Homeಅಂಕಣಗಳು’ಕಲ್ಲು ಹೂವಿನ ನೆರಳು’: ತಾಜಾ ನಿರೂಪಣೆಯ ಮತ್ತು ಸಂವೇದನೆಯುಳ್ಳ ಗ್ರಹಿಕೆಯ ಕಥೆಗಳು

’ಕಲ್ಲು ಹೂವಿನ ನೆರಳು’: ತಾಜಾ ನಿರೂಪಣೆಯ ಮತ್ತು ಸಂವೇದನೆಯುಳ್ಳ ಗ್ರಹಿಕೆಯ ಕಥೆಗಳು

- Advertisement -
- Advertisement -

ಕಥಾ ರಚನೆಗೆ ಬೇಕಾದ ಸರಕು ಎಲ್ಲೆಡೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರೂ ಕೂಡ, ಅದನ್ನು ಕಥೆಯಾಗಿಸುವ ನಿರೂಪಣಾ ಕೌಶಲ್ಯಕ್ಕೆ ಸಿದ್ಧತೆ ಮತ್ತು ಕಾರ್ಯಕ್ಷಮತೆಯ ಅಗತ್ಯವಿದೆ. ಅನಿಲ್ ಗುನ್ನಾಪುರ ಅವರ ’ಕಲ್ಲು ಹೂವಿನ ನೆರಳು’ ಸಂಕಲನದಲ್ಲಿ ಅಂತಹ ಕೌಶಲ್ಯದ ಛಾಯೆ ನಮಗೆ ಕಥೆಗಳ ಒಳಗಿಳಿದಂತೆ ಕಾಣತೊಡಗುತ್ತದೆ. ಕಥೆಗಾರನ ತನ್ಮಯತೆ ಮತ್ತು ಅಂತರಾಳದ ತುಡಿತಗಳಿಗೆ ಅಕ್ಷರದ ಬಣ್ಣ ಬಳಿದಾಗ, ಅದು ಕಲ್ಲು ಹೂವಿನ ನೆರಳಾಗಿ ವಿಶಿಷ್ಟವಾದ ಕಲಾಕೃತಿಯಾಗಿ ರೂಪುಗೊಳ್ಳುತ್ತದೆ. ತನ್ನ ಸುತ್ತಲಿನವರು ತಮ್ಮ ಬದುಕನ್ನು ಹೆಣೆದುಕೊಳ್ಳುವಂತೆಯೇ, ಕಥೆಗಾರ ಕಥೆಗಳ ಹೆಣೆಯುತ್ತ, ತನ್ನೊಳಗಿನ ಭಾವ ಪ್ರಪಂಚವನ್ನು ಲೋಕದೃಷ್ಟಿಯಿಂದ ಕಾಣಬಯಸುತ್ತಾನೆ. ಇಲ್ಲಿನ ಬಹುತೇಕ ಕಥೆಗಳು ಕೆಂಡದಂತೆ ಕಂಡರೂ ಕೂಡ ಮಂಜಿನ ಹಾಗೆ ತಣ್ಣನೆಯ ನೋವು, ಹತಾಶೆ, ಮೌನ ಮತ್ತು ಕ್ರೌರ್ಯದ ನಿಲುಗನ್ನಡಿಯೇ ಆಗಿವೆ. ಸುತ್ತಲಿನ ಲೋಕ ಮೀಮಾಂಸೆ ಒಂದೆಡೆಯಾದರೆ, ಬದುಕಿನ ಸಣ್ಣಸಣ್ಣ ತಿರುವುಗಳು ಕೂಡ ನೋವಿನ ನಗಾರಿ ಬಾರಿಸಲು ನಿಂತಿರುವಂತೆ ಕಾಣುವುದು ಇಲ್ಲಿನ ಕಥೆಗಳ ವಿಶೇಷ!

ಪ್ರತಿ ಕಥೆಯ ಸ್ಥಾಯಿಭಾವ, ಮೌನ ಮತ್ತು ಮುಗ್ಧತೆಯೇ ಆಗಿದ್ದರೂ, ಅದಕ್ಕಿರುವ ಸಂಚಾರಿ ಭಾವ ಮನೋಸಂಬಂಧವೆ ಆಗಿಬಿಡುತ್ತದೆ. ಕೊಳದೊಳಗೆ ಸಣ್ಣ ಕಲ್ಲು ಬಿದ್ದು ತರಂಗ ಎಬ್ಬಿಸುವ ಹಾಗೆ, ಸಣ್ಣದೊಂದು ಮಾತು, ಘಟನೆ, ಸ್ವಕಲ್ಪಿತ ವಿಚಾರಗಳಿಂದ ಮನಸ್ಸಿನಲ್ಲಿ ಏಳಬಹುದಾದ ತರಂಗಗಳ ಒಟ್ಟು ಮೊತ್ತವೇ ಈ ಕಥಾಗುಚ್ಚ ಎನ್ನಬಹುದು!

ಇಲ್ಲಿನ ಪ್ರತಿ ಕಥೆಗೂ ಅಂತರ್ ಸಂಬಂಧೀಯ ಗುಣ ಇದ್ದಂತೆ ಕಾಣುತ್ತಿದ್ದಂತೆಯೇ, ಇಲ್ಲವೆನಿಸಿಯೂಬಿಡುತ್ತದೆ. ’ಪರಿಮಳ’ ಕಥೆಯ ಪಮ್ಮಿಯೂ, ’ಗುಲ್ ಮೊಹರ್ ಹುಡುಗ’ನಾದ ಅಪ್ಪುವಿಗೂ ಸಾಮ್ಯತೆಯ ಕಲ್ಪಿಸಬಹುದು. ಇಬ್ಬರಲ್ಲೂ ಮುಗ್ಧತೆ ಸಾಮಾನ್ಯವೆನಿಸಿದರೂ, ಪಮ್ಮಿಗೆ ಸಂಬಂಧದ ಕುರಿತಿರುವ ಗೊಂದಲ ಅಪ್ಪುವಿಗಿಲ್ಲ.

ಆದರೆ, ’ಗುಲ್ ಮೊಹರ್ ಹುಡುಗ’ ಕಥೆಯಲ್ಲಿರುವ ಅರವಿಂದನಿಗೆ ಇರುವ ಲೈಂಗಿಕ ಆಸಕ್ತಿ ಹೆಂಡತಿಯಾದ ನಳಿನಿಯಲ್ಲಿ ಹೆಚ್ಚು ಕಾಣಿಸದು, ಅಂತೆಯೇ ’ಶ್ಯಾರಿಯ ಗಲ್ಲಾ ಡೆಬ್ಬಿ’ಯ ಬಾಯಕ್ಕನಿಗೆ ಇರುವ ಲೈಂಗಿಕ ಆಸಕ್ತಿ ಗಂಡ ಹುಚ್ಚಯ್ಯನಿಗೆ ಇಲ್ಲದಿರುವುದು ಒಂದು ರೀತಿಯ ವೈರುಧ್ಯವನ್ನು ಎದುರಿಟ್ಟ ಹಾಗಿದೆ. ಇದರಿಂದ ಪರಸ್ಪರ ಸಂಬಂಧಗಳ ನಡುವೆ ಬಿಟ್ಟಿರಬಹುದಾದ ಬಿರುಕು ಕೂಡ ಪ್ರಮುಖ ಪಾತ್ರವಹಿಸಿದೆ ಎನಿಸಬಹುದು. ’ಹುಚ್ಚಯ್ಯನ ಲೀಲೆ’ ಕಥೆಯಲ್ಲಿ ಬರುವ ಚೆನ್ನಪ್ಪನಿಗೂ ’ಕಮಲಜ್ಜಿ’ಗೂ ಇರಬಹುದಾದ ಉದಾರತೆಯ ಗುಣವು ಒಂದೇ ಅನ್ನಿಸಿದರೂ, ಚೆನ್ನಪ್ಪನದು ಊರ ಜನರ ಕುರಿತ ತನಗರಿವಿಲ್ಲದೆಯೇ ಬಂದಿರುವ ಅಘೋಷಿತ ಕಾಳಜಿಯಾದರೆ, ಕಮಲಜ್ಜಿಯದ್ದು ಮಗನ, ಮೊಮ್ಮಕ್ಕಳ ಕುರಿತ ಕೌಟುಂಬಿಕ ಕಾಳಜಿ, ಚೆನ್ನಪ್ಪ ಹುಚ್ಚಯ್ಯನಂತೆಯೇ ಆಧ್ಯಾತ್ಮದಲ್ಲಿ ಐಕ್ಯವಾದರೆ, ಕಮಲಜ್ಜಿ ಸಂಬಂಧಗಳ ಸೆಳೆತದಲ್ಲೆ ಮುಳುಗುತ್ತಾಳೆ.

ಅನಿಲ್ ಗುನ್ನಾಪುರ

ಇನ್ನೂ ’ಶ್ಯಾರಿಯ ಗಲ್ಲಾ ಡೆಬ್ಬಿ’ ಕಥೆಯಂತು ಓದುಗರ ಕಣ್ಣಂಚಿನಲ್ಲಿ ನೀರು ಚಿಮ್ಮಿಸಬಲ್ಲ ಅನಿರೀಕ್ಷಿತ ದುರಂತದ ಕಥೆ. ಬದುಕ ಕಟ್ಟಿಕೊಳ್ಳಲು ಊರಿಂದ ಊರಿಗೆ ಅಲೆಯುವ ಬದುಕಿನ ಬವಣೆ ಇಲ್ಲಿನ ಕೇಂದ್ರ ವಸ್ತು. ಬಾಯಕ್ಕನ ಬದುಕಿನ ಹಸಿವಿನೊಂದಿಗೆ, ಮಿಲನದ ಹಸಿವು, ಗಂಡ ಹುಚ್ಚಪ್ಪನ ಕುಡಿತದ ಹಸಿವು, ಮಗಳು ಶ್ಯಾರಿಯ ಅಕ್ಷರದ ಹಸಿವು ಅಲ್ಲದೇ ಕೊನೆಯಲ್ಲಿ ಅಪರಿಚಿತ ಆಸಾಮಿಯ ಅತ್ಯಾಚಾರದ ಹಸಿವಿನಿಂದಾಗಿ ಇಡೀ ಕುಟುಂಬವೇ ನರಳುವ ಮತ್ತು ಓದುಗರನ್ನು ವಿಚಿತ್ರ ಯಾತನೆಗೆ ಒಳಗು ಮಾಡುವ ಕಥೆಯಿದು.
ಇಲ್ಲಿನ ಎಂಟು ಕಥೆಗಳ ಪೈಕಿ ’ಚಿನ್ಮಯ ನಿಲಯ’ ಕಥೆಯ ವಸ್ತು ಕನ್ನಡ ಕಥಾ ಲೋಕಕ್ಕೆ ತೀರ ಹೊಸತು ಅನ್ನಿಸಿತು. ಬುದ್ಧಿಮಾಂದ್ಯರ ಲೈಂಗಿಕತೆಯ ಕುರಿತು ಮಿಶಲ್ ಫುಕೋ ಹೇಳಿದ ನಿಯಮವನ್ನು, ಕಥೆಗಾರ ಅರಿವಿದ್ದೋ, ಅರಿವಿಲ್ಲದೆಯೋ ಬಳಸಿಕೊಂಡಿದ್ದಾನೆ ಮತ್ತು ಯಶಸ್ವಿ ಕೂಡ ಆಗಿದ್ದಾನೆ. ಆ ಕಥೆಯ ನಿರೂಪಣೆ
ಕುತೂಹಲ ಅನಿಸುತ್ತದೆ, ಚಂಪಾ ಆಂಟಿ ಮತ್ತು ಸುಭಾಷ್ ಅಂಕಲ್‌ನ ಮನೆಯ ಕಥೆಯನ್ನು ಯಾರು ನಿರೂಪಣೆ ಮಾಡುತ್ತಿದ್ದಾರೆ ಎಂಬುದೇ ಗೊತ್ತಾಗುವುದಿಲ್ಲ. ಈ ಕಥೆಯಲ್ಲಿ ಬರುವ ಸಂಬಂಧಗಳ ಬಂಧ ಕೆಲವು ಸಲ ಬಿಗಿಯಾಗಿ, ಮತ್ತೂ ಗಟ್ಟಿಯಾಗಿ ಏಕತಾನತೆಯನ್ನು ಇಲ್ಲವಾಗಿಸುತ್ತದೆ. ಮೂವತ್ತೊಂದು ವರ್ಷದ ಚಿನ್ಮಯನ ಅಂಗಾಂಗವು ಚಂದ್ರವ್ವನ ಸ್ಪರ್ಷದಿಂದ ಜಾಗೃತವಾಗುವ ಮತ್ತು ಪರಸ್ಪರರು ಬೆರೆಯುವುದು ಅವನ ಬದುಕಿನ ಚೈತನ್ಯಕ್ಕೆ ಕಾರಣವಾಯಿತೇ? ಅಥವಾ ಅವನಲ್ಲಾದ ಬದಲಾವಣೆ ಮನುಷ್ಯ ಸಹಜವಾದದ್ದೆ? ಎಂಬ ಹಲವು ವಿಚಾರವನ್ನು ವಿವೇಚಿಸುವಂತೆ ಮಾಡುತ್ತ ನಿರೂಪಕ ನಿರ್ಗಮಿಸುತ್ತಾನೆ.

’ಚುಕ್ಕಿ ಕೇಳಿದ ಕತೆ’ ವಿಶೇಷವಾಗಿ ನಿರೂಪಿಸಿದ ಒಂದು ಕಥಾವಸ್ತು. ಕಥೆಯೊಳಗೊಂದು ಕಥೆ ಹೆಣೆಯುವ ಕುಸುರಿ ಕೆಲಸದಲ್ಲಿ ಕಥೆಗಾರ ಗೆದ್ದಿದ್ದಾನೆ. ’ಅವನಿ’ ಕಥೆಯೂ ಕೂಡ ಸಹಜ ಕುತೂಹಲದಿಂದ ಏನನ್ನೋ ಹೇಳಲುಹೋಗಿ, ಕೊನೆಗೆ ಏನೂ ಹೇಳದೆ ದೃಶ್ಯಗಳನ್ನಷ್ಟೆ ಎದುರಿಟ್ಟು ಸುಂದರ ಚಿತ್ರಾಕೃತಿಯಾಗಿ ನಿಂತುಬಿಡುತ್ತದೆ.

ಹೀಗೆ ಕಥೆಗಳ ಚೌಕಟ್ಟಿನಲ್ಲಿ ತುಂಬಬಹುದಾದ ಚಿತ್ರಗಳನ್ನು ಕಥೆಗಾರ ತನ್ನ ಅನುಭವದ ಕುಂಚದಿಂದ ಚಿತ್ರಿಸಲು ಪ್ರಯತ್ನಪಟ್ಟಿದ್ದಾನೆ. ಕುತೂಹಲದ ನಿರೂಪಣೆ ಮತ್ತು ಭಾಷಾ ಸೊಗಡಿನ ವೈಶಿಷ್ಟ್ಯತೆ ಆಕರ್ಷಕವಾಗಿದೆ. ಕಥೆಯ ಕೊನೆಯನ್ನು ಕೊನೆಯಾಗುವಂತೆಯೂ ಮತ್ತು ಕೊನೆಗಾಣದಂತೆಯೂ ಎಲ್ಲವನ್ನೂ ತಾನೆ ಹೇಳಿ ಮುಗಿಸಬೇಕೆಂಬ ವಾಚಾಳಿತನ ಕಥೆಗಾರನಿಗಿಲ್ಲ. ಒಟ್ಟಿನಲ್ಲಿ ಹೊಸ ತಲೆಮಾರಿನ ಕಥೆಗಳಿಗೆ ವಿಶೇಷ ಆಯಾಮ ಇರುವುದಂತೂ ಸುಳ್ಳಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others

ಚಾಂದ್ ಪಾಷ ಎನ್ ಎಸ್

ಚಾಂದ್ ಪಾಷ ಎನ್ ಎಸ್
ಸಂಶೋಧನಾ ವಿದ್ಯಾರ್ಥಿ, ಕನ್ನಡ ಅಧ್ಯಯನ ಕೇಂದ್ರ. ಬೆಂಗಳೂರು ವಿ ವಿ


ಇದನ್ನೂ ಓದಿ: ನೀಲಕುರಿಂಜಿ: ಹೊಸ ಅಸ್ಮಿತೆಗಳ ಆತ್ಮ ನಿವೇದನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...