Homeನ್ಯಾಯ ಪಥ’ಬೆಳಗಿನೊಳಗು ಮಹದೇವಿಯಕ್ಕ’: ಹತ್ತಿ ಬೀಜದ ಬಿತ್ತನೆಯಿಂದ ಹತ್ತಿ ಅರಳುವವರೆಗಿನ ಅಕ್ಕನ ಬದುಕು

’ಬೆಳಗಿನೊಳಗು ಮಹದೇವಿಯಕ್ಕ’: ಹತ್ತಿ ಬೀಜದ ಬಿತ್ತನೆಯಿಂದ ಹತ್ತಿ ಅರಳುವವರೆಗಿನ ಅಕ್ಕನ ಬದುಕು

- Advertisement -
- Advertisement -

ಎಚ್.ಎಸ್ ಅನುಪಮಾ ಅವರ ’ಬೆಳಗಿನೊಳಗು ಮಹದೇವಿಯಕ್ಕ’ ಕಾದಂಬರಿ ಓದಿ ಮುಗಿಸಿದ ಮೇಲೆ ಹೆಚ್ಚು ಕಾಡಿದ್ದು ಅಕ್ಕಮಹಾದೇವಿಯ ಬಾಲ್ಯದಿಂದ ಐಕ್ಯವಾಗುವವರೆಗಿನ ಜೀವನ; ಅದು ಒಂದು ರೀತಿ ಹತ್ತಿ ಬೀಜದಿಂದ ಹತ್ತಿಯವರೆಗಿನ ಕಠಿಣ ಪಯಣದಂತೆ.

ಹತ್ತಿ ಬಿತ್ತನೆ ಬಹುಶಃ ಉತ್ತರ ಕರ್ನಾಟಕದ ಜನರಿಗೆ-ರೈತರಿಗೆ ಚೆನ್ನಾಗಿ ಗೊತ್ತಿರುತ್ತೆ. ಹತ್ತಿ ಕೈ ಹಿಡಿಯುತ್ತೆ ನಿಜ ಆದರೆ ಹತ್ತಿ ಬೀಜ ಬಿತ್ತನೆಯಿಂದ ಮೊಳಕೆಯೊಡೆದು ಗಿಡವಾಗಿ, ಬೆಳೆದು ಹೂವಾಗಿ, ಹೂವಿನಿಂದ ಕಾಯಾಗಿ, ಕಾಯಿಯಿಂದ ಹತ್ತಿಯಾಗುವ ಪ್ರಕ್ರಿಯೆ ಏನಿದೆ ಅದು ಅಷ್ಟೇ ಕಷ್ಟದ, ಅಷ್ಟೇ ಸೂಕ್ಷ್ಮದ, ಅಷ್ಟೇ ಶ್ರದ್ಧೆಯ, ಅಷ್ಟೇ ಶಿಸ್ತಿನ ಪ್ರಕ್ರಿಯೆ; ಅಂತಹ ಹತ್ತಿ ಬೆಳೆಯಂತಹ ಅಕ್ಕಮಹಾದೇವಿ ಎಂಬ ಸಾಧಕಿ, ಚಿಂತಕಿ, ಸುಧಾರಕಿ, ಅಪ್ಪಟ ಮನುಷ್ಯಳೊಬ್ಬಳು ನಮಗೆ ಈ ಕಾದಂಬರಿ ಮೂಲಕ ಸಿಕ್ಕಿದಳು.

ಬೆತ್ತಲೆಯಾಗಿ ಭೂಮಿಗೆ ಬಂದ (ಪ್ರತಿ ಮಗುವಿನ ಹಾಗೆ) ಅಕ್ಕನೆಂಬ ಜೀವ, ಅಲ್ಪಸ್ವಲ್ಪ ಬಟ್ಟೆ, ಅತೀವ ಅಕ್ಕರೆ, ಹತ್ತಿಯ ಬೀಜಕ್ಕೆ ಬೇಕಾಗುವ ಫಲವತ್ತಾದ ನೆಲದಂತೆ, ಪೂರಕವಾದ ಬಾಲ್ಯದ ಮನೆಯ ವಾತಾವರಣ- ಇವೆಲ್ಲಾ ಸಿಕ್ಕಿ, ಅಲ್ಲಿಂದ ಮೈಕೈ ತುಂಬಿಕೊಂಡು ಎಲ್ಲವನ್ನೂ ಕೂಡಿಕೊಂಡು, ಕಂಡದೆಲ್ಲ ಗ್ರಹಿಸಿಕೊಂಡು, ಅರಮನೆ ಸೇರಿ, ಸಿರಿಸಿಂಗಾರ ನೋಡಿ, ಇದು ಹತ್ತಿ ಹೂವಿನ ರೀತಿ ಅಂದುಕೊಂಡು, ಅಲ್ಲಿಂದ ಎಲ್ಲವನ್ನೂ ಕಳಚಿ, ತನ್ನದಲ್ಲದ ಬಟ್ಟೆಯನ್ನೂ ಕಳಚಿಟ್ಟು, ಪ್ರಕೃತಿದತ್ತವಾದ ಸ್ರಾವಕ್ಕಾಗುವಷ್ಟು ಬಟ್ಟೆ ಮೈಮೇಲಿಟ್ಟುಕೊಂಡು ಹಗುರಾಗುತ್ತಾ, ಆಗುತ್ತಾ ಅಕ್ಕ ನಿಜಕ್ಕೂ ಹತ್ತಿಯಂತಾಗಿದ್ದು; ಹತ್ತಿ ಬಿತ್ತನೆಯ ಪ್ರಾಕೃತಿಕ ರೀತಿಗೆ ಅಕ್ಕ ಬದಲಾದ ರೀತಿ ಹೋಲಿಕೆಯಿದೆ ಅಂತ ನನಗನ್ನಿಸಿತು.

ತನ್ನದೆಲ್ಲವನ್ನು ಕಳಚಿಕೊಂಡು, ತನ್ನದಲ್ಲದ್ದನ್ನೂ ಕಳಚಿಕೊಂಡು ಹಗುರವಾದ ಹಂತದಲ್ಲಿ ತನ್ನನ್ನು ಪೊರೆದ, ಪ್ರೀತಿಸಿದ, ನಿಂದಿಸಿದ, ಆದರಿಸಿದ, ಒರೆಗೆ ಹಟ್ಟಿದ ಜಗತ್ತಿಗೆ, ಮುಂದಿನ ಪೀಳಿಗೆಗೆ ಅಕ್ಕ ಕೊಟ್ಟಿದ್ದು ಹತ್ತಿಯಂತೆ ಅಪ್ಪಿಕೊಳ್ಳಲು ಯೋಗ್ಯವಾದ ಜೀವನ ಸಾರವನ್ನು.

ಇಂತಹದ್ದೊಂದು ದಿಟ್ಟ ಹೆಜ್ಜೆ ಇಟ್ಟ ಕಾಲಘಟ್ಟ ಯಾವುದೆಂದರೆ, ಹೆಣ್ಣು ಮೈತುಂಬ ಬಟ್ಟೆ ಹೊದ್ದು ಮನೆವಾರ್ತೆಗಷ್ಟೇ ಸೀಮಿತವಾಗಿದ್ದ ಸಮಯವದು. ಇಂತಹ ಅಕ್ಕ ಸಾವಿತ್ರಿಗೂ ಆದರ್ಶವೆನ್ನುವುದರಲ್ಲಿ ಆಶ್ಚರ್ಯವಿಲ್ಲ. ಜಿಜ್ಞಾಸೆಯೆಂದರೆ ಆಕೆ ಯಾರಿಗೆ ಆದರ್ಶ? ಹೆಣ್ಣು ಸಂತತಿಗಾ, ಗಂಡುಮಕ್ಕಳಿಗಾ, ಇಲ್ಲ ಇಡೀ ಮಾನವ ಕುಲಕ್ಕಾ?

“ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ
ಪ್ರಾಣಕ್ಕೆ ಮನವಾಗಿ ಕಾಡಿತ್ತು ಮಾಯೆ!”

ಎಂದು ದೇಹದೊಂದಿಗೇ ನಡೆಯುವ, ನೆರಳಿನಿಂದ ಹಿಡಿದು ಉಸಿರಿರುವ ತನಕವೂ ಮಿಡಿಯುವ ಮನಸ್ಸನ್ನು ಮಾಯೆಯೆಂದು, ಎಲ್ಲವನ್ನು ಗೆಲ್ಲಬೇಕಿರುವುದು ಒಂದು ದೃಢತೆ, ಶ್ರದ್ಧೆ ಮತ್ತು ಶಿಸ್ತು ಎಂದು, ಎಲ್ಲಿಯವರೆಗೆ ಮನುಷ್ಯ ಇವುಗಳನ್ನು ಸಾಧಿಸುವುದಿಲ್ಲವೊ ಅಲ್ಲಿಯವರೆಗೂ ಎಲ್ಲವೂ ಮಾಯೆಯಂತೆಯೇ ಕಾಡುತ್ತದೆ ಎಂಬರ್ಥದಲ್ಲಿ ಅಕ್ಕ ಅಂದ ಮಾತು 12ನೇ ಶತಮಾನದಿಂದ ಇಂದಿನವರೆಗೂ ಪ್ರಸ್ತುತವಾಗಿದೆ. ಬಹುಶಃ ಮುಂದೆಯೂ ಹಾಗೇ ಇರುತ್ತದೆ.

ಆಕೆ ಹೇಳಿದ ವಿಚಾರಗಳಾದ ಸಕಲರ ಮೇಲೂ ಸಮಾನ ಪ್ರೀತಿ, ಗೌರವ, ಆದರ, ಮಾನವ ಸಂಬಂಧ, ಸ್ನೇಹ, ಜೀವಪರತೆ, ಕ್ರೌರ್ಯವನ್ನು ಮೀರಿದ ಬದುಕು, ಸಮಾನತೆ, ಹೆಣ್ಣು ಗಂಡಿನ ಸಮಾನ ಹಕ್ಕು, ಆತ್ಮ ಶುದ್ಧಿ, ಕಟ್ಟುಪಾಡು ಹೇರದ ಬದುಕು ಇವೆಲ್ಲವನ್ನೂ ಆಕೆ ಸ್ವತಃ ಬಯಸಿ ಅನುಭವಿಸಿ ಹೇಳಿದ್ದನ್ನು ಕೆಲವರು ಮಹಿಳಾವಾದವೆಂದು ಕರೆಯುತ್ತಾರಾದರೂ ಅದನ್ನು ಮಾತವತಾವಾದವೆನ್ನುವುದೇ ಹೆಚ್ಚು ಸೂಕ್ತ. ಹಾಗಾಗಿ ಅಕ್ಕ ಯಾರಿಗೆ ಆದರ್ಶ ಅನ್ನುವುದಕ್ಕೆ ನನ್ನ ಮಟ್ಟಿಗೆ ಆಕೆ ಮನುಕುಲಕ್ಕೆ ಆದರ್ಶ.

ಬಹುಶಃ ಅಕ್ಕ ಆಗ ಸಹಜ ಜೀವನವನ್ನು, ಕಟ್ಟಳೆಯನ್ನು ಮೀರಿದ ಜ್ಞಾನದ ಆಗರವನ್ನು ಹುಡುಕಿ ಹೊರಟಾಗ ಆಕೆಗಿದ್ದದ್ದು ಒಂದೊತ್ತಿನ ಊಟ ಮತ್ತು ಕತ್ತಲಾದಾಗ ಕಣ್ಣುಮುಚ್ಚಲೊಂದು ಜಾಗದ ಅವಶ್ಯಕತೆ ಅಷ್ಟೇ. ಕಾಲ್ನಡಿಗೆಯಲ್ಲೇ ಮಲೆನಾಡಿನ ಈ ತುದಿಯ ಸೀಮೆಯಿಂದ ಕಲ್ಯಾಣಕ್ಕೆ ಹೋಗಿ ಅಲ್ಲಿಂದ ಶ್ರೀಶೈಲದ ಹಾದಿಯಲ್ಲಿ ನಡೆದು ಕದಳಿಯವರೆಗಿನ ಆಕೆಯ ಪಯಣದಲ್ಲಿ ಅಕ್ಕ ಪಡೆದಿದ್ದು ಅನುಭವದ ಬೆಟ್ಟವನ್ನು!

ಕಾದಂಬರಿಯ ಪ್ರತಿ ಪ್ಯಾರಾ, ಪ್ರತಿ ಪುಟ, ಪ್ರತಿ ಅಧ್ಯಾಯವನ್ನು ಓದುವಾಗಲೂ ನನ್ನ ಮನಸ್ಸು ಸಮೀಕರಿಸಿಕೊಂಡಿದ್ದು ಇವತ್ತು ನಾವು ನಿಂತಿರುವ ಈ ಕಾಲವನ್ನು ಮತ್ತು ಈ ನೆಲದ ಇವತ್ತಿನ ಸಂಸ್ಕೃತಿಯನ್ನು.

ಇವತ್ತಿನ ಜನರ ವೇಗದ ಬದುಕು ಮತ್ತು ಮುಂದುವರಿದ ಪರಿಸ್ಥಿತಿಯಲ್ಲಿ ಅಕ್ಕನೇನಾದರೂ ಇದ್ದಿದ್ದರೆ ಆಕೆಯ ಆ ನಿರ್ಧಾರ ಯಾವ ರೀತಿ ಇರುತ್ತಿತ್ತು? ಸಮಾಜ ಆಕೆಯನ್ನು ಹೇಗೆ ನಡೆಸಿಕೊಳ್ಳುತ್ತಿತ್ತು? ಅನ್ನುವುದು ನನ್ನ ಬಹುವಾಗಿ ಕಾಡಿದ್ದು. ಬಹುಶಃ ಆಕೆಗೆ ಹೆಜ್ಜೆಗೊಬ್ಬ ಕಾಮುಕ ಸಿಗುತ್ತಿದ್ದನೇನೋ! ಬಯಲಲ್ಲಿ ಮಲಗುವುದು ಹಾಗಿರಲಿ, ಹೆಣ್ಣುಮಕ್ಕಳಿಗೆ ನೀರು, ಅನ್ನ, ಉಳಿಯುವ ತಾಣವೇ ದೂರದ ಮಾತು. ಮನೆಯೊಳಗೆ ಕರೆಯುವ ಜನರನ್ನು ನಂಬದಿರುವಷ್ಟು ಅಪನಂಬಿಕೆ, ಕ್ರೌರ್ಯ, ಹಿಂಸೆ, ಆತಂಕದ ವಾತಾವರಣ ಈಗ ನಮ್ಮ ಮುಂದೆ ಸೃಷ್ಟಿಯಾಗಿಬಿಟ್ಟಿದೆ.

ಎಲ್ಲವನ್ನು ಕಿತ್ತೆಸೆದು ಬಂಧನಗಳನ್ನು ಮೀರಿ ಸಹಜ ಬದುಕಿನ ಗುರಿಯನ್ನು ಅರಸಿಹೊರಟ ಅಕ್ಕ ಅವತ್ತಿನ ಕಾಲಕ್ಕೆ ಸ್ತ್ರೀ ಸಮಾನತೆಯನ್ನು ಮಾತನಾಡಿದವಳು ಮತ್ತು ಬದುಕಿದವಳು. ಈ ವಿಚಾರವಾಗಿ ನನಗೆ ಗಮನ ಸೆಳೆದದ್ದು ಅಕ್ಕ ಮೊದಲ ಬಾರಿಗೆ ಕಲ್ಯಾಣಕ್ಕೆ ಕಾಲಿಟ್ಟಾಗ ಆಕೆಯ ಆತ್ಮಶುದ್ಧಿ-ಚಿತ್ತಶುದ್ಧಿ ಪರೀಕ್ಷೆ ನಡೆದದ್ದು. ಅಕ್ಕ ಮೊದಲ ದಿನವೇ ತನ್ನತನವನ್ನು ಸಾಬೀತುಪಡಿಸುವುದರ ಜೊತೆಗೆ ಅಲ್ಲಮಪ್ರಭು, ಬಸವಣ್ಣನಂತಹ ಹಿರಿಯರು ಕೂತಿದ್ದ ಸಭೆಯಲ್ಲಿ “ನನಗೆ ಯಾಕೆ ಈ ಪರೀಕ್ಷೆ? ನನ್ನಂತೆ ಇಲ್ಲಿ ಬಂದ ಎಲ್ಲ ಹೆಣ್ಣುಮಕ್ಕಳಿಗೂ ಈ ಪರೀಕ್ಷೆ ನಡೆದಿದೆಯೇ?” ಅನ್ನುವ ಪ್ರಶ್ನೆ ಕೇಳುತ್ತಾಳೆ. ಪ್ರಶ್ನಿಸುವುದನ್ನು ಮಾತು ಕಲಿತಾಗಿನಿಂದ ಬಂದ ಹಕ್ಕೆಂದು ಭಾವಿಸಿದ್ದ ಅಕ್ಕನ ನಿಲುವು ಆಕೆಯ ಮಾತು-ವರ್ತನೆಗಳಲ್ಲಿ ಎದ್ದು ಕಾಣುತ್ತದೆ.

ಸೋಜಿಗವೆಂದರೆ 21ನೇ ಶತಮಾನದಲ್ಲಿ, ಇವತ್ತಿಗೂ ನಾವು ಸ್ತ್ರೀ ಸಮಾನತೆಯ ವಿಚಾರವನ್ನು ಮಾತನಾಡುತ್ತಲೇ ಇದ್ದೇವೆ. ಆ ನಿಟ್ಟಿನಲ್ಲಿ ಇವತ್ತು ನಮ್ಮ ನಡುವಿರುವುದು ಕೋಟ್ಯಂತರ ಅಕ್ಕಮಹಾದೇವಿಯಂತಹ ಹೆಣ್ಣುಮಕ್ಕಳು. ಆದರೆ, ಆಡಳಿತವನ್ನು, ಪ್ರಭುತ್ವಗಳ ದುರಾಡಳಿತವನ್ನು, ತಪ್ಪುಗಳನ್ನು, ಸಮಾಜದ ಅಂಕುಡೊಂಕುಗಳನ್ನು ಪ್ರಶ್ನಿಸುವವರನ್ನು ಇವತ್ತಿನ ನಮ್ಮ ದೇಶದ-ಸಮಾಜದ ಒಂದು ವರ್ಗ ದೇಶದ್ರೋಹಿಗಳಂತೆ ಕಾಣುತ್ತದೆ!

ಕಾದಂಬರಿಯಲ್ಲಿ ಬರುವ ಅಕ್ಕನ ಪ್ರಾಣಸ್ನೇಹಿತೆ, ಮುಟ್ಟಿದರೆ ಸಿಡಿದೇಳುವ ಸಿಂಹಿಣಿಯಂಥ, ಕುರುಬರ ಮನೆಯ ಚಂದ್ರಿಯಂತಹ ಗುಂಡಿಗೆಯ ಹೆಣ್ಣುಮಕ್ಕಳು ಇವತ್ತಿಗೂ ನಮ್ಮ ನಡುವಿದ್ದಾರೆ. ಆ ಚಂದ್ರಿ ಕೊನೆಗೊಂದು ದಿನ ಸಂಸಾರ ಸಾಗರದಲ್ಲಿ ಮುಳುಗಿ, ಸಮಾಜ ತಲೆ ಮೇಲೆ ಹೊರಸಿದ ಆದರ್ಶದ ಬದುಕಿನ ಭಾರ ತಡೆಯಲಾರದೆ ಕೊನೆಯಾಗುವಂತೆ ನಮ್ಮ ನಡುವಿರುವ ಅದೆಷ್ಟೋ ಮಂದಿಯ ಸಿಂಹಿಣಿಯರದ್ದು ಕೂಡ ಇವತ್ತಿಗೂ ಅದೇ ಹಾಡು ಅದೇ ಪಾಡು!

ಅವತ್ತಿನ ಎಕ್ಕಮಜ್ಜಿ, ಜಟ್ಟಮ್ಮ, ಸಕ್ಕಮ್ಮ, ರುಕ್ಕಮ್ಮನಂತೆಯೆ ಮನೆ ಸಂಸಾರದ ನೊಗ ಹೊರಲಾಗದೆ ಧಿಕ್ಕರಿಸಿ ತೊರೆದು ಬೀದಿಗೆ ಬಿದ್ದು ಉಳಿಯಲು ಆಗಿನಂತೆ ಕಟ್ಟೆ, ಗುಡಿ, ಗೋಪುರಗಳ ಆಶ್ರಯವೂ ಇಲ್ಲದೆ ಇತ್ತ ಆರ್ಥಿಕ ದೃಢತೆಯೂ ಇಲ್ಲದೆ ಬದುಕು ಮೂರಾಬಟ್ಟೆಯಾಗಿಸಿಕೊಂಡ ಇವತ್ತಿನ ಎಕ್ಕಮ್ಮಗಳು ಲಕ್ಷಾಂತರ ಮಂದಿ ನಮ್ಮ ನಡುವಿದ್ದಾರೆ. ಅವತ್ತು ಸಮಾಜ ಅವರನ್ನು ನೋಡುತ್ತಿದ್ದ ಪರಿಗೂ ಇವತ್ತು ಅವರನ್ನು ನಡೆಸಿಕೊಳ್ಳುವ ಪರಿಗೂ ಜಾಸ್ತಿ ವ್ಯತ್ಯಾಸವೇನಿಲ್ಲ. ಇವತ್ತಿಗೂ ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಹೇಳುವ ಪಾಠವೊಂದೇ, ನೀನು ಅವಳೊಡನೆ ಸೇರಬೇಡ, ಅವಳು ಸರಿಯಿಲ್ಲ!

ಈ ಕಾದಂಬರಿಯಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ, ಅಕ್ಕಮಹಾದೇವಿ ಹುಟ್ಟಿದ ಮತ್ತು ಬೆಳೆದ ಮನೆಯ ಪರಿಸರ. ಮಹಾದೇವಿ ಅಕ್ಕನಾಗುವುದಕ್ಕೆಂದೇ ಹುಟ್ಟಿದವಳು ಎನ್ನುವ ವಾದವನ್ನು ಹಾಗೇ ಸ್ವೀಕರಿಸಲು ನನ್ನಿಂದ ಸಾಧ್ಯವಿಲ್ಲ. ಆಕೆಯ ಕುತೂಹಲಕ್ಕೆ, ಪ್ರಶ್ನೆ ಮಾಡುವ, ಆ ಮೂಲಕ ತಿಳಿದುಕೊಳ್ಳುವ ಆಕೆಯ ಪ್ರಯತ್ನಕ್ಕೆ ಎಲ್ಲೂ ಆ ವಾತಾವರಣ ಕಡಿವಾಣ ಹಾಕಲಿಲ್ಲ. ಸಹಜವಾಗಿ ಸಮಾಜದ ಉಳಿದ ಹೆಣ್ಣುಮಕ್ಕಳಂತೆ ತನ್ನ ಮಗಳಿಲ್ಲವಲ್ಲ ಎಂದು ಅಕ್ಕಮಹಾದೇವಿಯ ತಂದೆ ದುಗುಡಗೊಂಡಿದ್ದು ಬಿಟ್ಟರೆ ಆಕೆಯ ಕುತೂಹಲದ ಸ್ವಭಾವವನ್ನು ಸಹಜವೆಂಬಂತೆ ಸ್ವೀಕರಿಸಿ ಪೋಷಿಸಲಾಗಿತ್ತು. ಇವತ್ತಿಗೂ ಬಹುತೇಕ ಹೆಣ್ಣುಮಕ್ಕಳು ಇಂತಹ ಕುತೂಹಲದೊಂದಿಗೇ ಬಾಲ್ಯವನ್ನು ಇದಿರುಗೊಳ್ಳುತ್ತಾರೆ; ಆದರೆ ’ನಿನಗ್ಯಾಕಿದೆಲ್ಲ? ನಿನ್ನ ಕೆಲಸ ನೀನು ನೋಡಿಕೊ’ ಅನ್ನುವ ನಿಷಿದ್ಧದ ತೆರೆ ಎಳೆದು ಬಹುತೇಕರನ್ನು ಬಾಯಿ ಮುಚ್ಚಿಸಲಾಗುತ್ತದೆ. ಹಾಗಾಗಿ ಯಾವುದೇ ಡೊಂಕನ್ನು ಸರಿಪಡಿಸಲು ನಾವಿರುವ ಪರಿಸರ ಮತ್ತು ವಾತಾವರಣವೂ ಮುಖ್ಯವಾಗುತ್ತದೆ.

ಹೆಜ್ಜೆಹೆಜ್ಜೆಗೂ ಪರೀಕ್ಷೆಗೊಳಪಟ್ಟ ಮಹಾದೇವಿಯಕ್ಕನ ಬದುಕಿನ ಜೊತೆಜೊತೆಗೇ ಪುಣ್ಯ ಸ್ತ್ರೀಯರು, ಸೂಳೆಯರು, ಮನೆಬಿಟ್ಟು ಸಾಧನೆಯ ಹಾದಿ ಹಿಡಿದ ಒಂಟಿ ಹೆಣ್ಣುಮಕ್ಕಳು, ಸಂಸಾರ ಸಾಗರದಲ್ಲಿದ್ದುಕೊಂಡೇ ಶರಣತ್ವವನ್ನು ಬದುಕಿದ ಹಲವಾರು ಹೆಣ್ಣುಮಕ್ಕಳ ಕಥೆ ಹೇಳುತ್ತದೆ ಕಾದಂಬರಿ. ಬಸವಣ್ಣನವರ ಇಬ್ಬರು ಹೆಂಡತಿಯರ ಹಾಗೂ ಹಿರಿಯಕ್ಕನ ಬದುಕಿನೆಡೆಗಿನ ಜಿಜ್ಞಾಸೆ, ತೊಳಲಾಟ, ಭಾವುಕತೆ ಮತ್ತು ಗೊಂದಲಗಳನ್ನು ಕೂಡ ಕಾದಂಬರಿ ಚರ್ಚಿಸುತ್ತದೆ.

ಇವೆಲ್ಲವನ್ನೂ ನೋಡಿದಾಗ ಆಗಿನಿಂದಲೂ ಬದಲಾದದ್ದು ಶತಮಾನಗಳು ಮಾತ್ರ; ಕಾಲದೊಂದಿಗೆ ಹೆಜ್ಜೆ ಹಾಕಿದ ಈ ಸಮಾಜದ ಕಟ್ಟಳೆಗಳು ಅನುಕೂಲಕ್ಕೆ ತಕ್ಕಂತೆ ಅಲ್ಲಲ್ಲಿ ಮಾರ್ಪಾಡು ಹೊಂದಿದರೂ ಮೂಲಸ್ವರೂಪವನ್ನು ಇನ್ನೂ ಹಾಗೇ ಉಳಿಸಿಕೊಂಡಿವೆ.

“ಧರ್ಮವೆಂದರೆ ದೇವಲೋಕದತ್ತ ಮುಖ ಮಾಡುವುದಲ್ಲ, ಮನುಷ್ಯ ಲೋಕವನ್ನು ಹಸನುಗೊಳಿಸುವುದು” ಅನ್ನುವ ಮಾತು ಈ ಕಾದಂಬರಿಯಲ್ಲಿ ಬರುತ್ತೆ. ಆವತ್ತು ಅಕ್ಕ ’ಸಹಜತೆಯೇ ಬದುಕನ್ನು ಹಸನುಗೊಳಿಸುವುದು’ ಅನ್ನುವುದನ್ನು ಹೇಳಲು ಕಷ್ಟ ಕೋಟಲೆಗಳನ್ನು ಅನುಭವಿಸಿದಳು. ಇವತ್ತಿನ ದಿನದಲ್ಲಿ ನಾವಿದೇ ಮಾನವ ಧರ್ಮವನ್ನು ಪುನರುಚ್ಚರಿಸಿದರೆ ಎಲ್ಲೆಲ್ಲೂ ದ್ವೇಷವೇ ಉಡುಗೊರೆಯಾಗಿ ಸಿಗುತ್ತದೆ. ಬಹುಶಃ ಈ ತಾಕಲಾಟ ಶತಶತಮಾನಗಳಿಂದಲೂ ನಿರಂತರ ಜಾರಿಯಲ್ಲಿದ್ದು ನಡುನಡುವೆ ಕೊಂಚ ಮಾರ್ಪಾಟಾಗಿ ಮತ್ತೆ ಕಚ್ಚಾಟಕ್ಕೆ ಹಿಂತಿರುಗಿ ಪ್ರಕೃತಿಯೊಂದಿಗೇ ಹುಟ್ಟಿ ಪ್ರಕೃತಿಯೊಂದಿಗೇ ಕೊನೆಗೊಳ್ಳುವ ತರ್ಕವೇನೊ!

“ಎಲ್ಲ ಫಂಥಕ್ಕಿಂತ ಹೆಣ್ಣು ಪಂಥವೇ ಹಿರಿದು”, “ಹೆಣ್ಣು ಮಾಡುವ ಎಲ್ಲವೂ ಕಾಯಕ” ಎನ್ನುವ ಚರ್ಚೆ ಆಗಿನ ಅನುಭವ ಮಂಟಪದಲ್ಲೂ ನಡೆಯಿತು. ನಾವೀಗಲೂ ಹೋದಬಂದಲ್ಲಿ ಇದೇ ಚರ್ಚೆ ಮಾಡುತ್ತೇವಾದರೂ ಬಹುಪಾಲು ಹೆಣ್ಣುಮಕ್ಕಳಿಗೆ ಘನತೆಯ ಬದುಕು ಇಂದಿಗೂ ಮರೀಚಿಕೆಯಾಗಿದೆ! ೭೬೨ ಪುಟದ ಈ ಪುಸ್ತಕ ಸ್ತ್ರೀವಾದವೇ ಸಮಾಜವಾದವೆನ್ನುವಂತೆ ಅಥವಾ ಸಮಾಜವಾದವನ್ನು ಮಾತನಾಡಲು ಸ್ತ್ರೀವಾದದ ಅಗತ್ಯವೂ ಇದೆ ಎನ್ನುವುದನ್ನು ಇನ್ನಷ್ಟು ತೀವ್ರವಾಗಿ ಹೇಳುತ್ತದೆ. ಸಮಾಜದ ಎಲ್ಲ ಕಟ್ಟಳೆಗಳನ್ನು ಹುಟ್ಟುತ್ತಲೇ ಹೊತ್ತುಕೊಂಡು ಜೊತೆ ಜೊತೆಗೇ ಸಂತೋಷವನ್ನು, ಸಾರ್ಥಕತೆಯನ್ನು ಹುಡುಕುವ ಹೆಣ್ಣುಮಕ್ಕಳಿಗಿಂತ ಗಂಡಸರು ಇದರ ಸಾರವನ್ನು ಅರಿತು, ಪೋಷಿಸಿ ಸಮಸಮಾಜದ ಅರಿವಿನ ದೀವಿಗೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಿದೆ.

ಪಲ್ಲವಿ ಇಡೂರು
ಲೇಖಕಿ ಮತ್ತು ರಾಜಕೀಯ ವಿಮರ್ಶಕರು. ’ಜೊಲಾಂಟಾ’ (ಇರೇನಾ ಸ್ಲೆಂಡರ್ ಜೀವನ ಕಥನ) ಮತ್ತು ದೇಶ ವಿಭಜನೆಯ ಬಗ್ಗೆ ’ಆಗಸ್ಟ್ ಮಾಸದ ರಾಜಕೀಯ ಕಥನ’ ಎಂಬ ಪುಸ್ತಕಗಳನ್ನು ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...