ದೇಶದಲ್ಲಿ ಓಮಿಕ್ರಾನ್ ರೂಪಾಂತರಿ ಪ್ರಕರಣಗಳು ಹೆಚ್ಚುತ್ತಿದ್ದು, ರಾಜ್ಯದಲ್ಲಿಯೂ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದ್ದು, 10 ದಿನಗಳ ನೈಟ್ ಕರ್ಫ್ಯೂ ವಿಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಡಿಸೆಂಬರ್ 28 ರಿಂದ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ 10 ದಿನಗಳವರೆಗೆ ನೈಟ್ ಕರ್ಫ್ಯೂ ವಿಧಿಸಲು ಸರ್ಕಾರ ನಿರ್ಧರಿಸಿದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಹೊಸ ವರ್ಷದ ಆಚರಣೆಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ಸಭೆ ನಡೆಸಿ ನಿರ್ಧರಿಸಲಾಗುವುದು ಎಂದು ಶನಿವಾರ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಂದು ತಜ್ಞರ ಸಮಿತಿಯ ಜೊತೆ ಚರ್ಚೆ ನಡೆಸಿ ತೀರ್ಮಾನ ತಗೆದುಕೊಳ್ಳಲಾಗಿದೆ.
ಇದನ್ನೂ ಓದಿ: ಓಮಿಕ್ರಾನ್ ಆತಂಕ: ರಾಜ್ಯದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಸರ್ಕಾರದಿಂದ ನಿರ್ಬಂಧ
“ಈಗಿರುವ ನಿಯಮಗಳಲ್ಲಿ ಬದಲಾವಣೆ ಮಾಡುವ ಮುನ್ನ ನಾಳೆ (ಭಾನುವಾರ) ಬೆಂಗಳೂರಿನಲ್ಲಿ ತಜ್ಞರ ಸಮಿತಿ ಸದಸ್ಯರು ಮತ್ತು ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತೇನೆ. ಕಳೆದ ಕೆಲವು ದಿನಗಳಲ್ಲಿ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳು ನೈಟ್ ಕರ್ಫ್ಯೂ ಜಾರಿಗೊಳಿಸುತ್ತಿರುವ ಬಗ್ಗೆ ನನಗೆ ಮಾಹಿತಿಯಿದೆ” ಎಂದು ಮುಖ್ಯಮಂತ್ರಿ ಶನಿವಾರ ಹೇಳಿದ್ದರು.
ಇನ್ನು ಹೊಸ ವರ್ಷದ ಸಂಭ್ರಮಾಚರಣೆ ಆರಂಭವಾಗಲಿರುವ ಡಿಸೆಂಬರ್ 30 ರಿಂದ ಜನವರಿ 2ರ ವರೆಗೆ ರಾಜ್ಯದಾದ್ಯಂತ ನಿರ್ಬಂಧ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಡಿಜೆ, ಬಹಿರಂಗ ಸಂಭ್ರಮಾಚರಣೆಗೆ ಅವಕಾಶ ಇರುವುದಿಲ್ಲ. ಬಾರ್, ರೆಸ್ಟೋರೆಂಟ್ ಮತ್ತಿತರ ಸ್ಥಳಗಳಲ್ಲಿ 50 % ಮಂದಿಗೆ ಮಾತ್ರ ಪ್ರವೇಶ ನೀಡಬೇಕು ಎಂದು ತಿಳಿಸಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಇಂದಿನ ಸಭೆಯಲ್ಲಿ ಆರೋಗ್ಯ ಸಚಿವ ಸುಧಾಕರ್, ಕಂದಾಯ ಸಚಿವ ಆರ..ಅಶೋಕ್, ಗೃಹ ಸಚಿವ ಅರಗ ಜ್ಞಾನೇಂದ್ರ, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.


