Homeಕರ್ನಾಟಕ‘ಅಂಬೇಡ್ಕರ್‌ರಿಗೆ ಅವಮಾನವಾದರೆ ಶೋಷಿತ ಸಮುದಾಯ ಸುಮ್ಮನಿರುವುದಿಲ್ಲ’

‘ಅಂಬೇಡ್ಕರ್‌ರಿಗೆ ಅವಮಾನವಾದರೆ ಶೋಷಿತ ಸಮುದಾಯ ಸುಮ್ಮನಿರುವುದಿಲ್ಲ’

ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ವಜಾಗೊಳಿಸಲು ಆಗ್ರಹಿಸಿ ಬೆಂಗಳೂರಿನಲ್ಲಿ ಶನಿವಾರ "ಹೈಕೋರ್ಟ್ ಹಾಗೂ ವಿಧಾನಸೌಧ ಚಲೋ" ನಡೆಯಿತು.

- Advertisement -
- Advertisement -

ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ‘ವಿಧಾನಸೌಧ ಹಾಗೂ ಹೈಕೋರ್ಟ್ ಚಲೋ’ದಲ್ಲಿ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಲಾಯಿತು.

ರಾಯಚೂರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಮಲ್ಲಿಕಾರ್ಜುನಗೌಡ ಅವರು ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಫೋಟೋವನ್ನು ಗಣರಾಜ್ಯೋತ್ಸವ ದಿನದಂದು ತೆರವುಗೊಳಿಸಿ ಧ್ವಜಾರೋಹಣ ಮಾಡಿದ್ದನ್ನು ಖಂಡಿಸಿ ಬೆಂಗಳೂರಿನಲ್ಲಿ ಬೃಹತ್‌ ರ್‍ಯಾಲಿ ಇಂದು ನಡೆಯಿತು.

ರಾಜ್ಯದ ಮೂಲೆ ಮೂಲೆಯಿಂದ ಸಾಗರೋಪಾದಿಯಲ್ಲಿ ಅಂಬೇಡ್ಕರ್‌ ಅನುಯಾಯಿಗಳು ಸೇರಿದ್ದರು. ದಲಿತ ವಿದ್ಯಾರ್ಥಿ ಪರಿಷತ್‌, ಎಸ್‌ಡಿಪಿಐ, ಬಿಎಸ್‌ಪಿ, ಕರ್ನಾಟಕ ದಲಿತ ವಿಮೋಚನಾ ಸಮಿತಿ, ಭಾರತೀಯ ದಲಿತ ಫ್ಯಾಂಥರ್‌ ಹೀಗೆ ಹಲವು ಸಂಘಟನೆಗಳು ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದ ಭಾಗವಾಗಿದ್ದವು. ದೂರದ ಊರುಗಳಿಂದ ಜಿಲ್ಲೆಗಳಿಂದ ನೂರಾರು ವಾಹನಗಳನ್ನು ಮಾಡಿಕೊಂಡು ಜನರು ಬೆಂಗಳೂರಿಗೆ ಆಗಮಿಸಿದ್ದರು.

ಕೇಂದ್ರ ರೈಲ್ವೆ ನಿಲ್ದಾಣದಿಂದ ಫ್ರಿಡಂ ಪಾರ್ಕ್‌ವರೆಗೆ ಸಾವಿರಾರು ಜನರು ಮೆರವಣಿಗೆ ನಡೆಸಿದರು. ದಾರಿಯುದ್ದಕ್ಕೂ ಜೈಭೀಮ್ ಘೋಷಣೆ ಮೊಳಗಿತು. ನೀಲಿ ಭಾವುಟ, ನೀಲಿ ಶಾಲುಗಳು ರಾರಾಜಿಸಿದವು. ಕಲಾವಿದರು ವಾದ್ಯ ನುಡಿಸುತ್ತಾ ಮೆರವಣಿಗೆಯನ್ನು ಮುನ್ನಡೆಸಿದರು.

ಮೆರವಣಿಗೆ ವೇಳೆ ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ದಲಿತ ಹೋರಾಟಗಾರ ಮಾವಳ್ಳಿ ಶಂಕರ್‌, ಮಲ್ಲಿಕಾರ್ಜುನ ಗೌಡ ಅವರನ್ನು ನ್ಯಾಯಮೂರ್ತಿ ಎನ್ನುತ್ತಾರೆ. ಆದರೆ ಅವರ ಒಳಗಡೆ ಇರುವುದು ಜಾತಿವಾದಿ ಮನಸ್ಸು. ಬಸವಣ್ಣ ಹಾಗೂ ಕುವೆಂಪು ಅವರ ನಾಡಿನಲ್ಲಿ ಇಂತಹ ಜಾತಿವಾದಿ ಮನಸ್ಸುಗಳು ನ್ಯಾಯಸ್ಥಾನದಲ್ಲಿ ಕುಳಿತಿರುವುದು ಅತ್ಯಂತ ಅಪಮಾನಕರ ಸಂಗತಿ. ಬಾಬಾ ಅಂಬೇಡ್ಕರ್‌ರವರಿಗೆ ಕಿಂಚಿತ್ತು ಅಪಮಾನವಾದರೂ ಈ ಶೋಷಿತ ಸಮುದಾಯಗಳು ಸುಮ್ಮನಿರುವುದಿಲ್ಲ ಎಂಬುದನ್ನು ಈ ನಾಡಿಗೆ ತೋರಿಸಿಕೊಡಲಾಗಿದೆ ಎಂದರು.

ಇದನ್ನೂ ಓದಿರಿ: ವಿಜಯಪುರ: ತಿಲಕ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗೆ ಪ್ರವೇಶ ನಿರಾಕರಣೆ

ಬಾಬಾ ಸಾಹೇಬರು ಯಾವುದೋ ಒಂದು ಜಾತಿ ವರ್ಗದ ನಾಯಕರಲ್ಲ. ಇಡೀ ದೇಶದ ಜನ ಇಂದು ಬಾಬಾ ಸಾಹೇಬ್‌ ಅಂಬೇಡ್ಕರ್‌ರವರ ಬಗ್ಗೆ ಮಾತನಾಡುತ್ತಿದ್ದಾರೆ. ಅನೇಕ ಸಮುದಾಯಗಳು ಬಾಬಾ ಸಾಹೇಬರು ಬರೆದ ಸಂವಿಧಾನ ಆಶಯಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಇದು ಒಂದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು.

ತಳಸಮುದಾಯಗಳಲ್ಲಿ ಜಾಗೃತಿ ಮತ್ತು ಎಚ್ಚರಿಕೆ ಹೆಚ್ಚು ಹೆಚ್ಚು ಆಗುತ್ತಿರುವುದು ಸಂತೋಷದ ಸಂಗತಿ. ಇಷ್ಟೆಲ್ಲ ಆದರೂ ಈ ಸಂಘಪರಿವಾರ ನೇತೃತ್ವದ ಸರ್ಕಾರ ಪಂಚೇಂದ್ರಿಗಳನ್ನು ಕಳೆದುಕೊಂಡು ಮೌನವಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ವಿಚಾರ. ಕನಿಷ್ಠ ಈ ಘಟನೆಗೆ ವಿಷಾದವನ್ನಾದರೂ  ವ್ಯಕ್ತಪಡಿಸಬಹುದಿತ್ತು. ಯಾವ್ಯಾವುದಕ್ಕೋ ಇವರು ಪ್ರತಿಕ್ರಿಯೆ ನೀಡುತ್ತಾರೆ. ಆದರೆ ಈ ವಿಚಾರದಲ್ಲಿ ಸರ್ಕಾರದ ಜಾತಿವಾದಿ ನೀತಿ ಬಹಿರಂಗವಾಗಿದೆ ಎಂದು ದೂರಿದರು.

ನ್ಯಾಯಾಧೀಶರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ವರ್ಗಾವಣೆ ಶಿಕ್ಷೆಯಲ್ಲ. ಶಿಕ್ಷೆಯಾಗಬೇಕು ಎಂಬುದು ಬಹುದೊಡ್ಡ ಬೇಡಿಕೆ. ಸರ್ಕಾರ ಅನೇಕ ಸುತ್ತೋಲೆಗಳನ್ನು ಹೊರಡಿಸಿದ್ದರೂ ನ್ಯಾಯಾಧೀಶರು ಅಂಬೇಡ್ಕರ್‌ ಫೋಟೋ ತೆಗೆಸಿದ್ದಾರೆ. ಶೋಷಿತ ಸಮುದಾಯದವರು ನ್ಯಾಯಾಂಗದಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದಾರೆ. ನ್ಯಾಯಾಂಗದಲ್ಲಿ ತಳಸಮುದಾಯಗಳಿಗೆ ಪಾಲುದಾರಿಕೆ ಬೇಕಾಗಿದೆ ಎಂದರು.

ಬಾಬಾ ಸಾಹೇಬರು ಸಮಾನತೆ, ಭ್ರಾತೃತ್ವದ ಸಂಕೇತ. ಎಲ್ಲ ನ್ಯಾಯಾಲಯಗಳಲ್ಲಿ ಅಂಬೇಡ್ಕರ್‌ ಭಾವಚಿತ್ರವನ್ನು ಕಡ್ಡಾಯವಾಗಿ ಹಾಕಬೇಕು. ಪ್ರತಿಭಟನೆಗೆ ಹೆದರಿದ ಹೈಕೋರ್ಟ್ ರಾಷ್ಟ್ರೀಯ ಹಬ್ಬಗಳಲ್ಲಿ ಕಡ್ಡಾಯವಾಗಿ ಅಂಬೇಡ್ಕರ್‌ ಫೋಟೋ ಇಡಲು ಸೂಚಿಸಿದೆ. ಇಷ್ಟೇ ಅಲ್ಲದೆ ಬೇರೆ ದಿನಗಳಲ್ಲಿಯೂ ನ್ಯಾಯಾಲಯದಲ್ಲಿ ಅಂಬೇಡ್ಕರ್‌ ಭಾವಚಿತ್ರವನ್ನು ಇಡಬೇಕು. ಹೈಕೋರ್ಟ್ ಆದೇಶ ತಿದ್ದುಪಡಿಯಾಗಬೇಕಿದೆ ಎಂದು ಒತ್ತಾಯಿಸಿದರು.

ಇದನ್ನೂ ಓದಿರಿ: ಮೈಸೂರು: ಸರ್ಕಾರಿ ಶಾಲೆಯ ಅಭಿವೃದ್ಧಿಗೆ 2.5 ಎಕರೆ ಜಮೀನು ದಾನ ಮಾಡಿದ ಮುಸ್ಲಿಂ ಕುಟುಂಬ

‘ಅರಾಜಕತೆಯೇ ಸಂಘಪರಿವಾರದ ಉದ್ದೇಶ’

ಅನೇಕ ಸಮಸ್ಯೆಗಳು ಜೀವಂತವಾಗಿವೆ. ಈ ಸರ್ಕಾರ, ಸಂಘಪರಿವಾರಕ್ಕೆ ಇದ್ಯಾವುದೂ ಬೇಕಾಗಿಲ್ಲ. ಬೇಕಾಗಿರುವುದು ಹಿಜಾಬ್ ವಿವಾದ ಮಾತ್ರ. ತಮ್ಮ ಧಾರ್ಮಿಕ ಹಕ್ಕುಗಳಿಗೆ ಅನುಸಾರವಾಗಿ ಹಿಜಾಬ್ ಧರಿಸಿ ಹೆಣ್ಣುಮಕ್ಕಳು ಶಾಲಾ, ಕಾಲೇಜುಗಳಿಗೆ ಹೋಗುತ್ತಿದ್ದರು. ಇದನ್ನು ದೊಡ್ಡದಾಗಿ ವಿವಾದ ಮಾಡಲಾಗಿದೆ. ಈ ವೈದಿಕರು, ಮನುವಾದಿ ಸಂತತಿಯವರು ದೇಶವನ್ನು ನೆಮ್ಮದಿಯಾಗಿ ಇಡಲು ಬಿಡುವುದಿಲ್ಲ. ದೇಶವನ್ನು ಅರಾಜಕ ಸ್ಥಿತಿಯಲ್ಲಿ ಇಡಬೇಕು ಎಂಬುದು ಸಂಘ ಪರಿವಾರದ ಪಿತೂರಿ. ಮುಂದಿನ ಚುನಾವಣೆಯಲ್ಲಿ ಸರಿಯಾದ ಪಾಠವನ್ನು ಕಲಿಸಬೇಕಿದೆ ಎಂದು ಮಾವಳ್ಳಿ ಶಂಕರ್‌ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ನಟ, ಹೋರಾಟಗಾರ ಚೇತನ್‌ ಅಹಿಂಸಾ, “ಎಲ್ಲ ಅಂಬೇಡ್ಕರ್‌, ಪರಿಯಾರ್‌ ವಾದಿಗಳು ನೀಲಿ ಶಾಲು ಧರಿಸಿ ಇಲ್ಲಿ ಸೇರಿದ್ದೇವೆ. ಮಲ್ಲಿಕಾರ್ಜುನ ಗೌಡ ಅವರಿಗೆ ನ್ಯಾಯ ಎಂದರೆ ಏನೆಂದು ಗೊತ್ತಿಲ್ಲ. ರಾಜ್ಯದಲ್ಲಿ ನಿರ್ಲಕ್ಷ್ಯದ ಸರ್ಕಾರವಿದೆ. ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್ ಪಕ್ಷಗಳು ಈ ಹೋರಾಟದ ಪರ ನಿಲ್ಲಲಿಲ್ಲ” ಎಂದು ದೂರಿದರು.

ಮಲ್ಲಿಕಾರ್ಜುನಗೌಡರಂಥವರು ಕಣ್ಣಿಗೆ ಕಾಣುವ ಶತ್ರುಗಳು. ಆದರೆ ಎಲ್ಲ ಪಕ್ಷಗಳು ಬಾಬಾ ಸಾಹೇಬರ ಫೋಟೋ ಮಾತ್ರ ಹಾಕಿಕೊಂಡು ನಮ್ಮನ್ನು ದಿಕ್ಕು ತಪ್ಪಿಸುತ್ತಿವೆ. ಇವರು ಬಹಳ ಅಪಾಯಕಾರಿ ಶತ್ರುಗಳು. ಅವರ ವಿರುದ್ಧವೂ ನಾವು ನಿಂತುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ನಾವು ನೀಲಿ ಶಾಲುಗಳು: ಚೇತನ್‌

“ನಾವು ಹಿಂದೂ ಅಲ್ಲ, ಮುಸಲ್ಮಾನರೂ ಅಲ್ಲ. ನಾವು ಸಮಾನತಾ ವಾದಿಗಳು. ನಾವು ಬಿಜೆಪಿಯೂ ಅಲ್ಲ, ಕಾಂಗ್ರೆಸ್ಸೂ ಅಲ್ಲ. ನಾವು ಪರ್ಯಾಯ ಶಕ್ತಿಗಳು. ಈಗ ದೊಡ್ಡ ವಿವಾದ ನಡೆಯುತ್ತಿದೆ. ನಾವು ಕೇಸರಿ ಶಾಲೂ ಅಲ್ಲ, ಹಿಜಾಬೂ ಅಲ್ಲ. ನಾವು ನೀಲಿ ಶಾಲುಗಳು. ಬದಲಾವಣೆಯೇ ಪರ್ಯಾಯವಾಗಿದೆ. ಈ ಘೋಷಣೆ ರಾಜ್ಯದ ಮೂಲೆಮೂಲೆಗೂ ಹರಡುತ್ತಿದೆ” ಎಂದು ಚೇತನ್ ತಿಳಿಸಿದರು.

ಚಿಂತಕ ಯೋಗೇಶ್‌ ಮಾಸ್ಟರ್‌, ಹ.ರಾ.ಮಹೇಶ್‌, ಹರಿರಾಮ್‌, ಉರಿಲಿಂಗಿಪೆದ್ದಿ ಮಠದ  ಜ್ಞಾನಪ್ರಕಾಶ್ ಸ್ವಾಮೀಜಿ, ಬಿ.ಆರ್‌.ಭಾಸ್ಕರ್‌ ಪ್ರಸಾದ್‌ ಸೇರಿದಂತೆ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಹಾಜರಿದ್ದರು.


ಇದನ್ನೂ ಓದಿರಿ: ಹಿಜಾಬ್‌ ವಿಚಾರದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ: ಕ್ಷಮೆ ಕೇಳಿದ ಟಿವಿ ಚಾನೆಲ್‌ ಪತ್ರಕರ್ತರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನ್ಯಾಯಮೂರ್ತಿ ಮಲ್ಲಿಕಾರ್ಜುನ ಗೌಡರನ್ನು ಸೇವೆಯಿಂದ ವಜಾಗೊಳಿಸಬೇಕು.

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...