Homeಮುಖಪುಟಭಾವನಾತ್ಮಕ ಪ್ರತಿಕ್ರಿಯೆಗಳಾಚೆ 'ಜೈಭೀಮ್' ಸಿನೆಮಾ

ಭಾವನಾತ್ಮಕ ಪ್ರತಿಕ್ರಿಯೆಗಳಾಚೆ ‘ಜೈಭೀಮ್’ ಸಿನೆಮಾ

- Advertisement -
- Advertisement -

ಕಳೆದ ದಶಕದಿಂದ ಅಂಬೇಡ್ಕರ್ ಬಗೆಗಿನ ಅರಿವು, ಅಭಿಮಾನ, ಆನ್ವಯಿಕತೆ ಮೊದಲಿಗಿಂತ ಹೆಚ್ಚುತ್ತಿದೆ. ಇದಕ್ಕೆ ಹಲವು ಕಾರಣಗಳಿದ್ದರೂ ಮುಖ್ಯ ಕಾರಣ ದಮನಿತ ದಲಿತ ಹಿಂದುಳಿದ ವರ್ಗಗಳ ಹೊಸ ತಲೆಮಾರು ಶಿಕ್ಷಿತರಾಗುತ್ತಿರುವುದು. ಅಂತೆಯೇ ಅಂಬೇಡ್ಕರ್ ಅವರ ಕನಸು ಕಾಣ್ಕೆ ಮೂನ್ನೋಟಗಳ ಬಗ್ಗೆ ಅರಿತುಕೊಳ್ಳಲು ಪ್ರಯತ್ನಿಸುತ್ತಿರುವುದು. ಹೀಗಾಗಿ ದಮನಿತ ಸಮುದಾಯಗಳ ಯುವಜನತೆಗೆ ಅಂಬೇಡ್ಕರ್ ಬಹುದೊಡ್ಡ ಶಕ್ತಿಯಾಗಿ ಗೋಚರಿಸುತ್ತಿದ್ದಾರೆ. ಈ ದಮನಿತ ಸಮುದಾಯದ ಯುವಜನತೆಗೆ ಅಂಬೇಡ್ಕರ್ ಅರಿವನ್ನು ಸಶಕ್ತವಾಗಿ ದಾಟಿಸಬೇಕಾಗಿರುವುದು ಸಮತೆಯಲ್ಲಿ ನಂಬಿಕೆ ಇಟ್ಟವರ ಆದ್ಯ ಕರ್ತವ್ಯ. ಸಹಜವಾಗಿ ಅಂಬೇಡ್ಕರ್ ಅವರ ವಿಚಾರ ಕೇಳುವ, ನೋಡುವ, ಅನುಸರಿಸುವ ಜನವರ್ಗ ಹೆಚ್ಚಾದಂತೆ, ಈ ಜನಸಮೂಹವನ್ನು ಆಧರಿಸಿ ಕಾರ್ಪೊರೇಟ್ ವ್ಯಾಪಾರಿ ಮಾರುಕಟ್ಟೆಯೂ ಗರಿಗೆದರಿದೆ. ಮಹಾನಾಯಕ ಧಾರವಾಹಿ ಇದಕ್ಕೊಂದು ಜನಪ್ರಿಯ ಉದಾಹರಣೆ. ಈ ಮಾರುಕಟ್ಟೆ ಕೆಲವೊಮ್ಮೆ ಅಂಬೇಡ್ಕರ್ ಚಿಂತನೆಗಳನ್ನು ತೀರಾ ತೆಳುವಾದ ಸಂಕೇತಗಳಲ್ಲಿ ದಾಟಿಸುವ ಪ್ರಯತ್ನ ಮಾಡುತ್ತಿರುತ್ತದೆ. ಇದೇ ಮಾರುಕಟ್ಟೆಯನ್ನು ಆಧರಿಸಿ ನೈಜ ಅಂಬೇಡ್ಕರ್ ಚಿಂತನೆಗಳನ್ನೂ ಜನಮಾನಸದಲ್ಲಿ ನೆಲೆಗೊಳಿಸುವ ಗಂಭೀರ ಪ್ರಯತ್ನವನ್ನೂ ನಾವು ಮಾಡಬೇಕಿದೆ. ಹಾಗಾಗಿ ಮಾರುಕಟ್ಟೆ ರೂಪಿಸುತ್ತಿರುವ ‘ಅಂಬೇಡ್ಕರ್’ ಪ್ರಣೀತ ವ್ಯವಹಾರಗಳನ್ನು ಭಾವನಾತ್ಮಕತೆಯ ಆಚೆಗೆ ಸೂಕ್ಷ್ಮವಾಗಿ, ವಾಸ್ತವವನ್ನು ಗಮನಿಸಿ ಪ್ರತಿಕ್ರಿಯಿಸಬೇಕಾಗಿದೆ.

ಅಂಬೇಡ್ಕರ್

ಇತ್ತೀಚಿಗೆ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಅಂಬೇಡ್ಕರ್ ಆಶಯಗಳನ್ನು ಜನಪ್ರಿಯ ಸಿನೆಮಾ ಭಾಷೆಯಲ್ಲಿ ನಿರೂಪಿಸಲಾಗುತ್ತಿದೆ. ಇದೊಂದು ಆಶಾದಾಯಕ ಬೆಳವಣಿಗೆ. ಪ.ರಂಜಿತ, ಮಾರಿ ಸೆಲ್ವರಾಜ್, ನಾಗರಾಜ ಮಂಜುಳೆ, ಕರುಣಾ ಕುಮಾರ್ ಮೊದಲಾದವರ ಪ್ರಯತ್ನಗಳು ಗಮನಾರ್ಹವಾದುದು. ಫಂಡ್ರಿ, ಸೈರಾಟ್, ಕಬಾಲಿ, ಪರಿಯೇರುಂ ಪೆರುಮಾಳ್, ಕರ್ಣನ್, ಪಲಾಸ ಮೊದಲಾದ ಚಿತ್ರಗಳು ದಲಿತ ಲೋಕದ ವರ್ತಮಾನವನ್ನು ಸಂಘರ್ಷದ ಬದುಕನ್ನೂ ಬೇರೆ ಬೇರೆ ಸೂಕ್ಷ್ಮಗಳೊಂದಿಗೆ ತೆರೆದಿಡಲೆತ್ನಿಸಿವೆ. ಇದರ ಮತ್ತೊಂದು ಮಗ್ಗಲನ್ನು ಜೈಭೀಮ್ ಸಿನೆಮಾ ತೋರಿಸುತ್ತಿದೆ. ಮುಖ್ಯವಾಗಿ ಕ್ರಿಮಿನಲ್ ಟ್ರೈಬ್ ಎಂದು ಹಣೆಪಟ್ಟಿಕಟ್ಟಿಕೊಂಡು ನರಳುವ ಈ ದೇಶದ ಕೋಟ್ಯಂತರ ಅಪರಾಧಿ ಬುಡಕಟ್ಟುಗಳ ಪ್ರತಿನಿಧಿಯಾಗಿ ಇರುಳ ಬುಡಕಟ್ಟು ಸಮುದಾಯವು ಈ ಸಿನಿಮಾದ ಕೇಂದ್ರದಲ್ಲಿದೆ. ಸಿನೆಮಾ ನೋಡುತ್ತಿದ್ದಂತೆ ಅಪರಾಧಿ ಬುಡಕಟ್ಟು ಗಂಟಿಚೋರರ ಬಗ್ಗೆ ಸಂಶೋಧನೆ ಮಾಡುವಾಗ ಲಕ್ಷ್ಮೀಶ್ವರದ ಪಕ್ಕದ ಬಾಲೆಹೊಸೂರ್ ಗಂಟಿಚೋರ ಸಮುದಾಯದ ಹಿರಿಯರು ಹೇಳುತ್ತಿದ್ದ ಕತೆಗಳು ಕಣ್ಮುಂದೆ ಹಾದುಹೋಗುತ್ತಿದ್ದವು. ಗಂಟಿಚೋರ್ ಎನ್ನುವ ಹೆಸರಿನ ಕಾರಣಕ್ಕೆ ಮಾಡದ ತಪ್ಪಿಗೆ ಜೈಲಿಗೆ ಹಾಕುತ್ತಾರೆಂದು ಬೇರೆಡೆ ವಲಸೆ ಹೋಗಿ, ತಮ್ಮ ಸಮುದಾಯದ ಹೆಸರು ಗುರುತನ್ನು ಬದಲಿಸಿಕೊಂಡು ಬದುಕುತ್ತಿದ್ದ ಕತೆ ಹೇಳುತ್ತಿದ್ದರು. ಇಂತಹದ್ದೇ ಬದುಕಿನ ಒಂದು ಸೂಕ್ಷ್ಮ ಎಳೆಯನ್ನು ಆಧರಿಸಿ ಜೈಭೀಮ್ ಸಿನೆಮಾ ಮಾಡಲಾಗಿದೆ.

ನಟಿ ಜ್ಯೋತಿಕ ನಿರ್ಮಿಸಿದ ನಟ ಸೂರ್ಯ ನಟಿಸಿದ ಟಿ.ಜೆ.ಜ್ಞಾನವೇಲ್ ನಿರ್ದೇಶನ ಮಾಡಿದ ಸಿನೆಮಾ ನಾಲ್ಕು ಭಾಷೆಗಳಲ್ಲಿ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ. ಇರುಳ ಸಮುದಾಯದ ರಾಜಕಣ್ಣು ಎನ್ನುವವ ತಾನು ಮಾಡದೆ ಇರುವ ಕಳ್ಳತನದ ಕೇಸಲ್ಲಿ ಅರೆಸ್ಟ್ ಆಗುತ್ತಾನೆ. ಇದೇ ಸಮುದಾಯದ ಇನ್ನಿಬ್ಬರನ್ನು ಇದೇ ಕೇಸಲ್ಲಿ ಬಂಧಿಸಲಾಗುತ್ತದೆ. ಮಾಡದ ಕಳ್ಳತನವನ್ನು ಒಪ್ಪಿಕೊಳ್ಳಲು ಹಿಂಸೆ ನೀಡಲಾಗುತ್ತದೆ. ಹಿಂಸೆ ತಾಳದೆ ಈ ಮೂವರೂ ಸ್ಟೇಷನ್ನಿನಿಂದ ತಪ್ಪಿಸಿಕೊಂಡರೆಂದು ಪೊಲೀಸರು ಕತೆಕಟ್ಟಿ ಹುಡುಕುವಂತೆ ನಟಿಸುತ್ತಾರೆ. ಇದನ್ನು ನಂಬಿ ರಾಜಕಣ್ಣು ಹೆಂಡತಿ ಸೇಂಗನಿ ಗಂಡನ ಹುಡುಕಾಟ ಪ್ರಾರಂಭಿಸುತ್ತಾಳೆ. ಈ ಹುಡುಕಾಟಕ್ಕೆ ನೆರವಾಗುವ ಲಾಯರ್ ಚಂದ್ರು, ಕೋರ್ಟಲ್ಲಿ ಹೇಬಿಯಸ್ ಕಾರ್ಪಸ್ ಕೇಸ್ ದಾಖಲಿಸುತ್ತಾನೆ. ಇದರಿಂದಾಗಿ ರಾಜಕಣ್ಣು ಲಾಕಪ್ ಡೆತ್ ಆಗಿದ್ದು, ಇದನ್ನು ಮುಚ್ಚಿಹಾಕಲು ಪೊಲೀಸರು ತಪ್ಪಿಸಿಕೊಂಡು ಹೋಗಿರುವ ತಂತ್ರ ಹೆಣೆದಿರುವುದು ಬಹಿರಂಗಗೊಳ್ಳುತ್ತದೆ. ಅಧಿಕಾರಶಾಹಿ ಚಾಣಾಕ್ಷತನದಿಂದ ಹೆಣೆದ ಕುತಂತ್ರದ ಬಲೆಯನ್ನು ಬೇಧಿಸಿ ಕಾನೂನಿನ ಆತ್ಯಂತಿಕ ನೆರವಿನಿಂದ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಲಾಗುತ್ತದೆ. ಊರಿನ ಮೇಲ್ವರ್ಗ, ಅಧಿಕಾರಿ ವರ್ಗ, ನೆಲೆ ಗುರುತೂ ಇಲ್ಲದ ಬುಡಕಟ್ಟು ಸಮುದಾಯದ ದುಡಿವ ವರ್ಗದ ನಡುವಿನ ತರತಮ ಮತ್ತು ಕ್ರೌರ್ಯವನ್ನು ಮನಸ್ಸುಗಳಿಗೆ ನಾಟುವಂತೆ ಕಟ್ಟಿಕೊಡಲಾಗಿದೆ. ಇದು ದಮನಿತರಿಗಾಗಿ ನಿರಂತರವಾಗಿ ಹೋರಾಡಿದ ಜಸ್ಟೀಸ್ ಚಂದ್ರು ಅವರ ನೈಜ ಜೀವನವನ್ನು ಆಧರಿಸಿದ ಕತೆ.

ಈ ಸಿನೆಮಾ ಬಗ್ಗೆ ಎರಡು ಬಗೆಯ ಅಭಿಪ್ರಾಯಗಳಿವೆ. ಒಂದು ದಲಿತ ಸಮುದಾಯದ ಅವಮಾನ ಅಸ್ಪೃಶ್ಯತೆಯನ್ನು ಅನುಭವಿಸಿದ ಹೊಸ ತಲೆಮಾರು, ಇದು ಮೇಲ್ಜಾತಿಯ ಲಾಯರನೊಬ್ಬ ಇರುಳಿಗರನ್ನು ರಕ್ಷಿಸುವ ಉದ್ಧಾರಕನ ಪಾತ್ರ. ಈ ಬಗೆಯ ಉದ್ಧಾರಕರು ಬೇಕಾಗಿಲ್ಲ. ಅದೇ ಸಮುದಾಯದ ಒಳಗಿಂದಲೇ ರಕ್ಷಕರು ಬಂದಾಗಿದೆ. ಆಯಾ ಸಮುದಾಯಗಳೇ ಯಾವ ಮೇಲ್ಜಾತಿಯ ಉದ್ಧಾರಕರ ಬೆಂಬಲವಿಲ್ಲದೆ ತಮ್ಮನ್ನು ತಾವೇ ರಕ್ಷಣೆ ಮಾಡಿಕೊಳ್ಳುತ್ತಿವೆ. ಅದೇ ಇರುಳಿಗ ಸಮುದಾಯದ ಯುವಕನೊಬ್ಬ ವಕೀಲನಾಗಿ ತನ್ನದೇ ಸಮುದಾಯವನ್ನು ರಕ್ಷಣೆ ಮಾಡುವ ಹಂತದಲ್ಲಿ ನಿಜವಾದ ಕತೆ ತೆರೆದುಕೊಳ್ಳುತ್ತದೆ ಎನ್ನುವುದು ಒಂದು ನೋಟ. ಮತ್ತೊಂದು ಇದು ಬುಡಕಟ್ಟು ಸಮುದಾಯವನ್ನು ಆಧರಿಸಿದ ಸಿನೆಮಾ. ಇಲ್ಲಿ ಅಪರಾಧಿ ಬುಡಕಟ್ಟುಗಳ ವಾಸ್ತವವನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಡಲಾಗಿದೆ. ಬುಡಕಟ್ಟು ಸಮುದಾಯಗಳ ಬಗೆಗೆ ಜನರ ನೋಡುವ ನೋಟಕ್ರಮವನ್ನು ತಿದ್ದುತ್ತದೆ. ಹೀಗಾಗಿ ಲಾಯರ್ ಚಂದ್ರು ಮೇಲ್ಜಾತಿಯನ್ನು ಪ್ರತಿನಿಧಿಸುತ್ತಾನೆ ಎಂದು ಹಣೆಪಟ್ಟಿ ಕಟ್ಟಲಾಗದು. ಮಾನವೀಯತೆಯ ಪರವಾದ ಒಬ್ಬ ನಿಷ್ಠಾವಂತ ವಕೀಲನಷ್ಟೆ ಆತ. ಹಾಗಾಗಿ ದಲಿತ ಬುಡಕಟ್ಟುಗಳನ್ನು ಬಳಸಿಕೊಳ್ಳುವ ಆಯಾಮ ಇದೆ ಎನ್ನುವುದು ತಪ್ಪು ಎನ್ನುವುದು ಇನ್ನೊಂದು ವಾದ.

‘ಉದ್ಧಾರಕನೊಬ್ಬ’ ಬರುತ್ತಾನೆ, ಆತ ಅತಿಮಾನುಷ ಶಕ್ತಿ ಬಳಸಿ ನಿಮ್ಮನ್ನು ಉದ್ಧಾರ ಮಾಡುತ್ತಾನೆ ಎನ್ನುವ ಹೀರೋಯಿಸಮ್ ಮಾದರಿಗಳಿಂದ ಇಂಡಿಯಾದ ಸಿನೆಮಾಗಳು ಪೂರ್ತಿ ಬಿಡುಗಡೆಯಾಗಿಲ್ಲ. ವಾಸ್ತವವಾಗಿ ದಲಿತ ದಮನಿತ ಕೆಳವರ್ಗಗಳ ಕಥಾ ವಸ್ತುವಿನ ಸಿನೆಮಾಗಳಿಗೂ ಹೀಗೆ ಉದ್ಧಾರಕನೊಬ್ಬನನ್ನು ತಂದು ನಿಲ್ಲಿಸುವ ಹುಚ್ಚಿದೆ. ವಾಸ್ತವವಲ್ಲದ ಅತಿಮಾನುಷತೆಯನ್ನು ಆರೋಪಿಸುತ್ತದೆ. ಇದು ಇಂಡಿಯಾದ ಸಿನೆಮಾ ಜನಸಾಮಾನ್ಯರನ್ನು ಒಳಗೊಳ್ಳುವ ಮಾರುಕಟ್ಟೆಯ ಬಹುದೊಡ್ಡ ತಂತ್ರಗಳಲ್ಲೊಂದು. ಮೇಲುನೋಟಕ್ಕೆ ದಲಿತರ ದಮನಿತರ ಉದ್ಧಾರದ ಬಗ್ಗೆ ಜನಾಭಿಪ್ರಾಯ ರೂಪಿಸುವ ಸಿನೆಮಾ ಎಂದಾಗಲೂ ಇವರನ್ನು ಮೇಲೆತ್ತಲು ಮೇಲ್ಜಾತಿಯ ಅಥವಾ ತಮ್ಮ ಜಾತಿ ಕುಲದವರಲ್ಲದ ಬೇರೊಬ್ಬರು ಉದ್ಧಾರಕ್ಕಾಗಿ ಬಂದದ್ದನ್ನು ಗಟ್ಟಿಯಾಗಿ ಪ್ರತಿಪಾದಿಸುತ್ತವೆ.

ಈ ಹೊತ್ತು ದಲಿತ ದಮನಿತ ಬುಡಕಟ್ಟು ಸಮುದಾಯಗಳ ಸಮಸ್ಯೆಗಳನ್ನು ಆಧರಿಸಿ ಮಾಡುವ ಸಿನೆಮಾವನ್ನು ಒಳಗೊಂಡಂತೆ, ಉಳಿದ ಜನಪ್ರಿಯ-ಮನರಂಜನಾ ಕೃತಿಗಳು ಕೂಡ ಅಂಬೇಡ್ಕರ್ ಚಿಂತನೆಯಿಂದ ಪ್ರೇರಣೆ ಪಡೆಯಬೇಕಾಗಿದೆ. ಹಾಗಾದರೆ ಅಂಬೇಡ್ಕರ್ ಚಿಂತನೆಯಲ್ಲಿ ಯಾವ ಬಗೆಯ ಸೃಜನಶೀಲತೆಗೆ ಮಾನ್ಯತೆ ಇದೆ? ಸ್ವತಃ ಅಂಬೇಡ್ಕರ್ ಶಿಕ್ಷಿತರಾಗಿ, ಸಂಘಟಿತರಾಗಿ, ಹೋರಾಟ ಮಾಡಿ ಹಕ್ಕುಗಳನ್ನು ಪಡೆಯಿರಿ ಎಂದು ಹೇಳುವಾಗ ಬಹುಜನರ ಕ್ರಿಯಾತ್ಮಕ ಸಾಮೂಹಿಕ ಚಲನಶೀಲ ನಡೆಗಳ ಬಗ್ಗೆ ಹೇಳುತ್ತಾರೆ. ಉದ್ಧಾರಕನೊಬ್ಬ ಬಂದು ಜನಸಮುದಾಯವನ್ನು ಮೇಲೆತ್ತುತ್ತಾನೆ ಎನ್ನುವುದರಲ್ಲಿ ಸ್ವತಃ ಅಂಬೇಡ್ಕರ್ ಅವರಿಗೆ ನಂಬಿಕೆ ಇರಲಿಲ್ಲ. ಸ್ವತಃ ತನ್ನ ಬಗೆಗೂ ಅಂತಹ ನಂಬಿಕೆ ಜನರಲ್ಲಿ ಬೇರುಬಿಡುವುದನ್ನು ವಿರೋಧಿಸುತ್ತಲೇ ಬಂದವರು. ಹಾಗಾಗಿಯೇ ನನ್ನನ್ನು ಆರಾಧಿಸಬೇಡಿ ಎಂದು ಗದರುತ್ತಲೇ ಈ ದೇಶದ ಜನತೆಯ ನಾಯಕಾರಾಧನೆಯ ಅಪಾಯಗಳನ್ನು ಒತ್ತಿ ಹೇಳುತ್ತಾರೆ. ಹಾಗಾಗಿ ದಮನಿತ ಸಮುದಾಯ ಒಳಗಿಂದಲೇ ಸಾಮೂಹಿಕವಾಗಿ ಮೈತಳೆದ ಸಾಂಘಿಕ ಪ್ರಯತ್ನವೊಂದು ತಮ್ಮನ್ನು ತಾವೇ ಉದ್ಧರಿಸಿಕೊಳ್ಳಲು ಸಜ್ಜಾಗಬೇಕು. ನಮ್ಮನ್ನು ಬೇರೆ ಯಾರೋ ಮೇಲೆತ್ತುವುದಕ್ಕಿಂತ ನಾವೇ ಕಾನೂನು ಸಂವಿಧಾನದ ನೆರವು ಪಡೆದು ಎದ್ದುನಿಲ್ಲಬೇಕು, ನಮ್ಮ ಕಾಲಿನ ಕೋಳಗಳನ್ನು ನಾವೇ ಬಿಚ್ಚಿಕೊಳ್ಳಬೇಕು ಎನ್ನುವುದು ಅಂಬೇಡ್ಕರ್ ಅವರ ಕನಸು. ಅಂದರೆ ಸಾರಾಂಶದಲ್ಲಿ ಸಿನೆಮಾ ಒಳಗೊಂಡಂತೆ ಯಾವುದೇ ಸೃಜನಶೀಲ ಪ್ರಕ್ರಿಯೆ ದಮನಿತ ಸಮುದಾಯದ ಒಳಗೆ ಎಚ್ಚೆತ್ತ ಪ್ರಜ್ಞೆಯನ್ನು ಆಧರಿಸಿರಬೇಕು ಎನ್ನುವುದಾಗಿದೆ. ಈ ನೆಲೆಯಲ್ಲಿ ‘ಜೈಭೀಮ್’ ಸಿನೆಮಾದ ಬಗ್ಗೆ ದಲಿತ ಯುವಜನತೆ ಎತ್ತಿದ ಪ್ರಶ್ನೆ ಪ್ರಾಮಾಣಿಕವಾಗಿದೆ ಮತ್ತು ಸರಿಯಾಗಿದೆ.

ಒಂದು ವೇಳೆ ಜೈಭೀಮ್ ಸಿನೆಮಾವನ್ನು ಈ ದೇಶದ ಕೋಟ್ಯಂತರ ಅಪರಾಧಿ ಬುಡಕಟ್ಟುಗಳು ನೋಡಿದ್ದೇ ಆದರೆ ಅವರ ಪ್ರತಿಕ್ರಿಯೆ ಹೇಗಿರಬಹುದು? ಈಗ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ಕಾರಣ ಈ ಚಿತ್ರ ಬಹುಸಂಖ್ಯಾತ ಬುಡಕಟ್ಟುಗಳಿಗೆ ನಿಲುಕದ ನಕ್ಷತ್ರ. ಹಾಗಿದ್ದೂ ಕೆಲವಾದರೂ ಅಪರಾಧಿ ಬುಡಕಟ್ಟುಗಳ ಪ್ರತಿನಿಧಿಗಳು ಈ ಸಿನೆಮಾ ನೋಡುತ್ತಿದ್ದಂತೆಯೇ ಅವರ ಮನಪಟಲದಲ್ಲಿ ನೂರಾರು ನೆನಪುಗಳು ಗರಿಗೆದರುತ್ತವೆ. ಒಂದು ಸಿನೆಮಾ ಸಾವಿರಾರು ನೈಜ ಘಟನೆಗಳನ್ನು ನೆನಪಿಗೆ ತರುತ್ತದೆ. ಹೀಗೆ ಸಿನೆಮಾ ನೋಡಿದ ಮೇಲೆ ಈ ಬುಡಕಟ್ಟುಗಳ ಪ್ರತಿನಿಧಿಗಳಿಗೆ ಹೇಗಿದೆ ಸಿನೆಮಾ ಎಂದು ಕೇಳಿದರೆ, ಅವರಲ್ಲೊಬ್ಬರು ಇದು ಸಿನೆಮಾ ಅಲ್ರೀ ಸರ ನಮ್ ಕತೆ ಎಂದು ಹೇಳಬಹುದು. ಅಂತೆಯೇ ಬಿಟ್ಟುಹೋದ ಸಂಗತಿಗಳನ್ನು ಹೇಳುತ್ತಾ ಅಪೂರ್ಣ ಸಿನೆಮಾವನ್ನು ಪೂರ್ಣಗೊಳಿಸಲು ಪ್ರಯತ್ನಿಸಬಹುದು. ಅಷ್ಟರಮಟ್ಟಿಗೆ ಸಿನೆಮಾ ಗೆದ್ದಂತೆ. ಹೀಗೆ ಹೇಳಿದ ನಂತರ ಅದೇ ಬುಡಕಟ್ಟಿನ ಒಬ್ಬರು ‘ನಮಗೂ ಚಂದ್ರು ಲಾಯರ್’ ಅಂತವರು ಸಿಗಬೇಕಿತ್ತು ಎಂದು ಭಾವಿಸುವುದಾದರೆ, ಇದು ಸಿನೆಮಾದ ಸೋಲು. ಹೀಗಾದಲ್ಲಿ ಬುಡಕಟ್ಟು ಸಮುದಾಯದವರು ನಮಗೂ ನಮ್ಮ ಸಮಸ್ಯೆ ಬಗೆಹರಿಸುವ, ಕಷ್ಟ ಪರಿಹರಿಸುವ ಒಬ್ಬರು ಸಿಗಬೇಕಿತ್ತು ಎನ್ನುವ ಅವಲಂಬನೆಯ ಭಾವವನ್ನು ತಾಳುತ್ತಾರೆ.

ಜಸ್ಟೀಸ್ ಚಂದ್ರು

ಒಂದು ವೇಳೆ ಇದೇ ಇರುಳಿಗ ಬುಡಕಟ್ಟಿನ ಯುವಕನೊಬ್ಬ ಕಾನೂನು ಪದವಿ ಪಡೆದು ಲಾಯರ್ ಆಗಿ ತನ್ನ ಜನರ ಇಂತಹದ್ದೇ ಕೇಸನ್ನು ಅಷ್ಟೇ ಚಾಕಚಕ್ಯತೆಯಿಂದ ಗೆಲ್ಲುವಂತಿದ್ದರೆ, ಇದೇ ಬುಡಕಟ್ಟಿನ ಜನರು ನಮ್ಮ ಹಾಡಿಯಲ್ಲೂ ಒಬ್ಬ ಲಾಯರ್ ಹುಟ್ಟಬೇಕ್ರೀ.. ನಮ್ಮಲ್ಲಿ ಒಬ್ಬರನ್ನು ಲಾಯರ್ ಮಾಡಬೇಕು ಎಂದು ಪಣ ತೊಡುತ್ತಿದ್ದರು. ಆಗ ಸಿನೆಮಾ ಬುಡಕಟ್ಟುಗಳ ಒಳಗೆ ಒಂದು ಪರ್ಯಾಯದ ಆಲೋಚನೆಯನ್ನು ಬಿತ್ತಿದಂತಾಗುತ್ತಿತ್ತು. ಅಥವಾ ಸಿನೆಮಾ ನಿಜವಾದ ಅರ್ಥದಲ್ಲಿ ಗೆಲ್ಲುತ್ತಿತ್ತು. ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾಗಿ ಚರ್ಚೆಯನ್ನು ಹುಟ್ಟುಹಾಕಿದ್ದ ಧನುಶ್ ಅಭಿನಯದ ತಮಿಳಿನ ಕರ್ಣನ್ ಈ ಬಗೆಯ ಸಿನೆಮಾ.

ಜೈಭೀಮ್ ಸಿನೆಮಾದ ವಿಶೇಷವೆಂದರೆ ಇಲ್ಲಿ ಬುಡಕಟ್ಟುಗಳ ಉದ್ಧಾರಕ್ಕೆ ಬರುವ ಅನ್ಯ ಜಾತಿಯ ವಕೀಲ ಚಂದ್ರು ಅತಿಮಾನುಷ ಶಕ್ತಿ ಸಾಮರ್ಥ್ಯಗಳಿಂದ ನ್ಯಾಯ ಕೊಡಿಸದೆ, ಕಾನೂನಿನ ನೆರವಿನಿಂದ ಮತ್ತು ಅಧಿಕಾರಶಾಹಿ ಒಡ್ಡುವ ಕುತಂತ್ರಗಳನ್ನು ಜಾಣತನದಿಂದ ಗೆಲ್ಲುವ ಮೂಲಕ ನ್ಯಾಯ ಒದಗಿಸುತ್ತಾನೆ. ಸಹಜವಾಗಿ ಇಂತಹದ್ದೊಂದು ಶಕ್ತಿ ನಮ್ಮ ಸಮುದಾಯದ ಹುಡುಗ ಲಾ ಓದಿದರೂ ಹೀಗೆ ಕೇಸು ಗೆಲ್ಲೋದು ಸಾಧ್ಯ ಎನ್ನುವ ಭಾವವನ್ನು ಬುಡಕಟ್ಟು ಸಮುದಾಯಗಳಲ್ಲಿ ಮೂಡಿಸುವ ಸಾಧ್ಯತೆಯೂ ಈ ಸಿನಿಮಾಕ್ಕಿದೆ. ಹೀಗಾಗಿ ಮೇಲ್ಜಾತಿಯ ವಕೀಲ ಇರುಳಿಗ ಮಹಿಳೆಗೆ ನ್ಯಾಯ ಒದಗಿಸಿದರೂ ಆತನೇನು ಅಸಾಧ್ಯ ಅತಿಮಾನುಷ ಶಕ್ತಿ ಪಡೆಯದ ಕಾರಣ ಸಹಜವಾಗಿ ಕಾಣುತ್ತಾನೆ. ಈ ಹಿಂದೆ ವಾಸ್ತವವಲ್ಲದ ಅತಿರಂಜಿತ ನೆಲೆಯಲ್ಲಿ ಉದ್ಧಾರಕನಾಗಿ ಮಾಡುವ ಪಾತ್ರ ಕಲ್ಪನೆ ಜೈಭೀಮ್ ಸಿನೆಮಾದಲ್ಲಿ ಬದಲಾಗಿದೆ. ಅಷ್ಟರಮಟ್ಟಿಗೆ ಇದು ಆಶಾದಾಯಕ ಬೆಳವಣಿಗೆ.

ಹೀಗಾಗಿ ಜೈಭೀಮ್ ದಲಿತರನ್ನು ಬುಡಕಟ್ಟುಗಳನ್ನು ಬಳಸಿಕೊಳ್ಳುವ ಆಯಾಮವನ್ನು ಪೂರ್ತಿ ತಳ್ಳಿಹಾಕಲು ಆಗದಿದ್ದರೂ, ಅಪರಾಧಿ ಬುಡಕಟ್ಟುಗಳ ಬಗೆಗೆ ಜನಮಾನಸದಲ್ಲಿ ಒಂದು ಪಾಪಪ್ರಜ್ಞೆಯನ್ನೂ, ಗಿಲ್ಟನ್ನೂ ಹುಟ್ಟಿಸಬಲ್ಲಷ್ಟು ಸಮರ್ಥವಾಗಿದೆ. ಈ ಸಿನೆಮಾ ನಾಯಕ ಸೂರ್ಯ ನಿಜಜೀವನದಲ್ಲಿ ಬುಡಕಟ್ಟುಗಳ ಕಲ್ಯಾಣಕ್ಕಾಗಿ ತಮಿಳುನಾಡು ಸರಕಾರಕ್ಕೆ ಒಂದು ಕೋಟಿ ದೇಣಿಗೆ ನೀಡಿದ್ದು ಸುದ್ದಿಯಾಗಿತ್ತು. ಅಂದರೆ ಈ ಸಿನೆಮಾ ಸ್ವತಃ ನಾಯಕ ನಟ ಸೂರ್ಯನನ್ನು ಬದಲಾಯಿಸಿದೆ. ಹೀಗಾಗಿ ಜೈಭೀಮ್ ಸಿನೆಮಾದ ಮಿತಿಗಳನ್ನು ಆರೋಗ್ಯಕರವಾಗಿ ಚರ್ಚಿಸುವುದು ತಪ್ಪಲ್ಲ. ಅಂತೆಯೇ ಇಂತಹ ಸಿನೆಮಾಗಳ ಬಗ್ಗೆ, ಅಪಮಾನಕ್ಕೆ ಒಳಗಾದ, ಅಸ್ಪೃಶ್ಯತೆ ಅನುಭವಿಸಿದವರ ಕಣ್ಣೋಟದ ಪ್ರತಿಕ್ರಿಯೆ ಬಹಳ ಮುಖ್ಯ, ಮತ್ತು ಅಂತಹ ಅಭಿಪ್ರಾಯಗಳನ್ನು ಗೌರವಿಸಬೇಕೂ ಕೂಡ. ಇರುಳಿಗ ಸಮುದಾಯದ ಬಗ್ಗೆ ಎಡ್ಗರ್ ಥರ್ಸ್ಟನ್ ಮತ್ತು ಕೆ.ರಂಗಾಚಾರಿ ಸಂಪಾದಿಸಿದ ದಕ್ಷಿಣ ಭಾರತದ ಜಾತಿ ಮತ್ತು ಬುಡಕಟ್ಟುಗಳ ಬಗೆಗಿನ ಎರಡನೆ ಸಂಪುಟದಲ್ಲಿ ವಿಸ್ತಾರವಾದ ಚರ್ಚೆಯಿದೆ. ಕುತೂಹಲಕಾರಿ ಸಂಗತಿಗಳಿವೆ ಗಮನಿಸಿ. ಕರ್ನಾಟಕದ ರಾಮನಗರದ ಸಮೀಪದಲ್ಲಿ ವಾಸಿಸುವ ಇರುಳಿಗರ ಬಗ್ಗೆ ಡಾ.ಎಂ.ಬೈರೇಗೌಡ ಮತ್ತು ಇದೇ ಇರುಳಿಗ ಸಮುದಾಯ ಯುವ ಸಂಶೋಧಕ ಡಾ.ಕೃಷ್ಣಮೂರ್ತಿ ಪಿಹೆಚ್.ಡಿ ಸಂಶೋಧನೆ ಮಾಡಿದ್ದಾರೆ, ಸಾಧ್ಯವಾದರೆ ಈ ಬರಹಗಳನ್ನು ಗಮನಿಸಿ.

ಅರುಣ್ ಜೋಳದಕೂಡ್ಲಿಗಿ

ಅರುಣ್ ಜೋಳದಕೂಡ್ಲಿಗಿ
ಬಳ್ಳಾರಿ ಜಿಲ್ಲೆಯ ಜೋಳದಕೂಡ್ಲಿಗಿಯವರು. ಸದ್ಯಕ್ಕೆ ಪ್ರೊ.ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಜನಪದ ಕವಿಗಳ ಕುರಿತು ಉನ್ನತ ಸಂಶೋಧನೆಯಲ್ಲಿ ತೊಡಗಿದ್ದಾರೆ. ನೆರಳು ಮಾತನಾಡುವ ಹೊತ್ತು, ಸಂಡೂರು ಭೂಹೋರಾಟ, ಅವ್ವನ ಅಂಗನವಾಡಿ, ಕನ್ನಡ ಜಾನಪದ ತಾತ್ವಿಕ ನೆಲೆಗಳು ಪ್ರಮುಖ ಕೃತಿಗಳು


ಇದನ್ನೂ ಓದಿ: ಕೊಳೆತು ನಾರುತ್ತಿರುವ ವ್ಯವಸ್ಥೆಯ ಕಥೆ ಹೇಳುವ ‘ಜೈ ಭೀಮ್’…

ಇದನ್ನೂ ಓದಿ: ಅಂಬೇಡ್ಕರ್‌ ಅವರನ್ನು ಅರ್ಥಮಾಡಿಕೊಳ್ಳಲು ಮಾರ್ಕ್ಸ್ ವಾದದ ಹಿನ್ನೆಲೆ ನೆರವಾಗಿದೆ: ಜಸ್ಟಿಸ್ ಚಂದ್ರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...