Homeಮುಖಪುಟಜೈಲಿನೊಳಗಿಂದ ಹೋರಾಟಗಾರ ಉಮರ್‌ ಖಾಲಿದ್‌ ಬರೆದ ಹೃದಯಸ್ಪರ್ಶಿ ಪತ್ರ

ಜೈಲಿನೊಳಗಿಂದ ಹೋರಾಟಗಾರ ಉಮರ್‌ ಖಾಲಿದ್‌ ಬರೆದ ಹೃದಯಸ್ಪರ್ಶಿ ಪತ್ರ

ಈ ಸಮಯದಲ್ಲಿ ನಾನು ಜೈಲಿನಿಂದ ಹೊರಗಿದ್ದರೆ ಏನು ಮಾಡುತ್ತಿದ್ದೆ ಎಂಬುದನ್ನು ಉಮರ್ ಖಾಲಿದ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

- Advertisement -
- Advertisement -

ಮೂಲ : ಕ್ವಿಂಟ್‌
ಅನುವಾದ : ರಾಜೇಶ್‌ ಹೆಬ್ಬಾರ್

ಜೈಲಿನ ಪ್ರತಿ ಕೋಣೆಗಳು ಮರಣ ಭೀತಿಯಿಂದ ತುಂಬಿಹೋಗಿವೆ. ಜೈಲಿನಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು ಉಸಿರುಗಟ್ಟಿಸುತ್ತಿದ್ದು, ಇಲ್ಲಿರುವ ಮುನುಷ್ಯರ ದೇಹ ಮತ್ತು ಮನಸ್ಸು ನಿಧಾನಕ್ಕೆ ತೆವಳಿ ಬರುತ್ತಿರುವ ಸೋಂಕಿನಿಂದ ಪ್ರತಿಯೊಬ್ಬರ ದೇಹ ಮತ್ತು ಆತ್ಮಸ್ಥೈರ್ಯ ಕುಗ್ಗಿಹೋಗಿದೆ. ಬದುಕುಳಿಯುವ ನೀರಿಕ್ಷೆಗಳು ನಿಧಾನಕ್ಕೆ ಕ್ಷೀಣಿಸುತ್ತಿವೆ. ಮನೆಯವರೊಂದಿಗೆ ಸಂಪರ್ಕಿಸಲು ವಾರದಲ್ಲಿ ಒಮ್ಮೆ ನೀಡುವ 5 ನಿಮಿಷಗಳ ದೂರವಾಣಿ ಸಂಭಾಷಣೆ ಮತ್ತು ಹತ್ತು ನಿಮಿಷಗಳ ಎರಡು ವಿಡಿಯೋ ಕಾಲ್‌ಗಳಿಗಾಗಿ ಚಾತಕ ಪಕ್ಷಿಯಂತೆ ವಾರವಿಡಿ ಕಾಯುತ್ತೇನೆ. ಆ ಐದು ನಿಮಿಷಗಳನ್ನು ಮುಗಿಸುವುದಕ್ಕಾಗಿಯೇ ಕಾದು ಕುಳಿತಿರುವ ಟೈಮರ್‌ ಜೊತೆ ನನ್ನ ಯಾವ ಚೌಕಾಸಿ ತಂತ್ರವೂ ನಡೆಯುವುದಿಲ್ಲ. ಐದು ನಿಮಿಷಕ್ಕಿಂತ ಒಂದು ಸೆಕೆಂಡ್‌ ಹೆಚ್ಚಾಗದಂತೆ ಕರೆ ಸ್ಥಗಿತಗೊಳ್ಳುತ್ತದೆ. ನನ್ನ ಜೀವನದಲ್ಲಿ ಇದುವರೆಗೆ ಒಂದು ಸೆಕೆಂಡ್‌ ಸಮಯದ ಬೆಲೆ ಯಾವತ್ತೂ ಅರಿವಿಗೆ ಬಂದಿರಲಿಲ್ಲ. ಮನೆಯವರೊಂದಿಗೆ ವಾರಕ್ಕೊಮ್ಮೆ ಮಾತನಾಡುವ ಆ ಐದು ನಿಮಿಷದ ಪ್ರತಿ ಸೆಕೆಂಡ್‌ ಕೂಡ ಇಂದು ನನಗೆ ಜೀವನದ ಅತಿ ಮುಖ್ಯ ಕ್ಷಣಗಳಂತೆ ಭಾಸವಾಗುತ್ತಿದೆ.
-ಉಮರ್‌ ಖಾಲಿದ್‌

ಇದು ಸರ್ಕಾರದ ವಿರುದ್ಧದ ಪ್ರತಿಭಟನೆಯ ಕಾರಣಕ್ಕೆ ಯುಎಪಿಎ ಕಾಯ್ದೆಯಡಿ ತಿಹಾರ್‌ ಜೈಲಿನಲ್ಲಿ ಬಂಧಿಯಾಗಿರುವ ಹೋರಾಟಗಾರ ಉಮರ್‌ ಖಾಲಿದ್‌ ತನ್ನ ಸ್ನೇಹಿತರಾದ ಬಾನೋಜ್ಯೊತ್ಸನಾ ಲಾಹಿರಿ ಮತ್ತು ಅನಿರ್ಬಾನ್‌ ಭಟ್ಟಾಚಾರ್ಯ ಅವರಿಗೆ ಬರೆದಿರುವ ಪತ್ರದ ಸಾಲುಗಳು..

ಇಂದು ಖಾಲಿದ್‌ ಈಶಾನ್ಯ ದೆಹಲಿಯಲ್ಲಿ ಕಳೆದ ವರ್ಷ ನಡೆದ ಕೋಮು ಗಲಭೆಯ ಆರೋಪದ ಮೇಲೆ ತಿಹಾರ್‌ ಜೈಲಿನಲ್ಲಿ ಖೈದಿಯಾಗಿದ್ದಾರೆ. ಜಾಮೀನಿಗೂ ಅವಕಾಶವಿಲ್ಲದ ಯುಎಪಿಎ ಕಠಿಣ ಕಾನೂನಿನಡಯಲ್ಲಿ ಉಮರ್‌ ಖಾಲಿದ್‌ ಜೈಲಿನ ದಿನಗಳನ್ನು ಕಳೆಯುತ್ತಿದ್ದಾರೆ. ತಮ್ಮ ಸ್ನೇಹಿತರಿಗೆ ಬರೆದ ಪತ್ರದಲ್ಲಿ ಉಮರ್‌ ಜೈಲಿನಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕುರಿತು ತಮ್ಮ ಕಳವಳ ಮತ್ತು ಭೀತಿಯನ್ನು ತೋಡಿಕೊಂಡಿದ್ದಾರೆ. ತಮ್ಮ ತಾಯಿ ಮತ್ತು ಅಂಕಲ್‌ ಕೊರೋನಾ ಸೋಂಕಿಗೆ ತುತ್ತಾಗಿರುವುದು ನಿತ್ಯ ಆತಂಕದಲ್ಲಿ ಜೀವ ಹಿಡಿದು ಬದುಕುವಂತೆ ಮಾಡಿದೆ ಎಂದು ಖಾಲಿದ್‌ ಜೈಲಿನೊಳಗಿನ ತಮ್ಮ ನೋವು ಸಂಕಟಗಳನ್ನು ಸ್ನೇಹಿತರಿಗೆ ಬರೆದ ಈ ಪತ್ರದ ಮೂಲಕ ಹಂಚಿಕೊಂಡಿದ್ದಾರೆ.

ಪತ್ರದಲ್ಲಿ, ಕುಟುಂಬ ಸಂಕಷ್ಟದಲ್ಲಿರುವಾಗ ಮನೆಗೆ ಹೋಗಲು ಸಾಧ್ಯವಾಗದ ನೋವನ್ನು ಹಂಚಿಕೊಂಡಿರುವ ಖಾಲಿದ್‌, ಕೋವಿಡ್‌ ಕುರಿತಾಗಿ ತೀವ್ರ ಭಯಗೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಉಮರ್‌ ಖಾಲಿದ್‌ ಬರೆದ ಹೃದಯಸ್ಪರ್ಷಿ ಪತ್ರದ ಸಾರಾಂಶ ಇಲ್ಲಿದೆ..

ಆರೋಗ್ಯ ಬಿಕ್ಕಟ್ಟು ಜೈಲಿನ ಗೋಡೆಗಳೊಳಗಿನ ಸಂಕಷ್ಟವನ್ನು ನೂರುಪಟ್ಟು ಹೆಚ್ಚಿಸಿದೆ.

ಕೊರೋನಾ ಸಾಂಕ್ರಾಮಿಕ ಖೈದಿಗಳ ಜೀವನದ ಮೇಲೆ ಬೀರಿರುವ ಪರಿಣಾಮದ ಬಗ್ಗೆ ಬರೆಯುತ್ತಾ ಅವರು, ಸೋಂಕಿನ ಭೀತಿ ಜೈಲುಹಕ್ಕಿಗಳ ಮನಸ್ಸು ದೇಹದ ಚೈತನ್ಯವನ್ನೇ ನಾಶಪಡಿಸಿದೆ. ಸೋಂಕಿನ ಕರಾಳತೆಯ ಛಾಯೆ ಜೈಲುಗಳನ್ನೂ ಆವರಿಸಿದ್ದು, ಖೈದಿಗಳ ಸಂಕಷ್ಟಗಳನ್ನು ನೂರುಪಟ್ಟು ಹೆಚ್ಚಿಸಿದೆ. ನಾನು ಕಳೆದ 8 ತಿಂಗಳುಗಳಿಂದ ಜೈಲಿನ ಕೋಣೆಯಲ್ಲಿ ಏಕಾಂಗಿಯಾಗಿ ಬಂಧಿಯಾಗಿದ್ದೇನೆ. ಸಾಮಾನ್ಯ ದಿನಗಳಲ್ಲೇ ಜೈಲಿನ ಜೀವನ ನನಗೆ ತುಂಬಾ ಕಷ್ಟ. ದಿನದ 20 ಗಂಟೆಗಳ ಕಾಲ ಚಿಕ್ಕ ಕೋಣೆಯೊಳಗೆ ಒಬ್ಬನೇ ಬಂಧಿಯಾಗಿರುವುದು ಮಾನಸಿಕವಾಗಿ ನನ್ನನ್ನು ಅಧಃಪತನಕ್ಕೆ ದೂಡಿದೆ ಎಂದು ಉಮರ್‌ ಖಾಲಿದ್ ತಮ್ಮ ಪತ್ರದಲ್ಲಿ ಬರೆದುಕೊಂಡಿದ್ದಾರೆ.

ಕೊರೋನಾ ಸೋಂಕಿನ ಎರಡನೇ ಅಲೆ ಭಾರತದಲ್ಲಿ ತೀವ್ರವಾಗಿ ಹರಡುತ್ತಿರುವ ಕಳೆದ ಒಂದು ತಿಂಗಳಿನಿಂದ ನಾನು ಆತಂಕ ಮತ್ತು ಭಿತಿಯಿಲ್ಲದ ಒಂದೇ ಒಂದು ಹಗಲು ಮತ್ತು ರಾತ್ರಿಯನ್ನು ಜೈಲಿನ ಕೋಣೆಯೊಳಗೆ ಕಳೆದಿಲ್ಲ. ಈ ಒಂದು ತಿಂಗಳಿನಲ್ಲಿ ನನ್ನ ಕುಟುಂಬ ಮತ್ತು ಪ್ರೀತಿ ಪಾತ್ರರು ಇನ್ನಿಲ್ಲದಂತೆ ನೆನಪಾಗುತ್ತಿದ್ದಾರೆ. ಏಪ್ರಿಲ್ ಮಧ್ಯದ ವೇಳೆಗೆ ನನ್ನ ತಾಯಿ ಮತ್ತು ಕುಂಟುಂಬದ ಅನೇಕರಿಗೆ ಕೊರೋನಾ ಸೋಂಕು ತಗುಲಿರುವ ಸುದ್ದಿ ನನಗೆ ತಿಳಿಯಿತು. ನನ್ನ ಅಂಕಲ್‌ ಪರಿಸ್ಥಿತಿ ಚಿಂತಾಜನಕವಾಗಿದೆ. ಅವರ ದೇಹದ ಆಕ್ಸಿಜನ್‌ ಪ್ರಮಾಣ ಸತತವಾಗಿ ಇಳಿದ ಪರಿಣಾಮ ಆಸ್ಪತ್ರೆಗೆ ದಾಖಲಿಸಲಾಯಿತು. ತಕ್ಷಣವೇ ಅವರನ್ನು ಐಸಿಯೂ ಗೆ ಸೇರಿಸಲಾಗಿದೆ.
-ಉಮರ್‌ ಖಾಲಿದ್

ಪ್ರಿತಿಪಾತ್ರರೊಂದಿಗಿನ ಸಂಬಂಧವನ್ನೇ ಕಡಿತಗೊಳಿಸಿದ ಕೊರೋನಾ ಕ್ವಾರಂಟೈನ್‌

ಉಮರ್‌ ಖಾಲಿದ್‌ ತಮ್ಮ ಪತ್ರದಲ್ಲಿ ಕೊರೋನಾ ಸೋಂಕಿಗೆ ಒಳಗಾದ ಸಂದರ್ಭವನ್ನು ವಿವರಿಸುತ್ತಾರೆ. ನಮ್ಮ ಮನೆಯವರ ಆರೋಗ್ಯದ ಬಗ್ಗೆ ಚಿಂತಿತನಾಗಿದ್ದ ಒಂದು ದಿನ ಮುಂಜಾನೆ ನನಗೆ ಧಿಡೀರನೇ ಎಚ್ಚರವಾಯಿತು. ವಿಪರೀತ ಜ್ವರ ಮತ್ತು ಮೈಕೈನೋವು ಇದ್ದಕ್ಕಿದ್ದಂತೆ ಆದಿನ ನನ್ನಲ್ಲಿ ಕಾಣಿಸಿಕೊಂಡಿತು. ಆ ದಿನ ಮುಂಜಾನೆ ನನಗೆ ನಡೆದಾಡುವ ಚೈತನ್ಯವೂ ಇರಲಿಲ್ಲ. ಕಷ್ಟಪಟ್ಟು ಜೈಲಿನ ಆಸ್ಪತ್ರೆಯ ಹೊರರೋಗಿಗಳ ವಿಭಾಗಕ್ಕೆ ತೆರಳಿದೆ. ಅಲ್ಲಿ ನನ್ನನ್ನು ಪರೀಕ್ಷಿಸಿ ಕೆಲವು ಔಷಧಿಗಳೊಂದಿಗೆ ಮರಳಿ ಕಳುಹಿಸಿದರು ಎಂದು ಜೈಲಿನಲ್ಲಿ ಕೋವಿಡ್‌ ಸೋಂಕಿಗೆ ಒಳಗಾದ ಸಂದರ್ಭದ ಪರಿಸ್ಥಿತಿಯ ಬಗ್ಗೆ ಬರೆದಿದ್ದಾರೆ.

ಸತತ 6 ದಿನಗಳ ಕಾಲ ಸೋಂಕು ಲಕ್ಷಣಗಳು ಕಾಣಿಸಿಕೊಂಡ ಪರಿಣಾಮ ಮತ್ತು ನ್ಯಾಯಾಲಯದ ಆದೇಶದ ಮೇರೆಗೆ ಜೈಲಿನಲ್ಲಿ ಕೊರೋನಾ ಪರಿಕ್ಷೆ ನಡೆಸಿದರು. ಕೊರೋನಾ ಪರೀಕ್ಷೆಯಿಂದ ನನಗೆ ಸೋಂಕು ತಗುಲಿರುವುದು ಧೃಡಪಟ್ಟಿತು. ಸೋಂಕಿನ ಸಂದರ್ಭದಲ್ಲಿ ಅಗತ್ಯ ಆರೋಗ್ಯ ಚಿಕಿತ್ಸೆಗಳನ್ನು ನೀಡಿದರು. ಆದರೆ ಕೋವಿಡ್‌ ಸೋಂಕಿನ ದಿನಗಳೆಂದರೆ ಭಯಾನಕ ಗಳಿಗೆಗಳು ಅವು. ಒಂದೊಂದು ಗಂಟೆಯೂ ಒಂದೊಂದು ದಿನದಷ್ಟು ದೀರ್ಘ. ಕ್ವಾರಂಟೈನ್‌ ದಿನಗಳಲ್ಲಿ ಜೈಲಿನ ಕೋಣೆಯಿಂದ ಹೊರಬರಲು ಯಾವ ಅವಕಾಶಗಳೂ ಇರುವುದಿಲ್ಲ. ದೀರ್ಘ ಸಮಯ ಮನೆಯವರೊಂದಿಗೆ ಪ್ರೀತಿಪಾತ್ರರೊಂದಿಗೆ ಹಾಗೂ ಹೊರ ಜಗತ್ತಿನೊಂದಿಗೆ ಯಾವುದೇ ಸಂಪರ್ಕವಿಲ್ಲದಂತೆ ಕಳೆದೆ. ಕೊರೋನಾ ಸೋಂಕಿಗೆ ತುತ್ತಾದ ನನ್ನ ತಾಯಿ ಮತ್ತು ಕುಟುಂಬದ ಬಗ್ಗೆ ಚಿಂತಿಸುತ್ತ ಅನೇಕ ಹಗಲು ರಾತ್ರಿಗಳನ್ನು ಕಳೆದೆ.
-ಉಮರ್‌ ಖಾಲಿದ್‌

ಸುಪ್ರಿಂ ಕೋರ್ಟ್‌ ಆದೇಶವನ್ನೇ ಗಾಳಿಗೆ ತೂರಿದ ಯುಎಪಿಎ ಕಾಯ್ದೆ

ಉಮರ್‌ ಖಾಲಿದ್‌ ಜೊತೆ ಬಂಧಿತರಾಗಿರುವ ಇತರ ಆರೋಪಿಗಳು ಮತ್ತು ಜೈಲಿನ ಇತರ ಖೈದಿಗಳು ಕೋವಿಡ್‌ ಸಾಂಕ್ರಾಮಿಕದ ಕಾರಣಕ್ಕಾಗಿ ಪೆರೋಲ್‌ ಮತ್ತು ಜಾಮೀನಿನ ಆಧಾರದ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಆದರೆ ಉಮರ್‌ ಖಾಲಿದ್‌ ಅವರನ್ನು ಸರ್ಕಾರ ಬಿಡುಗಡೆಗೊಳಿಸಿಲ್ಲ. ಕೊರೋನಾ ಸೋಂಕಿಗೆ ತುತ್ತಾದ ದಿನಗಳಲ್ಲಿ ನಾನು ಕ್ವಾರಂಟೈನ್‌ ನಲ್ಲಿ ಇದ್ದೆ. ಆಗ ಕಳೆದ ವರ್ಷದಂತೆ ಈ ವರ್ಷವೂ ಸುಪ್ರಿಂ ಕೋರ್ಟ್‌ ಕೋವಿಡ್‌ ಕಾರಣಕ್ಕಾಗಿ ಖೈದಿಗಳನ್ನು ಬಿಡುಗಡೆ ಮಾಡಲು ಉನ್ನತ ಸಮಿತಿಯನ್ನು ರಚಿಸಿರುವುದರ ಕುರಿತು ಓದಿದೆ ಎಂದು ಅವರು ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ಯುಎಪಿಎ ಕಾಯ್ದೆಯಡಿ ಬಂಧಿತರಾಗಿರುವ ಯಾರಿಗೂ ಕೋವಿಡ್‌ ಕಾರಣಕ್ಕೆ ಮಧ್ಯಂತರ ಜಾಮೀನನ್ನೋ ಅಥವಾ ಪೆರೋಲ್‌ ಅನ್ನೋ ನೀಡಲಾಗುವುದಿಲ್ಲವೆಂದು ನಾನು ಕಳೆದ ವರ್ಷದ ಅನುಭವದಿಂದ ತಿಳಿದುಕೊಂಡಿದ್ದೆ. ಈ ವರ್ಷ ಅದು ನನಗೆ ಖಚಿತವಾಗಿದೆ. ಯುಎಪಿಎ ಕಾಯ್ದೆಯಡಿಯಲ್ಲಿ ಬಂಧಿತರಾಗಿರುವವರಿಗೆ ಜೈಲಿನಿಂದ ಬಿಡುಗಡೆಯಾಗಲು ಇರುವ ಏಕೈಕ ಅವಕಾಶವೆಂದರೆ ಅದು ಸಾಮಾನ್ಯ ಜಾಮೀನು ಮಾತ್ರ. ಯುಎಪಿಎ ಕಾಯ್ದೆಯ ನಿಯಮಗಳು ಆರೋಪಿಯು ಜಾಮೀನು ಪಡೆದುಕೊಳ್ಳುವುದನ್ನು ಅತ್ಯಂತ ಕಷ್ಟವಾಗಿಸಿವೆ. ನನ್ನಂತಹ ಯುಎಪಿಎ ಆರೋಪಿಗಳಿಗೆ ಜಾಮೀನು ಸಿಗುವುದು ಅಸಾಧ್ಯವೇ ಸರಿ.

ಯುಎಪಿಎ ಕಾಯ್ದೆಯು ವಿಚಾರಣಾಧೀನ ಖೈದಿಗಳಿಗೆ ಜಾಮೀನು ನೀಡಬೇಕು, ಜೈಲು ಕೊನೆಯ ಆಯ್ಕೆಯಾಗಬೇಕು ಎಂಬ ಸುಪ್ರಿಂ ಕೋರ್ಟ್‌ ಹೇಳಿರುವ ಮಾತುಗಳನ್ನು ಹಾಸ್ಯಾಸ್ಪದವಾಗಿವೆ. ಯುಎಪಿಎ ಕಾಯ್ದೆ ಸುಪ್ರಿಂ ಕೋರ್ಟ್‌ ಹೇಳಿದ ಈ ನಿಯಮ ಮತ್ತು ತತ್ವವನ್ನು ತಲೆಕೆಳಗೆ ಮಾಡಿದೆ. ಇಲ್ಲಿ ಆರೋಪಿಯೊಬ್ಬನಿಗೆ ಜಾಮೀನು ಸಿಗುವುದು ಆರೋಪಿ ತಾನು ನಿರಪರಾಧಿ ಎಂದು ನ್ಯಾಯಾಲಯದಲ್ಲಿ ಸಾಬೀತುಪಡಿಸಿ ಆಮೂಲಕ ನ್ಯಾಯಾಲಕ್ಕೆ ತನ್ನ ಮೇಲಿನ ಆರೋಪಗಳು ದುರುದ್ಧೇಶಗಳಿಂದ ಕೂಡಿದವು ಎಂದು ಮನವರಿಕೆ ಮಾಡಿಕೊಟ್ಟಾಗ ಮಾತ್ರ.

ದೀರ್ಘಾವದಿಯ ಜೈಲು ಮತ್ತು ನ್ಯಾಯಾಲಯದ ಸುದೀರ್ಘ ವಿಚಾರಣೆಯ ನಂತರವಷ್ಟೆ ನಾವು ಜೈಲಿನಿಂದ ಬಿಡುಗಡೆಯಾಗುವ ಕನಸು ಕಾಣಬಹುದು.

ಭಯೋತ್ಪಾದನಾ ಚಟುವಟಿಕೆಗಳನ್ನು ನಿಗ್ರಹಿಸಲು ಜಾರಿಗೆ ತಂದ ಯುಎಪಿಎ ಕಾಯ್ದೆಯ ಕಠೋರತೆಯನ್ನು ಉಮರ್‌ ಖಾಲಿದ್‌ ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ಈಶಾನ್ಯ ದೆಹಲಿಯ ಗಲಭೆ ನಂತರ ನಮ್ಮನ್ನು ಮೊದಲ ಬಾರಿಗೆ ಬಂಧಿಸಿದ 14 ತಿಂಗಳ ನಂತರವೂ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಪ್ರಾರಂಭವಾಗಿಲ್ಲ. ಹದಿನಾಲ್ಕು ತಿಂಗಳ ಈ ಸುದೀರ್ಘ ಜೈಲು ವಾಸದಲ್ಲಿ ನಾನು ನಿರಪರಾಧಿಯೆಂದು ಸಾಬೀತುಪಡಿಸುವ ಏಕೈಕ ಅವಕಾಶವೂ ನನಗೆ ಲಭಿಸಿಲ್ಲ ಎಂದು ಉಮರ್‌ ಖಾಲಿದ್‌ ಯುಎಪಿಎ ಎಂಬ ಅಮಾನವೀಯ ಕಾಯ್ದೆಯ ಕುರಿತಾಗಿ ತಮ್ಮ ಪತ್ರದಲ್ಲಿ ಬೆರೆದಿದ್ದಾರೆ.

ಪಿತೂರಿಯ ಕಾರಣದಿಂದ ಜೈಲಿನಲ್ಲಿರುವ ನಾವು 16 ಜನರು ಒಂದು ವರ್ಷದಿಂದ ವಿಚಾರಣಾ ಪೂರ್ವ ಸೆರೆವಾಸದಲ್ಲಿದ್ದೇವೆ. ಅನೇಕ ನ್ಯಾಯಾಧೀಶರು ಮತ್ತು ವಕೀಲರು ಸೋಂಕಿಗೆ ತುತ್ತಾಗುವ ಮೂಲಕ ಕೊರೋನಾ ಸಾಂಕ್ರಾಮಿಕವು ವಿಚಾರಣೆಯನ್ನು ಇನ್ನಷ್ಟು ವಿಳಂಬಗೊಳಿಸುತ್ತಿದೆ. ಕೋರ್ಟ್‌ನ ವಿಳಂಬದ ಸುದೀರ್ಘವಾದ ವಿಚಾರಣೆ ಪ್ರಕ್ರಿಯೆಯೆ ಒಂದು ಶಿಕ್ಷೆಯಾಗಿರುವಾಗ ಕೊರೋನಾ ಸಾಂಕ್ರಾಮಿಕವು ಈ ಶಿಕ್ಷೆಯನ್ನು ಇನ್ನಷ್ಟು ಕ್ರೂರಗೊಳಿಸುತ್ತ ಸಾಗುತ್ತಿದೆ.

ನನಗೆ ಈಗ ಯಾವ ನಿರೀಕ್ಷೆಯೂ ಉಳಿದಿಲ್ಲ. ಕಳೆದ ವರ್ಷ ಪ್ರತಿಭಟನಾಕಾರರನ್ನು ಹತ್ತಿಕ್ಕುವ ಸರ್ಕಾರದ ದಮನಕಾರಿ ಧೋರಣೆ ಕೊರೋನಾ ಸಾಂಕ್ರಾಮಿಕದ ಕಾರಣದಿಂದ ಯಾರ ಗಮನಕ್ಕೂ ಬಂದಿಲ್ಲ. ಮಾಧ್ಯಮಗಳು ಲಾಕ್‌ಡೌನ್‌ ಮತ್ತು ಸಾಂಕ್ರಾಮಿಕದ ವರದಿಯಲ್ಲಿ ನಿರತರಾದವು. ಪ್ರಕರಣ ದೇಶದ ನೆನಪಿನಿಂದ ಅಳಿಸಿಹೋಯಿತು. ತನ್ನ ವಿರುದ್ಧ ಧ್ವನಿ ಎತ್ತಿದ ನಮ್ಮಂತ ಸಿಎಎ ಹೋರಾಟಗಾರರನ್ನು ಹತ್ತಿಕ್ಕಲು ಜೈಲಿನಲ್ಲಿ ಕೊಳೆಸಲು ಸರ್ಕಾರಕ್ಕೆ ಕೊರೋನಾ ಸಾಂಕ್ರಾಮಿಕದ ನೆಪ ಸುಲಭವಾಗಿ ದಾರಿಮಾಡಿಕೊಟ್ಟಿದೆ.

ನತಾಶಾಗಾಗಿ ಮರುಗುತ್ತಿದೆ ನನ್ನ ಹೃದಯ

ತನ್ನ ಪತ್ರದ ಆರಂಭದಲ್ಲಿ ಉಮರ್‌ ಖಾಲಿದ್‌ ಯುಎಪಿಎ ಕಾಯ್ದೆಯಡಿಯಲ್ಲಿ ಬಂಧಿತರಾಗಿರುವ ಮತ್ತೊಬ್ಬ ಸಿಎಎ ವಿರುದ್ಧದ ಹೋರಾಟಗಾರ್ತಿ ನತಾಶಾ ನರ್ವಾಲ್‌ ಗಾಗಿ ನನ್ನ ಮನಸ್ಸು ಕಂಬನಿ ಮಿಡಿಯುತ್ತಿದೆ. ಕೋವಿಡ್‌ ನಿಂದ ಮೃತಪಟ್ಟ ತಂದೆಯ ಸಾವಿನ ದುಃಖವನ್ನು ಭರಿಸುವ ಶಕ್ತಿ ನತಾಶಾ ಅವರಿಗೆ ಸಿಗಲಿ ಎಂದು ಖಾಲಿದ್‌ ತಮ್ಮ ಪತ್ರದಲ್ಲಿ ಬರೆದಿದ್ದಾರೆ. ನನ್ನ ಕೋವಿಡ್‌ ಕ್ವಾರಂಟೈನ್‌ ಅಂತ್ಯವಾದ ಎರಡು ದಿನಗಳ ನಂತರ ನತಾಶಾ ನರ್ವಾಲ್‌ ಅವರ ತಂದೆ ಮಹಾವೀರ್‌ ನರ್ವಾಲ್‌ ಕೊರೋನಾ ಸೋಂಕಿಗೆ ಬಲಿಯಾಗಿರುವ ವಿಷಯ ತಿಳಿಯಿತು. ಈ ಸಂದರ್ಭದಲ್ಲಿ ನನ್ನ ಮನಸ್ಸು ತಂದೆಯನ್ನು ಕಳೆದುಕೊಂಡ ದುಃಖದಲ್ಲಿ ಮುಳುಗಿರುವ ನತಾಶಾಗಾಗಿ ಮರುಗುತ್ತಿದೆ. ನತಾಶಾ ಅವರ ದುಃಖವನ್ನು ನೋವನ್ನು ಊಹಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ ಎಂದು ಉಮರ್‌ ತಮ್ಮ ಪತ್ರದಲ್ಲಿ ನತಾಶಾ ನರ್ವಾಲ್‌ ಗಾಗಿ ಕಂಬನಿ ಮಿಡಿದಿದ್ದಾರೆ.

ನನಗೆ ನತಾಶಾ ತಂದೆ ಮಹಾವೀರ್‌ ಅವರ ಪರಿಚಯವಿಲ್ಲ. ಆದರೆ ನತಾಶಾ ಬಂಧನವಾದ ನಂತರ ಅವರು ಮಾಧ್ಯಮಗಳಿಗೆ ನೀಡಿದ ಹಲವಾರು ಸಂದರ್ಶನಗಳನ್ನು ನೋಡಿದ್ದೇನೆ. ಅತ್ಯಂತ ಘನತೆಯಿಂದ ಹೆಮ್ಮೆಯಿಂದ ತಮ್ಮ ಮಗಳ ಬಗ್ಗೆ ಮಾತನಾಡಿದ್ದಾರೆ. ಸರ್ಕಾರದ ಪಿತೂರಿ, ಭಯೋತ್ಪಾದನೆಯ ಆರೋಪ, ಉಗ್ರಗಾಮಿಯಂತೆ ನತಾಶಾಳನ್ನು ಬಿಂಬಿಸುವ ಹಲವು ಸಂಘಟನೆಗಳ ಪ್ರಯತ್ನದ ನಂತರವೂ ಅವರು ತಮ್ಮ ಮಗಳನ್ನು, ಅವಳ ಉದ್ಧೇಶವನ್ನು ಬೆಂಬಲಿಸಿದ್ದಾರೆ. ಅಂತಹ ತಂದೆಯ ಸಾವಿಗೆ ಮನಸ್ಸು ಮರುಗುತ್ತಿದೆ. ಪ್ರೀತಿಯ ತಂದೆಯನ್ನು ಕಳೆದುಕೋಂಡ ನತಾಶಾ ಈಗ ಅನುಭವಿಸುತ್ತಿರುವ ನೋವು ಸಂಕಟ ಹೇಳತೀರದಾಗಿದೆ.

ಸದ್ಯ ನಾವಿರುವ ಪರಿಸ್ಥಿತಿ ಸಾಂಕ್ರಾಮಿದ ವಿರುದ್ಧ ಹೋರಾಡುವ ಶಕ್ತಿಯನ್ನು ಕುಂದಿಸಿದೆ ಮತ್ತು ಆತಂಕಕ್ಕೆ ದೂಡಿದೆ

ಉಮರ್‌ ಖಾಲಿದ್‌ ತಾನೀಗ ಜೈಲಿನಲ್ಲಿರದೇ ಸ್ವತಂತ್ರವಾಗಿದ್ದರೆ ಏನು ಮಾಡುತ್ತಿದ್ದೆ ಎಂದು ತಮ್ಮ ಪತ್ರದಲ್ಲಿ ಬರೆದಿದ್ದಾರೆ. ಹಾಗೇ ರಾಜಕೀಯ ಕಾರಣಕ್ಕೆ ಬಂಧಿತರಾದ ಖೈದಿಗಳನ್ನು ಸರ್ಕಾರ ಕೊರೋನಾ ಕಾರಣಕ್ಕೆ ಬಿಡುಗಡೆ ಮಾಡಬೇಕು. ಆದರೆ ಈಗ ಸರ್ಕಾರದ ಮೇಲೆ ಅಂತಹ ನಿರೀಕ್ಷೆಗಳಾಗಲಿ, ನಂಬಿಕೆಯಾಗಲಿ ಉಳಿದಿಲ್ಲ ಎಂದು ಅವರು ಪತ್ರದಲ್ಲಿ ತಮ್ಮ ಸ್ನೇಹಿತರಿಗೆ ಹೇಳಿದ್ದಾರೆ. ಸಾವಿರಾರು ಜನರ ಜೀವವನ್ನು ಬಲಿಪಡೆದುಕೊಂಡ ಕೊರೋನಾ ಸಾಂಕ್ರಾಮಿಕ ಕೇವಲ ದೈಹಿಕವಾಗಿ ಮಾತ್ರ ಜನರ ಮೇಲೆ ಪರಿಣಾಮ ಬೀರುತ್ತಿಲ್ಲ. ಕಳೆದ 14 ತಿಂಗಳುಗಳಿಂದ ಕೊರೋನಾ ಕಾರಣದ ಭೀತಿ, ಲಾಕ್‌ಡೌನ್‌ ನ ಒಂಟಿತನದಿಂದಾಗಿ ಲಕ್ಷಾಂತರ ಜನರ ಮಾನಸಿಕ ಆರೋಗ್ಯವೂ ಹದಗೆಟ್ಟಿದೆ ಎಂದು ತಜ್ಞರು ಹೇಳಿದ ಮಾತುಗಳನ್ನು ಉಮರ್ ತಮ್ಮ ಪತ್ರದಲ್ಲಿ ನೆನಪಿಸಿಕೊಂಡಿದ್ದಾರೆ.

ಜೈಲಿನೊಳಗೆ ಕುಳಿತು ಕಿಟಕಿಯ ಕಡೆ ನೋಡುತ್ತೇನೆ. ನಾನೀಗ ಜೈಲಿನಲ್ಲಿ ಬಂಧಿಯಾಗಿ ಇರದೇ ಸ್ವತಂತ್ರವಾಗಿದ್ದರೆ ಏನು ಮಾಡುತ್ತಿದ್ದೆ ಎಂಬುದನ್ನು ನೆನೆಸಿಕೊಳ್ಳುತ್ತೇನೆ. ಒಂದು ವೇಳೆ ಜೈಲಿನಲ್ಲಿ ಬಂಧಿಯಾಗಿರದೇ ನಾನು ಸ್ವತಂತ್ರನಾಗಿದ್ದರೆ ಹಸಿವು ಸಂಕಟಗಳಿಂದ ಬಳಲುತ್ತಿರುವ ನೂರಾರು ಕುಟುಂಬಗಳ ಸಹಾಯಕ್ಕೆ ನಾನು ನಿಲ್ಲುತ್ತಿದ್ದೆ. ನಾನು ಸ್ವತಂತ್ರನಾಗಿದ್ದರೆ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಜಾತಿ ಧರ್ಮಗಳನ್ನು ನೋಡದೇ ಕಷ್ಟದಲ್ಲಿರುವ ಜನರ ಜೊತೆ ನಿಲ್ಲುವುದೊಂದೆ ನನ್ನ ಕರ್ತವ್ಯವಾಗಿರುತ್ತಿತ್ತು. ರಾಜಕೀಯ ಕಾರಣಗಳಿಂದ ಜೈಲಿನಲ್ಲಿರುವ ನಮ್ಮಂತಹ, ನತಾಶಾರಂತಹ ಸರ್ಕಾರದ ವಿರುದ್ಧ ಧ್ವನಿ ಎತ್ತುವರ ಬಗ್ಗೆ ಜನರು ಒಂದು ಸಣ್ಣ ಯೋಚನೆಯನ್ನಾದರೂ ಮಾಡಬೇಕು. ಅವರ ಒಂದು ಸಣ್ಣ ಯೋಚನೆ, ಚಿಕ್ಕದಾದ ಪ್ರೀತಿಯ ಸಾಂತ್ವಾನ ಇನ್ನೊಂದಷ್ಟು ಕಾಲ ಜೈಲಿನೊಳಗೆ ನಮ್ಮ ಚೈತನ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಉಮರ್‌ ತಮ್ಮ ಪತ್ರದ ಕೊನೆಯಲ್ಲಿ ಬರೆದ ಎರಡು ಸಾಲುಗಳು ಅತ್ಯಂತ ಹೃದಯಸ್ಪರ್ಶಿಯಾಗಿವೆ. ಒಂದು ಕ್ಷಣ ನಾವು ಹೋರಾಟಗಳ ಕಾರಣಕ್ಕೆ ಜೈಲಿನಲ್ಲಿರುವವರ ಕುರಿತು ಯೋಚಿಸಿದರೆ, ಸಂವಿಧಾನದತ್ತವಾದ ತಮ್ಮ ಪ್ರತಿಭಟನೆಯ ನ್ಯಾಯಯುತ ಹಕ್ಕುಗಳನ್ನು ಚಲಾಯಿಸುತ್ತ ಜೈಲು ಸೇರಿದ ಅವರಿಗಾಗಿ ಮನ ಮಿಡಿದರೆ ಅವರ ಜೀವಕ್ಕೊಂದಿಷ್ಟು ಚೈತನ್ಯ, ಸಾಂತ್ವನ ಸಿಗಬಹುದು. ಜನರು ತಮ್ಮನ್ನು ಮರೆತಿಲ್ಲ. ನಮ್ಮ ಬೆಂಬಲಕ್ಕೆ ಇದ್ದಾರೆ ಎಂಬ ಸಣ್ಣ ಧೈರ್ಯ ಉಮರ್‌ ಮುಂತಾದ ಜೈಲಿನಲ್ಲಿ ಬಂಧಿತ ಸಮಾಜದ ಧ್ವನಿಗಳಿಗೆ ಸಣ್ಣ ಆಶಾಕಿರಣವಾಗಬಹುದು.


ಇದನ್ನೂ ಓದಿ: ಉಮರ್‌ ಖಾಲಿದ್ ಬಿಡುಗಡೆಗೆ 200ಕ್ಕೂ ಹೆಚ್ಚು ತಜ್ಞರು, ಚಿಂತಕರ ಪಟ್ಟು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಉಳಿದುಕೊಳ್ಳುವ ಹೆಸರು ರವೀಶ್ ಕುಮಾರ್..

0
ಪ್ರಭುತ್ವಕ್ಕೆ ಸತ್ಯ ನುಡಿಯುತ್ತಿದ್ದ ಖ್ಯಾತ ಪರ್ತಕರ್ತ ರವೀಶ್ ಕುಮಾರ್ ಎನ್‌ಡಿಟಿವಿಗೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಎನ್‌ಡಿಟಿವಿ ಅದಾನಿ ತೆಕ್ಕೆಗೆ ಹೋದುದ್ದೆ ಅವರ ರಾಜೀನಾಮೆಗೆ ಪ್ರಮುಖ ಕಾರಣ. ರವೀಶ್ ಕುಮಾರ್‌ರವರಿಗೆ ಗೌರಿ ಸ್ಮಾರಕ ಟ್ರಸ್ಟ್...