ಮಹಾರಾಷ್ಟ್ರದಲ್ಲಿ ಪಾಲ್ಘರ್ ಗುಂಪು ಹತ್ಯೆ ಘಟನೆ ನಡೆದು ಇಂದಿಗೆ ಒಂದು ವರ್ಷವಾಗಿದೆ. ಘಟನೆಯಲ್ಲಿ ಇಬ್ಬರು ಸಾಧುಗಳು ಮತ್ತು ಅವರ ಚಾಲಕನನ್ನು ಮಕ್ಕಳ ಕಳ್ಳರು ಎಂಬ ಅನುಮಾನದ ಮೇಲೆ ಜನರ ಗುಂಪೊಂದು ಹೊಡೆದೆ ಹತ್ಯೆ ಮಾಡಿತ್ತು. ಈ ಪ್ರಕರಣದಲ್ಲಿ ನೋಂದಾಯಿಸಲಾದ ಮೂರು ಎಫ್ಐಆರ್‌ಗಳಲ್ಲಿ ರಾಜ್ಯ ಸಿಐಡಿಯು ಏಳು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದೆ.
ಈ ಪ್ರಕರಣದಲ್ಲಿ 251 ವಯಸ್ಕರನ್ನು ಬಂಧಿಸಲಾಗಿದ್ದು, 15 ಬಾಲಾಪರಾಧಿಗಳನ್ನು ಬಂಧಿಸಲಾಗಿದೆ. ಬಂಧಿತರಲ್ಲಿ, ಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ 75 ಮಂದಿ ಇನ್ನೂ ಜೈಲುಗಳಲ್ಲಿ ಇದ್ದಾರೆ. ಈ ಪ್ರಕರಣದಲ್ಲಿ ವಾಂಟೆಡ್ ಆರೋಪಿಗಳೆಂದು ಹೆಸರಿಸಲಾದ ಇನ್ನೂ 52 ಜನರನ್ನು ಸಿಐಡಿ ಹುಡುಕುತ್ತಿದೆ.
ಇದನ್ನೂ ಓದಿ: Fact check: ಪಾಲ್ಘರ್ ಗುಂಪು ಹತ್ಯೆಯ ಬಗ್ಗೆ ಸುಳ್ಳು ವರದಿ ಮಾಡಿದ ಪಿಟಿಐ
ಘಟನೆಯ ನಡೆದ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ಕೋಮು ಬಣ್ಣ ಹಚ್ಚಲಾಗಿತ್ತು. ಬಿಜೆಪಿ ಸೇರಿದಂತೆ ಕೆಲವು ಮಾಧ್ಯಮಗಳು ಕೂಡಾ ಘಟನೆಗೆ ಕೋಮು ಆಯಾಮ ನೀಡಲು ಪ್ರಯತ್ನಿಸಿತ್ತು. ಆದರೆ ಸಿಐಡಿ ಇದು ಕೋಮು ಆಧಾರಿತ ಹತ್ಯೆ ಅಲ್ಲ ಎಂದು ಹೇಳಿದೆ.
ಘಟನೆ ನಡೆದ ಕೂಡಲೇ ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಈ ಘಟನೆ ಕುರಿತು ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದರು. ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ನಡೆದ ಘಟನೆಯ ಬಗ್ಗೆ ಬಿಜೆಪಿಯು “ಕೋಮು ರಾಜಕೀಯ” ಮಾಡುತ್ತಿದೆ ಎಂದು ಮಹಾ ವಿಕಾಸ್ ಅಘಾಡಿ ಸರ್ಕಾರ ಆರೋಪಿಸಿತ್ತು.
ಕಳೆದ ವರ್ಷ ಏಪ್ರಿಲ್ 16 ರಂದು ಸಾಧು ಮಹಂತ್ ಕಲ್ಪವೃಕ್ಷ ಗಿರಿ (70) ಸುಶಿಲ್ ಗಿರಿ ಮಹಾರಾಜ್ (35) ಮತ್ತು ಅವರ ಚಾಲಕ ನಿಲೇಶ್ ತೆಲ್ಗಡೆ (30) ಅವರು ವಾಹನವೊಂದರಲ್ಲಿ ಮುಂಬೈಯಿಂದ ಸೂರತ್‌ಗೆ ಪ್ರಯಾಣಿಸುತ್ತಿದ್ದರು. ಆದರೆ ಮಹಾರಾಷ್ಟ್ರದ ಬುಡಕಟ್ಟು ಪ್ರಾಬಲ್ಯದ ಪಾಲ್ಘರ್ ಜಿಲ್ಲೆಯ ದಹನು ತಾಲ್ಲೂಕಿನಲ್ಲಿನ ಪ್ರದೇಶವೊಂದರಲ್ಲಿ ಜನರು ಮಕ್ಕಳ ಕಳ್ಳರು ಎಂದು ಅವರನ್ನು ಹೊಡೆದು ಕೊಂದಿದ್ದಾರೆ. ಈ ಪ್ರದೇಶದಲ್ಲಿ ಹಲವು ದಿನಗಳಿಂದ ಮಕ್ಕಳ ಕಳ್ಳರು ಮತ್ತು ಅಂಗಾಂಗ ಮಾರಾಟ ಮಾಡುವವರು ಸುತ್ತಾಡುತ್ತಿದ್ದಾರೆ ಎಂದು ವಾಟ್ಸಪ್ ಮೂಲಕ ವದಂತಿಗಳು ಹರಡಿತ್ತು.
ಇದನ್ನೂ ಓದಿ: ಪಾಲ್ಘರ್ ಘಟನೆಗೆ ಕೋಮು ಆಯಾಮವಿಲ್ಲ: ಮುಖ್ಯಮಂತ್ರಿ ಉದ್ದವ್ ಠಾಕ್ರೆ ಸ್ಪಷ್ಟನೆ
ಮೊದಲಿಗೆ ಜನರಿಂದ ಸಂತ್ರಸ್ತರನ್ನು ಪೊಲೀಸರು ರಕ್ಷಿಸಿದ್ದರು. ಆದರೆ 300 ರಿಂದ 400 ರಷ್ಟಿದ್ದ ಜನರ ಗುಂಪು ಪೊಲೀಸ್ ವಾಹನದಿಂದ ಅವರನ್ನು ಎಳೆದು ಹಾಕಿ ಹತ್ಯೆ ಮಾಡಿದೆ. ಒಬ್ಬ ಪೋಲಿಸ್ ವಯಸ್ಸಾದ ಸಾಧುವನ್ನು ತ್ಯಜಿಸಿ ಪಲಾಯನ ಮಾಡುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಅಂತಿಮವಾಗಿ ಪಾಲ್ಘರ್ ಎಸ್ಪಿ ಗೌರವ್ ಸಿಂಗ್ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಯಿತು. ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿತ್ತು. ಅಲ್ಲದೆ, ಸ್ಥಳೀಯ ಪೊಲೀಸ್ ಠಾಣೆಯ 35 ಅಧಿಕಾರಿಗಳನ್ನು ವರ್ಗಾಯಿಸಲಾಗಿತ್ತು.
ಘಟನೆ ನಡೆದ ನಾಲ್ಕು ದಿನಗಳ ನಂತರ ಈ ಪ್ರಕರಣವನ್ನು ಎಡಿಜಿ ಅತುಲ್‌ಚಂದ್ರ ಕುಲಕರ್ಣಿ ನೇತೃತ್ವದ ರಾಜ್ಯ ಸಿಐಡಿಗೆ ಹಸ್ತಾಂತರಿಸಲಾಯಿತು. ಅವರ ಮೇಲ್ವಿಚಾರಣೆಯಲ್ಲಿ ಮೂರು ಎಫ್‌ಐಆರ್‌ಗಳನ್ನು ನೋಂದಾಯಿಸಲಾಗಿದೆ. ಮೊದಲ ಎರಡು ಎಫ್‌ಐಆರ್‌ಗಳನ್ನು ಸಾಧುಗಳ ಹತ್ಯೆಗೆ ಸಂಬಂಧಿಸಿದ್ದಾಗಿದ್ದು, ಮೂರನೆಯದು ಸ್ಥಳಕ್ಕೆ ತಲುಪಿದ ಪೊಲೀಸ್ ತಂಡದ ಮೇಲೆ ಕಲ್ಲು ತೂರಾಟಕ್ಕೆ ಸಂಬಂಧಿಸಿದೆ.
ಇದನ್ನೂ ಓದಿ: ನನ್ನ ಮೇಲೆ ಗುಂಪು ಹಲ್ಲೆಯಾದಾಗ ನೀವೇಕೆ ಮಾತಾಡಲಿಲ್ಲ?: ಸ್ವಾಮಿ ಅಗ್ನಿವೇಶ್ ಪ್ರಶ್ನೆ
ಕಳೆದ ಜುಲೈನಲ್ಲಿ ಸಿಐಡಿ 126 ಆರೋಪಿಗಳ ವಿರುದ್ಧ ಮೊದಲ ಎರಡು ಎಫ್‌ಐಆರ್‌ಗಳಲ್ಲಿ ಎರಡು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿತ್ತು. ಕಳೆದ ಅಕ್ಟೋಬರ್‌ನಲ್ಲಿ ಇನ್ನೂ 75 ಜನರನ್ನು ಬಂಧಿಸಲಾಗಿದ್ದು, ಇನ್ನೂ ಎರಡು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಲಾಗಿದೆ, ಅದರ ನಂತರ ಕಳೆದ ಡಿಸೆಂಬರ್‌ನಲ್ಲಿ ಬಂಧಿಸಲ್ಪಟ್ಟ 22 ಜನರ ವಿರುದ್ಧ ಮೂರನೇ ಪೂರಕ ಚಾರ್ಜ್‌ಶೀಟ್ ದಾಖಲಿಸಲಾಗಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಈ ಆರು ಚಾರ್ಜ್‌ಶೀಟ್‌ಗಳ ಹೊರತಾಗಿ, ಪೊಲೀಸರಿಗೆ ತಮ್ಮ ಕರ್ತವ್ಯ ನಿರ್ವಹಿಸದಂತೆ ಅಡ್ಡಿಯುಂಟು ಮಾಡಿದ ಮತ್ತು ಅವರ ಕೊಲೆ ಯತ್ನ ಮಾಡಿದ ಆರೋಪದ ಮೇಲೆ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಳೆದ ಆಗಸ್ಟ್‌ನಲ್ಲಿ ಮತ್ತೊಂದು ಚಾರ್ಜ್‌ಶೀಟ್ ದಾಖಲಿಸಲಾಗಿತ್ತು.
ಘಟನೆಯ ನಂತರ, ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯು ಕೋಮು ಆಧಾರಿತ ಹಿಂಸಾಚಾರ ಎಂದು ಹೇಳಿ ಹರಿಯಬಿಡಲಾಗಿತ್ತು. ಘಟನೆಯ ಬಗ್ಗೆ ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ಬಿಜೆಪಿ ಆರೋಪಿಸಿತ್ತು ಮತ್ತು ಕೇಂದ್ರ ಏಜೆನ್ಸಿಗಳು ತನಿಖೆ ನಡೆಸಬೇಕೆಂದು ಒತ್ತಾಯಿಸಿತ್ತು. ಆದರೆ, ಈ ಎಲ್ಲಾ ಆರೋಪಗಳು ಸುಳ್ಳು ಎಂದು ಆಗ ಮಹಾರಾಷ್ಟ್ರದ ಗೃಹ ಸಚಿವರಾಗಿದ್ದ ಅನಿಲ್ ದೇಶ್ಮುಖ್ ಅವರು ಮೃತಪಟ್ಟವರು ಮತ್ತು ಆರೋಪಿಗಳು ಒಂದೇ ಧರ್ಮಕ್ಕೆ ಸೇರಿದವರು ಎಂದು ಬಂಧಿತ ಆರೋಪಿಗಳ ಹೆಸರನ್ನು ಟ್ವಿಟರ್‌ನಲ್ಲಿ ಬಿಡುಗಡೆ ಮಾಡಿದ್ದರು.
ಇದನ್ನೂ ಓದಿ: ಪಾಲ್ಘರ್ ಘಟನೆ: 101 ಬಂಧಿತರಲ್ಲಿ ಒಬ್ಬರೂ ಮುಸ್ಲಿಮರಿಲ್ಲ – ಗೃಹಸಚಿವರ ಸ್ಪಷ್ಟನೆ


