ಪ್ರವಾಸ ಬಹುತೇಕ ಎಲ್ಲರಿಗೂ ಇಷ್ಟ. ಪ್ರತಿ ಪ್ರವಾಸತಾಣಕ್ಕೂ ತನ್ನದೇ ಆದ ವಿಭಿನ್ನತೆ ಮತ್ತು ವಿಶಿಷ್ಟತೆ ಇರುತ್ತದೆ. ಕೆಲವರಿಗೆ ಸಮುದ್ರ ತೀರ ಇಷ್ಟವಾದರೆ ಇನ್ನು ಕೆಲವರಿಗೆ ದೇವಸ್ಥಾನಗಳ ಬಗ್ಗೆ ಒಲವು. ನದಿಗಳು, ಅಣೆಕಟ್ಟೆಗಳು, ಮ್ಯೂಸಿಯಂಗಳು, ಮಂಜು ಬೀಳುವ ಪ್ರದೇಶ, ಬೆಟ್ಟಗುಡ್ಡಗಳು, ಹಿಮಗುಡ್ಡೆ ಹೀಗೆ ಒಬ್ಬೊಬ್ಬರಿಗೂ ತಮ್ಮದೇ ಆಯ್ಕೆಯ ನೆಚ್ಚಿನ ತಾಣಗಳು ಇರುತ್ತವೆ. ಚಾರಣ (ಟ್ರೆಕ್ಕಿಂಗ್) ಕೆಲವರಿಗೆ ಪ್ರೀತಿಪಾತ್ರವಾದರೆ ಮತ್ತೆ ಕೆಲವರಿಗೆ ಬಲು ಕಷ್ಟದ್ದು. ಸಾಹಸಿ ಚಾರಣಿಗರಿಗೆ ಹೇಳಿಮಾಡಿಸಿದ ಜಾಗ ಸಾವನದುರ್ಗ ಬೆಟ್ಟ. ಸಾಹಸಿಗಳು ಮಾತ್ರವಲ್ಲ, ನೀವೆಲ್ಲರೂ ಕೂಡ ನಿಮ್ಮ ಶಕ್ತ್ಯಾನುಸಾರ ಈ ಬೆಟ್ಟ ಹತ್ತಿ ಸಂಭ್ರಮಿಸಬಹುದು. ಆರೋಗ್ಯಕ್ಕೂ ಇದು ಒಳ್ಳೆಯದು. ನಿಮಗೆ ಬೆಟ್ಟ ಹತ್ತುವುದು ಕಷ್ಟ ಮತ್ತು ತೀವ್ರ ತ್ರಾಸದಾಯಕ ಎನಿಸಿದರೆ ತಪ್ಪಿಸಿಕೊಳ್ಳಬೇಕಾದ ದೊಡ್ಡ ಬೆಟ್ಟ ಇದು ಸಾವನದುರ್ಗ.
ಬೆಂಗಳೂರಿನಿಂದ 46 ಕಿ.ಮೀ ದೂರವಿರುವ, ಒಂದು ದಿನದಲ್ಲಿ ಹೋಗಿಬರಬಹುದಾದ ಸ್ಥಳಗಳ ಪಟ್ಟಿಗೆ ಸಾವನದುರ್ಗ ಸೇರುತ್ತದೆ. ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಈ ಏಕಶಿಲಾ ಬೆಟ್ಟ ಸಮುದ್ರ ಮಟ್ಟದಿಂದ 1226 ಮೀಟರ್ ಎತ್ತರದಲ್ಲಿದೆ. ಬೆಂಗಳೂರಿನಿಂದ ಮಾಗಡಿ ರಸ್ತೆ ಮಾರ್ಗವಾಗಿ ಹೊರಟು, ದೊಡ್ಡ ಆಲದಮರ-ಮಂಚನಬೆಲೆ ಡ್ಯಾಂ ಮಾರ್ಗವಾಗಿ ಸಾವನದುರ್ಗ ತಲುಪಬಹುದು. ನೀವು ಮಂಚನಬೆಲೆ ಅಣೆಕಟ್ಟು ಮಾರ್ಗವಾಗಿ ಹೋದರೆ, ದೊಡ್ಡ ಆಲದಮರ, ಮಂಚನಬೆಲೆ ಅಣೆಕಟ್ಟು ನೋಡುವುದರ ಜೊತೆಗೆ ನಿರ್ಜನ ಕಾನನದ ನಿಶಬ್ದವನ್ನು ಅನುಭವಿಸಬಹುದು. ಕಾರು-ಬೈಕ್‌ನಲ್ಲಿ ಬೆಟ್ಟದ ದಡ ತಲುಪಲು ಒಂದೂವರೆ ಗಂಟೆ ಸಾಕು.

ನೀವು ದಟ್ಟಕಾನನದ ನಡುವಿನ ಸಾವನದುರ್ಗ ಬೆಟ್ಟ ತಲುಪಿದೊಡನೆಯೇ ವಿಸ್ತಾರವಾದ ಉದ್ಯಾನವನವೊಂದು ನಿಮ್ಮನ್ನು ಸ್ವಾಗತಿಸುತ್ತದೆ. ಕೇವಲ 10 ರೂ ಟಿಕೆಟ್ ಇರುವ ಈ ಉದ್ಯಾನವನ ಮಕ್ಕಳಿಗೆ ಆಟವಾಡಲು ಪ್ರಸಕ್ತವಾಗಿದೆ. ವಿಭಿನ್ನ ಗಿಡಮರಗಳು, ಆಟದ ಸಾಮಗ್ರಿಗಳು ಅಲ್ಲಿದ್ದು ಮಕ್ಕಳು ಆಡುತ್ತಿರುವಾಗ, ಹಿರಿಯರಿಗೆ ಗಂಟೆಗಟ್ಟಲೆ ವಿಶ್ರಾಂತಿ ಪಡೆಯಲು ಇದು ಉತ್ತಮ ಸ್ಥಳವೆನಿಸಿದೆ. ಪ್ರಶಾಂತವಾದ ಈ ಸ್ಥಳದಲ್ಲಿ ನೀವು ಧ್ಯಾನಸ್ಥರಾಗಬಹುದು. ಇನ್ನು ಸಾವಂದಿ ವೀರಭದ್ರೇಶ್ವರದೇವಾಲಯ ಮತ್ತು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿದೇವಾಲಯಗಳು ಬೆಟ್ಟದ ತಪ್ಪಲಿನಲ್ಲಿದ್ದರೆ ನಂದಿ ದೇವಾಲಯವು ಬೆಟ್ಟದ ತುತ್ತತುದಿಯಲ್ಲಿದೆ.
ನಾನು ಬೈಕಿನಲ್ಲಿ ಬೆಟ್ಟ ತಲುಪಿದೊಡನೆ ಅನ್ನಿಸಿದ್ದು ಇಷ್ಟ ದೊಡ್ಡ ಬೆಟ್ಟವನ್ನು ಹತ್ತಲು ಸಾಧ್ಯವೇ ಎಂದು. ಪಶ್ಚಿಮ ದಿಕ್ಕಿನಿಂದ ಅದು ನೇರಕ್ಕೆ ಬೃಹತ್ ಆಕಾರದಲ್ಲಿ ಕಾಣುತ್ತದೆ. ಇನ್ನು ಸ್ವಲ್ಪ ಹೊತ್ತು ಸುಧಾರಿಸಿಕೊಂಡು, ಮೆಟ್ಟಿಲುಗಳಿಲ್ಲದ ಈ ಬೆಟ್ಟ ಹತ್ತಲು ಆರಂಭಿಸಿದೆ. ಮಾರ್ಗ ತಪ್ಪದಂತೆ ಗುರುತಿನ ಚಿಹ್ನೆಗಳನ್ನು ಹಾಕಲಾಗಿದೆ. ಅವನ್ನು ಅನುಸರಿಸಿಕೊಂಡು ಏರುತ್ತಿದ್ದರೆ ದಾರಿ ಸಾಗುವುದೇ ಇಲ್ಲ. ಒಂದಷ್ಟು ದೂರ ಬೆಟ್ಟ ಹತ್ತಿ ಸುಸ್ತಾಗಿ ಕುಳಿತುಕೊಂಡರೆ ವಿಶಾಲ ಕಾಡು ಗೋಚರಿಸುತ್ತದೆ. ಮತ್ತಷ್ಟು ಹತ್ತಿದರೆ 400-500 ವರ್ಷ ಹಳೆಯ ಕೋಟೆಯೊಂದು ಪ್ರತ್ಯಕ್ಷವಾಗುತ್ತದೆ. ಅಲ್ಲಿಗೆ ಒಂದು ಬೆಟ್ಟ ಮುಕ್ತಾಯವಾಗಿ, ಅಲ್ಲಿಂದ ನಂದಿ ವಿಗ್ರಹವಿರುದ ದೊಡ್ಡ ಬೆಟ್ಟಕ್ಕೆ ದಾರಿಯಿದೆ.
ಆಗಾಗ ವಿಶ್ರಾಂತಿ ಪಡೆದು ಬೆಟ್ಟ ಹತ್ತುವುದು ಸುಲಭವಾದೀತು. ವೃತ್ತಿಪರ ಚಾರಣಿಗರು ಸರಸರನೇ ಬೆಟ್ಟ ಏರಬಹುದು. ಸಾಮಾನ್ಯವಾಗಿ ಪೂರ್ತಿ ಬೆಟ್ಟ ಹತ್ತಲು ಒಂದೂವರೆಯಿಂದ-ಎರಡು ಗಂಟೆಗಳ ಸಮಯ ಬೇಕು. ಕಷ್ಟಪಟ್ಟು ಬೆಟ್ಟ ಪೂರ್ತಿ ಹತ್ತಿದ ಮೇಲಂತೂ ಸುತ್ತಲಿನ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳುವುದು ವಿಶಿಷ್ಟ ಅನುಭವವೆಂದು ಬೆಟ್ಟ ಹತ್ತಿರುವವರು ಹೇಳುತ್ತಾರೆ. ನಾನಂತೂ ಮೊದಲ ಬಾರಿಗೆ ಪೂರ್ತಿ ಬೆಟ್ಟ ಹತ್ತಲು ಹೋಗಲಿಲ್ಲ. ಏಕೆಂದರೆ ಬೆಟ್ಟ ಹತ್ತಲು ಬೇಕಿರುವಷ್ಟು ಶಕ್ತಿ ಇಳಿಯಲೂ ಬೇಕಿರುತ್ತದೆ. ಹಾಗಾಗಿ ತೀರಾ ಸುಸ್ತಾಗುವುದು ಬೇಡ ಎಂದು ಈ ಮೊದಲ ಚಾರಣದಲ್ಲಿ, ಬೆಟ್ಟದ ಕೋಟೆಯವರೆಗೆ ಹತ್ತಿ ವಿಶ್ರಾಂತಿಗೆ ಮುಂದಾದೆ.
ಮನೆಮಂದಿಯೆಲ್ಲ ಬೆಟ್ಟ ಹತ್ತುವುದು ಹೆಚ್ಚಿನ ಖುಷಿ ಕೊಡುತ್ತದೆ. ಎಷ್ಟು ಸಾಧ್ಯವೋ ಅಷ್ಟು ಮೇಲೇರಿ ಒಟ್ಟಿಗೆ ಊಟ ಮಾಡಿ, ವಿಶ್ರಾಂತಿ ತೆಗೆದುಕೊಂಡು ಕೆಳಗಿಳಿಯಬಹುದು. ಬೆಟ್ಟದ ಮೇಲೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲವಾದ್ದರಿಂದ ತಿಂಡಿ ಜೊತೆಗೆ ಹೆಚ್ಚು ನೀರು ಒಯ್ಯುವುದು ಕಡ್ಡಾಯ.
ಚಳಿಗಾಲದಲ್ಲಿ ಮಂಜಿನ ಮುಸುಕು ಹೊದ್ದು ಕಂಗೊಳಿಸುವ ಈ ಬೆಟ್ಟದ ತುದಿಯಲ್ಲಿ, ಮಧ್ಯಾಹ್ನ ನಿಂತು ನೋಡಿದರೆ ಮೋಡಗಳು ಇರದಿದ್ದಲ್ಲಿ ಸುತ್ತಲಿನ ಹಲವಾರು ಕೆರೆ ಮತ್ತು ಬೆಟ್ಟಗಳು ಕಾಣಸಿಗುತ್ತವೆ. ಸಾವನದುರ್ಗ ಕಾಡಿನ ಮನೋಹರ ದೃಶ್ಯ ಕಾಣುತ್ತದೆ.

ಸಾವಂಡಿ, ಸಾಮಂತದುರ್ಗ, ಸಾವಿನ ದುರ್ಗ ಎಂದೆಲ್ಲಾ ಕರೆಯಲ್ಪಡುತ್ತಿದ್ದ ಈ ಊರನ್ನು ಹಲವು ರಾಜರು ವಶಪಡಿಸಿಕೊಂಡು ಆಳಿದ್ದಾರೆ ಎಂದು ಇತಿಹಾಸ ಹೇಳುತ್ತದೆ. ಇದರ ಬಳಿ ಇರುವ ಮಾಗಡಿಯನ್ನು ಕೆಂಪೇಗೌಡರು ಸೇರಿದಂತೆ ಹಲವರು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು ಎನ್ನಲಾಗಿದೆ. ಟಿಪ್ಪು ಸುಲ್ತಾನ್, ಮೈಸೂರು ಒಡೆಯರು, ಬ್ರಿಟಿಷರು ನಂತರ ಇದನ್ನು ವಶಪಡಿಸಿಕೊಂಡಿದ್ದರು. ಈಗ ಸರ್ಕಾರ ಈ ಕಾಡನ್ನು ರಕ್ಷಿಸುವ ಹೊಣೆ ಹೊತ್ತುಕೊಂಡಿದೆ.
ದಾರಿಯಲ್ಲಿ ಸಿಗುವ ದೊಡ್ಡ ಆಲದ ಮರ ಮಂಚನಬೆಲೆ ಅಣೆಕಟ್ಟಿನ ಆಕರ್ಷಣೆಯ ಜೊತೆಗೆ, ದಾರಿಯುದ್ದಕ್ಕೂ ಘಮ ಘಮ ಫಿಶ್ ಫ್ರೈ ಮಾಡಿಕೊಡುವ ಸಾಲು-ಸಾಲು ಅಂಗಡಿಗಳು ನಿಮ್ಮನ್ನು ಕೈಬೀಸಿ ಕರೆಯುತ್ತವೆ. ಮೀನಿನ ರುಚಿ ಸವಿಯುವುದನ್ನು ಮರೆಯದಿರಿ.


