Homeಕರ್ನಾಟಕಯಡಿಯೂರಪ್ಪ ಸರ್ಕಾರಕ್ಕೆ 1 ವರ್ಷ: ವಿವೇಚನೆಯನ್ನು ದೆಹಲಿ ದೊರೆಗಳ ಕಾಲಬುಡದಲ್ಲಿ ಅಡವಿಟ್ಟಿದ್ದಷ್ಟೇ ಸಾಧನೆ

ಯಡಿಯೂರಪ್ಪ ಸರ್ಕಾರಕ್ಕೆ 1 ವರ್ಷ: ವಿವೇಚನೆಯನ್ನು ದೆಹಲಿ ದೊರೆಗಳ ಕಾಲಬುಡದಲ್ಲಿ ಅಡವಿಟ್ಟಿದ್ದಷ್ಟೇ ಸಾಧನೆ

ಇತ್ತ ಖರೀದಿಯಾದ ಮಾಜಿ ಅನರ್ಹರು ಮಂತ್ರಿ ಮಂಡಲ ಸೇರುವ ಹೊತ್ತಿಗೆ ಅತ್ತ ಯಾವುದೋ ದೇಶದಲ್ಲಿ ಹುಟ್ಟಿಕೊಂಡ ಕೊರೊನ ವೈರಸ್ ಭಾರತಕ್ಕೆ ವಕ್ಕರಿಸಿದ್ದು ಒಂಥರಾ ಅರ್ಥಪೂರ್ಣ ಕಾಕತಾಳೀಯವೇ ಆಗಿದೆ.

- Advertisement -
- Advertisement -

ಕಳೆದ ಅಂದರೆ 2018ರ ವಿಧಾನ ಸಭಾ ಚುನಾವಣೆಯಲ್ಲಿ ಕರ್ನಾಟಕದ ಮತದಾರರು ಯಾವುದಾದರೂ ಒಂದು ಪಕ್ಷಕ್ಕೆ ಪೂರ್ಣ ಬಹುಮತ ನೀಡಿದ್ದರೆ ಈಗ ನಾವು ಆ ಪಕ್ಷದ ಸರಕಾರಕ್ಕೆ ಎರಡು ವರ್ಷ ತುಂಬಿದ್ದನ್ನು ಸ್ಮರಿಸಿ ಎರಡು ತಿಂಗಳಾಗುತ್ತಿತ್ತು. ಚುನಾವಣೆಯಲ್ಲಿ ಮತದಾರ ಮೂರೂ ಪಕ್ಷಗಳನ್ನು ತಿರಸ್ಕರಿಸಿದ ಕಾರಣಕ್ಕೆ ಈಗ ನಾವು ಚುನಾವಣಾ ನಂತರದ ಎರಡನೆಯ ಸರಕಾರದ ಒಂದನೆಯ ವರ್ಧಂತಿಯಲ್ಲಿದ್ದೇವೆ.

ಒಂದು ಸರಕಾರಕ್ಕೆ ಒಂದು ವರ್ಷವಾದಾಗ ಅಥವಾ ಐದು ವರ್ಷ ತುಂಬಿದಾಗ ಅದರ ಸಾಧನೆ -ವೈಫಲ್ಯಗಳನ್ನು ಪರಾಮರ್ಶೆ ಮಾಡುವುದು ಹೇಗೆ ಎನ್ನುವುದಕ್ಕೆ ನಮ್ಮ ಬಳಿ ಯಾವುದೇ ಸರ್ವತ್ರ ಸ್ವೀಕೃತ ಮಾನದಂಡಗಳಿಲ್ಲ. ನಮ್ಮಲ್ಲಿ ಅಂದರೆ ಮಾಧ್ಯಮದವರ ಬಳಿ ಮಾತ್ರ ಎಂದಲ್ಲ, ಪ್ರಜಾತಂತ್ರದ ಸಿದ್ಧಾಂತಗಳಲ್ಲೇ ಸರಕಾರದ ಕೆಲಸವನ್ನು ಮೌಲ್ಯಮಾಪನ ಮಾಡುವುದು ಹೇಗೆ ಎನ್ನುವುದರ ಬಗ್ಗೆ ಎಲ್ಲೂ ಪ್ರಸ್ತಾಪ ಇದ್ದಂತೆ ಇಲ್ಲ. ಸರ್ಕಾರವೊಂದರ ಕಾರ್ಯವೈಖರಿಯನ್ನು ಹೇಗೆ ಅಳೆಯಬೇಕು, ಹೇಗೆ ತೂಗಬೇಕು ಎನ್ನುವುದು ಏನಿದ್ದರೂ ಮತದಾರರ ಭಾವಕ್ಕೆ ಮತ್ತು ಭಕುತಿಗೆ ಬಿಟ್ಟ ವಿಚಾರ. ಇರಲಿ.

ಹೋದ ಚುನಾವಣೆ ಆದ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿ (ಎಸ್) ಪಕ್ಷಗಳ ಸಮ್ಮಿಶ್ರ ಸರಕಾರ ಇತ್ತು. ಅದು ಸಮ್ಮಿಶ್ರ ಸರ್ಕಾರದಂತೆ ಇರದೇ ಕಲಬೆರಕೆ ಸರ್ಕಾರದಂತೆ ವರ್ತಿಸಿತು ಎನ್ನುವುದು ವಾಸ್ತವ. ಅದನ್ನು ಕಪಟದಿಂದ ಕೆಡವಿ ಬಿಜೆಪಿ ಸರಕಾರ ರಚಿಸಿತು. ಈಗ ಕರ್ನಾಟಕದಲ್ಲಿ ಬಿಜೆಪಿ ‘ಬಹುಮತ’ದ ಆಧಾರದಲ್ಲಿ ರಚಿಸಿದ ಸರಕಾರ ಇದೆ. ಈ ಸರಕಾರದಲ್ಲಿ ಎರಡು ಭಾಗಗಳಿವೆ. ಒಂದು ಭಾಗ ಚುನಾಯಿತವಾದದ್ದು. ಇನ್ನೊಂದು ಭಾಗ ಖರೀದಿಸಲ್ಪಟ್ಟದ್ದು. ಚುನಾಯಿತ ಭಾಗ ಸಂಪೂರ್ಣ ಚುನಾಯಿತ ಎನ್ನುವ ಹಾಗಿಲ್ಲ ಯಾಕೆಂದರೆ ಚುನಾವಣೆಯಲ್ಲೂ ಕೆಲವೊಮ್ಮೆ ಅಥವಾ ಕೆಲವು ಮತಗಳನ್ನು ಖರೀದಿಸಲಾಗುತ್ತದೆ ಎನ್ನುವ ಕಾರಣಕ್ಕೆ. ಅದೇ ರೀತಿ ಖರೀದಿಸಲ್ಪಟ್ಟ ಭಾಗ ಸಂಪೂರ್ಣ ಖರೀದಿಸಲ್ಪಟ್ಟದ್ದು ಎನ್ನುವ ಹಾಗಿಲ್ಲ. ಖರೀದಿಯಾದವರು ಆ ನಂತರ ಉಪಚುನಾವಣೆಯಲ್ಲಿ ಮತ್ತೆ ಚುನಾಯಿತರಾಗಿದ್ದಾರೆ. ಇನ್ನೊಂದರ್ಥದಲ್ಲಿ ನೋಡುವುದಾದರೆ ಈ ಸರಕಾರ ಒಂದು ಭಾಗ ಅರ್ಹ ಚುನಾಯಿತ ಪ್ರತಿನಿಧಿಗಳನ್ನು ಹೊಂದಿದ್ದಾರೆ ಇನ್ನೊಂದು ಭಾಗ ಮಾಜಿ ಅನರ್ಹ ಚುನಾಯಿತ ಪ್ರತಿನಿಧಿಗಳನ್ನು ಹೊಂದಿದೆ. ಇವೆಲ್ಲಾ ಯಾವ ಸರಕಾರದ ಸಾಧನೆಯ ಒಂದನೇ ವರ್ಧಂತಿಯ ಮೌಲ್ಯಮಾಪನ ನಡೆಸಬೇಕಿದೆಯೋ ಆ ಸರಕಾರಕ್ಕೆ ಸಂಬಂಧಿಸಿದ ಕೆಲವು ಮೂಲಭೂತ ಸತ್ಯಗಳು.

ಸಾಮಾನ್ಯವಾಗಿ ಮಾಧ್ಯಮಗಳಲ್ಲಿ ನಡೆಯುವ ಸರಕಾರದ ವರ್ಷಾವಧಿ ಪರಾಮರ್ಶೆಯಲ್ಲಿ ಈ ಯೋಜನೆ, ಆ ಯೋಜನೆ, ಇದಕ್ಕೆ ಅಷ್ಟು ಹಣ, ಅದಕ್ಕೆ ಅಷ್ಟು ಹಣ, ಈ ಹಗರಣ, ಆ ಪ್ರಕರಣ ಅಂತ ಪಟ್ಟಿ ಮಾಡುವುದು ವಾಡಿಕೆ. ಅದನ್ನು ಮಾಡಿದರೂ ಒಂದೇ, ಮಾಡದಿದ್ದರೂ ಒಂದೇ. ಯಾಕೆಂದರೆ ಎಲ್ಲಾ ಕಾಲದಲ್ಲೂ ಎಲ್ಲಾ ಸರಕಾರಗಳ ಅವಧಿಯಲ್ಲೂ ಇವೆಲ್ಲಾ ನಡೆಯುತ್ತವೆ. ಅದನ್ನು ಇಲ್ಲೂ ಮಾಡುವುದರಲ್ಲಿ ಅರ್ಥವಿಲ್ಲ. ಹಾಗೆಂದು ಮೇಲೆ ಹೇಳಿದಂತೆ ಇನ್ಯಾವುದೋ ರೀತಿಯಲ್ಲಿ ಸರ್ಕಾರವೊಂದರ ವಾರ್ಷಿಕ ಮೌಲ್ಯಮಾಪನ ಮಾಡುವುದು ಹೇಗೆ ಎನ್ನುವುದು ಯಾರಿಗೂ ತಿಳಿಯದ ಹಿನ್ನೆಲೆಯಲ್ಲಿ ಬಹುಶಹ ಹೀಗೆ ಮಾಡಬಹುದು. ಈ ಕಾಲಕ್ಕೆ ತಕ್ಕುದಾಗಿ ಈ ಸರಕಾರದ ಅವಧಿಯನ್ನು ಕೋವಿಡ್-19 ಪೂರ್ವದ ಅವಧಿ ಮತ್ತು ಕೋವಿಡ್-19 ಕಾಲದ ಅವಧಿ ಅಂತ ವಿಂಗಡಿಸೋಣ. ಕೋವಿಡ್-19 ಪೂರ್ವದಲ್ಲಿ ಈ ಸರಕಾರದ ಚರ್ಯೆ ಮತ್ತು ಕಾರ್ಯ ಹೇಗಿದ್ದವು ಮತ್ತು ಈಗ ಅಂದರೆ ಕೋವಿಡ್-19 ಅವಧಿಯಲ್ಲಿ ಹೇಗಿವೆ ಅಂತ ಸ್ಥೂಲವಾಗಿ ಅವಲೋಕಿಸಿದರೆ ಅಲ್ಲಿಗೆ ಪರಾಮರ್ಶೆಯ ಕಟ್ಟುಕಟ್ಟಳೆ ನೆರವೇರಿಸಿದಂತೆ ಅಂತ ಭಾವಿಸೋಣ.

ಕೊರೊನಾ ಪೂರ್ವದ ಅವಧಿ ಎಂದರೆ ಹೋದ ವರ್ಷದ ಜುಲೈನಲ್ಲಿ ಬಿ.ಎಸ್. ಯಡಿಯೂರಪ್ಪ ಎಂಬ ಹೆಸರಿನವರಾದ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಂದಿನಿಂದ ಹಿಡಿದು ಈ ವರ್ಷದ ಮಾರ್ಚ್‍ನಲ್ಲಿ ಕೊರೊನಾ ವೈರಸ್ ಕನ್ನಡದ ಮಣ್ಣಿಗೆ ಕಾಲಿಡುವ ತನಕದ ಸುಮಾರು ಎಂಟು ತಿಂಗಳ ಕಾಲ ಈ ಸರಕಾರ ಹೇಗೆ ಕಾರ್ಯ ನಿರ್ವಹಿಸಿತು? ಹೇಗೆ ಕಾರ್ಯ ನಿರ್ವಹಿಸಿತು ಎಂದರೆ ಕರ್ನಾಟಕ ಸರಕಾರವು ಬಿಜೆಪಿಯ ಕೇಂದ್ರ ಸರಕಾರದ ಒಂದು ರಾಜ್ಯ ಮಟ್ಟದ ಇಲಾಖೆಯಂತೆ ಕಾರ್ಯ ನಿರ್ವಹಿಸಿತು. ಅಧಿಕಾರ ಸ್ವೀಕರಿಸಿದ ಮುಖ್ಯಮಂತ್ರಿಗೆ ತಿಂಗಳ ಕಾಲ ಮಂತ್ರಿಮಂಡಲ ರಚಿಸುವ ಅಧಿಕಾರವಿಲ್ಲದ, ಮಂತ್ರಿಮಂಡಲ ರಚನೆಯ ಕಾಲಕ್ಕೆ ಅದರಲ್ಲಿ ಯಾರಿರುತ್ತಾರೆ ಅಂತ ನಿರ್ಣಯಿಸಲು ಅಥವಾ ಊಹಿಸಲೂ ಆಗದ ರೀತಿಯಲ್ಲಿ ರಾಜ್ಯಸರಕಾರವನ್ನು ಕೇಂದ್ರದಿಂದ ಬಿಜೆಪಿಯ ನಾಯಕರು ನಿಯಂತ್ರಿಸಿದರು. ಕೇಂದ್ರ ಸರಕಾರದಿಂದ ನೆರೆ ಪರಿಹಾರ ಬರಲಿಲ್ಲ, ಬರ ಪರಿಹಾರ ಬರಲಿಲ್ಲ. ಅದು ಬಿಡಿ, ಸಾಂವಿಧಾನಿಕವಾಗಿ ಮತ್ತು ಮೂಲಭೂತ ಅವಶ್ಯಕತೆಯಾಗಿ ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ತೆರಿಗೆಯ ಪಾಲು ಬರಲಿಲ್ಲ. ರಾಜ್ಯ ಸರಕಾರವು ಕೇಂದ್ರ ಸರಕಾರ ನೀಡಿದ್ದಷ್ಟನ್ನು ಪಡೆದು, ಹೇಳಿದ್ದಷ್ಟನ್ನು ಮಾಡಿಕೊಂಡು ಇರಬೇಕಾದ ಪರಿಸ್ಥಿತಿ ಇದ್ದಂತೆ ತೋರಿತು. ದುರ್ಬಲ ಮುಖ್ಯಮಂತ್ರಿಗಳ ಕತೆ ಹಿಂದೆಯೂ ಕೇಳಿದ್ದೇವೆ, ಮುಖ್ಯಮಂತ್ರಿಗಳನ್ನು ಕೇಂದ್ರ ಸರಕಾರ ಹಿಂದೆ ಇತರ ಪಕ್ಷಗಳ ಸರಕಾರ ಇದ್ದಾಗಲೂ ನಿಯಂತ್ರಿಸುತ್ತಿದ್ದ ಕತೆ ಕೇಳಿದ್ದೇವೇ. ಆದರೆ ಒಂದು ಇಡೀ ರಾಜ್ಯ ಸರಕಾರವೇ ಕೇಂದ್ರ ಸರಕಾರದ ಮುಂದೆ ಹೀಗೆ ದೈನೇಸಿ ಮಂಡಿಯೂರಿ ನಡೆದುಕೊಳ್ಳಬೇಕಾದ ದೌರ್ಬಾಗ್ಯ ಹಿಂದೆ ಬಂದದ್ದು ಅಧಿಕೃತವಾಗಿಯಾಗಲೀ, ಅನಧಿಕೃತವಾಗಿಯಾಗಲೀ ಎಲ್ಲೂ ದಾಖಲಾದ ಹಾಗೆ ಇಲ್ಲ. ಚುನಾವಣೆಯ ಸಂದರ್ಭದಲ್ಲಿ, ಕಾಂಗ್ರೆಸ್ ಶಾಸಕರ ಖರೀದಿಯ ಸಂದರ್ಭದಲ್ಲಿ, ಉಪಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯವರು ಹೇಳುತಿದ್ದ ಒಂದು ಮಾತು ಎಂದರೆ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರ, ಅರ್ಥಾತ್ ಬಿಜೆಪಿ ಸರಕಾರ, ಇದ್ದುಬಿಟ್ಟರೆ ಮತ್ತೆ ಕನ್ನಡಿಗರ ಭಾಗ್ಯಕ್ಕೆ ಎಣೆಯೇ ಇಲ್ಲ ಅಂತ. ಬಹಳಷ್ಟು ಜನ ಅದನ್ನು ನಂಬಿದರು ಕೂಡಾ. ಆ ಮಾತಿನ ಸತ್ಯಾಸತ್ಯತೆ ಈ ಸರಕಾರ ಅಧಿಕಾರಕ್ಕೆ ಬಂದ ಒಂದೆರಡು ತಿಂಗಳುಗಳಲ್ಲೇ ಜನರಿಗೆ ಮನವರಿಕೆಯಾಗಿರಬೇಕು.

ಕೊರೋನ ಪೂರ್ವದ ಬಹುಪಾಲು ಅವಧಿಯಲ್ಲಿ ಇದ್ದದ್ದು ಒಂದು ಅಸಂಪೂರ್ಣ ಸರಕಾರ. ಯಾಕೆಂದರೆ ಮಂತ್ರಿ ಮಂಡಲದ ಅರ್ಧಕ್ಕರ್ಧವನ್ನು ಕಾಂಗ್ರೆಸ್ಸಿನಿಂದ ಖರೀದಿಸಿ ತಂದವರಿಗೆ ಅಂತ ಬದಿಗಿರಿಸಿ ಕಾಯಲಾಯಿತು. ಸುಪ್ರೀಂ ಕೋರ್ಟ್‍ನಿಂದ ಪಕ್ಷಾಂತರ ಮಾಡಿದ ಕಾರಣಕ್ಕೆ ಅನರ್ಹರು ಅಂತ ಕರೆಸಿಕೊಂಡ ಅವರು ಉಪಚುನಾವಣೆ ಗೆಲ್ಲುವವರೆಗೂ ಮಂತ್ರಿಗಳಾಗುವ ಹಾಗಿರಲಿಲ್ಲ. ಕೊನೆಗೂ ಡಿಸೆಂಬರ್‌ನಲ್ಲಿ ಚುನಾವಣೆಗಳು ನಡೆದು ಜನವರಿ ಹೊತ್ತಿಗೆ ಮಾಜಿ ಅನರ್ಹರೂ ಮಂತ್ರಿಮಂಡಲ ಸೇರಿಕೊಳ್ಳುವುದರ ಜೊತೆಗೆ ಸರಕಾರ ಹೆಚ್ಚುಕಡಿಮೆ ಪೂರ್ಣಸ್ವರೂಪ ಪಡೆಯಿತು. ಇತ್ತ ಖರೀದಿಯಾದ ಮಾಜಿ ಅನರ್ಹರು ಮಂತ್ರಿ ಮಂಡಲ ಸೇರುವ ಹೊತ್ತಿಗೆ ಅತ್ತ ಯಾವುದೋ ದೇಶದಲ್ಲಿ ಹುಟ್ಟಿಕೊಂಡ ಕೊರೊನ ವೈರಸ್ ಭಾರತಕ್ಕೆ ವಕ್ಕರಿಸಿದ್ದು ಒಂಥರಾ ಅರ್ಥಪೂರ್ಣ ಕಾಕತಾಳೀಯವೇ ಆಗಿದೆ.

ಹಾಗೂ ಹೀಗೋ ಫೆಬ್ರವರಿ ಕಳೆದು, ದುಡ್ಡಿಲ್ಲದ ಸ್ಥಿತಿಯಲ್ಲೇ ಒಂದು ಬಜೆಟ್ ಮಂಡಿಸಿ ಇನ್ನೇನು ಕೊಸರಿ ನಿಲ್ಲಬೇಕು ಎಂದುಕೊಂಡಾಗ ಕರ್ನಾಟಕಕ್ಕೂ ಬಂದೇ ಬಿಟ್ಟಿತು ಕೊರೋನಾ. ಅದು ಬಂದದ್ದರಿಂದ ಒಂದರ್ಥದಲ್ಲಿ ಸರಕಾರ ಮತ್ತು ಮುಖ್ಯಮಂತ್ರಿಗಳ ಸ್ಥಾನ ಸುಭದ್ರವಾಯಿತು ಅಂತ ಹಲವು ವಿಶ್ಲೇಷಕರ ಅಭಿಪ್ರಾಯ. ಯಾಕೆಂದರೆ, ಮೊದಲ ಅವಧಿಯಲ್ಲಿ ಬಿಜೆಪಿಯ ಕೇಂದ್ರ ನಾಯಕರು ರಾಜ್ಯ ಸರಕಾರವನ್ನು ನಡೆಸಿಕೊಂಡದನ್ನು ನೋಡಿದ ಹಲವರಿಗೆ ಒಳಗಿನಿಂದ ಏನೋ ಮಸಲತ್ತು ನಡೆಯುತ್ತಿದೆ. ಈ ಸರಕಾರವನ್ನು ಹೀಗೆ ಮುಂದುವರಿಸುವ ಇರಾದೆ ದೆಹಲಿಯ ದೊಡ್ಡ ನಾಯಕರಿಗೆ ಇಲ್ಲದ ಕಾರಣವೇ ಈ ರೀತಿಯ ಅಸಹಕಾರ ಚಳವಳಿ ನಡೆಯುತ್ತಿದೆ ಅಂತ ಅನ್ನಿಸಿತ್ತು. ಅಂತೂ ಕೊರೊನಾ ಬಂದು ಸದ್ಯಕ್ಕೆ ಈ ಸರಕಾರ ಹೀಗೆ ಮುಂದುವರಿಯುವುದು ಎಂದಾಯಿತು. ಜತೆಗೆ ಆರಂಭದ ಅವಧಿಯಲ್ಲಿ ರಾಜ್ಯ ಸರಕಾರ ಕೊರೊನಾ ಸಂಕಷ್ಟವನ್ನು ಚೆನ್ನಾಗಿಯೇ ನಿಭಾಯಿಸಿತು ಎನ್ನುವ ಅಭಿಪ್ರಾಯ ಬೇರೆ ಹುಟ್ಟಿಕೊಂಡು ಒಂದು ಮಟ್ಟಿಗೆ ರಾಜಕೀಯ ವಾತಾವರಣ ತಿಳಿಯಾಯಾಯಿತು. ಅಷ್ಟರೊಳಗೇ ಬಂದ ರಾಜ್ಯ ಸಭಾ ಚುನಾವಣೆಯ ಕಾಲಕ್ಕೆ ಸ್ವಲ್ಪ ಮಟ್ಟಿಗೆ ಭಿನ್ನಮತ ಅಂತೇನೋ ಕಾಣಿಸಿಕೊಂಡದ್ದು ಹಾಗೆಯೇ ತಣ್ಣಗಾಯಿತು. ಅಥವಾ ದೆಹಲಿಯ ದೊಡ್ಡ ನಾಯಕರು ಅದನ್ನು ತಣ್ಣಗಾಗಿಸಿದರು.

ಈಗ ಕೊರೊನಾ ಕಾಲದಲ್ಲಿ ರಾಜ್ಯ ಸರಕಾರದ ಕಾರ್ಯವೈಖರಿಯ ಪ್ರಮುಖ ವಿಚಾರಕ್ಕೆ ಬರೋಣ. ಕೊರೊನಾ ಪೂರ್ವದ ಅವಧಿಯಲ್ಲಿ ಕೇಂದ್ರದ ಮುಂದೆ ಹಣಕ್ಕಾಗಿ ದೈನೇಸಿ ಬೇಡುತ್ತಿದ್ದದ್ದೇ ಸರಕಾರದ ಕಾರ್ಯವೈಖರಿಯ ಮುಖ್ಯ ಭಾಗವಾದರೆ, ಕೊರೊನಾ ಕಾಲದಲ್ಲಿ ಕರ್ನಾಟಕ ಸರಕಾರವು ಕೇಂದ್ರ ಸರಕಾರದ ಸಂಪೂರ್ಣ ಅಜ್ಞಾನುವರ್ತಿಯಾಗಿ ನಡೆದುಕೊಂಡದ್ದು ವರ್ಷದ ಅವಧಿಯ ಇನ್ನೊಂದು ವಿಶೇಷ. ಅದರ ಫಲವಾಗಿ ಭೂಮಿಗೆ ಸಂಬಂಧಿಸಿದ ಕಾನೂನುಗಳಲ್ಲಿ ವ್ಯಾಪಕ ಬದಲಾವಣೆಗಳನ್ನು ತರಲಾಯಿತು, ಭೂಸುಧಾರಣೆಯ ಕಾಲದ ಕೆಲ ಕಾನೂನುಗಳನ್ನೆಲ್ಲಾ ಬದಲಾಯಿಸಲಾಯಿತು, ಕೃಷಿ ಮಾರುಕಟ್ಟೆ ನಿಯಂತ್ರಣಗಳನ್ನೆಲ್ಲಾ ಸಡಿಲಿಸಲಾಯಿತು, ಕಾರ್ಮಿಕ ಕಾನೂನುಗಳನ್ನು ವ್ಯಾಪಕವಾಗಿ ತಿದ್ದುಪಡಿ ಮಾಡಲಾಯಿತು. ಯಾವ ಯಾವ ಮಹತ್ವದ ಕಾನೂನುಗಳನ್ನು ಜನಾಭಿಪ್ರಾಯ ಪಡೆದು, ಸಾರ್ವಜನಿಕ ಚರ್ಚೆ ನಡೆಸಿ ತಿದ್ದುಪಡಿ ಮಾಡುವ ಅಗತ್ಯವಿತ್ತೋ ಅಂತಹ ಕಾನೂನುಗಳನ್ನೇ ಕೊರೊನಾ ಕಾಲದ ಜನಸಂಕಷ್ಟದ ಅವಧಿಯನ್ನು ದುರ್ಬಳಕೆ ಮಾಡಿಕೊಂಡು ಬದಲಾಯಿಸಿದ್ದು ಈ ಸರಕಾರ ಮೊದಲ ವರ್ಷ ಮಾಡಿದ ಘನ ಕಾರ್ಯ. ಇದರ ಪರಿಣಾಮಗಳು ಮುಂದೆ ಹೇಗೆ ಎನ್ನುವುದು ಒಂದು ಚಿಂತೆಯಾದರೆ, ಇದನ್ನು ರಾಜ್ಯ ಸರಕಾರ ಮಾಡಿದ್ದು ತನ್ನ ಸ್ವಂತ ವಿವೇಚನೆಯಿಂದಲ್ಲ, ತನ್ನೆಲ್ಲಾ ವಿವೇಚನೆಯನ್ನು ಪಕ್ಷದ ದೆಹಲಿ ದೊರೆಗಳ ಕಾಲಬುಡದಲ್ಲಿ ಅಡವಿಟ್ಟುಬಿಟ್ಟಿದೆ ಎಂಬುದು ಅಷ್ಟೇ ಮಹತ್ವ ವಿಚಾರ. ಕೊರೊನಾ ನಿರ್ವಹಣೆ ಬರಬರುತ್ತಾ ಕುಸಿಯಿತು. ಸರಕಾರದಲ್ಲಿ ಚುನಾಯಿತರು ಮತ್ತು ಖರೀದಿಸಲ್ಪಟ್ಟವರ ನಡುವೆ ಮೂಡಿದ ಒಡಕು ವೈರಸ್ ವಿರುದ್ಧದ ಯುದ್ಧವನ್ನು ಭಾಧಿಸುತ್ತಿರುವಂತೆ ತೋರುತ್ತದೆ. ಜತೆಗೆ ಕೊರೊನಾ ನಿರ್ವಹಣೆಗೆ ಸಂಬಂಧಿಸಿದ ಖರೀದಿಯಲ್ಲಿ ಬಹುದೊಡ್ಡ ಹಗರಣದ ವಾಸನೆ ಬಡಿಯಲಾರಂಭಿಸಿದೆ. ಒಂದು ವರ್ಷಕ್ಕೆ ಇಷ್ಟು ವಿಶೇಷಗಳನ್ನು ಪಟ್ಟಿ ಮಾಡಿದರೆ ಸಾಲದೇ?

  • ಎ.ನಾರಾಯಣ

(ಲೇಖಕರು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು)


ಇದನ್ನು ಓದಿ: ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ; ಖಾಸಗಿ ಆಸ್ಪತ್ರೆಗಳನ್ನು ಸ್ವಾಧೀನಪಡಿಸಿಕೊಳ್ಳವುದು ಇನ್ಯಾವಾಗ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...