ಸರ್ಕಾರಿ ಪದವಿ ಪೂರ್ವ ಕಾಲೇಜು (PUC) ಉಪನ್ಯಾಸಕರ ಹುದ್ದೆಗೆ ಆಯ್ಕೆಯಾಗಿರುವವರಿಗೆ ಈ ಕೂಡಲೇ ನೇಮಕಾತಿ ಪತ್ರ ನೀಡುವಂತೆ ಆದೇಶ ಹೊರಡಿಸಬೇಕೆಂದು ಆಗ್ರಹಿಸಿ ಉಪನ್ಯಾಸಕರಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಕಳೆದ 3 ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಇದುವರೆಗೂ ಸರ್ಕಾರ ಈ ಕಡೆಗೆ ಎಳ್ಳಷ್ಟೂ ಗಮನಹರಿಸಿಲ್ಲ.

2015 ರಲ್ಲಿ ಪ್ರಾರಂಭವಾದ PUC ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯು ಕಾರಣಾಂತರಗಳಿಂದ ವಿಳಂಬವಾಗಿತ್ತು. ನಂತರ 2017ರಲ್ಲಿ ಮತ್ತೊಮ್ಮೆ ಅಧಿಸೂಚನೆ ಹೊರಡಿಸಿ, ಅರ್ಜಿ ಸಲ್ಲಿಸಲು ಮತ್ತೆ ಅವಕಾಶ ನೀಡಲಾಗಿತ್ತು. 2018 ರಲ್ಲಿ ಪರೀಕ್ಷೆ ನಡೆದು ಫಲಿತಾಂಶವೂ ಹೊರಬಿದ್ದಿತ್ತು. 2019 ಡಿಸಂಬರ್‌ನಲ್ಲಿ ಹುದ್ದೆಗೆ ಆಯ್ಕೆಯಾದವರು ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಇದನ್ನೂ ಓದಿ: ನೆಟ್‌ವರ್ಕ್ ಸಮಸ್ಯೆ: ಆನ್‌ಲೈನ್ ತರಗತಿಗಾಗಿ 5 ಕಿಮೀ ನಡೆಯುವ ವಿದ್ಯಾರ್ಥಿಗಳು!
ಆದರೆ ಇದಾಗಿ ಒಂದು ವರ್ಷ ಕಳೆದರೂ ಇನ್ನೂ ನೇಮಕಾತಿ ಪತ್ರವನ್ನು ನೀಡದೇ ಸರ್ಕಾರ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ವಂಚಿಸುತ್ತಿದೆ.
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಒಬ್ಬರಾದ ಅಶೋಕ್ ಎಂಬುವವರು ಇದರ ಕುರಿತು ನಾನು ಗೌರಿ.ಕಾಂ ನೊಂದಿಗೆ ಮಾತನಾಡಿ, “ಇದರ ಹಿಂದೆ ಸರ್ಕಾರದ ಕೈವಾಡವಿದೆ. ನೇಮಕಾತಿ ಪ್ರಕ್ರಿಯೆ ಈಗಾಗಲೇ ವಿಳಂಬವಾಗಿದೆ. ಆದರೆ ಈಗ ಕೊರೊನಾ ಕಾರಣವೊಡ್ಡಿ ನಮಗೆ ವಂಚಿಸಲಾಗುತ್ತಿದೆ. ಈ ಅಧಿಸೂಚನೆ ಹೊರಬಿದ್ದಿದ್ದು ಕಳೆದ 5 ವರ್ಷಗಳ ಹಿಂದೆ. ಪರೀಕ್ಷೆ ನಡೆದು ಫಲಿತಾಂಶ ಬಂದು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದಾಗ ಯಾವ ಕೊರೊನಾ ರೋಗವೂ ಇರಲಿಲ್ಲ. ಆದರೂ ಸರ್ಕಾರ ಅಸಮರ್ಥನೀಯ ನೆಪವೊಡ್ಡುತ್ತಿದೆ” ಎಂದು ಹೇಳಿದರು.

ಇದನ್ನೂ ಓದಿ: ಬಾಕಿ ಸಂಬಳ ಹಾಗೂ ಇತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ
“ನಮಗೆ ನೇಮಕಾತಿ ನೀಡಿದರೆ ಸಂಬಳ ನೀಡಬೇಕಾಗುತ್ತದೆ. ಬದಲಿಗೆ ಕೊರೊನಾ ನೆಪವೊಡ್ಡಿದರೆ ಆ ಹಣವನ್ನು ಉಳಿಸಿಕೊಳ್ಳಬಹುದು ಎಂಬ ಹುನ್ನಾರದಲ್ಲಿ ಈ ಸರ್ಕಾರ ಯೋಚಿಸುತ್ತಿದೆ. ಈಗಾಗಲೆ ಯೂಟ್ಯೂಬ್ ಮತ್ತು ಆನ್ಲೈನ್ ತರಗತಿಗಳು ಆರಂಭವಾಗಿದ್ದು, ಈಗಿರುವ ಉಪನ್ಯಾಸಕರಿಂದಲೇ ಸರಿದೂಗಿಸಿಕೊಳ್ಳಬಹುದು ಎಂದು ಸರ್ಕಾರ ಎಣಿಸುತ್ತಿದೆ. ಆದರೆ ಹೈಕೋರ್ಟ್ ಆದೇಶದ ಪ್ರಕಾರ, ಯಾವುದೇ ಸರ್ಕಾರಿ ಹುದ್ದೆಯ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾದ 1 ವರ್ಷದೊಳಗೆ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಂಡು, ಅಭ್ಯರ್ಥಿಗಳು ಹುದ್ದೆಗೆ ವರದಿ ಮಾಡಿಕೊಳ್ಳಬೇಕು. ಅಧಿಸೂಚನೆ ಹೊರಡಿಸಿ 5 ವರ್ಷ ಕಳೆದಿದೆ. ಅಂತಿಮ ಪಟ್ಟಿ ಪ್ರಕಟವಾಗಿ 1 ವರ್ಷವಾಗಿದೆ. ಆದರೂ ನಮಗೆ ನೇಮಕಾತಿ ಆದೇಶ ಸಿಕ್ಕಿಲ್ಲ.” ಎಂದು ಹೇಳಿದರು.
ಈಗಾಗಲೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಪ್ರತಿಭಟನಾಕಾರರಿಗೆ ಭರವಸೆ ನೀಡಿದ್ದಾರೆ. ಆದರೆ ಈ ಭರವಸೆಗೆ ಮಣಿಯದ ಪ್ರತಿಭಟನಾಕಾರರು, ನಿಯಮಾನುಸಾರ ನೇಮಕಾತಿ ಆದೇಶ ಹೊರಡಿಸುವಂತೆ ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: 35,000 ಕ್ಕೂ ಹೆಚ್ಚು ಖಾಸಗಿ ಶಾಲಾ ಶಿಕ್ಷಕರು ವಜಾ: 8 ಅತಿಥಿ ಉಪನ್ಯಾಸಕರ ಆತ್ಮಹತ್ಯೆ!
ಸರ್ಕಾರ ಈ ಧೊರಣೆಯ ವಿರುದ್ಧ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯವನವರು ದನಿಯೆತ್ತಿದ್ದು, ಶೀಘ್ರವೇ ನೇಮಕಾತಿ ಆದೇಶ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮಾನ್ಯ @BSYBJP ಹಾಗೂ ಶಿಕ್ಷಣ ಸಚಿವ @nimmasuresh ಅವರೇ,
ಪಿಯುಸಿ ನೇಮಕಾತಿ ಪ್ರಕ್ರಿಯೆ ಮುಗಿದ ಮೇಲೆಯೂ ನೇಮಕಾತಿ ಪತ್ರ ದೊರೆಯದೇ ಈ ದಿನ ಮಳೆಯಲ್ಲಿಯೇ ಪಿಯುಸಿ ಮಂಡಳಿಯ ಎದುರು ಕೂತಿದ್ದಾರೆ.
ಈಗಲಾದರೂ ಸಹ ಕಣ್ತೆರೆಯಿರಿ.
ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಿ ಅವರ ಆತಂಕವನ್ನು ದೂರ ಮಾಡಿ pic.twitter.com/G51ETTi71G— Siddaramaiah (@siddaramaiah) October 12, 2020
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಭಾಟನಾ ನಿರತರನ್ನು ಭೇಟಿ ಮಾಡಿ, ಅವರನ್ನು ಬೆಂಬಲಿಸಿ, ಆದೇಶ ನಿಡುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ: ಲಾಕ್‍ಡೌನ್ – ಮನೆಯಿಂದಲೇ ಕೆಲಸ, ಮನೆಕೆಲಸ ಮತ್ತು ಮಹಿಳೆ! – ಮಲ್ಲಿಗೆ ಸಿರಿಮನೆ


