ಬಿಜೆಪಿ ತರಲು ಯತ್ನಿಸುತ್ತಿರುವ ಏಕರೂಪ ನಾಗರಿಕ ಸಂಹಿತೆಗೆ ಬಿಜೆಪಿಯ ಮತ್ತೊಂದು ಮಿತ್ರಪಕ್ಷ AIADMK ವಿರೋಧ ವ್ಯಕ್ತಪಡಿಸಿದೆ. ಈ ಹಿಂದೆ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಕೂಡ ತಮ್ಮ ವಿರೋಧ ದಾಖಲಿಸಿದ್ದರು.
ಏಕರೂಪ ನಾಗರಿಕ ಸಂಹಿತೆಗಾಗಿ ಬಿಜೆಪಿಯ ಒತ್ತಾಯ ಮತ್ತು ನಿಮ್ಮ ಪಕ್ಷದ ನಿಲುವೇನು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, “2019 ರ ಲೋಕಸಭೆ ಚುನಾವಣೆಗೆ ಬಿಡುಗಡೆ ಮಾಡಲಾದ ಪಕ್ಷದ ಪ್ರಣಾಳಿಕೆಯಲ್ಲಿ ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಏಕರೂಪ ನಾಗರಿಕ ಸಂಹಿತೆಗಾಗಿ ಸಂವಿಧಾನಕ್ಕೆ ಯಾವುದೇ ತಿದ್ದುಪಡಿಗಳನ್ನು ತರದಂತೆ ಭಾರತ ಸರ್ಕಾರವನ್ನು ಎಐಎಡಿಎಂಕೆ ಒತ್ತಾಯಿಸುತ್ತದೆ” ಎಂದು ತಿಳಿಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಬಿಜೆಪಿಯೊಂದಿಗಿನ ಮೈತ್ರಿಯ ಕುರಿತ ಪ್ರಶ್ನೆಗೆ, “ಈಗ ಯಾವುದೇ ಚುನಾವಣೆ ಇಲ್ಲ. ಲೋಕಸಭಾ ಚುನಾವಣೆಗೆ ಒಂದು ವರ್ಷವಿದೆ, ಯಾವುದೇ ತುರ್ತು ಇಲ್ಲ. ಚುನಾವಣೆಯ ಸಮಯದಲ್ಲಿ ನಾವು ಯಾವ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇವೆ ಎಂಬುದನ್ನು ನಾವು ನಿಮಗೆ ಖಚಿತವಾಗಿ ಹೇಳುತ್ತೇವೆ. ಈಗಾಗಲೇ ನಾವು ಬಿಜೆಪಿಯ ಮೈತ್ರಿ ಮಾಡಿಕೊಂಡಿದ್ದೇವೆ” ಎಂದಿದ್ದಾರೆ.
ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿ ಮಾಡುವ ಕುರಿತು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ ಬಳಿಕ ವಿರೋಧ ಪಕ್ಷಗಳಲ್ಲಿ ಮಾತ್ರವಲ್ಲದೆ ಬಿಜೆಪಿಯ ಮಿತ್ರಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಅವರು, “ಏಕರೂಪ ನಾಗರಿಕ ಸಂಹಿತೆಯು ಭಾರತದ ಕಲ್ಪನೆಗೆ ವಿರುದ್ಧವಾಗಿದೆ” ಎಂದು ಹೇಳಿದ್ದಾರೆ.
”ವೈವಿಧ್ಯತೆಯು ಭಾರತದ ಶಕ್ತಿಯಾಗಿದೆ ಮತ್ತು UCC ತನ್ನ ಪ್ರಸ್ತುತ ರೂಪದಲ್ಲಿ ಈ ಕಲ್ಪನೆಗೆ ವಿರುದ್ಧವಾಗಿ ಹೋಗುತ್ತದೆ” ಎಂದು ಅವರು ತಿಳಿಸಿದ್ದಾರೆ.
ಏಕರೂಪ ನಾಗರಿಕ ಸಂಹಿತೆಯು ಎಲ್ಲಾ ನಾಗರಿಕರ ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ದತ್ತು ಪಡೆಯುವುದು ಮುಂತಾದ ವೈಯಕ್ತಿಕ ವಿಷಯಗಳನ್ನು ನಿಯಂತ್ರಿಸುವ ಸಾಮಾನ್ಯ ಕಾನೂನುಗಳನ್ನು ಸೂಚಿಸುತ್ತದೆ. ಈಶಾನ್ಯ ರಾಜ್ಯಗಳು ವಿಶಿಷ್ಟ ಸಂಸ್ಕೃತಿಯನ್ನು ಹೊಂದಿವೆ ಮತ್ತು ಅಸನ್ನು ಉಳಿಸಿಕೊಳ್ಳಲು ಬಯಸುತ್ತದೆ ಎಂದು ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಸಂಗ್ಮಾ ಹೇಳಿದ್ದಾರೆ.
ಇದನ್ನೂ ಓದಿ; ಬಿಜೆಪಿಗೆ ಬೇಕಿರುವ ಏಕರೂಪ ನಾಗರಿಕ ಸಂಹಿತೆ ನ್ಯಾಯಸಮ್ಮತವಾದದ್ದೇ?


