Homeಮುಖಪುಟಎಚ್ಚರಗೊಂಡವರ ಕನಸು; ವೋಕ್ ಸಂಸ್ಕೃತಿ-ಕಥನ ಮತ್ತು ತಾತ್ವಿಕ-ಮಂಥನ

ಎಚ್ಚರಗೊಂಡವರ ಕನಸು; ವೋಕ್ ಸಂಸ್ಕೃತಿ-ಕಥನ ಮತ್ತು ತಾತ್ವಿಕ-ಮಂಥನ

- Advertisement -
- Advertisement -

ಆವಾಗಾವಾಗ ಕೇಳಿಬರುವ ಈ ವಾದಗಳನ್ನು ಗಮನಿಸಿ

ಅ) ’ನಾನೇನು ಕೈಗೆ ಬಳೆ ತೊಟ್ಕೊಂಡಿಲ್ಲ’, ’ಉದ್ಯೋಗಿಲ್ಲದ ಆಚಾರಿ..’, ’ಅದ್ಯಾಕೆ ಕೋಲೆಬಸವನ ಹಾಗೆ ತಲೆ ಅಲ್ಲಾಡಿಸೀಯೆ’; ಈ ಬಗೆಯ, ಶೋಷಿತ ಸಮುದಾಯಗಳನ್ನೇ ಗುರಿಯಾಗಿಸಿರುವ ಮಾತುಗಳನ್ನು ಸಾರ್ವಜನಿಕವಾಗಿ ಆಡಬಾರದು. ಒಂದು ನಿರ್ದಿಷ್ಟ ಜಾತಿ ಇಲ್ಲ, ಜನಾಂಗವನ್ನು ಗುರಿಯಾಗಿಸಿಕೊಂಡಿರುವ ’ಚಿಂಕಿ’, ’ಹಜಾಮ’, ’ಚಕ್ಕಾ’ ಮುಂತಾದ ಅವಹೇಳನಕಾರಿ ಪದಗಳನ್ನೂ ನಾವು ನಮ್ಮ ಮಾತಿನಿಂದ ಕೈಬಿಡಬೇಕು.

ಆ) ಶೋಷಿತ ಸಮುದಾಯಗಳು ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಸಂಘಟಿತರಾಗಬಹುದು. ಅದು ಅವರ ಏಳಿಗೆಗೆ ಪೂರಕವಾಗಲಿದೆ. ಆದರೆ ಶೋಷಕ ಸಮುದಾಯಗಳು ಹಾಗೆ ಸಂಘಟಿತರಾಗುವುದು ಸಲ್ಲದು. ಅವರ ಸಂಸ್ಕೃತಿಯನ್ನು ಸಾರ್ವಜನಿಕವಾಗಿ ಮೆರೆಸುವುದೂ ಸಲ್ಲದು. ಇನ್ನು, ಶೋಷಿತ ಸಮುದಾಯಗಳಷ್ಟೇ ತಮ್ಮ ಬದುಕನ್ನು ’ಅಥೆಂಟಿಕ್’ ಆಗಿ ಸಾಹಿತ್ಯದಲ್ಲೋ, ಕಲೆಯಲ್ಲೋ ಚಿತ್ರಿಸಬಲ್ಲವು. ಸಾಮಾಜಿಕ
ನ್ಯಾಯದ ಕುರಿತು ಈ ಸಮುದಾಯಗಳಿಂದ ಬರುವ ದನಿಗಳಷ್ಟೇ ಸತ್ಯವಾದದ್ದು ಮತ್ತು ಸರಿಯಾದ ಆಶಯಗಳನ್ನು ಹೆಂದಿರುವಂಥದ್ದು.

ಇ) ಯಾವುದೇ ಹೆಣ್ಣು ಗಂಡಸೊಬ್ಬನ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದರೆ ಮೊದಲು ಆ ಗಂಡಸನ್ನು ಯಾವುದೇ ವಿಚಾರಣೆಯಿಲ್ಲದೆಯೇ ಅರೆಸ್ಟ್ ಮಾಡಬೇಕು. ಇಂಥ ಪ್ರಕರಣಗಳಲ್ಲಿ ಹೆಣ್ಣಿನ ಮಾತನ್ನು ಇಡಿಯಾಗಿ ನಂಬಬೇಕು ಹಾಗೂ ನ್ಯಾಯಾಂಗ ತನಿಖೆ ಶುರುವಾಗುವವರೆಗೂ ಆ ಗಂಡಸು ಯಾವುದೇ ರೀತಿಯಲ್ಲಿ ಪುರುಷಾಧಿಕಾರದ ಸವಲತ್ತನ್ನು ಬಳಸಿಕೊಳ್ಳದಂತೆ ನೋಡಿಕೊಳ್ಳಬೇಕು.

ಈ) ಜನವಿರೋಧಿ ಸರಕಾರದ ಅಂಗ ಸಂಸ್ಥೆಯೋ ಇಲ್ಲ, ಆ ಸರಕಾರ ಪ್ರಭಾವಿಸಬಲ್ಲ ಸಂಸ್ಥೆಯೋ ನೀಡಿದ ಪ್ರಶಸ್ತಿಗಳನ್ನು ಜನಪರ ಕಾಳಜಿ ಇರುವವರು ಸ್ವೀಕರಿಸಬಾರದು. ಇಂಥ ಸಂದರ್ಭದಲ್ಲಿ ಪ್ರಶಸ್ತಿ ನಿರಾಕರಣೆಯು ಒಂದು ಉನ್ನತ ಮೌಲ್ಯವಾಗಿರುತ್ತದೆ. ಇದನ್ನು ಮನಗಾಣದವರು ತಾವು ಎಷ್ಟೇ ಜನಪರರೆಂದು ಬಿಂಬಿಸಿಕೊಂಡರೂ ಹಿಪ್ಪೊಕ್ರೈಟ್‌ಗಳು, ನುಡಿ-ನಡೆ ಒಂದಾಗಿಲ್ಲದವರು.

ಈ ಬಗೆಯ ನಿಲುವುಗಳನ್ನು ನಾವು ಪ್ರಗತಿಪರ, ಲಿಬರಲ್, ಎಡ, ಅಂಬೇಡ್ಕರ್‌ವಾದಿ, ಸ್ತ್ರೀವಾದಿ ವಲಯಗಳಲ್ಲಿ ಗುರುತಿಸಬಹುದು. ನಿಯೋಲಿಬರಲ್ ಯುಗದ ಸಾಮಾಜಿಕ ಜಾಲತಾಣಗಳ ಬಬಲ್ ಯುನಿವರ್‍ಸ್‌ಗಳಲ್ಲಿ ಇಂಥ ನಿಲುವುಗಳು ವ್ಯಾಪಕವಾಗಿ ಹರಡಿವೆಯಲ್ಲದೆ ತೀವ್ರ ವಿಮರ್ಶೆ, ವಿರೋಧ ಮತ್ತು ಕುಹಕಗಳಿಗೂ ತುತ್ತಾಗಿವೆ. ಇದು ಭಾರತದಲ್ಲಿನ ವಿದ್ಯಮಾನವಷ್ಟೇ ಅಲ್ಲ. ಇಡೀ ಜಗತ್ತಿನಲ್ಲಿ, ಅದರಲ್ಲೂ ಮುಖ್ಯವಾಗಿ ಅಮೆರಿಕ ಸಂಯುಕ್ತ ಸಂಸ್ಥಾನ (ಯುಎಸ್‌ಎ) ಹಾಗೂ ಯುರೋಪಿನಲ್ಲಿ ಈ ವಿದ್ಯಮಾನವು ಸಾಮಾಜಿಕ ಜಾಲತಾಣಗಳಾಚೆಗೂ ವಿಸ್ತರಿಸಿಕೊಂಡು, ಸಂಸದೀಯ ಚುನಾವಣಾ ರಾಜಕಾರಣ ಮತ್ತು ಅಕೆಡೆಮಿಕ್ ಡಿಸ್ಕೋರ್‍ಸ್‌ಗಳನ್ನೂ ಪ್ರಭಾವಿಸುವಷ್ಟು ಬಲಗೊಂಡಿದೆ. ಅಲ್ಲದೆ, ಪಾಶ್ಚಿಮಾತ್ಯ ಸಂಸ್ಕೃತಿಯ ಅಳಿವು-ಉಳಿವಿನ ಪ್ರಶ್ನೆಯೊಂದಿಗೂ ಇದು ಸಂಬಂಧ ಹೆಂದಿದೆ. ಈ ವಿದ್ಯಮಾನ ಮತ್ತು ಇದನ್ನು ರೂಪಿಸಿದ ತಾತ್ವಿಕತೆಯ ವಿರುದ್ಧ ಕೆಂಡಕಾರುತ್ತಲೇ ಪಬ್ಲಿಕ್ ಇಂಟಲೆಕ್ಚುವಲ್‌ಗಳು ಅಲ್ಲಿ, ಅಂದರೆ ಪಶ್ಚಿಮ ನಾಡುಗಳಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಭಾರತದಲ್ಲೂ ಆ ಬುದ್ಧಿಜೀವಿಗಳ ಪ್ರತಿರೂಪಗಳಿವೆ ಹಾಗೂ ಅಂಥವರ ಅಭಿಮಾನಿ ಬಳಗಗಳೂ ಸೃಷ್ಟಿಯಾಗಿವೆ. ಒಂದಿಷ್ಟು ಜನರ ಪಾಲಿಗೆ ಸಮಾನತೆಯ ಏಕೈಕ ದಾರಿಯಾಗಿರುವ, ಇನ್ನೊಂದಿಷ್ಟು ಮಂದಿಗರ ಪಾಲಿಗೆ ರಾಷ್ಟ್ರದ ಸಂಸ್ಕೃತಿ ಮತ್ತು ಲಿಬರಲಿಸಂನ ಮೂಲತತ್ವಗಳನ್ನು ಹಾಳುಗೆಡಹುವ ಚಳವಳಿಯಾಗಿರುವ ಹಾಗೂ ಮತ್ತೊಂದಿಷ್ಟು ಜನರ ಅಭಿಪ್ರಾಯದಲ್ಲಿ ಯಾವ ಸೆಮೆಟಿಕ್ ಮತ-ಧರ್ಮಕ್ಕೂ ಕಡಿಮೆಯಿಲ್ಲದಂತೆ ಏಕರೂಪೀಕರಣವನ್ನು (ಹೆಮೊಜಿನೈಜ಼ೇಶನ್), ನೈತಿಕ ಮೇಲರಿಮೆಯನ್ನು ಮತ್ತು ಜನರ ಬದುಕಿನ ಮೇಲೆ ಹಿಡಿತವನ್ನು ಸಾಧಿಸುತ್ತಿರುವ ಆ ವಿದ್ಯಮಾನವೇ ವೋಕಿಸಂ. ಇದರ ನಡೆ-ನುಡಿಯೇ ವೋಕ್ ಸಂಸ್ಕೃತಿ.

ವೋಕ್ ಎಂದರೆ ಏನು?

ಇಂಗ್ಲಿಶ್‌ನಲ್ಲಿ ವೋಕ್ ಎಂದರೆ ’ಎಚ್ಚರಗೊಂಡ’ ಎಂದರ್ಥ. ಸ್ಟೇ ವೋಕ್ ಎಂದರೆ ಎಚ್ಚರಗೊಂಡ ಸ್ಥಿತಿಯಲ್ಲೇ ಇರು ಎಂದರ್ಥ. ಯಾವುದರ ಕುರಿತು ಎಚ್ಚರ? 20ನೇ ಶತಮಾನದ ಕೊನೆಗೆ ಮುನ್ನೆಲೆಗೆ ಬಂದ, ಈಗಲೂ ಚಲಾವಣೆಯಲ್ಲಿರುವ ವೋಕ್‌ನ ವ್ಯಾಖ್ಯಾನದ ಪ್ರಕಾರ, ಎಲ್ಲ ಬಗೆಯ ಅಸಮಾನತೆ ಮತ್ತು ದಬ್ಬಾಳಿಕೆಗಳ ಕುರಿತು ಎಚ್ಚರದಿಂದ ಇರುವುದು. ನಮ್ಮ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಂರಚನೆಗಳಲ್ಲಿ ಅಸಮಾನತೆ ಮತ್ತು ದಬ್ಬಾಳಿಕೆಗಳು ಹಾಸುಹೊಕ್ಕಿವೆಯೆಂದು ಹೇಳುವ, ಅವನ್ನು ಗುರುತಿಸಿ, ಪ್ರತಿಭಟಿಸುವ ಅಗತ್ಯವಿದೆಯೆಂದು ಸಾರುವ ತತ್ವವೇ ವೋಕಿಸಂ. ಈ ತತ್ವದ ಆಧಾರದಲ್ಲಿ ರೂಪುಗೊಳ್ಳುವ ಸಾಮೂಹಿಕ ನಡವಳಿಕೆಗಳ ಮೊತ್ತವೇ ವೋಕ್ ಸಂಸ್ಕೃತಿ.

ವೋಕ್ ಸಂಸ್ಕೃತಿಯ ತವರು ಪಾಶ್ಚಿಮಾತ್ಯ ನಾಡುಗಳೆಂದು ಹೇಳಬಹುದಾದರೂ, ಇದರ ಆದಿಮ ರೂಪಗಳನ್ನು ಬೇರೆಬೇರೆ ದೇಶಗಳಲ್ಲಿ 19ನೆಯ ಶತಮಾನದಿಂದಲೂ ಗುರುತಿಸಬಹುದಾಗಿದೆ. ಇನ್ನು, ಪಶ್ಚಿಮ ದೇಶಗಳಲ್ಲೂ ವೋಕ್ ಪದದ ಅರ್ಥ ಮತ್ತು ಬಳಕೆಯ ಸಂದರ್ಭಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತ ಬಂದಿವೆ. ವೋಕ್ ಎಂಬ ಪರಿಭಾಷೆ ಮತ್ತು ಪರಿಕಲ್ಪನೆಯು ನಡೆದು ಬಂದ ದಾರಿಯನ್ನಿಲ್ಲಿ ವಿವರಿಸಲು ಹೆಗದೆ, ಈ ಹೆತ್ತಿಗೆ ಪ್ರಸ್ತುತವಾಗಿರುವ ಅರ್ಥದ ಚೌಕಟ್ಟಿನಲ್ಲಷ್ಟೇ ಚರ್ಚೆಯನ್ನು ನಡೆಸುತ್ತೇನೆ. 21ನೇ ಶತಮಾನದಲ್ಲಿ ವೋಕ್ ಸಂಸ್ಕೃತಿಯು ಜನಪ್ರಿಯಗೊಳ್ಳಲು ಪ್ರಮುಖ ಕಾರಣಗಳು ಪಶ್ಚಿಮದಲ್ಲಿ ನಡೆದ ಎರಡು ಹೆರಾಟಗಳೆಂದು ಗುರುತಿಸಬಹುದು. ಒಂದು, ಕ್ವೀರ್ (ಎಲ್‌ಜಿಬಿಟಿ) ಅಸ್ಮಿತೆಯನ್ನು ಗುರುತಿಸಲು ಮತ್ತು ಮಾನ್ಯಮಾಡಲು ನಡೆದ ಹೆರಾಟ. ಇನ್ನೊಂದು, ಬಿಳಿವರ್ಣದ ಪೋಲೀಸರು 18 ವರ್ಷದ ಕಪ್ಪುವರ್ಣೀಯ ಮೈಕೆಲ್ ಬ್ರಾನ್‌ನನ್ನು ಎನ್‌ಕೌಂಟರ್ ಮಾಡಿದ ಬಳಿಕ ಅಮೆರಿಕದಾದ್ಯಂತ ಹಬ್ಬಿದ ಬ್ಲಾಕ್ ಲೈವ್ಸ್‌ಮ್ಯಾಟರ್ ಜಾಗೃತಿ ಚಳವಳಿ. ಹೀಗೆ, ಲಿಂಗಾನುಭವದ (ಜೆಂಡರ್‌ನ) ಮುಕ್ತ ಆಯ್ಕೆ ಮತ್ತು ಮಾನ್ಯತೆಯನ್ನೂ, ವರ್ಣ ಮತ್ತು ಜನಾಂಗೀಯ ತಾರತಮ್ಯ ಹಾಗೂ ದಬ್ಬಾಳಿಕೆಯನ್ನೂ ಕೇಂದ್ರವಾಗಿರಿಸಿಕೊಂಡು ಕೊನರಿದ 21ನೇ ಶತಮಾನದ ವೋಕ್ ಸಂಸ್ಕೃತಿಯು ಅಲ್ಪಸಂಖ್ಯಾತರು, ಮಹಿಳೆಯರು (ಮೀಟೂ ಚಳವಳಿಯನ್ನು ನೆನಪಿಸಿಕೊಳ್ಳಿ), ವಲಸಿಗರು ಮತ್ತು ಹಿಂದುಳಿದ ಜಾತಿ, ಜನಾಂಗಗಳ ಹಕ್ಕುಗಳ ಕುರಿತಾಗಿಯೂ ಚಿಂತಿಸುವ ಹಾಗೂ ಅವರೆಲ್ಲರ ಪರ ದನಿ ಎತ್ತುವ ಉದ್ದೇಶಗಳಿಗೆ ತನ್ನನ್ನು ತಾನು ವಿಸ್ತರಿಸಿಕೊಂಡು ೨೦೨೨ರ ಹೊಸ್ತಿಲನ್ನು ಪ್ರವೇಶಿಸಿದೆ.

ಹಾನ್ಸ್ ಜಾರ್ಜ್ ಮೊಯ್ಲರ್‌

ಪ್ರಸ್ತುತ ಪ್ರಚಲಿತದಲ್ಲಿರುವ ವೋಕ್ ಸಂಸ್ಕೃತಿಯ ಚಾಲಕ ಚಿಂತನೆಗಳು ಇಂಟರ್‌ಸೆಕ್ಷನಾಲಿಟಿ (ಪರಸ್ಪರ ಅಡ್ಡಹಾಯುವ ವಿಭಾಗಗಳು) ಎನ್ನುವ ಸಾಮಾಜಿಕ ಸಿದ್ದಾಂತದ ಮೇಲೆ ನಿಂತಿವೆ. ಇದನ್ನು ಮೊದಲ ಸಲ ಬಳಕೆಗೆ ತಂದವರು ಅಮೆರಿಕ ನಾಗರಿಕ ಹಕ್ಕುಗಳ ಹೋರಾಟಗಾರ್ತಿ ಕಿಂಬರ್‍ಲೆ ವಿಲಿಯಮ್ಸ್ ಕ್ರೆನ್‌ಶಾ. ಈ ಸಿದ್ಧಾಂತವನ್ನು ಪುಟ್ಟದಾಗಿ ಹೀಗೆ ಹೇಳಬಹುದು – “ನಮ್ಮ ಸಮಾಜವು ಲಿಂಗ, ವರ್ಣ, ಜಾತಿ, ಧರ್ಮ, ವರ್ಗ ಮುಂತಾದ ಅಸ್ಮಿತೆಗಳ ಆಧಾರದಲ್ಲಿ ಹಲವು ಅಧಿಕಾರ ಸಂರಚನೆಗಳನ್ನು ಹೊಂದಿರುತ್ತದೆ. ಪ್ರತಿ ವ್ಯಕ್ತಿಯ ಸಾಮಾಜಿಕ ಮತ್ತು ರಾಜಕೀಯ ಅಸ್ಮಿತೆಯು, ಒಂದಕ್ಕೊಂದು ಬೆಸೆದುಕೊಂಡಿರುತ್ತವೆ. ಈ ಸಂರಚನೆಗಳಲ್ಲಿ ಆ ಅಸ್ಮಿತೆಗಳು ಯಾವ ಸ್ಥಾನಮಾನವನ್ನು ಪಡೆದಿದೆಯೋ ಅದಕ್ಕೆ ಅನುಗುಣವಾಗಿ ಗೌರವಾದರಗಳನ್ನು ಪಡೆಯುತ್ತದೆ. ಈ ಸಂರಚನೆಗಳಲ್ಲಿ ಅತ್ಯಂತ ಶೋಷಿತ ಸಮುದಾಯಗಳಿಗೆ ಸೇರಿದ ವ್ಯಕ್ತಿಗಳಿಗೆ ತಮ್ಮ ಹಕ್ಕು ಮತ್ತು ಆತ್ಮಗೌರವಕ್ಕಾಗಿ ಒತ್ತಾಯ ಮಾಡಲು ಹೆಚ್ಚಿನ ಅವಕಾಶ ನೀಡಬೇಕಾಗುತ್ತದೆ. ಇಲ್ಲಿ ಶೋಷಿತ ಸಮುದಾಯಗಳ ಹಕ್ಕೊತ್ತಾಯವು ಶೋಷಕ ಸಮುದಾಯಗಳ ಹಕ್ಕೊತ್ತಾಯಕ್ಕಿಂತಲೂ ಹೆಚ್ಚಿನ ಮಹತ್ವವನ್ನು ಪಡೆದಿರುತ್ತದೆ”. ವೋಕ್ ಸಂಸ್ಕೃತಿಯ ಭಾಗವಾಗಿರುವವರೆಲ್ಲರೂ ಈ ಸಿದ್ಧಾಂತವನ್ನು ಪ್ರಜ್ಞಾಪೂರ್ವಕವಾಗಿ ತಿಳಿದಿದ್ದಾರೆ ಮತ್ತು ಒಪ್ಪಿದ್ದಾರೆ ಎಂದಲ್ಲ. ಬದಲಿಗೆ, ಪ್ರಸ್ತುತ ಬಂಡವಾಳಶಾಹಿ ಸರಕುಸಂಸ್ಕೃತಿಯು ಬಿತ್ತಿದ ಕೆಲವು ಮೌಲ್ಯಗಳು, ಪ್ರಜ್ಞಾಪೂರ್ವಕ ಅರಿವು ಮತ್ತು ವಿಮರ್ಶೆಗೆ ಒಳಪಡೆದೆಯೇ ಹೇಗೆ ನಮ್ಮ ಬದುಕಿನ ಸಹಜ ಮೌಲ್ಯಗಳೇ ಆಗಿವೆಯೋ ಅಂತೆಯೇ ವೋಕ್ ಸಂಸ್ಕೃತಿಯೂ ಹಲವರ ಬದುಕಿನ ಭಾಗವಾಗಿರಲೂಬಹುದೆಂದು ಹೇಳಬಹುದು.

ಭಾರತದಲ್ಲಿ ವೋಕ್‌ಗೆ ಸಂಬಂಧಿಸಿದ ಪರಿಭಾಷೆಗಳ ಬಳಕೆ ಬಹಳವೇ ಕಡಿಮೆಯೆಂದು ಹೇಳಬಹುದು. ಅವನ್ನು ಬಳಸುವವರು ಕೂಡ ನೆಗೆಟಿವ್ ಅರ್ಥದಲ್ಲೇ ಬಳಸುತ್ತಿದ್ದಾರೆ. ಭಾರತದ ಸಮಾಜಗಳನ್ನು ಒಡೆದು, ಸನಾತನ ಹಿಂದೂ ಸಂಸ್ಕೃತಿಯನ್ನು ಹಾಳುಮಾಡುವ ಹುನ್ನಾರದಿಂದ ವೋಕ್ ಸಂಸ್ಕೃತಿ ನಮ್ಮ ದೇಶದೊಳಕ್ಕೆ ಕಾಲಿರಿಸಿದೆ
ಎನ್ನುವುದು ಆ ಬೆರಳೆಣಿಕೆಯಷ್ಟು ಜನರ ಅಭಿಪ್ರಾಯ. ಹಾಗಾಗಿ, ವೋಕ್ ಎಂದರೆ ಎಡಪಂಥೀಯ ಚಿಂತನೆ, ರಾಷ್ಟ್ರವಿರೋಧಿ ಸಂಸ್ಕೃತಿ ಎಂಬ ಆರೋಪಗಳಿಲ್ಲಿ ಕೇಳಿಬರುತ್ತವೆ. ಈ ಸಂದರ್ಭದಲ್ಲಿ ಕೆಲವು ಪ್ರಶ್ನೆಗಳು ಮುಖ್ಯವಾಗುತ್ತವೆ. ಭಾರತದಲ್ಲಿ ನಿಜಕ್ಕೂ ವೋಕ್ ಸಂಸ್ಕೃತಿಯು ನೆಲೆಗೊಂಡಿದೆಯೇ? ಹೌದು ಎಂದಾದಲ್ಲಿ, ಅದು ಪಶ್ಚಿಮದ ನೇರ ಅನುಕರಣೆಯೇ? ಜಾತಿ, ಲಿಂಗ, ಭಾಷೆಯ ಹೆಸರಿನಲ್ಲಿ ನಡೆಯುವ ಅಸ್ಮಿತೆ ರಾಜಕಾರಣಕ್ಕೂ (ಐಡೆಂಟಿಟಿ ಪೊಲಿಟಿಕ್ಸ್‌ಗೂ) ವೋಕ್ ಸಂಸ್ಕೃತಿಗೂ ನಂಟಿದೆಯೇ? ವೋಕ್ ನಿಜಕ್ಕೂ ಒಂದು ಎಡಪಂಥೀಯ ವಿಚಾರಧಾರೆಯೇ? ಈ ಎಲ್ಲ ಪ್ರಶ್ನೆಗಳಿಗೆ ಸ್ಥೂಲವಾಗಿಯಾದರೂ ಉತ್ತರಗಳನ್ನು ಪಡೆದುಕೊಳ್ಳುವ ಪ್ರಯತ್ನವನ್ನು ಮುಂದೆ ಮಾಡಲಾಗಿದೆ.

ವೋಕ್ ಮತ್ತು ಅಸ್ಮಿತೆ ರಾಜಕಾರಣ

ಅಸ್ಮಿತೆ ರಾಜಕಾರಣವು ಸಾತ್ವಿಕ ರಾಜಕಾರಣಕ್ಕೆ ಅಷ್ಟು ಸರಿಯಾಗಿ ಹೆಂದುವ ಮಾದರಿಯಲ್ಲ, ದೀರ್ಘಾವಧಿಯಲ್ಲಿ ಒಳಿತಿಗಿಂತ ಕೆಡುಕೇ ಹೆಚ್ಚು ಎಂಬ ನಂಬಿಕೆ ಭಾರತದ ಶೈಕ್ಷಣಿಕ ವಲಯದಲ್ಲಿದೆ. ಆದರೆ ಪಶ್ಚಿಮದಲ್ಲಿ, ಅಸ್ಮಿತೆ ರಾಜಕಾರಣವನ್ನು ಒಂದು ತತ್ವವಾಗಿಯೂ, ಸಮರ್ಥ ಕ್ರಿಯಾಚರಣೆಯಾಗಿಯೂ ಬಿಂಬಿಸುವ ಮತ್ತು ಬೆಂಬಲಿಸುವ ಚಿಂತಕರ ದೊಡ್ಡ ಪಡೆಯೇ ಇದೆ. ಒಬ್ಬ ವ್ಯಕ್ತಿಗಿರುವ ಧಾರ್ಮಿಕ, ಕೌಟುಂಬಿಕ, ಭಾಷಿಕ, ಸಾಮಾಜಿಕ (ಭಾರತದ ಸಂದರ್ಭದಲ್ಲಿ ಜಾತೀಯ) ಅಸ್ಮಿತೆಗಳಿಗೆ ತಕ್ಕ ಗೌರವ ಸಿಗಬೇಕು ಹಾಗೂ ಆ ಅಸ್ಮಿತೆಗಳ ಆಧಾರದಲ್ಲಿ ತಾರತಮ್ಯ ಅಳಿಯಬೇಕು ಎಂಬ ನಿಲುವು ಅಸ್ಮಿತೆ ರಾಜಕಾರಣವನ್ನು ಮುನ್ನಡೆಸುವ ಉರುವಲಾಗಿದೆ. ಆದರೆ ಈ ಎಲ್ಲ ಅಸ್ಮಿತೆಗಳೂ ಸಾಮುದಾಯಿಕ ಅಸ್ಮಿತೆಗಳಾದ್ದರಿಂದ ಈ ರಾಜಕಾರಣವು ವ್ಯಕ್ತಿಯ ವೈಯಕ್ತಿಕ ಹಿತಾಸಕ್ತಿಯ ಬದಲು ಸಾಮುದಾಯಿಕ ಹಿತಾಸಕ್ತಿಯನ್ನೇ ಕೇಂದ್ರವಾಗಿಸಿಕೊಂಡಿದೆಯೆಂದು ಹೇಳಬಹುದು. ಕೆಲವೇ ವ್ಯಕ್ತಿಗಳ ಹಿತಾಸಕ್ತಿಗಳು ಸಾಮುದಾಯಿಕ ಚಹರೆಯನ್ನು ಪಡೆಯುವ ಮತ್ತು ಸಾಮುದಾಯಿಕ ಹಿತಾಸಕ್ತಿಗಳ ರಕ್ಷಣೆಯ ಹೆಸರಲ್ಲಿ ನಡೆಯುವ ರಾಜಕಾರಣವು ವೈಯಕ್ತಿಕ ಹಿತಾಸಕ್ತಿಗಳನ್ನೂ ಮರುನಿರೂಪಿಸುವ ಸಂಕೀರ್ಣ ಪರಿಸರದಲ್ಲಿ ಅಸ್ಮಿತೆ ರಾಜಕಾರಣವನ್ನು ಒಂದು ಸೂತ್ರದಲ್ಲಿ ವಿವರಿಸಲು ಬರುವುದಿಲ್ಲ, ನಿಜ. ಹೀಗಿದ್ದೂ, ವಿವಿಧ ಸ್ವರೂಪಗಳ ಅಸ್ಮಿತೆ ರಾಜಕಾರಣಗಳಲ್ಲಿ ’ಅಸ್ಮಿತೆ’ಯ ಪ್ರಶ್ನೆಯು ಕೇಂದ್ರವಾಗಿರುವುದರಿಂದ ಮತ್ತು ಅದು ನಮ್ಮ ದಿನನಿತ್ಯದ ಒಳ-ಹೊರ ಬಾಳನ್ನೂ ನಿಯಂತ್ರಿಸಬಲ್ಲ ಕಸುವು ಪಡೆದಿರುವುದರಿಂದ ಅಸ್ಮಿತೆ ಎಂಬ ವಿದ್ಯಮಾನ ರೂಪುವಡೆಯುವ ಪ್ರಕ್ರಿಯೆಯನ್ನು ವಿಶೇಷವಾಗಿ ಅಧ್ಯಯನ ಮಾಡಬೇಕಾಗಿರುವುದು ಇಂದಿನ ಶೈಕ್ಷಣಿಕ ಅಗತ್ಯವಷ್ಟೇ ಅಲ್ಲ, ಹೊಟ್ಟೆ-ಬಟ್ಟೆಗೆ ಸಂಬಂಧಿಸಿದ ಜರೂರೂ ಆಗಿದೆ.

ಕಿಂಬರ್‍ಲೆ ವಿಲಿಯಮ್ಸ್ ಕ್ರೆನ್‌ಶಾ

ಈ ಬರಹದ ಆದಿಯಲ್ಲಿ ಉಲ್ಲೇಖಗೊಂಡಿರುವ ನಾಲ್ಕು ನಿದರ್ಶನಗಳನ್ನು ಅಸ್ಮಿತೆ ರಾಜಕಾರಣದ ಪರಿಭಾಷೆಯಲ್ಲೇ ವಿವರಿಸಲು ಬರುತ್ತದೆಯಲ್ಲವೇ? ಎಂದು ಯಾರಾದರೂ ಕೇಳಬಹುದು. ಆದರೆ,
ಬಹಳ ಸೂಕ್ಷ್ಮವಾಗಿ ಗಮನಿಸಿದರೆ, ಅಸ್ಮಿತೆ ರಾಜಕಾರಣದ ಸಿದ್ಧಾಂತ ಮತ್ತು ಕ್ರಿಯಾತತ್ವಗಳಿಂದ ಅರ್ಥಮಾಡಿಕೊಳ್ಳಲಾಗದ ಅಂಶಗಳು ಆ ನಾಲ್ಕೂ ನಿದರ್ಶನಗಳಲ್ಲಿವೆ ಎನ್ನುವುದು ನಮಗೆ ಮನದಟ್ಟಾಗುತ್ತದೆ. ಉದಾಹರಣೆಗೆ, ಶೋಷಿತ ಸಮುದಾಯಗಳು ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಸಂಘಟಿತರಾಗಬೇಕೆಂದು ಅಸ್ಮಿತೆ ರಾಜಕಾರಣ ಹೇಳುತ್ತದೆ. ಆದರೆ, ಶೋಷಕ ಸಮುದಾಯಗಳೂ ಹಾಗೆ ಸಂಘಟಿತರಾಗುವಂತಿಲ್ಲ ಎಂಬ ನಿಲುವನ್ನು ಅಸ್ಮಿತೆ ರಾಜಕಾರಣದ ಕೈಯಿಂದ ವಿವರಿಸಲು ಸಾಧ್ಯವಿಲ್ಲ. ಅಲ್ಲದೆ, ಹಿಂದುತ್ವ ರಾಜಕಾರಣ, ಕನ್ನಡ ಕೇಂದ್ರಿತ ರಾಜಕಾರಣ, ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಮುಂತಾದವನ್ನು ಅಸ್ಮಿತೆ ರಾಜಕಾರಣವು ತನ್ನ ವಿಶಾಲ ಅರ್ಥವ್ಯಾಪ್ತಿಯೊಳಗೆ ಸೇರಿಸಿಕೊಳ್ಳುತ್ತದೆ. ಆದರೆ, ವೋಕ್ ರಾಜಕಾರಣವು ಆ ಯಾವನ್ನೂ ಮಾನ್ಯಮಾಡುವುದಿಲ್ಲ. ಈ ವ್ಯತ್ಯಾಸಗಳನ್ನು ಕೂಲಂಕಷವಾಗಿ ನೋಡಿದರೆ, ವೋಕ್ ರಾಜಕಾರಣವು ಮೂರು ವಿಶಿಷ್ಟ ಅಂಶಗಳಿಂದಾಗಿ ಅಸ್ಮಿತೆ ರಾಜಕಾರಣಕ್ಕಿಂತ ಭಿನ್ನವಾಗಿರುವುದು ತಿಳಿಯುತ್ತದೆ. ಒಂದು, ಈಗಾಗಲೇ ವಿವರಿಸಲಾದ ಇಂಟರ್ ಸೆಕ್ಷನಾಲಿಟಿಯೆಂಬ ಸಾಮಾಜಿಕ
ಸಿದ್ಧಾಂತದ ಮೇಲಿನ ನಂಬಿಕೆ. ಎರಡು, ಶೋಷಕ ಸಮುದಾಯಗಳಿಗೆ ಸೇರಿದ ವ್ಯಕ್ತಿಗಳು ತಮ್ಮ ಸಮುದಾಯದ ಪೂರ್ವಜರು ನಡೆಸಿದ ಶೋಷಣೆಯ ಕುರಿತು ಅಪರಾಧಿಪ್ರಜ್ಞೆ (ಗಿಲ್ಟ್) ಇರಿಸಿಕೊಂಡಿರಬೇಕೆಂಬ ನಂಬಿಕೆ.

(ಪಶ್ಚಿಮದ ಸಂದರ್ಭದಲ್ಲಿ, ತತ್ವಶಾಸ್ತ್ರ ಪ್ರಾಧ್ಯಾಪಕ ಹಾನ್ಸ್ ಜಾರ್ಜ್ ಮೊಯ್ಲರ್ ಈ ಗಿಲ್ಟ್‌ಅನ್ನು ಜರ್ಮನ್ ಗಿಲ್ಟ್ ಎಂದು ಕರೆಯುತ್ತಾನೆ. ಯಹೂದಿಗಳ ಮಾರಣಹೋಮಕ್ಕೆ ಜರ್ಮನರಾದ ನಾವೆಲ್ಲರೂ ಕಾರಣರಾಗಿದ್ದೇವೆಂಬ ಗಿಲ್ಟ್ ಇದು). ಮೂರು, ಇಂಟರ್‌ಸೆಕ್ಷನಾಲಿಟಿ ಸಿದ್ಧಾಂತವನ್ನೂ, ಅದರ ನೈತಿಕ ಪ್ರತಿಪಾದನೆಗಳನ್ನೂ ಸಮಾಜದಲ್ಲಿ ಎಲ್ಲರೂ ಒಪ್ಪಬೇಕೆಂಬ ನಂಬಿಕೆ. ವೋಕ್ ಸಂಸ್ಕೃತಿಯನ್ನು ನಿರ್ಣಾಯಕವಾಗಿ ವ್ಯಾಖ್ಯಾನಿಸುವ ಅಂಶವಿದು. ಇದು, ಯಾವುದೇ ಮತ-ಧರ್ಮದಂತೆ, ಒಂದಿಷ್ಟು ನೈತಿಕ ಮೌಲ್ಯಗಳು ಶ್ರೇಷ್ಠ ಎಂದು ಭಾವಿಸುತ್ತದೆ, ಎಲ್ಲರೂ ಇವುಗಳಿಗೆ ಬದ್ಧರಾಗಿರಬೇಕೆಂದು ಬಯಸುತ್ತದೆ ಹಾಗೂ ಕಡಿಮೆ ಬದ್ಧರಾಗಿರುವವರಲ್ಲಿ ಅಪರಾಧಿ ಪ್ರಜ್ಞೆ ನೆಲೆಯೂರುವಂತೆ ನೋಡಿಕೊಳ್ಳುತ್ತದೆ. ಆ ಮೌಲ್ಯಗಳನ್ನು ಒಪ್ಪದವರು ಧರ್ಮದ್ರೋಹಿಗಳು, ಅಪಾಸ್ಟೇಟ್‌ಗಳು. ಅಂಥವರೊಂದಿಗೆ ಗೆಳೆತನ ಸಲ್ಲದು. ಹೀಗೆ, ವೋಕಿಸಂ ಎನ್ನುವುದು ನೈತಿಕತೆ
ಮತ್ತು ಸಾಮಾಜಿಕ ನ್ಯಾಯದ ನಿರ್ದಿಷ್ಟ ವ್ಯಾಖ್ಯಾನಗಳನ್ನಿಟ್ಟುಕೊಂಡಿರುವ, ಒಂದು ಆಧುನಿಕ ನಾಗರಿಕ ಧರ್ಮವಾಗಿ (ಸಿವಿಲ್ ರಿಲಿಜಿಯನ್ ಆಗಿ) ರೂಪುಗೊಂಡಿದೆ ಎನ್ನುವುದು ಪ್ರಾಧ್ಯಾಪಕ ಹಾನ್ಸ್ ಜಾರ್ಜ್ ಮೊಯ್ಲರ್‌ರ ಅಭಿಪ್ರಾಯವಾಗಿದೆ. ಈ ಮೂರೂ ವಿಶಿಷ್ಟ ಅಂಶಗಳ ಹಿನ್ನೆಲೆಯಲ್ಲಿ ’ರಾಜಕೀಯ ಸರಿತನ’ (ಪೊಲಿಟಿಕಲ್ ಕರೆಕ್ಟ್‌ನೆಸ್) ಎನ್ನುವ ಪರಿಕಲ್ಪನೆ ಮಹತ್ವ ಪಡೆದುಕೊಳ್ಳುತ್ತದೆ.

ನಾಗರಿಕ ಧರ್ಮದ ಕುರಿತು ಎರಡು ಮಾತು. ಒಂದು ರಾಷ್ಟ್ರದ ಸಂವಿಧಾನಕ್ಕೆ ಬದ್ಧರಾಗಿ ಎಲ್ಲ ಪ್ರಜೆಗಳೂ ತಮ್ಮ ಸಾರ್ವಜನಿಕ ಜೀವನವನ್ನು ಬದುಕಬೇಕೆನ್ನುವುದು ಆಶಯ. ಈ ಆಶಯವನ್ನು, ಮತ-ಧರ್ಮವೊಂದು ತನ್ನ ನಿರ್ದಿಷ್ಟ ಕರ್ಮಠ ನಿರೂಪಣೆಯನ್ನು ಅಧಿಕಾರದ ಮೂಲಕ ಅನುಷ್ಟಾನಗೊಳಿಸುವಂತೆ ಕಟ್ಟುನಿಟ್ಟಾಗಿ
ಜಾರಿಗೆ ತರಲು ಹೆದಾಗ, ಸಾಂವಿಧಾನಿಕ ಮೌಲ್ಯಗಳ ಆಧಾರದಲ್ಲೊಂದು ಶ್ರೇಣೀಕರಣವು ಸೃಷ್ಟಿಯಾಗುತ್ತದೆ ಹಾಗೂ ಸಾಂವಿಧಾನಿಕ ಧರ್ಮ ಎನ್ನುವುದು ಹುಟ್ಟು ಪಡೆಯುತ್ತದೆ. ಇಲ್ಲಿ ಧರ್ಮಗ್ರಂಥಗಳ ಸ್ಥಾನಮಾನವನ್ನೇ ಸಂವಿಧಾನ ಪಡೆದುಕೊಳ್ಳುತ್ತದೆ. ಧರ್ಮಗ್ರಂಥಗಳನ್ನು ಓದದ ಧರ್ಮರಕ್ಷಕರು ಇರುವಂತೆ, ಸಂವಿಧಾನವನ್ನು ಓದದ ಸಂವಿಧಾನರಕ್ಷಕರೂ ಇರುತ್ತಾರೆ. ಆದರೆ, ಯಾವ ಧರ್ಮಗ್ರಂಥವನ್ನಾಗಲಿ, ಸಂವಿಧಾನವನ್ನಾಗಲಿ ಹೊಂದದೆಯೂ ಕೆಲವು ನೈತಿಕ ಮೌಲ್ಯಗಳು ಪ್ರಮಾಣಬದ್ಧಗೊಳ್ಳಬಹುದು. ಅಂಥ ಮೌಲ್ಯಗಳನ್ನು ಪ್ರಮಾಣಬದ್ಧಗೊಳಿಸಲು ಹಾಗೂ ಅವುಗಳಿಗೆ ವಿಶ್ವಾತ್ಮಕ, ಇಗಾಲಿಟೇರಿಯನ್ ಚಹರೆ ನೀಡಲು ಕೆಲವು ಅಧಿಕಾರ ಕೇಂದ್ರಗಳು ಧರ್ಮೋಪಾದಿಯಲ್ಲಿ ಕೆಲಸ ಮಾಡಿದಾಗ ರೂಪುವಡೆಯುವ ಧರ್ಮವೇ ನಾಗರಿಕ ಧರ್ಮ. ನಮ್ಮ ನಾಗರಿಕ ಸಮಾಜ ಹೀಗೆಯೇ ಇರಬೇಕೆಂದು ಹೇಳುವ ಧರ್ಮ.

ತಮ್ಮದು ವೋಕ್ ಸಂಸ್ಕೃತಿಯೆಂದು ಒಪ್ಪಿಕೊಂಡವರ ಸಮಜಾಯಿಷಿ

ತಮ್ಮನ್ನು ತಾವು ವೋಕ್ ಸಂಸ್ಕೃತಿಯೊಂದಿಗೆ ಗುರುತಿಸಿಕೊಳ್ಳುವ ಟೈಟಾನಿಯಾ ಮೆಕ್‌ಗ್ರತ್, ತಮ್ಮ ’ವೋಕ್-ಎ ಗೈಡ್ ಟು ಸೋಶಿಯಲ್ ಜಸ್ಟಿಸ್’ ಪುಸ್ತಕದ ಮುನ್ನುಡಿಯಲ್ಲಿ, “ನನ್ನಂಥ ಕಾರ್ಯಕರ್ತರು ಹೊಸ ಸಾಂಸ್ಕೃತಿಕ ಯುದ್ಧದ ಮುಂಚೂಣಿಯಲ್ಲಿದ್ದೇವೆ. ಪಕ್ಷಪಾತ ಮತ್ತು ತಾರತಮ್ಯದ ವಾಸನೆ ಹಿಡಿದು ಹೊರಡುವ, ನ್ಯಾಯಪರತೆಯನ್ನು ಮೈಗೂಡಿಸಿಕೊಂಡಿರುವ ಬೇಟೆನಾಯಿಗಳಾದ ನಾವು ಅನ್ಯಾಯದ ಕಾಲುಗಳನ್ನು ಕಚ್ಚಿ, ಸೀಳಬಲ್ಲೆವು” ಎಂದು ಹೇಳುತ್ತ, ಮುಂದುವರಿದು, “ಇಂಥ ಪುಸ್ತಕವನ್ನು ಬರೆಯಲು ಯಾವ ಗಂಡಸಿಂದಲೂ ಸಾಧ್ಯವಿಲ್ಲ. ಪೌರುಷದ ನಂಜು ಗಂಡಸರ ಮೂಲಸ್ವಭಾವದಲ್ಲೇ ಇರುವುದರಿಂದ, ಅವರೆಂದೂ ವೋಕ್ ಚಿಂತನೆಗಳ ತುತ್ತತುದಿಯನ್ನು ಏರಲಾರರು” ಎನ್ನುವ ಅಭಿಪ್ರಾಯಕ್ಕೆ ಬರುತ್ತಾರೆ. ವೋಕ್ ಚಳವಳಿಯ ಭಾಗವಾಗಿರುವವರೆಲ್ಲರ ಅಭಿಪ್ರಾಯ ಈ ರೀತಿ ಇರದಿದ್ದರೂ, ವೋಕ್ ಸಂಸ್ಕೃತಿಯನ್ನವರು ಸ್ಥೂಲವಾಗಿ ಸಮರ್ಥಿಸಿಕೊಳ್ಳುವುದು ಹೀಗೆ –

ಟೈಟಾನಿಯಾ ಮೆಕ್‌ಗ್ರತ್

ಅ) ಸಾಮಾಜಿಕ ನ್ಯಾಯವನ್ನು ಬೋಧಿಸುವ ಯಾವ ಗ್ರ್ಯಾಂಡ್ ನರೇಟೀವ್‌ಗಳೂ ಈ ಜಗತ್ತಿನ ಎಲ್ಲ ಶೋಷಿತ ಸಮುದಾಯಗಳ ನೋವನ್ನು ಅರ್ಥಮಾಡಿಕೊಳ್ಳಲಾರವು. ಅಲ್ಲದೆ, ವಿವಿಧ ಅಸ್ಮಿತೆಗಳನ್ನೂ, ಅವುಗಳ ಸ್ಥಾನಮಾನಗಳನ್ನೂ ನಿರಂತರ ಶೋಷಣೆಯ ಉದ್ದೇಶದಿಂದಲೇ ಸೃಷ್ಟಿಸಲಾಗಿದೆ. ಹಾಗಾಗಿ, ಪ್ರತಿಯೊಂದು ಶೋಷಿತ ಸಮುದಾಯವೂ ತನ್ನ ಹಿತಾಸಕ್ತಿಯನ್ನೇ ಮುಂದೊಡ್ಡಿ ರಾಜಕಾರಣ ಮಾಡುವ ಅಗತ್ಯವಿದೆ.

ಆ) ಶೋಷಿತ ಸಮುದಾಯಗಳು ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಸಂಘಟಿತರಾದಂತೆ ಶೋಷಕ ಸಮುದಾಯಗಳೂ ಸಂಘಟಿತರಾದರೆ, ಶೋಷಿತರು ಒಗ್ಗೂಡುವ ಉದ್ದೇಶಕ್ಕೇ ಪೆಟ್ಟು ಬೀಳುತ್ತದೆ. ಜೊತೆಗೆ, ಶೋಷಕ ಸಮುದಾಯಗಳಿಗೆ ತಮ್ಮ ಪೂರ್ವಜರು ಮಾಡಿದ ತಪ್ಪಿನ ಅರಿವಾಗಿಲ್ಲ ಎಂಬುದನ್ನೂ ಅದು ತೋರಿಸುತ್ತದೆ. ಹಾಗಾಗಿ, ಹೊಸ, ನ್ಯಾಯಯುತ ಸಮಾಜದ ನಿರ್ಮಾಣದಲ್ಲಿ ಶೋಷಕ ಸಮುದಾಯಗಳ ಪಾತ್ರ ಗೌಣವಾಗಿರುತ್ತದೆ, ಹಾಗಿರಬೇಕು ಕೂಡ.

ಇ) ಶೋಷಿತರು ಸಂಘಟಿತರಾದಂತೆ, ಸಾಂಸ್ಕೃತಿಕ ಮತ್ತು ರಾಜಕೀಯವಾಗಿ ಬಲಗೊಂಡಂತೆ ಸಮಾಜದಿಂದ ಅಸಮಾನತೆ ಮತ್ತು ಶೋಷಣೆಗಳು ಕಣ್ಮರೆಯಾಗುತ್ತವೆ. ಆಗ, ಶೋಷಿತರು ಸಂಘಟಿತರಾಗೇ ಉಳಿಯುವ ಅಗತ್ಯವೂ ಇರುವುದಿಲ್ಲ. ಹಾಗಾಗಿ, ಸಮ-ಸಮಾಜ ನಿರ್ಮಾಣದ ಮೊದಲ ಹಂತದಲ್ಲಿ ಶೋಷಕ ಸಮುದಾಯಕ್ಕೆ ಸೇರಿದ ವ್ಯಕ್ತಿಗಳು ತಮ್ಮ ಅಸ್ಮಿತೆಗಳನ್ನೂ, ಆ ಮೂಲಕ ತಮ್ಮ ಸ್ಥಾನಮಾನಗಳನ್ನೂ ವಿಸರ್ಜಿಸಿಕೊಳ್ಳಬೇಕು. ಇದೇ ಹೊತ್ತಿನಲ್ಲಿ ಶೋಷಿತ ಸಮುದಾಯಗಳಿಗೆ ಸೇರಿದ ವ್ಯಕ್ತಿಗಳು ತಮ್ಮ ಅಸ್ಮಿತೆಗಳನ್ನು ಗಟ್ಟಿದನಿಯಲ್ಲಿ ಸಾರಬೇಕು. ವೋಕಿಸಂ ಕಾರಣಕ್ಕೆ ಇಂದಿನ ಶೋಷಿತ ಸಮುದಾಯಗಳು ಮುಂದೆ ಶೋಷಕ ಸಮುದಾಯಗಳಾಗಬಹುದೆಂಬ ಆತಂಕ ಯಾರಲ್ಲಾದರೂ ಇದ್ದರೆ, ಅದರಲ್ಲಿ ಹುರುಳಿಲ್ಲವೆಂದೇ ಹೇಳಬೇಕು.

ವೋಕ್ ಸಂಸ್ಕೃತಿಗೆ ಸಂಪ್ರದಾಯ ಕಾಳಜಿನಿಷ್ಠರು ಮತ್ತು ಮೂಲನಿಷ್ಠ ಲಿಬರಲ್‌ವಾದಿಗಳ ವಿರೋಧ

ಸಂಪ್ರದಾಯ ಕಾಳಜಿನಿಷ್ಠರ (ಕನ್ಸರ್‍ವೇಟೀವ್ಸ್‌ಗಳ) ವಾದ ಸ್ಥೂಲವಾಗಿ ಹೀಗಿದೆ – “ವೋಕ್ ಸಂಸ್ಕೃತಿಯು ಸಮುದಾಯಗಳ ನಡುವೆ ಹಗೆಯನ್ನು ಬೆಳೆಸುತ್ತದೆಯಲ್ಲದೆ, ನಮ್ಮ ಧರ್ಮ, ಸಂಪ್ರದಾಯ ಮತ್ತು ಅವುಗಳ ನೆರಳಿನಲ್ಲಿ ಬೆಳೆದ ನೈತಿಕ ಮೌಲ್ಯಗಳನ್ನು ನಾಶಮಾಡುತ್ತದೆ. ಅಲ್ಲದೆ ಮನುಜರನ್ನು, ಭೌತಿಕ ಲೋಭಾಪೇಕ್ಷೆಗಳೇ ಬದುಕಿನ ಪರಮಗುರಿಯೆಂಬಂತೆ ದುಡಿಯುವ ಪ್ರಾಣಿಗಳನ್ನಾಗಿ ಪರಿವರ್ತಿಸುತ್ತದೆ”. ಇನ್ನು, ಮೂಲನಿಷ್ಠ ಲಿಬರಲ್‌ವಾದಿಗಳ ವಾದ ಹೀಗಿದೆ – “ವ್ಯಕ್ತಿಗಳು ತಮ್ಮ ಸಾಮರ್ಥ್ಯವನ್ನು ಸರಿಯಾಗಿ ಗ್ರಹಿಸದಂತೆ, ಬಳಸಿಕೊಳ್ಳದಂತೆ ವೋಕ್ ಸಂಸ್ಕೃತಿಯು ತಡೆಯುತ್ತದೆ. ತಮ್ಮ ಕಷ್ಟಗಳಿಗೆಲ್ಲ ಮಿಕ್ಕವರೇ ಕಾರಣವೆಂಬ ಹೆಣೆಗೇಡಿ ಮನಸ್ಥಿತಿಗೆ ಜನರನ್ನು ತಳ್ಳುತ್ತದೆ. ವೋಕ್ ಸಂಸ್ಕೃತಿಯು ಸರ್ವಶಕ್ತ ವ್ಯಕ್ತಿತ್ವಗಳನ್ನು ಕಟ್ಟುವುದರ ಬದಲು, ಶಾಶ್ವತ ಪರಾವಲಂಬಿ ಜೀವಿಗಳನ್ನು ಸೃಷ್ಟಿಸುತ್ತದೆ”. ಅಮೆರಿಕಾದ ವೋಕ್ ವಿರೋಧಿ ಜನಪ್ರಿಯ ಬುದ್ಧಿಜೀವಿ ಜೋರ್ಡನ್ ಪೀಟರ್‌ಸನ್ ಅವರ ಚಿಂತನೆಗಳಲ್ಲಿ ಮೇಲಿನೆರಡೂ ವರಸೆಗಳ ಛಾಯೆಯಿದೆ. ಅವರು ಸರ್ವಶಕ್ತ, ಸ್ವತಂತ್ರ ವ್ಯಕ್ತಿತ್ವದ ಮಾತನ್ನು ಆಡುತ್ತಲೇ, ಅದನ್ನು ಕ್ರಿಶ್ಚಿಯನ್ ಧರ್ಮದ ತತ್ವದೊಂದಿಗೆ ಬೆಸೆಯುತ್ತಾರಲ್ಲದೆ, ಪಶ್ಚಿಮದ ನಾಗರಿಕತೆಯ ಅತ್ಯುನ್ನತ ಕೊಡುಗೆಯಿದು ಎಂದೂ ಹೇಳುತ್ತಾರೆ. ಹೀಗಾಗಿ, ಅವರ ಪ್ರಕಾರ ವೋಕ್ ಸಂಸ್ಕೃತಿಯು ಪಾಶ್ಚಿಮಾತ್ಯ ಸಂಸ್ಕೃತಿಯ ಅತಿದೊಡ್ಡ ಶತ್ರುವಾಗಿದೆ. ಭಾರತೀಯ ಸಂದರ್ಭದಲ್ಲಿ ಪ್ರಚಲಿತವಿರುವ ವೋಕ್ ವಿರೋಧಿ ದನಿಗಳು ಕೂಡ ಜೋರ್ಡನ್ ಪೀಟರ್‌ಸನ್ ಅವರನ್ನೇ ಪ್ರತಿಧ್ವನಿಸುತ್ತವೆ. ವ್ಯತ್ಯಾಸವಿಷ್ಟೇ. ಅಲ್ಲಿ, ಪಾಶ್ಚಾತ್ಯ ಸಂಸ್ಕೃತಿಯ ಕಾಳಜಿ. ಇಲ್ಲಿ, ಸನಾತನ ಹಿಂದೂ ಸಂಸ್ಕೃತಿಯ ಕಾಳಜಿ. ವಸಾಹತೋತ್ತರ ಚಿಂತನೆಯ ಹೆಸರಲ್ಲಿ ಎಸ್ ಎನ್ ಬಾಲಗಂಗಾಧರ್ ಅವರಂಥವರು ನಡೆಸುತ್ತಿರುವ ಅಧ್ಯಯನದಲ್ಲೂ ಸಂಪ್ರದಾಯ ಕಾಳಜಿನಿಷ್ಠ ವೋಕ್ ವಿರೋಧವನ್ನು ಕಾಣಬಹುದು.

ವೋಕ್ ಸಂಸ್ಕೃತಿಯ ಎಡಪಂಥೀಯ ವಿಮರ್ಶೆ

ಈ ಮೊದಲು ಒಂದು ಪ್ರಶ್ನೆ ಎದುರಾಗಿತ್ತು – ವೋಕ್ ಚಳವಳಿಯು ಎಡಪಂಥೀಯವೇ? ಎಡಪಂಥೀಯ ಎನ್ನುವುದನ್ನಿಲ್ಲಿ ನಾನು ಮಾರ್ಕ್ಸ್‌ವಾದಿ ನಿಲುವು ಎಂಬರ್ಥದಲ್ಲಿ ಬಳಸಿದ್ದೇನೆ. ವೋಕ್ ಸಂಸ್ಕೃತಿಯನ್ನು ಮಾರ್ಕ್ಸ್‌ವಾದಿ ಎಡಪಂಥೀಯ ಚಿಂತನೆಗಳು ಸ್ಥೂಲವಾಗಿ ಹೀಗೆ ವಿಮರ್ಶಿಸುತ್ತವೆ:

ಅ) ವೋಕ್ ಸಂಸ್ಕೃತಿಯು ಧರ್ಮ, ಲಿಂಗ, ಸಂಸ್ಕೃತಿ, ಭಾಷೆ, ಜನಾಂಗ ಮುಂತಾದ ವಿಚಾರಗಳನ್ನೇ ತನ್ನ ಹೋರಾಟದ ಕೇಂದ್ರವಾಗಿಸಿಕೊಂಡಿವೆಯೇ ಹೊರತು, ಅವು ಯಾವ ಆರ್ಥಿಕ ವ್ಯವಸ್ಥೆ, ಉತ್ಪಾದನಾ ಕ್ರಮ ಮತ್ತು ಸಂಬಂಧಗಳ ಮೇಲೆ ನಿಂತಿವೆಯೋ ಅವನ್ನು ಪ್ರಶ್ನಿಸುವುದಿಲ್ಲ ಅಥವಾ, ವಿಮರ್ಶಿಸುವುದಿಲ್ಲ. ಹಾಗಾಗಿ, ವೋಕ್ ಚಳವಳಿಯು ಸರಿಯಾದ ಅರ್ಥದಲ್ಲಿ ಎಡಪಂಥೀಯ ಚಳವಳಿಯೇ ಅಲ್ಲ ಇನ್ನು, ಎಡಪಂಥೀಯ ಚಿಂತನೆಯಲ್ಲಿ ಮುಖ್ಯವಾಗಿರುವ ’ವರ್ಗ’ವು ಜಾತಿ, ಧರ್ಮ, ಭಾಷೆಗಳಂತೆ ಮೇಲ್‌ರಚನೆಯ ಅಸ್ಮಿತೆಗಳಲ್ಲ. ಬದಲಿಗೆ, ಮಾನವನ ಸಾಮಾಜಿಕ ಜೀವನದ ಮೂಲರಚನೆಗೆ ಸಂಬಂಧಿಸಿದ ವರ್ಗೀಕರಣ. ಹಾಗಾಗಿ, ವರ್ಗ ರಾಜಕಾರಣವನ್ನು ಅಸ್ಮಿತೆ ರಾಜಕಾರಣವೆಂದೂ ಕರೆಯಲು ಬರುವುದಿಲ್ಲ.

ಆ) ವೋಕ್ ಚಳವಳಿಗಳ ಸಿದ್ಧಾಂತವಾದ ಇನ್ಟರ್‌ಸೆಕ್ಷನಾಲಿಟಿಯು ಒಂದು ಅಪರಿಪೂರ್ಣ
ಸಿದ್ಧಾಂತವಾಗಿದೆ ಮತ್ತು ಸಮುದಾಯಗಳಿಗೆ ಶಾಶ್ವತವಾದ ಗುಣ-ಲಕ್ಷಣಗಳನ್ನು ಆರೋಪಿಸುತ್ತದೆ. ದುಡಿಮೆ ಮತ್ತು ಉತ್ಪಾದನಾ ಸಂಬಂಧಗಳ ಬದಲಾವಣೆಯು ಮನುಷ್ಯರ ಚಿಂತನೆಗಳನ್ನೂ, ಮೌಲ್ಯಗಳನ್ನೂ ಬದಲಾಯಿಸಬಲ್ಲವು ಎನ್ನುವ ಮುಖ್ಯತತ್ವವನ್ನೇ ಇನ್ಟರ್‌ಸೆಕ್ಷನಾಲಿಟಿ ಸಿದ್ಧಾಂತವು ಕಡೆಗಣಿಸುತ್ತದೆ.

ಇ) ವೋಕ್ ಸಂಸ್ಕೃತಿಯನ್ನು ದೊಡ್ಡ ಕಾರ್ಪೊರೆಟ್ ಶಕ್ತಿಗಳು ಬೆಂಬಲಿಸುತ್ತಿವೆಯಲ್ಲದೆ, ವೋಕ್ ಪರಿಭಾಷೆ ಮತ್ತು ಸಂಜ್ಞೆ(ಸಿಂಬಲ್)ಗಳನ್ನು ಮಾರಾಟದ ಸರಕನ್ನಾಗಿಸಿವೆ. ನಿಯೋ ಲಿಬರಲ್ ಆರ್ಥಿಕ ವ್ಯವಸ್ಥೆಯಲ್ಲಿ ಹೇಗೆ ಕೆಲವು ಶೋಷಿತರೂ ಶ್ರೀಮಂತರಾಗಬಹುದು, ಹೆಸರು ಮಾಡಬಹುದೆಂದು ತೋರಿಸುತ್ತಾ, ತನ್ನ ಶೋಷಕ ಚಹರೆಯನ್ನು ಬಂಡವಾಳಶಾಹಿಯು ಜಾಣತನದಿಂದ ಮರೆಮಾಡುತ್ತದೆ. ಒಂದರ್ಥದಲ್ಲಿ ನಿಯೋ ಲಿಬರಲಿಸಂನ ಪೋಷಣೆಯಿಂದಲೇ ಪಶ್ಚಿಮದ ವೋಕ್ ಸಂಸ್ಕೃತಿಯು ಬೆಳೆದು, ಹೆಮ್ಮರವಾಗಿದೆ. ವೋಕ್ ಸಂಜ್ಞೆಗಳೀಗ ಜನರನ್ನು ಉತ್ಪನ್ನಗಳತ್ತ ಸೆಳೆಯುವ ಬ್ರ್ಯಾಂಡ್‌ಗಳಾಗಿವೆ.

ಕೆ ಬಾಲಗೋಪಾಲ್

ಹೀಗಿದ್ದೂ, ವೋಕ್ ಮೂಲತಃ ಅಸಮಾನತೆ ಮತ್ತು ದಬ್ಬಾಳಿಕೆಯ ವಿರುದ್ಧದ ಚಳವಳಿಯಾದ್ದರಿಂದ, ವಿಶ್ವಾದ್ಯಂತ ಎಡಪಂಥೀಯರು ವೋಕ್ ಚಳವಳಿಗಳಿಗೆ ಬಾಹ್ಯ ಬೆಂಬಲವನ್ನು ನೀಡುತ್ತಾರೆ. ಕೆಲವೆಡೆ ಅದರ ಸಕ್ರಿಯ ಪಾಲುದಾರರೂ ಆಗಿದ್ದಾರೆ. ಇನ್ನು, ಕೆ ಬಾಲಗೋಪಾಲ್ ಅವರು ತಮ್ಮದೊಂದು ಸಂದರ್ಶನದಲ್ಲಿ ಗುರುತಿಸಿದಂತೆ, ಸಂರಚನಾತ್ಮಕ ಹಿಂಸೆ ಮತ್ತು ಅಸಮಾನತೆಯೆಂಬ ಪರಿಕಲ್ಪನೆಯನ್ನು ಪಶ್ಚಿಮದಲ್ಲಿ ಕಟ್ಟಿಬೆಳೆಸಿದವರಲ್ಲಿ ಬಹುತೇಕರು ಮಾರ್ಕ್ಸ್‌ವಾದಿಗಳೇ ಆಗಿದ್ದಾರೆ. ಈ ನಿಟ್ಟಿನಲ್ಲಿ, ವೋಕಿಸಂನ ತಾತ್ವಿಕತೆಯ ಬೇರನ್ನು ನಾವು ಎಡಪಂಥೀಯ ಸಾಮಾಜಿಕ ಸಿದ್ಧಾಂತಗಳಲ್ಲಿ ಗುರುತಿಸಬಹುದು. ಆದರೆ ಇದು, ಮಾರ್ಕ್ಸ್‌ವಾದದ ತಳರಚನೆಯ ವಿಷಯಗಳನ್ನು ಕಡೆಗಣಿಸಿ, ಮೇಲ್‌ರಚನೆಯ ವಿಷಯಗಳಿಗೆ ಒತ್ತು ನೀಡಿತು, ಸ್ವಾಯತ್ತ ಸ್ಥಾನಮಾನವನ್ನೂ ದಯಪಾಲಿಸಿತು. ಹೀಗೆ, ಬೇರು ಎಡಪಂಥೀಯದ್ದೇ ಆದರೂ ವೋಕಿಸಂ ಒಂದು ಸ್ವತಂತ್ರ ಜೀವಿಯಾಗಿ ವಿಕಾಸ ಹೊಂದಿದೆ.

ವೋಕ್‌ನ ಭಾರತೀಯ ಅವತಾರ

ಭಾರತದಲ್ಲಿ ವೋಕ್ ಸಂಸ್ಕೃತಿ ಎನ್ನುವುದು ಇದೆಯೇ? ಎಂಬ ಪ್ರಶ್ನೆಗೆ ಮರಳೋಣ. ಬರಹದ ಮೊದಲಲ್ಲಿ ನೀಡಲಾದ ನಾಲ್ಕೂ ನಿದರ್ಶನಗಳು ಭಾರತೀಯ ಪರಿಸರಕ್ಕೆ ಸಂಬಂಧಿಸಿದ್ದು. ಆ ನಿದರ್ಶನಗಳಿಗೂ ವೋಕ್ ಸಂಸ್ಕೃತಿಗೂ ಪರೋಕ್ಷ ಸಂಬಂಧ ಕಲ್ಪಿಸಿ, ವೋಕಿಸಂಅನ್ನು ವಿವರಿಸುವ ಕೆಲಸವನ್ನಿಲ್ಲಿ ಮಾಡಿದ್ದೇನೆ. ಅಂದರೆ, ವೋಕ್ ಸಂಸ್ಕೃತಿಯು ಭಾರತದಲ್ಲೂ ನೆಲೆಗೊಂಡಿದೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ. ಆದರೆ,
ಭಾರತದ ವೋಕ್ ಅವತಾರವು ಪಶ್ಚಿಮದ ಅವತಾರಕ್ಕಿಂತ ಎರಡು ವಿಚಾರಗಳಲ್ಲಿ ಭಿನ್ನವಾಗಿ ಕಾಣಿಸುತ್ತದೆ.

ಅ) ಪಶ್ಚಿಮದ ವೋಕ್ ಸಂಸ್ಕೃತಿಯು ಬಂಡವಾಳಶಾಹಿ ವ್ಯವಸ್ಥೆಯನ್ನಾಗಲೀ, ಉತ್ಪಾದನಾ ಸಂಬಂಧಗಳನ್ನು ಪರಿಗಣಿಸದ ವ್ಯಕ್ತಿ ಸ್ವಾತಂತ್ರ್ಯವನ್ನಾಗಲೀ ವಿಮರ್ಶಿಸುವುದಿಲ್ಲ. ಆದರೆ, ಭಾರತದ ವೋಕ್ ಚಳವಳಿಗಳಲ್ಲಿ ಬಂಡವಾಳಶಾಹಿಯನ್ನು ವಿಮರ್ಶಿಸುವ ದನಿಗಳೂ ಅಡಕವಾಗಿವೆ. ಭಾರತದಂಥ ಪಶ್ಚಿಮೇತರ ನಾಡುಗಳಲ್ಲಿ ಮಾರ್ಕ್ಸ್‌ವಾದಿ ಎಡಪಂಥೀಯರು ಪ್ರಮುಖವಾಗಿ ಬಂಡವಾಳಶಾಹಿ ಪೂರ್ವದ ಉತ್ಪದನಾ ಕ್ರಮಗಳನ್ನು ಮತ್ತವು ಸೃಜಿಸಿದ ಮೌಲ್ಯಗಳನ್ನು ವಿರೋಧಿಸುತ್ತ ಬಲಗೊಂಡರು. ಇದೇ ಸಂದರ್ಭದಲ್ಲಿ ಸಮಾನತೆಗಾಗಿ ರೂಪುಗೊಂಡ ಇನ್ನಿತರೆ ಹೋರಾಟಗಳಿಗೆ ಈ ಎಡಪಂಥೀಯರ ಗೆಳೆತನ ಅಗತ್ಯವಾಯಿತು. ಬಂಡವಾಳಶಾಹಿಯು ಪಶ್ಚಿಮದಲ್ಲಿ ಬೇರು ಬಿಟ್ಟಷ್ಟು ಭಾರತದಲ್ಲಿ ಬೇರುಬಿಟ್ಟಿರದ ಕಾರಣ, ಎಡಪಂಥೇತರ ಸಮಾನತೆಯ ಹೋರಾಟಗಳನ್ನು ಅದು ಪೋಷಿಸಲು ಮುಂದಾಗಲಿಲ್ಲ. ಹಾಗಾಗಿ, ಅಂಥ ಎಲ್ಲ ಬಗೆಯ ಹೋರಾಟಗಳಲ್ಲೂ ಬಂಡವಾಳಶಾಹಿ ವಿರೋಧದ ಸೆಳಕು ಆಗೊಮ್ಮೆ ಈಗೊಮ್ಮೆ ಕಾಣಸಿಗುತ್ತದೆ.

ಆ) ಪಶ್ಚಿಮದಲ್ಲಿ ವೋಕ್ ಸಂಸ್ಕೃತಿಯು ಕಾರ್ಪೊರೆಟೈಸ್ ಆದಷ್ಟು ಇಲ್ಲಿ ಆಗಿಲ್ಲ. ಒಂದರ್ಥದಲ್ಲಿ, ಭಾರತದ ವೋಕ್ ಸಂಸ್ಕೃತಿಯು ಒಂದು ಪರಿಪೂರ್ಣ ಮತ-ಧರ್ಮದ ಸ್ವರೂಪವನ್ನಾಗಲಿ, ಕೇಂದ್ರೀಕೃತ ಸಾಂಸ್ಥಿಕ ಸ್ವರೂಪವನ್ನಾಗಲಿ ಪಡೆದಿಲ್ಲ.

ಆ) ಭಾರತದಲ್ಲಿ ವೋಕ್ ಸಂಸ್ಕೃತಿಯೊಂದಿಗೆ ಗುರುತಿಸಿಕೊಳ್ಳುವವರ ಸಂಖ್ಯೆ ತೀರ ಕಡಿಮೆ ಇದೆ. ವೋಕ್ ಚಹರೆಗಳನ್ನುಳ್ಳ ಅನೇಕ ಚಳವಳಿಗಳು ಇಲ್ಲಿ ಅನೇಕ ಅಸ್ಮಿತೆಗಳ, ಮಹನೀಯರ ಮತ್ತು ಸಿದ್ಧಾಂತಗಳ ಹೆಸರಲ್ಲಿ ನಡೆಯುತ್ತವೆಯೇ ಹೊರತು ಅವ್ಯಾವುವೂ ತಮ್ಮನ್ನು ತಾವು ವೋಕ್ ಸಂಸ್ಕೃತಿಯೊಂದಿಗೆ ಬಹಿರಂಗವಾಗಿ ಗುರುತಿಸಿಕೊಂಡಿಲ್ಲ. ಬಹುಶಃ ಗುರುತಿಸಿಕೊಳ್ಳಲೂ ಇಷ್ಟಪಡುವುದಿಲ್ಲ. ಹಾಗಾಗಿ ಭಾರತೀಯ ವೋಕ್ ಚಹರೆಯನ್ನು ಪಶ್ಚಿಮದ ವೋಕ್ ಚಳವಳಿಗಳು ಒಂದಿಷ್ಟು ಪ್ರಭಾವಿಸಿವೆಯೆಂದು ಹೇಳುತ್ತಲೇ ಅದರ ದೇಸೀಯ ಮೂಲಗಳನ್ನು ಹುಡುಕುವ ಮತ್ತು ವಿಶ್ಲೇಷಿಸುವ ಅಗತ್ಯವನ್ನು ಒತ್ತಿಹೇಳಲು ನಾವು ಮರೆಯಬಾರದು.

ಮಾಹಿತಿ ತಂತ್ರಜ್ಞಾನ ತೀವ್ರವಾಗಿ ಬೆಳೆಯುತ್ತಿದ್ದಂತೆ ಒಂದು ನಿರೀಕ್ಷೆಯನ್ನು ತೇಲಿಬಿಡಲಾಯಿತು. ಮಾಹಿತಿ ತಂತ್ರಜ್ಞಾನವು ಮನೆಮನೆಗೆ ತಲುಪಿದಂತೆ, ಸಮಾಜದ ಪ್ರತಿ ಕೈಗಳನ್ನು ಸೇರಿದಂತೆ ಪ್ರತಿಯೊಬ್ಬರು ಕೂಡ ಪೊಲಿಟಿಕಲ್ ಏಜೆಂಟ್‌ಗಳಾಗುತ್ತಾರೆಂದೂ, ಈ ಮೂಲಕ ಸುತ್ತಲಿನ ರಾಜಕೀಯ, ಸಾಂಸ್ಕೃತಿಕ ಮತ್ತು ಸಾಮುದಾಯಿಕ ಸಂಕಥನಗಳಿಗೆ ಪ್ರತಿಯೊಬ್ಬರೂ ತಮ್ಮದೇ ವಿಶಿಷ್ಟ ಕೊಡುಗೆಯನ್ನು ನೀಡಬಹುದಾದ ವ್ಯವಸ್ಥೆ ನಿರ್ಮಾಣವಾಗುತ್ತದೆಂದೂ ಭಾವಿಸಲಾಯಿತು. ಇದು ಪ್ರಜಾಪ್ರಭುತ್ವವು ನಿಜಾರ್ಥದಲ್ಲಿ ಕಾರ್ಯಗತಗೊಳ್ಳಲು ಪೂರಕವಾಗಲಿದೆಯೆಂದೂ ವ್ಯಾಖ್ಯಾನಿಸಲಾಯಿತು. ಆದರೆ, ಈ ವಾದಗಳನ್ನು ಫ್ರೆಂಚ್ ಚಿಂತಕ ಜೀನ್ ಬೋಡ್ರಿಯಾಡ್ 90ರ ದಶಕದಲ್ಲೇ ಅಲ್ಲಗಳೆಯುತ್ತಾನೆ. ಅವನ ಪ್ರಕಾರ ಯಾವುದೇ ತಂತ್ರಜ್ಞಾನಕ್ಕೆ ತನ್ನದೇ ವಿಶಿಷ್ಟ ರಚನಾವಿನ್ಯಾಸವೂ, ಮೌಲ್ಯವ್ಯವಸ್ಥೆಯೂ ಇರುತ್ತದೆ. ಹಾಗಾಗಿ, ಅದನ್ನು ಬಳಸುವ ನಾವು ಆಯಾ ಸಂರಚನೆಗಳ ಭಾಗವಾಗಿಯೇ ಕೆಲಸ ಮಾಡಬೇಕಾಗುತ್ತದೆ. ಒಂದು ತಂತ್ರಜ್ಞಾನದ ಮೂಲಕ ನಾವು ಕೊಡುವ ಪ್ರತಿಕ್ರಿಯೆಗಳ ಸ್ವರೂಪಕ್ಕೆ ಆ ತಂತ್ರಜ್ಞಾನದ ಸಂರಚನೆಯೇ ಒಂದಿಷ್ಟು ಮಿತಿಗಳನ್ನು ಹೇರಿರುತ್ತದೆ. ಒಂದರ್ಥದಲ್ಲಿ, ನಮ್ಮ ಪ್ರತಿಕ್ರಿಯೆಗಳ ಕೆಲವು ಚಹರೆಗಳು ಪೂರ್ವನಿರ್ಧರಿತವಾಗಿವೆಯಲ್ಲದೆ ಈ ನಿರ್ಧಾರದಲ್ಲಿ ನಮ್ಮ ಪ್ರಜ್ಞಾಪೂರ್ವಕ ಪಾಲ್ಗೊಳ್ಳುವಿಕೆಯೂ ಇರುವುದಿಲ್ಲ. ಈ ಮಾತು, ಸಾಮಾಜಿಕ ಜಾಲತಾಣಗಳಿಂದಾಗಿ ಬಿರುಸು ಮತ್ತು ಬಿಸುಪು ಪಡೆದಿರುವ ವೋಕ್ ಚಿಂತನೆಗಳ ಅಭಿವ್ಯಕ್ತಿಗೂ ಅನ್ವಯ.

ಅಸಮಾನತೆ ಮತ್ತು ದಬ್ಬಾಳಿಕೆಗಳಿಲ್ಲದ ಸಮಾಜವೇ ತಮ್ಮ ಕನಸೆಂದು ಎಚ್ಚರಗೊಂಡವರು ಹೇಳುತ್ತಾರೆ. ಈ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ, ಎಚ್ಚರಗೊಂಡ ಭಾರತೀಯರು ಇಡುತ್ತಿರುವ ಹೆಜ್ಜೆಗಳನ್ನು ಹೀಗೆಹೀಗೇ ಎಂದು ಸ್ಪಷ್ಟವಾಗಿ ಬಣ್ಣಿಸಲು ಬರದಿದ್ದರೂ, ವೋಕ್ ಸಂಸ್ಕೃತಿಯ ಇರುವಿಕೆಯನ್ನು ಮತ್ತು ಸದ್ಯದ ರಾಜಕಾರಣದ ಅಗತ್ಯಗಳ ನೆಲೆಗಟ್ಟಿನಲ್ಲಿ ಇದರ ಪ್ರಭಾವವನ್ನು ಮನಗಂಡು, ಇದರೊಂದಿಗೆ ವ್ಯವಹರಿಸಬೇಕಾದ ತುರ್ತಿನಲ್ಲಿ ನಾವಿದ್ದೇವೆ.

ಅಮರ್ ಹೊಳೆಗದ್ದೆ

ಅಮರ್ ಹೊಳೆಗದ್ದೆ
ಎಂಜಿನಿಯರಿಂಗ್ ಪದವೀಧರರಾದ ಅಮರ್, ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ ಹೇಳಿಕೊಡುವುದರ ಜೊತೆಗೆ ಕರ್ನಾಟಕ-ಕನ್ನಡ ಕೇಂದ್ರಿತ ಹೋರಾಟಗಳಲ್ಲಿ ಆಸಕ್ತಿ ವಹಿಸಿದ್ದವರು. ಈಗ ತುಮಕೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿ.


ಇದನ್ನೂ ಓದಿ: ದೇಶವ್ಯಾಪಿ ಹಬ್ಬಿದ ರೈತ ಚಳುವಳಿ: ಭಾಗ-2

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಕೊಲೆ ಪ್ರಕರಣ: ‘ತನಿಖೆ ದಿಕ್ಕು ತಪ್ಪುತ್ತಿದೆ’ ಎಂದು ಆರೋಪಿಸಿದ್ದ ತಂದೆ ಕ್ಷಮೆಯಾಚನೆ

0
ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿದೆ ಎಂದು ಆರೋಪಿಸಿದ್ದ ಆಕೆಯ ತಂದೆ ನಿರಂಜನಯ್ಯ ಹಿರೇಮಠ ಇದೀಗ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಮಾಹಿತಿಯ ಕೊರತೆಯಿಂದ ಮಗಳ ಕೊಲೆ ಪ್ರಕರಣದ ತನಿಖೆ ದಿಕ್ಕು...