Homeಪುಸ್ತಕ ವಿಮರ್ಶೆ2023ರ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪಡೆದ ’ಫೂ ಮತ್ತು ಇತರ ಕಥೆಗಳು’; ಇಕ್ಕಳಗಳಲ್ಲಿ...

2023ರ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪಡೆದ ’ಫೂ ಮತ್ತು ಇತರ ಕಥೆಗಳು’; ಇಕ್ಕಳಗಳಲ್ಲಿ ಸಿಕ್ಕಿ ಹಾಕಿಕೊಳ್ಳದೆ ಹರಿವ ನೀರಿನಂತಿರುವ ಕಥೆಗಳು

- Advertisement -
- Advertisement -

ಕಥಾ ಸಂಕಲನವೊಂದರೆ ವಿಚಿತ್ರವೆನಿಸುವ ಶೀರ್ಷಿಕೆ ’ಫೂ’; ಅದೇ ಶೀರ್ಷಿಕೆಯ ಮೊದಲ ಕಥೆ ಓದಿದ ನಂತರ ಅದು ವಿಶಿಷ್ಟವಾಗಿ ಮನದಲ್ಲಿ ಅಚ್ಚಾಗುತ್ತದೆ. ಇಲ್ಲಿ ಒಟ್ಟು ಏಳು ಕಥೆಗಳಿವೆ. ’ಫೂ’ ಕಥೆಯ ಜಯತ್ತೆಯೊಳಗೆ ತಾಯಿ ಜೀವವೊಂದು ವ್ಯವಸ್ಥೆಯ ಸಮ್ಮತಿಗಾಗಿ ಬಿಟ್ಟಗಣ್ಣಿನಲ್ಲೇ ಕಾಯುತ್ತಿರುವಂತಿದೆ. ಹೆಣ್ಣು ಹೆಣ್ತನ ಚೆಲುವುಗಳ ಬಗ್ಗೆ ಬೇರುಬಿಟ್ಟ ಸ್ಥಾಪಿತ ಸಾಮಾಜಿಕ ಗ್ರಹಿಕೆಗಳು, ಕೌಟುಂಬಿಕ ಸಂಬಂಧಗಳೊಳಗಿನ ಮಮಕಾರಗಳನ್ನೂ ಮುರುಟಿ ಹೋಗುವಂತೆ ಮಾಡುವುದು ಈ ಕತೆ ಓದುಗರ ಬಿಚ್ಚಿಡುವ ದುರಂತ. ಇದು ಇಂಡಿಯನ್ ಅಮೆರಿಕನ್ ಕಥೆಗಾರ್ತಿ ಜುಂಪಾ ಲಾಹಿರಿಯ ’ಟ್ರೀಟ್ಮೆಂಟ್ ಆಫ್ ಬೀಬಿ ಹಲ್ದಾರ್’ ಕತೆಯನ್ನು ನೆನಪಿಸುತ್ತದೆ. ಫೂ ಕತೆಯ ಕಸುಬುದಾರಿಕೆ ಏನೆಂದರೆ ಜಯತ್ತೆಯ ಅವಿವಾಹಿತ ಬದುಕಿನ ದೌರ್ಭಾಗ್ಯವನ್ನು ಮಗುವಿನ ಕಣ್ಣುನೋಟದಲ್ಲಿ ನಿರೂಪಿಸಿ ಆಕೆಯ ಒಡಲ ಬೇಗುದಿಯನ್ನ ಮುಟ್ಟಿಯೂ ಮುಟ್ಟದೆ ಕಲೆಯಾಗಿ ಅರಳಿಸಿರುವುದು. ಮಗುವಿನ ಮುಗ್ಧ ಕಣ್ಣುಗಳ ನಿರೂಪಣೆ ಇಲ್ಲಿಯ ಕ್ರೌರ್ಯಕ್ಕೊಂದು ವಿಚಿತ್ರ ಮತ್ತು ಯಾತನದಾಯಕವಾದ ಚೆಲುವನ್ನು ತಂದಿದೆ. ಕಥೆ ಮುಗಿದ ಮೇಲೆ ಓದುಗನಿಗೆ ಜಯತ್ತೆಯ ದೈಹಿಕ ವಿರೂಪ ಮರೆಯಾಗಿ, ಮಗುವಿನೊಂದಿಗಿನ ಅವಳ ಮಧುರ ಗೆಳೆತನ ಮತ್ತು ಅತ್ತಿಗೆ ಅಣ್ಣರ ಮಾನಸಿಕ ವಿಕಾರವಷ್ಟೇ ನೆನಪಲ್ಲುಳಿಯುವುದು ಈ ಕತೆಯ ನಿರೂಪಣಾ ತಂತ್ರದ ಗೆಲುವು.

ಈ ಸಂಕಲನದುದ್ದಕ್ಕೂ ಜೀವಸೃಷ್ಟಿಯ ಭಾಗವಾಗುವ ತಾಯ್ತನದ ಹಂಬಲ ಮತ್ತು ಕಾಳಜಿ ಭಿನ್ನ ತುಯ್ತ ಸಂಕಟಗಳೊಂದಿಗೆ ಭಿನ್ನಭಿನ್ನ ರೂಪಗಳಲಿ, ಜಯತ್ತೆ, ರಂಗಮ್ಮ ಮತ್ತು ಶೈಲ್ಯಾನ ತಾಯಿಯರ ಪಾತ್ರಗಳಲ್ಲಿ ಪ್ರಕಟವಾಗಿದೆ. ’ಫೂ’ ಕಥೆಯ ಜಯತ್ತೆಯದು ಲೋಕ ನಿರ್ಮಿತ ಕಟ್ಟಳೆಗಳಿಂದ ಬೆಂದುಹೋಗುವ ದುರಂತವಾದರೆ, ಪಾತಿ ಮತ್ತು ಗೆಳೆಯನದು (’ಪಾತಿ’ಕತೆ) ಲೋಕದ ಧಾವಂತಗಳ ಗೊಡವೆಯೇ ಇಲ್ಲದೆ ಅರಳುವ ಪ್ರೇಮ ಸಂಬಂಧ. ’ಪಾತಿ’ ಕತೆ ಕೊನೆಕೊನೆಗೆ ಸಾಗಿದಂತೆ ಈ ಲೋಕ ಕಟ್ಟಿರುವ ಕಥೆಗಳಂತೆ ಕೊನೆಯಾಗಬಹುದು ಎಂಬ ಓದುಗನ ನಿರೀಕ್ಷೆಗಳನ್ನು ಲಟಲಟನೆ ಮುರಿದುಹಾಕುತ್ತದೆ. ಈ ಕಥೆಯು ಕಥಾಪ್ರಕಾರ, ಸಂಬಂಧಗಳ ಚೌಕಟ್ಟು, ಧರ್ಮಗಳ ಗೋಡೆ ಹೀಗೆ ಹಲವು ನಿಬಂಧನೆಗಳನ್ನು ಏಕಕಾಲಕ್ಕೆ ಮುರಿದುಕಟ್ಟಿದೆ. ಇದೊಂದು ಹರಿವ ನದಿ. ಫೂ ಕಥೆ ಎತ್ತುವ ಕೆಲವು ಪ್ರಶ್ನೆಗಳಿಗೆ ಇಲ್ಲಿ ಉತ್ತರಗಳನ್ನು ಕಾಣಬಹುದು. ಸಾಂಸ್ಕೃತಿಕ ಬಹುರೂಪತೆಯ ಮುಖ್ಯಚಹರೆಯಾಗಿ ಇದು ತೋರುತ್ತಿದೆ.

’ತೇರು ಸಾಗಿತಮ್ಮ ನೋಡಿರೆ’ ಕಥೆ ವಿನೋದಮಯವೆಂಬಂತೆ ಸಾಗುತ್ತಲೇ ಮುಖ್ಯ ತಿರುವುಗಳಲ್ಲಿ ಉತ್ತರ ಕರ್ನಾಟಕದ ಭಜನೆ ತತ್ವಪದಗಳಲ್ಲಿ ಕಾಣಬಹುದಾದ ಬದುಕಿನ ಕ್ಷಣಿಕತೆ ಮತ್ತು ಅರ್ಥದ ಹುಡುಕಾಟದ ಮಿಂಚುಗಳನ್ನು ಕಾಣಿಸುತ್ತದೆ. ನಮ್ಮ ಬದುಕಿಗೆ ಕೈ ದೀವಿಗೆಗಳನ್ನು ನೀಡಿ ಹೋಗಿರುವ ತತ್ವಪದಕಾರರ ಸೂಕ್ಷ್ಮಮತಿತ್ವ ಮತ್ತು ಬದುಕಿನ ದರ್ಶನ ಊರ ಜನರ ದೃಷ್ಟಿಯಲ್ಲಿ ಹುಚ್ಚನಾಗಿರುವ ಶೈಲ್ಯಾನಲ್ಲಿ ಕಾಣುತ್ತದೆ. ಅತಿ ಲೌಕಿಕತೆಯ ಜಂಜಾಟದಲ್ಲಿ ತೀಡಲ್ಪಟ್ಟ ಊರ ಜಡಮತಿಗಳ ಕಣ್ಣಿಗೆ ಚಿಕ್ಕ ವಯಸ್ಸಿನ ಶೈಲ್ಯಾನಲ್ಲಿ ಅದು ಕಾಣುವುದು ಕಷ್ಟ.

’ವಜ್ರಮುನಿ’ ಕತೆಯ ಭಗವಂತಪ್ಪನೆಂಬ ಕೋಪಿಷ್ಟ ತಂದೆಗೆ ಇಸ್ಪೀಟ್ ಆಟದ ಹುಚ್ಚು. ಹೊಲ ದನ ಕರುಗಳನ್ನೆಲ್ಲ ಅದಕ್ಕಾಗಿ ಮಾರಿ ಮುಗಿಸಿದ ನಂತರ ಆತನಲ್ಲಿ ಕಾಣುವ ಬದಲಾವಣೆ ಕುತೂಹಲಕಾರಿಯಾಗಿದೆ. ಬದುಕು ತನ್ನ ನಿಯಂತ್ರಣದಾಚೆ ಚಲಿಸಿದಾಕ್ಷಣ ಮನುಷ್ಯನ ಯಕಶ್ಚಿತತೆಯ ಅರಿವಾದಂತಿದೆ. ಬೆಂಕಿಯಂತೆ ಬಾಳಿದ ಭಗವಂತಪ್ಪನಂತ ಹಳ್ಳಿಯ ಜೀವ ಇಳಿವಯಸಿನಲ್ಲಿ ಮಾಗಿ ಬಾಗಿ ಬದುಕಿದ ಘಟನಾವಳಿಗಳು, ತನ್ನ ನಿಯಂತ್ರಣದಾಚೆ ಕಥೆಯಾಗತೊಡಗಿರುವ ಪ್ರಕ್ರಿಯೆಯನ್ನು ಧ್ಯಾನದಂತೆ ಗ್ರಹಿಸುತ್ತದೆ. ತನ್ನ ಈ ಕಥೆ ಪೂರ್ಣ ಪ್ರಮಾಣದ ಕಥೆಯಾಗುವುದು- ಈಗ ತೀರಿಹೋಗಿ ಕಥೆಯಾಗಿ ಮಾತ್ರ ಉಳಿದಿರುವ ತನ್ನ ಪೂರ್ವಜರಂತೆ- ತಾನೂ ಕೂಡ ತೀರಿಹೋದಾಗ ಎಂಬುದನ್ನರಿತ ಆತ ದುಗುಡಕ್ಕೊಳಕಾಗುತ್ತಾನೆ; ಲೋಕದ ಗೊಡವೆಯಲ್ಲಿ ತನ್ನ ಪೂರ್ವಜರ ಮತ್ತು ಸಂಗಡಿಗರ ಕಥೆಗಳೂ ತೀರಿಹೋದಾವೆಂಬ ಆತಂಕ ಬಾಧಿಸುತ್ತದೆ. ಮನುಷ್ಯರ ಒಳಗಣ್ಣೆಂಬುದು ಎಷ್ಟು ಸೂಕ್ಷ್ಮಾತಿಸೂಕ್ಷ್ಮವಲ್ಲವೇ? ಸೃಷ್ಟಿಯ ಅಗಾಧತೆಯನ್ನು ಅರಿಯಲು ಬೇಕಾದ ಕಣ್ಣಿದ್ದಾಗ ಇಂಥ ಪಾತ್ರಗಳು ಕಥೆಗಾರನಿಗೆ ಕಾಣುತ್ತವೆ. ಲೋಕದ ತಿರುಗಾಟ ಸಾಕಾಗಿ ಬೇರುಗಳನ್ನರಸಿ ಬಂದಿರುವ ಮಗ ಮತ್ತು ತನ್ನ ಪೂರ್ವಜರ ಬದುಕನ್ನ ಕಥೆಗಳಲ್ಲೇ ದರ್ಶಿಸುತ್ತಿರುವ ಭಗವಂತಪ್ಪನ ಚಿತ್ರಣ ಐರಿಷ್ ಕವಿ ಶೇಮಸ್ ಹೀನಿಯ ’ಅಗೆಯುವಿಕೆ’ (ಡಿಗ್ಗಿಂಗ್) ಕವನದ ಚಿತ್ರಣವನ್ನ ಕಣ್ಮುಂದೆ ತರುತ್ತದೆ. ತಮ್ಮ ತಿಳಿವಿನ ಮಿತಿಗಳನ್ನು ದಾಟಿಹೋಗಿ ಸೃಷ್ಟಿಯ ಅಚ್ಚರಿ ಆಘಾತಗಳನ್ನ ಬದುಕು ಕಾಣಿಸುವ ಕ್ಷಣ, ತಮ್ಮ ಬದುಕು ಕಥೆಯಾಗುತ್ತಿರುವುದರ ಅರಿವು ಮನುಷ್ಯರಲ್ಲಿ ಹುಟ್ಟುವುದನ್ನ ’ದೀಪದ ಮಲ್ಲಿ’ ಎಂಬ ಜಾನಪದ ಕಥೆಯ ಮೂಲಕ ಎ.ಕೆ. ರಾಮಾನುಜನ್ ತಮ್ಮ ಲೇಖನವೊಂದರಲ್ಲಿ (ಪ್ರತಿವ್ಯವಸ್ಥೆಯೆಡೆಗೆ..) ವಿಶ್ಲೇಷಿಸುತ್ತಾರೆ. ಭಗವಂತಪ್ಪ ಮತ್ತು ಮಗನ ನಡುವೆ ಘಟಿಸುವ ಅರಿವಿನ ವಿನಿಮಯ ರಾಮಾನುಜನ್‌ರ ವಿಶ್ಲೇಷಣೆಯನ್ನ ಇನ್ನಷ್ಟು ವಿವರಿಸುವ ರೂಪಕದಂತಿದೆ.

ಇದನ್ನೂ ಓದಿ: ’ನದಿಯೊಂದು ನಿದ್ರಿಸಿದಾಗ’: ವಿಶಿಷ್ಟ ಆಚರಣೆಗಳು, ನಂಬಿಕೆಗಳು, ಪೂರ್ವಜರ ಆರಾಧನೆಯೇ ಕಾಪಾಡುವ ಬುಡಕಟ್ಟು ಚಿತ್ರಣ

’ಕನಸಿನ ವಾಸನೆ’ ಕಥೆಯಲ್ಲಿ ದಿನಬೆಳಗಾದರೆ ಲೈಂಗಿಕ ಉನ್ಮಾದಗಳಲ್ಲಿ ತೇಲಾಡುತ್ತಿದ್ದ ಲಚುಮನಿಗೆ ರಂಗಮ್ಮ ನೀಡುವ ಕೆರದ ಏಟು ಪಾಪಪ್ರಜ್ಞೆಯಲ್ಲಿ ಅಟ್ಟಾಡಿಸುತ್ತದೆ; ಮಗುವಿನ ಮುಗ್ಧತೆಯನ್ನು ಹುಟ್ಟುಹಾಕುತ್ತದೆ. ಕೊನೆಗೆ ರಂಗಮ್ಮನ ತಾಯ್ತನ ಅವನನ್ನ ಪೊರೆಯುತ್ತದೆ. ದೇಹದ ಬಯಕೆಗಳಲ್ಲಿ ಮಿಂದೇಳುತ್ತಿದ್ದ ಲಚುಮ ಮಠಭಜನೆ ಎಂದು ಸುತ್ತಾಡುತ್ತಾ ಮಕ್ಕಳಾದಿಯಾಗಿ ಎಲ್ಲರಿಗೂ ಕೈಮುಗಿಯುತ್ತ ಅಡ್ಡಾಡುವುದನ್ನು ಕಂಡರೆ ಕೆ. ವೈ.ನಾರಾಯಣಸ್ವಾಮಿಯವರ ’ವಿನುರ ವೇಮ’ ನಾಟಕದ ವೇಮನ ಅರೆ ಕ್ಷಣ ಕಣ್ಮುಂದೆ ಬಂದುಹೋಗುತ್ತಾನೆ. ಇನ್ನೊಂದು ದಿಕ್ಕಿನಲ್ಲಿ ಸಂಸ್ಕಾರದ ಪ್ರಾಣೇಶಾಚಾರ್ಯನ ಪ್ರತಿಪಾತ್ರದಂತೆ (ತಲೆಕೆಳಗಾದ) ಕಾಣುತ್ತಾನೆ. ಓದುಗನಿಗೆ ಮಾತ್ರ ಲಚುಮ ಲಚುಮನೇ.

ಹಳ್ಳಿಯ ಕ್ಷುದ್ರರಾಜಕಾರಣ ಅಸೂಯೆ ದಾಯಾದಿತನ ಸಣ್ಣತನಗಳ ನಡುವೆ ಸತ್ತುಹೋಗುವ ಪ್ರಾಮಾಣಿಕತೆ ಮತ್ತು ಮುಗ್ಧತೆಯನ್ನು, ಅದರ ಪರಿಣಾಮವಾಗಿ ಹುಟ್ಟುವ ಸಿಟ್ಟು ವ್ಯಗ್ರತೆಯನ್ನ ’ಖತಲ್ ರಾತ್ರಿ’ ಕತೆ ಸೆರೆ ಹಿಡಿದಿದೆ. ಡಿಜಿಟಲ್ ಯುಗದ ಮೊಬೈಲ್ ಪರದೆಯ ಹೈಪರ್ ರಿಯಾಲಿಟಿಯಲ್ಲಿ ಹುಟ್ಟಿ ಸಾಯುವ ಸಂಬಂಧಗಳು, ಬೃಹತ್ ನಗರಗಳ ಬಂದಿಖಾನೆಯಂಥ ರೂಮುಗಳಲ್ಲಿ ಕಾಡುವ ಒಬ್ಬಂಟಿತನ, ಅನಾಥ ಪ್ರಜ್ಞೆಯ ಪರಿಣಾಮದಲ್ಲಿ ’ಮಿಣುಕು ಹುಳು’ ಕಥೆ ಹುಟ್ಟಿದಂತಿದೆ. ಹಳ್ಳಿಗಳಿಂದ ಬೃಹತ್ ನಗರಗಳಿಗೆ ವಲಸೆ ಹೋಗಿ ನಿರ್ಜೀವ ನೆರಳಿನಂತಾದವರ ಧಾವಂತದ ಬದುಕಿನ ಪಡಿಪಾಟಲು ಇಲ್ಲಿದೆ. ’ಜಗತ್ತು ಕೊನೆಗೊಳ್ಳುವುದು ಸ್ಫೋಟದೊಂದಿಗಲ್ಲ ಚೀತ್ಕಾರದೊಂದಿಗೆ’ ಎನ್ನುವ ಇಂಗ್ಲಿಷ್ ಕವಿ ಯೇಲಿಯಟ್‌ನ ’ಟೊಳ್ಳು ಮನುಷ್ಯರು’ (Hallow Men) ಕವನದಲ್ಲಿಯ ಚೀತ್ಕಾರಗಳು ಈ ಕಥೆಯಲ್ಲಿ ಪ್ರತಿಧ್ವನಿಸುತ್ತಿವೆ.

ಈ ಪುಸ್ತಕದಲ್ಲಿನ ಮೊದಲ ಕಥೆ (ಫೂ) ಹೆಣ್ಣೊಬ್ಬಳ ದೇಹದ ಮಿತಿಗಳು ಮತ್ತು ಅಪ್ಪಟ ಹಳ್ಳಿಯ ಸಾಮಾಜಿಕ ಕಟ್ಟುಪಾಡುಗಳು ಹುಟ್ಟಿಸುವ ದುರಂತದ ಕಥೆ. ಕೊನೆಯದು (ಮಿಣುಕುಹುಳು) ಮನಸ್ಸಿನ ನಾಗಾಲೋಟದಿಂದಾಗಿ ಹಳ್ಳಿಯಿಂದ ಹೊರಟು ಪಟ್ಟಣದಲ್ಲಿ ನೆಲೆ ನಿಲ್ಲದೇ ಸತ್ಯೋತ್ತರ ಕಾಲದ ಪಾಪಪ್ರಜ್ಞೆಯಲ್ಲಿರುವವರ ಪಡಿಪಾಟಲಿನ ಚಿತ್ರಣ. ಏಳು ಕಥೆಗಳಲ್ಲಿ ಮೊದಲನೆಯದು ಕಥೆ ಹುಟ್ಟಲು ಸಶಕ್ತವಾದ ಹಳ್ಳಿಯ ಪರಿಸರವನ್ನ ಹಿಡಿದಿದೆ. ಕೇಂದ್ರದಲ್ಲಿರುವ ಕಥೆ (ವಜ್ರಮುನಿ)- ಕಥೆಗಳು ಹುಟ್ಟುವ ಕೊನೆಗೊಳ್ಳುವ, ಕೊನೆಗೊಳ್ಳುವಾಗ ಮನುಷ್ಯನಿಗೆ ಬರುವ ದುರಂತ ಪ್ರಜ್ಞೆಯ ಜಿಜ್ಞಾಸೆಯಂತಿದೆ. ಕೊನೆಯ ಕಥೆಯಲ್ಲಿರುವುದು (ಮಿಣುಕುಹುಳು) ಅತಿ ವೇಗ ಮತ್ತು ಧಾವಂತಕ್ಕೆ ತುತ್ತಾಗಿ ಕಥೆಗಳು ಉಸಿರುಗಟ್ಟಿ ಸಾಯುವ ಬೃಹತ್ ನಗರಗಳ ಸತ್ವಹೀನ ಪರಿಸರದ ಚಿತ್ರಣ. ಹೀಗೆ ಈ ಕಥೆಗಳನ್ನು ಜೋಡಿಸಿರುವ ಕ್ರಮದಲ್ಲಿ ಒಂದು ಬಂಧ ಮತ್ತು ಶಿಲ್ಪ ಮೂಡಿದೆ. ಹಳ್ಳಿಯ ಸಾಮಾಜಿಕ ಕೇಡುಗಳಿಗೆ ಪಟ್ಟಣದ ಬದುಕು ಉತ್ತರವಲ್ಲವೆಂಬ ಹೊಳಹು ಇಲ್ಲಿದೆ. ನಡುವೆ ಬರುವ ಕಥೆಗಳಲ್ಲಿಯ ಹುಚ್ಚು ಶೈಲ್ಯಾ, ಭಗವಂತಪ್ಪ, ಪಾತಿ, ಪಂಪ್ ಲಚುಮ ’ಅರಿವೆಂಬುದು ಸ್ಥಿರವಲ್ಲ ಮನುಜ, ಅದು ಹರಿವು’ ಎಂಬ ಬೆಳಕಿನ ಹಾಡನ್ನು ಹಾಡುತ್ತಿರುವಂತಿದೆ.

ಕಥೆಯ ರಚನೆಯ ಚೌಕಟ್ಟಿನಲ್ಲಿ ಕಥಾವಸ್ತು-ತಾತ್ವಿಕತೆಯ ಏಕರೂಪತೆಯನ್ನು ಮೀರಿನಿಲ್ಲುವ ತುಡಿತ ಇಡೀ ಸಂಕಲನದಲ್ಲಿ ಕಾಣುತ್ತದೆ. ಇದರಾಚೆಗೂ ಈ ಕಥೆಗಳಲ್ಲಿ ಕಾಣುವ ಸಾಮಾನ್ಯ ತತ್ವವೆಂದರೆ ಅಂಚಿನಲ್ಲೇ ಉಳಿದುಕೊಂಡಿರುವ ಜೀವಗಳ ಧ್ವನಿಯಾಗಿರುವುದು. ಹಳ್ಳಿ-ಪಟ್ಟಣ, ಸ್ನೇಹಿತ-ಪ್ರಿಯತಮ, ಹಿಂದೂ-ಮುಸ್ಲಿಂ, ಹಿರಿಯ-ಕಿರಿಯ ಯಾವ ಇಕ್ಕಳಗಳಲ್ಲೂ ಸಿಕ್ಕಿಹಾಕಿಕೊಳ್ಳದೆ ಹರಿವ ನೀರಿನಂತೆ ಇಲ್ಲಿಯ ಕಥೆಗಳಿವೆ. ಈ ಕಥೆಗಳು ಮಡಿವಂತಿಕೆಯಿಂದ ಮುಕ್ತವಾಗಿರುವುದರಿಂದ, ಹೈದರಾಬಾದ್ ಕರ್ನಾಟಕದ ಪರಿಸರವನ್ನು ಕಟ್ಟಿಕೊಡುವ ನುಡಿಗಟ್ಟಿನಿಂದ, ಮನುಷ್ಯರ ಸಣ್ಣತನ ಕೇಡು ಪ್ರೇಮ ಕಾಮ ಬಡತನ ಬಂಧನ ಮಮತೆ ಹೋರಾಟಗಳೆಲ್ಲದರ ಸೂಕ್ಷ್ಮ ಚಿತ್ರಣದಿಂದ ಜೀವಂತಿಕೆಯಲ್ಲಿ ಮೈದಾಳಿವೆ. ಹಳ್ಳಿ ಬದುಕಿನಲ್ಲಿಯ ಸಾಮಾಜಿಕ ವಿಸಂಗತಿಗಳು, ನಂಬಿಕೆಗಳು, ಕೇಡುಗಳ ಸಹಜವಾದ ಅನಾವರಣವಿದೆ. ವ್ಯಂಗ್ಯ ವಿಷಾದ ಮತ್ತು ಪ್ರತಿರೋಧ ಒಳ ದ್ರವ್ಯದಂತೆ ತುಂಬಾ ಸೂಕ್ಷ್ಮವಾಗಿ ಈ ಕಥೆಗಳಲ್ಲಿ ಹರಿಯುತ್ತಿದೆ. ಇಂಗ್ಲಿಷಲ್ಲಿ ’ಫೂ’ ಎಂದರೆ ಥೂ ಎಂದರ್ಥ. ಜನಸಾಮಾನ್ಯರನ್ನ ದಿಕ್ಕುಗೆಡಿಸಿರುವ ಆಧುನಿಕತೆ ಮತ್ತು ನಾಗರಿಕತೆಯ ಸಂಕಥನಗಳನ್ನ ತನ್ನ ನೆಲಮೂಲದ ಚೈತನ್ಯಗಳ ಮೂಲಕವೇ ಮುಖಾಮುಖಿಯಾಗುವ ತ್ರಾಣ ಈ ಕಥೆಗಳ ನಿರೂಪಣೆಯಲ್ಲಿದೆ.

ಫೂ ಮತ್ತು ಇತರ ಕತೆಗಳು
ಲೇಖಕರು: ಮಂಜುನಾಯಕ ಚಳ್ಳೂರು
ಬೆಲೆ: ರೂ 80/-
ಪ್ರಕಾಶಕರು: ಅಹರ್ನಿಶಿ ಪ್ರಕಾಶನ, ಶಿವಮೊಗ್ಗ

ಡಾ. ಸಿ. ಬಿ. ಐನಳ್ಳಿ

ಡಾ.ಸಿ.ಬಿ.ಐನಳ್ಳಿ
ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...