Homeಕರ್ನಾಟಕ7ನೇ ವೇತನ ಆಯೋಗ ಜಾರಿ ಸಂಬಂಧ ಆದೇಶ ಹೊರಡಿಸಿದರೆ ಮಾತ್ರ ಮಾರ್ಚ್ 1ರ ಮುಷ್ಕರ ವಾಪಸ್:...

7ನೇ ವೇತನ ಆಯೋಗ ಜಾರಿ ಸಂಬಂಧ ಆದೇಶ ಹೊರಡಿಸಿದರೆ ಮಾತ್ರ ಮಾರ್ಚ್ 1ರ ಮುಷ್ಕರ ವಾಪಸ್: ಷಡಾಕ್ಷರಿ

- Advertisement -
- Advertisement -

7ನೇ ವೇತನ ಆಯೋಗದ ವರದಿ ಅನುಷ್ಠಾನ ಮಾಡದೆ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದರ ವಿರುದ್ಧ ಸರ್ಕಾರ ನೌಕರರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದು, ಮಾರ್ಚ್ 1ರಿಂದ ಹೋರಾಟವನ್ನೂ ಕೈಗೊಳ್ಳಲಾಗುತ್ತಿದೆ.

ಈ ಸಂಬಂಧ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ ಪ್ರತಿಕ್ರಿಯೆ ನೀಡಿದ್ದು, “7ನೇ ವೇತನ ಆಯೋಗದ ಮಧ್ಯಂತರ ವರದಿ ಅನುಷ್ಠಾನದ ಬಗ್ಗೆ ಸರ್ಕಾರ ಆದೇಶ ಹೊರಡಿಸಿದರೆ ಮಾತ್ರ ಈಗ ಕರೆ ನೀಡಿರುವ ಮಾರ್ಚ್ 1ರಂದು ನಡೆಯುವ ಮುಷ್ಕರ ವಾಪಸ್ ಪಡೆಯಲಾಗುವುದು” ಎಂದಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿ ನಡೆಸಿರುವ ಅವರು “7ನೇ ವೇತನ ಆಯೋಗದಿಂದ ಶೀಘ್ರ ಮಧ್ಯಂತರ ವರದಿ ಪಡೆದು ಜಾರಿ ಮಾಡುವಂತೆ ಈ ಹಿಂದಿನಿಂದಲೂ ಒತ್ತಾಯಿಸುತ್ತಲೇ ಬಂದಿದ್ದೇವೆ. ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡುವ ನಿರೀಕ್ಷೆ ಇತ್ತಾದರೂ ಅದು ಹುಸಿಯಾಗಿದೆ. ಅನಿವಾರ್ಯವಾಗಿ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಸರ್ಕಾರಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದೇವೆ” ಎಂದು ತಿಳಿಸಿದ್ದಾರೆ.

“ಸರ್ಕಾರಿ ನೌಕರರ ಸಂಘಟನೆಗಳ 5,000ಕ್ಕೂ ಹೆಚ್ಚು ಪ್ರತಿನಿಧಿಗಳು ಬೆಂಗಳೂರಿನಲ್ಲಿ ಫೆಬ್ರುವರಿ 21ರಂದು ಸಭೆ ಸೇರಿ ಚರ್ಚಿಸಿದ್ದೇವೆ. ಪ್ರತಿಭಟನೆ ನಡೆಸುವ ತೀರ್ಮಾನ ಕೈಗೊಂಡಿದ್ದೇವೆ. ಗ್ರಾಮ ಪಂಚಾಯಿತಿಯಿಂದ ವಿಧಾನಸೌಧದ ವರೆಗೆ ಎಲ್ಲ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗಲಿದ್ದಾರೆ. ಶಿಕ್ಷಣ ಕ್ಷೇತ್ರದ ಸೇವೆಗಳೂ ಲಭ್ಯ ಇರುವುದಿಲ್ಲ” ಎಂದು ಮಾಹಿತಿ ನೀಡಿದ್ದಾರೆ.

“ಜುಲೈ 1, 2022ರಿಂದ ಜಾರಿಗೆ ಬರುವಂತೆ ಶೇ 40ರಷ್ಟು ವೇತನ ಹೆಚ್ಚಳ ಸೌಲಭ್ಯ ಒದಗಿಸಬೇಕು. ಎನ್‌ಪಿಎಸ್ ರದ್ದು ಮಾಡಿ, ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು ಎಂಬ ಎರಡು ಪ್ರಮುಖ ಬೇಡಿಕೆಗಳನ್ನು ಈಗಾಗಲೇ ಸರ್ಕಾರದ ಮುಂದೆ ಇಡಲಾಗಿದೆ” ಎಂದು ಹೇಳಿದ್ದಾರೆ.

ಇತ್ತೀಚೆಗೆ ಸರ್ಕಾರಿ ನೌಕರರ ಸಂಘ ಮತ್ತು ಎನ್‌ಪಿಎಸ್ ನೌಕರರ ಸಂಘದ ನಡುವೆ ತಿಕ್ಕಾಟ ನಡೆದ ಬಳಿಕ ವೇತನ ಆಯೋಗ ಜಾರಿ ಸಂಬಂಧ ಸರ್ಕಾರಿ ನೌಕರರ ಸಂಘ ಒತ್ತಡ ಹಾಕುತ್ತಿದೆ.

ಒಪಿಎಸ್ (ಹಳೆಯ ಪಿಂಚಣಿ ಯೋಜನೆ) ಸಂಬಂಧ ಹಾಗೂ ವೇತನ ಪರಿಷ್ಕರಣೆ ವಿಚಾರವಾಗಿ ರಾಜ್ಯ ಸರ್ಕಾರಿ ನೌಕರರ ಸಂಘ ಕರೆದಿದ್ದ ತುರ್ತು ಸಭೆಯಲ್ಲಿ ಯಾವುದೇ ಚರ್ಚೆಗಳನ್ನು ನಡೆಸದೆ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿಯವರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದನ್ನು ವಿರೋಧಿಸಿದ ಎನ್‌ಪಿಎಸ್‌ ನೌಕರರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಬಂದಿತ್ತು.

ಸಿ.ಎಸ್.ಷಡಕ್ಷರಿಯವರು ಕೈಗೊಂಡ ಏಕಪಕ್ಷೀಯ ನಿರ್ಣಯವನ್ನು ವಿರೋಧಿಸಿದ ‘ಎನ್.ಪಿ.ಎಸ್. (ನೂತನ ಪಿಂಚಣಿ ಯೋಜನೆ) ನೌಕರರ ಸಂಘ’ದ ಸದಸ್ಯರ ಮೇಲೆ ಸರ್ಕಾರಿ ನೌಕರರ ಸಂಘದ ಕೆಲವು ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಎನ್‌ಪಿಎಸ್ ಟಿ-ಶರ್ಟ್ ಧರಿಸಿದ್ದವರನ್ನು ಗುರಿಯಾಗಿಸಿಕೊಂಡು ಹೊಡೆಯಲಾಗಿದೆ, ಮಹಿಳಾ ನೌಕರರನ್ನೂ ನಿಂದಿಸಲಾಗಿದೆ ಎಂಬ ಗುರುತರ ಆರೋಪಿಸಲಾಗಿತ್ತು.

ಇದನ್ನೂ ಓದಿರಿ: ಏನಿದು ಎನ್‌ಪಿಎಸ್‌, ಒಪಿಎಸ್? ಲಕ್ಷಾಂತರ ನೌಕರರ ಆತಂಕವೇನು?

ಎನ್‌ಪಿಎಸ್‌ ನೌಕರರ ಸಂಘದ ಅಧ್ಯಕ್ಷರಾದ ಶಾಂತರಾಮ್‌ ಪ್ರತಿಕ್ರಿಯಿಸಿ, “ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಷಡಾಕ್ಷರಿಯವರು ಮಾರ್ಚ್ 2022ಕ್ಕೆ ಕೇಂದ್ರ ಮಾದರಿ ವೇತನ ಕೊಡಿಸುವುದಾಗಿ ಹೇಳಿದ್ದರು. ಅದಾದ ನಂತರ ಎನ್‌ಪಿಎಸ್ ಹೋರಾಟವನ್ನು ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಿದ್ದರು. 2022ಕ್ಕೆ ಕೇಂದ್ರ ಮಾದರಿ ವೇತನ ಕೊಡಿಸುವುದಾಗಿ ಹೇಳಿ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನೂ ನೀಡಿದ್ದರು. ಆನಂತರ ಕೇಂದ್ರ ಮಾದರಿ ಕಾಣೆಯಾಗಿ ರಾಜ್ಯ ಮಾದರಿಯಾಯಿತು. ಯೂಟರ್ನ್ ತೆಗೆದುಕೊಂಡರು. ನವೆಂಬರ್‌ನಲ್ಲಿ ಹೇಗೋ ವೇತನ ಆಯೋಗ ರಚನೆಯಾಯಿತು. ಏಳನೇ ವೇತನ ಆಯೋಗವನ್ನು ಈ ಬಜೆಟ್‌ನಲ್ಲಿಯೇ ಜಾರಿ ಮಾಡುವುದಾಗಿ ಭರವಸೆಯನ್ನು ಷಡಕ್ಷರಿ ನೀಡಿದ್ದರು. ಒಂದು ರೂಪಾಯಿಯನ್ನೂ ಸರ್ಕಾರ ಈ ಬಜೆಟ್‌ನಲ್ಲಿ ಮೀಸಲಿಟ್ಟಿಲ್ಲ. ವೇತನ ಆಯೋಗ ಆದಮೇಲೆ ಬಜೆಟ್‌ನಲ್ಲಿ ಹಣ ಎತ್ತಿಡಬೇಕಿತ್ತಲ್ಲವೇ? ಅದಾಗಲಿಲ್ಲ. ಕೊಟ್ಟ ಮಾತಿಗೆ ತಪ್ಪಿದ್ದರಿಂದ ಅದನ್ನು ಮುಚ್ಚಿಕೊಳ್ಳುವುದಕ್ಕಾಗಿ, ಹೋರಾಟಕ್ಕೆ ಕರೆ ನೀಡುವುದಾಗಿ ನಮ್ಮೆನ್ನೆಲ್ಲ ಷಡಾಕ್ಷರಿಯವರು ಸಭೆಗೆ ಕರೆದಿದ್ದರು. ಈ ವೇಳೆ ಹಲ್ಲೆ ನಡೆಸಲಾಗಿದೆ” ಎಂದು ತಿಳಿಸಿದ್ದರು.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ನೌಕರರ ಆಗ್ರಹಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಒತ್ತಡ ಹಾಕಲಾರಂಭಿಸಿದ್ದಾರೆ. ಸರ್ಕಾರ ಆದೇಶ ಹೊರಡಿಸುತ್ತದೆಯೋ ಎಂಬುದು ಸದ್ಯದ ಕುತೂಹಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಚುನಾವಣೆ ಪ್ರಚಾರದಲ್ಲಿ ಪದೇ ಪದೇ ಸುಳ್ಳು ಹೇಳುತ್ತಿರುವುದರಿಂದ…..’,: ಮೋದಿಗೆ ಕಾಂಗ್ರೆಸ್‌ ಪ್ರಣಾಳಿಕೆಯನ್ನು ವಿವರಿಸಿ ಪತ್ರ...

0
ಕಾಂಗ್ರೆಸ್‌ ಪ್ರಣಾಳಿಕೆಯ ಬಗ್ಗೆ ಮೋದಿ, ಅಮಿತ್‌ ಶಾ ಚುನಾವಣಾ ಭಾಷಣದಲ್ಲಿ ಸುಳ್ಳು ಆಪಾದನೆ ಮಾಡುತ್ತಿರುವ ಮಧ್ಯೆ ಕಾಂಗ್ರೆಸ್‌ ಪ್ರಣಾಳಿಕೆ ಬಗ್ಗೆ ಚರ್ಚೆಗೆ ನರೇಂದ್ರ ಮೋದಿ ಅಥವಾ ಅವರಿಂದ ನಿಯೋಜಿಸಲ್ಪಟ್ಟ ಯಾರಾದರು ಬನ್ನಿ ಎಂದು...