ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಒಂದು ಲಕ್ಷ ದಾಟಿದೆ. ಅಲ್ಲಿಗೆ ಲಕ್ಷ ದಾಟಿದ ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳ ಪಟ್ಟಿಗೆ ದೆಹಲಿ ಕೂಡ ಸೇರ್ಪಡೆಯಾಗಿದೆ. ಆದರೆ ಭಯಪಡುವ ಅಗತ್ಯವಿಲ್ಲವೆಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.
ಡಿಟಿಟಲ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು “ದೆಹಲಿಯಲ್ಲಿ ಒಂದು ಲಕ್ಷ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಆದರೆ ಅವುಗಳಲ್ಲಿ 72,000 ಜನರು ಗುಣಮುಖರಾಗಿರುವುದರಿಂದ ಭಯಪಡುವ ಅಗತ್ಯವಿಲ್ಲ” ಎಂದಿದ್ದಾರೆ.
ಪ್ರಸ್ತುತ ದೆಹಲಿಯಲ್ಲಿ 25,038 ಸಕ್ರಿಯ ಪ್ರಕರಣಗಳಿದ್ದು ಅವುಗಳಲ್ಲಿ ಸುಮಾರು 15,000 ಜನರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಮರಣದರವು ಇಳಿಕೆಯಾಗಿದೆ. ಅಲ್ಲದೇ ದೇಶದಲ್ಲಿಯೇ ಮೊದಲು ನಾವು ಪ್ಲಾಸ್ಮಾ ಬ್ಯಾಂಕ್ ಸ್ಥಾಪಿಸಿದ್ದೇವೆ. ರೋಗಿಗಳು ಸುಧಾರಿಸಿಕೊಳ್ಳಲು ಪ್ಲಾಸ್ಮಾ ಸಹಾಯ ಮಾಡುತ್ತಿದೆ ಎಂಬುದು ಪ್ರಯೋಗಗಳಲ್ಲಿ ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.
ಗುಣಮುಖರಾದವರು ಪ್ಲಾಸ್ಮಾ ದಾನ ಮಾಡಲು ಮುಂದಾಬೇಕೆಂದು ಕೇಜ್ರಿವಾಲ್ ಒತ್ತಾಯಿಸಿದ್ದಾರೆ. ಪ್ಲಾಸ್ಮಾ ದಾನ ಮಾಡುವುದರಿಂದ ಯಾವುದೇ ಸುಸ್ತು ಮತ್ತು ನೋವು ಕಂಡುಬರುವುದಿಲ್ಲ. ಹಾಗಾಗಿ ಸಮಾಜಕ್ಕೆ ನೆರವಾಗಲು ಪ್ಲಾಸ್ಮಾ ದಾನ ಮಾಡಲು ಮುಂದೆ ಬರಬೇಕೆಂದು ಅವರು ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಈಗ ಬಹಳ ಕಡಿಮೆ ಜನಕ್ಕೆ ಮಾತ್ರ ಆಸ್ಪತ್ರೆ ಅಗತ್ಯವಾಗಿದೆ. ಬಹಳಷ್ಟು ಜನರು ಮನೆಯಲ್ಲಿಯೇ ಗುಣಮುಖರಾಗುತ್ತಿದ್ದಾರೆ. ಪ್ರತಿದಿನ 2300 ರಷ್ಟು ಪ್ರಕರಣಗಳು ವರದಿಯಾಗುತ್ತಿವೆ. ಆದರೂ ದೆಹಲಿಯಲ್ಲಿ 9,900 ಬೆಡ್‌ಗಳು ಸಿದ್ಧವಿವೆ ಎಂದು ಟ್ವೀಟ್ ಮಾಡಿದ್ದಾರೆ.
ದೆಹಲಿಯಲ್ಲಿ ಇದುವರೆಗೂ 3,067 ಜನರು ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಮೋದಿಯ ಈ ಮೂರು ವೈಫಲ್ಯಗಳ ಕುರಿತು ಹಾರ್ವಡ್ ಬ್ಯುಸಿನೆಸ್ ಸ್ಕೂಲ್ ಅಧ್ಯಯನ ಮಾಡುತ್ತದೆ: ರಾಹುಲ್


