ರೋಹಿಂಗ್ಯಾಗಳ ವಿರುದ್ಧ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ನೀಡಿದ್ದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಮಾಜಿ ನ್ಯಾಯಾಧೀಶರು, ವಕೀಲರು ಮತ್ತು ಶಿಕ್ಷಣ ತಜ್ಞರು ಸೂರ್ಯಕಾಂತ್ ಅವರಿಗೆ ಮುಕ್ತ ಪತ್ರ ಬರೆದಿದ್ದಾರೆ.
ಕಿರುಕುಳದಿಂದ ಪಲಾಯನ ಮಾಡಿದ ರೋಹಿಂಗ್ಯಾಗಳನ್ನು ನುಸುಳುಕೋರರೊಂದಿಗೆ ಸಮೀಕರಿಸುವುದು ಅನುಚಿತ ಎಂದು ಹೇಳಿರುವ ಅವರು ವ್ಯಕ್ತಿಯ ಮೂಲವನ್ನು ಲೆಕ್ಕಿಸದೆ ಎಲ್ಲರಿಗೂ ಘನತೆ ಮತ್ತು ನ್ಯಾಯದ ಆಧಾರದ ಮೇಲೆ ಸಾಂವಿಧಾನಿಕ ನೈತಿಕತೆಗೆ ಬದ್ಧತೆಯನ್ನು ಪುನರುಚ್ಚರಿಸುವಂತೆ ಸಿಜೆಐ ಅವರನ್ನು ಒತ್ತಾಯಿಸಿದ್ದಾರೆ.
ಕಸ್ಟಡಿಯಲ್ಲಿದ್ದ ಐವರು ರೋಹಿಂಗ್ಯಾಗಳು ದೆಹಲಿಯಿಂದ ನಾಪತ್ತೆಯಾಗಿದ್ದಾರೆ ಎಂಬ ಆರೋಪದ ಕುರಿತ ಅರ್ಜಿಯ ವಿಚಾರಣೆ ನಡೆಸಿದ್ದ ಸಿಜೆಐ ಸೂರ್ಯಕಾಂತ್ (ಡಿ.2, 2025 ರಂದು) ಅವರು, ‘ನಿರಾಶ್ರಿತರಿಗೆ ಕಾನೂನುಬದ್ಧ ಸ್ಥಾನಮಾನವಿಲ್ಲದಿದ್ದರೆ ಆ ವ್ಯಕ್ತಿಯನ್ನು ಇಲ್ಲಿಯೇ ಇರಿಸಿಕೊಳ್ಳಲು ನಮಗೆ ಬಾಧ್ಯತೆ ಇದೆಯೇ?’ ಎಂದು ಪ್ರಶ್ನಿಸಿದ್ದರು. ಈ ವೇಳೆ ಭಾರತದಲ್ಲಿ ರೋಹಿಂಗ್ಯಾ ವಲಸಿಗರನ್ನು ನಿಭಾಯಿಸುವ ವಿಧಾನದ ಸುತ್ತಲಿನ ಸಾಂವಿಧಾನಿಕ ಮತ್ತು ಮಾನವೀಯ ಉದ್ವಿಗ್ನತೆಯ ತೀಕ್ಷ್ಣ ಚರ್ಚೆಯಲ್ಲಿ, “ಸರ್ಕಾರವು ರೋಹಿಂಗ್ಯಾಗಳನ್ನು ನಿರಾಶ್ರಿತರು ಎಂದು ಘೋಷಿಸಿದೆಯೇ? ಅಕ್ರಮವಾಗಿ ಗಡಿ ದಾಟಿದ ವ್ಯಕ್ತಿಗಳು ಭಾರತೀಯ ಕಾನೂನಿನಡಿಯಲ್ಲಿ ಸಂಪೂರ್ಣ ಕಾರ್ಯವಿಧಾನದ ರಕ್ಷಣೆಯನ್ನು ಕೋರಬಹುದೇ” ಎಂದು ಪ್ರಶ್ನಿಸಿದ್ದರು.
“ರೋಹಿಂಗ್ಯಾಗಳು ಭಾರತದಲ್ಲಿ ಉಳಿಯಲು ಕಾನೂನು ಸ್ಥಾನಮಾನವಿಲ್ಲದಿದ್ದರೆ, ಅವರು ಅತಿಕ್ರಮಣಕಾರರಾಗಿದ್ದರೆ, ನಮಗೆ ಉತ್ತರ ಭಾರತದ ಭಾಗದಲ್ಲಿ ಬಹಳ ಸೂಕ್ಷ್ಮ ಗಡಿ ಇದೆ. ಯಾರಾದರೂ ಅತಿಕ್ರಮಣಕಾರ ಬಂದರೆ, ‘ನಿಮಗೆ ಎಲ್ಲಾ ಸೌಲಭ್ಯಗಳನ್ನು ನೀಡಲು ನಾವು ಬಯಸುತ್ತೇವೆ’ ಎಂದು ಹೇಳುವ ಮೂಲಕ ನಾವು ಅವರಿಗೆ ರೆಡ್ ಕಾರ್ಪೆಟ್ ಸ್ವಾಗತ ನೀಡುತ್ತೇವೆಯೇ?” ಎಂದು ಕೇಳಿದ್ದಲ್ಲದೆ, “ಅವರನ್ನು ವಾಪಸ್ ಕಳುಹಿಸುವುದರಲ್ಲಿ ಸಮಸ್ಯೆ ಏನು?” ಎಂದು ಪ್ರಶ್ನಿಸಿದ್ದರು. ನ್ಯಾಯಮೂರ್ತಿಗಳ ಈ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ನ್ಯಾಯಾಧೀಶರು, ವಕೀಲರು ಮತ್ತು ಶಿಕ್ಷಣ ತಜ್ಞರು, ವ್ಯಕ್ತಿಗತ ಘನತೆ ಮತ್ತು ನೈತಿಕತೆಗೆ ತಮ್ಮ ಬದ್ಧತೆ ಪುನರುಚ್ಚರಿಸುವಂತೆ ಸಿಜೆಐ ಅವರನ್ನು ಒತ್ತಾಯಿಸಿದ್ದಾರೆ.
ಪತ್ರದಲ್ಲಿ, ಸಿಜೆಐ ಸೂರ್ಯಕಾಂತ್ ಅವರು ಮಾಡಿರುವ ಆರೋಪ ಮತ್ತು ನೀಡಿರುವ ಹೇಳಿಕೆಗಳು ರೋಹಿಂಗ್ಯಾ ಸಮುದಾಯದ ಹಕ್ಕುಗಳಿಗೆ ವಿರೋಧವಾಗಿದೆ. ಇದು ನಮ್ಮಲ್ಲಿ ಅತ್ಯಂತ ದುರ್ಬಲರ ಹಕ್ಕುಗಳನ್ನು ರಕ್ಷಿಸುವ ವಿಷಯದಲ್ಲಿ ನ್ಯಾಯಾಂಗದ ಮೇಲಿನ ಜನತೆಯ ನಂಬಿಕೆ ಮತ್ತು ವಿಶ್ವಾಸಕ್ಕೆ ಧಕ್ಕೆ ತರುತ್ತದೆ ಎಂಬ ಆತಂಕವಿದೆ ಎಂದಿದ್ದಾರೆ.
ಪತ್ರದಲ್ಲಿ, “ನ್ಯಾಯಾಲಯದಲ್ಲಿ ನೀಡುವ ಹೇಳಿಕೆ ಮತ್ತು ನ್ಯಾಯಾಲಯದ ತೀರ್ಪುಗಳಲ್ಲಿ ಜನರ ‘ಮೂಲ, ಜಾತಿ, ಧರ್ಮ ಯಾವುದೇ ಭೇದವಿಲ್ಲದೇ’ ಎಲ್ಲರಿಗೂ ಮಾನವ ಗೌರವ ಮತ್ತು ನ್ಯಾಯಾಧಾರಿತ ಸಾಂವಿಧಾನಿಕ ನೈತಿಕತೆಗೆ ತಮ್ಮ ಬದ್ಧತೆಯನ್ನು ಪುನಶ್ಚೇತನಗೊಳಿಸಿ, ಅದನ್ನು ಪುನರುಚ್ಚರಿಸಿ ಎಂದು ಕೋರಿಕೊಂಡಿದ್ದಾರೆ. ಜೊತೆಗೆ, “ಸುಪ್ರೀಂ ಕೋರ್ಟ್‌ನ ಮಹತ್ವ ಮತ್ತು ನಿಮ್ಮ ಪದವಿಯ ಮಹತ್ವವನ್ನು ಕೇವಲ ತೀರ್ಪುಗಳ ಸಂಖ್ಯೆಯಿಂದ ಅಥವಾ ಆಡಳಿತಾತ್ಮಕ ಕ್ರಮಗಳಿಂದ ಅಳೆಯಲಾಗುವುದಿಲ್ಲ; ಬದಲಿಗೆ ಆ ತೀರ್ಪುಗಳನ್ನು ನೀಡುವ ಮತ್ತು ಪರಿಗಣಿಸುವ ಮಾನವೀಯತೆಯಿಂದ ಅಳೆಯಲಾಗುತ್ತದೆ” ಎಂದಿದ್ದಾರೆ.
ರೋಹಿಂಗ್ಯಾ ಜನರನ್ನು ನುಸುಳುಕೋರರು ಎಂದು ಕರೆದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, “ನ್ಯಾಯಾಂಗದ ಅಧಿಕಾರವು ಸಾಂವಿಧಾನಿಕ ನೈತಿಕತೆ, ಕರುಣೆ ಮತ್ತು ಮಾನವ ಗೌರವದ ರಕ್ಷಣೆಯ ತತ್ವಗಳ ಮೇಲೆ ನಿರ್ಮಿತವಾಗಿದೆ. ಹಿಂಸೆ ಮತ್ತು ಆತಂಕದಿಂದ ಬೇರೆ ದೇಶಕ್ಕೆ ಓಡಿಬಂದವರನ್ನು ಅವರ ಗೌರವಕ್ಕೆ ವಿರೋಧವಾಗಿ ಶತ್ರುತ್ವದ ಭಾಷೆಯಲ್ಲಿ ತಿರಸ್ಕರಿಸಿದಾಗ, ಅದು ನಮ್ಮ ಸಂವಿಧಾನದ ಮೂಲಭೂತ ಮೌಲ್ಯಗಳನ್ನು ದುರ್ಬಲಗೊಳಿಸುತ್ತದೆ. ದುರ್ಬಲರಿಗೆ ಆಶ್ರಯವಾಗಿರುವ ನ್ಯಾಯಾಲಯಗಳ ಮೇಲಿನ ಜನತೆಯ ನಂಬಿಕೆಯನ್ನು ಕುಂದಿಸುತ್ತದೆ. ಅಂತಹ ಹೇಳಿಕೆಗಳು ಪೀಠದ ಪೂರ್ವಾಗ್ರಹದ ಸಂದೇಹಕ್ಕೆ ಸಾಕಷ್ಟು ಆಧಾರವನ್ನು ಒದಗಿಸುತ್ತವೆ” ಎಂದಿದ್ದಾರೆ. ಈ ಮುಕ್ತ ಪತ್ರದಲ್ಲಿ 85ಕ್ಕೂ ಹೆಚ್ಚು ಹಿರಿಯ ನ್ಯಾಯವಾದಿಗಳು, ವಕೀಲರು ಮತ್ತು ಶಿಕ್ಷಣ ತಜ್ಞರು, ಸಾಮಾಜಿಕ ಹೋರಾಟಗಾರರು ತಮ್ಮ ಸಹಿ ಮಾಡಿದ್ದಾರೆ.


