೆಕಾಲಿಕವಾಗಿ ‘ಮುಖ್ಯ ಕಾರ್ಯತಂತ್ರದ ಸಲಹೆಗಾರ‘ ಹುದ್ದೆಗೆ ನೇಮಿಸಿದ್ದರು. ಇವರ ನೇಮಕಾತಿಯ ವಿರುದ್ದ NSE ಹೆಸರು ಹೇಳಲು ಇಚ್ಛಿಸದ ಉದ್ಯೋಗಿಗಳು ಸೆಬಿಗೆ ದೂರು ಕೂಡಾ ನೀಡಿದ್ದರು ಎಂದು ವರದಿಯಾಗಿದೆ.

ಸುಬ್ರಮಣಿಯನ್‌ ಅವರಿಗೆ NSEಯಲ್ಲಿ ಕೆಲಸ ವಾರದಲ್ಲಿ ನಾಲ್ಕು ದಿನ ಮಾತ್ರವಾಗಿತ್ತು. ಕುತೂಹಲಕಾರಿ ವಿಚಾರವೇನೆಂದರೆ, ಆನಂದ್ ಸುಬ್ರಮಣಿಯನ್ ತಾನು ನೇಮಕಗೊಂಡ ಹುದ್ದೆ ಸಂಬಂಧಿತವಾಗಿ ಯಾವುದೆ ಅನುಭವ ಹೊಂದಿರಲಿಲ್ಲ. ನೇಮಕಾತಿಯ ಸಮಯದಲ್ಲಿ, ಅವರು ಟ್ರಾನ್ಸಾಫ್ ಸರ್ವಿಸಸ್ ಲಿಮಿಟೆಡ್ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಸುಬ್ರಮಣಿಯನ್‌ NSEಯಲ್ಲಿ ವಾರ್ಷಿಕವಾಗಿ ರೂ 1.68 ಕೋಟಿ ವೇತನದೊಂದಗೆ ಸೇರಿಕೊಂಡಿದ್ದರು. ಅವರ ಹಿಂದೆ ಇದ್ದ ಕಂಪೆನಿ ಅವರಿಗೆ ವಾರ್ಷಿಕವಾಗಿ ನೀಡುತ್ತಿದ್ದದು 15 ಲಕ್ಷ ಆಗಿತ್ತು. NSE ಗೆ ಸೇರುವುದರೊಂದಿಗೆ ಅವರ ಸಂಬಳದಲ್ಲಿ ಅಕ್ಷರಶಃ 10 ಪಟ್ಟು ಹೆಚ್ಚಳವಾಗಿತ್ತು. ಏಪ್ರಿಲ್ 2016 ರ ವೇಳೆಗೆ, ಅವರು ವಾರ್ಷಿಕವಾಗಿ ಪಡೆಯುತ್ತಿದ್ದ ಸಂಬಳ ರೂ 4.21 ಕೋಟಿಗೆ ಹೆಚ್ಚುತ್ತದೆ. ಅವರ ಸಂಬಳ ಸತತವಾಗಿ ಹೆಚ್ಚುತ್ತಲೇ ಇದ್ದವು, ಆದರೆ ಯಾವ ಆಧಾರದಲ್ಲಿ ಇದನ್ನು ಮಾಡಲಾಗಿದೆ ಎಂಬುವುದಕ್ಕೆ ಪುರಾವೆಗಳಿಲ್ಲ ಎಂದು ದಿ ಕೆನ್ ಬರೆದಿದೆ.

ವಿಶೇಷವೇನೆಂದರೆ, ಸುಬ್ರಮಣಿಯನ್‌ ಅವರು ಅರೆಕಾಲಿಕ ಉದ್ಯೋಗಿಯಾಗಿ ಸೇರಿಕೊಂಡಿದ್ದರು. ಇನ್ನೂ ವಿಶೇಷವೇನೆಂದರೆ, ಅವರನ್ನು NSEಗೆ ನೇಮಿಸಲು ಸಂದರ್ಶನ ಮಾಡಿದ ಏಕೈಕ ವ್ಯಕ್ತಿಯೆಂದರೆ ಚಿತ್ರಾ ರಾಮಕೃಷ್ಣ ಆಗಿದ್ದಾರೆ. ಈ ಸಂದರ್ಶನದ ಬಗ್ಗೆ ಯಾವುದೇ ಟಿಪ್ಪಣಿ ಮಾಡಲಾಗಿಲ್ಲ, ಹುದ್ದೆಗಾಗಿ ಜಾಹೀರಾತು ನೀಡಲಾಗಿಲ್ಲ ಮತ್ತು ಬೇರೆಯವರನ್ನು ಪರಿಗಣಿಸಲಾಗಿಲ್ಲ ಎಂದು ದಿ ಕೆನ್‌ ಹೇಳಿದೆ.

ಆನಂದ್‌ ಸುಬ್ರಮಣಿಯನ್ ಅವರ ಹೆಸರನ್ನು NSEಯ ಮಾನವ ಸಂಪನ್ಮೂಲ ಸಲಹೆಗಾರರು ತನಗೆ ಶಿಫಾರಸು ಮಾಡಿದ್ದಾರೆ ಎಂದು ಚಿತ್ರಾ ತನ್ನ ಹೇಳಿಕೆಯಲ್ಲಿ ಹೇಳಿದ್ದಾರೆ. ಆದಾಗ್ಯೂ, ಅವರು NSE ನಲ್ಲಿ ಮಾನವ ಸಂಪನ್ಮೂಲ ಸಲಹೆಗಾರರಾಗಿ ಸುಬ್ರಮಣಿಯನ್‌ ಅವರ ಪತ್ನಿ ಉದ್ಯೋಗದಲ್ಲಿದ್ದರು ಎಂದು ತಿಳಿದು ಬಂದಿದೆ. ಅವರ ಮೂಲಕ ಸುಬ್ರಮಣಿಯನ್‌ ಅವರನ್ನು ಚಿತ್ರಾ ಅವರು ತಿಳಿದಿದ್ದರು ಎಂದು ಸೆಬಿಗೆ ಹೇಳಿದ್ದಾರೆ.

2016 ರ ಹೊತ್ತಿಗೆ, ಸುಬ್ರಮಣಿಯನ್ ಅವರ ಹುದ್ದೆಯನ್ನು ಗ್ರೂಪ್ ಆಪರೇಟಿಂಗ್ ಆಫೀಸರ್‌ನಿಂದ ಎಂಡಿಯ ಸಲಹೆಗಾರರಾಗಿ ಬದಲಾಯಿಸಲಾಗಿತ್ತು. ಇದರ ಹೊರತಾಗಿಯೂ, NSE ಯಿಂದ ಸುಬ್ರಮಣಿಯನ್ ಅವರನ್ನು ಎಂದಿಗೂ ಪ್ರಮುಖ ನಿರ್ವಹಣಾ ಸಿಬ್ಬಂದಿ ಎಂದು ಪಟ್ಟಿ ಮಾಡಲಾಗಿಲ್ಲ.

ಈ ಇಮೇಲ್‌ಗಳು ಹೊರ ಬಂದಿದ್ದು ಹೇಗೆ?

ಎನ್‌ಎಸ್‌ಇಯಲ್ಲಿನ ಬೇರೊಂದು ಭ್ರಷ್ಟಾಚಾರದ ಕುರಿತು ತನಿಖೆ ನಡೆಸುತ್ತಿರುವಾಗ ಸೆಬಿ ಅಕಸ್ಮಾತಾಗಿ ಈ ಸಂಭಾಷಣೆಗಳನ್ನು ಕಂಡಿದೆ ಎಂದು ಕೆನ್‌ ವರದಿ ಮಾಡಿದೆ. ಇದರ ನಂತರ ಈ ಹಗರಣಕ್ಕೆ ‘ಆಲ್ಗೋ ಕೊಲೊಕೇಶನ್ ಹಗರಣ’ ಎಂದು ಕರೆಯಲಾಯಿತು. ನಂತರ ನಡೆದ ತನಿಖೆಯ ಸಂದರ್ಭದಲ್ಲಿ, SEBI ಈ ಹೆಸರಿಲ್ಲದ ಯೋಗಿಯ ಜೊತೆಗೆ ಚಿತ್ರಾ ರಾಮಕೃಷ್ಣ ಮಾಡಿರುವ ಇಮೇಲ್‌ಗಳನ್ನು ಕಂಡುಹಿಡಿದಿದೆ ಮತ್ತು ಇದರ ಬಗ್ಗೆ ತನಿಖೆ ಮಾಡಲು NSE ಅನ್ನು ಕೇಳಿತ್ತು.

ಇಮೇಲ್‌ಗಳಲ್ಲಿನ ಅನಾಮಧೇಯ ಆಧ್ಯಾತ್ಮಿಕ ಯೋಗಿ ಆನಂದ್ ಸುಬ್ರಮಣಿಯನ್ ಅವರಲ್ಲದೆ ಬೇರೆ ಯಾರೂ ಅಲ್ಲ ಎಂದು NSE ಹೇಳಿಕೆ ನೀಡಿದೆ ಎಂದು ದಿ ಕೆನ್‌ ವರದಿ ಮಾಡಿದೆ. ಎನ್‌ಎಸ್‌ಇ ಪ್ರಕಾರ, “ಈ ಹಿಂದೆ ಸುಬ್ರಮಣಿಯನ್ ಅವರು ಬಳಸುತ್ತಿದ್ದ ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳಲ್ಲಿ ಪುರಾವೆಗಳನ್ನು ಎನ್‌ಎಸ್‌ಇ ಕಂಡುಹಿಡಿದೆ. ಅಲ್ಲಿ ಯೋಗಿಯ ಹೆಸರಿನ ಇಮೇಲ್‌‌ನ ಅದೇ ಐಡಿಯೊಂದಿಗೆ ಸುಬ್ರಮಣಿಯನ್‌ ಸ್ಕೈಪ್ ಖಾತೆಯನ್ನು ಪ್ರಾರಂಭಿಸಿದ್ದರು” ಎಂದು ದಿ ಕೆನ್‌ ವರದಿ ಮಾಡಿದೆ.

ಚಿತ್ರಾ ಅವರು ಇಮೇಲ್‌ಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದ ವ್ಯಕ್ತಿಯೇ ಸುಬ್ರಮಣಿಯನ್ ಎಂದು ಸೆಬಿ ವರದಿಯು ತಕ್ಕಮಟ್ಟಿಗೆ ಸಂಶಯ ವ್ಯಕ್ತಪಡಿಸಿದೆ ಎಂದು ದಿ ಕೆನ್‌ ವರದಿ ಮಾಡಿದೆ. 1992 ರಲ್ಲಿ ಬಾಂಬೆ ಸ್ಟಾಕ್‌ ಎಕ್ಸ್‌ಚೇಂ‌ಜ್‌‌ನ ಹರ್ಷದ್ ಮೆಹ್ತಾ ಹಗರಣವನ್ನು ಬೆಳಕಿಗೆ ತಂದ ಚಿತ್ರಾ ರಾಮಕೃಷ್ಣ ತಾನೇ ಭ್ರಷ್ಟಾಚಾರದಲ್ಲಿ ಹಗರಣದಲ್ಲಿ ಸಿಲುಕಿದ್ದಾರೆ ಎಂದು ದಿ ಕೆನ್‌ ಉಲ್ಲೇಖಿಸಿದೆ.

ಅಪರಿಚಿತ ಯೋಗಿಯು ಸುಬ್ರಮಣಿಯನ್‌ ಅವರೇ ಆಗಿದ್ದಾರೆ ಎಂದು ಖಚಿತವಾಗಿ ಗುರುತಿಸಲು SEBI  ವಿಫಲವಾಗಿದೆ. ಚಿತ್ರಾ ಮತ್ತು ಸುಬ್ರಮಣಿಯನ್‌ ಅವರಿಗೆ ರಾಜೀನಾಮೆ ನೀಡಲು ಅವಕಾಶ ಮಾಡಿಕೊಟ್ಟು ಅವರನ್ನು ವಜಾ ಮಾಡದೆ ಬಿಟ್ಟಿದ್ದಕ್ಕಾಗಿ ಎನ್‌ಎಸ್‌ಇ ಬೋರ್ಡ್‌ಗೆ ದೋಷಾರೋಪಣೆಯನ್ನು ಸಲ್ಲಿಸಿದೆ.


ಇದನ್ನೂ ಓದಿ: ರಾಜಧಾನಿಯಲ್ಲಿ ಭೋರ್ಗರೆದ ’ಭೀಮ ಸಾಗರ’: ರ್‍ಯಾಲಿಯನ್ನು ಚಿತ್ರಗಳಲ್ಲಿ ನೋಡಿ

LEAVE A REPLY

Please enter your comment!
Please enter your name here