ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನವನ್ನು ಮೂಡಿಸುತ್ತಿರುವ ಸಿನಿಮಾ ಜೈ ಭೀಮ್. ನೈಜ ಘಟನೆಯನ್ನಾಧಾರಿಸಿ ರೂಪುಗೊಂಡಿರುವ ಈ ಸಿನಿಮಾಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಜೈಭೀಮ್ ಚಿತ್ರದ ಮೂಲಕ ಮನೆಮಾತಾಗಿರುವ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಚಂದ್ರು ಅವರನ್ನು ಎಕನಾಮಿಕ್ಸ್ ಟೈಮ್ಸ್ ಸಂದರ್ಶಿಸಿದ್ದು, ಅದರ ಕನ್ನಡಾನುವಾದ ಇಲ್ಲಿದೆ.
ಎಕನಾಮಿಕ್ಸ್ ಟೈಮ್ಸ್ : ಚಿತ್ರಕ್ಕೆ ಜೈ ಭೀಮ್ ಹೆಸರೇಕೆ ಇಡಲಾಗಿದೆ..? ಅವಕಾಶವಂಚಿತರು ತಮ್ಮ ಹಕ್ಕುಗಳನ್ನು ಪಡೆಯಲು ಸಾಂವಿಧಾನಿಕ ಮಾರ್ಗಗಳನ್ನು ಅನುಸರಿಸಿದ್ದರು ಎಂದೇ…? ಅಂಬೇಡ್ಕರ್ ಅವರ ಘೋಷಣೆಯನ್ನು ಬಿಂಬಿಸುವ ಚಿತ್ರದಲ್ಲಿ ಮಾರ್ಕ್ಸ್ ವಾದದ ಛಾಯೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
ನಿವೃತ್ತ ನ್ಯಾಯಮೂರ್ತಿ ಚಂದ್ರು: ಜೈ ಭೀಮ್ ಒಂದು ಘೋಷಣೆ ಅಲ್ಲ, ಅದು ದಮನಿತರ ರಣ ಘೋಷ. ಇದು ಅಂಬೇಡ್ಕರರನ್ನು ಮಾರ್ಕ್ಸ್ ವಾದಿಗಳು ಉಪಯೋಗಿಸಿಕೊಂಡ೦ತೆ ಆಗುವುದಿಲ್ಲ. ಮಾರ್ಕ್ಸ್ ವಾದಿ ಬಾವುಟಗಳು ಮತ್ತು ಕೆಂಪು ಶಾಲುಗಳು ನಿಶ್ಶಬ್ಧವಾಗಿರುವ ರಾಜ್ಯದಲ್ಲಿ ಸಹಜವಾಗಿ ಮೂಡಿಬಂದಿರುವ ಸಂಕೇತಗಳಾಗಿವೆ. ಈ ಚಿತ್ರದಲ್ಲಿ ಬುಡಕಟ್ಟು ಸಮುದಾಯವಾದ ಇರುಳರು ತಾವೇ ಸಂಘಟಿತರಾಗಿ ತಮ್ಮ ಬೇಡಿಕೆಗಳೊಂದಿಗೆ ಮುನ್ನುಗ್ಗುತ್ತಾರೆ. ಈ ಚಿತ್ರದ ಮೂಲ ಸಂದೇಶವನ್ನು ಎರಡು ದೃಶ್ಯಗಳಲ್ಲಿ ಸ್ಪಷ್ಟವಾಗಿ ಬಿಂಬಿಸಲಾಗಿದೆ. ಒಮ್ಮೆ ಅಂತಿಮ ತೀರ್ಪು ಹೊರಬಿದ್ದ ನಂತರ ವಕೀಲ ಚಂದ್ರು “ ಇದು ಕೇವಲ ನಿನ್ನ ಗಂಡನ ಸಾವಿಗೆ ಸಂದ ನ್ಯಾಯ ಮಾತ್ರವೇ ಅಲ್ಲ, ಈ ರೀತಿಯ ಅನ್ಯಾಯಗಳನ್ನೂ ಇದು ಕೊನೆಗೊಳಿಸಬೇಕು ” ಎಂದು ಸೆಂಗೆಣಿಗೆ ಹೇಳುತ್ತಾನೆ. ಮತ್ತೊಂದು ದೃಶ್ಯದಲ್ಲಿ ನ್ಯಾಯಾಲಯದ ಪತ್ರಗಳ ಮೇಲೆ ಸೆಂಗೆಣಿ ಹೆಬ್ಬೆಟ್ಟು ಒತ್ತುತ್ತಾಳೆ, ಅಂತಿಮ ದೃಶ್ಯದಲ್ಲಿ ಆಕೆಯ ಮಗಳು ವಕೀಲರ ಮನೆಯಲ್ಲಿ ಕುಳಿತು ಪತ್ರಿಕೆಯನ್ನು ಓದುತ್ತಿರುತ್ತಾಳೆ. ಆದಿವಾಸಿಗಳು ಸಾಕ್ಷರತೆಯನ್ನು ಪಡೆಯುವ ಮೂಲಕವೇ ತಮ್ಮ ಹೊರಗುಳಿಯುವಿಕೆಯಿಂದ ಮುಕ್ತಿ ಪಡೆಯಲು ಸಾಧ್ಯ ಎಂಬ ಸಂದೇಶವನ್ನು ಇದು ನೀಡುತ್ತದೆ. ನನ್ನ ಆರಂಭದ ದಿನಗಳಲ್ಲಿ ನಾನು ಮಾರ್ಕ್ಸ್ ವಾದಿ ಪಕ್ಷದಲ್ಲಿ ಇದ್ದೆನಾದರೂ, ಪಕ್ಷ ತೊರೆದ ನಂತರ ನಾನು ಅಂಬೇಡ್ಕರ್‌ವಾದಿ ಚಳುವಳಿಗಳಲ್ಲೂ ಸಕ್ರಿಯನಾಗಿದ್ದೆ.
ಎಕನಾಮಿಕ್ಸ್ ಟೈಮ್ಸ್ : 1993-94ರಲ್ಲಿ ನೀವು ರಾಜಕಣ್ಣು-ಪಾರ್ವತಿಯ ಮೊಕದ್ದಮೆಯ ವಕಾಲತ್ತು ವಹಿಸಿದ್ದಿರಿ. ಆ ವೇಳೆಗೆ ನಿಮ್ಮನ್ನು ಸಿಪಿಎಂ ಪಕ್ಷದಿಂದ ಉಚ್ಚಾಟಿಸಿ ಐದು ವರ್ಷಗಳಾಗಿದ್ದವು. ಆದಾಗ್ಯೂ ಚಿತ್ರದಲ್ಲಿ ಲೆನಿನ್ ಮತ್ತು ಮಾರ್ಕ್ಸ್ ಪ್ರತಿಮೆಯನ್ನು ತೋರಿಸುವ ಉದ್ದೇಶವನ್ನು ಹೇಗೆ ಅರ್ಥೈಸುವಿರಿ..?
ನಿವೃತ್ತ ನ್ಯಾಯಮೂರ್ತಿ ಚಂದ್ರು : ಇಂದಿಗೂ ನಾನು ಮಾರ್ಕ್ಸ್ ವಾದಿ ಸಿದ್ಧಾಂತದಲ್ಲಿ ವಿಶ್ವಾಸ ಇರಿಸಿದ್ದೇನೆ. ಆದರೆ ಸಿದ್ಧಾಂತಿಯಾಗಿರಲು ಪಕ್ಷದೊಡನೆ ಇರಬೇಕೆಂದಿಲ್ಲ. ಪಕ್ಷವು ರೂಪಿಸಿದ ಸಂಘಟನೆಗಳ ಮೂಲಕವೇ ನೀವು ಹೊರಹೊಮ್ಮಿದ್ದು ನಂತರ ಅವರಿಂದ ತಿರಸ್ಕರಿಸಲ್ಪಟ್ಟಿದ್ದರೂ, ನಿಮ್ಮ ಆಲೋಚನೆಯೇನೂ ಬಾಧಿತವಾಗುವುದಿಲ್ಲ. ಬದಲಾಗಿ, ಆ ದಿನಗಳಲ್ಲಿದ್ದ ನನ್ನ ನಂಬಿಕೆಗಳೆ ನನ್ನ ಆಲೋಚನೆ ಮತ್ತು ಕ್ರಿಯೆ ಎರಡನ್ನೂ ನಿರ್ಧರಿಸುತ್ತವೆ. ಹಾಗಾಗಿ ಲೆನಿನ್ ಅಥವಾ ಮಾರ್ಕ್ಸ್ ಪ್ರತಿಮೆ ಇರುವುದು ನನ್ನ ಇಂದಿನ ಚಟುವಟಿಕೆಗೆ ಯಾವ ರೀತಿಯೂ ವ್ಯತಿರಿಕ್ತವಾಗಿ ಕಾಣುವುದಿಲ್ಲ. 1993ರಲ್ಲಿ ನಾನು ರಾಜಕಣ್ಣು ಕೊಲೆ ಮೊಕದ್ದಮೆಯಲ್ಲಿ ವಾದ ಮಂಡಿಸಿದಾಗ ನಾನು ಮಾರ್ಕ್ಸ್ ವಾದಿ ಪಕ್ಷದಿಂದ ದೂರವಾಗಿದ್ದೆ. ಐದು ವರ್ಷದ ಹಿಂದೆಯೇ ನನ್ನನ್ನು ಉಚ್ಚಾಟಿಸಲಾಗಿತ್ತು. ಈ ಮೊಕದ್ದಮೆ ನಡೆಯುವ ಸಂದರ್ಭದಲ್ಲಿ ಪಕ್ಷದೊಡನೆ ನೇರ ಸಂಪರ್ಕವೂ ಇರಲಿಲ್ಲ. ನಾನು ಅಚಾನಕ್ಕಾಗಿ ಪಾರ್ವತಿಯನ್ನು ಸಂಧಿಸಿದ್ದೆ. ಕೆಲವು ಶಿಕ್ಷಕರಿಗೆ ಉಪನ್ಯಾಸ ನೀಡಲು ನೈವೇಲಿಗೆ ಹೋಗಿದ್ದ ಸಂದರ್ಭದಲ್ಲಿ ವೇದಿಕೆಯಿಂದ ಕೆಳಗಿಳಿಯುವಾಗ ಆಕೆಯನ್ನು ನೋಡಿದೆ. ಕೆಲವು ಸ್ವಯಂ ಸೇವಕರು ಆಕೆಯನ್ನು ಕರೆತಂದಿದ್ದರು. ಮೊಕದ್ದಮೆಯ ಬಗ್ಗೆ ಮಾತನಾಡಲು ಆಕೆಯನ್ನು ಕಚೇರಿಗೆ ಬರುವಂತೆ ಹೇಳಿದ್ದೆ. ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹಾಕಿದ ನಂತರ ಹಲವು ಘಟನೆಗಳು ನಡೆದವು. ಯಾವುದೇ ಸಂಘಟನೆಯೂ ನನ್ನ ನೆರವಿಗೆ ಬರಲಿಲ್ಲ. ಮೊಕದ್ದಮೆ ಪೂರ್ಣಗೊಂಡ ನಂತರ, ನಾನು ಸಮ್ಮತಿಸದಿದ್ದರೂ ನ್ಯಾಯಾಲಯ ಐದು ಸಾವಿರ ರೂಗಳ ವೆಚ್ಚವನ್ನು ನೀಡಿತ್ತು. ನಾನು ಆ ಹಣವನ್ನು ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘಟನೆಯ ಮೈಥಿಲಿ ಶಿವರಾಮನ್ ಅವರಿಗೆ, ಮಹಿಳಾ ಹೋರಾಟಗಳಿಗೆ ನೆರವಾಗಲಿ ಎಂದೆಣಿಸಿ ಕಳುಹಿಸಿದೆ. ಮಾರ್ಕ್ಸ್ ವಾದಿ ಪಕ್ಷದಿಂದ ಸ್ವೀಕೃತಿಯ ಸಂದೇಶವೂ ನನಗೆ ಬರಲಿಲ್ಲ. ನನ್ನ ಉಚ್ಚಾಟನೆಯ ನಂತರ. ಹಲವು ಪಕ್ಷಗಳಿಂದ ಆಹ್ವಾನ ಇದ್ದರೂ, ನಾನು ಯಾವುದೇ ರಾಜಕೀಯ ಪಕ್ಷಕ್ಕೂ ಸೇರಲಿಲ್ಲ. ಮಾನವ ಹಕ್ಕುಗಳಿಗಾಗಿ ಹೋರಾಡುವ ಸಂದರ್ಭದಲ್ಲಿ ನನ್ನ ಸ್ವಾಯತ್ತತೆಯನ್ನು ಉಳಿಸಿಕೊಂಡೇ ಬಂದಿದ್ದೆ.
ಆದಾಗ್ಯೂ ನಾನು ಹೈಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದ ನಂತರವೂ ನನ್ನನ್ನು ಮಾರ್ಕ್ಸ್ ವಾದಿ ಎಂದೇ ಗುರುತಿಸಲಾಗುತ್ತಿತ್ತು. ಕೊಲೇಜಿಯಂನ ಕೆಲವು ಸದಸ್ಯರು, ನಾನು ಮಾರ್ಕ್ಸ್ ವಾದಿಯಾದ್ದರಿಂದ ನನ್ನನ್ನು ಆಯ್ಕೆ ಮಾಡದಂತೆ ಮುಖ್ಯ ನ್ಯಾಯಾಧೀಶರಿಗೆ ಮನವಿ ಸಲ್ಲಿಸಿದ್ದರು. ಆದರೆ ಮುಖ್ಯನ್ಯಾಯಾಧೀಶರಾದ ಎ ಪಿ ಶಾ ಈ ವಿರೋಧಿಗಳ ಅರ್ಜಿಯನ್ನು ತಿರಸ್ಕರಿಸಿದ್ದೇ ಅಲ್ಲದೆ, ನನ್ನ ಪಕ್ಷದೊಡಗಿನ ಒಡನಾಟ ಎರಡು ದಶಕಗಳಷ್ಟು ಹಳೆಯದೆಂದೂ ಕಾರಣ ನೀಡಿದ್ದರು. 20 ವರ್ಷಗಳಿಗೂ ಹೆಚ್ಚು ಕಾಲ ನಾನು ಪಕ್ಷಕ್ಕಾಗಿ ದುಡಿದಿದ್ದೆನಾದ್ದರಿಂದ ಇತರರು ನನ್ನನ್ನು ಮಾರ್ಕ್ಸ್ ವಾದಿ ಎಂದು ಪರಿಗಣಿಸುವುದು ಸಹಜವಾಗಿಯೇ ಇತ್ತು. ಈಗಲೂ ಇದಕ್ಕೆ ನಾನು ಹೆಮ್ಮೆ ಪಡುತ್ತೇನೆ.
ಎಕನಾಮಿಕ್ಸ್ ಟೈಮ್ಸ್ : ನಿಮ್ಮ ಉಚ್ಚಾಟನೆಯ ನಂತರ ಮರುಪರಿಶೀಲನೆಗಾಗಿ ಅರ್ಜಿ ಸಲ್ಲಿಸುವಂತೆ ಇಂ ಎಂ ಎಸ್ ನಂಬೂದರಿಪಾಡ್ ಸಲಹೆ ನೀಡಿದ್ದುದು ನಿಜವೇ – ನೀವೇಕೆ ನಿರಾಕರಿಸಿದಿರಿ..?
ನಿವೃತ್ತ ನ್ಯಾಯಮೂರ್ತಿ ಚಂದ್ರು: ನಾನು 1968 ರಲ್ಲಿ ಸಿಪಿಎಂ ಪಕ್ಷಕ್ಕೆ ಸೇರಿಕೊಂಡಿದ್ದೆ. ಪಕ್ಷದ ವಿದ್ಯಾರ್ಥಿ ಸಂಘಟನೆ ಮತ್ತು ಕಾರ್ಮಿಕ ಸಂಘಟನೆಗಳೊಡನೆ ಕೆಲಸ ಮಾಡಲಾರಂಭಿಸಿದೆ. 1970 ರಲ್ಲಿ ತಿರುವನಂತಪುರ೦ನಲ್ಲಿ ನಡೆದ ಎಸ್‌ಎಫ್‌ಐನ ಸ್ಥಾಪನಾ ಸಮಾವೇಶದಲ್ಲಿ ನಾನು ಪ್ರತಿನಿಧಿಯಾಗಿ ಭಾಗವಹಿಸಿದ್ದೆ. ನಂತರ ಸಂಘಟನೆಯ ರಾಜ್ಯ ಮಟ್ಟದ ನಾಯಕನಾಗಿ ಹಲವಾರು ಆಂದೋಲನಗಳನ್ನು ಮುನ್ನಡೆಸಿದ್ದೆ. ಕಾರ್ಮಿಕ ಸಂಘಟನೆಯೊಡನೆಯೂ ಸಕ್ರಿಯವಾಗಿದ್ದ ನಾನು, ಒಂದು ಕಾರ್ಮಿಕರ ಸಭೆಯಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಭಾಷಣ ಮಾಡಿದ್ದಕ್ಕಾಗಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದೆ. ಆಗ ಪ್ರಧಾನಿ ರಾಜೀವ್ ಗಾಂಧಿ ಮತ್ತು ಶ್ರೀಲಂಕಾದ ಜೆ ಆರ್ ಜಯವರ್ಧನೆ ನಡುವೆ ಏರ್ಪಟ್ಟ ಭಾರತ-ಶ್ರೀಲಂಕಾ ಒಪ್ಪಂದ ಮತ್ತು ಅದರಂತೆ ಭಾರತ ಶ್ರೀಲಂಕಾಗೆ ಐಪಿಕೆಎಫ್ ಸೇನೆಯನ್ನು ಕಳುಹಿಸಿದ್ದನ್ನು ನಾನು ವಿರೋಧಿಸಿದ್ದರಿಂದ ನನ್ನನ್ನು ಪಕ್ಷ ಉಚ್ಚಾಟಿಸಿತ್ತು. ಪಕ್ಷದ ದೃಷ್ಟಿಕೋನ ಭಿನ್ನವಾಗಿತ್ತು. ನನ್ನ ಉಚ್ಚಾಟನೆಯ ನಂತರ ನ್ಯಾ ಕೃಷ್ಣ ಐಯ್ಯರ್ ಇಎಂಎಸ್ ಅವರೊಡನೆ ಪ್ರಯಾಣ ಮಾಡುತ್ತಿದ್ದಾಗ ನನ್ನ ವಿಚಾರವನ್ನು ಪ್ರಸ್ತಾಪಿಸಿ, ಒಬ್ಬ ಒಳ್ಳೆಯ ಕಾರ್ಯಕರ್ತನ್ನು ಕಳೆದುಕೊಳ್ಳುವುದು ಪಕ್ಷಕ್ಕೆ ಉಚಿತವಲ್ಲ ಎಂದು ಹೇಳಿದ್ದರು. ಆಗ ನಾನು ಪಕ್ಷದ ನಿಯಂತ್ರಣ ಸಮಿತಿಗೆ ಮೇಲ್ಮನವಿ ಸಲ್ಲಿಸಲು ಇಎಂಎಸ್ ಸಲಹೆ ನೀಡಿದ್ದರೆಂದು ತಿಳಿದುಬಂದಿತ್ತು. ಆ ಪಯಣದ ನಂತರ ನನ್ನನ್ನು ಭೇಟಿಮಾಡಿದ ಕೃಷ್ಣ ಐಯ್ಯರ್ “ ಕಾಮ್ರೇಡ್ ಬಹುಶಃ ನಾವು ಅವರಿಗೆ ಅಗತ್ಯವಿರುವಷ್ಟು ಕೆಂಪು ಬಣ್ಣದಲ್ಲಿ ಕಾಣುತ್ತಿಲ್ಲ, ನಾವು ಪಿಂಕ್ ಪಕ್ಷವನ್ನು ಸ್ಥಾಪಿಸೋಣ ” ಎಂದು ತಮಾಷೆ ಮಾಡಿದ್ದರು. ಇದು ಕೃಷ್ಣ ಐಯ್ಯರ್ ಅವರ ಹಾಸ್ಯ ಪ್ರಜ್ಞೆಯ ಒಂದು ತುಣುಕು.
ಎಕನಾಮಿಕ್ಸ್ ಟೈಮ್ಸ್ : ನೀವು “ ಅಂಬೇಡ್ಕರ್ ಛಾಯೆಯಲ್ಲಿ ನನ್ನ ತೀರ್ಪುಗಳು ” ಎಂಬ ಪುಸ್ತಕವನ್ನು ರಚಿಸಿದ್ದೀರಿ. ನೀವು ಮಾರ್ಕ್ಸ್ ವಾದಿಯೋ ಅಂಬೇಡ್ಕರ್ ವಾದಿಯೋ ಅಥವಾ ಎರಡನ್ನೂ ಒಪ್ಪಿಕೊಳ್ಳುವಿರೋ..?
ನಿವೃತ್ತ ನ್ಯಾಯಮೂರ್ತಿ ಚಂದ್ರು: ನನ್ನನ್ನು ಹೇಗೆ ಬೇಕಾದರೂ ಗುರುತಿಸಿ, ನಾನು ಖಂಡಿತವಾಗಿಯೂ ಶಾಸ್ತ್ರಾ೦ಧನಂತೂ ಅಲ್ಲ. ಒಬ್ಬ ವಕೀಲನಾಗಿ ನಿಮ್ಮ ಬಳಿಗೆ ಬರುವ ಮೊಕದ್ದಮೆಗಳನ್ನು ನೀವು ವಾದ ಮಾಡಬಹುದು. ನೀವು ಮಂಡಿಸುವ ವಾದಗಳು ಹೇಗೇ ಇದ್ದರೂ ಫಲಿತಾಂಶ ನಿಮ್ಮದಲ್ಲ. ಆದರೆ ಒಬ್ಬ ನ್ಯಾಯಾಧೀಶರಾಗಿ ನೀವು ಒಂದು ತೀರ್ಪನ್ನು ಬರೆಯಬೇಕಿರುತ್ತದೆ. ಆಗ ನಮ್ಮ ತಾತ್ವಿಕ/ಸೈದ್ಧಾಂತಿಕ ಗ್ರಹೀತಗಳ, ನಿಮ್ಮ ಹೋರಾಟಗಳ ಅನುಭವಗಳ ಮತ್ತು ಕಾನೂನು ಜ್ಞಾನದ ಹಿನ್ನೆಲೆಯಲ್ಲಿ ವಿಷಯವನ್ನು ಪರಾಮರ್ಶಿಸಲು ಸಾಧ್ಯ. ನನ್ನ ಕೃತಿಯಲ್ಲಿ ನಾನು ನೀಡಿದ್ದ ಜಾತಿ ಮತ್ತು ಮತಗಳಿಗೆ ಸಂಬ೦ಧಿಸಿದ ತೀರ್ಪುಗಳನ್ನು ದಾಖಲಿಸಿದ್ದೇನೆ. ಅದರ ಪ್ರವೇಶಿಕೆಯಲ್ಲಿ, ಡಾ ಬಿ ಆರ್ ಅಂಬೇಡ್ಕರ್ ಅವರ ಬರಹಗಳು ಮತ್ತು ಭಾಷಣಗಳಿಂದ ನಾನು ಗ್ರಹಿಸಿದ ಜಾತಿ ಪ್ರಶ್ನೆಯ ಆಯಾಮಗಳನ್ನು ಪ್ರಸ್ತಾಪಿಸಿದ್ದೇನೆ. ಈ ಮೊಕದ್ದಮೆಗಳ ತೀರ್ಪುಗಳಲ್ಲೂ ನಾನು ಅಂಬೇಡ್ಕರ್ ಅವರ ಬರಹಗಳಿಂದ ಆಯ್ದ ಸಾಲುಗಳನ್ನು ಉಲ್ಲೇಖಿಸಿದ್ದೇನೆ. ಇವು ಇಲ್ಲದೆ ಹೋಗಿದ್ದಲ್ಲಿ ಬಹುಶಃ ನಾನು ಅಂತಹ ಜಟಿಲ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಲೇ ಇರಲಿಲ್ಲ.
ಇದನ್ನೂ ಓದಿ: ‘ಜೈ ಭೀಮ್’ ಚಿತ್ರಕ್ಕೆ ಸ್ಪೂರ್ತಿಯಾದ ವಕೀಲ ‘ಚಂದ್ರು’ ಯಾರು?
ಹಾಗೆಯೇ ಎಡಪಂಥೀಯ ಚಳುವಳಿ ಜಾತಿ ಪ್ರಶ್ನೆಯನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿತ್ತು ಎಂದೂ ಹೇಳಬಯಸುತ್ತೇನೆ. ಇಂದು ಎಡಪಂಥೀಯ ಚಳುವಳಿಗಳು ನಿರ್ದಿಷ್ಟವಾಗಿ ಜಾತಿ ಪ್ರಶ್ನೆಯನ್ನು ಕೈಗೆತ್ತಿಕೊಳ್ಳುತ್ತಿವೆ, ಸಿಪಿಎಂ ಸಹ ಅಖಿಲ ಭಾರತ ವೇದಿಕೆಯನ್ನು ರೂಪಿಸಿದೆ. ಯಾವುದೋ ಒಂದನ್ನು ಆಯ್ಕೆ ಮಾಡುವುದು ನನ್ನ ಆಯ್ಕೆಯಲ್ಲ. ಅಂಬೇಡ್ಕರರನ್ನು ನಂತರದಲ್ಲಿ ಅರ್ಥಮಾಡಿಕೊಳ್ಳುವುದರಲ್ಲಿ ನನ್ನ ಮಾರ್ಕ್ಸ್ ವಾದದ ಹಿನ್ನೆಲೆಯೂ ನೆರವಾಗಿದೆ.
ಎಕನಾಮಿಕ್ಸ್ ಟೈಮ್ಸ್ : ಚಿತ್ರದಲ್ಲಿ ಪಾತ್ರಧಾರಿಗಳ ಜಾತಿ ಹಿನ್ನೆಲೆ ಸ್ಪಷ್ಟವಾಗಿದೆ. ಆದರೆ ನಿಮ್ಮ ಹಿನ್ನೆಲೆಯ ಬಗ್ಗೆ ಪ್ರಸ್ತಾಪವಿಲ್ಲ. ನಿಮ್ಮ ಬಗ್ಗೆ ಕೊಂಚ ಹೇಳುವಿರಾ..?
ನಿವೃತ್ತ ನ್ಯಾಯಮೂರ್ತಿ ಚಂದ್ರು: ನನ್ನ ವೃತ್ತಿ ಜೀವನದಲ್ಲಿ ಈ ಪ್ರಶ್ನೆಗೆ ನಾನು ಉತ್ತರಿಸುವ ಗೋಜಿಗೇ ಹೋಗಿಲ್ಲ. ವರ್ಣಾಶ್ರಮ ವ್ಯವಸ್ಥೆಯಲ್ಲಿ, ನಾನು ಸವರ್ಣೀಯ ಜಾತಿಗೆ ಸೇರಿದವನಾಗುತ್ತೇನೆ. ವಿಶಾಲ ತಳಹದಿಯ ವರ್ಗೀಕರಣದಲ್ಲೂ ನಾನು ಶ್ರೇಣಿಯ ಕೊನೆಯ ಹಂತದಲ್ಲಿರುತ್ತೇನೆ. ಹಾಗೆಂದ ಮಾತ್ರಕ್ಕೆ ಶೂದ್ರರು ಎಂದು ಗುರುತಿಸಲ್ಪಟ್ಟ ಜಾತಿಗಳೆಲ್ಲವೂ ಏಕರೂಪವನ್ನು ಹೊಂದಿಲ್ಲ. ಚಿತ್ರದಲ್ಲಿ ಮುಖ್ಯ ಪಾತ್ರಧಾರಿ ಆದಿವಾಸಿ ಜನಾಂಗಕ್ಕೆ ಸೇರಿದವನಾಗಿರುವುದಿಲ್ಲ ಹಾಗಾಗಿ ಇದು ತಿರೋಗಾಮಿ ಧೋರಣೆ ಎಂದು ಆಕ್ಷೇಪಿಸಲಾಗಿದೆ. ವಾಸ್ತವ ನೆಲೆಗಟ್ಟಿನಲ್ಲಿ ಪರಾಮರ್ಶಿಸಿದಾಗ, ಆಡಳಿತ ವ್ಯವಸ್ಥೆಯಲ್ಲಿ ಬ್ರಿಟೀಷ್ ನ್ಯಾಯ ಪದ್ಧತಿಯನ್ನು ಜಾರಿಗೊಳಿಸಿದ ನಂತರ ಮೇಲ್ಜಾತಿಯವರ ಪ್ರಾತಿನಿಧ್ಯವೇ ಹೆಚ್ಚಾಗಿದ್ದುದನ್ನು ನೀವು ಗಮನಿಸಬಹುದು. ಈಗ ಕಾನೂನು ವೃತ್ತಿಯಲ್ಲಿ ಅನ್ಯ ಜಾತಿಯವರ ಪ್ರಾತಿನಿಧ್ಯವೂ ಹೆಚ್ಚಾಗುತ್ತಿದೆ. ಜಾತಿ ಶ್ರೇಣೀಕರಣದಲ್ಲಿ ಪ್ರತಿಯೊಂದು ಜಾತಿಯೂ ತಾರತಮ್ಯವನ್ನು ಎದುರಿಸುತ್ತದೆ. ಮೇಲಿನ ಶ್ರೇಣಿಯವರಿಗೆ ಹೆಚ್ಚಿನ ಸಮಸ್ಯೆ ಎದುರಾಗಲಾರದು ಆದರೆ ಅದಕ್ಕಿಂತಲೂ ಕೆಳಗಿನ ಜಾತಿಯನ್ನು ಕಂಡ ಕೂಡಲೇ ಅವರೂ ತಾರತಮ್ಯದಲ್ಲಿ ತೊಡಗುತ್ತಾರೆ.
ಅಂಬೇಡ್ಕರ್ ಅವರ “ ಕಲಿಕೆ ಶಿಕ್ಷಣ ಮತ್ತು ಆಂದೋಲನ” ಘೋಷಣೆ ಮೂಲತಃ ಈ ದೇಶದ ಮೂಲವಾಸಿಗಳು ಮತ್ತು ಪರಿಶಿಷ್ಟ ಜಾತಿಗಳಿಗೆ ಅನ್ವಯಿಸುವಂತಹುದು. ಅಂತಿಮವಾಗಿ ರಚನಾತ್ಮಕ ಬದಲಾವಣೆ ಅವಶ್ಯ ಮತ್ತು ಅದು ಹಲವು ವಲಯಗಳಲ್ಲಿ ನಡೆಯಬೇಕಾಗುತ್ತದೆ. ಚಿತ್ರದಲ್ಲಿ ಹಿಂಸೆಯನ್ನು ಬಿಂಬಿಸಿರುವುದರ ಬಗ್ಗೆ ವ್ಯಾಪಕ ಟೀಕೆಗಳಿವೆ. ಆದರೆ ರಾಜಕಣ್ಣು ಮತ್ತು ತಮಿಳುನಾಡು ಸರ್ಕಾರದ ಮೊಕದ್ದಮೆಯನ್ನೊಮ್ಮೆ ಗಮನಿಸಿದರೆ, ಅಲ್ಲಿ ರಾಜಕಣ್ಣು ಪತ್ನಿ ಪಾರ್ವತಿ ತಾನು ಮತ್ತು ತನ್ನ ಪತಿ ಅನುಭವಿಸಿದ ಚಿತ್ರಹಿಂಸೆಯನ್ನು ಕುರಿತು ನೀಡಿರುವ ಹೇಳಿಕೆ ವಾಸ್ತವವನ್ನು ತೆರೆದಿಡುತ್ತದೆ. ಈ ಚಿತ್ರದ ದೃಶ್ಯಗಳನ್ನು ಬಹಳ ಜಾಗ್ರತೆಯಿಂದ ಚಿತ್ರೀಕರಿಸಲಾಗಿದೆ. ಸೆನ್ಸಾರ್ ಕೆಂಗಣ್ಣಿಗೆ ಗುರಿಯಾಗದಂತೆ ಎಚ್ಚರವಹಿಸಲಾಗಿದೆ. ವಾಸ್ತವ ಬದುಕಿನಲ್ಲಿ ಪರಿಸ್ಥಿತಿ ಇನ್ನೂ ಹೀನಾಯವಾಗಿದ್ದು, ವಿವರಿಸಲಸಾಧ್ಯವಾಗಿರುತ್ತದೆ. ಒಬ್ಬ ನ್ಯಾಯಾಧೀಶನಾಗಿ ನಾನು ಸಾಮಾನ್ಯ ಜನರು ಎದುರಿಸುವ ಇನ್ನೂ ಕ್ರೂರ ಪೊಲೀಸ್ ಚಿತ್ರಹಿಂಸೆಯ ಪ್ರಕರಣಗಳನ್ನು ವಿಚಾರಣೆಗೊಳಪಡಿಸಿದ್ದೇನೆ.
ಎಕನಾಮಿಕ್ಸ್ ಟೈಮ್ಸ್ : ಹೇಬಿಯಸ್ ಕಾರ್ಪಸ್ ಮೊಕದ್ದಮೆಯಲ್ಲಿ ನೀವು ಸಾಕ್ಷಿಯನ್ನು ಮರುವಿಚಾರಣೆಗೊಳಪಡಿಸುವಾಗ ರಾಜನ್ ಮೊಕದ್ದಮೆಯನ್ನು ಪ್ರಸ್ತಾಪಿಸುತ್ತೀರಿ. ಇಂದಿಗೂ ಸಹ ಹೇಬಿಯಸ್ ಕಾರ್ಪಸ್ ಅರ್ಜಿಗಳನ್ನು ತುರ್ತು ಎಂದು ಭಾವಿಸುತ್ತಿಲ್ಲ.
ನಿವೃತ್ತ ನ್ಯಾಯಮೂರ್ತಿ ಚಂದ್ರು: ಹೇಬಿಯಸ್ ಕಾರ್ಪಸ್ ಎನ್ನುವುದು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಗಳಿಗೆ ಅರ್ಜಿ ಸಲ್ಲಿಕೆಯ ವ್ಯಾಪ್ತಿಯಲ್ಲಿ ವಿಶೇಷಾಧಿಕಾರವನ್ನು ಕಲ್ಪಿಸುವ ಒಂದು ಸಾಧನ. ಇದರಿಂದ ಸಾವಿರಾರು ಜನರಿಗೆ ಪರಿಹಾರ ದೊರೆತಿದೆ. 1950 ರಲ್ಲಿ ನಡೆದ ಎ ಕೆ ಗೋಪಾಲನ್ ಮೊಕದ್ದಮೆಯಲ್ಲಿ, ಸಂವಿಧಾನದಲ್ಲಿ ಅಡಕವಾಗಿರುವ ಮೂಲಭೂತ ಹಕ್ಕುಗಳ ಬಗ್ಗೆ ನ್ಯಾಯಾಲಯವು ಸೀಮಿತವಾಗಿ ವ್ಯಾಖ್ಯಾನ ಮಾಡಿದ್ದರೂ, ನಂತರದಲ್ಲಿ ಈ ಸಂವಿಧಾನ ಪರಿಚ್ಚೇದವೇ ಅಮಾಯಕ ಕೈದಿಗಳ ವಿರುದ್ಧ ಪ್ರಬಲ ಅಸ್ತ್ರವಾಗಿ ಪರಿಣಮಿಸಿತ್ತು. ತಮ್ಮ ಪ್ರಸಿದ್ಧ ತೀರ್ಪೊಂದರಲ್ಲಿ ನ್ಯಾ ವಿ ಆರ್ ಕೃಷ್ಣ ಐಯ್ಯರ್ (ಸುನೀಲ್ ಬಾತ್ರಾ 2) ಹೇಬಿಯಸ್ ಕಾರ್ಪಸ್ ವ್ಯಾಪ್ತಿಯನ್ನು ಹೆಚ್ಚಿಸಿದ್ದೇ ಅಲ್ಲದೆ, ಜೈಲು ಅಧಿಕಾರಿಗಳಿಂದ ಚಿತ್ರಹಿಂಸೆಗೊಳಗಾಗುವ ಕೈದಿಗಳೂ ಸಹ ದೂರು ಸಲ್ಲಿಸುವ ಅವಕಾಶವನ್ನು ಕಲ್ಪಿಸಿದ್ದರು. ಆದರೆ ಕೆಲವು ಯೋಜಿತ ನಿರ್ಬಂಧಗಳನ್ನು ಹೇರುವ ಮೂಲಕ, ನಿಯಮಗಳಿಗೆ ವಿಮುಖವಾಗುವ ಮೂಲಕ ಈ ನಿಯಮಗಳನ್ನು ದುರ್ಬಲಗೊಳಿಸಲಾಗುತ್ತಿದೆ. ಇದರ ಅತ್ಯುತ್ತಮ ನಿದರ್ಶನವನ್ನು ಜಮ್ಮು ಕಾಶ್ಮೀರದಲ್ಲಿನ ಬಂಧಿತರ / ವಿಚಾರಣಾಧೀನ ಕೈದಿಗಳ ವಿಷಯದಲ್ಲಿ ಗುರುತಿಸಬಹುದು. ಇವರ ಮೊಕದ್ದಮೆಗಳನ್ನು ವಿಚಾರಣೆಗೇ ಒಳಪಡಿಸುತ್ತಿಲ್ಲ. ಕೆಲವು ಈಗಾಗಲೇ ನಿಷ್ಫಲವಾಗಿವೆ. ಉನ್ನತ ನ್ಯಾಯಾಂಗದ ಅನಾದರವೇ ಇದಕ್ಕೆ ಕಾರಣವೂ ಆಗಿದೆ. ಹೇಬಿಯಸ್ ಕಾರ್ಪಸ್ ಅರ್ಜಿಗಳನ್ನು ಬಳಸುವ ಅಧಿಕಾರವನ್ನು ಜಿಲ್ಲಾ ನ್ಯಾಯಾಲಯಗಳಿಗೂ ವಿಸ್ತರಿಸುವ ಬೇಡಿಕೆಯನ್ನೂ ಸಲ್ಲಿಸಲಾಗಿತ್ತು. ಇದರಿಂದ ವಿಚಾರಣೆಯ ಅವಧಿ ಮತ್ತು ವೆಚ್ಚ ಎರಡನ್ನೂ ಕಡಿಮೆ ಮಾಡಬಹುದಿತ್ತು.
ಎಕನಾಮಿಕ್ಸ್ ಟೈಮ್ಸ್ : ಯುಎಪಿಎ ಮತ್ತು ದೇಶದ್ರೋಹ ಕಾಯ್ದೆಯಂತಹ ಕರಾಳ ಶಾಸನಗಳ ವ್ಯಾಪಕ ಬಳಕೆಯನ್ನು ಹೇಗೆ ವ್ಯಾಖ್ಯಾನಿಸುತ್ತೀರಿ..?
ನಿವೃತ್ತ ನ್ಯಾಯಮೂರ್ತಿ ಚಂದ್ರು: ದೇಶದ್ರೋಹವನ್ನು ಒಂದು ಅಪರಾಧ ಎಂದು ಪರಿಗಣಿಸುವ ಐಪಿಸಿ ಸೆಕ್ಷನ್ 124ಎ ಇದು ಮೂಲತಃ ಪ್ರಜಾಸತ್ತೆಗೆ ವಿರುದ್ಧವಾದದ್ದು. ವಸಾಹತು ಸರ್ಕಾರದ ರಕ್ಷಣೆಗಾಗಿ ಇದನ್ನು ಜಾರಿಗೊಳಿಸಲಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ವ್ಯಾಪಕವಾಗಿ ಬಳಸಲಾಗಿತ್ತು . ಸ್ವಾತಂತ್ರ್ಯನಂತರದಲ್ಲಿ ಇದನ್ನು ರದ್ದುಪಡಿಸಲಾಗುತ್ತದೆ ಎಂದು ಭಾವಿಸಲಾಗಿತ್ತು. ನ್ಯಾಯಾಂಗವೂ ಸಹ ಈ ಕಾಯ್ದೆಯನ್ನು ತಪ್ಪಾಗಿ ವ್ಯಾಖ್ಯಾನಿಸಿದೆ. ಈ ವಿಚಾರವನ್ನು ನ್ಯಾಯಾಂಗದ ವ್ಯಾಪ್ತಿಗೊಳಿಸುವುದರ ಬದಲು ಸಂಸತ್ತಿನಲ್ಲೇ ಇದನ್ನು ಅನೂರ್ಜಿತಗೊಳಿಸಬೇಕು. ಟಾಡಾ ಮತ್ತು ಪೋಟಾ ಕಾಯ್ದೆಗಳು ಪೊಲೀಸರಿಗೆ ನೀಡಿದ ಅಧಿಕಾರವನ್ನು ಅರ್ಥಮಾಡಿಕೊಂಡು, ಸಾರ್ವಜನಿಕ ಒತ್ತಡಕ್ಕೆ ಮಣಿದು ಎರಡೂ ಕಾಯ್ದೆಯಗಳನ್ನು ರದ್ದುಪಡಿಸಿದ ನಂತರ ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಯುಎಪಿಎ ಕಾಯ್ದೆಗೆ ತಿದ್ದುಪಡಿಗಳನ್ನು ತಂದಿತ್ತು. ಈಗ ಈ ಕಾಯ್ದೆಯನ್ನು ಬಿಜೆಪಿ ಸರ್ಕಾರ ರಾಜಕೀಯ ವಿರೋಧಿಗಳ ವಿರುದ್ಧ , ಕಾರ್ಯಕರ್ತರ ವಿರುದ್ಧ ಮುಕ್ತವಾಗಿ ಬಳಸುತ್ತಿದೆ. ಈ ರೀತಿಯ ನಿರಂಕುಶತ್ವದ ವಿರುದ್ಧ ಜಾಗೃತ ನ್ಯಾಯಾಂಗ ಕ್ರಮ ಕೈಗೊಳ್ಳುತ್ತದೆ ಎಂಬ ವಿಶ್ವಾಸ ಇತ್ತು. ಆದರೆ ಇದಕ್ಕೆ ವಿರುದ್ಧವಾದ ಬೆಳವಣಿಗೆಗಳನ್ನು ಕಾಣುತ್ತಿದ್ದೇವೆ. ಭೀಮಾ ಕೊರೆಗಾಂವ್ ಆರೋಪಿಗಳು ನ್ಯಾಯಾಂಗದಿ೦ದ ಯಾವುದೇ ಪರಿಹಾರ ಪಡೆಯದೆ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಆದಿವಾಸಿಗಳ ನಡುವೆ ಸಕ್ರಿಯವಾಗಿದ್ದ ಫಾದರ್ ಸ್ಟ್ಯಾನ್ ಸ್ವಾಮಿಯವರನ್ನು ಸಾಯುವಂತೆ ಮಾಡಲಾಯಿತು.
ಎಕನಾಮಿಕ್ಸ್ ಟೈಮ್ಸ್ : ಇಂದಿನ ಭಾರತಕ್ಕೆ ಎಂತಹ ನ್ಯಾಯಾಂಗ ವ್ಯವಸ್ಥೆಯ ಅವಶ್ಯಕತೆ ಇದೆ..?
ನಿವೃತ್ತ ನ್ಯಾಯಮೂರ್ತಿ ಚಂದ್ರು : ೧1969 ರಲ್ಲಿ ಇಎಂಎಸ್ ನಂಬೂದರಿ ಪಾಡ್ ಕೇರಳ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ನ್ಯಾಯಾಂಗವು ಪ್ರಭುತ್ವದ ಆರ್ಥಿಕ ಹಿತಾಸಕ್ತಿಗಳನ್ನು ಮೀರಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದರು. ಇದಕ್ಕೆ ನ್ಯಾಯಾಂಗ ನಿಂದನೆಯ ಆಪಾದನೆಯನ್ನು ಎದುರಿಸಿ, ಕೇರಳ ಹೈಕೋರ್ಟ್ನ ಶಿಕ್ಷೆಗೂ ಒಳಗಾಗಿದ್ದರು. ಅಚ್ಚರಿಯ ಸಂಗತಿ ಎಂದರೆ ಸುಪ್ರೀಂಕೋರ್ಟ್ ಈ ತೀರ್ಪನ್ನು ಅನುಮೋದಿಸಿತ್ತು. ಹಾಗೆಯೇ ಯಾರಾದರೂ “ ನ್ಯಾಯಾಂಗದ ಬದ್ಧತೆ ” ಕುರಿತು ಮಾತನಾಡಿದರೆ ಅದನ್ನು ನಿಕೃಷ್ಟವಾಗಿ ನೋಡಲಾಗುತ್ತದೆ. ನಮಗೆ ಇಂದು ಅಗತ್ಯ ಇರುವುದು ಸಾಂವಿಧಾನಿಕ ಮೌಲ್ಯಗಳಿಗೆ ಬದ್ಧತೆ ಹೊಂದಿರುವ, ಮತ್ತು ಕಾನೂನು ಪಾಲನೆಗೆ ಬದ್ಧರಾದ ನ್ಯಾಯಾಧೀಶರು. ನ್ಯಾಯಾಂಗದ ಹುದ್ದೆಯನ್ನು ತಾನೇ ಭರಿಸಿಕೊಳ್ಳುವ ಏಕೈಕ ದೇಶ ಭಾರತ ಎನಿಸುತ್ತದೆ. ಕೊಲೇಜಿಯಂ ವ್ಯವಸ್ಥೆ ಕಾರ್ಯಗತವಾಗುತ್ತಿಲ್ಲ. ಇದು ಹಲವು ರೀತಿಗಳಲ್ಲಿ ಸಂವಿಧಾನದ ನಿರ್ದೇಶನಗಳಿಗೆ ವ್ಯತಿರಿಕ್ತವಾಗಿ ವರ್ತಿಸುತ್ತಿದೆ. ಇದರ ಕೂಲಂಕುಷ ಪರಾಮರ್ಶೆ ಅಗತ್ಯವಾಗಿದೆ.
(ಟಿ ಜೆ ಜ್ಞಾನವೇಲ್ ನಿರ್ದೇಶನದ ಜೈಭೀಮ್ ಚಿತ್ರದ ಮೂಲಕ ಮನೆಮಾತಾಗಿರುವ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಚಂದ್ರು ಅವರೊಡನೆ ಚಾರ್ಮಿ ಹರಿಕೃಷ್ಣನ್ ಅವರ ಸಂದರ್ಶನದ ಯಥಾವತ್ ಅನುವಾದ)
ಕೃಪೆ: ಎಕನಾಮಿಕ್ ಟೈಮ್ಸ್
ಅನುವಾದ : ನಾ ದಿವಾಕರ (ದಿ ಪೊಲಿಟಿಕ್)
ಇದನ್ನೂ ಓದಿ: ಕೊಳೆತು ನಾರುತ್ತಿರುವ ವ್ಯವಸ್ಥೆಯ ಕಥೆ ಹೇಳುವ ‘ಜೈ ಭೀಮ್’…