ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಂದು ಕೆಳಮನೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಕೇಂದ್ರ ಬಜೆಟ್ 2024 ಕುರಿತು ಮಾತನಾಡುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಅವರು ಸದನವನ್ನು ಉದ್ದೇಶಿಸಿ ಮಾತನಾಡಬೇಕು ಎಂದು ಕಾಂಗ್ರೆಸ್ ಸಂಸದರು ಒತ್ತಾಯಿಸಿದ್ದಾರೆ.
ಇದಕ್ಕೂ ಮೊದಲು, ಕಾಂಗ್ರೆಸ್ ಲೋಕಸಭೆಯ ಸಂಸದರೊಂದಿಗಿನ ಸಭೆಯಲ್ಲಿ, ರಾಹುಲ್ ಗಾಂಧಿ ಅವರು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಈಗಾಗಲೇ ಮಾತನಾಡಿರುವುದರಿಂದ, ಪ್ರತಿ ಬಾರಿ ಮಾತನಾಡುವ ಬದಲು ಇತರರಿಗೂ ಸರದಿ ಆಧಾರದ ಮೇಲೆ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಅವರ ಭಾಷಣವು ಗಮನಾರ್ಹ ಪರಿಣಾಮ ಬೀರುತ್ತದೆ. ಹೀಗಾಗಿ, ಅವರು ಮಾತನಾಡಬೇಕು ಎಂದು ಪಕ್ಷದ ಸಂಸದರು ಒತ್ತಾಯಿಸುತ್ತಿದ್ದಾರೆ. ಆದರೆ, ರಾಹುಲ್ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎನ್ನಲಾಗಿದ್ದು, ಸಂಸದರ ಒತ್ತಡದಿಂದಾಗಿ ಅವರು ಮಧ್ಯಾಹ್ನದ ಒಳಗೆ ನಿರ್ಧರಿಸುವ ಸಾಧ್ಯತೆ ಇದೆ.
ಇದಕ್ಕೂ ಮುನ್ನ, ಮಂಗಳವಾರ ಮಂಡಿಸಿದ ಕೇಂದ್ರ ಬಜೆಟ್ ಕುರಿತು ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ, ಇದು “ಭಾರತದ ಫೆಡರಲ್ ರಚನೆಯ ಘನತೆಯ” ಮೇಲಿನ ದಾಳಿಯಾಗಿದೆ ಎಂದು ಹೇಳಿದರು.
“ಈ ಬಜೆಟ್ ಭಾರತದ ಒಕ್ಕೂಟ ರಚನೆಯ ಘನತೆಯ ಮೇಲಿನ ದಾಳಿಯಾಗಿದೆ; ಅಧಿಕಾರವನ್ನು ಉಳಿಸುವ ದುರಾಸೆಯಲ್ಲಿ, ದೇಶದ ಇತರ ರಾಜ್ಯಗಳ ಬಗ್ಗೆ ನಿರ್ಲಕ್ಷ್ಯವಿದೆ, ಇತರ ರಾಜ್ಯಗಳ ವಿರುದ್ಧ ತಾರತಮ್ಯವಿದೆ” ಎಂದು ರಾಹುಲ್ ಗಾಂಧಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಶುಕ್ರವಾರ ಸಂಸತ್ತಿನ ಸಂಕೀರ್ಣದಲ್ಲಿ ಬಜೆಟ್ ವಿರುದ್ಧ ಇಂಡಿಯಾ ಬ್ಲಾಕ್ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಸಂಸದರು ಭಾಗವಹಿಸಿದ್ದರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳೊಂದಿಗೆ ತಾರತಮ್ಯ ಮಾಡಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು ಮತ್ತು ಅವರ ಭಾಷಣದಲ್ಲಿ ಕೇವಲ ಎರಡು ರಾಜ್ಯಗಳ ಯೋಜನೆಗಳನ್ನು ಉಲ್ಲೇಖಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ; ಪ್ಯಾರಿಸ್ ಒಲಿಂಪಿಕ್ಸ್: ಶೂಟಿಂಗ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಮನು ಭಾಕರ್


