Homeಮುಖಪುಟಎನ್‌ಟಿಆರ್‌ 98 ನೇ ಜನ್ಮದಿನ ಮತ್ತು ಕಮರುತ್ತಿರುವ ತೆಲಗು ದೇಶಂ ಪಕ್ಷದ ಮರುಸಂಘಟನೆಯ ಕನಸು

ಎನ್‌ಟಿಆರ್‌ 98 ನೇ ಜನ್ಮದಿನ ಮತ್ತು ಕಮರುತ್ತಿರುವ ತೆಲಗು ದೇಶಂ ಪಕ್ಷದ ಮರುಸಂಘಟನೆಯ ಕನಸು

ʼತೆಲಗು ಭಾಷಿಕರ ನೆಲ ನುಡಿಯ ಸಂರಕ್ಷಣೆಗೆ ಕಠಿಬದ್ಧವಾಗಬೇಕುʼ ಎಂಬ ನಿಲುವು ಮತ್ತು ಧ್ಯೇಯವೊಂದೆ ಟಿಡಿಪಿಯನ್ನು ಈ ದಶಕದಲ್ಲಿ ಆಂಧ್ರದ ರಾಜಕೀಯದಲ್ಲಿ ಜೀವಂತವಾಗಿ ಉಳಿಸಬಲ್ಲದು.

- Advertisement -
- Advertisement -

ಕೃಪೆ : ದಿ ಕ್ವಿಂಟ್‌
ಕನ್ನಡಕ್ಕೆ : ರಾಜೇಶ್‌ ಹೆಬ್ಬಾರ್‌

ಕೆಲವು ವರ್ಷಗಳ ಹಿಂದೆ ಅವಿಭಜಿತ ಆಂಧ್ರಪ್ರದೇಶವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ತೆಲಗು ದೇಶಂ ಪಕ್ಷ ಈಗ ಅವಸಾನದತ್ತ ಸಾಗುತ್ತಿದೆ. ಟಿಡಿಪಿ ಪಕ್ಷದ ಸಂಸ್ಥಾಕ ಮತ್ತು ಆಂಧ್ರದ ದಂತಕತೆ ಎನ್‌ ಟಿ ರಾಮರಾಮ್‌ ಅವರ 98 ನೇಯ ಜನ್ಮದಿನವನ್ನು ಮೇ 28 ರಂದು ಆಂಧ್ರದ ಜನರು ಆಚರಿಸಿದ್ದಾರೆ. ಇದೇ ಸಂದರ್ಭದಲ್ಲಿಎನ್‌ಟಿಆರ್‌ ನೆನೆಸಿಕೊಳ್ಳುತ್ತ ಅವರ ರಾಜಕೀಯ ಕೂಸು ತೆಲಗು ದೇಶಂ ಪಕ್ಷ ತನ್ನ ಗತವೈಭವದ ಮರಳುವ ಕನಸು ಕಾಣುತ್ತಿದೆ. ಹಾಗಿದ್ದರೆ ತೆಲಗು ದೇಶಂ ಪಕ್ಷದ ಮರು ಸಂಘಟನೆ ಅಷ್ಟು ಸುಲಭವೇ? ಸದ್ಯದ ಭವಿಷ್ಯದಲ್ಲಿ ತೆಲಗು ದೇಶಂ ಮತ್ತೆ ಆಂಧ್ರದ ರಾಜಕೀಯದಲ್ಲಿ ಮುಂಚೂಣಿಗೆ ಬರಬಹುದೇ ? ಸದ್ಯದ ಪರಿಸ್ಥಿತಿಯಲ್ಲಿ ಈ ಪ್ರಶ್ನೆಗೆ ಉತ್ತರ ಎನ್‌ಟಿಆರ್‌ ಮಾತ್ರ ಕೊಡಬಲ್ಲರು. ಆದರೆ ಅವರು ಆಂಧ್ರಪ್ರದೇಶವನ್ನು ಅಗಲಿ ದಶಕಗಳು ಉರಿದಿವೆ. ನಡುವೆ ಕೃಷ್ಣಾ ಮತ್ತು ಗೋಧಾವರಿಯಲ್ಲಿ ಸಾಕಷ್ಟು ಹೊಸನೀರು ಹರಿದಿದೆ. ವಿಭಜಿತ ಆಂಧ್ರಪ್ರದೇಶದಲ್ಲಿ ಟಿಡಿಪಿಯ ಕನುಸುಗಳನ್ನು ಬುಡಮೇಲಾಗಿಸುವ ಹೊಸ ರಾಜಕೀಯ ಬಿರುಗಾಳಿ ಬೀಸಿದೆ.

ಟಿಡಿಪಿಯ ಬದ್ಧ ಎದುರಾಳಿ ವೈಎಸ್‌ಆರ್‌ ಕಾಂಗ್ರೆಸ್‌ ನ ನಾಯಕ ಮತ್ತು ಇಂದಿನ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗಮೋಹನ್‌ ರೆಡ್ಡಿ ಮಾತ್ರ ತೆಲಗು ದೇಶಂ ಪಕ್ಷದ ಇಂದಿನ ಪರಿಸ್ಥಿತಿಗೆ ಕಾರಣವಲ್ಲ. ಆಂಧ್ರದಲ್ಲಿ ಟಿಡಿಪಿಯ ಸ್ಥಾನವನ್ನು ತುಂಬಲು ಪ್ರಯತ್ನಿಸುತ್ತಿರುವ ಬಿಜೆಪಿಯ ಮಹತ್ವಾಕಾಂಕ್ಷಿ ತಂತ್ರಗಳೂ ಕೂಡ ತೆಲಗು ದೇಶಂ ಪಕ್ಷವನ್ನು ಮತ್ತೆ ಮೇಲೆದ್ದು ಪುಟಿಯದಂತೆ ತಡೆಯುತ್ತಿವೆ. ಒಂದು ಕಾಲದಲ್ಲಿ ಆಂಧ್ರದ ಹಳ್ಳಿಹಳ್ಳಿಯಲ್ಲಿ ಬಲವಾಗಿ ನೆಲೆಯೂರಿದ್ದ ಪ್ರಬಲ ಸ್ಥಳೀಯ ಪಕ್ಷದ ಮುಂದಿರುವ ಸವಾಲುಗಳನ್ನು ಮತ್ತು ಎದುರಾಳಿಗಳನ್ನು ನೋಡಿದರೆ ಎನ್‌ಟಿಆರ್‌ ಅವರ ರಾಜಕೀಯ ಕೂಸಿನ ಸದ್ಯದ ಭವಿಷ್ಯ ಮತ್ತಷ್ಟು ಮಂಕಾಗಿ ಕಾಣಿಸುತ್ತದೆ.

ಅದು 1983 ರ ಕಾಲ. ದೇಶ ತುರ್ತು ಪರಿಸ್ಥಿತಿಯ ಕರಾಳದಿನಗಳನ್ನು ಮರೆತು ಹೊಸ ರಾಜಕೀಯ ಪರಿಸ್ಥಿತಿಗೆ ಬಂದು ದಶಕಗಳೂ ಕಳೆದಿರಲಿಲ್ಲ. ಒಂದು ಕಾಲದಲ್ಲಿ ದೇಶದ ಮೂಲೆ ಮೂಲೆಯನ್ನು ಆಳುತ್ತಿದ್ದ ಕಾಂಗ್ರೆಸ್‌ ಮತ್ತು ಇಂದಿರಾ ರಾಜಕೀಯವಾಗಿ ಸೋತು ಸುಣ್ಣವಾಗಿದ್ದರು. ದೇಶಾದ್ಯಂತ ಹೊಸ ಪಕ್ಷಗಳು. ಹೊಸ ಮೈತ್ರಿಕೂಟ. ಹೊಸ ನಾಯಕರು. ಇದ್ದಕ್ಕಿದ್ದಂತೆ ಎಲ್ಲಾ ರಾಜ್ಯಗಳಲ್ಲಿ ಪ್ರಬಲ ರಾಷ್ಟ್ರೀಯ ಪಕ್ಷಗಳಿಗೆ ಪ್ರತಿರೋಧವಾಗಿ ಸ್ಥಳೀಯ ಪಕ್ಷಗಳು ಬೆಳೆಯತೊಡಗಿದ ದಿನಗಳು. ಸ್ಥಳೀಯ ಭಾಷಾ ಅಸ್ಮಿತೆ, ಪ್ರಾದೇಶಿಕ ಅಸ್ಮಿತೆಗಳನ್ನೇ ಮೂಲಧ್ಯೇಯವನ್ನಾಗಿಸಿಕೊಂಡು ಆಂಧ್ರ, ಕರ್ನಾಟಕ, ತಮಿಳುನಾಡಿನಂತಹ ದಕ್ಷಿಣಭಾರತದ ರಾಜ್ಯಗಳಲ್ಲಿ ದ್ರಾವಿಡ ಕೇಂದ್ರಿತ ಪ್ರಾದೇಶಿಕ ಸಿದ್ದಾಂತದ ಒಂದೊಂದು ಪಕ್ಷಗಳು ತಲೆಯೆತ್ತ ತೊಡಗಿದವು. ಅದೇ ಸಂದರ್ಭದಲ್ಲಿ ದೇಶವನ್ನು ಆಂಧರಪ್ರದೇಶದತ್ತ ತಿರುಗಿ ನೋಡುವಂತೆ ಮಾಡಿದವರು ನಂದಮುರಿ ತಾರಕ ರಾಮರಾವ್‌ (ಎನ್‌ಟಿಆರ್‌). 1983 ರಲ್ಲಿ ಪಕ್ಷ ಸ್ಥಾಪನೆಯಾದ ಕೇವಲ 9 ತಿಂಗಳಿನಲ್ಲಿಯೇ ಕಾಂಗ್ರೆಸ್‌ ಪಕ್ಷವನ್ನು ಸೋಲಿಸಿ ಭರ್ಜರಿ ಬಹುಮತದಿಂದ ಎನ್‌ಟಿಆರ್‌ ಅವರ ತೆಲಗು ದೇಶಂ ಪಕ್ಷ ಅಧಿಕಾರವನ್ನು ಹಿಡಿಯಿತು. 60 ವರ್ಷ ಪ್ರಾಯದ ಎನ್‌ಟಿಆರ್‌ ಆ ದಿನ ಆಂಧ್ರ ಪ್ರದೇಶದಲ್ಲಿ ಮೂರು ದಶಕದ ಸುದೀರ್ಘ ಅವಧಿಯ ಕಾಂಗ್ರೆಸ್‌ ಆಡಳಿತಕ್ಕೆ ಕೊನೆ ಹಾಡಿದ್ದರು.

1984 ರಲ್ಲಿ ಇಂದಿರಾಗಾಂಧಿ ಮತ್ತು ಎಂಟಿಆರ್‌ ಸಂಘರ್ಷ ತೀವ್ರಗೊಂಡಿದ್ದ ವರ್ಷ. ಇಂದಿರಾ ಗಾಂಧಿ ವಿರುದ್ಧ ಮೊಟ್ಟಮೊದಲು ತೊಡೆತಟ್ಟಿದ ನಾಯಕ ಮತ್ತು ಸ್ಥಳೀಯ ಪಕ್ಷವೆಂದರೆ ಎನ್‌ಟಿಆರ್‌ ಮತ್ತು ತೆಲಗುದೇಶಂ ಪಕ್ಷ. ರಾಷ್ಟ್ರಪತಿಯ ಆಡಳಿತ, ಪಕ್ಷದ ನಾಯಕರ ಬಂಧನ ಎಲ್ಲವನ್ನು ಹಿಮ್ಮೆಟ್ಟಿಸಿ 1985 ರ ಲೋಕಸಭೆ ಚುನಾವಣೆಯಲ್ಲಿ ಆಂಧ್ರದ ಬಹುಪಾಲು ಕ್ಷೇತ್ರವನ್ನು ಗೆದ್ದು ಎನ್‌ಟಿಆರ್‌ ರಾಷ್ಟ್ರೀಯ ನಾಯಕರಾಗಿ ಗುರುತಿಸಿಕೊಂಡುಬಿಟ್ಟರು. ದೆಹಲಿಯ ಪಾರ್ಲಿಮೆಂಟ್‌ ನಲ್ಲಿ ಇಂದಿರಾಗಾಂಧಿಯ ಕಾಂಗ್ರೆಸ್‌ ಪಕ್ಷದ ವಿರುದ್ಧ ಆ ಅವಧಿಯಲ್ಲಿದ್ದ ಅತಿದೊಡ್ಡ ವಿರೋಧ ಪಕ್ಷವೆಂದರೆ ಅದು ತೆಲಗು ದೇಶಂ ಪಕ್ಷ. ಅಂದಿನಿಂದ ಇಂದಿನವರೆಗೆ ಪ್ರಾದೇಶಿಕ ಪಕ್ಷವೊಂದು ರಾಷ್ಟ್ರೀಯ ಮಟ್ಟದಲ್ಲಿ ಈ ಮಟ್ಟದ ಯಶಸ್ಸುಗಳಿಸಿದ್ದೇನಾದರೂ ಇದ್ದರೆ ಅದು ಎನ್‌ಟಿಆರ್‌ ನಾಯಕತ್ವದ ತೆಲಗು ದೇಶಂ ಪಕ್ಷ ಮಾತ್ರ. ಅದೂ 1985 ರಲ್ಲಿ ಮಾತ್ರ.

ಆರಂಭದ ದಿನಗಳಿಂದಲೂ ಬಿಕ್ಕಟ್ಟು ಮತ್ತು ಗೊಂದಲಗಳಲ್ಲೇ ಸಾಗಿ ಬರುತ್ತಿರುವ ತೆಲಗು ದೇಶಂ ಪಕ್ಷ

ಟಿಡಿಪಿ ಯ ಮೊದಲ ಬಿಕ್ಕಟ್ಟು ಮತ್ತು ಆಂತರಿಕ ಹಗ್ಗ ಜಗ್ಗಾಟ ಆರಂಭವಾಗಿದ್ದು 1995 ರಲ್ಲಿ. ಆಗ ನಾರಾ ಚಂದ್ರಬಾಬು ನಾಯ್ಡು ತಮ್ಮ ಮಾವ ಎನ್‌ಟಿಆರ್‌ ಅವರನ್ನು ಅವರ ಅರಮನೆಯಲ್ಲಿ ಕೂಡಿಹಾಕಿ ತಾವು ಪಕ್ಷದ ಚುಕ್ಕಾಣಿ ಹಿಡಿಯಲು ಮುಂದಾದರು. ಎನ್‌ಟಿಆರ್‌ ಅವರ ಗೃಹ ಬಂಧನ ಚಂದ್ರಬಾಬು ನಾಯ್ಡು ಅವರ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ. 1999 ರ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಚಂದ್ರಬಾಬು ನಾಯಕತ್ವದ ತೆಲಗು ದೇಶಂ ಪಕ್ಷ ಭರ್ಜರಿ ಬಹುಮತದೊಂದಿಗೆ ಆಂಧ್ರ ಪ್ರದೇಶದಲ್ಲಿ ಅಧಿಕಾರವನ್ನು ಹಿಡಿಯಿತು. ಮೊಟ್ಟ ಮೊದಲ ಬಾರಿಗೆ ಮುಕ್ತ ಮಾರುಕಟ್ಟೆ ಮತ್ತು ಜಾಗತೀಕರಣ ನೀತಿಯನ್ನು ಪ್ರಾದೇಶಿಕ ಪಕ್ಷವೊಂದು ತನ್ನ ರಾಜ್ಯದಲ್ಲಿ ಅಳವಡಿಸಿಕೊಂಡ ಪಕ್ಷ ತೆಲಗು ದೇಶಂ.

ತೆಲಗು ದೇಶಂ ಪಕ್ಷ ಕೇಂದ್ರ ರಾಜಕೀಯದಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತ ಮುಂದಿನ ದಶಕದಲ್ಲಿ ಕೇಂದ್ರ ಸರ್ಕಾರದ ಭಾಗವಾಗುತ್ತ ಮುಂದುವರೆಯಿತು. ಮೊದಲಿಗೆ ಯುಪಿಎ ಮೈತ್ರಿಕೂಟದ ಪಾಲುದಾರನಾಗಿ ನಂತರ ಎನ್‌ಡಿಎ ಕಡೆ ವಾಲಿದ ಟಿಡಿಪಿ ಅಟಲ್‌ ಬಿಹಾರಿ ವಾಜಪೇಯಿ ನಾಯಕತ್ವದ ಎನ್‌ಡಿಎ ಸರ್ಕಾರದ ಬಹುಮುಖ್ಯ ಪಾಲುದಾರನಾಯಿತು. ಅದೇ ಸಂದರ್ಭದಲ್ಲಿ ಚಂದ್ರಬಾಬು ನಾಯ್ಡು ಆಂಧ್ರ ಪ್ರದೇಶದ ಪ್ರಶ್ನಾತೀತ ನಾಯಕನಾಗಿ ಬೆಳೆದು ನಿಂತರು ಮತ್ತು ವಾಜಪೇಯಿ ಸರ್ಕಾರದಿಂದ ಸಾಕಷ್ಟು ರಾಜಕೀಯ ಲಾಭಗಳನ್ನು ಪಡೆದುಕೊಳ್ಳತೊಡಗಿದರು. ಆಂಧ್ರಪ್ರದೇಶದಲ್ಲಿನ ತಮ್ಮ ವರ್ಚಸ್ಸು, ಚುನಾವಣೆಗಳ ಅದ್ಭುತ ಯಶಸ್ಸು ಆ ದಿನ ಚಂದ್ರಬಾಬು ನಾಯ್ಡು ಅವರಲ್ಲಿ ರಾಷ್ಟ್ರೀಯ ನಾಯಕನಾಗುವ ಹಂಬಲವೊಂದನ್ನು ಹುಟ್ಟುಹಾಕಿತು. ಮತ್ತು ಚಂದ್ರಬಾಬು ನಾಯ್ಡು ಅಂದಿನಿಂದ ಭಾರತದ ಪ್ರಧಾನಿಯಾಗುವ ಕನಸು ಕಾಣತೊಡಗಿದರು.

ಚಂದ್ರಬಾಬು ನಾಯ್ಡು ಅವರ ರಾಜಕೀಯ ಯಶಸ್ಸು ಸಾಕಷ್ಟು ಕಾಲ ಉಳಿಯಲಿಲ್ಲ. 2004 ರ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ತೆಲಗು ದೇಶಂ ಪಕ್ಷ ಹೀನಾಯವಾಗಿ ಸೋಲುಕಂಡಿತು. 1989 ರ ನಂತರ ತೆಲಗು ದೇಶಂ ಪಕ್ಷ ಇಂತಹ ಸೋಲುಗಳನ್ನು ಕಂಡಿರಲಿಲ್ಲ. ತೆಲಗುದೇಶಂ ಪಕ್ಷದ ಈ ಸೋಲು ಆಂಧ್ರದಲ್ಲಿ ಹೊಸ ರಾಜಕೀಯ ನಾಯಕನೊಬ್ಬನ ಉಗಮಕ್ಕೆ ನಾಂದಿ ಹಾಡಿತು. ಚಂದ್ರಬಾಬು ನಾಯ್ಡು ಅವರಿಗೆ ಪರ್ಯಾಯ ನಾಯಕನಾಗಿ ಕಾಂಗ್ರೆಸ್‌ ನ ವೈ ಎಸ್‌ ರಾಜಶೇಖರ ರೆಡ್ಡಿ ಬೆಳೆಯ ತೊಡಗಿದರು. ವೈಎಸ್‌ಆರ್‌ ಮಂಡಿಸಿದ ಆಂಧ್ರವನ್ನು ವಿಭಜಿಸಿ ಎರಡು ರಾಜ್ಯವನ್ನಾಗಿಸುವ ನೀತಿ ನಿಧಾನಕ್ಕೆ ತೆಲಗುದೇಶಂ ಪಕ್ಷ ತನ್ನ ನೆಲೆ ಕಳೆದುಕೊಳ್ಳುವಂತೆ ಮಾಡಿತು.

ಸೈದ್ಧಾಂತಿಕ ಭಿನ್ನಾಭಿಪ್ರಾಯದ ಒಳಸುಳಿಯ ತಿಕ್ಕಾಟದಲ್ಲಿ ಚಂದ್ರಬಾಬು ನಾಯ್ಡು ಮತ್ತು ತೆಲಗು ದೇಶಂ ಪಕ್ಷ

ಪ್ರತ್ಯೇಕ ತೆಲಂಗಾಣಕ್ಕಾಗಿ ನಡೆದ ಹೋರಾಟಗಳು ಚಂದ್ರಬಾಬು ನಾಯ್ಡು ಸರ್ಕಾರದ ಎರಡನೇ ಅವಧಿಯನ್ನು ಅಕ್ಷರಶಃ ಆಂಧ್ರಪ್ರದೇಶವನ್ನು ರಾಜಕೀಯ ರಣರಂಗವನ್ನಾಗಿಸಿದವು. ತೆಲಗು ದೇಶಂ ಪಕ್ಷದ ನಾಯಕ ಮತ್ತು ಉಪ ಸ್ಪೀಕರ್‌ ಕೆ. ಚಂದ್ರಶೇಖರ್‌ ರಾವ್‌ 2004 ರಲ್ಲಿ ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿ ಪ್ರತ್ಯೇಕ ತೆಲಂಗಾಣ ಹೋರಾಟಕ್ಕೆ ಧುಮುಕಿದರು. ಕೆ. ಚಂದ್ರಶೇಖರ್‌ ರಾವ್‌ ಜೊತೆ ಸಾಕಷ್ಟು ಟಿಡಿಪಿ ಶಾಸಕರು ಮತ್ತು ನಾಯಕರು ತೆಲಂಗಾಣ ಹೋರಾಟಕ್ಕೆ ಇಳಿದರು. ಚಂದ್ರಶೇಖರ್‌ ಜಾವ್‌ ಕಾಂಗ್ರೆಸ್‌ ಜೊತೆ ಕೈ ಜೋಡಿಸಿ 2004 ರ ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ಸೋಲಿಗೆ ಕಾರಣವಾದರು. ಕೆ. ಚಂದ್ರಶೇಖರ್‌ ರಾವ್‌ ಮನಮೋಹನ್‌ ಸಿಂಗ್‌ ಸರ್ಕಾರದಲ್ಲಿ ಮಂತ್ರಿಯಾದರು ಮತ್ತು ರಾಜ್ಯದಲ್ಲಿ ರಾಜಶೇಖರ್‌ ರೆಡ್ಡಿ ಸರ್ಕಾರದಲ್ಲಿ ಅವರ ತೆಲಂಗಾಣ ರಾಷ್ಟ್ರ ಸಮಿತಿ ಮುಖ್ಯ ಪಾತ್ರವಹಿಸಿತು. ಕೆ. ಚಂದ್ರಶೇಖರ್‌ ರಾವ್‌ ಆಗಮನ ಆಂಧ್ರ ರಾಜಕೀಯದಲ್ಲಿ ಹೊಸ ರಾಜಕೀಯ ಶಕೆಗೆ ನಾಂದಿ ಹಾಡಿತು. ಈಗ ಆಂಧ್ರ ಚಂದ್ರಬಾಬು ನಾಯ್ಡು, ವೈ ಎಸ್‌ ರಾಜಶೇಖರ್‌ ರೆಡ್ಡಿ ಮತ್ತು ಚಂದ್ರಶೇಖರ್‌ ರಾವ್‌ ಈ ಮೂವರು ನಾಯಕರ ರಾಜಕೀಯ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿತ್ತು.

2009 ರಲ್ಲಿ ನಡೆದ ಧಿಡೀರ್‌ ರಾಜಕೀಯ ಬೆಳವಣಿಗೆಯಲ್ಲಿ ಚಂದ್ರಶೇಖರ್‌ ರಾವ್‌ ತಮ್ಮ ಕಾಂಗ್ರೆಸ್‌ ಸಖ್ಯವನ್ನು ತೊರೆದು ಟಿಡಿಪಿ ಜೊತೆ ಸೇರಿದರು. ಆಗ ಟಿಡಿಪಿ ಮತ್ತು ಚಂದ್ರಬಾಬು ನಾಯ್ಡು ಎರಡು ಚಂದ್ರರ ಹೊಳಪಿನಿಂದ ತಾನು ಮತ್ತೆ ಅಧಿಕಾರಕ್ಕೆ ಬರಬಹುದೆಂದು ನಿರೀಕ್ಷಿಸಿತ್ತು. ಆದರೆ ಪರಿಸ್ಥಿತಿ ಆಗಲೂ ತೆಲಗು ದೇಶಂ ಪಕ್ಷದ ಪರವಾಗಿ ಇರಲಿಲ್ಲ. ತೆಲಗು ಭಾಷೆಯ ಸುಪ್ರಸಿದ್ಧ ನಟ ಚಿರಂಜೀವಿಯ ಆಶ್ಚರ್ಯಕರ ರಾಜಕೀಯ ಪ್ರವೇಶದಿಂದ ಆಂಧ್ರಪ್ರದೇಶದಲ್ಲಿ ನಾಲ್ಕು ನಾಯಕರ ನಡುವಿನ ರಾಜಕೀಯ ಸಂಗ್ರಾಮಕ್ಕೆ 2009 ರ ಚುನಾವಣೆ ವೇದಿಕೆಯಾಯಿತು. ಚಿರಂಜೀವಿ ಪಕ್ಷದ ಪ್ರಭಾವದಿಂದ ಮರಳಿ ಅಧಿಕಾರಕ್ಕೆ ಬರುವ ಚಂದ್ರಬಾಬು ನಾಯ್ಡು ಅವರ ಟಿಡಿಪಿಯ ಕನಸು 2009 ರಲ್ಲಿ ಮತ್ತೊಮ್ಮೆ ಭಗ್ನಗೊಂಡಿತು.

ಆ ವೇಳಗೆ ಸತತ ಹತ್ತು ವರ್ಷಗಳ ಕಾಲ ಪ್ರಾದೇಶಿಕ ಪಕ್ಷವೊಂದು ಅಧಿಕಾರದಿಂದ ದೂರವಾಗಿ ಉಳಿದು ರಾಜಕೀಯದಲ್ಲಿ ತನ್ನ ಪ್ರಭಾವವನ್ನು ಉಳಿಸಿಕೊಳ್ಳುವುದು ಅಸಾಧ್ಯವೆಂದು ಚರ್ಚೆಯಾಗ ತೊಡಗಿತ್ತು. ಅಧಿಕಾರದಿಂದ ದೂರವಾಗಿರುವ ಒಂದೇ ಕಾರಣಕ್ಕೆ ಟಿಡಿಪಿಯ ಅವನತಿ ಆರಂಭವಾಗಲಿಲ್ಲ. ಅವಕಾಶವಾದಿ ರಾಜಕಾರಣ, ಅಗತ್ಯ ಬಿದ್ದಾಗ ತನ್ನ ಸೈದ್ಧಾಂತಿಕ ನಿಲುವು ಒಕ್ಕೂಟವನ್ನು ಬದಲಿಸುವ ತಂತ್ರಗಾರಿಕೆ ತೆಲಗು ದೇಶಂ ಪಕ್ಷದ ಕುರಿತು ಜನರ ಒಲವನ್ನು ಕಡಿಮೆ ಮಾಡಿತು. ಪ್ರತ್ಯೇಕ ತೆಲಂಗಾಣ ರಾಜ್ಯ ಸ್ಥಾಪನೆಯ ಕುರಿತಾಗಿ ತೆಲಗು ದೇಶಂ ಮತ್ತು ಚಂದ್ರಬಾಬು ನಾಯ್ಡು ತೆಗೆದುಕೊಂಡ ಇಬ್ಬಗೆಯ ದ್ವಂದ್ವ ನಿಲುವಗಳು ಮುಂದಿನ ದಿನಗಳಲ್ಲಿ ಪಕ್ಷದ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದವು.

ಅವಿಭಜಿತ ಆಂಧ್ರ ಪ್ರದೇಶ ಮತ್ತು ಪಕ್ಷದ ಮೂಲ ಸಿದ್ಧಾಂತಗಳಿಗೆ ಬದ್ಧರಾಗಿ ನಿಲ್ಲಲು ವಿಫಲರಾದ ಚಂದ್ರಬಾಬು ನಾಯ್ಡು

ಚಂದ್ರಬಾಬು ನಾಯ್ಡು ಅವರ ವರ್ಚಸ್ಸು ಮತ್ತು ಪ್ರಯತ್ನಗಳಿಂದಲೇ ತೆಲಗು ದೇಶಂ ಪಕ್ಷ ಇದುವರೆಗೆ ಆಂಧ್ರದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ ಎಂದು ಯಾರು ಬೇಕಾದರೂ ಹೇಳಬಹುದು. ಆದರೆ ನಾಯ್ಡು ಅವರ ವ್ಯಕ್ತಿ ಕೇಂದ್ರಿತ ಮತ್ತು ಕುಟುಂಬ ರಾಜಕೀಯಗಳಿಂದ ಪಕ್ಷ ಸಾಕಷ್ಟು ನಷ್ಟಗಳನ್ನು ಹೊಂದಿದೆ. 2009 ರ ನಂತರ ತೆಲಂಗಾಣ ರಾಜ್ಯ ಸ್ಥಾಪನೆಯ ವಿರುದ್ಧವಾಗಿ ಸ್ಪಷ್ಟ ನಿಲುವು ತಾಳಲು ವಿಫಲವಾಗಿದ್ದು ಮತ್ತು ಪಕ್ಷದ ಮೂಲ ತತ್ವವಾದ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ, ತೆಲಗು ಭಾಷಾ ನೆಲ-ನುಡಿಯ ಸಂರಕ್ಷಣೆ, ಜಾತ್ಯಾತೀತ ನಿಲುವುಗಳಿಗೆ ವಿರುದ್ಧವಾಗಿ ಹೋದದ್ದು ಆಂಧ್ರದ ಜನರು ದಿನಕಳೆದಂತೆ ತೆಲಗು ದೇಶಂ ಪಕ್ಷದ ಮೇಲಿನ ತಮ್ಮ ವಿಶ್ವಾಸವನ್ನು ಕಳೆದುಕೊಳ್ಳಲು ದಾರಿ ಮಾಡಿಕೊಟ್ಟಿತು. ಚಂದ್ರಬಾಬು ನಾಯ್ಡು ಅವರ ವ್ಯಾಪಕ ಮಾರುಕಟ್ಟೆ ಸ್ನೇಹಿ ರಾಜಕೀಯ ನೀತಿ, ಉದ್ಯಮ ಸ್ನೇಹಿ ನೀತಿಗಳು ಆಂಧ್ರ ಪ್ರದೇಶದಲ್ಲಿ ನಕ್ಸಲಿಸಂ ನಂತಹ ತೀವ್ರವಾದ ವ್ಯಾಪಕವಾಗಿ ಹರಡಲಿಕ್ಕೂ ದಾರಿ ಮಾಡಿಕೊಟ್ಟವು.

ಸಿಇಒ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ವೈಫಲ್ಯ

ಹೊಸ ಶತಮಾನದ ಆರಂಭದ ದಶಕದಲ್ಲಿ ಚಂದ್ರಬಾಬು ನಾಯ್ಡು ತಮ್ಮನ್ನು ತಾವು ಹೊಸ ತಲೆಮಾರಿನ ನಾಯಕ ಸಿಇಒ-ಸಿಎಂ ಎಂದು ಕರೆದುಕೊಂಡರು. ಚಂದ್ರಬಾಬು ತಂತ್ರಜ್ಞಾನ ಸ್ನೇಹಿ ನಾಯಕನಾಗಿ ದೇಶದಲ್ಲಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡರು. ಹೈದರಾಬಾದ್‌ ನಗರವನ್ನು ದೇಶದ ಐಟಿ ಹಬ್ ಅನ್ನಾಗಿ ಪರಿವರ್ತಿಸುವಲ್ಲಿ ಚಂದ್ರಬಾಬು ನಾಯ್ಡು ಅವರ ಪರಿಶ್ರಮವೂ ಇದೆ. 21 ನೇ ಶತಮಾನದ ಆರಂಭದ ದಶಕದಲ್ಲಿ ನಾಯ್ಡು ಮಧ್ಯಮ ವರ್ಗಗಳ ನಾಯಕನಾಗಿ ಬೆಳೆದದ್ದೂ ನಿಜ. ದೇಶವ್ಯಾಪಿ ಅವರ ವರ್ಚಸ್ಸು ಬದಲಾದದ್ದೂ ನಿಜ. ಆದರೆ ಈ ಯಶಸ್ಸು ಮತ್ತು ವರ್ಚಸ್ಸು ದೀರ್ಘ ಕಾಲದ ವರೆಗೆ ಉಳಿಯಲಿಲ್ಲ. ಆಂಧ್ರ ಜನರ ಹೃದಯದಲ್ಲಿ ಎನ್‌ಟಿಆರ್‌ ಸ್ಥಾನವನ್ನು ತುಂಬುವ ಚಂದ್ರಬಾಬು ನಾಯ್ಡು ಕನಸು ನಿಧಾನಕ್ಕೆ 2010 ರ ನಂತರ ಕಮರ ತೊಡಗಿತು. ದೊಡ್ಡ ರಾಜಕೀಯ ಕಾರ್ಯಕರ್ತರ ಗುಂಪು ಪಡೆಗಳ ಹೊರತಾಗಿಯೂ ಪ್ರತ್ಯೇಕ ತೆಲಂಗಾಣದ ಸ್ಥಾಪನೆಯ ಗದ್ದಲದ ನಡುವೆ ಟಿಡಿಪಿ ಮತ್ತು ಚಂದ್ರಬಾಬು ನಾಯ್ಡು ಆಂಧ್ರಪ್ರದೇಶದಲ್ಲಿ ತಮ್ಮ ಮೊದಲಿನ ರಾಜಕೀಯ ಪ್ರಾಬಲ್ಯವನ್ನು ಕಳೆದುಕೊಂಡು ಅಪ್ರಸ್ತುತವಾಗ ತೊಡಗಿದರು.

ಚಂದ್ರಬಾಬು ತಮ್ಮನ್ನು ತಾವು ಕರೆದು ಕೊಳ್ಳುವಂತೆ ಸಿಇಒ ಮುಖ್ಯಮಂತ್ರಿ ಮಾದರಿ ಆಂಧ್ರದಲ್ಲಿ ದಿನಕಳೆದಂತೆ ಹೀನಾಯ ವೈಫಲ್ಯವನ್ನು ಕಂಡಿತು. ಇದರಿಂದ ಕೆಲವು ಉದ್ಯಮಿಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳನ್ನು ಹೊರತು ಪಡಿಸಿ ಯಾರಿಗೂ ದೀರ್ಘಕಾಲದಲ್ಲಿ ಹೆಚ್ಚಿನ ಉಪಯೋಗವಾಗಲಿಲ್ಲ. ಚಂದ್ರಬಾಬು ನಾಯ್ಡು ಅವರ ಭರವಸೆಯಂತೆ ರಾಜ್ಯದಲ್ಲಿ ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸುವಲ್ಲಾಗಲೀ ಅಥವಾ ಪ್ರವಾಸೋದ್ಯಮವನ್ನು ಬೆಳೆಸುವಲ್ಲಾಗಲಿ ಸಿಇಒ ಸಿಎಂ ಮಾದರಿಗಳು ದೀರ್ಘಾವಧಿಯಲ್ಲಿ ಕೆಲಸಕ್ಕೆ ಬಾರದಿದ್ದುದು ಇತ್ತೀಚಿನ ದಶಕದಲ್ಲಿ ಟಿಡಿಪಿಯ ಹಿನ್ನಡೆಗೆ ಮತ್ತೊಂದು ಕಾರಣ.

ಪ್ರತ್ಯೇಕ ತೆಲಂಗಾಣದ ರಚನೆ ಮತ್ತು ಟಿಡಿಪಿಯ ರಾಜಕೀಯ ಏರಿಳಿತ

ಜೂನ್‌ 2, 2014 ರಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯವಾಗುವದರೊಂದಿಗೆ ಪ್ರತ್ಯೇಕ ತೆಲಂಗಾಣದಲ್ಲಿ ಕೆ. ಚಂದ್ರಶೇಖರ್‌ ರಾವ್‌ ಮುಖ್ಯಮಂತ್ರಿಯಾದರು. ಹಿಂದೊಮ್ಮೆ ತೆಲಂಗಾಣದಲ್ಲಿ ತನ್ನ ಹಿಡಿತ ಸಾಧಿಸಿದ್ದ ಟಿಡಿಪಿ ಈಗ ಅಪ್ರಸ್ತುತ ರಾಜಕೀಯ ಪಕ್ಷವಾಯಿತು. ಜೊತೆಗೆ ಒಂದು ಕಾಲದಲ್ಲಿ ಟಿಡಿಪಿ ಪರವಾಗಿ ಇದ್ದ ಹಿಂದುಳಿದ ವರ್ಗಗಳು ಈಗ ಟಿಡಿಪಿಯ ಜೊತೆ ಇರಲಿಲ್ಲ. ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್‌, ಬಿಜೆಪಿ ಕೂಡ ಹೊಸ ತೆಲಂಗಾಣ ರಾಜ್ಯದಲ್ಲಿ ಹೆಚ್ಚಿನ ರಾಜಕೀಯ ಪ್ರಾಮುಖ್ಯತೆಯನ್ನು ಉಳಿಸಿಕೊಳ್ಳಲಿಲ್ಲ.

ಜಗಮೋಹನ್‌ ರೆಡ್ಡಿ ರಾಜಕೀಯ ಯುಗದ ಆರಂಭ ಮತ್ತು ಟಿಡಿಪಿಯ ಕೊನೆಯ ದಿನಗಳ ಕ್ಷಣಗಣನೆ

ಇತ್ತ ವಿಭಜಿತ ಆಂಧ್ರದಲ್ಲಿ ತಮ್ಮ ತಂದೆಯವರಿಂದ ತೆರವಾದ ನಾಯಕನ ಸ್ಥಾನವನ್ನು ತುಂಬಲು ವೈ ಎಸ್‌ ರಾಜಶೇಖರ್‌ ರೆಡ್ಡಿ ಪುತ್ರ ವೈಎಸ್ ಜಗಮೋಹನ್‌ ರೆಡ್ಡಿ ರಾಜಕೀಯ ಹೋರಾಟವನ್ನು ಪ್ರಾರಂಭಿಸಿದರು. ಜಗಮೋಹನ್‌ ಬಂಧನ ಮತ್ತು ಅವರ ಕಿರಿಯ ವಯಸ್ಸು 2014 ರಲ್ಲಿ ವಿಭಜಿತ ಆಂಧ್ರಪ್ರದೇಶದಲ್ಲಿ ನಡೆದ ಮೊದಲ ವಿಧಾನಸಭೆ ಚುನಾವಣೆಯಲ್ಲಿ ತಾತ್ಕಾಲಿಕ ಯಶಸ್ಸನ್ನು ತಂದುಕೊಟ್ಟಿತು. ದೇಶದಲ್ಲಿ ಮೋದಿಯ ಅಲೆ ಮತ್ತು ಹೊಸ ಆಂಧ್ರದ ಉದಯ ಚಂದ್ರಬಾಬು ನಾಯ್ಡು ಅವರಿಗೆ ತಮ್ಮ ಗತವೈಭವವನ್ನು ಪುನರ್‌ ಸ್ಥಾಪಿಸುವ ಕನಸು ಕಾಣುವಂತೆ ಮಾಡಿತು. ಆದರೆ ಮೋದಿ ಅಲೆಯ ತೀವ್ರತೆಯಲ್ಲಿ ಆಂಧ್ರದಲ್ಲಿ ನಿಧಾನಕ್ಕೆ ಬೇರು ಬಿಟ್ಟ ಬಿಜೆಪಿ ಕೂಡ ಚಂದ್ರಬಾಬೂ ನಾಯ್ಡು ಅವರಿಗೆ ಬಹುಕಾಲ ಗಮನಕ್ಕೆ ಬರಲಿಲ್ಲ. ಅತ್ತ ತೀವ್ರಗೊಂಡ ವೈಎಸ್‌ಆರ್‌ ಮತ್ತು ಜಗಮೋಹನ್‌ ರೆಡ್ಡಿಯ ರಾಜಕೀಯ ಹೋರಾಟಗಳು ಟಿಡಿಪಿಗೆ 2014 ರ ಗೆಲುವನ್ನು ಸವಿಯಲು ಬಹುಕಾಲ ಬಿಡಲಿಲ್ಲ. ಪ್ರತ್ಯೇಕ ಅಮರಾವತಿ ರಾಜಧಾನಿಯ ನಿರ್ಮಾಣದ ಪ್ರಯತ್ನ, ಗೋಧಾವರಿ ನದಿ ತಿರುವ ಯೋಜನೆ ಮತ್ತು ವ್ಯಾಪಕ ಭ್ರಷ್ಟಾಚಾರದ ಆರೋಪಗಳು 2019 ರ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿಯ ಹೀನಾಯ ಸೋಲಿಗೆ ಕಾರಣವಾಯಿತು. ಟಿಡಿಪಿ ಬಿಜೆಪಿ ಸಖ್ಯ ತೊರೆದು ಕಾಂಗ್ರೆಸ್‌ ಜೊತೆ ಸೇರಿಕೊಂಡರೂ ಈ 2019 ರಲ್ಲಿನ ಹೀನಾಯ ಸೋಲಿನಿಂದ ಚಂದ್ರಬಾಬು ನಾಯ್ಡು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ಚಂದ್ರಬಾಬು ನಾಯ್ಡು ಮತ್ತು ಟಿಡಿಪಿಯನ್ನು ಬಲವಾಗಿ ದ್ವೇಷಿಸುವ ವೈಎಸ್ ಜಗಮೋಹನ್‌ ರೆಡ್ಡಿ ವಿಭಜಿತ ಆಂಧ್ರದ ಮುಖ್ಯಮಂತ್ರಿಯಾಗಿ ಟಿಡಿಪಿ ಪಕ್ಷವನ್ನು ರಾಜಕೀಯವಾಗಿ ಅಂತ್ಯಗೊಳಿಸಲು ಪ್ರಯತ್ನ ಪಡುತ್ತಿರುವಂತೆ ಕಾಣುತ್ತಿದೆ.

ವೈಎಸ್‌ ಜಗಮೋಹನ್‌ ರೆಡ್ಡಿ ತಮ್ಮ ತಂದೆಯಂತೆಯೇ ಚಂದ್ರಬಾಬು ನಾಯ್ಡು ಅವರ ಮೇಲೆ ವೈಯಕ್ತಿಕ ದ್ವೇಷ ಮತ್ತು ಹಗೆಯನ್ನು ಹೊಂದಿರುವುದು ಆಂಧ್ರ ರಾಜಕೀಯವನ್ನು ಗಮನಿಸುವ ಯಾರಿಗಾದರೂ ಅರ್ಥವಾಗುತ್ತದೆ. ಜಗಮೋಹನ್‌ ರೆಡ್ಡಿಯವರ 2019 ರ ವಿಧಾನಸಭೆ ಮತ್ತು ಲೋಕಸಭೆಯ ಏಕಪಕ್ಷೀಯ ಗೆಲುವು ತದನಂತರದಲ್ಲಿ ಅವರು ತೆಗೆದುಕೊಂಡ ಆಕ್ರಮಣಕಾರಿ ನಿರ್ಧಾರಗಳು ಟಿಡಿಪಿಯ ಮರು ಸಂಘಟನೆಯ ಕನಸು ಕಮರುವಂತೆ ಮಾಡುತ್ತಿವೆ. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ, ಉಪ ಚುನಾವಣೆಗಳಲ್ಲೂ ಟಿಡಿಪಿ ಕೆಲವು ಕಡೆ ಖಾತೆಗಳನ್ನು ತೆರಯಲೂ ವಿಫಲವಾಗಿದೆ. ಇದರ ಜೊತೆಗೆ ಜಗಮೋಹನ್‌ ರೆಡ್ಡಿ ವಯಕ್ತಿಕ ಆಸಕ್ತಿಯ ಮೂಲಕ ಚಂದ್ರಬಾಬು ಮತ್ತು ಟಿಡಿಪಿ ನಾಯಕರ ಮೇಲೆ ನಡೆಸುತ್ತಿರುವ ತನಿಖೆಗಳು ಸದ್ಯದಲ್ಲಿ ಟಿಡಿಪಿ ಮತ್ತೊಮ್ಮೆ ಆಂಧ್ರದಲ್ಲಿ ತನ್ನ ಹಿಂದಿನ ಪ್ರಾಬಲ್ಯವನ್ನು ಹೊಂದುವ ಸಾಧ್ಯತೆಗಳನ್ನು ತಳ್ಳಿ ಹಾಕುತ್ತಿವೆ.

ಜೊತೆಗೆ ಕೇಂದ್ರದ ಬಿಜೆಪಿ ನಾಯಕರ ಜೊತೆ ಆಪ್ತ ಸಂಬಂಧಗಳನ್ನು ಹೊಂದಿರುವ ಜಗನ್‌ ಟಿಡಿಪಿ ಬಿಜೆಪಿಯ ಹತ್ತಿರವೂ ಸುಳಿಯದಂತೆ ನೋಡಿಕೊಳ್ಳತೊಡಗಿದ್ದಾರೆ. 2021 ರ ಆರಂಭದಲ್ಲಿ ತೆಲಗು ದೇಶಂ ಪಕ್ಷ ಬಿಜೆಪಿಯೊಂದಿಗೆ ವಿಲೀನಗೊಳಿಸುವ ಹಲವು ಪ್ರಯತ್ನವನ್ನು ಚಂದ್ರಬಾಬು ನಾಯ್ಡು ಮಾಡಿದ್ದರೆನ್ನಲಾಗಿದ್ದು ಇದಕ್ಕೆ ಮುಖ್ಯಮಂತ್ರಿ ಜಗಮೋಹನ್‌ ರೆಡ್ಡಿ ತೊಡಕಾಗಿದ್ದಾರೆನ್ನಲಾಗುತ್ತಿದೆ.

ಎರಡು ಆಕ್ರಮಣಕಾರಿ ಪಕ್ಷಗಳ ನಡುವೆ ಟಿಡಿಪಿಯ ಮುಂದಿನ ರಾಜಕೀಯ ಭವಿಷ್ಯ?

ಆಕ್ರಮಣಕಾರಿ ನಾಯಕ ಜಗಮೋಹನ್‌ ರೆಡ್ಡಿಯ ನಂತರ ಇನ್ನೊಂದು ಆಕ್ರಮಣಕಾರಿ ಪಕ್ಷವೂ ಆಂಧ್ರಪ್ರದೇಶದಲ್ಲಿ ಬೇರು ಬಿಡತೊಡಗಿದೆ. ಹಿಂದುತ್ವದ ಸಿದ್ಧಾಂತ, ತಿರುಪತಿ ತಿಮ್ಮಪ್ಪನ ಗಲಾಟೆಗಳನ್ನು ತನ್ನ ಮುಖ್ಯ ಅಜೆಂಡಾಗಳನ್ನಾಗಿಸಿಕೊಂಡು ಬಿಜೆಪಿ ಮೇಲ್ಜಾತಿ ಮತ್ತು ಮಧ್ಯಮವರ್ಗಗಳ ಮತದಾರರನ್ನು ನಿಧಾನಕ್ಕೆ ತನ್ನತ್ತ ಸೆಳೆಯತೊಡಗಿದೆ. ಇದರ ನಡುವೆ ವೈಎಸ್‌ ಜಗಮೋಹನ್‌ ರೆಡ್ಡಿ ಹಿಂದುಳಿದ ವರ್ಗ ಮತ್ತು ಜಾತಿಗಳ ಪ್ರಬಲ ನಾಯಕರಾಗಿ ಆಂಧ್ರದಲ್ಲಿ ಬೆಳೆದು ನಿಂತಿದ್ದಾರೆ. ಬಡವರ್ಗ ಮತ್ತು ಕೆಳ ಮಧ್ಯಮ ವರ್ಗಗಳನ್ನು ಸೆಳೆಯುವಂತೆ ಅವರ ಇತ್ತೀಚಿನ ಎಲ್ಲಾ ಕಾರ್ಯಕ್ರಮಗಳು ಮತ್ತು ಯೋಜನೆಗಳಿವೆ. ಒಂದು ಕಾಲದಲ್ಲಿ ಆಂಧ್ರದಲ್ಲಿ ತಾನೇ ತಂದು ನೆಟ್ಟ ಬಿಜೆಪಿಯ ಕಮಲದ ಗಿಡ ಈಗ ತೆಲಗು ದೇಶಂ ಪಕ್ಷಕ್ಕೆ ಎಂದೂ ನಿಲ್ಲುತ್ತಿದ್ದ ಮಧ್ಯಮ ವರ್ಗ ಮತ್ತು ಮೇಲ್ಜಾತಿಯ ಮತದಾರರನ್ನು ತನ್ನತ್ತ ಕಸಿದುಕೊಳ್ಳತೊಡಗಿದೆ. ವೈಎಸ್‌ಆರ್‌ ಕಾಂಗ್ರೆಸ್‌ ಮತ್ತು ಬಿಜೆಪಿಯ ಆಕ್ರಮಣದಿಂದ ಪಕ್ಷವನ್ನು ಮತ್ತು ತನ್ನನ್ನು ಚಂದ್ರಬಾಬು ನಾಯ್ಡು ಉಳಿಸಿಕೊಳ್ಳಬೇಕಾದರೆ ಮತ್ತೊಮ್ಮೆ ಎನ್‌ಟಿ ರಾಮರಾವ್‌ ಅವರನ್ನು ನೆನೆಯಬೇಕು ಮತ್ತು ಅವರ ಹೋರಾಟದ ಹಾದಿಯನ್ನು ಮರಳಿ ತುಳಿಯಬೇಕು. ತೆಲಗು ದೇಶಂ ಪಕ್ಷದ ಸ್ಥಾಪನೆಯ ಕಾಲದಲ್ಲಿ ಎನ್‌ಟಿಆರ್‌ ಹೇಳಿದ ಸಿದ್ಧಾಂತ ʼತೆಲಗು ಭಾಷಿಕರ ನೆಲ ನುಡಿಯ ಸಂರಕ್ಷಣೆಗೆ ಕಠಿಬದ್ಧವಾಗಬೇಕುʼ ಎಂಬ ನಿಲುವು ಮತ್ತು ಧ್ಯೇಯವೊಂದೆ ಟಿಡಿಪಿಯನ್ನು ಈ ದಶಕದಲ್ಲಿ ಆಂಧ್ರ ಪ್ರದೇಶದ ರಾಜಕೀಯದಲ್ಲಿ ಜೀವಂತವಾಗಿ ಉಳಿಸಬಲ್ಲದು. ತೆಲಗು ಭಾಷಿಕರ ದಂತಕತೆ ಎನ್‌ಟಿಆರ್‌ 98 ನೇ ವರ್ಷದ ಜನ್ಮ ದಿನದ ಸಂದರ್ಭದಲ್ಲಿ ಚಂದ್ರಬಾಬು ನಾಯ್ಡು ಅವರ ತೆಲಗು ದೇಶಂ ಪಕ್ಷಕ್ಕೆ ಉಳಿದಿರುವುದು ಇದೊಂದೆ ಕಡೆಯ ರಾಜಕೀಯ ಅಸ್ತ್ರ.


ಇದನ್ನೂ ಓದಿ: ಜೈಲಿನೊಳಗಿಂದ ಹೋರಾಟಗಾರ ಉಮರ್‌ ಖಾಲಿದ್‌ ಬರೆದ ಹೃದಯಸ್ಪರ್ಶಿ ಪತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...