Homeಅಂಕಣಗಳುವೈರಮುತ್ತು ಅವರ ’ಕಳ್ಳಿಗಾಡಿನ ಇತಿಹಾಸ’ ಇದು ರಾಮಾಯಣವಲ್ಲ ಗ್ರಾಮಾಯಣ

ವೈರಮುತ್ತು ಅವರ ’ಕಳ್ಳಿಗಾಡಿನ ಇತಿಹಾಸ’ ಇದು ರಾಮಾಯಣವಲ್ಲ ಗ್ರಾಮಾಯಣ

- Advertisement -
- Advertisement -

ಡಾ.ವೈರಮುತ್ತು ಅವರ ’ಕಳ್ಳಿಕ್ಕಾಟ್ಟು ಇತಿಹಾಸಂ’ ಎಂಬ ತಮಿಳು ಕಾದಂಬರಿಯನ್ನು ಡಾ.ಮಲರ್‌ವಿಳಿ ಕೆ. ಅವರು ’ಕಳ್ಳಿಗಾಡಿನ ಇತಿಹಾಸ’ ಎಂಬುದಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. [ಪ್ರಕಟಣೆ: ಸಾಹಿತ್ಯ ಅಕಾಡೆಮಿ-2021] ಮೂಲ ಲೇಖಕರು ಈ ಕಾದಂಬರಿಯನ್ನು ಇತಿಹಾಸ ಎಂದು ಕರೆದಿದ್ದಾರೆ. ಹಾಗಾದರೆ ಇದು ಇತಿಹಾಸವೆ? ಅಲ್ಲ. ರೂಢಿಗತವಾಗಿ ಬಂದ ಇತಿಹಾಸವಲ್ಲ. ಇದನ್ನು ಸಬಾಲ್ಟ್ರನ್ ಚರಿತ್ರೆ ಎಂದು ಕರೆಯಲಾಗುತ್ತದೆ. ಸಬಾಲ್ಟ್ರನ್ ಎಂದರೆ ಅತ್ಯಂತ ಕೆಳವರ್ಗ-ತುಳಿತಕ್ಕೊಳಗಾದ ವರ್ಗ ಎಂದರ್ಥ. ಇದು ಶೋಷಿತರು ಕಟ್ಟಿಕೊಡುವ ಚರಿತ್ರೆಯೇ ಆಗಿದೆ. ಪ್ರಭುತ್ವದಿಂದ ತುಳಿತಕ್ಕೊಳಗಾದವರ ನಿರ್ಲಕ್ಷ್ಯಕ್ಕೊಳಗಾದವರ ಸಂಗತಿಗಳೇ ನಿಜವಾದ ಚರಿತ್ರೆ ಎಂಬುದಾಗಿ ಸಬಾಲ್ಟ್ರನ್ ಚರಿತ್ರೆಕಾರರ ಅಭಿಪ್ರಾಯ. ಈ ಹಿನ್ನೆಲೆಯಿಂದ ಪರಿಭಾವಿಸಿದಾಗ ಡಾ.ವೈರಮುತ್ತು ಅವರು ’ಕಳ್ಳಿಪ್ಪಟ್ಟಿ’ ಎಂಬ ಹಳ್ಳಿಯ ಕುರಿತ ಕಾದಂಬರಿಯನ್ನು ಇತಿಹಾಸವೆಂದು ಕರೆದಿರುವುದು ಔಚಿತ್ಯಪೂರ್ಣವಾಗಿದೆ.

ಕಳ್ಳಿಗಾಡಿನ ಇತಿಹಾಸ: ಪ್ರಸ್ತುತ ಕಾದಂಬರಿ ’ಕಳ್ಳಿಪ್ಪಟ್ಟಿ’ ಎಂಬ ಹಳ್ಳಿಯಲ್ಲಿನ ಬಡ ಹಾಗೂ ಶೋಷಿತ ಜನರ ಬದುಕಿನ ಬವಣೆಯನ್ನು ಯಥಾವತ್ತಾಗಿ ಚಿತ್ರಿಸುವ ಕಥಾನಕ. ಇಲ್ಲಿಯ ನಾಯಕ ಪೇಯತ್ತೇವರ್ ಬರಡು ನೆಲದಲ್ಲಿ, ಬವಣೆಯ ಬದುಕಿನಲ್ಲಿ ನಿರಂತರ ಛಲದಿಂದ ಹೋರಾಡುತ್ತಾ ಪ್ರಾಮಾಣಿಕತೆ, ಆತ್ಮಸ್ಥೈರ್ಯ, ಭರವಸೆ, ನಂಬಿಕೆಯ ತಳಹದಿಯ ಮೇಲೆ ಗಟ್ಟಿಯಾಗಿ ನಿಂತ ಹಿರಿಯ ಜೀವ. 1958ರಲ್ಲಿ ವೈಗೈ ನದಿಗೆ ಅಣೆಕಟ್ಟು ಕಟ್ಟಿ ಸುಮಾರು 12ರಿಂದ 14 ಗ್ರಾಮಗಳು ಮುಳುಗಡೆಯಾಗುವ ಸಂದರ್ಭವೇ ಇಲ್ಲಿನ ಕಥಾವಸ್ತು. ತಾವು ಹುಟ್ಟಿ ಬೆಳೆದ ಮಣ್ಣಿನ ಬಗ್ಗೆ ಅವಿನಾಭಾವ ಸಂಬಂಧವನ್ನು ಅನಿವಾರ್ಯವಾಗಿ ಕಳಚಿಕೊಂಡು ಗೊತ್ತುಗುರಿಯಿಲ್ಲದೆ ಹೊರಟ ಜನರ ದಾರುಣ ಪರಿಸ್ಥಿತಿ ಮನಕಲಕುತ್ತದೆ. ಕಳ್ಳಿಪ್ಪಟ್ಟಿ ಮುಳಗಡೆಯಾಗುತ್ತಿದ್ದಾಗ ಪೇಯತ್ತೇವರ್ ತನ್ನ ಮನೆಯ ಗೋಡೆಯ ಮಣ್ಣನ್ನು ಒಂದು ಹಿಡಿ ಬಾಗಿ ತೆಗೆದುಕೊಳ್ಳುತ್ತಿದ್ದಂತೆಯೇ ಗೋಡೆ ಕುಸಿದು ಮರಣವನ್ನಪ್ಪುವ ದೃಶ್ಯ ಹೃದಯ ವಿದ್ರಾವಕವಾದುದು.

ಪುನರನುಭವಿಸಿ ಹೇಳಿದ್ದು ಸಾಹಿತ್ಯ; ಉಳಿದದ್ದು ಕೇವಲ ವರದಿ ಅಥವಾ ವಾರ್ತೆ. ರಾಷ್ಟ್ರಕವಿ ಕುವೆಂಪು ಅಂದಹಾಗೆ ’ಕಳ್ಳಿಗಾಡಿನ ಇತಿಹಾಸ’ವನ್ನು ವೈರಮುತ್ತು ಪುನರನುಭವಿಸಿ ಹೇಳಿದ್ದಾರೆ. 1958ರಲ್ಲಿ ವೈಗೈ ನದಿಗೆ ಅಣೆಕಟ್ಟು ಕಟ್ಟಿ ಮುಗಿದಮೇಲೆ ಅದರ ನೀರು ಆವರಿಸಿದ ಭಾಗಗಳಲ್ಲಿ ಇದ್ದ ಸಣ್ಣ ಸಣ್ಣ ಗ್ರಾಮಗಳು ಭಾರತದ ನಕಾಶೆಯಿಂದ ತೊಡೆದುಹಾಕಲ್ಪಟ್ಟಾಗ ಅಳುತ್ತಲೇ ಊರನ್ನು ತೊರೆದು ಬರುತ್ತಿರುವ ಅಮ್ಮನ ಕೈಯನ್ನು ಹಿಡಿದುಕೊಂಡೇ ಸೊಂಟದತನಕ ನಿಂತ ನೀರಿನಲ್ಲಿ ನೆನೆದ ಚಡ್ಡಿಯೊಂದಿಗೆ ತಾನೂ ಅಳುತ್ತಲೇ ನಿರ್ಗಮಿಸುತ್ತಾನೆ ಓರ್ವ ಐದು ವರ್ಷದ ಬಾಲಕ. ಅವನೇ ಈ ಲೇಖಕ. ಅವರ ಸ್ಥಳಾಂತರಗೊಂಡ ಬದುಕು ಬಾಡುತ್ತಲೇ ಬೆಳಯುತ್ತದೆ. ಜಲಸಮಾಧಿಯಲ್ಲಿ ಹೂತು ಹೋದ ತಮ್ಮ ಹುಟ್ಟೂರನ್ನು ಅಣೆಕಟ್ಟೆಯ ಮೇಲೆ ನಿಂತು ನೋಡಿ ಕಣ್ಣೀರಿಟ್ಟಿದ್ದಾರೆ. ಬೇಸಿಗೆಯಲ್ಲಿ ನೀರು ಕೊಂಚ ತಗ್ಗಿದ್ದಾಗ ಅದರ ಚಹರೆಯನ್ನು ಗುರ್ತಿಸಲೆತ್ನಿಸಿದ್ದಾರೆ.

ನೀರು ತುಂಬಿ ತುಳುಕುತ್ತಿದ್ದಾಗ ಹಾರುವ ಕೊಕ್ಕರೆ ಕಣ್ಣೋಟದಲ್ಲಿ ಕಾಣಲು ಪ್ರಯತ್ನಿಸಿದ್ದಾರೆ. ಹೀಗೆ 42 ವರ್ಷಗಳ ಕಾಲ ಮುಳುಗಡೆಯಾದ ತಮ್ಮ ಹುಟ್ಟೂರ ನೆನಪನ್ನು ಹೊತ್ತು ತಿರುಗಿದ್ದಾರೆ. ಕಡೆಗೆ ’ಆನಂದ ವಿಗಡನ್’ ಪತ್ರಿಕೆಯ ವಜ್ರಮಹೋತ್ಸವದಲ್ಲಿ ಆ ಹೊರೆಯನ್ನು ಇಳಿಸಿ ನಿಟ್ಟುಸಿರುಬಿಟ್ಟಿದ್ದಾರೆ. 2001ರಲ್ಲಿ ಅದು ’ಕಳ್ಳಿಗಾಡಿನ ಇತಿಹಾಸ’ ಎಂಬುದಾಗಿ ಪುಸ್ತಕ ರೂಪ ಪಡೆಯಿತು. ಪುನರನುಭವಿಸಿದ ಆ ಮಣ್ಣಿನ ಮಕ್ಕಳ ಪಾಡು ಹಾಡಾಗಿ ಹರಿಯಿತು. ಮಣ್ಣಿಗೂ ಮನುಷ್ಯನಿಗೂ ಅವಿನಾ ಸಂಬಂಧ ’ಮಣ್ಣಿಂದಕಾಯ ಮಣ್ಣಿಂದ ಜೀವ’. ತನ್ನ ಹುಟ್ಟೂರಿನ ಕಳ್ಳುಬಳ್ಳಿ ಕಡಿದುಕೊಂಡ ಲೇಖಕರು ಅಣೆಕಟ್ಟೆ ಪೂರ್ವದ ತನ್ನೂರಿನ ಬದುಕಿನ ಜೀವನದಿಗೆ ಭಾವಾತ್ಮಕ ಅಕ್ಷರ ಅಣೆಕಟ್ಟೆ ನಿರ್ಮಿಸಿ ಧನ್ಯರಾದರು. ಅಭಿವೃದ್ಧಿ ಹೆಸರಿನಲ್ಲಿ ಪ್ರಪಂಚದಾದ್ಯಂತ ಕಟ್ಟಿದ ಅಣೆಕಟ್ಟೆಗಳ ಹಿನ್ನೀರಿನಲ್ಲಿ ಮುಳುಗಿಹೋದ ಲಕ್ಷೆಪಲಕ್ಷ ಊರು ಕೇರಿಗಳು ಸ್ಥಳಾಂತರಗೊಂಡ ಬದುಕಿಗೆ ಹಿಡಿದ ಒಂದು ಜಾಗತಿಕ ವಿರಾಟ್ ರೂಪಕ ಈ ’ಕಳ್ಳಿಗಾಡು ಇತಿಹಾಸ’.

ಕಾದಂಬರಿಯ ಕೇಂದ್ರ ಪಾತ್ರ ಪೇಯತ್ತೇವರ್ ಫೀನಿಕ್ಸ್ ಪಕ್ಷಿಯಂತೆ ಸುಟ್ಟ ಬೂದಿಯಿಂದ ಹುಟ್ಟಿ ಬರುತ್ತಾರವರು. ರೈತಾಪಿ ವರ್ಗದ ಎಲ್ಲಾ ಶ್ರಮ-ಪ್ರಾಮಾಣಿಕತೆ-ಮನಕರಗಿ ಅತ್ತುಬಿಡುವ ಕೋಮಲತೆ-ಜೊತೆಗೆ ಕಷ್ಟಗಳ ವಿಧಿಮಳೆ ಸುರಿಯೆ ಹೋರಾಡುವ ಪೌರುಷ, ಬಾಳ್ವೆಯ ಬಡತನದಲ್ಲೂ ಸತ್ಯಸಂಧನಾಗಿ ನಡೆವ ಧೀಮಂತಿಕೆ ಈ ಎಲ್ಲ ಗುಣಗಳನ್ನು ಎರಕ ಹೊಯ್ದು ತೆಗೆಯಲಾದ ಪಾತ್ರ ಪೇಯತ್ತೇವರ್. ರೈತನೆಂದರೆ ಗಾಳಿ ಮಳೆ ಬಿಸಿಲುಗಳಿಗೆ ಎದೆಯೊಡ್ಡಿ ನಿಲ್ಲುವ ಬಂಡೆಗಲ್ಲು. ಅಂಥ ಬಂಡೆಗಲ್ಲಿನಲ್ಲಿ ವೈರಮುತ್ತು ಎಂಬ ಶಿಲ್ಪಿ ಪೇಯತ್ತೇವರ್ ಎಂಬ ರೈತನ ಪಾತ್ರವನ್ನು ಕೆತ್ತಿ ನಿಲ್ಲಿಸಿದ್ದಾರೆ. ರೈತರ ಋಜು ಸ್ವಭಾವಕ್ಕೆ ಈತನೊಬ್ಬ ಐಕಾನ್. ಪೇಯತ್ತೇವರ್(ಪೇಯಿ=ದೆವ್ವ) ಎಂಬ ಭೂತವು ವೈರಮುತ್ತು ಅವರ ಮೈಮೇಲೆ ಬಂದು ಒಂದು ವರ್ಷ ಕಾಲ ಹಿಡಿದಳ್ಳಾಡಿಸಿದೆ. ಜೊತೆಗೆ ಅಳಗಮ್ಮಾಳ್-ಮುರುಗಾಯಿ-ವಂಡಿನಾಯಕ್ಕರ್-ಮೊಕ್ಕರಾಜು-ಸೆಲ್ಲತ್ತಾಯಿ-ಮನ್ನಿಲ್-ಚಿನ್ನು ಮುಂತಾದ ಪಾತ್ರಗಳು ಆ ಪೇಯತ್ತೇವರ್ ಭೂತಕ್ಕೆ ಚಂಡೆ ಮದ್ದಲೆ ನುಡಿಸಿ ಸಾಥ್ ಕೊಡುತ್ತವೆ.

ವೈಗೈ ಅಣೆಕಟ್ಟೆಯಲ್ಲಿ ಮುಳುಗಡೆಯಾದ ’ಕಳ್ಳಿಪ್ಪಟ್ಟಿ’ ಒಂದು ಕುಗ್ರಾಮ. ಅಲ್ಲಿ ಸುಮಾರು ಎಂಭತ್ತು ಕುಟುಂಬಗಳಿದ್ದವು. ಅದೊಂದು ಗಾಂಧೀ ಕನಸಿನ ’ಗ್ರಾಮ ಸ್ವರಾಜ್ಯ’ ಹಳ್ಳಿ ಎಂಬಂತಿತ್ತು. ಅದರಲ್ಲಿ ರೈತಾಪಿ ಮೊದಲ್ಗೊಂಡು ಕಮ್ಮಾರ, ಚಮ್ಮಾರ, ಅಗಸ, ಹಜಾಮ, ಕುಂಬಾರ, ಸುಡುಗಾಡುಸಿದ್ಧ ಮುಂತಾಗಿ ಹಲವು ಹನ್ನೊಂದು ವೃತ್ತಿಯ ಜನರಿದ್ದರು. ಇವರಲ್ಲಿ ಎದ್ದು ಕಾಣುವ ವ್ಯಕ್ತಿ ಪೇಯತ್ತೇವರ್. ಇವರ ಸುತ್ತಲೂ ಊರಿನ ಇತಿಹಾಸ ಬೆಳೆಯುತ್ತೆ. ಮೊಮ್ಮಗ ಮೊಕ್ಕರಾಜುವಿನೊಂದಿಗೆ ಹೊಲ ಉಳುವ ದೃಶ್ಯದಿಂದ ಕಾದಂಬರಿ ಆರಂಭ. ಆಗ ಪೇಯತ್ತೇವರ ಕಾಲ ಕಿರುಬೆರಳಿಗೆ ನೇಗಿಲ ಕುಳ ತಾಕಿ ನೆತ್ತರು ಸುರಿದು ಉತ್ತ ಮಣ್ಣಿನಲ್ಲಿ ಬೆರೆಯುತ್ತದೆ. ಆದರೂ ಅವರಿಗೆ ಆ ಪರಿವೆ ಇಲ್ಲ-ಮೊಮ್ಮಗ ಹೇಳುವವರೆಗೆ. ಹೀಗೆ ಆರಂಭವಾಗುವ ಕಾದಂಬರಿ ಅಣೆಕಟ್ಟೆಯ ನೀರು ಏರುತ್ತ ಬಂದು, ಜನ ಊರು ಬಿಟ್ಟು ಹೊರಡುತ್ತಿದ್ದಾರೆ-ಗಂಟುಮೂಟೆ, ನಾಯಿ-ಬೆಕ್ಕು-ದನಕರು ಸಮೇತ. ಆಗ ಯಾರಂತೆ ಎಂದರೆ ಊರಂತೆ. ಪೇಯತ್ತೇವರ್ ಅವರ ಕುಟುಂಬವೂ ಸಹ ಬಂಡಿಯಲ್ಲಿ ಸರಕು ಸಾಮಾನು ತುಂಬಿ ನಾಲ್ಕು ಸಲ ಎತ್ತರದ ಪ್ರದೇಶಕ್ಕೆ ಸುರಿದಿದೆ. ಆದರೆ ನೆನಪಿಗೆ ಮನೆಯ ಮಣ್ಣು ತರಲು ಪೇಯತ್ತೇವರ್ ಎದೆಮಟ್ಟ ಏರಿಬಂದ ನೀರಿನಲ್ಲಿ ಈಜುತ್ತಾ ಬಂದು ಗೋಡೆಯನ್ನು ಹಾರೆಯಿಂದ ಮೀಟುವಾಗ ಆ ಗೋಡೆಯೆ ಕುಸಿದು ಅಡಿಯಲ್ಲಿ ಸಿಲುಕಿ ಮುಳುಗಿದರು ಎಂಬಲ್ಲಿಗೆ ಕೃತಿಯ ಮುಕ್ತಾಯ.

ವೈರಮುತ್ತು

ಈ ಕಾದಂಬರಿಯ ವಸ್ತ್ರ ವಿನ್ಯಾಸ, ತಂತ್ರ ಕೌಶಲ, ಪಾತ್ರ ಚಿತ್ರಣ ಹಾಗೂ ಭಾಷಾ ಶೈಲಿ ನಮ್ಮನ್ನು ಆಶ್ಚರ್ಯಚಕಿತರನ್ನಾಗಿಸುತ್ತದೆ. ಹೊಲ ಉಳುವ ರೀತಿ ವಿನ್ಯಾಸಗಳಿಂದ ಮೊದಲುಗೊಂಡು ಸುಡುಗಾಡಿನಲ್ಲಿ ಹೆಣ ಸುಡುವ ರೀತಿಯವರೆಗೆ, ಬಸುರಿಗೆ ಹೆರಿಗೆ ಮಾಡಿಸುವ ರೀತಿಯಿಂದ ಹಿಡಿದು ಹಸು ಈಯುಸುವ ವಿಧಾನದವರೆಗೆ, ಮೀಸೆ ಕತ್ತರಿಸುವ ನಾಪಿತನ ಕಸುಬಿನಿಂದ ಹಿಡಿದು ತನ್ನ ರುಂಡ ತಾನೇ ಹಾರಿಸಿಕೊಳ್ಳುವ ರೌದ್ರತೆಯವರೆಗೆ, ಮೈನೆರೆದ ಹುಡುಗಿಗೆ ವಸಗೆ ಮಾಡುವುದರಿಂದ ಹಿಡಿದು ಗಂಡು ಹುಡುಗರಿಗೆ ಮಾಡುವ ’ಮಾರ್ಗ ಕಲ್ಯಾಣಂ’(ಸುನ್ನತ್)ದವರೆಗೆ, ಒಣಭೂಮಿಯಲ್ಲಿ ಬಾವಿ ತೋಡುವುದರಿಂದ ಹಿಡಿದು ಬಾವಿಯಿಂದ ನೀರೆತ್ತುವ ಕಪಿಲೆಯವರೆಗೆ, ಮನುಷ್ಯಮಾತ್ರದವರಿಗೆ ಹಿಡಿದ ಜಾಢ್ಯ ಜಾಪತ್ತು ಹುಚ್ಚು ಬಿಡಿಸುವ ನಾಟಿ ವೈದ್ಯದಿಂದ ಹಿಡಿದು ಜಾನುವಾರುಗಳ ಜಾಢ್ಯಕ್ಕೆ ಮದ್ದು ಮಾಡುವವರೆಗೆ ಇಕ್ಕಿರಿದಿದೆ. ಅಲ್ಲಿ ಕಳ್ಳಿಪ್ಪಟ್ಟಿ ಪಂಚಾಯಿತಿ ಕಟ್ಟೆಯೇ ಹೈ ಕೋರ್ಟ್; ಊರ ಹಿರೀಕರೇ ಚೀಫ್ ಜಡ್ಜಸ್.

ದೇವರು ಈ ಲೋಕವನ್ನು ಸೃಷ್ಟಿ ಮಾಡಿದನೋ ಅಥವಾ ಮನುಷ್ಯರೇ ದೇವರನ್ನು ಸೃಷ್ಟಿ ಮಾಡಿದನೋ ಯಾವುದೂ ಇನ್ನೂ ಇತ್ಯರ್ಥವಾಗಿಲ್ಲ. ಆದರೆ ಈ ಕಳ್ಳಿಪ್ಪಟ್ಟಿ ಊರಿನ ಪೂರ್ವಿಕರು ತಮ್ಮ ದೇವರನ್ನು ತಾವೇ ಸೃಷ್ಟಿಸಿಕೊಂಡರು. ಇವರು ಕಾಯಾಂಪುತ್ತೇವರ್ ಎಂಬ ಊರಿನಿಂದ ಬಂದವರು. ಅಲ್ಲೊಂದು ದೊಡ್ಡ ಕುಟುಂಬ. ಆರುಜನ ಗಂಡು ಮಕ್ಕಳು, ಒಂದೇ ಒಂದು ಸುರಸುಂದರಿ ಹುಡುಗಿ. ಹೆಸರು ಮುತ್ತುಕಣ್ಣಿ. ಹೆಸರಿಗೆ ಅನ್ವರ್ಥ. ಬೇಟೆಗಾಗಿ ಬಂದಿದ್ದ ದೂರದೂರಿನ ಜಮೀನ್ದಾರನೊಬ್ಬ ಆ ಹುಡುಗಿಯನ್ನು ಕಂಡು ಬೇಟೆ ನಾಯಿಯಂತೆ ನಾಲಗೆ ಚಾಚಿದ. ಅವಳ ಆರು ಜನ ಅಣ್ಣಂದಿರು ಅವಳ ಬೆಂಗಾವಲಿಗೆ ನಿಂತರು. ಕದನ ಕೈಗಟ್ಟಿತು. ಅವರಲ್ಲಿ ಐದುಜನ ಸತ್ತರು. ಆರನೆಯವನು ತಂಗಿಯನ್ನು ಕುದುರೆ ಹತ್ತಿಸಿಕೊಂಡು
ಪರಾರಿಯಾದ. ದುರಾದೃಷ್ಟ ಅಡ್ಡಲಾಗಿ ಹೊಳೆ. ಹಿಂದಿಂದ ಅಟ್ಟಿಸಿಕೊಂಡು ಬರುವ ಜಮೀನ್ದಾರನ ಊಳಿಗದವರು. ಹೊಳೆಗೆ ಬಿದ್ದು ಈಜಿದರು. ಆಳುಗಳೂ ಜಿಗಿದರು. ಅಣ್ಣ ಕೈಯ್ಯಾರೆ ಪ್ರೀತಿಯ ತಂಗಿಯನ್ನು ನೀರಿನಲ್ಲಿ ಮುಳುಗಿಸಿ ಸಾಯಿಸಿದ. ಆದರೆ ಕೈಯ್ಯಾರೆ ಕೊಂದುದಕ್ಕೆ ನೊಂದು ಖಡ್ಗದಿಂದ ತನ್ನ ರುಂಡವನ್ನು ತಾನೇ ಕತ್ತರಿಸಿಕೊಂಡು ಗಂಗೆಗೆ ಹಾರವಾದ. ಊರು ಸೂರೆ ಹೋಯಿತು. ಅಳಿದುಳಿದವರು ತಪ್ಪಿಸಿಕೊಂಡು ಕಳ್ಳಿಗಾಡಿಗೆ ಬಂದು ಸೇರಿಕೊಂಡರು. ಆ ಮುತ್ತುಕಣ್ಣಿಯೇ ಈಗ ಮುತ್ಯಾಲಮ್ಮ ಆಗಿ ಇವರೊಂದಿಗೆ ಬಂದು ಊರು ಕಾಯುತ್ತಿದ್ದಾಳೆ. ಇದು ಅವರ ದೈವ ಸೃಷ್ಟಿಯ ಕಥನ. ಊರು ಮುಳುಗಡೆಯಾದಾಗ ಈ ಮುತ್ಯಾಲಮ್ಮನನ್ನೂ ಹೊತ್ತು ನಡೆದರು.

ವಿವಿಧ ವೃತ್ತಿ ಕಸುಬುಗಳ ಕಳ್ಳಿಪ್ಪಟ್ಟಿ ಹಳ್ಳಿಯ ಜನ ಪರಸ್ಪರ ಅವಿನಾಸಂಬಂಧ ಹೊಂದಿದ್ದರು. ಆ ಸಂಬಂಧದ ತಂತುಗಳು ಹೇಗಿದ್ದವು? ಎಂತಿದ್ದವು? ಎಂಬುದನ್ನು ಬೆರಗು ಬರಿಸುವಂತೆ ಲೇಖಕರು ಕೈಮಗ್ಗ ಲಾಳಿ ಆಡಿ, ಪೀತಾಂಬರ ನೆಯ್ದಂತೆ ಕಾದಂಬರಿಯನ್ನು ನೆಯ್ದಿದ್ದಾರೆ.

ಕಾದಂಬರಿಕಾರರ ಲೋಕಾನುಭವ ದೊಡ್ಡದು. ಹಳ್ಳಿಗಾಡಿನ ಬದುಕಿನ ವಿವಿಧ ಮುಖಗಳನ್ನು ಅವುಗಳ ಸಾವಯವ ಸಂಬಂಧಗಳನ್ನು ಪ್ರತ್ಯಕ್ಷ ಕಂಡು ಅನುಭವಿಸಿ ಚಿತ್ರಿಸಿರುತ್ತಾರೆ. ಭಟ್ಟಿ ಸಾರಾಯಿ ಕಾಯಿಸುವುದು, ಕ್ಷೌರ ಮಾಡುವುದು, ಪಶುಸಂಗೋಪನೆ, ಅವುಗಳಿಗೆ ರೋಗರುಜಿನ ಬಂದಾಗ ಔಷಧೋಪಚಾರ ಮಾಡುವುದು, ಈಯಲು ತೊಂದರೆ ಪಡುತ್ತಿರುವ ಹಸುವಿಗೆ ಈಯುಸುವುದು, ಸೂಲಗಿತ್ತಿ ಹೆರಿಗೆ ಮಾಡಿಸುವುದು, ಬಾವಿ ತೋಡುವುದು, ಕಪಿಲೆ ಹೊಡೆಯುವುದು, ನಾಟಿ ಮಾಡುವುದು, ಆಡುಕುರಿ ಕೋಳಿ ಕದಿಯುವುದು, ಮಾರಿ-ಮಸಣಿ-ಮುತ್ಯಾಲಮ್ಮನ ಜಾತ್ರೆಗಳು, ಸಂತೆ ವ್ಯಾಪಾರ ಸಾಪಾರ, ಲೇವಾದೇವಿ ಇತ್ಯಾದಿ, ನಾಯಕಸಾನಿಯ ದರ್ಪ ದೌಲತ್ತು, ಇತ್ಯಾದಿ ವಿಷಯಗಳನ್ನು ಪ್ರತ್ಯಕ್ಷ ಕಂಡು, ಪ್ರಮಾಣಿಸಿ ನೋಡಿ ಚಿತ್ರಿಸುತ್ತಾರೆ. ಸುಡುಗಾಡಿನಲ್ಲಿ ಹೊಕ್ಕು ಹೆಣ ಸುಡುವ ವಿಧಿವಿಧಾನವನ್ನು ಅರಿತಿದ್ದಾರೆ. ಹೆಣ ಸುಡುವಾಗ ಚಿತೆ ಮೇಲೆ ಅದು ಎದ್ದು ಸೆಟೆದು ನಿಲ್ಲುವುದನ್ನು ಕಂಡಿದ್ದಾರೆ. ಈ ಎಲ್ಲವನ್ನೂ ಮೊಕ್ಕರಾಜುವಿನ ಕಣ್ಣ ಪ್ರಶ್ನೆಗಳ ಮೂಲಕ ಕೇಳಿ ತಿಳಿಸುತ್ತಾರೆ. ಅಣೆಕಟ್ಟೆ ಕಟ್ಟುವ ಕಾಮಗಾರಿ ಸ್ಥಳಗಳನ್ನು ನೋಡಿದ್ದಾರೆ, ಅಧಿಕಾರಿ-ನೌಕರ-ಕೂಲಿಕಾರರ ಜೊತೆ ಹೆಜ್ಜೆಗೆ ಹೆಜ್ಜೆ ಹಾಕಿ ಬಂದಿದ್ದಾರೆ, ಅಣೆಕಟ್ಟೆಯಲ್ಲಿ ನೀರು ಮಲಗಿ ಮೇಲೇರುವುದನ್ನು ಕಣ್ಣುತುಂಬಿಕೊಂಡಿದ್ದಾರೆ. ಅಲೆಯ ಅಬ್ಬರಕ್ಕೆ ಮಣಿದಿದ್ದಾರೆ. ಅಣೆಕಟ್ಟೆಯ ರಸ್ತೆ ಮೇಲೆ ಮಲಗಿ ಹೊರಳಾಡುತ್ತಾ ಈ ಕೃತಿಯನ್ನು ಮುಗಿಸಿದ್ದಾರೆ. ಮಹಾಕೃತಿಯೊಂದರ ಸೃಜನೆಗೆ ಲೇಖಕ ಒಂದು ನಿಮಿತ್ತ ಮಾತ್ರ. ಮೇರು ಕೃತಿ ಶ್ರೀರಾಮಾಯಣ ದರ್ಶನವು ಶ್ರೀ ಕುವೆಂಪು ಅವರನ್ನು ಸೃಜಿಸಿದಂತೆ ಕಳ್ಳಿಗಾಡಿನ ಇತಿಹಾಸ ಶ್ರೀ ವೈರಮುತ್ತು ಅವರನ್ನು ಸೃಜಿಸಿದೆ.

ಯಾವುದೇ ಸಾಹಿತ್ಯಕೃತಿ ಸಫಲವಾಗುವುದು ಆ ವಸ್ತುವಿಗೊಪ್ಪುವ ಮೈ ಪಡೆದಾಗ ಮಾತ್ರ. ಈ ನೆಲದ ಮೇಲೆ ರೈತನ ಬದುಕು ಯಾವಾಗ ರೂಪುಗೊಂಡಿತೋ ಹೇಳಬಲ್ಲವರಾರು? ಅದೇ ಮಣ್ಣಿನ ಮಕ್ಕಳ ಬಾಳಿನೊಂದಿಗೆ ಅವರಾಡುವ ತಮಿಳು ನುಡಿಯೂ ಮೊಗ ಪಡೆಯಿತು. ಮಧುರೈ ಸುತ್ತಿನ ಆಡುನುಡಿ ತಮಿಳನ್ನು ವೈರಮುತ್ತು ಸೂರೆಗೊಂಡಿದ್ದಾರೆ. ಅನುವಾದಕರಾದ ಡಾ.ಮಲರ್‌ವಿಳಿ ಕೆ. ಅವರು ಅದನ್ನು ಹೀಗೆ ಸಂಗ್ರಹಿಸಿ ಬರೆಯುತ್ತಾರೆ: ’ಡಾ. ವೈರಮುತ್ತುರವರ ಬರವಣಿಗೆ ಶೈಲಿ, ತಂತ್ರ, ವಾಗ್ಜಾಲ, ವಾಗ್ವಿಭವ, ಉಪಮೆ, ರೂಪಕ, ವರ್ಣನೆ, ಹಾಸ್ಯ, ವ್ಯಂಗ್ಯ, ಪ್ರಗತಿಪರ ಚಿಂತನೆ, ಮೂಢನಂಬಿಕೆಯ ನಿರಾಕರಣೆ, ಹೀಗೆ ಹಳ್ಳಿಯ ವಾಸ್ತವ ಚಿತ್ರಣಗಳಿಂದ ಕೂಡಿದ ಗಂಭೀರ ಬರವಣಿಗೆಯಾಗಿದೆ ಇದು’.

ಒಂದು ಭಾಷೆಯ ಕೃತಿಯನ್ನು ಇನ್ನೊಂದು ಭಾಷೆಗೆ ದಾಟಿಸುವುದೆಂದರೆ ಎರಡೂ ಭಾಷೆಗಳ ಪರಕಾಯ ಪ್ರವೇಶ ಮಾಡಿ ಜೀವದ್ರವ್ಯವನ್ನು ಹೀರಬೇಕು. ಅದನ್ನು ಇನ್ನೊಂದು ಭಾಷೆಗೆ ಕಸಿಕಟ್ಟಿ ಸಂಗೋಪನೆ ಮಾಡಬೇಕು. ಆ ಬಗ್ಗೆ ಪ್ರೀತಿ ಶ್ರಮ, ಶ್ರದ್ಧೆ ಇಲ್ಲದೆ ಆ ಕೆಲಸ ಆಗಲಾರದು. ’ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ?’ ಅಂಥ ಪ್ರೀತಿಯಿಂದ ತರ್ಜುಮೆಯನ್ನು ನಿರ್ವಹಿಸಿದ್ದಾರೆ ಡಾ.ಮಲರ್‌ವಿಳಿ ಕೆ. ಅವರ ತಮಿಳು-ಕನ್ನಡ ಭಾಷೆಗಳ ಪಾಂಡಿತ್ಯದ ಪಾರಮ್ಯ ಇದನ್ನು ಸುಗಮ ಆಗುಮಾಡಿದೆ. ಹೀಗೆ ಮಾಡುವಾಗ ಎರಡು ಬಗೆಯ ಅನುಕೂಲಗಳು ಇವರಿಗೆ ಒದಗಿಬಂದಿವೆ. ಒಂದು- ರೈತರ ಬದುಕು ದೇಶ ಕಾಲಗಳನ್ನು ದಾಟಿ ಒಂದೇ ಆಗಿರುವುದು. ಎರಡು- ತಮಿಳು ಮತ್ತು ಕನ್ನಡ ಎರಡೂ ದ್ರಾವಿಡ ಭಾಷಾವರ್ಗಕ್ಕೆ ಸೇರಿರುವುದು. ಭಾಷೆ ಬೇರೆ ಬೇರೆ. ಆದರೆ ಮಣ್ಣಿನ ಮಕ್ಕಳ ಜೈವಿಕ ಬದುಕಿನ ವಿಧಾನ ಒಂದೇ. ಆದ್ದರಿಂದ ಅನುವಾದಕರು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಹಾಯು ದೋಣಿಯಲ್ಲಿ ವಿಹರಿಸಬಲ್ಲರು. ಅದನ್ನು ಕಳ್ಳಿಗಾಡು ಇತಿಹಾಸ ಸಾದರಪಡಿಸುತ್ತದೆ.

ಪಾತ್ರಗಳ ವಿಚಾರಕ್ಕೆ ಬಂದರೆ, ಪೇಯತ್ತೇವರ್ ಸುತ್ತ ಕಡೆದು ನಿಲ್ಲಿಸಿರುವ ಇತರ ಪಾತ್ರಗಳೆಂದರೆ ತಾಯಿದ್ದೂ ತಬ್ಬಲಿಯಾಗಿ ಕಾಲಿಗೆ ಕಲ್ಲು ಕಟ್ಟಿಕೊಂಡು ಮುಳುಗಲೆತ್ನಿಸಿಯೂ ಬದುಕಿಕೊಂಡು ತಾತನ ವಾರಸುದಾರನಾಗಿ ಬೆನ್ನಿಗೆ ಬಿದ್ದ ಬಾಲಕ ಮೊಕ್ಕರಾಜು; ಎತ್ತಿಲ್ಲದಾಗ ತಾನೆ ನೊಗಕ್ಕೆ ಹೆಗಲು ಕೊಟ್ಟು ಗೆಯ್ಮೆ ಮಾಡಿಸಿದ ಹೆಂಡತಿ ಅಳಗಮ್ಮಾಳ್; ಕೇಳಿದಾಗ ಇಲ್ಲ ಎನ್ನದೆ ಸಾಲ ನೀಡಿ ಕೈ ಹಿಡಿವ ಜೀವದ ಗೆಳೆಯ ವಂಡಿನಾಯಕ್ಕರ್, ಅಪೂರ್ವ ಸುಂದರಿಯಾಗಿದ್ದೂ ಅನಾಥಳಾಗಿ ಬಂದು ಆಶ್ರಯಕ್ಕೆ ಬಿದ್ದ ನಾಪಿತನ ಮಗಳು ಮುರುಗಾಯಿ, ಸವರನ್‌ಗಟ್ಟಲೆ ಚಿನ್ನ ತಾರೆಂದು ಸೆಲ್ಲತ್ತಾಯಿಗೆ ಪೀಡಿಸುವ ಮೊದಲ ಅಳಿಯ ಒಚ್ಚುಕ್ಕಾಳೈ; ಗಂಡನ ಕಾಟಕ್ಕೆ ಅಪ್ಪನ ಪೀಡಿಸುವ ಸೆಲ್ಲತ್ತಾಯಿ; ಬಡ್ಡಿರಕ್ಕಸನನ್ನು ಕೂನಿ ಮಾಡಿ ಜೈಲು ಸೇರಿದ ಎರಡನೇ ಅಳಿಯ ಕರುತ್ತಕ್ಕಣ್ಣನ್; ಅನಾಥಳಾಗಿ ಬಂದು ಮನೆ ಸೇರಿದ ಎರಡನೆಯ ಮಗಳು ಮಿನ್ನೆಲ್; ಬಿರುಗಾಳಿಯಂತೆ ಬಂದು ಆಗಾಗ ವಕ್ಕರಿಸುವ ಕೆಟ್ಟ ಚಾಳಿಗೆ ಬಿದ್ದ ಮಗ ಚಿನ್ನು; ಹಗಲು ರಾತ್ರಿ ಎನ್ನದೆ ಮಸಣದಲ್ಲಿ ಹೆಣ ಸುಡುವ ತೊತ್ತನ್; ನೀನೇ ಆಧಾರವೆಂದು ದುಡಿವ ಎತ್ತುಗಳು, ಹೀಗೆ ಹಲವು ಹನ್ನೊಂದು ಪಾತ್ರಗಳು ಪ್ರಾಣಿಗಳು ’ಕಳ್ಳಿಗಾಡಿನ ಇತಿಹಾಸ’ದಲ್ಲಿ ಕಾಣಸಿಗುತ್ತವೆ.

ರೈತನ ಬಾಳ್ವೆ ಎಂಬುದು ನಿನ್ನೆಮೊನ್ನೆಯದಲ್ಲ. ಯುಗ ಯುಗಾಂತರದ್ದು. ’ರಾಜ್ಯಗಳಳಿಯಲಿ ರಾಜ್ಯಗಳುದಿಸಲಿ ನನ್ನೀ ಕೆಲಸವ ಬಿಡೆನೆಂದು’ ಅದು ನಿರಂತರವಾಗಿ ಚಲಿಸುತ್ತಲೇ ಇದೆ. ಆದರೆ ಸ್ವಾತಂತ್ರ್ಯ ಬಂದಮೇಲೆ ನಂಬಿಸಿ ಮಾಂಸದ ತುಂಡಿಗೆ ಕಾಗೆಯನ್ನು ಹೊಗಳುವ ನರಿಯಂತೆ ಪಕ್ಷ ರಾಜಕಾರಣಿಗಳು ಅವನನ್ನು ’ನೇಗಿಲ ಯೋಗಿ’ ಎಂದು ಹೊಗಳುತ್ತಲೇ ಅವನ ಬದುಕನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ರಾಷ್ಟ್ರಕವಿ ಕುವೆಂಪು ಹೇಳುವಂತೆ ’ಕತ್ತಿಯಾರದಾದರೆ ಏನು? ನಮ್ಮವರೆ ಹದಹಾಕಿ ತಿವಿದರದು ಹೂವೆ?’ ಒಟ್ಟಾರೆ ವೈರಮುತ್ತು ಅವರ ’ಕಳ್ಳಿಗಾಡಿನ ಇತಿಹಾಸ’ ಇದು ರಾಮಾಯಣವಲ್ಲ ಗ್ರಾಮಾಯಣ!

ಕಡೆಯದಾಗಿ, ಮಣ್ಣಿನ ಮಕ್ಕಳ ಈ ದುರಂತ ಗಾಥೆ ಕೇವಲ ವೈಗೈ ನದಿ ಅಣೆಕಟ್ಟೆಯ ಹಿನ್ನೀರಿನಲ್ಲಿ ಮುಳುಗಿದ ’ಕಳ್ಳಿಪ್ಪಟ್ಟಿ’ ಗ್ರಾಮವೊಂದರ ಇತಿಹಾಸವಲ್ಲ.  ಇದು ನಾಡಿನ ಉದ್ದಗಲಕ್ಕೆ ಕಟ್ಟಿದ ಎಲ್ಲ ಅಣೆಕಟ್ಟೆಗಳ ಹಿನ್ನೀರಿನಲ್ಲಿ ಮುಳುಗಿ ಹೋದ ಲಕ್ಷಾಂತರ ರೈತರ, ಆದಿವಾಸಿ ಬುಡಕಟ್ಟು ಜನರ ಇತಿಹಾಸವೂ ಆಗಿದೆ. ಅಭಿವೃದ್ಧಿ ಹೆಸರಿನಲ್ಲಿ ನಿರ್ಮಿಸಿದ ಅಣೆಕಟ್ಟೆಗಳ ಹಿನ್ನೀರಿನಲ್ಲಿ ಮುಳುಗಿದ ಗ್ರಾಮಗಳಿಗೆ ಲೆಕ್ಕವಿಲ್ಲ. ಇದರಿಂದ ರೈತರಿಗೆ ಆದ ಪ್ರಯೋಜನಕ್ಕಿಂತ ಅನುಭವಿಸಿದ ನಷ್ಟವೇ ಅಧಿಕ. ಹಾಗಾದರೆ ನೀರಾವರಿ ಯೋಜನೆಗಳು ಬೇಡವೆ? ಬೇಕು, ನಿಜ. ಇಲ್ಲಿಯೂ ಜಲ ನಿರ್ವಹಣೆ ವೈಜ್ಞಾನಿಕವಾಗಿಲ್ಲ. ಎಷ್ಟೋ ಅಣೆಕಟ್ಟೆಗಳ ಜಲಾನಯನ ಪ್ರದೇಶವು ಬೆಳೆಗೆ ನಾಲಾಯಕ್ಕಾಗಿ ಎಷ್ಟೋಕಡೆ ಚೌಳು ತೇಲುತ್ತಿದೆ. ನೀರಾವರಿ ಆಗುವ ಮುನ್ನ ಕೇವಲ ಮಳೆ ನೀರಿನ ಒಣ ಬೇಸಾಯದ ಕಾಲಕ್ಕೆ ಅಲ್ಲಿ ಯಾವ ರೈತನೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಈಗೇಕೆ ಸಾಲುಗಟ್ಟಿ ಸಾಯುತ್ತಾರೆ? ಎಲ್ಲೋ ಲೆಕ್ಕಾಚಾರ ತಪ್ಪುತ್ತಿದೆಯಲ್ಲವೆ?

ವರ್ತಮಾನಕ್ಕೆ ಬಂದರೂ ಕೊರೊನಾ ಸಂದರ್ಭದಲ್ಲಿ ಕೇಂದ್ರ ಸರ್ಕಾರದ 2020ರ ತಿದ್ದುಪಡಿ ಮಾಡಿ ಜಾರಿಗೊಳಿಸಿರುವ ’ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ ಮಸೂದೆ; ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ; ಅಗತ್ಯ ಸರಕುಗಳ ಮಸೂದೆ’-ಇವು ಮೂರೂ ರೈತ ವಿರೋಧಿ ಆಗಿವೆ, ಈ ಮೂರನ್ನು ರದ್ದುಪಡಿಸಿ ಎಂದು ಕಳೆದ ಒಂದು ವರ್ಷ ಹಾಗಾಯ್ತು ದೆಹಲಿಗೆ ಕೂಡುವ ರಸ್ತೆಗಳಲ್ಲಿ ಅಹಿಂಸಾ ಸತ್ಯಾಗ್ರಹ ಹೂಡಿದ್ದಾರೆ ರೈತರು. ಆದರೆ ಕಾರ್ಪೊರೇಟ್ ಕಂಪನಿಗಳ ಪರ ಇರುವ ಕೇಂದ್ರ ಸರ್ಕಾರ ಅವರನ್ನು ’ಕ್ಯಾರೆ’ ಎಂದು ಮಾತಾಡಿಸಿಲ್ಲ. ಆದರೆ ಮಾತ್ರ ಅನ್ನದಾತರೆಂದು ಕರೆದು ’ಜೈ ಜವಾನ್ ಜೈ ಕಿಸಾನ್ ‘ಎಂದು ಘೋಷಣೆಗಳನ್ನು ಮೊಳಗಿಸುತ್ತಿದೆ. ಇದು ರೈತ ಪರವಾದ ಸರ್ಕಾರದ ಕಾರ್ಯವೈಖರಿ. ಮತದಾರ ಪ್ರಭುವೇ ಇದನ್ನು ನಿರ್ಣಯಿಸಬೇಕು.

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಅವರ ಪುಸ್ತಕಗಳಲ್ಲಿ ಕೆಲವು


ಇದನ್ನೂ ಓದಿ: ಹೊಸ ಪ್ರತಿಭೆಗಳಿಗೆ ಬೆಲ್ಲವಾದ ಬೇವಿನಗಿಡದ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...