ಲಿಂಗಾಯಿತ ಧರ್ಮವು ಮಾಂಸಾಹಾರಿಗಳನ್ನೂ ಒಪ್ಪುವ ಮೂಲಕ ಆಹಾರ ಸಂಸ್ಕೃತಿಯ ವಿಚಾರದಲ್ಲಿ ಪ್ರಜಾತಾಂತ್ರಿಕವಾಗಿರುತ್ತದೆಯೇ ಎಂಬ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕರ್ನಾಟಕದ ಆಹಾರ ಸಂಸ್ಕೃತಿ ಮತ್ತು ಯಾವುದು ಮೇಲು ಯಾವುದು ಕೀಳು ಎಂಬುದರಲ್ಲೇ ಶ್ರೇಣೀಕರಣವನ್ನು ಪ್ರತಿಪಾದಿಸುವ ಈ ದೇಶದಲ್ಲಿ ಇಂತಹ ಚರ್ಚೆಗಳು ಬರುವುದು, ಬರಬೇಕಾದದ್ದು ಸಹಜ. ಆದರೆ, ಈ ಸದ್ಯ ಅದು ಎದ್ದಿರುವ ಸಂದರ್ಭ ಹಾಗೂ ಅದರ ಟಾರ್ಗೆಟ್ ಸರಿಯಿಲ್ಲ ಎಂಬ ಅನಿಸಿಕೆಗಳೂ ಇವೆ. ಈ ಹಿನ್ನೆಲೆಯಲ್ಲಿ ವಿವಿಧ ಚಿಂತಕರನ್ನು ಪತ್ರಿಕೆಯು ಮಾತಾಡಿಸಿತು.
ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಇತ್ತೀಚಿನ ದಿನಮಾನಗಳಲ್ಲಿ ಆಹಾರದ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ವಾಸ್ತವವಾಗಿ ಆಹಾರ ಚರ್ಚೆಯ ವಿಷಯವೇ ಅಲ್ಲ. ಯಾರು ಯಾವ ಆಹಾರವನ್ನಾದರೂ ಸ್ವೀಕರಿಸಬಹುದು. ಆಹಾರಕ್ಕಿಂತ ಆದರ್ಶಗಳು ಮುಖ್ಯ. ಮೌಲ್ಯಯುತ ಬದುಕನ್ನು ಅಪ್ಪಿಕೊಳ್ಳುವ – ಒಪ್ಪಿಕೊಳ್ಳುವ ವ್ಯಕ್ತಿ ಯಾವ ಆಹಾರ ಸ್ವೀಕರಿಸಿದರೂ ತಪ್ಪೇನಲ್ಲ. ಆದರೆ ಆದರ್ಶಗಳನ್ನು ಬಿಟ್ಟರೆ ಅದು ದೊಡ್ಡ ಅನಾಹುತವನ್ನು ತರುತ್ತದೆ. ಇಂದಿನ ದಿನಮಾನಗಳಲ್ಲಿ ಮೌಲ್ಯಗಳು ಮೂಲೆಗುಂಪಾಗಿ ಅನಾಚಾರಗಳು ವಿಜೃಂಭಿಸುತ್ತಿವೆ.
ಎಲ್ಲಿ ನೋಡಿದರು ಅಧಿಕಾರ ದಾಹ, ಅನಾಚಾರ, ಭ್ರಷ್ಟಾಚಾರ ಮೇರೆ ಮೀರಿದೆ. ಸಮಾನತೆ, ಸರಳತೆ, ವ್ಯಕ್ತಿತ್ವ ವಿಕಾಸ ಎನ್ನುವುದು ಕೇವಲ ಬರಹ – ಭಾಷಣದಲ್ಲೇ ಉಳಿದಿದೆ. ಈ ಬಗ್ಗೆ ಗಂಭೀರವಾದ ಚಿಂತನೆ ನಡೆಯಬೇಕಾಗಿದೆ. ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶಿವಶರಣರು ಆಹಾರಕ್ಕಿಂತ ಅವರ ಬದುಕಿನ ವಿಧಾನಕ್ಕೆ ಮಾನ್ಯತೆ ಕೊಟ್ಟಿದ್ದನ್ನು ಮರೆಯಬಾರದು. ಅವರು ಏನೇ ಮಾಡಬೇಕಿದ್ದರೂ ದಯೆ, ಕರುಣೆ, ಪ್ರೀತಿ, ಮಾನವೀಯತೆ, ಅಂತಃಕರಣದ ಬದುಕಿನ ಬಂಡವಾಳವಾಗಬೇಕೆಂದು ಹೇಳಿದ್ದರು, ಅದರಂತೆ ನಡೆದರು. ಅಂಥ ಶರಣರ ದಾರಿಯಲ್ಲಿ ನಾವಿಂದು ನಡೆಯುವ ಸಂಕಲ್ಪ ಮಾಡಬೇಕಿದೆ.


